ಬೆಂಗಳೂರು; ರಾಜ್ಯ ವಿಪತ್ತು ಪರಿಹಾರ ನಿಧಿ, ರಸ್ತೆ , ಜಲಮೂಲಗಳ ದುರಸ್ತಿ, ನವೀಕರಣ, ಪುನರುಜ್ಜೀವನ, ವೃದ್ಧಾಪ್ಯ ವಿಶ್ರಾಂತಿ ವೇತನ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಕಾಮಗಾರಿಗಳ ಆಧುನೀಕರಣದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ನಯಾಪೈಸೆಯನ್ನು ಬಿಚ್ಚಿಲ್ಲ.
2026-27ನೇ ಸಾಲಿಗೆ ಸಂಬಂಧಿಸಿದಂತೆ ಇಲಾಖಾವಾರು ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಆಗಿರುವ ಆರ್ಥಿಕ ಪ್ರಗತಿ ಕುರಿತ 2026ರ ಅಕ್ಟೋಬರ್ 25ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳಲ್ಲಿ ಈ ಮಾಹಿತಿ ಇದೆ.
ಕೆಡಿಪಿ ಸಭೆಗೆ ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳ ವಿವರಗಳು ದಿ ಫೈಲ್‌ಗೆ ಲಭ್ಯವಾಗಿದೆ.
ಜಲಜೀವನ್ ಮಿಷನ್‌ಗೆ ರಾಜ್ಯವು 5,060.14 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಕೇಂದ್ರದ ಬಳಿ 5,041.00 ಕೋಟಿ ರು ಅನುದಾನ ಲಭ್ಯವಿದೆ. ಈ ಪೈಕಿ ರಾಜ್ಯವು 2,667.52 ಕೋಟಿ, ಕೇಂದ್ರವು ಕೇವಲ 196.19 ಕೋಟಿ ರು ಬಿಡುಗಡೆ ಮಾಡಿದೆ. ಕೇಂದ್ರದ ಬಿಡುಗಡೆಯು ಶೇ. 3.9ರಷ್ಟಿರುವುದು ಗೊತ್ತಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸಾಮಗ್ರಿ ವೆಚ್ಚಕ್ಕೆ ರಾಜ್ಯವು 450.00 ಕೋಟಿ ರು, ಕೇಂದ್ರವು 2,796.00 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ವಯು 163.19 ಕೋಟಿ, ಕೇಂದ್ರವು 1,354.00 ಕೋಟಿ ರು ಬಿಡುಗಡೆ (ಶೇ.48.4) ಮಾಡಿದೆ. ರಾಜ್ಯ ವಿಪತ್ತು ಪರಿಹಾರ ನಿಧಿಗೆ ರಾಜ್ಯವು 387.25 ಕೋಟಿ, ಕೇಂದ್ರವು 1,161.75 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಿಡಿಗಾಸನ್ನೂ ಕೊಟ್ಟಿಲ್ಲ. ಹೀಗಾಗಿ ಪ್ರಗತಿಯು ಶೂನ್ಯವಾಗಿದೆ.
ವಿಬಿ ಜಿ ರಾಮ್ ಯೋಜನೆಗೆ ರಾಜ್ಯವು 648.47 ಕೋಟಿ, ಕೇಂದ್ರವು 972.71 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ರಾಜ್ಯ ಮತ್ತು ಕೇಂದ್ರವು ತನ್ನ ಪಾಲಿನ ಪೂರ್ಣ ಹಣವನ್ನು ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳೀಗೆ ರಾಜ್ಯವು 533.33 ಕೋಟಿ ರು, ಕೇಂದ್ರವು 800.00 ಕೋಟಿ ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು 326.53 ಕೋಟಿ, ಕೇಂದ್ರವು 489.80 ಕೋಟಿ ರು ಬಿಡುಗಡೆ ಮಾಡಿದೆ. ಸಮಗ್ರ ಶಿಕ್ಷಣ ಕರ್ನಾಟಕಕ್ಕೆ ರಾಜ್ಯವು 549.02 ಕೋಟಿ, ಕೇಂದ್ರವು 795.16 ಕೋಟಿ ರು ಅನುದಾನ ಒದಗಿಸಿದೆ. ಇದರಲ್ಲಿ ರಾಜ್ಯವು ಕೇವಲ 7.19 ಕೋಟಿ, ಕೇಂದ್ರವು 153.90 ಕೋಟಿ ರು ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.
