ಬೆಂಗಳೂರು; ಸರ್ಕಾರಿ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಿರುವ ವಿವಿಧ ಸೇವೆಗಳಲ್ಲಿನ ನ್ಯೂನತೆ ಮತ್ತು ಸಾರ್ವಜನಿಕ ಕುಂದುಕೊರತೆ ಕುರಿತು ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿತ 7 ದಿನಗಳ ಅವಧಿಯೊಳಗೇ ಇತ್ಯರ್ಥಗೊಳಿಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದರೂ ಸಹ 2026ರ ಸೆ.25ರ ಅಂತ್ಯಕ್ಕೆ ಒಟ್ಟಾರೆ 10,313 ದೂರರ್ಜಿಗಳು ನಿಗದಿತ ಅವಧಿಯೊಳಗೆ ಇತ್ಯರ್ಥವಾಗಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ವಿಶೇಷವಾಗಿ ಅಧಿಕಾರಿಗಳು ಕುಂದುಕೊರತೆಗಳನ್ನು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಸಾಮಾನ್ಯ ಮತ್ತು ಅಸ್ಪಷ್ಟ ಕಾರಣಗಳನ್ನು ನೀಡುತ್ತಿದ್ದಾರೆ. ಇಲಾಖೆಯ ಸೇವಾ ವಿತರಣೆ ಮಟ್ಟದಲ್ಲಿಯೂ ಕ್ಷೇತ್ರ ಅನುಷ್ಠಾನಾಧಿಕಾರಿಗಳು ಗಂಭೀರವಾಗಿ ನಿರ್ಲಕ್ಷ್ಯ ವಹಿಸಿರುವ ಅನೇಕ ಪ್ರಕರಣಗಳು ಕಂಡು ಬಂದಿವೆ. ಪ್ರಜಾಸೇವೆ ಅಭಿಯಾನಕ್ಕೆ ರಾಜ್ಯ ಸರ್ಕಾರವು ಅಪಾರ ಪ್ರಮಾಣದಲ್ಲಿ ಖರ್ಚು ಮಾಡುತ್ತಿದ್ದರೂ ಸಹ ನಾಗರೀಕರಿಗೆ ಯಾವುದೇ ಉಪಯೋಗವಾಗುತ್ತಿಲ್ಲ.
ಮತ್ತೊಂದು ವಿಶೇಷವೆಂದರೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ನಗರಾಭಿವೃದ್ಧಿ ಇಲಾಖೆಯು, ಸೇವಾ ವಿತರಣೆ ಮಟ್ಟದಲ್ಲಿ ಗಂಭೀರವಾದ ನಿರ್ಲಕ್ಷ್ಯ ವಹಿಸಿದೆ.
ಸಾರ್ವಜನಿಕರು ಇಲಾಖೆಗಳಿಗೆ ನಿರಂತರವಾಗಿ ಕುಂದುಕೊರತೆ ಅರ್ಜಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಪ್ರಜಾಸೇವೆ ಅಭಿಯಾನದಲ್ಲಿಯೂ ಬೆಟ್ಟದಷ್ಟು ಸಂಖ್ಯೆಯಲ್ಲಿನ ಕುಂದುಕೊರತೆ ಅರ್ಜಿಗಳನ್ನು ನೋಂದಣಿ ಮಾಡುತ್ತಿದ್ದಾರೆ. ಆದರೂ ಸಹ ಈ ಅರ್ಜಿಗಳು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳ್ಳುತ್ತಿಲ್ಲ. ಇಲಾಖೆ ಮುಖ್ಯಸ್ಥರು ಅಥವಾ ಸಕ್ಷಮ ಪ್ರಾಧಿಕಾರಗಳು ಇಂತಹ ಕುಂದುಕೊರತೆಗಳ ಅರ್ಜಿಗಳಿಗೆ ಸಂಬಂಧಿಸಿದಂತೆ ಕನಿಷ್ಟ ಹಿಂಬರಹವನ್ನೂ ನೀಡುತ್ತಿಲ್ಲ.
ಕುಂದುಕೊರತೆಗಳ ದೂರರ್ಜಿ, ಮನವಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2026ರ ಸೆ. 29ರಂದು ವಿಕಾಸಸೌಧದಲ್ಲಿ ಸಭೆ ನಡೆದಿತ್ತು. ಈ ಸಭೆಗೆ ಇಲಾಖೆಗಳು ಕುಂದುಕೊರತೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯ ಸದ್ಯದ ಸ್ಥಿತಿಗತಿಯ ಕುರಿತು ವಿಶ್ಲೇಷಣೆ ವರದಿ ಸಲ್ಲಿಸಿವೆ. ಈ ವಿಶ್ಲೇಷಣೆ ವರದಿಗಳ ಪ್ರಕಾರ ಸಾರ್ವಜನಿಕರ ದೂರು, ದುಮ್ಮಾನಗಳ ಅರ್ಜಿಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
2026ರ ಸೆ. 29ರಂದು ವಿಕಾಸಸೌಧದಲ್ಲಿ ಸಭೆಗೆ ಮಂಡಿಸಿರುವ ವಿಶ್ಲೇಷಣೆ ವರದಿ ಮತ್ತು ದತ್ತಾಂಶಗಳ ಕುರಿತಾದ ದಾಖಲೆಗಳು ದಿ ಫೈಲ್ ಗೆ ಲಭ್ಯವಾಗಿವೆ.

