Thursday | September 3, 2026 |

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ ಸದಸ್ಯರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಮತ್ತು  ಹಿರಿಯ ಐಎಎಸ್‌ ಅಧಿಕಾರಿ ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿ ಮಧ್ಯೆ ಹಗ್ಗ ಜಗ್ಗಾಟಗಳು ನಡೆದಿವೆ.

ಕನ್ಸೋರ್ಟಿಯಂ ಕುರಿತು ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಎತ್ತಿರುವ ಬಲವಾದ ಆಕ್ಷೇಪಣೆ ತಕರಾರುಗಳನ್ನು ಬಿಎಸ್‌ಡಬ್ಲ್ಯೂಎಂಎಲ್‌ ಒಪ್ಪಿಲ್ಲ.  ಬದಲಿಗೆ ಸಮಿತಿಯ ಮುಂದೆ ನಾನಾ ಕಾರಣಗಳನ್ನು ಮುಂದಿಟ್ಟು ಸದಸ್ಯರ ಸಂಖ್ಯೆ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.

21 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆ ಮತ್ತು  ಸಮಿತಿ ರಚನೆ ಮಾಡದೆಯೇ ಅನುಮೋದಿಸಿರುವ ಟೆಂಡರ್, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಿದೆ ಮತ್ತು ಇದರಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತು ಪರಿಶೀಲನೆ ನಡೆಸಿರುವ ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಕನ್ಸೋರ್ಟಿಯಂನ ಮತ್ತೊಂದು ಮುಖವನ್ನು ಪರಿಚಯಿಸಿದೆ.

ಸಮಿತಿ ಸಲ್ಲಿಸಿರುವ ವರದಿ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಸಲ್ಲಿಸಿರುವ ವರದಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಕನ್ಸೋರ್ಟಿಯಂ ಮತ್ತು ಕಾಮಗಾರಿ ಗುತ್ತಿಗೆಗಳಿಗೆ ಅನ್ವಯಿಸಿರುವ ಟೆಂಡರ್ ದಾಖಲೆ ಕುರಿತು ಸಮಿತಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ  ಅನುಪಾಲನೆ ವರದಿ ನೀಡಿರುವ ಬಿಎಸ್‌ಡಬ್ಲ್ಯೂಎಂಎಲ್‌, ಸಮಿತಿಯು ವ್ಯಕ್ತಪಡಿಸಿದ್ದ ಆಕ್ಷೇಪಣೆಗಳನ್ನು ತಳ್ಳಿ ಹಾಕಿದೆ.

‘ಸಮಿತಿ ವ್ಯಕ್ತಪಡಿಸಿರುವ ಅಭಿಪ್ರಾಯವು ವರ್ಕ್ಸ್‌ ಕಾಂಟ್ರಾಕ್ಟ್‌ಗಳಿಗೆ ಅನ್ವಯಿಸುವ ಮಾದರಿ ಟೆಂಡರ್ ದಾಖಲೆಯಲ್ಲಿನ ಕನ್ಸೋರ್ಟಿಯಂ ಸಂಬಂಧಿತ ಷರತ್ತುಗಳನ್ನು ಪ್ರಸ್ತುತ ಕಾಂಟ್ರಾಕ್ಟ್‌ ಗೆ ಅನ್ವಯಿಸುವ ಪೂರ್ವಧಾರಣೆಯನ್ನು ಆಧರಿಸಿದೆ. ಆದರೆ ಈ ಪೂರ್ವಧಾರಣೆಯು ಪ್ರಸ್ತುತ ಟೆಂಡರ್‍‌ನ ಸ್ವರೂಪ ಹಾಗೂ ಉದ್ದೇಶಕ್ಕೆ ಹೊಂದಿಕೆಯಾಗುವುದಿಲ್ಲ,’ ಎಂದು ಹೇಳಿದೆ.

