ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆ ಆಕಾಂಕ್ಷಿ ಅಭ್ಯರ್ಥಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ತಂಡವು ಅಭ್ಯರ್ಥಿಗಳನ್ನು 40-50 ನಿಮಿಷದ ದೂರದ ಸ್ಥಳದಲ್ಲಿನ ನಿವಾಸವೊಂದರಲ್ಲಿರಿಸಿತ್ತು. ಅಲ್ಲಿ ಪ್ರಶ್ನೆಪತ್ರಿಕೆ ಮತ್ತು ಸರಿಯಾದ ಉತ್ತರಗಳನ್ನು ನೀಡಿ ರಾತ್ರಿಯಡೀ ಕಂಠಪಾಠ ಮಾಡಿಸುತ್ತಿತ್ತು. ಹಾಗೆಯೇ ಸುಮಾರು 15–20 ಅಭ್ಯರ್ಥಿಗಳನ್ನು ಮೇಲಿನ ಮಹಡಿಯ ಮಲಗುವ ಕೋಣೆಯಲ್ಲಿ ರಾತ್ರಿ ಪೂರ್ತಿ ಇರಿಸಲಾಗಿತ್ತು ಮತ್ತು ಅವರ ಮೇಲೆ ನಿಗಾ ಇಡಲಾಗಿತ್ತು. ಅಷ್ಟೇ ಅಲ್ಲ, ಅಭ್ಯರ್ಥಿಗಳನ್ನು ಮರು ದಿನದ ಪರೀಕ್ಷಾ ಕೇಂದ್ರಕ್ಕೆ ತಮ್ಮದೇ ಕಾರಿನಲ್ಲಿ ಕರೆದೊಯ್ದು ಬಿಟ್ಟಿದ್ದರು!
ಕೆಲವು ಅಭ್ಯರ್ಥಿಗಳು ಈಗಾಗಲೇ ಇತರೆ ಉದ್ಯೋಗದಲ್ಲಿದ್ದರು. ಅಲ್ಲಿನ ವೇತನದಲ್ಲಿ ಉಳಿಸಿದ್ದ ಹಣ ಮತ್ತು ತಮ್ಮ ಸೋದರಿಯ ವಿವಾಹಕ್ಕಾಗಿ ಉಳಿಸಿದ್ದ ಹಣವನ್ನೂ ಸಹ ಆರೋಪಿತ ವ್ಯಕ್ತಿಗಳಿಗೆ ಪಾವತಿಸಿದ್ದರು. ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕವಾಗಲು ಲಕ್ಷಾಂತರ ರುಪಾಯಿ ಸಾಲ ಮಾಡಿ ಅಡ್ಡ ದಾರಿ ಹಿಡಿದಿದ್ದ ಅಭ್ಯರ್ಥಿಗಳು, ತಂಡದ ಬೇಡಿಕೆಯಂತೆ ಹಣ ಪಾವತಿಸಿರುವುದು ಜಾರಿನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ಒಪ್ಪಿಕೊಂಡಿದ್ದಾರೆ.
ಕೆಲವು ಅಭ್ಯರ್ಥಿಗಳು ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಗಳು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು, ಪರೀಕ್ಷಾ ನಿಯಂತ್ರಕರನ್ನು ಖಾಸಗಿ ವ್ಯಕ್ತಿ, ಮಧ್ಯವರ್ತಿಗಳು ಹೇಗೆಲ್ಲಾ ನಿಯಂತ್ರಿಸುತ್ತಿದ್ದರು ಎಂಬುದನ್ನು ವಿವರಿಸಿವೆ.
ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್ಗೆ ಲಭ್ಯವಾಗಿವೆ.
ಪಿಎಂಎಲ್ಎ 2002ರ ಕಲಂ 50 ರ ಅಡಿಯಲ್ಲಿ ಅಭ್ಯರ್ಥಿಗಳು/ಸಾಕ್ಷಿಗಳು ನೀಡಿದ ಹೇಳಿಕೆಯನ್ನು ಜಾರಿನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಸೇರಿಸಿದೆ. ಈ ಪೈಕಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಹಾಜರಾಗಿ ಮುಖ್ಯ ಪಟ್ಟಿಯಲ್ಲಿ 5ನೇ ರ್ಯಾಂಕ್ ಪಡೆದು ಆಯ್ಕೆಯಾಗಿದ್ದ ಡಾ. ಕಿರಣ್ ಗೌಡ ಬಿ.ಎಸ್. ಅವರು ನೀಡಿರುವ ಹೇಳಿಕೆಯು ಈ ಅಕ್ರಮದ ಅಳ-ಅಗಲವನ್ನು ಪರಿಚಯಿಸಿದೆ.
