ಬೆಂಗಳೂರು; ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನವು ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಕಳೆದ 2 ವರ್ಷಗಳಿಂದ ಸಕಾಲಕ್ಕೆ ಬಿಡುಗಡೆಯಾಗದೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅಲ್ಲದೇ ತಳಮಟ್ಟದಲ್ಲಿಯೂ ಅನುದಾನ ಲಭ್ಯವಾಗದ ಕಾರಣ ರಾಜ್ಯದ ಗ್ರಾಮ ಪಂಚಾಯ್ತಿಗಳು ದೈನಂದಿನ ಆಡಳಿತ ನಡೆಸುವುದಕ್ಕೂ ಏದುಸಿರು ಬಿಡುತ್ತಿವೆ.
ಅಲ್ಲದೇ ರಾಜ್ಯದ 5,927 ಗ್ರಾಮ ಪಂಚಾಯಿತಿಗಳಲ್ಲಿ ₹ 567.70 ಕೋಟಿಗೂ ಅಧಿಕ ಮೊತ್ತದ ಬಿಲ್ ಬಾಕಿ ಇವೆ. ಈ ಮಧ್ಯೆ ಕುಡಿಯುವ ನೀರಿನ ನಿರ್ವಹಣಾ ಬಿಕ್ಕಟ್ಟು ಎದುರಾಗಿದೆ. ಹಾಗೆಯೇ ಸ್ವಂತ ಸಂಪನ್ಮೂಲ ಮತ್ತು ತೆರಿಗೆ ಸಂಗ್ರಹಿಸಿ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವೈಜ್ಞಾನಿಕ ಗುರಿ ನೀಡುತ್ತಿದ್ದಾರೆ. ಹೀಗಾಗಿ ಪಿಡಿಒಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ!
ಈ ಸಂಬಂಧ ತಕ್ಷಣವೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಧ್ಯ ಪ್ರವೇಶಿಸಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ‘ಬಿ’ ಗ್ರೇಡ್ ಹುದ್ದೆ ಉನ್ನತೀಕರಣ ಸಂಘವು ಪತ್ರ ಬರೆದಿದೆ. 2026ರ ಅಕ್ಟೋಬರ್ 25ರಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರವು ದಿ ಫೈಲ್ ಗೆ ಲಭ್ಯವಾಗಿದೆ.
ಅಲ್ಲದೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ದುರಸ್ತಿ ಕೆಲಸ ಮಾಡಿರುವ ಗುತ್ತಿಗೆದಾರರು ಮತ್ತು ಸಣ್ಣ ಪುಟ್ಟ ಅಂಗಡಿಗಳಿಂದ ಖರೀದಿಸಿರುವ ವಸ್ತುಗಳಿಗೂ ಹಣ ಪಾವತಿಸಲು ಕಷ್ಟವಾಗುತ್ತಿದೆ. ಕಚೇರಿಗೆ ಬಂದು ಗಲಾಟೆ ಮಾಡುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಪಿಡಿಒಗಳು ವಾಟ್ಸಾಪ್ ಗ್ರೂಪ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

‘ತೆರಿಗೆ ಗುರಿ ತಲುಪದಿದ್ದರೆ ಅಥವಾ ಅನುದಾನದ ಅಲಭ್ಯತೆಯನ್ನು ಪ್ರಸ್ತಾಪಿಸಿದರೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವುದು, ವೇತನ ತಡೆಹಿಡಿಯುವುದು ಹಾಗೂ ಶಿಸ್ತುಕ್ರಮದ ಬೆದರಿಕೆ ಒಡ್ಡುತ್ತಿರುವುದು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಜಿ.ಪಂ. ಸಿಇಒಗಳಿಂದ ಎದುರಾಗುತ್ತಿರುವ ಅವೈಜ್ಞಾನಿಕ ಒತ್ತಡ/ನೋಟಿಸ್‌ಗಳ ನಿವಾರಣೆಗೆ ಮಧ್ಯಪ್ರವೇಶಿಸಿ ತುರ್ತು ಪರಿಹಾರ ಒದಗಿಸಬೇಕು,’ ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಪತ್ರದಲ್ಲೇನಿದೆ?