ಸಮಿತಿಯು ಕೆಡಬ್ಲ್ಯೂ 4 ಸ್ಟಾಂಡರ್ಡ್‌ ಬಿಡ್‌ ಡಾಕ್ಯುಮೆಂಟ್‌ ನಿರ್ಮಾಣ ಕಾಮಗಾರಿಗಳ ಕುರಿತು ಸಮಿತಿಯು ಉಲ್ಲೇಖಿಸಿತ್ತು. ಇದಕ್ಕೆ ಉತ್ತರಿಸಿರುವ ಬಿಎಸ್‌ಡಬ್ಲ್ಯೂಎಂಎಲ್‌, ಸಮಿತಿಯು ಉಲ್ಲೇಖಿಸಿರುವ ಕೆಡಬ್ಲ್ಯೂ ಸ್ಟಾಂಡರ್ಡ್‌ ಬಿಡ್‌ ಡಾಕ್ಯುಮೆಂಟ್‌ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದ ಮಾದರಿ ದಾಖಲೆಯಾಗಿದೆ. ಪ್ರಸ್ತುತ ಬಿಎಸ್‌ಡಬ್ಲ್ಯೂಎಂಎಲ್‌ ಆಹ್ವಾನಿಸಿರುವ ಟೆಂಡರ್ ಮಾತ್ರ ವಾಹನಗಳ ಒದಗಿಸುವಿಕೆ, ಅವುಗಳ ಕಾರ್ಯಾಚರಣೆ, ನಿರ್ವಹಣೆ, ಚಾಲಕರು, ಸಹಾಯಕ ಸಿಬ್ಬಂದಿ ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲ ನಿಯೋಜಿಸಿ ಪ್ರಾಥಮಿಕ ಘನತ್ಯಾಜ್ಯ ಸಂಗ್ರಹಣೆ, ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ನಿರಂತರವಾಗಿ ಒದಗಿಸುವ ಮಿಶ್ರಿತ ಮಾದರಿ ಟೆಂಡರ್ ಅಗಿದೆ ಎಂದು ಸಮಜಾಯಿಷಿ ನೀಡಿದೆ.

‘ಆದ್ದರಿಂದ ವರ್ಕ್ಸ್‌ ಕಾಂಟ್ರಾಕ್ಟ್‌ಗಳಿಗೆ ರೂಪಿಸಲಾದ ಪ್ರತಿಯೊಂದು ಷರತ್ತನ್ನು ಯಥಾವತ್ತಾಗಿ ಪ್ರಸ್ತುತ ಮಾದರಿಯ ಟೆಂಡರ್‍‌ಗೆ ಅನ್ವಯಿಸಲಾಗದು,’ ಎಂದು ಸಮಿತಿಗೆ ಹೇಳಿದೆ.

 

 

ಪ್ರಸ್ತುತ ಟೆಂಡರ್‍‌ನಲ್ಲಿ ಹಿಂದಿನ ವ್ಯವಸ್ಥೆಯಂತೆ ಒಂದು ಅಥವಾ ಎರಡು ವಾರ್ಡ್‌ಗಳನ್ನು ಒಳಗೊಂಡ ಸಣ್ಣ ಪ್ಯಾಕೇಜ್‌ಗಳನ್ನು ಆಹ್ವಾನಿಸದೇ 243 ವಾರ್ಡ್‌ಗಳನ್ನು ಪುನರ್ ರಚಿಸಿ 33 ದೊಡ್ಡ ಪ್ಯಾಕೇಜ್‌ಗಳನ್ನಾಗಿ ರೂಪಿಸಿದೆ. ಹೀಗಾಗಿ ಪ್ರತಿ ಪ್ಯಾಕೇಜ್‌ ಗೆ ಹೆಚ್ಚಿನ ಸಂಖ್ಯೆಯ ವಾಹನಗಳು, ಗಣನೀಯ ಪ್ರಮಾಣದ ಮಾನವ ಸಂಪನ್ಮೂಲ, ಕಾರ್ಯಾಚರಣೆ ವ್ಯವಸ್ಥೆ ಹಾಗೂ ಹೆಚ್ಚಿನ ಹಣಕಾಸಿನ ಸಾಮರ್ಥ್ಯದ ಅಗತ್ಯ ಉಂಟಾಗಿದೆ ಎಂದು ಪ್ರತಿಪಾದಿಸಿದೆ.

ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅರ್ಹ ಸಂಸ್ಥೆಗಳು ಸ್ಪರ್ಧಾತ್ಮಕವಾಗಿ ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದು ಹಾಗೂ ದೊಡ್ಡ ಪ್ರಮಾಣದ ಸಂಪನ್ಮೂಲಗಳನ್ನು ಒಗ್ಗೂಡಿಸಲು ಅನುಕೂಲವಾಗುವ ಉದ್ದೇಶದಿಂದ ಕನ್ಸೋರ್ಟಿಯಂ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸಮರ್ಥಿಸಿಕೊಂಡಿರುವುದು ವರದಿಯಿಂದ ತಿಳಿದು ಬಂದಿದೆ.

‘ಆದರೂ ಕನ್ಸೋರ್ಟಿಯಂ ಗೆ ಅವಕಾಶ ಕಲ್ಪಿಸಿರುವುದರಿಂದ ತಾಂತ್ರಿಕ ಅರ್ಹತೆ ಮಾನದಂಡಗಳನ್ನು  ಯಾವುದೇ ರೀತಿಯಲ್ಲಿ ಸಡಿಲಗೊಳಿಸಿಲ್ಲ. ಟೆಂಡರ್ ದಸ್ತಾವೇಜಿನಲ್ಲಿ ನಿಗದಿಪಡಿಸಿರುವ ವರ್ಕ್ ಡನ್‌, ವಾಹನಗಳ ಲಭ್ಯತೆ, ಕಾರ್ಯನಿರ್ವಹಣೆ ಸಾಮರ್ಥ್ಯ ಹಾಗೂ ಇತರೆ ತಾಂತ್ರಿಕ ಮಾನದಂಡಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಕನ್ಸೋಟೋರಿಯಂನಲ್ಲಿ ಈಕ್ವಿಟಿ ಭಾಗವಹಿಸುವಿಕೆಗೆ ಸಂಬಂಧಿಸಿದ ಷರತ್ತು ತಾಂತ್ರಿಕ ಅನುಭವಕ್ಕೆ ಪರ್ಯಾಯವಾಗಿ ಅಥವಾ ಅದರ ಬದಲಾಗಿ ವಿಧಿಸಲಾದ ಷರತ್ತಲ್ಲ,’ ಎಂದು ಪ್ರತಿಪಾದಿಸಿದೆ.

 

 

ಅದಷ್ಟೇ ಅಲ್ಲ, ಈಕ್ವಿಟಿ ಭಾಗವಹಿಸುವಿಕೆ ಕಡ್ಡಾಯಗೊಳಿಸಿರುವುದಕ್ಕೆ ಸಮಿತಿಗೆ ಮತ್ತಷ್ಟು ಸಮರ್ಥನೆಗಳನ್ನು ಒದಗಿಸಿದೆ.

ಕನ್ಸೋರ್ಟಿಯಂನ ಪ್ರತಿಯೊಬ್ಬ ಸದಸ್ಯನೂ ಯೋಜನೆಯಲ್ಲಿ ನೈಜ ಹಣಕಾಸಿನ ಪಾಲುದಾರ. ಒಪ್ಪಂದದ ಯಶಸ್ವಿ ಅನುಷ್ಟಾನಕ್ಕೆ ಸಮಾನ ಜವಾಬ್ದಾರಿ ಮತ್ತು ದೀರ್ಘಕಾಲಿನ ಬದ್ಧತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಹೇಳಿದೆ.

‘ಇದರಿಂದ ಕೇವಲ ಹಣಕಾಸಿನ ವಹಿವಾಟು ಪೂರೈಸುವ ಉದ್ದೇಶದಿಂದ ಅಥವಾ ಹೆಸರಿನ ಮಟ್ಟಿಗೆ ಕನ್ಸೋರ್ಟಿಯಂನಲ್ಲಿ ಸೇರುವ ಸಂದರ್ಭಗಳನ್ನು ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಈಕ್ವಿಟಿ ಭಾಗವಹಿಸುವಿಕೆ ಷರತ್ತು ಮತ್ತು ತಾಂತ್ರಿಕ ಅನುಭವವನ್ನು ಬದಲಿಸುವುದಿಲ್ಲ. ಬದಲಾಗಿ ಕನ್ಸೋರ್ಟಿಯಂನ ನೈಜತೆ ಮತ್ತು ಒಪ್ಪಂದ ನಿರ್ವಹಣೆಯ ವಿಶ್ವಾಸಾರ್ಹತೆಯನ್ನು ಬಲಪಡಿಸುವ ಹೆಚ್ಚುವರಿ ಭದ್ರತಾ ಕ್ರಮವಾಗಿದೆ,’ ಎಂದು ಬಿಎಸ್‌ಡಬ್ಲ್ಯೂಎಂಎಲ್‌  ವಿವರಿಸಿರುವುದು ಗೊತ್ತಾಗಿದೆ.

