ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ ಆರ್ಥಿಕ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ನಡುವೆಯೇ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವಾಲಯದ ಶಾಖೆಯೊಂದಕ್ಕೆ ಪ್ರಿಂಟರ್ ಮತ್ತು ಸ್ಕ್ಯಾನರ್ ಕೂಡ ಲಭ್ಯವಿಲ್ಲ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಹೊಸ ಯೋಜನೆಗಳನ್ನು ಘೋಷಿಸುವ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿತ್ತು. ಈ ಪತ್ರವು ಸೋರಿಕೆಯಾಗುತ್ತಿದ್ದಂತೆ ಪ್ರತಿಪಕ್ಷಗಳು ವಿಧಾನಮಂಡಲದಲ್ಲಿಯೇ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದವು. ಅಲ್ಲದೇ ರಾಜ್ಯದ ಬೊಕ್ಕಸ ಬರಿದಾಗಿದೆ, ಸರ್ಕಾರವು ದಿವಾಳಿಯಾಗಿದೆ ಎಂದೆಲ್ಲಾ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು.
ಈ ಬೆಳವಣಿಗೆ ನಡುವೆಯೇ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪದವಿಪೂರ್ವ ಶಾಖೆಗೆ ಪ್ರಿಂಟರ್ ಮತ್ತು ಸ್ಕ್ಯಾನರ್ ಕೂಡ ಲಭ್ಯವಿಲ್ಲ ಎಂಬ ಸಂಗತಿಯು ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರವೊಂದನ್ನು ಕೊಟ್ಟಂತಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪದವಿಪೂರ್ವ ಶಿಕ್ಷಣ ಶಾಖೆಗೆ ಪ್ರಿಂಟರ್ ಮತ್ತು ಸ್ಕ್ಯಾನರ್ ಕೂಡ ಲಭ್ಯವಿಲ್ಲವಾಗಿದೆ ಎಂದು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು 2026ರ ಸೆ.9ರಂದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿದ್ದರು. ಇದರ ಪ್ರತಿಯು ( ಸಂಖ್ಯೆ; ಇಪಿ 08 ಎಸ್ ಹೆಚ್ ಹೆಚ್ 2026- ದಿನಾಂಕ 09/09/2026) ದಿ ಫೈಲ್ ಗೆ ಲಭ್ಯವಾಗಿದೆ.
ಅನಧಿಕೃತ ಟಿಪ್ಪಣಿಯಲ್ಲೇನಿದೆ?
ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ (ಪದವಿಪೂರ್ವ)ಯಲ್ಲಿ ಟಪಾಲುಗಳನ್ನು ಹೆಚ್ಚಿನ ದಕ್ಷತೆಯಿಂದ ನಿರ್ವಹಿಸಲು ಹಾಗೂ ಅನಗತ್ಯ ವಿಳಂಬ ತಪ್ಪಿಸಲು ಎಲ್ಲಾ ಕ್ಷೇತ್ರ ಇಲಾಖೆಗಳ ಕಚೇರಿಗಳಿಗೆ ಪತ್ರ, ಆದೇಶ, ಅಧಿಸೂಚನೆ, ಅಧಿವೇಶನ, ಸಮಿತಿ ಇತರೆ ಎಲ್ಲಾ ದಾಖಲೆಗಳನ್ನು ಇ-ಮೇಲ್ ಮುಖಾಂತರ ಸಂಬಂಧಪಟ್ಟ ಶಾಖೆಯಲ್ಲಿಯೇ ನಿರ್ವಹಿಸಬೇಕು ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಶಾಖೆಗೆ ಸೂಚಿಸಿದ್ದರು ಎಂದು ಡಿಪಿಎಆರ್ (ಆಡಳಿತ) ಅಧೀನ ಕಾರ್ಯದರ್ಶಿಗೆ ಹೊರಡಿಸಿರುವ ಅನಧಿಕೃತ ಟಿಪ್ಪಣಿಯಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಪದವಿಪೂರ್ವ ಶಿಕ್ಷಣ ಶಾಖೆಯಲ್ಲಿ ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳ (ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಖಾಸಗಿ) ಸೇವಾ ವಿಷಯಗಳು, ಅನುದಾನಿತ ಸಂಸ್ಥೆಯ ವೇತನಾನುದಾನ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ನ್ಯಾಯಾಲಯ ಪ್ರಕರಣಗಳು ಸೇರಿದಂತೆ ಹಲವು ವಿಷಯಗಳನ್ನು ನಿರ್ವಹಿಸಲಾಗುತ್ತಿದೆ. ಇದರಿಂದಾಗಿ ಈ ಶಾಖೆಯಲ್ಲಿ ಹೆಚ್ಚಿನ ಕಾರ್ಯದೊತ್ತಡ ಇದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