ಪ್ರತಿ ಸಾರ್ವಜನಿಕ ದೂರು, ಮನವಿಗಳನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಪೋರ್ಟಲ್ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಐಪಿಜಿಆರ್ಎಸ್ ತಂತ್ರಾಂಶದಲ್ಲಿ ದಾಖಲಿಸಿರುವ ಕುಂದುಕೊರತೆಯನ್ನು 7 ದಿನಗಳ ಕಾಲಾವಧಿಯಲ್ಲಿ ಮತ್ತು ಮನವಿಗಳನ್ನು 30 ದಿನಗಳಲ್ಲಿ ವಿಲೇ ಮಾಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರೊಂದಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ಐಪಿಜಿಆರ್ಎಸ್ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಮತ್ತು ಎಲ್ಲಾ ದೂರುಗಳನ್ನು ನಿಗದಿತ ಕಾಲಮಿತಿಯೊಳಗೆ ಗುಣಾತ್ಮಕವಾಗಿ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು.
ದೂರುಗಳನ್ನು ವಿಲೇ ಮಾಡುವಾಗ ಸಮರ್ಪಕವಾದ ಷರಾ ನಮೂದಿಸಬೇಕು. ಅಥವಾ ಹಿಂಬರಹವನ್ನು ಕಡ್ಡಾಯವಾಗಿ ನೀಡಬೇಕು. ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಯೋಜನೆಯು ಅತ್ಯಂತ ಪ್ರಮುಖ ಮತ್ತು ಮಹತ್ವದ ಯೋಜನೆಯಾಗಿದೆ. ಮುಂಬರುವ ದಿನಗಳಲ್ಲಿ ಈ ತಂತ್ರಾಂಶವನ್ನು ಕೃತಕ ಬುದ್ದಿಮತ್ತೆ ಮತ್ತು ಇ-ಆಫೀಸ್ ವ್ಯವಸ್ಥೆಯೊಂದಿಗೆ ಸಂಯೋಜಿಸುತ್ತಿದೆ. ಮುಂಬರುವ ದಿನಗಳಲ್ಲಿ ಐಪಿಜಿಆರ್ಎಸ್ ಅಡಿಯಲ್ಲಿ ಬರುವ ಕುಂದುಕೊರತೆಗಳನ್ನು ಹಂತ-ಹಂತವಾಗಿ ಸಕಾಲ ಸೇವೆಗಳ ವ್ಯಾಪ್ತಿಗೆ ತರಲಾಗುತ್ತಿದೆ. ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡದ ಅಧಿಕಾರಿಗಳಿಗೆ ಸಕಾಲ ಕಾಯ್ದೆ ಅನ್ವಯ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಸಾರ್ವಜನಿಕ ದೂರುಗಳ ಪರಿಹಾರ ಪ್ರಕ್ರಿಯೆಯನ್ನು ಅತ್ಯಂತ ಗಂಭೀರ ಮತ್ತು ಆದ್ಯತೆ ವಿಷಯವೆಂದು ಪರಿಗಣಿಸಬೇಕು.