ಕನ್ಸೋರ್ಟಿಯಂನ ಸದಸ್ಯರು ಒಪ್ಪಂದದ ಷರತ್ತುಗಳ ಅನ್ವಯ ಜಂಟಿ ಮತ್ತು ಹಲವು ಹೊಣೆಗಾರಿಕೆಗಳ ಅಡಿಯಲ್ಲಿ ಜವಾಬ್ದಾರರಾಗಿದ್ದಾರೆ. ಕನ್ಸೋರ್ಟಿಯಂನ ಯಾವುದೇ ಸದಸ್ಯನಲ್ಲಿ ಬದಲಾವಣೆ ಉಂಟಾದರೂ ಒಪ್ಪಂದದ ಅನುಷ್ಟಾನಕ್ಕೆ ಧಕ್ಕೆಯಾಗದಂತೆ ಕಾನೂನುಬದ್ಧ ಜವಾಬ್ದಾರಿ ಉಳಿದ ಸದಸ್ಯರ ಮೇಲೂ ಮುಂದುವರೆಯುತ್ತದೆ. ಹೀಗಾಗಿ ಕನ್ಸೋಟೋರಿಯಂನಲ್ಲಿನ ಸದಸ್ಯರ ಈಕ್ವಿಟಿ ಭಾಗವಹಿಸುವಿಕೆ ಷರತ್ತಿನಿಂದಾಗಿ ಕಾರ್ಯನಿರ್ವಹಣಾ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ ಎಂಬ ಸಮಿತಿಯ ಆತಂಕಕ್ಕೆ ಅವಕಾಶವಿಲ್ಲ ಎಂದು ಪ್ರತಿಪಾದಿಸಿದೆ.

ಗುತ್ತಿಗೆದಾರರು ಸಮಾಜ ಕೆಳಸ್ತರಕ್ಕೆ ಸೇರಿದವರು

ಕನ್ಸೋರ್ಟಿಯಂನ್ನು ಮತ್ತಷ್ಟು ಸಮರ್ಥಿಸಿಕೊಂಡಿರುವ ಬಿಎಸ್‌ಡಬ್ಲ್ಯೂಎಂಲ್‌, ಒಂದು ಅಥವಾ ಎರಡು ವಾರ್ಡ್‌ಗಳ ಪ್ರಾಥಮಿಕ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಗುತ್ತಿಗೆ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಗುತ್ತಿಗೆದಾರರು ಸಮಾಜದ ಕೆಳಸ್ತರಕ್ಕೆ ಸೇರಿದವರಾಗಿದ್ದಾರೆ ಎಂಬ ಕಾರಣವನ್ನು ಮುಂದೊಡ್ಡಿದೆ. ಪ್ರಸ್ತುತ ವಿಭಾಗವಾರು ಕರೆಯಲಾದ ಟೆಂಡರ್ ಪ್ಯಾಕೇಜ್‌ಗಳಲ್ಲಿ ಭಾಗವಹಿಸಲು ಸಮಾಜದ ಕೆಳಸ್ತರಕ್ಕೆ ಸೇರಿದ ಗುತ್ತಿಗೆದಾರರಿಗೆ ಬಂಡವಾಳದ ಕೊರತೆಯಾಗದಂತೆ ಕನ್ಸೋಟೋರಿಯಂನ ಷರತ್ತುಗಳನ್ನು ಸಡಿಲಗೊಳಿಸಿದೆ ಎಂದು ವಿವರಿಸಿದೆ.