‘ಶಾಖೆಯಲ್ಲಿದ್ದ 01 ಪ್ರಿಂಟರ್ ಮತ್ತು 01 ಸ್ಕ್ಯಾನರ್ ಸಹ ಲಭ್ಯವಿಲ್ಲದೇ ದುರಸ್ತಿಗೆ ಒಳಗಾಗಿದೆ. ಹೀಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಸೂಚನೆಯಂತೆ ಯಾಔಉದೇ ಟಪಾಲುಗಳನ್ನು ಕ್ಷೇತ್ರ ಇಲಾಖೆಗಳಿಗೆ ಇ-ಮೇಲ್ ಮಾಡುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ಕೂಡಲೇ ಪದವಿಪೂರ್ವ ಶಿಕ್ಷಣ ಶಾಖೆಗೆ 01 ಪ್ರಿಂಟರ್ ಮತ್ತು 01 ಸ್ಕ್ಯಾನರ್ ಯಂತ್ರವನ್ನು ಒದಗಿಸಬೇಕು,’ ಎಂದು ಕೋರಿರುವುದು ಅನಧಿಕೃತ ಟಿಪ್ಪಣಿಯಿಂದ ಗೊತ್ತಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಹಾವೇರಿ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಸಂಯೋಜಿತ ಜಿಲ್ಲಾಸ್ಪತ್ರೆಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಪಾವತಿಸಲು ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವುದನ್ನು ದಿ ಫೈಲ್ ದಾಖಲೆ ಸಹಿತ ಬಹಿರಂಗಪಡಿಸಿತ್ತು.
ಪ್ರಕಟಿಸಿತ್ತು.
ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್ನಲ್ಲೂ ಆರ್ಥಿಕ ಮುಗ್ಗಟ್ಟು
ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಯೋಜಿತ ಜಿಲ್ಲಾ ಆಸ್ಪತ್ರೆಗೆ ಸ್ವಚ್ಛತಾ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್ ಗಳ ಹುದ್ದೆಯ ವೆಚ್ಚವನ್ನೂ ಭರಿಸಲು ಏದುಸಿರು ಬಿಡುತ್ತಿದೆ. ಅಲ್ಲದೆ ಕೆಲವು ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಸರ್ಕಾರದ ಅನುಮೋದನೆಯಿಲ್ಲದೆಯೇ ಹೆಚ್ಚುವರಿ ವೆಚ್ಚ ಮಾಡುತ್ತಿವೆ ಎಂದು ವರದಿಯಲ್ಲಿ ಹೇಳಿತ್ತು.
ವೇತನ ಪಾವತಿಸಲು ಕಷ್ಟಸಾಧ್ಯವಾಗುತ್ತಿದೆಯೇ?
ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಯೋಜಿತ ಜಿಲ್ಲಾ ಆಸ್ಪತ್ರೆಗೆ 25 ಸ್ವಚ್ಚತಾ ಸಿಬ್ಬಂದಿ ಮತ್ತು 10 ಮಂದಿ ಸೆಕ್ಯುರಿಟಿ ಗಾರ್ಡ್ ಹುದ್ದೆಗಳ ವೆಚ್ಚವನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲಗಳಿಂದ ಭರಿಸುವ ಷರತ್ತಿಗೆ ಒಳಪಟ್ಟು ನೇಮಕಾತಿಗೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಅನುಮತಿ ನೀಡಿತ್ತು. ಮಾಡಲ್ ಬಿಡ್ ಡಾಕ್ಯುಮೆಂಟ್ ಪ್ರಕಾರ ನಿಯಮಗಳ ಅನ್ವಯ ಏಜೆನ್ಸಿಗಳ ಮೂಲಕ ಸೇವಾ ಗುತ್ತಿಗೆ ಆಧಾರದ ಮೂಲಕ ಪಡೆಯಲು 2026ರ ಮೇ 13ರಂದು ಆದೇಶದ ಮೂಲಕ ಅನುಮತಿ ನೀಡಿತ್ತು.
