Monday | November 23, 2026 |

ಡಿಸಿಎಂ ನಿರ್ವಹಣೆಯ ಇಲಾಖೆಗಳ ಯೋಜನೆ ಪ್ರಚಾರಕ್ಕೆ 3.84 ಕೋಟಿ ರು ವೆಚ್ಚಕ್ಕೆ 4 ಜಿ ವಿನಾಯಿತಿ, ಡಿಸಿಎಂ ಮಾಧ್ಯಮ ಕಾರ್ಯದರ್ಶಿಗೆ ಸಿಎಂ ಮಾಧ್ಯಮ ಕಾರ್ಯದರ್ಶಿಯ ವೇತನ ಭತ್ಯೆಗೆ ಪಟ್ಟು; ಪೈಪೋಟಿಗಿಳಿದರೇ ಡಿಸಿಎಂ?

ಬೆಂಗಳೂರು; ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ 15,000 ರು  ಗೌರವ ಧನ ನಿಗದಿಪಡಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಮೀನಮೇಷ ಎಣಿಸುತ್ತಿರುವ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ನಿರ್ವಹಿಸುತ್ತಿರುವ ಇಲಾಖೆಗಳು ಮತ್ತು ಯೋಜನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು 3.84 ಕೋಟಿ ರು ಖರ್ಚು ಮಾಡಲು ಮುಂದಾಗಿದ್ದಾರೆ.

ಅಲ್ಲದೇ ಉಪ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಹುದ್ದೆಗೆ ಹಲವು ಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ  ಎನ್‌ ಎ ಎಂ ಇಸ್ಮಾಯಿಲ್ ಎಂಬುವರನ್ನು  ನೇಮಿಸಲು ಮುಂದಾಗಿರುವ ಡಾ ಜಿ ಪರಮೇಶ್ವರ್ ಅವರು, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗೆ ನೀಡುತ್ತಿರುವ ವೇತನ, ಭತ್ಯೆಯನ್ನೇ ತಮ್ಮ ಮಾಧ್ಯಮ ಕಾರ್ಯದರ್ಶಿಗೂ ನೀಡಬೇಕು ಎಂದು ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.

ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ನಿರ್ವಹಿಸುತ್ತಿರುವ ಇಲಾಖೆಗಳು ಮತ್ತು ಯೋಜನೆಗಳ ಕುರಿತು  ಸಾಮಾಜಿಕ ಜಾಲತಾಣದಲ್ಲಿ 3.84 ಕೋಟಿ ರು ವೆಚ್ಚದಲ್ಲಿ  ಪ್ರಚಾರ ಮಾಡಲು ಮುಂದಾಗಿರುವ ಸರ್ಕಾರವು ಇದಕ್ಕೆ ಯಾವುದೇ ಟೆಂಡರ್ ಆಹ್ವಾನಿಸಿಲ್ಲ. ಬದಲಿಗೆ 4 ಜಿ ವಿನಾಯಿತಿ ನೀಡಿರುವುದು ಇದೀಗ ಬಹಿರಂಗವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ಗೆ ಕೆಲವು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಸರ್ಕಾರದ ಕಾರ್ಯಕ್ರಮಗಳನ್ನು  ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲು ವಾ‍ರ್ಷಿಕ 7.20 ಕೋಟಿ ರು.ಗಳಂತೆ ಮೂರು ವರ್ಷ ಸುಮಾರು 24 ಕೋಟಿಗೂ ಹೆಚ್ಚೂ ಮೊತ್ತವನ್ನು ಖರ್ಚು ಮಾಡಲಾಗಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡಿದ್ದ  ಡಿ ಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿರುವ ಜಿಬಿಎ, ಬಿಡಿಎ, ಬಿಎಂಆರ್‍‌ಡಿಎ ಸೇರಿದಂತೆ ಇನ್ನಿತರೆ ಪ್ರಾಧಿಕಾರಗಳ ಕಾರ್ಯಕ್ರಮಗಳನ್ನು  ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು 4 ಜಿ ವಿನಾಯಿತಿ ಪಡೆದಿದ್ದರು.  ವರ್ಷಕ್ಕೆ 7.20 ಕೋಟಿ ರು ಖರ್ಚು ಮಾಡಲಾಗಿತ್ತು. ಒಂದು ರೀತಿ ಮುಖ್ಯಮಂತ್ರಿಗೆ ಸರಿಸಮನಾಗಿ ಉಪ ಮುಖ್ಯಮಂತ್ರಿಗಳೂ ವೆಚ್ಚ ಮಾಡಿದ್ದರು.