ಆದರೆ 2026ರ ಸೆ. 25ರ ಅಂತ್ಯಕ್ಕೆ ಐಪಿಜಿಆರ್ಎಸ್ ನಲ್ಲಿ ದಾಖಲಾಗಿದ್ದ ಒಟ್ಟು ದೂರುಗಳ ಪೈಕಿ 4,363 ದೂರುಗಳನ್ನು 47 ಇಲಾಖೆಗಳು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸದೇ ಬಾಕಿ ಇರಿಸಿಕೊಂಡಿದ್ದವು. ಅದೇ ರೀತಿ ಸಿಪಿ ಗ್ರಾಮ್ಸ್ನಲ್ಲಿ 4,378, ಮುಖ್ಯ ಕಾರ್ಯದರ್ಶಿ ಕಚೇರಿಯಿಂದ 1,244, ಮುಖ್ಯಮಂತ್ರಿ ಕಚೇರಿಯಿಂದ 328 ದೂರರ್ಜಿಗಳನ್ನು ಇತ್ಯರ್ಥಗೊಳಿಸದೇ ಬಾಕಿ ಇರಿಸಿಕೊಂಡಿದ್ದವು. ಈ ಎಲ್ಲಾ ವಿಭಾಗಗಳಿಂದ ಒಟ್ಟಾರೆ 10,313 ದೂರರ್ಜಿಗಳು ನಿಗದಿತ ಅವಧಿಯೊಳಗೆ ಇತ್ಯರ್ಥ ಮಾಡಿಲ್ಲ.
ಈ ಬಗ್ಗೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಎಲ್ಲಾ ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ 2026ರ ಸೆ.15ರಂದು ಪತ್ರ ಬರೆದಿದ್ದರು.
ಹರ್ಷ ಗುಪ್ತ ಪತ್ರದಲ್ಲೇನಿದೆ?
ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ತಂತ್ರಾಂಶದಲ್ಲಿ ಇಲಾಖೆಗಳ ವಿವಿಧ ಸೇವೆಗಳ ಕುರಿತು ಸ್ವೀಕರಿಸಲಾದ ಸಾರ್ವಜನಿಕ ಕುಂದುಕೊರತೆಗಳ ವಿಶ್ಲೇಷಣೆಯ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ವಿಶ್ಲೇಷಣೆಯಿಂದ ತಿಳಿದು ಬಂದಿರುವುದೇನಂದರೇ ಅತೀ ಕಡಿಮೆ ಪ್ರಮಾಣದ ಕುಂದುಕೊರತೆಗಳಷ್ಟೇ ನಿಜವಾಗಿ ಪರಿಹಾರಗೊಂಡಿದೆ. ಉಳಿದ ಹೆಚ್ಚಿನ ಕುಂದುಕೊರತೆಗಳು ನಾಗರೀಕರ ತೃಪ್ತಿಗೆ ತಕ್ಕಂತೆ ಪರಿಹಾರವಾಗಿಲ್ಲ. ವಿಶೇಷವಾಗಿ ಅಧಿಕಾರಿಗಳು ಕುಂದುಕೊರತೆಗಳನ್ನು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಸಾಮಾನ್ಯ ಮತ್ತು ಅಸ್ಪಷ್ಟ ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಸರ್ಕಾರದ ಗಮನ ಸೆಳೆದಿರುವುದು ಗೊತ್ತಾಗಿದೆ.

ಹಾಗೆಯೇ ‘ ನಿಮ್ಮ ಇಲಾಖೆಯ ಸೇವಾ ವಿತರಣೆ ಮಟ್ಟದಲ್ಲಿನ ಕ್ಷೇತ್ರ ಅನುಷ್ಠಾನಾಧಿಕಾರಿಗಳ ಗಂಭೀರ ನಿರ್ಲಕ್ಷ್ಯವನ್ನು ತೋರಿಸುತ್ತದೆ,’ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ತಿಳದು ಬಂದಿದೆ.
ವಸತಿ ಇಲಾಖೆಗೆ ಸಂಬಂಧಿಸಿದಂತೆ ಐಪಿಜಿಆರ್ಎಸ್ನಲ್ಲಿ ದಾಖಲಾಗಿದ್ದ ಒಟ್ಟು ಅರ್ಜಿಗಳ ಪೈಕಿ 1,335 ದೂರರ್ಜಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸಿಲ್ಲ. 47 ಇಲಾಖೆಗಳ ಪೈಕಿ ವಸತಿ ಇಲಾಖೆಯು ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಕಂದಾಯ ಇಲಾಖೆಯು 972, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 320, ನಗರಾಭಿವೃದ್ದಿ 128, ಒಳಾಡಳಿತ 138 , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 194 ದೂರರ್ಜಿಗಳನ್ನು ಸಕಾಲದಲ್ಲಿ ಇತ್ಯರ್ಥಗೊಳಿಸದೇ ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.
ಅದೇ ರೀತಿ ಸಿಪಿ ಗ್ರಾಮ್ಸ್ನಲ್ಲಿ ಒಳಾಡಳಿತ ಇಲಾಖೆಯು 1,208 ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು 304 ದೂರರ್ಜಿಗಳನ್ನು ಇತ್ಯರ್ಥಪಡಿಸಿಲ್ಲ.

ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯೊಳಗಿನ ಇ- ಖಾತೆ, ನಳ, ನಳ, ಒಳ ಚರಂಡಿ, ನೀರಿನ ಪೈಪ್ಲೈನ್ ಸಮಸ್ಯೆ, ಆಸ್ತಿ ಮಾಲೀಕತ್ವದ ಬದಲಾವಣೆ, ವಿದ್ಯುತ್, ಘನ ತ್ಯಾಜ್ಯಕ್ಕೆ ಸಂಬಂಧಿಸಿದ ಸೇವೆ, ರಸ್ತೆ ನಿರ್ವಹಣೆ, ಆರೋಗ್ಯ ಶಾಖೆ, ಪ್ರಾಣಿ ನಿಯಂತ್ರಣ, ಕಂದಾಯ ಶಾಖೆಗೆ ಸಂಬಂಧಿಸಿದ ಸೇವೆಗಳಿಗೆ ಸಂಬಂಧಿಸಿದಂತೆ ಅತೀ ಹೆಚ್ಚು ದೂರುಗಳು ಐಪಿಜಿಆರ್ಎಸ್ನಲ್ಲಿ ದಾಖಲಾಗಿವೆ. ಈ ಪೈಕಿ ಶೇ. 222ರಷ್ಟು ಕುಂದುಕೊರತೆ ಅರ್ಜಿಗಳನ್ನು ನಗರಾಭಿವೃದ್ಧಿ ಇಲಾಖೆಯು ಯಾವುದೇ ರೀತಿಯಲ್ಲಿಯೂ ಪರಿಹರಿಸಿಲ್ಲ. ಆದರೆ ಶೇ. 81ರಷ್ಟು ಕಾನೂನಿನ ಪ್ರಕಾರ ಹಿಂಬರಹ ನೀಡಿದೆ. ಸಮಸ್ಯೆಯನ್ನು ಪರಿಹರಿಸುವ ಸಂಬಂಧ ಶೇ.57ರಷ್ಟು ಭರವಸೆ ನೀಡಿದೆ. ಶೇ. 15.1ರಷ್ಟು ಮಾತ್ರ ಪೂರ್ಣವಾಗಿ ಪರಿಹರಿಸಿದೆ. ಶೇ. 11.4ರಷ್ಟು ಮಾತ್ರ ಭಾಗಶಃ ಪರಿಹರಿಸಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪ್ರಮುಖ 5 ಸೇವೆಗಳಲ್ಲಿ ಅತೀ ಹೆಚ್ಚು ದೂರುಗಳು ಐಪಿಜಿಆರ್ಎಸ್ನಲ್ಲಿ ದಾಖಲಾಗಿವೆ. ಆರ್ಟಿಸಿ/ಪಹಣಿ, ಖಾತೆ, ಭೂಮಿ ವಿವಾದಸ್ಪದ ಪ್ರಕರಣಗಳ ವರದಿಗಳು, ಸಾಗುವಳಿ ಚೀಟಿ, ವಿವಾಹಗಳ ನೋಂದಣಿಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ದಾಖಲಾಗಿವೆ. ಒಟ್ಟಾರೆ ಶೇ.43.2ರಷ್ಟು ಕುಂದುಕೊರತೆಗಳನ್ನು ಪರಿಹರಿಸಿಲ್ಲ. ಶೇ.8ರಷ್ಟು ಭಾಗಶಃ ಪರಿಹರಿಸಿದೆ. ಶೇ.14.8ರಷ್ಟು ಮಾತ್ರ ಕಾನೂನಿನ ಪ್ರಕಾರ ಹಿಂಬರಹ ನೀಡಿದ್ದಾರೆ. ಪರಿಹರಿಸಲಾಗುವುದ ಎಂದು ಶೇ.17.2ರಷ್ಟು ಭರವಸೆ ನೀಡಿದೆ. ಶೇ. 16.8ರಷ್ಟು ಮಾತ್ರ ಪೂರ್ಣವಾಗಿ ಪರಿಹರಿಸಿದೆ.