ಆದರೆ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಂತರಿಕ ಖಾತೆಯಲ್ಲಿ (ಸಂಖ್ಯೆ 32690100031142) ಕೇವಲ 3 ಕೋಟಿ ರು ಮಾತ್ರ ಉಳಿದಿದೆ. ಇದರಲ್ಲಿ ಹಿಮ್ಸ್ ಬೋಧನಾ ಆಸ್ಪತ್ರೆ ಮತ್ತು ಸಮಸ್ಥೆಯ ನಿರ್ವಹಣೆಗೆ ಈ ಮೊತ್ತವು ಅವಶ್ಯಕವಾಗಿದೆ. ಇದರಲ್ಲಿಯೇ ವೇತನ ಪಾವತಿಸಲು ಕಷ್ಟಸಾಧ್ಯವಾಗುತ್ತದೆ ಎಂಬ ಸಂಗತಿಯನ್ನು ಹಿಮ್ಸ್ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿರುವುದು ಸರ್ಕಾರದ ಆದೇಶದಿಂದ ತಿಳಿದು ಬಂದಿದೆ.

’25 ಸ್ವಚ್ಛತಾ ಸಿಬ್ಬಂದಿ ಮತ್ತು 10 ಸೆಕ್ಯೂರಿಟಿ ಹುದ್ದೆಗಳೀಗೆ ಕಾರ್ಮಿಕ ಇಲಾಖೆಯ ಕನಿಷ್ಟ ವೇತನ ಕಾಯ್ದೆ ಅನ್ವಯ ವಾರ್ಷಿಕವಾಗಿ 89,40,055 ರು ಮೊತ್ತ ಅವಶ್ಯಕತೆ ಇದೆ. ಈ ಹುದ್ದೆಗಳಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಹಿಮ್ಸ್ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿತ್ತು. ಹಿಮ್ಸ್ ನಲ್ಲಿ (ಲೆಕ್ಕ ಶೀರ್ಷಿಕೆ; 2210-05-105-1067-115) ಅನುದಾನದಲ್ಲಿ ಲಭ್ಯವಿದ್ದ 2.53 ಕೋಟಿ ರು ಪೈಕಿ ಮೂರನೇ ತ್ರೈಮಾಸಿಕ ಕಂತನ್ನು ಬಿಡುಗಡೆ ಮಾಡಿದೆ.

ಅಲ್ಲದೇ ಕೆಲವೊಂದು ಸಂಸ್ಥೆಗಳು ಸಾಮಾನ್ಯ ವೆಚ್ಚಗಳಿಗಾಗಿ ಗುತ್ತಿಗೆ- ಹೊರ ಗುತ್ತಿಗೆನೌಕರರ ವೇತನ ಪಾವತಿಗಾಗಿ ಆಯವ್ಯಯದಲ್ಲಿ ಒದಗಿಸಿದ್ದ ಅಂದಾಜು ಮಿತಿಗಿಂತಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ವೆಚ್ಚ ಮಾಡಲಾಗುತ್ತಿದೆ. ಈ ರೀತಿಯ ವೆಚ್ಚಗಳಿಗೆ ಆರ್ಥಿಕ ಸಮಿತಿ, ಆಡಳಿತ ಮಂಡಳಿ ಮತ್ತು ಸರ್ಕಾರದ ಅನುಮೋದನೆಯೇ ಇಲ್ಲ. ಆದರೂ ಹೆಚ್ಚುವರಿಯಾಗಿ ವೆಚ್ಚ ಮಾಡುತ್ತಿವೆ. ಹೀಗಾಗಿ ಸರ್ಕಾರವು ಹೆಚ್ಚುವರಿ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಆರ್ಥಿಕ ಇಲಾಖೆಯ ತೀವ್ರ ಆಕ್ಷೇಪಣೆಗೆ ಒಳಪಡುವಂತಾಗಿದೆ ಎಂದು ಆದೇಶದಲ್ಲಿ ವಿವರಿಸಿತ್ತು.

‘ಹೆಚ್ಚುವರಿ ವೆಚ್ಚದ ಅಗತ್ಯವಿದ್ದಲ್ಲಿ ಮೊದಲಿಗೆ ಸರ್ಕಾರದ ಹಾಗೂ ಆರ್ಥಿಕ ಇಲಾಖೆಯ ಅನುಮೋದನೆ ಪಡೆದ ನಂತರವೇ ಹೆಚ್ಚುವರಿ ವೆಚ್ಚ ಮಾಡಲು ಕ್ರಮ ವಹಿಸಬೇಕು. ತಪ್ಪಿದಲ್ಲಿ ಇದಕ್ಕೆ ಸಂಸ್ಥೆಯ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು,’ ಎಂದು ಎಚ್ಚರಿಸಿತ್ತು.
