ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಗಳಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿದ್ದ ದೋಷವನ್ನು ದೂರುದಾರ ಲಂಚಮುಕ್ತ ಕರ್ನಾಟಕ ವೇದಿಕೆಯ ವಿಜಯ ರಾಘವ ಮರಾಠೆ ಅವರು ಸರಿಪಡಿಸಿದ್ದಾರೆ. ಅಲ್ಲದೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ (ಸಿಸಿಹೆಚ್ 82 LXXXI ) ಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ.
ಇದನ್ನು ಮಾನ್ಯ ಮಾಡಿರುವ ನ್ಯಾಯಾಲಯವು ದೂರುದಾರರು ಈಗಾಗಲೇ ದೋಷವನ್ನು ಸರಿಪಡಿಸಿರುವುದರಿಂದ ಪ್ರಕರಣವನ್ನು ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದೆ. ಅಲ್ಲದೇ ಈ ಸಂಬಂಧ ಕರ್ನಾಟಕ ಲೋಕಾಯುಕ್ತ, ಬೆಂಗಳೂರಿನ ಪೊಲೀಸ್ ಅಧೀಕ್ಷಕರಿಗೆ (Superintendent of Police) ನ್ಯಾಯಾಲಯವು 2026ರ ಸೆ.18ರಂದು ನೋಟಿಸ್ ಜಾರಿಗೊಳಿಸಿ ಆದೇಶಿಸಿದೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ವಿಜಯ ರಾಘವ ಮರಾಠೆ ಅವರು 2026ರ ಸೆ.10ರಂದು ಪ್ರಮಾಣಪತ್ರ ಸಲ್ಲಿಸಿದ್ದರು. ಜೊತೆಗೆ ಜೊತೆಗೆ, ಕ್ರಿಮಿನಲ್ ಪಿಟಿಷನ್ ಸಂಖ್ಯೆ 12406/2026ರಲ್ಲಿನ ಆದೇಶಕ್ಕೆ ಸಂಬಂಧಿಸಿದಂತೆ 2026ರ ಸೆ.18ರಂದು ಹೈಕೋರ್ಟ್ ನೀಡಿದ್ದ ಆದೇಶದ ಪ್ರತಿ ಸಲ್ಲಿಸಿದ್ದರು.
ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ (ಸಿಸಿಹೆಚ್ 82 LXXXI ) ವು 2026ರ ಆಗಸ್ಟ್ 11ರಂದು ನೀಡಿದ್ದ ಆದೇಶದ ಮೂಲಕ, ಪ್ರಮಾಣಪತ್ರದಲ್ಲಿದ್ದ ದೋಷವನ್ನು ಗಮನಿಸಿತ್ತು. ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆ ನಡೆಸುವಂತೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿದ್ದ ದೂರುದಾರರು ಕರ್ನಾಟಕ ಹೈಕೋರ್ಟ್‌ನ್ನು ಕ್ರಿಮಿನಲ್ ಪಿಟಿಷನ್ (ಸಂಖ್ಯೆ 12406/2026) ಮೂಲಕ ಸಂಪರ್ಕಿಸಿದ್ದರು. ಹೈಕೋರ್ಟ್, ಈ ಕ್ರಿಮಿನಲ್ ಪಿಟಿಷನ್‌ನ್ನು ಭಾಗಶಃ ಅಂಗೀಕರಿಸಿತ್ತು. ಬಿಎನ್‌ಎಸ್‌ಎಸ್ ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆ ನಡೆಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ರದ್ದುಪಡಿಸಿತ್ತು. ಅಲ್ಲದೆ, ಪ್ರಕರಣದಲ್ಲಿನ ವಿಚಾರಣೆಗಳನ್ನು ಬಿಎನ್‌ಎಸ್‌ಎಸ್ ಸೆಕ್ಷನ್ 175ರಲ್ಲಿ ಒಳಗೊಂಡಿರುವ ಪ್ರಕ್ರಿಯೆಯನ್ನು ಅನುಸರಿಸಿ ಮುಂದುವರಿಸುವಂತೆ ಪ್ರಕರಣವನ್ನು ಈ ನ್ಯಾಯಾಲಯಕ್ಕೆ ಹಿಂದಿರುಗಿಸಿತ್ತು.
ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಾಡಿರುವ ಅವಲೋಕನಗಳನ್ನು ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ ಅವಲೋಕನಗಳನ್ನು ಗಮನಿಸಿದೆ. ಹೈಕೋರ್ಟ್‌ವು ಗಮನಿಸಿದಂತೆ ಕಂಡುಬಂದಿರುವ ದೋಷವು ಸರಿಪಡಿಸಬಹುದಾದ (curable) ದೋಷವಾಗಿದೆ ಮತ್ತು ನಿರ್ದೇಶಿಸಿತ್ತು.

ಹೈಕೋರ್ಟ್‌ವು ಗಮನಿಸಿದಂತೆ, ಗುರುತಿಸಲಾದ ದೋಷವು ಸರಿಪಡಿಸಬಹುದಾದ ದೋಷ (curable defect) ಆಗಿದ್ದು, ಆ ದೋಷವನ್ನು ಸರಿಪಡಿಸಲು ಅವಕಾಶ ನೀಡುವಂತೆ ನಿರ್ದೇಶಿಸಿತ್ತು. ಅದರಂತೆ ದೂರುದಾರರು 2026ರ ಸೆ.10 ರಂದು ಪ್ರಮಾಣಪತ್ರವನ್ನು (Affidavit) ಸಲ್ಲಿಸಿ ದೋಷವನ್ನು ಸರಿಪಡಿಸಿದ್ದಾರೆ.
ಈ ನ್ಯಾಯಾಲಯವು 2026ರ ಆಗಸ್ಟ್ 11 ರಂದು ಹೊರಡಿಸಿದ್ದ ಆದೇಶದ ಮೂಲಕ, ದೂರಿನಲ್ಲಿ ವಿವರಿಸಲಾಗಿರುವ ಆರೋಪಿತ ಅಕ್ರಮಗಳು prima facie ಕಂಡುಬರುತ್ತವೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೇ ಆದೇಶದ ಹಿನ್ನೆಲೆಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆ ನಡೆಸುವ ಆದೇಶವನ್ನು ಬದಿಗಿರಿಸಲಾಗಿತ್ತು.
ದೂರುದಾರರು ಮೇಲ್ಕಂಡಂತೆ ಈಗಾಗಲೇ ದೋಷವನ್ನು ಸರಿಪಡಿಸಿರುವುದರಿಂದ, ಪ್ರಕರಣವನ್ನು ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ. ಆದ್ದರಿಂದ, ಕರ್ನಾಟಕ ಲೋಕಾಯುಕ್ತದ ಬೆಂಗಳೂರಿನ ಪೊಲೀಸ್ ಅಧೀಕ್ಷಕರಿಗೆ (Superintendent of Police) ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ಬಿಎನ್‌ಎಸ್‌ಎಸ್ ಸೆಕ್ಷನ್ 175(3)ರ ಅಡಿಯಲ್ಲಿ ತಮ್ಮ ಸಲ್ಲಿಕೆಗಳನ್ನು/ಅಭಿಪ್ರಾಯವನ್ನು 2026ರ ಅಕ್ಟೋಬರ್ 6ರೊಳಗೆ ಸಲ್ಲಿಸಬೇಕು ಎಂದು ಲೋಕಾಯುಕ್ತ ಎಸ್ ಪಿ ಗೆ ನಿರ್ದೇಶಿಸಿದೆ.

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಭಾಗಶಃ ಅನುಮತಿಸಿದ್ದ ಹೈಕೋರ್ಟ್, ಟ್ರಸ್ಟ್ ವಿರುದ್ಧ ಸಲ್ಲಿಸಿರುವ ಖಾಸಗಿ ದೂರನ್ನು ಮುಂದುವರೆಸಲು ಅನುಮತಿ ನೀಡಿತ್ತು.
ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿದ್ದ ಖಾಸಗಿ ದೂರಿನ ಪ್ರಮಾಣ ಪತ್ರದಲ್ಲಿ ದೋಷಗಳಿವೆ ಎಂದು ಉಲ್ಲೇಖಿಸಿದ್ದ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಎಂದು ದೂರುದಾರ ವಿಜಯ ರಾಘವ ಮರಾಠೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿತ್ತು.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ, ದೂರುದಾರರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಾಂತ್ರಿಕ ಲೋಪಗಳಿವೆ. ಬಿಎನ್ಎಸ್ಎಸ್ ಸೆಕ್ಷನ್ 333ರ ಅಡಿ ಸರಿಯಾಗಿ ದೃಢೀಕರಿಲ್ಲ ಎಂದು ತಿಳಿಸಿ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸದೆ, ಬಿಎನ್‌ಎಸ್‌ಎಸ್ ಸೆಕ್ಷನ್ 223ರ ಅಡಿ ನ್ಯಾಯಾಲಯವೇ ನೇರವಾಗಿ ವಿಚಾರಣೆ ನಡೆಸಲು ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಮಾಣ ಪತ್ರದಲ್ಲಿನ ಗೊಂದಲಗಳಿಂದ, ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸದೆ, ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದ್ದರು. ಇದಕ್ಕೆ ಪೀಠ, ಪ್ರಮಾಣ ಪತ್ರದಲ್ಲಿ ದೋಷವಿದೆ ಎಂಬ ಕಾರಣಕ್ಕೆ ವಿಶೇಷ ನ್ಯಾಯಾಧೀಶರೇ ವಿಚಾರಣೆ ನಡೆಸುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿತ್ತು. ಅಲ್ಲದೆ, ದೂರಿನ ಪ್ರತಿಯನ್ನು ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು. ಈ ಹಿಂದೆ ನಡೆದ ವಿಚಾರಣೆ ವೇಳೆ, ಪ್ರಕರಣ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.
