ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಊರ್ಜಿತಗೊಳಿಸಲು ರಾಜ್ಯ ಸರಕಾರ 2022ರಲ್ಲಿ ಜಾರಿಗೆ ತಂದಿದ್ದ ಕಾಯಿದೆಯನ್ನು  ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿರುವುದು ಸೇವೆಯಲ್ಲಿರುವ ಅಧಿಕಾರಿಗಳು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರನ್ನು ಭೇಟಿ ಮಾಡಿರುವ ಬೆನ್ನಲ್ಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತರಳಬಾಳು ಪೀಠದ ಶ್ರೀಗಳು ಮಾತನಾಡಿದ್ದ ಭಾಷಣದ ತುಣುಕು ಈಗ ಚರ್ಚೆಗೆ ಗ್ರಾಸವಾಗಿದೆ.

2011ರ ಬ್ಯಾಚ್‌ನ ನೇಮಕ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದ ಸಂದರ್ಭದಲ್ಲಿ ತರಳಬಾಳು ಪೀಠದ ಶ್ರೀಗಳು, ಆಗಿನ ಮುಖ್ಯಮಂತ್ರಿ,  ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮತ್ತು ಸ್ಪೀಕರ್ ಅವರೊಂದಿಗೆ ಸಮಾಲೋಚಿಸಿದ್ದ ಸಂಗತಿ ಕುರಿತು ಭದ್ರಾವತಿಯಲ್ಲಿ ಈಚೆಗೆ ನಡೆದಿದ್ದ  ತರಳಬಾಳು ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಮೆಲುಕು ಹಾಕಿದ್ದರು.

ತರಳಬಾಳು ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ತರಳಬಾಳು ಪೀಠದ ಶ್ರೀಗಳು ಮೆಲುಕು ಹಾಕಿದ್ದ ಅವರ ಮಾತುಗಳು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ತರಳುಬಾಳು ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ  ಶ್ರೀಗಳು ಸುಮಾರು 38 ನಿಮಿಷ ಕಾಲ  ಮಾತನಾಡಿದ್ದರು. ಇದೇ ಭಾಷಣದಲ್ಲಿ 2011ರ ಕೆಎಎಸ್ ನೇಮಕಾತಿ, ಕಾನೂನಿನ ಬಿಕ್ಕಟ್ಟಿನ ಕುರಿತು ಸಹ ಮಾತನಾಡಿದ್ದನ್ನು  ಇಲ್ಲಿ ಯಥಾವತ್ತಾಗಿ  ಅಕ್ಷರ ರೂಪದಲ್ಲಿ ನೀಡಲಾಗಿದೆ.

“ಕೆ.ಎ.ಎಸ್ ಅಂತ ನಾವು ಇಲ್ಲಿ ಮಾಧುಸ್ವಾಮಿಯವರು ಇದ್ದಾರೆ, ಅವರನ್ನ ಹೊಗಳಿ ಹೇಳ್ತಾ ಇಲ್ಲ ನಾವು. ಅವರು ಕಾನೂನು ಸಚಿವರಾಗಿದ್ದಾಗ ನಮ್ಮ ಅವರ ಮಧ್ಯೆ ಬಹಳಷ್ಟು ವಾಗ್ಯುದ್ಧ ಆಗಿದೆ. ತುಂಬಾ ವಾಗ್ಯುದ್ಧ ಆಗಿದೆ. ಕೆ.ಎ.ಎಸ್ 362 ಜನ ಪ್ರತಿಭಾವಂತರು ಆಯ್ಕೆಯಾಗಿ, ಅವರನ್ನ ಆ ಆಯ್ಕೆಯಾದ ಲಿಸ್ಟ್ ಅನ್ನ ಸರ್ಕಾರ ವಜಾಗೊಳಿಸಿತ್ತು. 10 ವರ್ಷದಿಂದ ಅವರು  2011ರ ಬ್ಯಾಚ್ ನ 10 ವರ್ಷದಿಂದ ಅವರು ಹೋರಾಟ ಮಾಡಿದರು ಕೋರ್ಟ್ ನಲ್ಲಿ. ಅವರು ಗೆಲ್ಲಲಿಕ್ಕೆ ಆಗಲಿಲ್ಲ, ಅದಕ್ಕೆ ನಾನಾ ಕಾರಣಗಳಿವೆ.  ಕಾರಣಗಳಿಂದಾಗಿ. ಅದಕ್ಕೆ ಕೋರ್ಟ್ ತಪ್ಪು ತೀರ್ಮಾನ ಮಾಡಿದೆ ಅಂತ ನಾವು ಹೇಳಲ್ಲ. ಕೋರ್ಟ್‌ಗೆ ಆಗಿನ ಸರ್ಕಾರ ತಪ್ಪು ಮಾಹಿತಿಯನ್ನ ಕೊಟ್ಟಿರೋದ್ರಿಂದ ತಪ್ಪು ನಿರ್ಧಾರ ಆಗಿದೆ.