ಅಮೃತ್ ಯೋಜನೆ 2.0 ಗೆ ರಾಜ್ಯ ಮತ್ತು ಕೇಂದ್ರವು ಪಾಲುದಾರಿಕೆ ಹೊಂದಿರುವ ತಲಾ 794 ಕೋಟಿ ರು ಬಿಡುಗಡೆ ಮಾಡಿದೆ. ವಿಬಿ-ಜಿ ರಾಮ್ ಸಾಮಗ್ರಿ ವೆಚ್ಚಕ್ಕೆ ರಾಜ್ಯವು 432.32 ಕೋಟಿ ರು, ಕೇಂದ್ರವು ಒದಗಿಸಿಕೊಂಡಿರುವ 648 ಕೋಟಿ ರುಗಳನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯವು 150 ಕೋಟಿ, ಕೇಂದ್ರವು 600 ಕೋಟಿ ರು ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು ತನ್ನ ಪಾಲಿನ 150 ಕೋಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರವು ತನ್ನ ಪಾಲಿನ 600 ಕೋಟಿಯಲ್ಲಿ ಬಿಡಿಗಾಸನ್ನೂ ಬಿಚ್ಚಿಲ್ಲ. ಪ್ರಧಾನಮಂತ್ರಿ ಪೋಷಣ ಶಕ್ತಿ, ನಿರ್ಮಾಣ ಅಡಿಯಲ್ಲಿ ಅಡುಗೆ ವೆಚ್ಚಕ್ಕಾಗಿ ರಾಜ್ವಯು 1,922.90 ಕೋಟಿ ರು ಮತ್ತು ಕೇಂದ್ರವು 554 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು 482.72 ಕೋಟಿ, ಕೇಂದ್ರವು 278.58 ಕೋಟಿ ರು ಬಿಡುಗಡೆ ಮಾಡಿರುವುದು ಗೊತ್ತಾಗಿದೆ.
ಕೇಂದ್ರ ರಸ್ತೆ ಮತ್ತ ಮೂಲಸೌಕರ್ಯ ನಿಧಿಯಿಂದ ಒದಗಿಸಲಾದ ಆರ್ಥಿಕ ನೆರವಿನಿಂದ ನಿರ್ಮಾಣವಾದ ರಸ್ತೆಗಳು ಯೋಜನೆಗೆ ರಾಜ್ಯದ ಪಾಲು ಇಲ್ಲ. ಕೇಂದ್ರವು ಇದಕ್ಕಾಗಿ 500 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ 473.92 ಕೋಟಿ ರು ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ಯೋಜನೆಗೆ ರಾಜ್ಯವು 350 ಕೋಟಿ, ಕೇಂದ್ರವು 500 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಇದರಲ್ಲಿ ರಾಜ್ಯವು ನಯಾಪೈಸೆ ಕೊಟ್ಟಿಲ್ಲ. ಕೇಂದ್ರವು 298.23 ಕೋಟಿ ರು ಬಿಡುಗಡೆ ಮಾಡಿದೆ.