‘ಕೆಪಿಎಸ್ಸಿ ಪರೀಕ್ಷೆಯಲ್ಲಿ ಹಣದ ಮೂಲಕ ಮಾತ್ರ ಆಯ್ಕೆಯಾಗಲು ಸಾಧ್ಯ ಎಂಬುದಾಗಿ ತಾನು ಕೇಳಿದ್ದೆ ಮತ್ತು ಸಾಮಾನ್ಯ ವರ್ಗಕ್ಕೆ ಕೇವಲ 32 ಹುದ್ದೆಗಳು ಮಾತ್ರ ಲಭ್ಯವಿದ್ದವು. ತನ್ನ ಸೋದರ ಸಂಬಂಧಿಯಾದ ರಾಕೇಶ್ ಜಿ.ಎಸ್. ಅವರು ಅಭ್ಯರ್ಥಿಗಳು ಆಯ್ಕೆಯಾಗಲು ₹80 ಲಕ್ಷದಿಂದ ₹1 ಕೋಟಿ ಹಣ ಪಾವತಿಸುತ್ತಿದ್ದಾರೆ ಎಂದು ದೃಢಪಡಿಸಿದ್ದರು,’ ಕಿರಣ್ ಗೌಡ ಅವರು ತನಿಖಾಧಿಕಾರಿ ಮುಂದೆ ವಿವರಣೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ಖಾಲಿ ಚೆಕ್ ನೀಡಿದ್ದ ಅಭ್ಯರ್ಥಿಗಳು
ಫಲಿತಾಂಶ ಪ್ರಕಟವಾದ ನಂತರ ಅಥವಾ ನೇಮಕಾತಿ ಆದೇಶ ದೊರೆತ ನಂತರ 80 ಲಕ್ಷ ಪಾವತಿಸಬೇಕಾಗುತ್ತದೆ. ಮತ್ತು ಎರಡು ಖಾಲಿ ಚೆಕ್ಗಳನ್ನು ತರಬೇಕು ಎಂದು ಮಧ್ಯವರ್ತಿ ರಾಕೇಶ್ ಜಿ ಎಸ್ ತಿಳಿಸಿದ್ದರು. ಅದಕ್ಕೆ ತಾನು ಒಪ್ಪಿಕೊಂಡಿದ್ದೆ ಎಂದು ಕಿರಣ್ಗೌಡ ಹೇಳಿಕೆ ನೀಡಿರುವುದು ಗೊತ್ತಾಗಿದೆ.
ರಾತ್ರಿಯಿಡೀ ಕಂಠಪಾಠ ಮಾಡಿಸಿದ್ದ ತಂಡ
‘ಅಲ್ಲದೇ ತನ್ನನ್ನು ಮತ್ತು ರಾಕೇಶ್ ಜಿ ಎಸ್ ಅವರನ್ನು ಬಿಳಿಬಣ್ಣದ ಕಾರಿನಲ್ಲಿ ಸುಮಾರು 40-50 ನಿಮಿಷಗಳ ದೂರದಲ್ಲಿದ್ದ ಸ್ಥಳವೊಂದಕ್ಕೆ ಸಂಜೆ 4ರಿಂದ 4.30ರ ನಡುವೆ ಕರೆದೊಯ್ಯಲಾಗಿತ್ತು. ಅಲ್ಲಿ ಸುಮಾರು 15 ಅಭ್ಯರ್ಥಿಗಳಿಗೆ ಉತ್ತರಗಳನ್ನು ಗುರುತಿಸಲಾಗಿದ್ದ ಪಶುವೈದ್ಯಾಧಿಕಾರಿಗಳ ಪ್ರಶ್ನೆಪತ್ರಿಕೆಯ ಫೋಟೋಕಾಪಿಗಳನ್ನು ನೀಡಲಾಗಿತ್ತು. ಮತ್ತು ಅವುಗಳನ್ನು ರಾತ್ರಿಯಿಡೀ ಕಂಠಪಾಠ ಮಾಡುವಂತೆ ಸೂಚಿಸಲಾಗಿತ್ತು,’ ಎಂದು ಕಿರಣ್ ಗೌಡ ಅವರು ಹೇಳಿಕೆ ನೀಡಿರುವುದು ತಿಳಿದು ಬಂದಿದೆ.

ಹಾಗೆಯೇ ಅವರೇ ಒದಗಿಸಿದ್ದ ಕಾರಿನಲ್ಲಿ ತನ್ನನ್ನು ಬೆಂಗಳೂರಿನ ಕೆ ಆರ್ ಸರ್ಕಲ್ನಲ್ಲಿರುವ ಸರ್ಕಾರಿ ಕಲಾ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಬಿಡಲಾಗಿತ್ತು. ಹಿಂದಿನ ರಾತ್ರಿ ನೀಡಿದ್ದ ಅದೇ ಪ್ರಶ್ನೆಗಳು ನೈಜ ಪರೀಕ್ಷೆಯಲ್ಲಿ ಬಂದಿದ್ದವು. ಆದರೆ ಪ್ರಶ್ನೆಗಳ ಕ್ರಮ ಮಾತ್ರ ಭಿನ್ನವಾಗಿತ್ತು ಎಂದು ವಿವರಿಸಿರುವುದು ಗೊತ್ತಾಗಿದೆ.

