ಬೆಂಗಳೂರು; ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿನ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ಮಾಣ ಕಾಮಗಾರಿಯಲ್ಲಿ ಹೆಚ್ಚುವರಿ ವೆಚ್ಚ, ಅನಗತ್ಯ ಕಾಮಗಾರಿಗಳು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವುದನ್ನು ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತಂಡವು ದಾಖಲೆಗಳ ಸಮೇತ ಸಾಬೀತುಪಡಿಸಿದೆ.
ಕಾಮಗಾರಿಯ ಕಳಪೆ ಗುಣಮಟ್ಟ ಹಾಗೂ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಇದೀಗ ಪಿಡಬ್ಲ್ಯೂಡಿಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ನೀಡಿರುವ ವರದಿಯು ಈ ಆಕ್ಷೇಪಣೆಗಳನ್ನು ಬಲಪಡಿಸಿದೆ. ಮೂಲ ಅಂದಾಜು ಪಟ್ಟಿಯಲ್ಲಿದ್ದದ್ದಕ್ಕಿಂತಲೂ ಹೆಚ್ಚಿನ ಕಾಮಗಾರಿಗಳನ್ನು ಸೇರ್ಪಡೆಗೊಳಿಸಿದ್ದರಿಂದಾಗಿ ಒಟ್ಟಾರೆ 68.75 ಕೋಟಿ ರು ಹೆಚ್ಚುವರಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತಂಡವು ದಾಖಲೆಗಳ ಸಮೇತ ನೀಡಿರುವ ಸಮಗ್ರ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ತನಿಖಾ ವರದಿಯಲ್ಲೇನಿದೆ?
ಮೂಲ ಅಂದಾಜು ಪಟ್ಟಿಯು ವೈದ್ಯಕೀಯ ಕಾಲೇಜಿಗೆ ಎಂಸಿಐ ನಿಯಮಗಳ ಪ್ರಕಾರ ಅವಶ್ಯವಿರುವ ಎಲ್ಲಾ ಕಾಂಪೋನಂಟ್‌ಗಳನ್ನು ಒಳಗೊಂಡಿತ್ತೇ ಎಂದು ತನಿಖಾ ತಂಡವು ಪರಿಶೀಲಿಸಿದೆ. ಕೇಂದ್ರ ಸರ್ಕಾರವು ಚಾಲ್ತಿಯಲ್ಲಿದ್ದ ಎಂಸಿಐ ಮಾನದಂಡಗಳನ್ನು ಎನ್‌ಎಂಸಿ ಮಾನದಂಡಗಳನ್ನಾಗಿ ಪರಿವರ್ತಿಸಿದೆ. ಈ ಮಾನದಂಡಗಳು ಜಾರಿಯಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ನಿರ್ವಹಿಸುವ ಸಮಯದಲ್ಲಿ ಇವರೆಡೂ ಮಾನದಂಡಗಳ ಪ್ರಕಾರ ಹಾಗೂ ಉಪಯೋಗಿ ಇಲಾಖೆಯ ಕೋರಿಕೆಯಂತೆ ಹೆಚ್ಚುವರಿಯಾಗಿ ಒಟ್ಟಾರೆ 6,149.00 ಚ ಮೀ. ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಹೆಚ್ಚುವರಿ ವಿಸ್ತೀರ್ಣದಲ್ಲಿ ಬರುವ ಎಲ್ಲಾ ಪರಿಕರಗಳು ಗಣನೀಯವಾಗಿ ಅಂದಾಜು ಪಟ್ಟಿಯಿಲ್ಲಿರುವುದಕ್ಕಿಂತಲೂ ಅಧಿಕವಾಗಿತ್ತು ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