ಇದಾದ ನಂತರ ಏಕಸದಸ್ಯ ನ್ಯಾಯಪೀಠವು ಬೆಂಗಳೂರು ನಗರದ 81ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಖಾಸಗಿ ದೂರಿನ ಕುರಿತು (P.C.R.No.28/2025) 2026ರ ಆಗಸ್ಟ್ 11ರಂದು ನೀಡಿದ್ದ ಆದೇಶವನ್ನು ಬಿಎನ್‌ಎಸ್‌ಎಸ್ ಕಲಂ 223 ರ ಅಡಿಯಲ್ಲಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿರುವ ಮಟ್ಟಿಗೆ ರದ್ದುಪಡಿಸಲಾಗಿದೆ ಎಂದು ಹೇಳಿತ್ತು.
ದೂರುದಾರರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕಾನೂನಿನ ಪ್ರಕಾರ ಅಗತ್ಯವಿರುವ ಪರಿಶೀಲನೆ/ದೃಢೀಕರಣದ ದೋಷವಿತ್ತು. ಆದರೆ ಆ ದೋಷವು ಸರಿಪಡಿಸಬಹುದಾದ ದೋಷವಾಗಿದೆ. ಪ್ರಮಾಣಪತ್ರದಲ್ಲಿನ ದೋಷದ ಕಾರಣಕ್ಕೆ ಪ್ರಕರಣವನ್ನು ಸಂಪೂರ್ಣವಾಗಿ ಬಿಎನ್‌ಎಸ್‌ಎಸ್ ಕಲಂ 223ರ ವಿಚಾರಣೆಗೆ ತಿರುಗಿಸುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ದೂರುದಾರರಿಗೆ ಪ್ರಮಾಣಪತ್ರದ ದೋಷವನ್ನು ಸರಿಪಡಿಸಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿತ್ತು.
ದೂರುದಾರರ ವಿಚಾರಣೆಯ ಮೂಲಕವೇ ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ ನಿರೀಕ್ಷಿಸುವುದು, ವಾಸ್ತವವಾಗಿ ತನಿಖೆಯಿಂದ ಮಾತ್ರ ಪತ್ತೆಹಚ್ಚಬಹುದಾದ ವಿಷಯವನ್ನು ದೂರುದಾರನೇ ಸಾಬೀತುಪಡಿಸಬೇಕೆಂದು ಕೇಳಿದಂತಾಗುತ್ತದೆ. ಸಾಕ್ಷ್ಯವನ್ನು ಪತ್ತೆಹಚ್ಚಲು ತನಿಖೆಯೇ ಅಗತ್ಯವಾದ ಸಂದರ್ಭದಲ್ಲಿ, ವಿಚಾರಣೆಯನ್ನು ತನಿಖೆಗೆ ಪರ್ಯಾಯವನ್ನಾಗಿ ಮಾಡಲಾಗುವುದಿಲ್ಲ. ಆದ್ದರಿಂದ ಪ್ರಮಾಣಪತ್ರದ ಪರಿಶೀಲನಾ ವಿಧಾನದಲ್ಲಿ ಕೊರತೆಯಿದೆ ಎಂಬ ಕಾರಣಕ್ಕೆ ಮಾತ್ರ ಸಂಬಂಧಿತ ನ್ಯಾಯಾಲಯವು ಬಿಎನ್‌ಎಸ್‌ಎಸ್ ಕಲಂ 175ರ ಮಾರ್ಗವನ್ನು ಮುಚ್ಚಬಾರದಾಗಿತ್ತು,’ ಎಂದು ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕ ಸದಸ್ಯ ನ್ಯಾಯಪೀಠವು ಅಭಿಪ್ರಾಯಿಸಿತ್ತು.