ಅಭ್ಯರ್ಥಿಗಳ ಮೇಲೆ ನಿಗಾ ಇರಿಸಿದ್ದ ತಂಡ- ಕನ್ನಾಳೆಯಿಂದ ಎಚ್ಚರಿಕೆ
ಕಿರಣ್ ಗೌಡ ಸೇರಿದಂತೆ ಸುಮಾರು 15–20 ಅಭ್ಯರ್ಥಿಗಳನ್ನು ಮೇಲಿನ ಮಹಡಿಯ ಮಲಗುವ ಕೋಣೆಯಲ್ಲಿ ರಾತ್ರಿ ಪೂರ್ತಿ ಇರಿಸಲಾಗಿತ್ತು ಮತ್ತು ಅವರ ಮೇಲೆ ನಿಗಾ ಇಡಲಾಗಿತ್ತು. ಸಾಮಾನ್ಯ ಅಧ್ಯಯನ (General Studies) ಮತ್ತು ನಿರ್ದಿಷ್ಟ ವಿಷಯದ (Specific) ಪ್ರಶ್ನೆಪತ್ರಿಕೆಗಳ ಮುದ್ರಿತ ಪ್ರತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಲಾಗಿತ್ತು. ಅವುಗಳಲ್ಲಿ ಸರಿಯಾದ ಉತ್ತರಗಳನ್ನು ಪೆನ್ನಿನಿಂದ ಗುರುತಿಸಲಾಗಿತ್ತು. ಈ ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಗಳ ನಡುವೆ ಸರದಿಯಂತೆ ಹಂಚಲಾಗುತ್ತಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪಾವತಿಸಿದ ಹಣದ ಕುರಿತು ಯಾರಿಗೂ ಬಹಿರಂಗಪಡಿಸಬಾರದು ಎಂದು ಬಸವರಾಜ್ ಕನ್ನಾಳೆ ಅವರು ಅಭ್ಯರ್ಥಿಗಳಿಗೆ ಎರಡು-ಮೂರು ಬಾರಿ ಎಚ್ಚರಿಕೆ ನೀಡಿದ್ದರು ಎಂದು ಕಿರಣ್ ಗೌಡ ಅವರು ತಮ್ಮ ಹೇಳಿಕೆಯಲ್ಲಿ ಘಟನೆಯನ್ನು ವಿವರಿಸಿರುವುದು ತಿಳಿದು ಬಂದಿದೆ.
ಪವನ್ ಅವರು ತಮ್ಮೊಂದಿಗೆ ಬಂದು, ಅವರು ಒದಗಿಸಿದ ವಾಹನಗಳಲ್ಲಿ ಅಭ್ಯರ್ಥಿಗಳನ್ನು ಅವರವರ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲಾಯಿತು. ನೈಜ ಪರೀಕ್ಷೆಯಲ್ಲಿ ವಿಲ್ಲಾದಲ್ಲಿ ನೀಡಲಾಗಿದ್ದ ಅದೇ ಪ್ರಶ್ನೆಗಳು ಬಂದಿದ್ದವು.
ಡಾ ಕಿರಣ್ ಗೌಡ ಅವರ ಸಂಬಂಧಿ ರಾಕೇಶ್ ಜಿ.ಎಸ್. ಅವರ ಮೂಲಕ ತಂಡವು ಸಂಪರ್ಕಿಸಿತ್ತು. ಸೋರಿಕೆಯಾದ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಬೆಂಗಳೂರಿನ ಆರ್ಕಿಡ್ ನಿರ್ವಾಣ ಸೊಸೈಟಿಯ ವಿಲ್ಲಾಗಳಲ್ಲಿ ಬಸವರಾಜ್ ಕನ್ನಾಳೆ ಅವರ ಸಮ್ಮುಖದಲ್ಲಿ ಅವರು ಸ್ವೀಕರಿಸಿದ್ದರು. ಇದಕ್ಕಾಗಿ ₹40 ಲಕ್ಷ ಅಕ್ರಮ ಹಣ ಪಾವತಿಸಲು ಒಪ್ಪಿಕೊಂಡಿದ್ದರು. ಅದರಲ್ಲಿ ₹10 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ಪಾವತಿಸಿದ್ದರು ಎಂದು ಕಿರಣ್ ಗೌಡ ಹೇಳಿಕೆಯಲ್ಲಿ ವಿವರಿಸಿದ್ದರು.
ಖಾಲಿ ಚೆಕ್, ಪ್ರಾಮಿಸರಿ ನೋಟ್ ಗೆ ಸಹಿ
ಕಿರಣ್ ಗೌಡ ಅವರು ನಡೆಸಿದ್ದ ಹಣದ ವಹಿವಾಟಿನ ಜಾಡನ್ನೂ ಜಾರಿ ನಿರ್ದೇಶನಾಲಯವು ಪತ್ತೆ ಹಚ್ಚಿತ್ತು. ಏಪ್ರಿಲ್–ಮೇ 2025ರಲ್ಲಿ ಕಿರಣ್ ಗೌಡ ಕೆನರಾ ಬ್ಯಾಂಕ್ನಿಂದ ₹10 ಲಕ್ಷ ಸಾಲ ಪಡೆದಿದ್ದರು. ಆ ಸಂಪೂರ್ಣ ಮೊತ್ತವನ್ನು ಆರು ತಿಂಗಳೊಳಗೆ ನಗದು ರೂಪದಲ್ಲಿ ಹಿಂಪಡೆದಿದ್ದರು. ಶೋಧದ ಸಂದರ್ಭದಲ್ಲಿ, ಪರೀಕ್ಷೆಗೆ ಒಂದು ದಿನ ಮುಂಚೆ ಅಂದರೆ 2026ರ ಜನವರಿ 8 ರಂದು ತೆಗೆದಿದ್ದ ಕೆಲವು ಛಾಯಾಚಿತ್ರಗಳು ಅವರ ಮೊಬೈಲ್ ಫೋನ್ನಲ್ಲಿ ಪತ್ತೆಯಾಗಿದ್ದವು. ಅವುಗಳಲ್ಲಿ ₹ 80 ಲಕ್ಷದ ಒಂದು ಸಹಿ ಮಾಡಿದ ಚೆಕ್, ಮತ್ತೊಂದು ಖಾಲಿ ಚೆಕ್ ಹಾಗೂ ಒಂದು ಖಾಲಿ ಮತ್ತು ಮತ್ತೊಂದು ₹80 ಲಕ್ಷದ ಮೊತ್ತಕ್ಕೆ ಸಂಬಂಧಿಸಿದ ಸಹಿ ಮಾಡಿದ ಪ್ರಾಮಿಸರಿ ನೋಟುಗಳ ಛಾಯಾಚಿತ್ರಗಳಿದ್ದವು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.