15ನೇ ಹಣಕಾಸು ಆಯೋಗದ ಅನುದಾನದ ಬಗ್ಗೆ ರಾಜ್ಯದ ಸಚಿವರು ಕೇಂದ್ರಕ್ಕೆ ನಿರಂತರವಾಗಿ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಹಾಗೂ ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ತಳಮಟ್ಟದಲ್ಲಿ ಅನುದಾನ ಲಭಿಸದೇ ಆಡಳಿತ ನಡೆಸುವುದು ಅಸಾಧ್ಯದ ಮಾತಾಗಿದೆ ಎಂದು ಹಣಕಾಸಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿರುವುದು ಪತ್ರದಿಂದ ತಿಳಿದು ಬಂದಿದೆ.
₹567.70 ಕೋಟಿಗೂ ಅಧಿಕ ಬಾಕಿ
ರಾಜ್ಯದ 5,927 ಗ್ರಾಮ ಪಂಚಾಯಿತಿಗಳಲ್ಲಿ ಕಳೆದ 2 ವರ್ಷಗಳಿಂದ 15ನೇ ಹಣಕಾಸು ಆಯೋಗದ ಅನುದಾನ ಲಭಿಸದೆ ಉಂಟಾಗಿರುವ ₹567.70 ಕೋಟಿಗೂ ಅಧಿಕ ಬಾಕಿ ಬಿಲ್ ಪಾವತಿಸಬೇಕಿದೆ. ರಾಜ್ಯದಲ್ಲಿರುವ ಒಟ್ಟು 5,927 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ 250 ಪಂಚಾಯಿತಿಗಳು ಮಾತ್ರ ನಗರ-ಅರೆ ನಗರ ವ್ಯಾಪ್ತಿಯಲ್ಲಿದ್ದು ಸ್ವಂತ ಸಂಪನ್ಮೂಲದಿಂದ ಆರ್ಥಿಕವಾಗಿ ಸದೃಢವಾಗಿವೆ. ಉಳಿದ 5,677 ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಆರ್ಥಿಕ ಪರಿಸ್ಥಿತಿಯನ್ನು ತೆರೆದಿಟ್ಟಿರುವುದು ಪತ್ರದಿಂದ ಗೊತ್ತಾಗಿದೆ.
ಹಣಕಾಸಿನ ಮಾರ್ಗವೇ ಇಲ್ಲ
‘ಕಳೆದ 2 ವರ್ಷಗಳಿಂದ ಕೇಂದ್ರದ ಅನುದಾನ ಲಭಿಸಿಲ್ಲ. ಗುತ್ತಿಗೆದಾರರು ಹಾಗೂ ಸರಬರಾಜುದಾರರು ದಿನನಿತ್ಯ ಪಂಚಾಯಿತಿ ಕಚೇರಿಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಅನುದಾನದ ಲಭ್ಯತೆ ಇಲ್ಲದಿರುವುದರಿಂದ ಹೊಸ ದರಪಟ್ಟಿ ಪ್ರಕಾರ ಟೆಂಡರ್ ಕರೆದು ಕುಡಿಯುವ ನೀರಿನ ಸಾಮಗ್ರಿಗಳನ್ನು ಖರೀದಿಸಲು ಯಾವುದೇ ಹಣಕಾಸಿನ ಮಾರ್ಗವಿಲ್ಲದಂತಾಗಿದೆ,’ ಎಂದು ಮುಖ್ಯಮಂತ್ರಿಯ ಗಮನಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

ಕಳೆದ 2 ವರ್ಷಗಳಿಂದ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನವು ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಬಿಡುಗಡೆಯಾಗುತ್ತಿಲ್ಲ. ಅನುದಾನವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಕುರಿತು ರಾಜ್ಯದ ಸಚಿವರು ಕೇಂದ್ರಕ್ಕೆ ನಿರಂತರವಾಗಿ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದಾರೆ. ತಳಮಟ್ಟದಲ್ಲಿ ಅನುದಾನ ಲಭಿಸದೇ ಆಡಳಿತ ನಡೆಸುವುದು ಅಸಾಧ್ಯದ ಮಾತಾಗಿದೆ ಎಂದು ವಿವರಿಸಿರುವುದು ಪತ್ರದಿಂದ ಗೊತ್ತಾಗಿದೆ.