ಇದನ್ನ ನಾವು ಆಲೋಚನೆ ಮಾಡಿ ನಮ್ಮ ಎಲ್ಲಾ ಸಚಿವರು, ಮುಖ್ಯವಾಗಿ ಮಾಧುಸ್ವಾಮಿ ಕಾನೂನು ಸಚಿವರು, ಒಂದು ಸಾರಿ ನಮ್ಮ ಮಠಕ್ಕೆ ಕರೆಸಿಕೊಂಡಿದ್ವಿ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6-7 ಗಂಟೆಯವರೆಗೂ ಸತತವಾಗಿ ನಾವು ಅವರು ಮತ್ತೆ ಸಂವಾದ ಮಾಡಿದ್ವಿ. ಅವರಲ್ಲಿ ಏನು ತಪ್ಪು ಗ್ರಹಿಕೆ ಇತ್ತು ಅದನ್ನ ನಿವಾರಣೆ ಮಾಡಿ, ನಮ್ಮ ಆಲೋಚನೆ ಏನಿತ್ತು ಅದಕ್ಕೆ ಒಪ್ಪಿಕೊಳ್ಳೋ ಹಾಗೆ ನಾವು ಆರ್ಗ್ಯು ಮಾಡಿದ್ವಿ, ಅವರತ್ರ ಒಪ್ಪಿಕೊಂಡ್ರು.

ಒಪ್ಪಿಕೊಂಡು ಅದಾದ ಮೇಲೆ ಅದಕ್ಕೆ ಎಲ್ಲ ರಾಜಕೀಯ ಧುರೀಣರತ್ರನು ಮಾತಾಡಿ, ಸ್ಪೀಕರ್ ಹತ್ರ ಮಾತಾಡಿ, ಮಂತ್ರಿ,  ಮುಖ್ಯಮಂತ್ರಿಗಳ ಹತ್ತಿರ ಮಾತಾಡಿ, ಒಂದು ಸ್ಪೆಷಲ್ ಬಿಲ್ ಅನ್ನ ತರಿಸಿ ಆಕ್ಟ್ ಮಾಡಿಸಿ, ಅವರಿಗೆ ನೌಕರಿ ಪುನಃ ಸಿಗೋ ಹಾಗೆ, ಅವರ ಆಯ್ಕೆಗೆ ಅನುಗುಣವಾಗಿ ಸಿಗೋ ಹಾಗೆ ನಾವು ಮಾಡಿದ್ದು. 362 ಜನ ಈಗಲೂ ಕೆ.ಎ.ಎಸ್ ಅಧಿಕಾರಿಗಳು ಇಡೀ ರಾಜ್ಯದಲ್ಲಿದ್ದಾರೆ.

ಮುಂದೆ ಇನ್ನೊಂದು ಹೇಳ್ತೀವಿ, ಮಾಧುಸ್ವಾಮಿಯವರಿಗೆ ಗೊತ್ತಿಲ್ಲ. ಅವರು ಆಯ್ಕೆಯಾಗಿ ನೇಮಕ ಆದ ಮೇಲೆ, ಒಂದು ವರ್ಷ ಆಯ್ತೇನೋ ಟ್ರೈನಿಂಗ್ ಎಲ್ಲ ಆದಮೇಲೆ ಒಬ್ಬ ಅಸಿಸ್ಟೆಂಟ್ ಕಮಿಷನರ್ ನಮ್ಮ ಹತ್ರ ಬಂದರು. ನಾವು ನ್ಯಾಯಪೀಠದಲ್ಲಿ ಕೂತಿದ್ವಿ. ನಮ್ಮ ಭಕ್ತರು, ಇವತ್ತು ನೆನಸಿಕೊಳ್ತಾ ಇದ್ದೀನಿ ಅವರ ಹೆಸರನ್ನ. ನಾವು ನ್ಯಾಯಪೀಠದಲ್ಲಿ ಕೂತ್ಕೊಂಡಿದ್ವಿ ಸೋಮವಾರ. ಒಬ್ಬ ಅಸಿಸ್ಟೆಂಟ್ ಕಮಿಷನರ್ ಅದರಲ್ಲಿ ಆಯ್ಕೆಯಾಗಿದ್ದವರು ಬಂದು, ‘ಇದು ನಮ್ಮ ಜೀವನ ನಿಮ್ಮಿಂದ ಪಾವನವಾಯಿತು, ಇದು ನನ್ನ ಮೊದಲನೇ ತಿಂಗಳ ಸಂಬಳ. ಸ್ವಾಮೀಜಿ ಅರ್ಪಣೆ ಮಾಡಿ ತಗೊಂಡು ಬಂದಿದ್ದೀನಿ’ ಅಂತ ಹೇಳಿ ನಮಗೆ ಕೊಡೋಕೆ ಬಂದ್ರು.