ಈ ಪ್ರಕರಣದಲ್ಲಿ ದಾಖಲಾಗಿರುವ ಖಾಸಗಿ ದೂರು ಮುಂದುವರೆಯಲು ಅನುಮತಿ ನೀಡಿರುವ ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠವು ತನ್ನ ಆದೇಶದಲ್ಲಿ, ಜನಪ್ರತಿನಿಧಿಗಳ ನ್ಯಾಯಾಲಯವು ನೀಡಿರುವ ಆದೇಶವನ್ನೂ ವಿಮರ್ಶಿಸಿತ್ತು.
ಈ ವಾದದ ಸಂದರ್ಭದಲ್ಲಿ ಹಿರಿಯ ವಕೀಲರು ಕರ್ನಾಟಕ ಉಚ್ಚ ನ್ಯಾಯಾಲಯದ Crl.P.No.11571/2025 ಜೊತೆಗೆ Crl.Misc.No.11573/2025 (Mahantesh Bilagi and another Vs. State of Karnataka and others) ಪ್ರಕರಣದಲ್ಲಿ 02.12.2025ರಂದು ನೀಡಿದ ಆದೇಶವನ್ನು ಉಲ್ಲೇಖಿಸಿದರು. ಅದರಲ್ಲಿನ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17-A ಮತ್ತು BNSS ಕಲಂ 175(4) ರ ಪ್ರಕ್ರಿಯೆಯನ್ನು ನ್ಯಾಯಾಲಯ ಗಮನಿಸಿದೆ. ಲೋಕಾಯುಕ್ತ ಪೊಲೀಸರು ತಮ್ಮ ವರದಿ ಸಲ್ಲಿಸಿದ ನಂತರ ಈ ಪ್ರಕ್ರಿಯೆ ಅನ್ವಯವಾಗುತ್ತದೆ ಮತ್ತು ನಂತರ ಮ್ಯಾಜಿಸ್ಟ್ರೇಟ್ ಪೊಲೀಸ್ ವರದಿಯನ್ನು ಪರಿಶೀಲಿಸಿ ಪ್ರಕರಣದಲ್ಲಿ ಮುಂದುವರಿಯುತ್ತಾರೆ ಎಂದು ತಿಳಿಸಿದ್ದರು.
ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ಅವರು 2025 SCC Online SC 238, Om Prakash Ambadkar Vs. State of Maharashtra and others ಪ್ರಕರಣದ ತೀರ್ಪನ್ನೂ ಉಲ್ಲೇಖಿಸಿ, BNSS ಕಲಂ 175(3) ಅಡಿಯಲ್ಲಿ ತನಿಖೆಗೆ ಆದೇಶಿಸುವ ಮೊದಲು ಪೊಲೀಸ್ ಅಧಿಕಾರಿಯನ್ನು ಆಲಿಸಬೇಕು ಎಂದು ವಾದಿಸಿದರು. ಅವರು ಆ ತೀರ್ಪಿನ ಪ್ಯಾರಾ 29ರಿಂದ 31ರವರೆಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಬಿಎನ್‌ಎಸ್‌ಎಸ್ ಕಲಂ 175, Cr.P.C.ನ ಕಲಂ 156ಕ್ಕೆ ಸಮಾನವಾಗಿದೆ.
ಬಿಎನ್‌ಎಸ್‌ಎಸ್ ಕಲಂ 175(1)ವು Cr.P.C.ನ ಕಲಂ 156(1)ಕ್ಕೆ ಬಹುತೇಕ ಸಮಾನವಾಗಿದೆ. ಆದರೆ, ಪ್ರಕರಣದ ಸ್ವರೂಪ ಅಥವಾ ಗಂಭೀರತೆ ಅಗತ್ಯಪಡಿಸಿದರೆ, ಪೊಲೀಸ್ ಅಧೀಕ್ಷಕರು ಉಪ ಪೊಲೀಸ್ ಅಧೀಕ್ಷಕರಿಗೆ ತನಿಖೆ ನಡೆಸಲು ನಿರ್ದೇಶಿಸಬಹುದು ಎಂಬ ಹೆಚ್ಚುವರಿ ಅಂಶವಿದೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ನೀಡಿರುವ ಆದೇಶದಲ್ಲಿ ವಿವರಿಸಲಾಗಿತ್ತು.