68.75 ಕೋಟಿ ರು ಹೆಚ್ಚುವರಿ
ಗುತ್ತಿಗೆದಾರರರಿಗೆ ಹೆಚ್ಚುವರಿಯಾಗಿ ನೀಡಿರುವ ಕಾರ್ಯಾದೇಶದಲ್ಲಿ ಮೂಲ ಟೆಂಡರ್‍ನಲ್ಲಿ ಸೇರ್ಪಡೆಯಾಗಿಲ್ಲದ ಕಾಂಪೋನೆಂಟ್‌ಗಳನ್ನು ತನಿಖಾ ತಂಡವು ಪತ್ತೆ ಹಚ್ಚಿದೆ. ಸ್ಕಿಲ್ ಲ್ಯಾಬ್ 1,214 ಚ ಮೀ ಮತ್ತು ಪ್ರವೇಶ ದ್ವಾರ ನಿರ್ಮಾಣ ಕಾಮಗಾರಿ ಮತ್ತು ಇದರ ವೇರಿಯೇಷನ್ ಪ್ರಸ್ತಾವನೆಯನ್ನೂ ಪರಿಶೀಲಿಸಿದೆ. ಇದರ ಪ್ರಕಾರ 68.75 ಕೋಟಿ ರು ಹೆಚ್ಚುವರಿಯಾಗಿದೆ. ಅಂದಾಜಿನಲ್ಲಿ ಉಳಿತಾಯದ ಮೊತ್ತ 61.16 ಕೋಟಿ ರು ಆಗಿದೆ. ನಿವ್ವಳ ಹೆಚ್ಚುವರಿ 7.59 ಕೋಟಿ ರು ಆಗಿದೆ. ಮತ್ತು ಹೆಚ್ಚುವರಿ ಇಐಆರ್‍ಎಲ್ ಐಟಂ ನಿರ್ವಹಿಸಿರುವ ಕಾರಣ 8.74 ಕೋಟಿ ರು ಆಗಿರುವುದನ್ನು ತನಿಖಾ ತಂಡವು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

ಮುಖ್ಯ ವಾಸ್ತು ಶಿಲ್ಪಿಯ ವರದಿ ಪ್ರಕಾರ ಕಾಂಪೋನೆಂಟ್‌ಗಳ ವಿಸ್ತೀರ್ಣದಲ್ಲಿ ನಿಗದಿತ ಮಾನದಂಡಗಳಿಗಿಂತಲೂ ಒಟ್ಟಾರೆಯಾಗಿ 6,149 ಚ ಮೀ ಅಧಿಕವಾಗಿದೆ. ಇದರಿಂದಾಗಿ ಹೆಚ್ಚುವರಿ ವಿಸ್ತೀರ್ಣದಲ್ಲಿ ಬರುವ ಎಲ್ಲಾ ಪರಿಕರಗಳು ಸಹ ಗಣನೀಯವಾಗಿ ಅಂದಾಜು ಪಟ್ಟಿಯಲ್ಲಿರುವುದಕ್ಕಿಂತಲೂ ಅಧಿಕವಾಗಿದೆ ಎಂದು ತನಿಖಾ ತಂಡವು ವಿವರಿಸಿದೆ.

ತನಿಖಾ ತಂಡವು ಮೂಲ ಅಂದಾಜು ಪಟ್ಟಿ ಮತ್ತು ಹೆಚ್ಚುವರಿ ಅಂದಾಜು ಪಟ್ಟಿಯನ್ನು ಹೋಲಿಸಿ ಪರಿಶೀಲಿಸಿದೆ. ಕೆಲವು ಹೆಚ್ಚುವರಿಯಾಗಿ ಅಳವಡಿಸಿಕೊಂಡಿರುವ, ಕೈಗೊಂಡಿರುವ ಕಾಂಪೋನೆಂಟ್‌ಗಳಿಗೆ ದಾಖಲಾತಿಗಳ ಪ್ರಕಾರ ಮಾನದಂಡಗಳನ್ನು ಅನುಸರಿಸಿ ಅನುಮೋದನೆ ಪಡೆದಿಲ್ಲ. 2020ರ ಅಕ್ಟೋಬರ್ 20, 21, 2021ರ ಮಾರ್ಚ್ 7ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಇಂಜಿನಿಯರ್ ಅವರು ಕಾಮಗಾರಿ ವೀಕ್ಷಣೆ ಮಾಡಿದ್ದರು. ಹೆಚ್ಚುವರಿ ಕೆಲಸಗಳನ್ನು ನಿರ್ವಹಿಸಲು ನಿರ್ದೇಶನ, ಅನುಮೋದನೆ ನೀಡಿಲ್ಲ. ಆದರೆ 2023ರ ಜೂನ್ 21ರಂದು ಹೆಚ್ಚುವರಿ ಆರ್ಥಿಕ ತಃಖ್ತೆಗೆ ಅನುಮೋದನೆ ಕೋರಿತ್ತು ಎಂದು ವರದಿಯಲ್ಲಿ ವಿವರಿಸಿದೆ.