 

 

‘ಹೆಚ್ಚಿನ ಸಂಖ್ಯೆಯ ಅರ್ಹ ಬಿಡ್‌ದಾರರು ಸ್ಪರ್ಧಾತ್ಮಕವಾಗಿ ಟೆಂಡರ್‍‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ತಮ್ಮ ತಾಂತ್ರಿಕ, ಹಣಕಾಸು ಹಾಗೂ ಕಾರ್ಯಚರಣೆ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡು ದೊಡ್ಡ ಪ್ಯಾಕೇಜ್‌ಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿದೆ. ಯಾವುದೇ ಒಬ್ಬ ಗುತ್ತಿಗೆದಾರ ಅಥವಾ ಸಂಸ್ಥೆಯ ಏಕಸ್ವಾಮ್ಯತೆಯನ್ನು ತಡೆಗಟ್ಟಲಿದೆ. ಹೊಸ ವಾಹನಗಳು, ಆಧುನಿಕ ತಂತ್ರಜ್ಞಾನ ಹಾಗೂ ಅಗತ್ಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ನಿಯೋಜಿಸಲು ಅನುಕೂಲ ಕಲ್ಪಿಸಲಿದೆ,’ ಎಂದು ಪ್ರತಿಪಾದಿಸಿದೆ.

ಇದಲ್ಲದೇ ಟೆಂಡರ್ ಪೂರ್ವಭಾವಿ ಸಭೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಆಸಕ್ತ ಬಿಡ್‌ದಾರರು ವಾರ್ಡ್‌ವಾರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಈ ಟೆಂಡರ್‍‌ನಲ್ಲಿನ ಕನ್ಸೋಟೋರಿಯಂನ ಕುರಿತು ಮತ್ತು ತಾಂತ್ರಿಕ ಅನುಭವ, ಹಣಕಾಸು ಅರ್ಹತೆಯನ್ನು ಇನ್ನೂ ಸಡಿಲಗೊಳಿಸುವಂತೆ ಕೋರಿದೆ. ಈಗಾಗಲೇ ಶೇ.80ರಷ್ಟು ವಾಹನದ ನಿರ್ವಹಣೆಯ ಅನುಭವದ ಅವಶ್ಯಕತೆ ಹಾಗೂ ಶೇ. 50ರಷ್ಟು ಮೊತ್ತಕ್ಕೆ ಇದೇ ತರಹದ ಕಾರ್ಯ ನಿರ್ವಹಣೆ ಕ್ಷಮತೆ ಮಾನದಂಡವಾಗಿದೆ. ಹೀಗಾಗಿ ಇವುಗಳನ್ನು ಪರಿಗಣಿಸಲಾಗಿಲ್ಲ ಎಂದು ಹೇಳಿದೆ.

 

 

ಅಲ್ಲದೇ ಈಕ್ವಿಟಿ ಭಾಗವಹಿಸುವಿಕೆ ಕುರಿತು ವಿಧಿಸಿರುವ ಷರತ್ತು, ತಾಂತ್ರಿಕ ಅನುಭವದ ಮಾನದಂಡವನ್ನು ಬದಲಿಸುವ ಅಥವಾ ದುರ್ಬಲಗೊಳಿಸುವ ಉದ್ದೇಶದಿಂದ ವಿಧಿಸಿಲ್ಲ. ಬದಲಾಗಿ ತಾಂತ್ರಿಕ ಅರ್ಹತೆ ಮಾನದಂಡಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಕನ್ಸೋಟೋರಿಯಂನ ಹಣಕಾಸಿನ ಬದ್ಧತೆ, ಸಂಪನ್ಮೂಲಗಳ ಸಮರ್ಪಕ ಒಗ್ಗೂಡಿಕೆ ಹಾಗೂ ಒಪ್ಪಂದದ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸುವ ಹೆಚ್ಚುವರಿ ಷರತ್ತಾಗಿದೆ.

‘ಆದ್ದರಿಂದ ಈ ಷರತ್ತನ್ನು ಮಾದರಿ ಟೆಂಡರ್ ದಾಖಲೆಯಲ್ಲಿನ ಷರತ್ತುಗಳಿಗೆ ವಿರುದ್ಧವಾಗಿದೆ ಎಂದು ಪರಿಗಣಿಸಬಾರದು,’ ಎಂದು ಬಿಎಸ್‌ಡಬ್ಲ್ಯೂಎಂಎಲ್‌, ಸಮಿತಿಯನ್ನು ಕೋರಿರುವುದು ವರದಿಯಿಂದ ತಿಳಿದು ಬಂದಿದೆ.

