Thursday | August 20, 2026 |

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ; ಹಲವು ಟೆಂಡರ್‍‌ಗಳಿಗೆ ಬಿಡ್ಡರ್‍‌ಗಳೇ ಇಲ್ಲ, ಮರು ಟೆಂಡರ್‍ ಹಿಂದಿದೆಯೇ ಲಂಚಾವತಾರ?

ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ. ರಾಜ್ಯದ 27 ಜಿಲ್ಲೆಗಳಲ್ಲಿ ಪ್ರಮುಖ ಔಷಧಿಗಳೇ ಇಲ್ಲ. ಸರ್ಕಾರ ಆರೋಗ್ಯ ಸಂಸ್ಥೆಗಳಲ್ಲಿಯೇ ಔ‍ಷಧಗಳ ಕೊರತೆ ಕಾಣಿಸಿಕೊಂಡಿರುವುದನ್ನು ಸ್ವತಃ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಒಪ್ಪಿಕೊಂಡಿದ್ದಾರೆ.

ಬೈಲಹೊಂಗಲದ ಶಾಸಕ ಕೌಜಲಗಿ ಮಹಾಂತೇಶ್‌ ಶಿವಾನಂದ್ ಅವರು ಇಂದು ವಿಧಾನಸಭೆಯಲ್ಲಿ  ಕೇಳಿದ್ದ  ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಖಾದರ್ ಅವರು ‘ಇತ್ತೀಚಿನ ದಿನಗಳಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ  ಔಷಧದ ಕೊರತೆ ಇರುವುದು ಸರ್ಕಾರದ ಗಮನಕ್ಕೆ  ಬಂದಿದೆ,’ ಎಂದು ಮಾಹಿತಿ ಒದಗಿಸಿದ್ದಾರೆ.

ಅಲ್ಲದೇ 103 ಔಷಧ ಖರೀದಿಸಲು ಆಹ್ವಾನಿಸಿದ್ದ ಟೆಂಡರ್‍‌ಗಳಿಗೆ ಒಂದೇ ಒಂದ್ ಬಿಡ್‌ ಕೂಡ ಸ್ವೀಕೃತವಾಗಿಲ್ಲ. ಇನ್ನಿತರೆ ಔಷಧ ಸಾಮಾಗ್ರಿಗಳ ಖರೀದಿಗೆ ಆಹ್ವಾನಿಸಿದ್ದ ಟೆಂಡರ್‍‌ನಲ್ಲಿ 55 ಬಿಡ್‌ಗಳನ್ನು ತಿರಸ್ಕರಿಸಿದೆ. ಹಾಗೆಯೇ 15 ವಸ್ತುಗಳನ್ನು ಕೈಬಿಟ್ಟಿದೆ. 356 ವಸ್ತುಗಳನ್ನು ಸ್ಥಳೀಯ ಖರೀದಿಗೆ ಗುರುತಿಸಿತ್ತು. ಆದರೂ ಸಹ ಇಲಾಖೆಯು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಸಚಿವ ಯು ಟಿ ಖಾದರ್ ಅವರೇ ಇದೀಗ ಔಷಧಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಅಧಿಕೃತವಾಗಿ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ತೀವ್ರ ಕೊರತೆ ಕಾಣಿಸಿಕೊಂಡಿದ್ದರೂ ಸಹ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ನಿರ್ಲಕ್ಷ್ಯ ವಹಿಸಿದೆ. ಸಚಿವರ ಉತ್ತರ ಹೊರತುಪಡಿಸಿ ದಿ ಫೈಲ್‌ಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಔಷಧ ಸಾಮಗ್ರಿಗಳ ಖರೀದಿಗೆ ಕರೆದಿದ್ದ ಟೆಂಡರ್‍‌ ಪ್ರಕ್ರಿಯೆಗಳು ಇನ್ನೂ ಪೂರ್ಣಗೊಂಡಿಲ್ಲ. ಅಪೂರ್ಣಗೊಂಡಿರುವ ಟೆಂಡರ್‍‌ಗಳು ದೀರ್ಘ ಕಾಲದಿಂದಲೂ ಕುಂಟುತ್ತಾ ಸಾಗಿವೆ.