ಮೂಲ ಅಂದಾಜಿನಲ್ಲಿ ಅವಕಾಶವೇ ಇರಲಿಲ್ಲ
ಟೆಂಡರ್ ಪ್ರೀಮಿಯಂ 29.77 ಕೋಟಿ, ಪ್ರೈಸ್ ಅಡ್ಜೆಸ್ಟ್‌ಮೆಂಟ್ 79.90 ಕೋಟಿ ಮತ್ತು ಹೆಚ್ಚುವರಿ ಜಿಎಸ್‌ಟಿ 20.58 ಕೋಟಿ (ಮೂಲ ಅಂದಾಜಿನಲ್ಲಿ ಯಾವುದೇ ಅವಕಾಶ ಮಾಡಿಕೊಂಡಿರುವುದಿಲ್ಲ) ರು ಇತ್ತು. ಹೆಚ್ಚುವರಿ ವಿಸ್ತೀರ್ಣ 6,149. ಚ ಮೀ ಗಳಿಂದಾಗಿ ವರ್ಕ್ ಸ್ಲಿಪ್ ಮೊತ್ತ 7.59 ಕೋಟಿ ಮತ್ತು ಇಐಆರ್‍ಎಲ್ ಮೊತ್ತ 8.74 ಕೋಟಿ ರು ಆಗಿರುವುದನ್ನು ತನಿಖಾ ತಂಡವು ಪತ್ತೆ ಹಚ್ಚಿದೆ. ಈ ಪರಿಷ್ಕೃತ ಅಂದಾಜಿನ ಪ್ರಕಾರ 134.00 ಕೋಟಿ ರುಪಾಯಿ ಹೆಚ್ಚುವರಿಯಾಗಿರುವುದನ್ನು ತನಿಖಾ ತಂಡವು ಬಯಲು ಮಾಡಿದೆ.

ಈ ಎಲ್ಲಾ ಕಾಂಪೋನೆಂಟ್‌ಗಳಿಗೆ ಮತ್ತು ಹೆಚ್ಚುವರಿ ಪರಿಮಾಣಗಳು ಮತ್ತು ಅಂಶಗಳೀಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದಿರುವುದು ಕಂಡು ಬಂದಿಲ್ಲ. ಕಾಮಗಾರಿಯ ಸ್ಥಳದಲ್ಲಿ ಅಗತ್ಯತೆಯ ಅನ್ವಯ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಅನುಮೋದನೆ ಪಡೆಯಲು 2023ರ ಜೂನ್ 21ರಂದು ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಮಂಡಿಸಲಾಗಿತ್ತು. ಸಮಿತಿಯ ತೀರುವಳಿ ಪಡೆದ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಇಂಜಿನಿಯರ್ ಅವರು ವ್ಯತ್ಯಾಸದ ಪರಿಮಾಣಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಈ ಕಾಮಗಾರಿ ಟೆಂಡರ್‍ನಲ್ಲಿ ಹೆಚ್ಚುವರಿ ಷರತ್ತುಗಳನ್ನು ವಿಧಿಸಿತ್ತು. ಲಿಕ್ವಿಡ್ ಅಸೆಟ್ಸ್ ಮೊತ್ತ 37.22 ಕೋಟಿ ರು ಬದಲಾಗಿ 89.40 ಕೋಟಿ ರು ಅಳವಡಿಸಿಕೊಂಡಿತ್ತು. ಕೆಪಿಡಬ್ಲ್ಯೂ ಡಿ ಕೋಡ್ 2014ರ ಪ್ರಕಾರ ಮೊಬೈಲೈಷನ್ ಅಡ್ವಾನ್ಸ್ ನ್ನು ಶೇ. 