ಬಿಎಸ್‌ಡಬ್ಲ್ಯೂಎಂಎಲ್‌ನ ಪ್ರತಿಪಾದನೆಯನ್ನು ಅಂಜುಂ ಪರ್ವೇಜ್ ಸಮಿತಿಯು ಮತ್ತಷ್ಟು  ವಿಶ್ಲೇಷಿಸಿದೆ. ಅದರಲ್ಲೂ ಬಹುಮುಖ್ಯವಾಗಿ ಕನ್ಸೋಟೋರಿಯಂನ ಎಲ್ಲಾ ಸದಸ್ಯರು ಪೂರ್ವ ಕಾರ್ಯಾನುಭವ ಹೊಂದಿಲ್ಲದೇ ಇರುವುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದೆ. ಮಾದರಿ ಟೆಂಡರ್ ದಾಖಲೆಯಲ್ಲಿ ಸಾಮಾನ್ಯ ಅನುಭವವನ್ನು ಎಲ್ಲಾ ಸದಸ್ಯರು ವೈಯಕ್ತಿಕವಾಗಿ ಪೂರೈಸಬೇಕು. ಮತ್ತು ನಿರ್ದಿಷ್ಟ ಕಾರ್ಯಾನುಭವವನ್ನು ಒಟ್ಟಾಗಿ ಪೂರೈಸಬೇಕು ಎಂದು ತಿಳಿಸಿದೆ.

 

 

ಈ ಕಂಡಿಕೆಯಲ್ಲಿ ತಿಳಿಸಿದಂತೆ ಕನ್ಸೋಟೋರಿಯಂನ ಯಾವುದೇ ಸದಸ್ಯರು ಅದನ್ನು ತೊರೆದರೂ ಸಹ ಸರ್ಕಾರದಿಂಧ ವಹಿಸಿದ ಕಾರ್ಯವನ್ನು ಉಳಿದವರು ಪೂರೈಸಬೇಕಾಗುತ್ತದೆ. ಆದರೆ ಪ್ರಸ್ತಾಪಿತ ಕಾರ್ಯಕ್ಕೆ ಅಳವಡಿಸಿದ ಟೆಂಡರ್ ದಾಖಲೆಯಲ್ಲಿ ಯಾವುದಾದರೂ ಒಬ್ಬ ಸದಸ್ಯರು ಕಾರ್ಯಾನುಭವ ಹೊಂದಿದ್ದಲ್ಲಿ ಪರಿಗಣಿಸುವುದಾಗಿ ತಿಳಿಸಿದೆ. ಅದರಂತೆಯೇ ಮೌಲ್ಯಮಾಪನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ವಿಷಯದಲ್ಲಿ ಯಾಕೆ ವರ್ಗಾಂತರ ಮಾಡಲಾಯಿತು ಎಂಬುದಕ್ಕೆ ಅಗತ್ಯ ಸಮರ್ಥನೆಗಳನ್ನು ನೀಡಬೇಕು ಎಂದು ಸಮಿತಿಯು ಹೇಳಿದೆ.

ಇದಕ್ಕೂ ಬಿಎಸ್‌ಡಬ್ಲ್ಯೂಎಂಲ್‌ ಅನುಪಾಲನೆ ವರದಿ ನೀಡಿದೆ. ಪ್ರಸ್ತುತ ಟೆಂಡರ್, ವರ್ಕ್ಸ್‌ ಕಾಂಟ್ರಾಕ್ಟ್‌ಗೆ ಸಂಬಂಧಪಟ್ಟಿದ್ದಲ್ಲ ಎಂದು ಹೇಳಿದೆ. ಕನ್ಸೋರ್ಟಿಯಂನ ಪ್ರತಿಯೊಬ್ಬ ಸದಸ್ಯರು ಪ್ರತ್ಯೇಕವಾಗಿ ಪೂರ್ವ ಕಾರ್ಯನುಭವ ಹೊಂದಿರಬೇಕು ಎಂಬ ಷರತ್ತನ್ನು ವಿಧಿಸುವ ಬದಲು ಕನ್ಸೋಟೋರಿಯಂನ ಒಟ್ಟಾರೆಯಾಗಿ ಅಗತ್ಯ ತಾಂತ್ರಿಕ ಮತ್ತು ಕಾರ್ಯಚರಣೆ ಸಾಮರ್ಥ್ಯವನ್ನು ಹೊಂದಿರುವುದನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಿದೆ ಎಂದು ಪುನರುಚ್ಛರಿಸಿದೆ.