ಐಸಿಡಿಎಸ್ ಯೋಜನೆಗೆ ರಾಜ್ಯವು 499.03 ಕೋಟಿ ರು., ಕೇಂದ್ರವು 489.03 ಕೋಟಿ ರು ನೀಡಿದೆ. ಈ ಪೈಕಿ ರಾಜ್ಯ ಮತ್ತು ಕೇಂದ್ರವು ತಲಾ 227.24 ಕೋಟಿ ರು ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಅಭಿಯಾನಕ್ಕೆ ರಾಜ್ಯವು 290.95 ಕೋಟಿ ರು., ಕೇಂದ್ರವು 437.92 ಕೋಟಿ ರು ಅನುದಾನ ಒದಗಿಸಿದೆ. ಈ ಪೈಕಿ ರಾಜ್ಯವು ಕೇವಲ 33.86 ಕೋಟಿ ಮತ್ತು ಕೇಂದ್ರವು 50.80 ಕೋಟಿ ರು ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ರಾಜ್ಯವು 286.89 ಕೋಟಿ ರು., ಕೇಂದ್ರವು 430.33 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು ಕೇವಲ 22.78 ಕೋಟಿ ಮತ್ತು ಕೇಂದ್ರವು 34.17 ಕೋಟಿ ರು ನೀಡಿದೆ. ಅಣೆಕಟ್ಟುಗಳು, ಪಿಕ್ ಅಪ್ ಮತ್ತು ಇತರೆ ಕಾಮಗಾರಿಗಳ ಯೋಜನೆಗೆ ರಾಜ್ಯವು 230.00 ಕೋಟಿ, ಕೇಂದ್ರವು 345.00 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ರಾಜ್ಯವು ತನ್ನ ಪಾಲಿನಲ್ಲಿ ಕೇವಲ 7.33 ಕೋಟಿ ಮತ್ತು ಕೇಂದ್ರವು ಕೇವಲ 11.00 ಕೋಟಿ ರು ಅನುದಾನವನ್ನು ಬಿಡುಗಡೆಗೆ ಉಳಿದ ಮೊತ್ತವನ್ನು ಬಿಡುಗಡೆಗೆ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.
ಎಚ್‌ಕೆಪಿಪಿ ಜಲಮೂಲಗಳ ದುರಸ್ಥಿ, ನವೀಕರಣ ಮತ್ತು ಪುನರುಜ್ಜೀವನ ಯೋಜನೆಗಳಿಗೆ ರಾಜ್ಯವು 230 ಕೋಟಿ, ಕೇಂದ್ರವು 335 ಕೋಟಿ ಅನುದಾನ ಒದಗಿಸಿಕೊಂಡಿದೆ. ಆದರೆ ರಾಜ್ಯ ಮತ್ತ ಕೇಂದ್ರ ಸರ್ಕಾರವು ಬಿಡಿಗಾಸನ್ನೂ ಬಿಚ್ಚಿಲ್ಲ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ರಾಜ್ಯವು 323.19 ಕೋಟಿ, ಕೇಂದ್ರ ಸರ್ಕಾರವು 334.79 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯ ಸರ್ಕಾರವು 127.78 ಕೋಟಿ, ಕೇಂದ್ರವು 154.17 ಕೋಟಿ ರು ಅನುದಾನವನ್ನು ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.
ವೇಗವರ್ಧಕ ನೀರಾವರಿ ಫಲಾನುಭವಿ ಕಾಯಕ್ರಮ ಮತ್ತು ವಿವಿಧ ನಿಗಮಗಳಡಿಯಲ್ಲಿ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರವು 167.89 ಕೋಟಿ ರುಪಾಯಿ ಅನುದಾನವನ್ನು ಒದಗಿಸಿಕೊಂಡಿದೆ. ಕೇಂದ್ರವು ಈ ಯೋಜನೆಗಳಿಗೆ 332.11 ಕೋಟಿ ರು ಅನುದಾನ ಲಭ್ಯವಾಗಿಸಿದೆ. ಈ ಪೈಕಿ ರಾಜ್ಯವು ಕೇವಲ 12.70 ಕೋಟಿ, ಕೇಂದ್ರವು 19.05 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ವೃದ್ಧಾಪ್ಯ ವಿಶ್ರಾಂತಿ ವೇತನ ಯೋಜನೆಗೆ ರಾಜ್ಯವು 2,548.05 ಕೋಟಿ ಮತ್ತು ಕೇಂದ್ರವು 300 ಕೋಟಿ ರು ಅನುದಾನ ಒದಗಿಸಿದೆ. ಈ ಪೈಕಿ ರಾಜ್ಯವು 1,911.04 ಕೋಟಿ ಒದಗಿಸಿದೆ. ಆದರೆ ಕೇಂದ್ರ ಯೋಜನೆಯು 300 ಕೋಟಿ ರುಪಾಯಿ ಪೈಕಿ ಒಂದೇ ಒಂದು ಪೈಸೆಯನ್ನೂ ನೀಡಿಲ್ಲ.