ನೋಡಪ್ಪ, ನಿನ್ನಿಂದ ನಾವು ತಗೊಂಡ್ರೆ ಬ್ಯಾಡ್ ಮೆಸೇಜ್ ಹೋಗುತ್ತೆ, ರಾಂಗ್ ಮೆಸೇಜ್ ಹೋಗುತ್ತೆ, ಆಗಲ್ಲ ಅಂತ ಹೇಳಿದ್ವಿ. ‘ಇಲ್ಲ ನಾನು ಕಾಣಿಕೆಯಾಗಿ ಕೊಡ್ತಾ ಇದ್ದೀನಿ, ಗುರುದಕ್ಷಿಣೆಯಾಗಿ ಕೊಡ್ತಾ ಇದ್ದೀನಿ’. ನಾವು ಒಪ್ಪಲಿಲ್ಲ, ಆಗೋದಿಲ್ಲ ಅಂತ ಹೇಳಿದ್ವಿ. ಬಹಳ ಒತ್ತಾಯ ಮಾಡಿದ ಅವನು. ಒಂದು ಸಂದಿಗ್ಧತೆಗೆ ನಾವು ಒಳಗಾದ್ವಿ.

ಆವಾಗ ಏನ್ ಮಾಡಿದ್ವಿ ಗೊತ್ತೇನು? ಆಯ್ತು ಕೊಡು ಅಂದ್ವಿ. ಎಷ್ಟಿತ್ತೋ ಗೊತ್ತಿಲ್ಲ ನನಗೂ, ಅಸಿಸ್ಟೆಂಟ್ ಕಮಿಷನರ್ ಸಂಬಳ ಎಷ್ಟು ಅಂತ ಗೊತ್ತಿಲ್ಲ. 80,000 ಇರಬಹುದಾ? ಲಕ್ಷದ ಮೇಲೆ ಇರಬಹುದೇನೋ, 1.5 ಲಕ್ಷ. ಕೊಟ್ರು. ಆಯ್ತಲ್ಲ, ನೀನು ಮುಟ್ಟಿಸಿದೆಯಲ್ಲ ಕಾಣಿಕೆ? ಈಗ ನಾವು ಆಶೀರ್ವಾದ ಮಾಡಿ ನಿನಗೆ ಕೊಡ್ತಾ ಇದ್ದೀವಿ, ತಗೋ ಅಂದ್ವಿ.

ತಿಳಿತಾ? ನಾವು ಆಶೀರ್ವಾದ ಮಾಡಿದೀವಿ, ತಗೋ ಅಂತ ಹೇಳಿದ್ವಿ, ನಿರಾಕರಿಸೋಕೆ ಬರಲ್ಲ. ನೀನು ಕಾಣಿಕೆಯಾಗಿ ಕೊಟ್ಟಿದಿಯಲ್ಲ ಈಗ? ನಾವು ಆಶೀರ್ವಾದಪೂರ್ವಕವಾಗಿ ಕೊಡ್ತಾ ಇದ್ದೀವಿ ಅಂತ ಹೇಳಿ ಕೊಟ್ವಿ.

ಹೀಗೆ, ಒಂದು ಸಾರ್ವಜನಿಕ ಒಂದು ಪ್ರಾಮಾಣಿಕತೆ… ಗಾಂಧೀಜಿ ಹೇಳ್ತಾರೆ, ‘Politics without principles is a crime’ ಅಂತ. ಆದ್ರೆ ಇವತ್ತು ಆ ಮಾತು ಕಾರ್ಯರೂಪಕ್ಕೆ ಬರಬೇಕು ಅಂತ ಹೇಳಿದ್ರೆ, ನೀವು… ನೀವು ನಿಮ್ಮ ಭ್ರಷ್ಟತನ ಏನಿದೆ, ಪ್ರಜೆಗಳಲ್ಲಿ ಇರತಕ್ಕಂತಹ ಭ್ರಷ್ಟತೆ… ‘ಯಥಾ ರಾಜಾ ತಥಾ ಪ್ರಜಾ’ ಅಲ್ಲ, ‘ಯಥಾ ಪ್ರಜಾ ತಥಾ ನೇತಾ’ ಈಗ. ನೀವು ಸರಿಯಾದರೆ… ಎಲ್ಲ ಶುದ್ದೀಕರಣ ಆಗುತ್ತೆ. ಅಂತ ಕಾಲ ಯಾವಾಗ ಬರುತ್ತೋ ಏನೋ… ಎಂದು ಭಾಷಣದಲ್ಲಿ ಮಾತನಾಡಿದ್ದರು.