ಪಿಡಿಓಗಳ ಜೇಬಿಗೆ ಕೈ ಹಾಕಿದ ಜಿಪಂಗಳು
‘ಕುಡಿಯುವ ನೀರಿನ ತುರ್ತು ನಿರ್ವಹಣಾ ಬಿಕ್ಕಟ್ಟು: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಅತ್ಯಂತ ಅಗತ್ಯವಾದ ತುರ್ತು ಸೇವೆಯಾಗಿದೆ. ಮೋಟಾರ್ ಸುಟ್ಟು ಹೋದರೆ, ಪೈಪ್ ಒಡೆದರೆ ಅಥವಾ ಕ್ಲೋರಿನೇಷನ್ ಹಾಗೂ ನಿರ್ವಹಣಾ ಸಾಮಗ್ರಿಗಳನ್ನು ತಕ್ಷಣ ಖರೀದಿಸದಿದ್ದರೆ ಗ್ರಾಮಸ್ಥರ ಆಕ್ರೋಶಕ್ಕೆ ಪಿಡಿಒಗಳೇ ನೇರ ಹೊಣೆಗಾರರಾಗುತ್ತಿದ್ದಾರೆ. ಪಂಚಾಯಿತಿಗಳಲ್ಲಿ ಹಣವಿಲ್ಲದೆ, ಅಧಿಕಾರಿಗಳು ತಮ್ಮ ಸ್ವಂತ ಜೇಬಿನಿಂದ ಹಣ ಹಾಕಿ ನಿರ್ವಹಣೆ ಮಾಡಲೂ ಸಾಧ್ಯವಾಗದಂತಹ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ,’ ಎಂದು ಅಳಲು ವ್ಯಕ್ತಪಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಅವೈಜ್ಞಾನಿಕ ನೋಟಿಸ್- ಶಿಸ್ತುಕ್ರಮದ ಬೆದರಿಕೆ
ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒಗಳಿಗೆ ಅವೈಜ್ಞಾನಿಕವಾಗಿ ನೋಟೀಸ್ ನೀಡುತ್ತಿದ್ದಾರೆ. ಅಲ್ಲದೇ ಶಿಸ್ತುಕ್ರಮದ ಬೆದರಿಕೆ ಒಡ್ಡುತ್ತಿದ್ದಾರೆ. ಕೇಂದ್ರದ ಅನುದಾನ ನಮಗೆ ಲಭಿಸದಿರುವ ವಾಸ್ತವತೆಯನ್ನು ಹಾಗೂ ಬರ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸದೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅನುದಾನದ ಕೊರತೆಯ ಬಗ್ಗೆ ಮಾತನಾಡುವ ಪಿಡಿಒಗಳ ಮೇಲೆ ಕೆಂಡಕಾರುತ್ತಿದ್ದಾರೆ.
‘ಸ್ವಂತ ಸಂಪನ್ಮೂಲ ಮತ್ತು ತೆರಿಗೆ ಸಂಗ್ರಹಿಸಿ ನಿರ್ವಹಿಸಿ‘ ಎಂದು ಅವೈಜ್ಞಾನಿಕ ಗುರಿಗಳನ್ನು ನೀಡಿ ಒತ್ತಡ ಹೇರುತ್ತಿದ್ದಾರೆ. ತೆರಿಗೆ ಗುರಿ ತಲುಪದಿದ್ದರೆ ಅಥವಾ ಅನುದಾನದ ಅಲಭ್ಯತೆಯನ್ನು ಪ್ರಸ್ತಾಪಿಸಿದರೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತಿದ್ದಾರೆ. ವೇತನ ತಡೆಹಿಡಿಯುವುದು ಹಾಗೂ ಶಿಸ್ತುಕ್ರಮದ ಬೆದರಿಕೆ ಒಡ್ಡುತ್ತಿರುವುದು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಸಂಪೂರ್ಣವಾಗಿ ಕುಗ್ಗಿಸಿದೆ ಎಂದು ವಿವರಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ರಾಜ್ಯ ಸರ್ಕಾರದಿಂದ ತುರ್ತು ಮುಂಗಡ ನಿಧಿ (Revolving Fund) ನೀಡಬೇಕು. ಕೇಂದ್ರದಿಂದ 15ನೇ ಹಣಕಾಸು ಆಯೋಗದ ಬಾಕಿ ಹಣ ಲಭಿಸುವವರೆಗೆ, ಸಂಕಷ್ಟದಲ್ಲಿರುವ 5,677 ಗ್ರಾಮ ಪಂಚಾಯಿತಿಗಳಿಗೆ ತಲಾ ಕನಿಷ್ಠ ₹10 ಲಕ್ಷ ಮುಂಗಡ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಹಾಗೂ ತುರ್ತು ಕುಡಿಯುವ ನೀರಿನ ನಿರ್ವಹಣೆಗೆ ಅನುವು ಮಾಡಿಕೊಡಬೇಕು ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಜಿಪಂಗಳ ಸಿಇಒ ಅವರ ಕಿರುಕುಳ ಹಾಗೂ ನೋಟಿಸ್‌ಗಳಿಗೆ ತಡೆ ನೀಡಬೇಕು. ಅನುದಾನದ ತೀವ್ರ ಕೊರತೆ ಇರುವ ಈ ಬಿಕ್ಕಟ್ಟಿನ ಸಮಯದಲ್ಲಿ, ವಾಸ್ತವತೆಯನ್ನು ಅರಿಯದೆ ಪಿಡಿಒಗಳಿಗೆ ನೀಡುತ್ತಿರುವ ನೋಟಿಸ್‌ಗಳಿಗೆ, ಶಿಸ್ತುಕ್ರಮದ ಬೆದರಿಕೆಗಳು ಹಾಗೂ ಅವೈಜ್ಞಾನಿಕ ತೆರಿಗೆ ಗುರಿಗಳ ಒತ್ತಡವನ್ನು ತಕ್ಷಣವೇ ನಿಲ್ಲಿಸಬೇಕು. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸ್ಪಷ್ಟ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿರುವುದು ತಿಳಿದು ಬಂದಿದೆ.
ಕುಡಿಯುವ ನೀರಿನ ಸಾಮಗ್ರಿ ನಿರ್ವಹಣೆಗೆ ಎಸ್ಡಿಆರ್ಎಫ್ (SDRF) ನೇರ ಅನುದಾನ ಒದಗಿಸಬೇಕು. ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಸಾಮಗ್ರಿ ಖರೀದಿ ಹಾಗೂ ತುರ್ತು ದುರಸ್ತಿ ವೆಚ್ಚವನ್ನು ನೈಸರ್ಗಿಕ ವಿಕೋಪ ಪರಿಹಾರ ನಿಧಿಯ ಮೂಲಕ ನೇರವಾಗಿ ಪಂಚಾಯಿತಿಗಳಿಗೆ ಬಿಡುಗಡೆ ಮಾಡಬೇಕು. ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಸಂವಿಧಾನಬದ್ಧವಾಗಿ ಸಲ್ಲಬೇಕಾದ ₹2,186 ಕೋಟಿಗೂ ಅಧಿಕ 15ನೇ ಹಣಕಾಸು ಆಯೋಗದ ಬಾಕಿ ಅನುದಾನವನ್ನು ಯಾವುದೇ ತಾರತಮ್ಯವಿಲ್ಲದೆ ಬಿಡುಗಡೆ ಮಾಡಿಸಬೇಕು. ಈ ಬಗ್ಗೆ ಅತ್ಯಂತ ತ್ವರಿತ ಕಾನೂನು ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆಯೇ?
ಮುಂಬರುವ ಒಂದು ವಾರದೊಳಗೆ (7 ದಿನಗಳ ಒಳಗೆ) ರಾಜ್ಯ ಸರ್ಕಾರವು ಸಂಕಷ್ಟದಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ತಲಾ ಕನಿಷ್ಠ ₹10 ಲಕ್ಷ ತುರ್ತು ನಿಧಿಯನ್ನು ಬಿಡುಗಡೆ ಮಾಡದಿದ್ದರೆ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಹಾಹಾಕಾರ ಮತ್ತು ಮೂಲಸೌಕರ್ಯ ನಿರ್ವಹಣೆ ಸಂಪೂರ್ಣವಾಗಿ ಸ್ಥಗಿತಗೊಂಡು ಪರಿಸ್ಥಿತಿ ಇನ್ನಷ್ಟು ಕೈಮೀರಿ ವಿಕೋಪಕ್ಕೆ ಹೋಗಲಿದೆ. ಈ ಗಂಭೀರ ಬಿಕ್ಕಟ್ಟಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರೇ ನೇರ ಹೊಣೆಗಾರರಾಗಲಿದ್ದಾರೆ. ಅಧಿಕಾರಿಗಳು ಆಡಳಿತ ನಡೆಸುವುದು ಅಸಾಧ್ಯವಾಗಲಿದೆ ಎಂದು ಎಚ್ಚರಿಸಿರುವುದು ತಿಳಿದು ಬಂದಿದೆ.