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಕಾಮಗಾರಿಗಳ ಆಧುನೀಕರಣ ಮತ್ತು ಸಮೃದ್ಧಿ ಯೋಜನೆಗಳಿಗೆ ರಾಜ್ಯವು 200 ಕೋಟಿ ರು ಅನುದಾನ ಒದಗಿಸಿಕೊಂಡಿದ್ದರೇ ಕೇಂದ್ರವು 300 ಕೋಟಿ ರುಪಾಯಿ ಒದಗಿಸಿಕೊಂಡಿದೆ. ಈ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ನಯಾಪೈಸೆಯನ್ನೂ ಕೊಟ್ಟಿಲ್ಲ. ಹಾಗೆಯೇ ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮಗಳಿಗೆ ರಾಜ್ಯವು 188.19 ಕೋಟಿ ಮತ್ತು ಕೇಂದ್ರವು 269.77 ಕೋಟಿ ರುಪಾಯಿ ಅನುದಾನ ಒದಗಿಸಿದೆ. ಈ ಪೈಕಿ ರಾಜ್ಯ ಸರ್ಕಾರವು 63.33 ಕೋಟಿ, ಕೇಂದ್ರ 95 ಕೋಟಿ ರು ಅನುದಾನ ಬಿಡುಗಡೆ ಮಾಡಿರುವುದು ಗೊತ್ತಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕಾರ್ಯಾಚರಣೆ ಯೋಜನೆಗೆ ರಾಜ್ಯವು 187.47 ಕೋಟಿ, ಕೇಂದ್ರವು 268.01 ಕೋಟಿ ರು ಅನುದಾನ ಹಂಚಿಕೆ ಮಾಡಿದೆ. ಇದರಲ್ಲಿ ರಾಜ್ಯವು 178.67 ಕೋಟಿ, ಕೇಂದ್ರವು ಪೂರ್ಣ ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ರಾಜ್ಯವು 260.19 ಕೋಟಿ, ಕೇಂದ್ರವು 209.77 ಕೋಟಿ ರು ಅನುದಾನ ಲಭ್ಯವಾಗಿಸಿಕೊಂಡಿದೆ. ಈ ಪೈಕಿ ರಾಜ್ಯವು ತನ್ನ ಪಾಲಿನ 260.19 ಕೋಟಿ ರು ಬಿಡುಗಡೆ ಮಾಡಿದ್ದರೇ ಕೇಂದ್ರವು 196.00 ಕೋಟಿ ರು ಅನುದಾನ ಬಿಡುಗಡೆ ಮಾಡಿದೆ.

ಪ್ರಧಾನಮಂತ್ರಿ ಮಾತೃ ವಂದನೆ ಯೋಜನೆಗೆ ರಾಜ್ಯವು 110.99 ಕೋಟಿ, ಕೇಂದ್ರವು 166.48 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು 27.75 ಕೋಟಿ, ಕೇಂದ್ರವು 41.62 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ ರಾಜ್ಯವು 106.77 ಕೋಟಿ, ಕೇಂದ್ರವು 160.15 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಇದರಲ್ಲಿ ರಾಜ್ಯವು 40.95 ಕೋಟಿ, ಕೇಂದ್ರವು 61.43 ಕೋಟಿ ರು ಅನುದಾನ ಬಿಡುಗಡೆ ಮಾಡಿದೆ. ಸ್ವಚ್ಚ ಭಾರತ ಅಭಿಯಾನಕ್ಕೆ (ಗ್ರಾಮೀಣ) ರಾಜ್ಯವು 126.46 ಕೋಟಿ ರುಪಾಯಿ, ಕೇಂದ್ರವು 159.69 ಕೋಟಿ ರುಪಾಯಿ ಅನುದಾನ ಒದಗಿಸಿಕೊಂಡಿದೆ. ಇದರಲ್ಲಿ ರಾಜ್ಯವು 100 ಕೋಟಿ, ಕೇಂದ್ರವು 150 ಕೋಟಿ ರು ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.
ಹಾಗೆಯೇ ಪಿಎಂ ಶ್ರೀ ಯೋಜನೆಗೆ ರಾಜ್ಯವು 103.71 ಕೋಟಿ, ಕೇಂದ್ರವು 155.58 ಕೋಟಿ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು 70.73 ಕೋಟಿ ಮತ್ತು ಕೇಂದ್ರವು 106.10 ಕೋಟಿ ರುಪಾಯಿ ಬಿಡುಗಡೆ ಮಾಡಿರವುದು ಗೊತ್ತಾಗಿದೆ.