ಒಂದೇ ಸಂಸ್ಥೆಯು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಎಲ್ಲ ಸಂದರ್ಭಗಳಲ್ಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ತಾಂತ್ರಿಕ ಅನುಭವ ಹೊಂದಿರುವ ಸಂಸ್ಥೆಯೊಂದಿಗೆ ಹಣಕಾಸು ಹಾಗೂ ಕಾರ್ಯಾಚರಣೆ ಸಂಪನ್ಮೂಲ ಹೊಂದಿರುವ ಇತರೆ ಸಂಸ್ಥೆಗಳು ಕನ್ಸೋಟೋರಿಯಂ ರಚಿಸಿ ಸ್ಪರ್ಧಾತ್ಮಕವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಈ ಉದ್ದೇಶದಿಂದಲೇ ಷರತ್ತು ಅಳವಡಿಸಿದೆ. ಇದರಿಂದ ತಾಂತ್ರಿಕ ಅರ್ಹತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬದಲಾಗಿ ಕನ್ಸೋಟೋರಿಯಂನ ಸಮಗ್ರ ಸಾಮರ್ಥ್ಯವನ್ನು ಪರಿಗಣಿಸಿದೆ ಎಂದು ಪ್ರತಿಪಾದಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಕನ್ಸೋರ್ಟಿಯಂ ಸ್ಥಿರತೆ ಖಚಿತಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಟೆಂಡರ್‍‌ ದಸ್ತಾವೇಜಿನ ಬಿಡ್ಡರ್‍‌ಗಳಿಗೆ ಸೆಕ್ಷನ್‌ ಡಿ ಯಲ್ಲಿ ಸ್ಪಷ್ಟವಾಗಿ  ಷರತ್ತನ್ನು ವಿಧಿಸಿದೆ. ಇದರ ಅನ್ವಯ ಕಾರ್ಯಾದೇಶ ನೀಡಿದ ನಂತರ ಕನ್ಸೋಟೋರಿಯಂನ ಯಾವುದೇ ಸದಸ್ಯನು ಹೊರನಡೆಯಲು ಬಯಸಿದಲ್ಲಿ ಅದು ಬಿಎಸ್‌ಡಬ್ಲ್ಯೂಎಂಎಲ್‌ನ ಪೂರ್ವಾನುಮೋದನೆಗೆ ಒಳಪಟ್ಟಿದೆ.

 

 

ಆ ಸದಸ್ಯನ ನಿರ್ಗಮನದಿಂದ ಸೇವೆಯ ನಿರಂತರತೆ, ತಾಂತ್ರಿಕ ಸಾಮರ್ಥ್ಯ ಅಥವಾ ಒಪ್ಪಂದದ ಅನುಷ್ಠಾನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಅನುಮತಿ ನೀಡಲಾಗುತ್ತದೆ ಎಂದು ಹೇಳಿದೆ.

 

 

ಇದಲ್ಲದೇ ಒಪ್ಪಂದದ ಷರತ್ತುಗಳ ಉಲ್ಲಂಘನೆ ಅಥವಾ ಸೇವೆಯ ಅಸಮರ್ಪಕ ನಿರ್ವಹಣೆ ಕಂಡುಬಂದಲ್ಲಿ ಟೆಂಡರ್ ದಸ್ತಾವೇಜಿನ ದಂಡದ ಸ್ವರೂಪದಲ್ಲಿರುವ ನಿಬಂಧನೆಗಳ ಅನ್ವಯ ದಂಡ ವಿಧಿಸಲಾಗುತ್ತದೆ. ಇದರ ಕಾರ್ಯನಿರ್ವಹಣೆ ಸುಧಾರಿಸಲು ನಿರ್ದೇಶನ ನೀಡುವುದು ಮತ್ತು ಅಗತ್ಯವಿದ್ದಲ್ಲಿ ಒಪ್ಪಂದವನ್ನು ರದ್ದುಗೊಳಿಸುವ ಅಧಿಕಾರವನ್ನು ಬಿಎಸ್‌ಡಬ್ಲ್ಯೂಎಂಎಲ್‌ ಕಾಯ್ದಿರಿಸಿಕೊಂಡಿದೆ ಎಂದು ವಿವರಿಸಿದೆ.