5ರಷ್ಟು ನೀಡಬೇಕಾಗಿತ್ತು. ಆದರೆ ಶೇ 10ರಷ್ಟು ನಿಗದಿಪಡಿಸಿತ್ತು. ಈ ಟೆಂಡರ್‍ನಲ್ಲಿ ಗುತ್ತಿಗೆದಾರರು ಸ್ಥಳ ಪರಿಶೀಲನೆ ಕೈಗೊಂಡು ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ಈ ಬಗ್ಗೆ ಪ್ರಮಾಣ ಪತ್ರ ಲಗತ್ತಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಗುತ್ತಿಗೆ ಷರತ್ತಿನಲ್ಲಿ ಕೋರಿರುವ ಪರಿಮಾಣಗಳು ನಿಯಮಾವಳಿಗಳ ಪ್ರಕಾರ ನಿಗದಿಪಡಿಸಬೇಕಾದ ಪರಿಮಾಣಗಳಿಗಿಂತ ದ್ವಿಗುಣವಾಗಿತ್ತು ಎಂದು ತನಿಖಾ ತಂಡವು ಪತ್ತೆ ಹಚ್ಚಿದೆ.
ಗುಣನಿಯಂತ್ರಣ ವರದಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲ
ಈ ಕಾಮಗಾರಿಗೆ ಸಂಬಂಧಿಸಿದಂತೆ ಇನ್ಫ್ರಾ ಸಪೋರ್ಟ್ ಇಂಜಿನಿಯರಿಂಗ್ ಕನ್ಸ್‌ಲ್ಟೆಂಟ್ಸ್ ನ್ನು ಪಿಎಂಸಿಯಾಗಿ ನಿರ್ವಹಿಸಲು ನೇಮಕ ಮಾಡಲಾಗಿತ್ತು. ಈ ಸಂಸ್ಥೆಯು ಪ್ರಾರಂಭಿಕ ಮತ್ತು ನಿರ್ಮಾಣ ಹಂತದಲ್ಲಿ ವಿವಿಧ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಗುಣನಿಯಂತ್ರಣ ಪರೀಕ್ಷಾ ವರದಿ ಸಲ್ಲಿಸಿತ್ತು. ಆದರೆ ಅಧಿಕೃತ ಮೂಲ ಗುಣನಿಯಂತ್ರಣ ಪರೀಕ್ಷಾ ಫಲಿತಾಂಶದ ಪ್ರತಿಗಳು ಲಭ್ಯವಿರಲಿಲ್ಲ. ಹಾಗೆಯೇ ಯಾವುದೇ ಗುಣನಿಯಂತ್ರಣ ವರದಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ.
ಗುಣನಿಯಂತ್ರಣ ಪರೀಕ್ಷೆಗೆ ಒಳಪಡಿಸಲಿಲ್ಲವೇಕೆ?