ಪ್ರಜಾಸೇವೆ ಅಭಿಯಾನದಡಿಯಲ್ಲಿ 2026ರ ಸೆ.25ರ ಅಂತ್ಯಕ್ಕೆ 81, 727 ಸಂಖ್ಯೆಯಲ್ಲಿ ಕುಂದುಕೊರತೆ ಅರ್ಜಿಗಳು ನೋಂದಣಿಯಾಗಿವೆ. ಈ ಪೈಕಿ 1,232 ಸಂಖ್ಯೆಯ ಕುಂದುಕೊರತೆಗಳ ಅರ್ಜಿಗಳನ್ನು ಮುಕ್ತಾಯಗಳಿಸಿದೆ. ಇನ್ನೂ ಹಿಂಬರಹ ನೀಡಲು 55,335 ಕುಂದುಕೊರತೆ ಅರ್ಜಿಗಳು ಬಾಕಿ ಇವೆ. ಯಾವುದೇ ರೀತಿಯ ಹಿಂಬರಹ ನೀಡದೇ ಇರುವ ಕುಂದುಕೊರತೆ ಅರ್ಜಿಗಳ ಸಂಖ್ಯೆಯು 25,160ರಷ್ಟಿವೆ.

ಈ ಪೈಕಿ ಕಂದಾಯ ಇಲಾಖೆಯಲ್ಲಿ 28,336 ನೋಂದಣಿಯಾಗಿವೆ. 455 ಅರ್ಜಿಗಳ ಪ್ರಕರಣದಲ್ಲಿ ಮಾತ್ರ ಪರಿಹರಿಸಿದೆ. ಒಟ್ಟಾರೆ 18,579 ಕುಂದುಕೊರತೆ ಅರ್ಜಿಗಳನ್ನು ಮುಕ್ತಾಯಗೊಳಿಸಿದೆ. ಇನ್ನೂ 9,757 ಕುಂದುಕೊರತೆ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಇವೆ. ವಸತಿ ಇಲಾಖೆಯಲ್ಲಿ 15,028 ಅರ್ಜಿಗಳು ನೋಂದಣಿಯಾಗಿವೆ. ಈ ಪೈಕಿ 9,372 ಕುಂದುಕೊರತೆ ಅರ್ಜಿಗಳನ್ನು ವಿಲೇ ಮಾಡಿದೆ. ಇನ್ನೂ 5,656 ಅರ್ಜಿಗಳು ಬಾಕಿ ಇವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಅಭಿವೃದ್ಧಿ ಇಲಾಖೆಯಲ್ಲಿ 12, 828 ಅರ್ಜಿಗಳು ನೋಂದಣಿಯಾಗಿವೆ. 8,025 ಅರ್ಜಿಗಳನ್ನು ಮುಕ್ತಾಯಗೊಳಿಸಿದೆ. ಇನ್ನೂ 4,803 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ನಗರಾಭಿವೃದ್ಧಿ ಇಲಾಖೆಯಲ್ಲಿ 10,935 ಅರ್ಜಿಗಳು ನೋಂದಣಿಯಾಗಿವೆ.9,237 ಅರ್ಜಿಗಳನ್ನು ಮುಕ್ತಾಯಗೊಳಿಸಿದೆ. ಇನ್ನೂ 1,698 ಅರ್ಜಿಗಳು ಬಾಕಿ ಇವೆ.