 

4,791.95 ಕೋಟಿ ಮೊತ್ತದ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ ಪ್ರಕರಣ; ಶೇ.14ರ ಟೆಂಡರ್ ಪ್ರೀಮಿಯಂ ಪರಿಗಣನೆಗೆ ಅಂಜುಂ ಪರ್ವೇಜ್ ಸಮಿತಿ ಆಕ್ಷೇಪ, ವರದಿ ಬಹಿರಂಗ

 

ಶೇ.14 ರ ಟೆಂಡರ್ ಪ್ರೀಮಿಯಂಗೆ ಅಂಜುಂ ಪರ್ವೇಝ್‌ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ದಿ ಫೈಲ್‌ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಕನ್ಸೋರ್ಟಿಯಂ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳ; ವೈಯಕ್ತಿಕ ಹೊಣೆಗಾರಿಕೆ ದುರ್ಬಲ, ಒಪ್ಪಂದ ನಿರ್ವಹಣೆ ಸಂಕೀರ್ಣ, ಲೀಡ್‌ ಮೆಂಬರ್‍‌ಗೆ ಅಗತ್ಯ ಅನುಭವವೇ ಇಲ್ಲ

 

ಕನ್ಸೋರ್ಟಿಯಂ ಸದಸ್ಯರ ಸಂಖ್ಯೆ ಹೆಚ್ಚಳ ಮಾಡಿರುವ ಕಾರಣ ವೈಯಕ್ತಿಕ ಹೊಣೆಗಾರಿಕೆ ದುರ್ಬಲವಾಗುತ್ತದೆ ಎಂದು ಅಂಜುಂ ಪರ್ವೇಝ್‌ ಸಮಿತಿಯು ಆತಂಕ ವ್ಯಕ್ತಪಡಿಸಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

ಟೆಂಡರ್‍‌ದಾರರು ನೀಡಿದ್ದ ಅಂಕಿ ಅಂಶ ಆಧರಿಸಿ ಮೌಲ್ಯಮಾಪನ; ಬಿಎಸ್‌ಡಬ್ಲ್ಯೂಎಂಎಲ್‌ನ ಮತ್ತೊಂದು ಮುಖ ಅನಾವರಣ ಮಾಡಿದ ಅಂಜುಂ ಪರ್ವೇಜ್‌ ಸಮಿತಿ

 

ಟೆಂಡರ್‍‌ದಾರರು ನೀಡಿದ್ದ ಅಂಕಿ ಅಂಶಗಳನ್ನಾಧರಿಸಿ ಬಿಎಸ್‌ಡಬ್ಲ್ಯೂಎಂಎಲ್‌ ಮೌಲ್ಯಮಾಪನ ಮಾಡಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಹೆಣ್ಣುಮಕ್ಕಳ ಮಾರಾಟ ಜಾಲದ ವಿರುದ್ಧ ಪ್ರಕರಣ ದಾಖಲು, ಆದರೂ ಹೆಣ್ಣು ಮಕ್ಕಳ ಮಾರಾಟ ಜಾಲವಿಲ್ಲವೆಂದ ಸಚಿವ; 3 ವರ್ಷವಾದರೂ ಪತ್ತೆಯಾಗಿಲ್ಲ 3,509 ಮಂದಿ ಮಹಿಳೆ, ಅಪ್ರಾಪ್ತರು

ಬೆಂಗಳೂರು; ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದರೂ...

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...
Please Scan to make Your Contribution

Topics

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

Related Articles

Popular Categories

error: Content is protected !!