ಇದಲ್ಲದೇ ಮುರ್‍ರಂ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಉಪಯೋಗಿಸಲಾಗಿದೆ. ಆದರೆ ಇವುಗಳನ್ನು ಗುಣನಿಯಂತ್ರಣ ಪರೀಕ್ಷೆಗಳಿಗೆ ಒಳಪಡಿಸದೇ ಇರುವುದು ಕಂಡು ಬರುತ್ತದೆ. ಸಿಮೆಂಟ್ ಕಬ್ಬಿಣ ಮತ್ತು ಇತರೆ ಸಮಾಗ್ರಿಗಳಿಗೆ ಐಎಸ್ ಕೋಡ್‌ನಲ್ಲಿ ನಿಗದಿಪಡಿಸಿರುವಂತೆ ಕಾಮಗಾರಿಗೆ ಉಪಯೋಗಿಸುವ ಪರಿಮಾಣಕ್ಕೆ ಅನುಗುಣವಾಗಿ ಪರೀಕ್ಷೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಿಲ್ಲ. ಆದರೆ ಹಾವೇರಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳವನ್ನು ಪರಿವೀಕ್ಷಣೆ ನಡೆಸಿದ್ದ ಧಾರವಾಡ ವೃತ್ತದ ಗುಣ ಭರವಸೆ ಕಚೇರಿ ಅಧಿಕಾರಿಗಳು ಕಟ್ಟಡ ನಿರ್ಮಾಣವನ್ನು ವಿಶಿಷ್ಟ ವಿವರಣೆಯಂತೆ ನಿರ್ಮಿಸಲಾಗಿದೆ ಮತ್ತು ಕಟ್ಟಡ ಸಾಮಗ್ರಿಗಳ ಗುಣಮಟ್ಟದ ಪರೀಕ್ಷಾ ವರದಿಗಳು ತೃಪ್ತಿಕರವಾಗಿದೆ ಎಂದು ತಿಳಿಸಿದ್ದರು.
ಈ ಕಾಮಗಾರಿಯ ಟೆಂಡರ್‍ನಲ್ಲಿ ಒಟ್ಟು 4 ಮಂದಿ ಗುತ್ತಿಗೆದಾರರು ಭಾಗವಹಿಸಿದ್ದರು. ಬಿಎಸ್‌ಆರ್ ಇನ್ಫ್ರಾ ಟೆಕ್ ಇಂಡಿಯಾ ಲಿಮಿಟೆಡ್, ಕೆಬಿಆರ್ ಇನ್ಫಾಟೆಕ್ ಪ್ರೈ ಲಿ., ಸಿ ಪ್ರೇಮಚಡ್ಡರ್ (ಎನ್‌ಸಿಸಿ ಲಿಮಿಟೆಡ್), ಜೆಎಂಸಿ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ ಭಾಗವಹಿಸಿತ್ತು. ಇದರಲ್ಲಿ ಕೆಬಿಆರ್ ಇನ್ಫ್ರಾ ಟೆಕ್ ಲಿಮಿಟೆಡ್ ಕಡಿಮೆ ದರ ನಮೂದಿಸಿ ಆಯ್ಕೆಯಾಗಿತ್ತು. ಟೆಂಡರ್ ಪ್ರಕ್ರಿಯೆಯನ್ನು ಕೆಡಬ್ಲ್ಯೂ 4ರಂತೆ ಕಾಮಗಾರಿಗೆ ವಿಶೇಷ ಹಾಗೂ ಹೆಚ್ಚುವರಿ ಷರತ್ತುಗಳೊಂದಿಗೆ ಟೆಂಡರ್ ಅಹ್ವಾನಿಸಿತ್ತು. ಅದರ ಪ್ರಕಾರವೇ ಮೌಲ್ಯಮಾಪನ ಮಾಡಿದೆ.
ತನಿಖಾ ಸಮಿತಿಯ ಅಭಿಪ್ರಾಯವೇನು?
ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಎಂಸಿಐ ನಿಯಮಾನುಸಾರವಾಗಿ ವಿನ್ಯಾಸ ರೂಪಿಸಿಕೊಳ್ಳಬೇಕಾಗಿದೆ. ಮುಖ್ಯ ವಾಸ್ತುಶಿಲ್ಪಿ ವರದಿ ಪ್ರಕಾರ ಹೆಚ್ಚುವರಿಯಾಗಿ 6,149.00 ಚ ಮೀ ವಿಸ್ತೀರ್ಣ ಅಧಿಕವಾಗಿದೆ. ತಯಾರಿಸಲಾದ ಡಿಪಿಆರ್‍ನಲ್ಲಿ ಕೆಲವು ಕಾಂಪೋನೆಂಟ್‌ಗಳು ಹಾಗೂ ಪರಿಮಾಣಗಳು ಬಿಟ್ಟು ಹೋಗಿವೆ. ಇದರಿಂದಾಗಿ ಟಿಎ ಮತ್ತು ಇಆರ್‍ಸಿ ಸಭೆ ನಡವಳಿಯಲ್ಲಿ ನಮೂದಿಸಿರುವಂತೆ ಹೆಚ್ಚುವರಿ ಪರಿಮಾಣದಿಂದ 7.59 ಕೋಟಿ ಮತ್ತು ಹೊಸ ಅಂಶಗಳಿಂದಾಗಿ 8.74 ಕೋಟಿ ಹೆಚ್ಚುವರಿಯಾಗಿದೆ. ಒಟ್ಟಾರೆ 16.33 ಕೋಟಿ ಹೆಚ್ಚುವರಿಯಾಗಿದೆ ಎಂದು ತನಿಖಾ ಸಮಿತಿಯು ಅಭಿಪ್ರಾಯಿಸಿದೆ.