ಆರಂಭದಲ್ಲಿ ಈ ಚೆಕ್ಗಳು ಮತ್ತು ಪ್ರಾಮಿಸರಿ ನೋಟುಗಳ ಬಗ್ಗೆ ತಮಗೆ ಏನೂ ನೆನಪಿಲ್ಲ ಎಂದು ತಿಳಿಸಿದ್ದರು. ಪರೀಕ್ಷೆಯಲ್ಲಿ ಅನ್ಯಾಯದ ಲಾಭ ಪಡೆಯುವ ಉದ್ದೇಶದಿಂದ ಯಾರಾದರೂ ತಮ್ಮನ್ನು ಸಂಪರ್ಕಿಸಿದ್ದರು ಅಥವಾ ತಾವು ಯಾರಿಗಾದರೂ ಹಣ ಪಾವತಿಸಿದ್ದೆವು ಎಂಬುದನ್ನೂ ನಿರಾಕರಿಸಿದ್ದರು. ಅವರ ಒಎಂಆರ್ ಪತ್ರಿಕೆಗಳನ್ನು ಪರಿಷ್ಕೃತ ಉತ್ತರ ಕೀಲಿಯೊಂದಿಗೆ ಹೋಲಿಸಿದಾಗ, ಕೆಪಿಎಸ್ಸಿ ನಂತರ ಬದಲಾಯಿಸಿದ ಉತ್ತರಗಳಿಗೆ ಸಂಬಂಧಿಸಿದ ಪ್ರಶ್ನೆಗಳಲ್ಲಿ ಕಂಡು ಬಂದಿದ್ದ ಹಲವು ಅಂಶಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಒದಗಿಸಿದೆ.
ಪೇಪರ್ ಕೋಡ್ 669-Bನಲ್ಲಿ, ಅವರ ಮೂರು ಉತ್ತರಗಳಲ್ಲಿ ಎರಡು ಹಿಂದಿನ (ತಪ್ಪಾದ) ಉತ್ತರ ಕೀಲಿಗೆ ಹೊಂದಿಕೆಯಾಗಿದ್ದವು. ಪೇಪರ್ ಕೋಡ್ 670-Qನಲ್ಲಿ, ಅವರ ಐದು ಉತ್ತರಗಳೂ ಹಿಂದಿನ (ತಪ್ಪಾದ) ಉತ್ತರ ಕೀಲಿಗೆ ಹೊಂದಿಕೆಯಾಗಿದ್ದವು. ಆದರೆ ಕಿರಣ್ ಗೌಡ ಅವರು ಇದನ್ನು ಕೇವಲ ಕಾಕತಾಳೀಯ ಎಂದು ಅವರು ಹೇಳಿದ್ದರು. ಹಾಗೆಯೇ ತಮ್ಮ ಮೊಬೈಲ್ನಲ್ಲಿರುವ “Raki Bro” (ಮೊಬೈಲ್ ಸಂಖ್ಯೆ 9663300222) ಎಂಬವರು ಬೆಂಗಳೂರಿನಲ್ಲಿ ವಾಸಿಸುವ ತಮ್ಮ ತಾಯಿಯ ಕಡೆಯ ಸಂಬಂಧಿ ರಾಕೇಶ್ ಜಿ.ಎಸ್. ಎಂದು ದೃಢಪಡಿಸಿದರು. ತಮ್ಮ ಪ್ರವೇಶ ಪತ್ರವನ್ನು ಅವರೊಂದಿಗೆ ಹಂಚಿಕೊಂಡಿದ್ದನ್ನು ತನಿಖಾಧಿಕಾರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಭಯದ ಕಾರಣದಿಂದ ಸತ್ಯ ಹೇಳಲಿಲ್ಲ- 80 ಲಕ್ಷದಿಂದ 1 ಕೋಟಿ ಹಣ ಪಾವತಿ
ಡಾ ಕಿರಣ್ ಗೌಡ ಅವರು ಭಯದಿಂದ ಕೆಲವು ಸತ್ಯಗಳನ್ನು ತನಿಖಾಧಿಕಾರಿಗೆ ಹೇಳಿರಲಿಲ್ಲ. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ್ದನ್ನು ಮರು ದಿನ ಹೇಳಿಕೆಯಲ್ಲಿ ವಿವರಿಸಿದ್ದರು. ಕೆಪಿಎಸ್ಸಿ ಪರೀಕ್ಷೆಯಲ್ಲಿ ಹಣದ ಮೂಲಕ ಮಾತ್ರ ಆಯ್ಕೆಯಾಗಲು ಸಾಧ್ಯ ಎಂಬುದಾಗಿ ತಾನು ಕೇಳಿದ್ದೆ ಮತ್ತು ಸಾಮಾನ್ಯ ವರ್ಗಕ್ಕೆ ಕೇವಲ 32 ಹುದ್ದೆಗಳು ಮಾತ್ರ ಲಭ್ಯವಿದ್ದವು. ತನ್ನ ಸೋದರ ಸಂಬಂಧಿಯಾದ ರಾಕೇಶ್ ಜಿ.ಎಸ್. ಅವರು ಅಭ್ಯರ್ಥಿಗಳು ಆಯ್ಕೆಯಾಗಲು ₹80 ಲಕ್ಷದಿಂದ ₹1 ಕೋಟಿ ಹಣ ಪಾವತಿಸುತ್ತಿದ್ದಾರೆ ಎಂದು ದೃಢಪಡಿಸಿದ್ದರು.