ಹಿಮ್ಸ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಹಲವು ಅಕ್ರಮಗಳಾಗಿವೆ ಎಂದು ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೂ ಈ ವರದಿ ಬಗ್ಗೆ ಸರ್ಕಾರವು ಇದುವರೆಗೂ ಯಾವುದೇ ಕ್ರಮವಹಿಸಿರಲಿಲ್ಲ.
ಅನುದಾನ ಕೊರತೆ, ಪಾಲನೆಯಾಗದ ಮಾನದಂಡ; ಪ್ರಸಕ್ತ ಸಾಲಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶಾತಿಗೂ ಕಷ್ಟ
ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಪೈಕಿ ಚಿತ್ರದುರ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಯೂ ಅನುದಾನ ಕೊರತೆ ಎದುರಾಗಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ದಿ ಫೈಲ್ ಪ್ರಕಟಿಸಿದ್ದ ವರದಿಯನ್ನು ಮುಂದಿರಿಸಿದ್ದ ಜಾತ್ಯತೀತ ಜನತಾದಳವೂ ಸಹ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಹಾಗೂ ಭ್ರಷ್ಟಾಚಾರ ಮಾಡಲು ಕೋಟಿ ಕೋಟಿ ಲೂಟಿಯಾಗುತ್ತಿದೆ. ಆದರೆ ಬಡ ನೌಕರರಿಗೆ ಸಂಬಳ ಕೊಡಲು ನಿಮ್ಮ ಬಳಿ ಹಣವಿಲ್ಲವೇ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿತ್ತು.
ದಿ ಫೈಲ್ ಪ್ರಕಟಿಸಿರುವ ವರದಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಜೆಡಿಎಸ್ ಈ ಕುರಿತು ಟ್ವೀಟ್ ಮಾಡಿತ್ತು.
ಜೆಡಿಎಸ್ ಟ್ವೀಟ್ನಲ್ಲೇನಿತ್ತು?
ಹೊಸ ಯೋಜನೆಗಳಿಗೆ ಬಿಡಿಗಾಸಿಲ್ಲ ಎಂದು ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ, ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ದುಸ್ಥಿತಿಗೆ ತಲುಪಿದೆ. ಆಸ್ಪತ್ರೆಗಳ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ಪಾವತಿಗೂ ಪರದಾಡುತ್ತಿದೆ.
ವೇತನ ಕೊಡಲೂ ಯೋಗ್ಯತೆ ಇಲ್ಲ
ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (HIMS) ಕಸ ಗುಡಿಸುವ 25 ಸ್ವಚ್ಛತಾ ಸಿಬ್ಬಂದಿ ಹಾಗೂ 10 ಸೆಕ್ಯೂರಿಟಿ ಗಾರ್ಡ್ಗಳಿಗೆ ವೇತನ ಕೊಡಲೂ ಸರ್ಕಾರದ ಬಳಿ ಹಣವಿಲ್ಲ!

ದಿವಾಳಿತನದ ಅಧಿಕೃತ ಆದೇಶ
ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದಲೇ ವೇತನ ಭರಿಸಿಕೊಳ್ಳಿ ಎಂದು ಷರತ್ತು ವಿಧಿಸಿ ಸರ್ಕಾರ ಆದೇಶ ಹೊರಡಿಸುವ ಮೂಲಕ, ರಾಜ್ಯದ ಆರ್ಥಿಕ ದಿವಾಳಿತನವನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಹಾಗೂ ಭ್ರಷ್ಟಾಚಾರ ಮಾಡಲು ಕೋಟಿ ಕೋಟಿ ಲೂಟಿಯಾಗುತ್ತಿದೆ. ಆದರೆ ಬಡ ನೌಕರರಿಗೆ ಸಂಬಳ ಕೊಡಲು ನಿಮ್ಮ ಬಳಿ ಹಣವಿಲ್ಲವೇ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿತ್ತು.

ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನ ಸೆಳೆದಿರುವ ಅನಧಿಕೃತ ಟಿಪ್ಪಣಿಯು ಸದನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದು.