ಟಿಎ ಮತ್ತು ಇಆರ್‍ಸಿ ಸಭೆಯ ನಡವಳಿಯಲ್ಲಿ ನಮೂದಿಸಿರುವಂತೆ 29.77 ಕೋಟಗಳಷ್ಟು ಟೆಂಡರ್ ಪ್ರೀಮಿಯಂ ಮೊತ್ತ, 79.90 ಕೋಟಿ ರು ಪ್ರೈಸ್ ಅಡ್ಜಸ್ಟ್‌ಮೆಂಟ್ ಮೊತ್ತ ಉಂಟಾಗಿದೆ. ಒಟ್ಟಾರೆ 117.67 ಕೋಟಿ ಹೆಚ್ಚುವರಿಯಾಗಿದೆ. ಕೆಡಬ್ಲ್ಯೂ 4 ನಿಯಮಗಳ ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆಯಾದರೂ ಕೆಲವು ವಿಶೇಷ ಹಾಗೂ ಹೆಚ್ಚುವರಿ ಷರತ್ತುಗಳನ್ನು ವಿಧಿಸಿರುವುದು ಕಂಡು ಬಂದಿದೆ.
ಹೆಚ್ಚುವರಿ ಯಂತ್ರೋಪಕರಣಗಳು, ಲಿಕ್ವಿಡ್ ಅಸೆಟ್ಸ್ ಮೊತ್ತ 37.22 ಕೋಟಿ ಬದಲಾಗಿ 89.40 ಕೋಟಿ ರ ಅಳವಡಿಸಿಕೊಂಡಿದೆ. ಮೊಬೈಲೈಷೇನ್ ಅಡ್ವಾನ್ಸ್ ರೂಪದಲ್ಲಿ ಶೇ. 5ರಷ್ಟು ಬದಲಾಗಿ ಶೇ. 10ರಷ್ಟು ನಿಗದಿಪಡಿಸಲಾಘಿದೆ. ಗುತ್ತಿಗೆ ಷರತ್ತಿನಲ್ಲಿ ಕೋರಿರುವ ಪರಿಮಾಣಗಳು ನಿಯಮಾವಳಿಗಳ ಪ್ರಕಾರ ನಿಗದಿಪಡಿಸಬೇಕಾದ ಪರಿಮಾಣಗಳಿಗಿಂತ ದ್ವಿಗುಣವಾಗಿದೆ ಎಂದು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಇಂಜಿನಿಯರ್‍ಗಳ ಪಟ್ಟಿಯನ್ನು ತನಿಖಾ ಸಮಿತಿಯು ಒದಗಿಸಿದೆ.