ಈಗ ಅದೇ ಹಾದಿಯನ್ನು ಹಾಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ತುಳಿದಿದ್ದಾರೆ. ಆದರೆ ವೆಚ್ಚದಲ್ಲಿ 4 ಕೋಟಿ ಕಡಿಮೆ ಇದೆ. ವಾರ್ಷಿಕ 3.84 ಕೋಟಿ ರು ವೆಚ್ಚಕ್ಕೆ ಆರ್ಥಿಕ ಇಲಾಖೆಯು 4 ಜಿ ವಿನಾಯಿತಿ ನೀಡಿದೆ. ಈ ಸಂಬಂಧ 2026ರ ಅಕ್ಟೋಬರ್‍‌ 31ರಂದು ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆಯಲ್ಲೇನಿದೆ?

ಉಪಮುಖ್ಯಮಂತ್ರಿಗಳು ನಿರ್ವಹಿಸುತ್ತಿರುವ ಇಲಾಖೆಗಳು ಹಾಗೂ ಸಂಬಂಧಿತ ಯೋಜನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ಕೆಎಸ್‌ಎಂಸಿ ಅಂಡ್‌ ಎ ನ ಸೇವೆ ಪಡೆಯಲು ಪ್ರತಿ ಮಾಹೆ 32.00 ಲಕ್ಷ ರುಗಳಂತೆ ವಾ‍ರ್ಷಿಕ 3.84 ಕೋಟಿ ರು ವೆಚ್ಚದಂತೆ ಒಂದು ವರ್ಷದ ಅವಧಿಗೆ ಕೆಟಿಪಿಪಿ 4 ಜಿ ವಿನಾಯಿತಿ ನೀಡಿದೆ ಎಂದು ಆರ್ಥಿಕ ಇಲಾಖೆಯು 2026ರ ಅಕ್ಟೋಬರ್‍‌ 31ರಂದು ಅಧಿಸೂಚನೆ ಹೊರಡಿಸಿರುವುದು ತಿಳಿದು ಬಂದಿದೆ.

 

 

ಕೆಟಿಪಿಪಿ ಕಾಯ್ದೆಯಲ್ಲೇನಿದೆ?

ಕರ್ನಾಟಕ ಸರ್ಕಾರದ ಇಲಾಖೆಗಳು, ನಿಗಮಗಳು, ಮಂಡಳಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ, 1999 (KTPP Act) ಅನ್ವಯಿಸುತ್ತದೆ.

                                     ಕರ್ನಾಟಕದಲ್ಲಿ ಟೆಂಡರ್ ಮೊತ್ತದ ಮಿತಿ

ಕಾಮಗಾರಿಯ / ಖರೀದಿಯ ಸ್ವರೂಪ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಮಿತಿ
ಸರ್ಕಾರಿ ಇಲಾಖೆಗಳ ಸರಕು ಮತ್ತು ಸೇವೆಗಳ ಖರೀದಿ ₹5 ಲಕ್ಷ ಮೀರಿದಾಗ
ನಿರ್ಮಾಣ ಕಾಮಗಾರಿಗಳು (ರಸ್ತೆ, ಕಟ್ಟಡ ಮತ್ತಿತರ) ₹5 ಲಕ್ಷ ಮೀರಿದಾಗ
ಸರ್ಕಾರಿ ನಿಗಮಗಳು ಮತ್ತು ಮಂಡಳಿಗಳ ಖರೀದಿ ಸಾಮಾನ್ಯವಾಗಿ ₹5 ಲಕ್ಷ ಮೀರಿದಾಗ
ಗ್ರಾಮ ಪಂಚಾಯಿತಿ / ತಾಲ್ಲೂಕು ಪಂಚಾಯಿತಿ / ಪಟ್ಟಣ ಪಂಚಾಯಿತಿ – ಸಾಮಾನ್ಯ ಖರೀದಿ ₹1 ಲಕ್ಷ ಮೀರಿದಾಗ
ಗ್ರಾಮ ಪಂಚಾಯಿತಿ / ತಾಲ್ಲೂಕು ಪಂಚಾಯಿತಿ – ಕಿರು ನೀರು ಸರಬರಾಜು ಯೋಜನೆ ಅಥವಾ ಶಾಲಾ ಕೊಠಡಿ ನಿರ್ಮಾಣ ₹2 ಲಕ್ಷ ಮೀರಿದಾಗ

 

