ಬೆಂಗಳೂರು; ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿರುವ ಕ್ಯಾಂಟೀನ್‌ಗಳ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನ ಮಧ್ಯವರ್ತಿ ಮತ್ತು ಡಿಪಿಎಆರ್‍ನ ಅಧೀನ ಕಾರ್ಯದರ್ಶಿ ಅವರಿಬ್ಬರ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯ ತುಣುಕಿನ ಭಾಗವನ್ನು ದಿ ಫೈಲ್ ವರದಿ ಪ್ರಕಟಿಸುತ್ತಿದ್ದಂತೆ ಇದೀಗ ಜೆಡಿಎಸ್ ಕೂಡ ಸರ್ಕಾರವನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಡಿದೆ.
‘ನಿಮ್ಮ ಮಗನ ಅಕೌಂಟ್ ಗೆ ಎಷ್ಟು ಹಾಕ್ಲಿ ಸಾರ್, ಫೋನ್ ಪೇ ಮಾಡ್ತಿದ್ದೀರಾ?” ಎಂದು ಮಧ್ಯವರ್ತಿಯ ಕೇಳುವ ಮಟ್ಟಿಗೆ ಇವರ ಭ್ರಷ್ಟಾಚಾರ ಮಿತಿಮೀರಿದೆ. ಗುತ್ತಿಗೆದಾರರು ಲೀಗಲ್ ನೋಟಿಸ್ ನೀಡಿದ ಬೆನ್ನಲ್ಲೇ ಈ ಸಾಕ್ಷ್ಯಗಳು ಹೊರಬಿದ್ದಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದೇಕೆ,’ ಎಂದು ಜೆಡಿಎಸ್ ಪ್ರಶ್ನಿಸಿದೆ.
ಅಲ್ಲದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವರೂ ಆಗಿರುವ ಡಿ ಕೆ ಶಿವಕಕುಮಾರ್ ಅವರು, ತಮ್ಮ ಲೂಟಿಯ ವೇಗವನ್ನು ಮತ್ತಷ್ಟು ಸ್ಮಾರ್ಟ್ ಮಾಡಿಕೊಂಡಿರುವಂತಿದೆ ಎಂದು ಟೀಕಿಸಿದೆ.
ಜೆಡಿಎಸ್ ಟ್ವೀಟ್‌ನ ಪೂರ್ಣ ಪಾಠದಲ್ಲೇನಿದೆ?
ರಾಜ್ಯ ಕಾಂಗ್ರೆಸ್ ಸರ್ಕಾರ ಶಕ್ತಿ ಕೇಂದ್ರದಲ್ಲೇ ‘ಡಿಜಿಟಲ್ ಲಂಚಾವತಾರ’ಕ್ಕೆ ಮುಖ್ಯಮಂತ್ರಿಗಳ ಸಚಿವಾಲಯವೇ ಚಾಲನೆ ನೀಡಿದೆ. ವಿಕಾಸಸೌಧ ಮತ್ತು ಎಂ.ಎಸ್ ಬಿಲ್ಡಿಂಗ್ ಕ್ಯಾಂಟೀನ್ ಗುತ್ತಿಗೆದಾರನಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಧೀನ ಕಾರ್ಯದರ್ಶಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಬಹಿರಂಗವಾಗಿದೆ. “ನಿಮ್ಮ ಮಗನ ಅಕೌಂಟ್ ಗೆ ಎಷ್ಟು ಹಾಕ್ಲಿ ಸಾರ್, ಫೋನ್ ಪೇ ಮಾಡ್ತಿದ್ದೀರಾ?” ಎಂದು ಮಧ್ಯವರ್ತಿಯ ಕೇಳುವ ಮಟ್ಟಿಗೆ ಇವರ ಭ್ರಷ್ಟಾಚಾರ ಮಿತಿಮೀರಿದೆ ಎಂದು ಕಿಡಿ ಕಾರಿದೆ.

ಗುತ್ತಿಗೆದಾರರು ಲೀಗಲ್ ನೋಟಿಸ್ ನೀಡಿದ ಬೆನ್ನಲ್ಲೇ ಈ ಸಾಕ್ಷ್ಯಗಳು ಹೊರಬಿದ್ದಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದೇಕೆ? ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್ ಅವರು ತಮ್ಮ ಲೂಟಿಯ ವೇಗವನ್ನು ಮತ್ತಷ್ಟು ಸ್ಮಾರ್ಟ್ ಮಾಡಿಕೊಂಡಿರುವಂತಿದೆ ಎಂದು ಹೇಳಿದೆ.

‘ಮುಖ್ಯಮಂತ್ರಿಗಳೇ ಪಾರದರ್ಶಕ ಆಡಳಿತ ಎಂದರೆ ಇದೇನಾ? ರಾಜ್ಯದಲ್ಲಿ ‘ಎಟಿಎಂ ಸರ್ಕಾರ’ದ ಲೂಟಿ ಮುಂದುವರೆದಿದೆ! ಅಭಿವೃದ್ಧಿ ಶೂನ್ಯ, ಕಲೆಕ್ಷನ್ ಮಾತ್ರ ಫುಲ್. ಕಮಿಷನ್ ಇಲ್ಲದೆ ರಾಜ್ಯದಲ್ಲಿ ಯಾವ ಕೆಲಸವೂ ಆಗಲ್ಲ. ಸರ್ಕಾರಿ ಟೆಂಡರ್ ಬೇಕೇ?


ಟೆಂಡರ್ ಪಡೆಯಲು ನೇರವಾಗಿ ‘PhonePeCM’ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ. ನೋ ಕ್ಯಾಶ್, ಓನ್ಲಿ ಫೋನ್ ಪೇ. ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದ ಸಿಎಂ ಡಿ ಕೆ ಶಿವಕುಮಾರ್ ಅವರ ಸಚಿವಾಲಯದಿಂದಲೇ ಫೋನ್ ಪೇ ಮೂಲಕ ಲಂಚದ ಲೂಟಿ, ಕಾಂಗ್ರೆಸ್ ಸರ್ಕಾರದ ಕಮಿಷನ್ ಭ್ರಷ್ಟಾಚಾರವನ್ನು ಬಯಲಾಗಿಸಿದೆ,’ ಎಂದು ಟ್ವೀಟ್‌ನಲ್ಲಿ ಹೇಳಿದೆ.
ಲಂಚ ವಸೂಲು ಮಾಡಿರುವ ಕುರಿತು ಸರ್ಕಾರಕ್ಕೆ ಗುತ್ತಿಗೆದಾರರು ಕಾನೂನು ತಿಳಿವಳಿಕೆ ನೋಟೀಸ್ ಜಾರಿಗೊಳಿಸಿದ್ದರು.
ಈ ವರದಿ ಪ್ರಕಟಗೊಳ್ಳುತ್ತಿದ್ದಂತೆ ಜೆಡಿಎಸ್ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದರ ಬೆನ್ನಲ್ಲೇ ಮಧ್ಯವರ್ತಿ ಮತ್ತು ಅಧಿಕಾರಿಯೊಬ್ಬರೊಂದಿಗೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯ ತುಣುಕುಗಳು ಬಹಿರಂಗವಾಗಿದ್ದವು. ಈ ಎಲ್ಲ ಬೆಳವಣಿಗೆಗಳ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