ಮುಖ್ಯ ಇಂಜಿನಿಯರ್‍ಗಳಾದ ಎಂ ಗಣೇಶ್, ಸಿ ಮಂಜಪ್ಪ, ರಮೇಂದ್ರ, ಆರ್ ಲಕ್ಷ್ಮೀಪತಿ, ಕೆ ಜಿ ಸತ್ಯನಾರಾಯಣ, ಸಿ ಆರ್ ಮಹೇಶ್ ಕುಮಾರ್, ಟಿ ಎ ಸತ್ಯನಾರಾಯಣ ರಾವ್, ಟಿ ಕೃಷ್ಣಪ್ಪ, ತಾಂತ್ರಿಕ ಸಹಾಯಕರಾದ ೆಂ ಜಿ ರಮಾದೇವಿ, ರತ್ನ ವಿ, ಎಇಗಳಾದ ನಿರ್ಮಲಾ, ಬಿ ಎಲ್ ದೇವರಾಜ, ಜಗನ್ನಾಥ ಜಿ ಜಾಧವ್, ಸುರೇಶ್ ಎಸ್ ಎನ್, ಬಾರತಿ ಎನ್ ಪುರಾಣೀಕ್ ಮಠ್, ಶೀಲಾ ಬಿ ಕಂದಕೂರು, ಪ್ರಕಾಶ್ ವಿ ಕುಲಕರ್ಣಿ, ಶೌಕತ್ ಆಲಿ ಸುಂಕದ್, ಜಿಂಜಪ್ಪ ಬೀಳಗಿ, ವಿ ಎಚ್ ಶಾಂತೇಶ್, ದಾದಾಪೀರ್ ಶೈಕ್ ಸನದಿ, ಅಭಿನಂದನ್ ನಗರಹಳ್ಳಿ, ಎಸ್ ವಿ ಮಹುಲಿ, ಶಶಿಧರ್ ಬಿ ವಾಲಿ, ಸುರೇಶ್ ಎಸ್ ಎನ್, ಎಚ್ ಇಂಧೂದರ್, ರಾಘವೇಂದ್ರ ಅಥಣಿ, ಅಜಿತ್ ಅವರು ಕಾರ್ಯನಿರ್ವಹಿಸಿದ್ದರು ಎಂದು ತನಿಖಾ ವರದಿಯಲ್ಲಿ ಹೆಸರಿಸಿದೆ.

ರಾಜ್ಯದ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘನೆ, ಭ್ರಷ್ಟಾಚಾರ ಮತ್ತು ಅನಗತ್ಯ ವೆಚ್ಚವಾಗಿದೆ ಎಂದು ಲೋಕೋಪಯೋಗಿ ಇಲಾಖೆಯು ನೀಡಿರುವ ತಾಂತ್ರಿಕ ವರದಿ ಆಧರಿಸಿ ದೋಷಾರೋಪಣೆ ಪಟ್ಟಿ ತಯಾರಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯು ಈಗಾಗಲೇ ಆದೇಶಿಸಿದೆ.
ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿತರ ವಿರುದ್ಧ ದೋಷಾರೋಪಣೆ ಪಟಟಿ ಸಲ್ಲಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದೆ. ಆಡಳಿತಾತ್ಕ ಅನುಮೋದನೆ ಪಡೆಯದೇ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅನಗತ್ಯ ವೆಚ್ಚ ಮಾಡಲಾಗಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅನುಬಂಧ -1ರಿಂದ 4 ನ್ನು ಒಳಗೊಂಡ ದೋಷಾರೋಪಣೆ ಪಟ್ಟಿ ತಯಾರಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ ನಂಜುಂಡಯ್ಯ ಅವರನ್ನು 2026ರ ಮಾರ್ಚ್‌ನಲ್ಲಿಯೇ ಆದೇಶ ಹೊರಡಿಸಿದೆ.

ಟೆಂಡರ್ ಪ್ರಕ್ರಿಯೆಯನ್ನು ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿ ವರ್ಗವು ನಿಯಮಗಳ ಉಲ್ಲಂಘನೆ ಮಾಡಿರುವುದು ತನಿಖಾ ವರದಿಯಿಂದ ನಿಖರವಾಗಿ ಕಂಡು ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದಲ್ಲಿ ವಿವರಿಸಿತ್ತು.