ಗಮನಿಸಬೇಕಾದ ಮತ್ತೊಂದು ಅಂಶವೆಂದರೇ  ₹5 ಲಕ್ಷಕ್ಕಿಂತ ಹೆಚ್ಚಿನ ಖರೀದಿ ಅಥವಾ ಕಾಮಗಾರಿಗೆ ಸಾಮಾನ್ಯವಾಗಿ ಕೆಟಿಪಿಪಿ ಕಾಯ್ದೆಯಡಿ ಟೆಂಡರ್ ಪ್ರಕ್ರಿಯೆ ಅನುಸರಿಸಬೇಕು. ₹5 ಕೋಟಿ ಮೀರಿದ ಕಾಮಗಾರಿಗಳಿಗೆ ಲೋಕೋಪಯೋಗಿ, ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲೂ ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸಬಹುದು. ಇತರ ಇಲಾಖೆಗಳ ಖರೀದಿಯಲ್ಲಿ ₹1 ಕೋಟಿ ಮೀರಿದಾಗ ಸೆಕ್ಷನ್‌ 10ರ ನಿಯಮದ ಪ್ರಕಾರ  ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸುವ ಅವಕಾಶವಿದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ, 1999ರ ಸೆಕ್ಷನ್ 4(e) ಪ್ರಕಾರ, ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸರಕು ಮತ್ತು ಸೇವೆಗಳ ಖರೀದಿಗೆ ₹1 ಲಕ್ಷದವರೆಗಿನ ಮೌಲ್ಯಕ್ಕೆ ವಿನಾಯಿತಿ ಇದೆ. ಹೀಗಿದ್ದರೂ ಸಹ ಮುಖ್ಯಮಂತ್ರಿ, ಮುಖ್ಯಮಂತ್ರಿ ಮತ್ತು ಇತರೆ ಸಚಿವರು ತಮ್ಮ ಇಲಾಖೆಗಳ ಕಾರ್ಯಕ್ರಮಗಳು, ಯೋಜನೆಗಳನ್ನು ಪ್ರಚಾರ ಪಡಿಸುವ ನೆಪದಲ್ಲಿ ಟೆಂಡರ್ ಕರೆಯದೇ ನಿರ್ದಿಷ್ಟ ಏಜೆನ್ಸಿ, ಕಂಪನಿಗೆ 4 ಜಿ ವಿನಾಯಿತಿ ನೀಡಲು ಒತ್ತಡ ಹೇರಿರುವುದು ಗೊತ್ತಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನಿರ್ವಹಿಸುತ್ತಿದ್ದ ಇಲಾಖೆಗಳು ಮತ್ತು ಯೋಜನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ವಾರ್ಷಿಕ 7.20 ಕೋಟಿಯಂತೆ ಪಾಲಿಸಿ ಫ್ರಂಟ್‌ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

 

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

 

ಆಗ ಉಪ ಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರೂ ಸಹ ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿನ ಪ್ರಾಧಿಕಾರಗಳ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು 7.20 ಕೋಟಿ ರು ಮೊತ್ತದ ಗುತ್ತಿಗೆ ಮಂಜೂರು ಮಾಡಿಸಿಕೊಂಡಿದ್ದರು.

 

ಗ್ಯಾರಂಟಿ, ಬಿಬಿಎಂಪಿ, ಸಂಸ್ಥೆಗಳ ಯೋಜನೆಗಳ ಮಾಹಿತಿ; ಸಾಮಾಜಿಕ ಜಾಲತಾಣ ತಂಡಕ್ಕೆ 7.00 ಕೋಟಿ ವೆಚ್ಚ

 

ಆದರೆ ಗುತ್ತಿಗೆಯನ್ನು ಯಾವ ಕಂಪನಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಆರ್‍‌ಟಿಐ ಅಡಿಯಲ್ಲಿ ಕೋರಿದ್ದ ಅರ್ಜಿಗಳಿಗೂ ಸಹ ಇದುವರೆಗೂ ಮಾಹಿತಿಯನ್ನು ನೀಡಿಲ್ಲ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮಗೆ ಇಬ್ಬರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಿಸಿದ್ದಾರೆ. ತಲಾ 3 ಲಕ್ಷ ರು ವೇತನ ಇನ್ನಿತರೆ ಭತ್ಯೆಗಳನ್ನು ನೀಡುತ್ತಿದ್ದಾರೆ.