ರಾಕೇಶ್ ಜಿ.ಎಸ್. ಅವರು ಫಲಿತಾಂಶ ಪ್ರಕಟವಾದ ನಂತರ ಅಥವಾ ನೇಮಕಾತಿ ಆದೇಶ ದೊರೆತ ನಂತರ ₹80 ಲಕ್ಷ ಪಾವತಿಸಬೇಕಾಗುತ್ತದೆ. ಮತ್ತು ಎರಡು ಖಾಲಿ ಚೆಕ್ಗಳನ್ನು ತರಬೇಕು ಎಂದು ತಿಳಿಸಿದರು. ಅದಕ್ಕೆ ತಾನು ಒಪ್ಪಿಕೊಂಡಿದ್ದೆ. ಬೆಂಗಳೂರಿನ ಯಶವಂತಪುರದ ಅಪರ್ಣಾ ಎಲಿನಾದಲ್ಲಿರುವ ತನ್ನ ಸೋದರ ಸಂಬಂಧಿಯ ನಿವಾಸದಲ್ಲಿ, ಒಂದು ಖಾಲಿ ಚೆಕ್ ಮತ್ತು ₹80 ಲಕ್ಷ ಮೊತ್ತದ ಮತ್ತೊಂದು ಚೆಕ್ ಮತ್ತು ಒಂದು ಖಾಲಿ ಹಾಗೂ ಇನ್ನೊಂದು ₹80 ಲಕ್ಷ ಮೊತ್ತದ ಎರಡು ಪ್ರಾಮಿಸರಿ ನೋಟ್ಗಳಿಗೆ 026ರ ಜನವರಿ 8ರಂದು ಸಹಿ ಹಾಕಿದ್ದೆ. ಅವುಗಳನ್ನು ರಾಕೇಶ್ ಜಿ ಎಸ್ ಅವರಿಗೆ ಹಸ್ತಾಂತರಿಸಲಾಗಿತ್ತು ಎಂದು ಕಿರಣ್ ಗೌಡ ಅವರು ತನಿಖಾಧಿಕಾರಿ ಮುಂದೆ ನೀಡಿದ್ದ ಹೇಳಿಕೆಯಿಂದ ಗೊತ್ತಾಗಿದೆ.
ಕನ್ನಾಳೆ ಬೇಡಿಕೆ ಇಟ್ಟಿದ್ದು 80 ಲಕ್ಷಕ್ಕೆ
ಹಾಗೆಯೇ ರಾಕೇಶ್ ಜಿ.ಎಸ್. ಅವರಿಗೆ ಯಾವುದೇ ಹಣ ಪಾವತಿಸಿರಲಿಲ್ಲ ಮತ್ತು ತನ್ನ ಸೋದರ ಸಂಬಂಧಿ ಯಾವುದೇ ಹಣ ಪಾವತಿಸಿದ್ದಾರೆಯೇ ಎಂಬುದೂ ತನಗೆ ತಿಳಿದಿಲ್ಲ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದರು. ಬಸವರಾಜ್ ಕನ್ನಾಳೆ ಅವರಿಗಾಗಿ ₹10 ಲಕ್ಷ ನಗದು ಮತ್ತು ತನ್ನ ಸಹೋದರ ರಾಕೇಶ್ ಜಿ.ಎಸ್. ಅವರಿಗೆ ವಾಟ್ಸಾಪ್ ಕರೆಯ ಮೂಲಕ ವಿವರಗಳು ಬಂದಿದ್ದ ವ್ಯಕ್ತಿಯೊಬ್ಬರಿಗೆ ಪಾವತಿಸಲಾಗಿತ್ತು. ಅಲ್ಲದೇ ಬಸವರಾಜ್ ಕನ್ನಾಳೆ ಅವರು ₹80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮಾತುಕತೆಯ ನಂತರ ಆ ಮೊತ್ತವನ್ನು ₹40 ಲಕ್ಷಕ್ಕೆ ಇಳಿಸಲಾಗಿತ್ತು ಎಂಬ ಸಂಗತಿಯನ್ನು ಕಿರಣ್ ಗೌಡ ಅವರು ತನಿಖಾಧಿಕಾರಿಗೆ ವಿವರ ಒದಗಿಸಿರುವುದು ತಿಳಿದು ಬಂದಿದೆ.