ಲೋಕೋಪಯೋಗಿ ಇಲಾಖೆ ನೀಡಿರುವ ತಾಂತ್ರಿಕ ವರದಿ ಆಧಾರದ ಮೇಲೆ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡಗ ಕಾಮಗಾರಿಗಳಿಗೆ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಖಚಿತಪಟ್ಟಿದೆ. ಹಾಗೆಯೇ ಸಕ್ಷಮ ಪ್ರಾಧಿಕಾರದ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯದೇ ಇರುವುದರ ಹಿಂದೆ ದುರದ್ದೇಶವಿದೆ. ಈ ಮೂಲಕ ಅನಗತ್ಯವಾಗಿ ಹೆಚ್ಚುವರಿ ಕಾಮಗಾರಿ ಮತ್ತು ಅನಗತ್ಯವಾಗಿ ವೆಚ್ಚ ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (ಕೇಂದ್ರ ಪುರಸ್ಕೃತ ಯೋಜನೆಯಡಿ) 3ನೇ ಹಂತದಲ್ಲಿ ಪ್ರತಿ ವೈದ್ಯಕೀಯ ಕಾಲೇಜಿಗೆ 325.00 ಕೋಟಿಗಳ ವೆಚ್ಚದಲ್ಲಿ ದೇಶದಾದ್ಯಂತ 75 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಕೇಂದ್ರ ಪುರಸ್ಕೃತ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯಡಿ ಕರ್ನಾಟಕ ಸರ್ಕಾರವು ತಾಂತ್ರಿಕ ಮೌಲ್ಯಮಾಪನ ಸಮಿತಿಗೆ 2019ರ ಸೆ.8ರಂದು ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿತ್ತು.
ನಂತರ ಯೋಜನಾ ವರದಿಯನ್ನು ಪರಿಶೀಲಿಸಿ, ಚಿಕ್ಕಮಗಳೂರು ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಿ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು 60:40 ಅನುಪಾತದಲ್ಲಿ ವೆಚ್ಚ ಭರಿಸಿ ಸ್ಥಾಪಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ 2019ರ ಅಕ್ಟೋಬರ್ 23ರಂದು ಕೇಂದ್ರ ಸಚಿವಾಲಯವು ಅನುಮೋದನೆ ನೀಡಿತ್ತು.
ಭಾರತ ಸರ್ಕಾರವು ತನ್ನ ಪಾಲಿನ 195 ಕೋಟಿಗಳಲ್ಲಿ 2019ರ ನವೆಂಬರ್ 15ರಂದು 23 ಕೋಟಿ, 2020ರ ಜೂನ್ 10ರಂದು 27 ಕೋಟಿ ರು ಅನುದಾನವನ್ನು ಬಿಡುಗಡೆ ಮಾಡಿತ್ತು. ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಕೊರತೆಯನ್ನು ನೀಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಗಳ ಜೊತೆಗೆ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಕುರಿತ ಕೇಂದ್ರ ಪುಸ್ಕೃತ ಯೋಜನೆಯನ್ನು ಅನುಷ್ಟಾನಗೊಳಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತ್ತು.
ಈ ಯೋಜನೆಯ ಮೊದಲನೇ ಹಂತದಲ್ಲಿ 2014 ರಲ್ಲಿ 58 ಹೊಸ ವೈದ್ಯಕೀಯ ಕಾಲೇಜುಗಳನ್ನು ಒಟ್ಟು ರೂ. 10,962/- ಕೋಟಿಗಳ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲಿನ ಒಟ್ಟು 7541 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.
ಪ್ರತಿ ರಾಜ್ಯದಲ್ಲಿ ಆರೋಗ್ಯ ಸೇವೆಗಳ ಕನಿಷ್ಠ ಸೌಲಭ್ಯ ಹೊಂದಿರುವ ಒಂದು ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆಯ ಎರಡನೇ ಹಂತದಲ್ಲಿ ಪ್ರತಿ ಮೆಡಿಕಲ್ ಕಾಲೇಜಿಗೆ 250 ಕೋಟಿಗಳಂತೆ ಒಟ್ಟು 6000 ಕೋಟಿಗಳ ವೆಚ್ಚದಲ್ಲಿ 24 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅನುಮೋದನೆ ನೀಡಿರುವುದನ್ನು ಸ್ಮರಿಸಬಹುದು.