 

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

 

ಇದೀಗ ಇದೇ ಮಾದರಿಯನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್‍‌ ಅವರು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.  ಪತ್ರಕರ್ತ ಎನ್‌ ಎ ಮಹಮ್ಮದ್ ಇಸ್ಮಾಯಿಲ್ ಎಂಬುವರನ್ನು ಉಪ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಯನ್ನಾಗಿ ನೇಮಿಸಲು ಸ್ವತಃ ಡಾ ಜಿ ಪರಮೇಶ್ವರ್‍‌ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಆಗಸ್ಟ್‌ 19ರಂದೇ ಟಿಪ್ಪಣಿ ಹೊರಡಿಸಿದ್ದಾರೆ.

ಇದರ ಪ್ರತಿಯೂ ದಿ ಫೈಲ್‌ ಗೆ ಲಭ್ಯವಾಗಿದೆ.

ಟಿಪ್ಪಣಿಯಲ್ಲೇನಿದೆ?

‘ಎನ್‌ ಎ ಮಹಮ್ಮದ್ ಇಸ್ಮಾಯಿಲ್ ಅವರನ್ನು ನನ್ನ ಮಾಧ್ಯಮ ಕಾರ್ಯದರ್ಶಿಯನ್ನಾಗಿ ನೇಮಿಸಲು ಅನುಕೂಲವಾಗುವಂತೆ ಉಪ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಹುದ್ದೆಯನ್ನು ತಾತ್ಕಾಲಿಕವಾಗಿ ಸೃಜಿಸಿ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳಿಗೆ ನೀಡಲಾಗುತ್ತಿರುವ ವೇತನ ಭತ್ಯೆಗಳನ್ನು ಅನ್ವಯಿಸಿ ನೇಮಕಾತಿ ಆದೇಶ ಹೊರಡಿಸಬೇಕು,’  ಎಂದು ಡಿಪಿಎಆರ್‍‌ನ ಸರ್ಕಾರದ ಕಾರ್ಯದರ್ಶಿಗೆ ಹೊರಡಿಸಿರುವ ಟಿಪ್ಪಣಿಯಲ್ಲಿ ಕೋರಿರುವುದು ತಿಳಿದು ಬಂದಿದೆ.

 

 

ಮಾಧ್ಯಮ ಕಾರ್ಯದರ್ಶಿ ನೇಮಿಸುವುದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯಲ್ಲಿ ಕಡತವು ಬಿರುಸಿನಿಂದ ಚಲಿಸುತ್ತಿದೆ. ಎನ್ ಎ ಮಹಮ್ಮದ್ ಇಸ್ಮಾಯಿಲ್ ಅವರಿಗೆ ವೇತನ ನಿಗದಿ ಸಂಬಂಧ ಕಡತವು 2026ರ ನವೆಂಬರ್ 21ರಂದು ಆರ್ಥಿಕ ಇಲಾಖೆಯಲ್ಲಿರುವುದು ತಿಳಿದು ಬಂದಿದೆ.

 

 

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವುದು ಮತ್ತು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುವ ವಿಚಾರದಲ್ಲಿ  ಮುಖ್ಯಮಂತ್ರಿಯೊಂದಿಗೆ ಉಪ ಮುಖ್ಯಮಂತ್ರಿಯೂ ಪೈಪೋಟಿಗಿಳಿದಿರುವುದು ಮತ್ತು ತಮ್ಮ ಕಚೇರಿಯೂ ಮುಖ್ಯಮಂತ್ರಿ ಕಚೇರಿಗೆ ಸಮನಾಂತರವಾಗಿದೆ ಎಂದು ತೋರಿಸುವ ಯತ್ನವೂ ಮೇಲ್ನೋಟಕ್ಕೆ ಕಂಡು ಬಂದಿದೆ.

Hot this week

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...

ಪರಿಚಯವಿರದಿದ್ದರೂ ಅಭ್ಯರ್ಥಿಗಳ ಬೆನ್ನತ್ತಿದ್ದ, ಪರೀಕ್ಷೆಗೂ ಮೊದಲೇ ಪವನ್ ಕುಮಾರ್ ರೆಡ್ಡಿಯಿಂದ ಕರೆ; ಕಮಿಷನ್‌ ಉಳಿಸಿಕೊಳ್ಳದೇ ಸಾಹುಕಾರ್, ಗ್ಯಾನೇಂದ್ರಗೆ 35 ಲಕ್ಷ ಪಾವತಿ

ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ಬರೆದು ವಿವಿಧ ರ್‍ಯಾಂಕ್‌ಗಳಲ್ಲಿದ್ದ...
Please Scan to make Your Contribution

Topics

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...

Related Articles

Popular Categories

error: Content is protected !!