ಈ ಹಣದ ಪಾಲುದಾರರ ವಿವರ ನೀಡಿದ್ದ ಕನ್ನಾಳೆ
ಬೇಡಿಕೆ ಇರಿಸಿದ್ದ ಮೊತ್ತವನ್ನು ಕಡಿಮೆ ಮಾಡಲು ಕನ್ನಾಳೆ ಮೊದಲು ನಿರಾಕರಿಸಿದ್ದರು. ಅಲ್ಲದೇ ಈ ಅಕ್ರಮದ ಹಣದ ಬಹುಪಾಲು ಕೆಪಿಎಸ್ಸಿ ಉನ್ನತ ಅಧಿಕಾರಿಗಳಿಗೆ ಹಾಗೂ ಪ್ರಶ್ನೆ ಪತ್ರಿಕೆಯನ್ನು ಅಂತಿಮಗೊಳಿಸುವ ಪರೀಕ್ಷಾ ನಿಯಂತ್ರಕರ ಕಚೇರಿಯ ಅಧಿಕಾರಿಗಳಿಗೆ ಹೋಗುತ್ತದೆ ಎಂದು ತಿಳಿಸಿದ್ದರು. ಬಾಕಿ ಉಳಿದ ₹30 ಲಕ್ಷಕ್ಕೆ ಭದ್ರತೆಯಾಗಿ ₹80 ಲಕ್ಷ ಮೊತ್ತದ ಸಹಿ ಮಾಡಿದ ಚೆಕ್ ಮತ್ತು ಪ್ರಾಮಿಸರಿ ನೋಟ್ಗಳನ್ನು ನೀಡಬೇಕು ಎಂದು ಬಸವರಾಜ್ ಕನ್ನಾಳೆ ಒತ್ತಾಯಿಸಿದ್ದರು. ಚಾಲ್ತಿಯಲ್ಲಿರುವ ದರ ₹80 ಲಕ್ಷವಾಗಿತ್ತು. ಇತರ ಅಭ್ಯರ್ಥಿಗಳಿಗೆ ಕಡಿಮೆ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿರುವ ವಿಷಯ ತಿಳಿಯಬಾರದು ಎಂದು ಕನ್ನಾಳೆ ಅವರು ಹೇಳಿದ್ದರು ಎಂದು ಕಿರಣ್ ಗೌಡ ಅವರು ತನಿಖಾಧಿಕಾರಿ ಮುಂದೆ ಬಾಯಿಬಿಟ್ಟಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.
ಸಹಿ ಮಾಡಿದ ಕೆನರಾ ಬ್ಯಾಂಕ್ ಚೆಕ್ಗಳು ಮತ್ತು ಪ್ರಾಮಿಸರಿ ನೋಟ್ಗಳನ್ನು ಬಸವರಾಜ್ ಕನ್ನಾಳೆ ಅವರು ಪಡೆದುಕೊಳ್ಳಲು ಅನುಕೂಲವಾಗುವಂತೆ ರಾಕೇಶ್ ಜಿ.ಎಸ್. ಅವರಿಗೆ ಹಸ್ತಾಂತರಿಸಲಾಗಿತ್ತು. ನಂತರ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ರಾಕೇಶ್ ಜಿ.ಎಸ್. ಅವರ ನಿವಾಸದಿಂದ ಅವುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ₹10 ಲಕ್ಷದ ಮೂಲವು ತನ್ನ ವೇತನದಿಂದ ಉಳಿಸಿದ ಹಣವಾಗಿತ್ತು. ಇದರಲ್ಲಿ ತನ್ನ ಸಹೋದರಿಯ ವಿವಾಹಕ್ಕಾಗಿ ಉಳಿಸಿದ್ದ ಹಣವೂ ಸೇರಿತ್ತು ಎಂದು ತಿಳಿಸಿದನು.
ಇದಲ್ಲದೆ 2026ರ ಜನವರಿ 8ರಂದು ಮಧ್ಯಾಹ್ನ ಸುಮಾರು 2:00ರಿಂದ 3:00 ಗಂಟೆಯ ನಡುವೆ, ಬಸವರಾಜ್ ಕನ್ನಾಳೆ ಅವರು ಒಂದು ಕಾರಿನ ವ್ಯವಸ್ಥೆ ಮಾಡಿದ್ದರು. ಆ ಕಾರಿನಲ್ಲಿ ತನ್ನನ್ನು ಮತ್ತು ರಾಕೇಶ್ ಜಿ.ಎಸ್. ಅವರನ್ನು ಆರ್ಕಿಡ್ ನಿರ್ವಾಣ ಸೊಸೈಟಿಯ ವಿಲ್ಲಾಗಳಿಗೆ ಕರೆದೊಯ್ದಿದ್ದರು. ಸೂರ್ಯಾಸ್ತದ ನಂತರ ಅವರು ಅಲ್ಲಿಗೆ ತಲುಪಿದರು. ವಿಲ್ಲಾದಲ್ಲಿ ಬಸವರಾಜ್ ಕನ್ನಾಳೆ ಸೇರಿದಂತೆ ಸುಮಾರು 4–5 ಜನರು ಇದ್ದರು. ಮೊದಲ ಮಹಡಿಯ ಮಲಗುವ ಕೋಣೆಯಲ್ಲಿ ಈಗಾಗಲೇ 6–8 ಅಭ್ಯರ್ಥಿಗಳು ಇದ್ದರು. ನಂತರ ಇನ್ನಷ್ಟು ಅಭ್ಯರ್ಥಿಗಳು ಅಲ್ಲಿಗೆ ಬಂದಿದ್ದರು ಎಂದು ಕಿರಣ್ ಗೌಡ ವಿವರಿಸಿರುವುದು ಗೊತ್ತಾಗಿದೆ.