ಒಟ್ಟು 12 ಇಲಾಖೆಗಳ ಪೈಕಿ ಕಂದಾಯ ಇಲಾಖೆಯೊಂದರಲ್ಲೇ 28,359 ಕುಂದುಕೊರತೆಗಳು ದಾಖಲಾಗಿವೆ. ಉಳಿದ 11 ಇಲಾಖೆಗಳಿಗೆ ಹೋಲಿಸಿದರೆ ಇದರ ಪಾಲು ಶೇ. 34.7ರಷ್ಟಿದೆ. ವಸತಿ ಇಲಾಖೆ ಶೇ. 19.9, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಶೆ. 15.7, ನಗರಾಭಿವೃದ್ದಿ ಇಲಾಖೆಯು ಶೇ.12.8 ಪಾಲು ಹೊಂದಿದೆ.

ವಸತಿ ಮತ್ತು ವಸತಿ ನಿವೇಶನಗಳಿಗೆ ಸಂಬಂಧಿಸಿದಂತೆ 28,042 ಕುಂದುಕೊರತೆ ಅರ್ಜಿಗಳನ್ನು ಹೊಂದಿದೆ.

ಭೂಮಿ, ಆಸ್ತಿಗೆ ಸಂಬಂಧಿಸಿದ ದಾಖಲೆ, ಕಂದಾಯಕ್ಕೆ ಸಂಬಂಧಿಸಿದಂತೆ 16,679, ಪಿಂಚಣಿ, ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ 13,572, ಪಡಿತರ ಚೀಟಿ, ಆಹಾರ ಸರಬರಾಜಿಗೆ ಸಂಬಂಧಿಸಿದಂತೆ 7,693, ರಸ್ತೆ, ನೀರು, ವಿದ್ಯುತ್, ನೀರಾವರಿಗೆ ಸಂಬಂಧಿಸಿದಂತೆ 7,284, ಇತರೆ ಸೇವೆಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದಂತೆ 5,176, ಮಹಿಳೆ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನ ಕಲ್ಯಾಣಕ್ಕೆ ಸಂಬಂಧಿಸಿದಂತೆ 2,567 ಕುಂದುಕೊರತೆಗಳು ದಾಖಲಾಗಿವೆ.

ಸಕಾಲ ಅರ್ಜಿಗಳಿಗೆ ಸಂಬಂಧಿಸಿದಂತೆ ಒಟ್ಟು 39 ಇಲಾಖೆಗಳಲ್ಲಿ ಆಗಸ್ಟ್ನಲ್ಲಿ ಸರಾಸರಿ 20,285 ಅರ್ಜಿಗಳು ಬಾಕಿ ಇದ್ದವು.

ಸೆಪ್ಟಂಬರ್ನಲ್ಲಿ 15,153ರಷ್ಟು ಇತ್ಯರ್ಥಗೊಳಿಸದೇ ಬಾಕಿ ಇದ್ದವು. ಒಟ್ಟಾರೆ ಶೇ. 25.30ರಷ್ಟು ಬಾಕಿ ಇವೆ.

ಕಂದಾಯ ಇಲಾಖೆಯೊಂದರಲ್ಲೇ ಆಗಸ್ಟ್ ತಿಂಗಳಲ್ಲಿ ಸರಾಸರಿ 8,638 ಬಾಕಿ ಇದ್ದರೇ ಸೆಪ್ಟಂಬರ್ನಲ್ಲಿ 5,863 ಬಾಕಿ ಇವೆ. ಇದು ಒಟ್ಟಾರೆ ಅರ್ಜಿಗಳ ಪೈಕಿ ಶೇ. 32.13ರಷ್ಟಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಆಗಸ್ಟ್ನಲ್ಲಿ 1,183 ಸರಾಸರಿ ಬಾಕಿ ಇದ್ದರೇ ಸೆಪ್ಟಂಬರ್ನ್ಲಲಿ 1,227ರಷ್ಟು ಬಾಕಿ ಇವೆ. ಆಹಾರ,ನಾಗರಿಕ ಸರಬರಾಜು ಇಲಾಖೆಯಲ್ಲಿ 3,241 ಕುಂದುಕೊರತೆ ಅರ್ಜಿಗಳು ಆಗಸ್ಟ್ನಲ್ಲಿ ಬಾಕಿ ಇದ್ದರೇ ಸೆಪ್ಟಂಬರ್ನಲ್ಲಿ 1,030ರಷ್ಟು ಬಾಕಿ ಇದ್ದವು. ಶೇ. 68.22ರಷ್ಟು ಬಾಕಿ ಇದ್ದವು.