ಪರಸ್ಪರ ಹೆಸರು ಹೇಳಬಾರದು- ಮಾತನಾಡಬಾರದು- ಸ್ಥಳದ ವಿವರ ಬಹಿರಂಗಕ್ಕೂ ನಿರ್ಬಂಧ
‘ಅಭ್ಯರ್ಥಿಗಳು ಪರಸ್ಪರ ಹೆಸರುಗಳನ್ನು ಕೇಳಬಾರದು, ಒಬ್ಬರಿಗೊಬ್ಬರು ಮಾತನಾಡಬಾರದು, ಸ್ಥಳದ ವಿವರವನ್ನು ಯಾರಿಗೂ ಬಹಿರಂಗಪಡಿಸಬಾರದು, ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪರಸ್ಪರ ಸಂಪರ್ಕಿಸಬಾರದು. ಮತ್ತು ನೇಮಕಾತಿಯಾದ ನಂತರ ಬಾಕಿ ಹಣವನ್ನು ಪಾವತಿಸಬೇಕು ಎಂದು ಬಸವರಾಜ್ ಕನ್ನಾಳೆ ಸೂಚಿಸಿದ್ದರು. ಏಕೆಂದರೆ ಆ ಹಣವನ್ನು ಕೆಪಿಎಸ್ಸಿಯ ಉನ್ನತ ಅಧಿಕಾರಿಗಳಿಗೆ ಪಾವತಿಸಬೇಕಾಗಿತ್ತು ಎಂದು ಅವರು ತಿಳಿಸಿದ್ದರು,’ ಎಂಬ ಸಂಗತಿಯನ್ನು ತನಿಖಾಧಿಕಾರಿಗೆ ಕಿರಣ್ ಗೌಡ ಹೇಳಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಶೀರ್ಷಿಕೆ ಇಲ್ಲದ ಪ್ರಶ್ನೆ ಪತ್ರಿಕೆಯ ಎರಡು ಸೆಟ್ ನೀಡಿದ್ದ ತಂಡ
ಶೀರ್ಷಿಕೆ ಇಲ್ಲದ, ಮುದ್ರಿತ ರೂಪದಲ್ಲಿದ್ದ ದ್ವಿಭಾಷಾ ಪ್ರಶ್ನೆಪತ್ರಿಕೆಯ ಎರಡು ಸೆಟ್ಗಳನ್ನು ಅಭ್ಯರ್ಥಿಗಳಿಗೆ ನೀಡಲಾಗಿತ್ತು. ಅವುಗಳಲ್ಲಿ ಸರಿಯಾದ ಉತ್ತರಗಳನ್ನು ಪೆನ್ನಿನಿಂದ ಗುರುತಿಸಲಾಗಿತ್ತು. ಅಭ್ಯರ್ಥಿಗಳು ಅವುಗಳನ್ನು ಅಭ್ಯಾಸ ಮಾಡಿ ಕಂಠಪಾಠ ಮಾಡುವಂತೆ ಸೂಚಿಸಲಾಗಿತ್ತು. ಈ ಅವಧಿಯಲ್ಲಿ ಬಸವರಾಜ್ ಕನ್ನಾಳೆ ಅವರ ಸುಮಾರು ನಾಲ್ವರು ಸಹಾಯಕರು ಅಭ್ಯರ್ಥಿಗಳನ್ನು ನಿರಂತರವಾಗಿ ಗಮನಿಸುತ್ತಿದ್ದರು. ಮರುದಿನ ಬೆಳಿಗ್ಗೆ, ಅವರು ಒದಗಿಸಿದ ವಾಹನಗಳಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಅವರವರ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲಾಗಿತ್ತು. ಅಭ್ಯರ್ಥಿಗಳೊಂದಿಗೆ ಪೋಷಕರು ಅಥವಾ ಸಂಬಂಧಿಕರು ಹೋಗಲು ಅವಕಾಶ ನೀಡಿರಲಿಲ್ಲ ಎಂದು ಕಿರಣ್ ಗೌಡ ನೀಡಿರುವ ಹೇಳಿಕೆಯಲ್ಲಿ ವಿವರಿಸಲಾಗಿದೆ.
ವಿಲ್ಲಾದಲ್ಲಿ ಹಾಜರಿದ್ದ ಅಭ್ಯರ್ಥಿಗಳಲ್ಲಿ ತನ್ನ ಬ್ಯಾಚ್ಮೇಟ್ ರಾಜ್ ಮೊಹಮ್ಮದ್ ಮತ್ತು ತನಗಿಂತ ಕಿರಿಯ ಬ್ಯಾಚ್ನವರಾದ ಅಮರೇಗೌಡ ಹಾಗೂ ಮಹೇಂದ್ರ ಕುಮಾರ್ ಅವರನ್ನು ತನಿಖಾಧಿಕಾರಿ ಮುಂದೆ ಕಿರಣ್ ಗೌಡ ಅವರು ಗುರುತಿಸಿದ್ದರು. ಛಾಯಾಚಿತ್ರಗಳನ್ನು ತೋರಿಸಿದಾಗ ಆರ್ಕಿಡ್ ನಿರ್ವಾಣ ವಿಲ್ಲಾಗಳಲ್ಲಿ ಉತ್ತರಗಳ ಸಹಿತ ಪ್ರಶ್ನೆಪತ್ರಿಕೆಗಳನ್ನು ಒದಗಿಸಿದ ವ್ಯಕ್ತಿ ಬಸವರಾಜ್ ಕನ್ನಾಳೆ ಎಂದು ಗುರುತಿಸಿದ್ದರು. ಅಲ್ಲದೆ, ತಾನು ₹10 ಲಕ್ಷ ಮುಂಗಡವಾಗಿ ನೀಡಿದ್ದು ಅವರಿಗೇ ಎಂದು ತಿಳಿಸಿದ್ದರು.
‘ಪಿಎಂಎಲ್ಎ 2002ರ ಸೆಕ್ಷನ್ 17 ಮತ್ತು ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಲಾದ ಡಾ. ಕಿರಣ್ ಗೌಡ ಬಿ.ಎಸ್. ಅವರ ಮೇಲಿನ ಹೇಳಿಕೆಗಳಿಂದ, ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಖಚಿತ ಆಯ್ಕೆ ಮಾಡಿಸಿಕೊಡುವ ಆಮಿಷದೊಂದಿಗೆ ಅವರ ಸೋದರ ಸಂಬಂಧಿ ರಾಕೇಶ್ ಜಿ.ಎಸ್. ಅವರ ಮೂಲಕ ಅವರನ್ನು ಸಂಪರ್ಕಿಸಲಾಗಿತ್ತು. ಬಸವರಾಜ್ ಕನ್ನಾಳೆ ಅವರಿಗೆ ₹40 ಲಕ್ಷ ಅಕ್ರಮ ಹಣ ಪಾವತಿಸಲು ಅವರು ಒಪ್ಪಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ,’ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಹೇಳಿದೆ.
ಬೆಂಗಳೂರಿನ ಆರ್ಕಿಡ್ ನಿರ್ವಾಣ ವಿಲ್ಲಾದಲ್ಲಿ ಬಸವರಾಜ್ ಕನ್ನಾಳೆ ಅವರ ಸಮ್ಮುಖದಲ್ಲಿ ಅವರಿಗೆ ಮತ್ತು ಇತರ ಅಭ್ಯರ್ಥಿಗಳಿಗೆ ಉತ್ತರಗಳನ್ನು ಗುರುತಿಸಲಾಗಿದ್ದ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು 2026ರ ಜನವರಿ 8ರಂದು ನೀಡಲಾಗಿತ್ತು. 2026ರ ಜನವರಿ 9ರಂದು ನಡೆದ ಪರೀಕ್ಷೆಯಲ್ಲಿಯೂ ಅದೇ ಪ್ರಶ್ನೆಗಳು ಬಂದಿದ್ದವು. ನಂತರ ಪರಿಷ್ಕರಿಸಲಾದ ಉತ್ತರಗಳಿದ್ದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ, ಅವರ OMR ಉತ್ತರಗಳು ಈ ಹಿಂದೆ ಇದ್ದ (ತಪ್ಪಾದ) ಉತ್ತರ ಕೀಲಿಯೊಂದಿಗೆ ಹೊಂದಿಕೆಯಾಗಿರುವುದೂ ಇದಕ್ಕೆ ಮತ್ತಷ್ಟು ಪುರಾವೆಯಾಗಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.

ಅವರು ₹10 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ಪಾವತಿಸಿದ್ದರು. ಉಳಿದ ₹30 ಲಕ್ಷಕ್ಕೆ ಭದ್ರತೆಯಾಗಿ ₹80 ಲಕ್ಷದ ಸಹಿ ಮಾಡಿದ ಚೆಕ್ ಮತ್ತು ಪ್ರಾಮಿಸರಿ ನೋಟ್ಗಳನ್ನು ನೀಡಿದ್ದರು. ಈ ದಾಖಲೆಗಳನ್ನು ರಾಕೇಶ್ ಜಿ.ಎಸ್. ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿತ್ತು. ಅವರ ಹೇಳಿಕೆಯು, ವಿಲ್ಲಾದಲ್ಲಿ ಹಾಜರಿದ್ದ ಅಭ್ಯರ್ಥಿಗಳಲ್ಲಿ ಕಿರಣ್ ಗೌಡ ಅವರ ಹೆಸರನ್ನು ಉಲ್ಲೇಖಿಸಿದ್ದ ಡಾ. ರಾಜ್ ಮೊಹಮ್ಮದ್ ಅವರ ಹೇಳಿಕೆಗೂ ಮತ್ತು ವಿಲ್ಲಾಗೆ ಕರೆದೊಯ್ಯಲಾದ ಅಭ್ಯರ್ಥಿಗಳಲ್ಲಿ ಡಾ. ಅಮರೇಗೌಡ ಹಾಗೂ ಡಾ. ಮಹೇಂದ್ರ ಅವರ ಹೆಸರನ್ನು ಉಲ್ಲೇಖಿಸಿದ್ದ ಡಾ. ಬಸವರಾಜ್ ವಡಾರಿ ಅವರ ಹೇಳಿಕೆಗೂ ಪೂರಕವಾಗಿದೆ.
‘ಹೀಗಾಗಿ ಡಾ. ಕಿರಣ್ ಗೌಡ ಬಿ.ಎಸ್. ಅವರು ಸೋರಿಕೆಯಾದ ಪ್ರಶ್ನೆಪತ್ರಿಕೆಯ ಮೂಲಕ ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ ಮತ್ತು ಅವರು ಪಾವತಿಸಿದ ₹10 ಲಕ್ಷದ ಅಕ್ರಮ ಹಣವು KPSC ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಆದಾಯದ ಭಾಗವಾಗಿದೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ,’ ಎಂದು ಜಾರಿ ನಿರ್ದೇಶನಾಲಯವು ವಿವರಿಸಿದೆ.