ಸಚಿವರು ನೀಡಿರುವ ಉತ್ತರದಲ್ಲೇನಿದೆ?

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧದ ಕೊರತೆ ಇದೆ ಎಂದು ಸರ್ಕಾರವು ಒಪ್ಪಿಕೊಂಡಿದೆ. ರಾಜ್ಯದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕೆಲವು ಔಷಧಗಳ ದಾಸ್ತಾನು ಪ್ರಮಾಣ ಕಡಿಮೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಇಂಡೆಂಟ್‌ ಅನ್ವಯ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆ ಮತ್ತು ಇತರೆ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮೂಲಕ ಕೈಗೊಳ್ಳುತ್ತಿದೆ ಎಂದು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

 

2025ರ ಆಗಸ್ಟ್‌ 4ರ ಅನ್ವಯ ಒಟ್ಟು 890 ವಿಧಧ ಔಷಧಗಳ ಖರೀದಿಗಾಗಿ 880.68 ಕೋಟಿ ರು ಅನುದಾನಕ್ಕೆ ಮಂಜೂರಾತಿ ದೊರೆತಿದೆ. ಈ ಆದೇಶದ ಅನ್ವಯ ಕೆಎಸ್‌ಎಂಎಸ್‌ಸಿಎಲ್‌ ಮೂಲಕ 534 ಔಷಧಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಲು ನಿರ್ಧರಿಸಿದೆ. ಹಾಗೂ ಉಳಿದ 356 ಕಡಿಮೆ ಮೌಲ್ಯದ ಔಷಧಗಳನ್ನು ಪ್ರಚಲಿತ ನಿಯಮಾನುಸಾರ ಸ್ಥಳೀಯ ಖರೀದಿ ವಿಧಾನಗಳ ಮೂಲಕ ಖರೀದಿಸಲು ನಿರ್ಧರಿಸಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

‘ಕೆಎಸ್‌ಎಂಎಸ್‌ಸಿಎಲ್‌ನಿಂದ ಒಟ್ಟು 508 ಔಷಧಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇದುವರೆಗೆ 234 ಔಷಧಗಳಿಗೆ ಟೆಂಡರ್ ಅವಾರ್ಡ್‌ ಮಾಡಲಾಗಿದೆ. ಈ ಪೈಕಿ 151 ಔಷಧಗಳಿಗೆ ಬಿಡ್‌ದಾರರು ಭಾಗವಹಿಸಿಲ್ಲ. ಅಥವಾ ಬಿಡ್‌ದಾರರು ಅನರ್ಹರಾಗಿದ್ದಾರೆ. ಹೀಗಾಗಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ,’ ಎಂದು ವಿವರಿಸಿರುವುದು ಗೊತ್ತಾಗಿದೆ.

 

 

ಈಗಾಗಲೇ 201 ಔಷಧಗಳಿಗೆ ಖರೀದಿ ಆದೇಶಗಳನ್ನು ವಿತರಿಸಿದೆ. ಅವುಗಳಲ್ಲಿ 121 ಔಷಧಗಳು ಉಗ್ರಾಣಗಳಿಗೆ ಸರಬರಾಜಾಗಿದೆ. ಉಳಿದ 80 ಔಷಧಗಳ ಪೂರೈಕೆಯನ್ನು 30-45 ದಿನದೊಳಗಾಗಿ ಪೂರ್ಣಗೊಳಿಸಲಾಗುವುದು. ಇದಲ್ಲದೇ 37 ಔಷಧಗಳ ಟೆಂಡರ್ ಮೌಲ್ಯಮಾಪನ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧಗಳನ್ನು ಸ್ಥಳೀಯವಾಗಿ ಖರೀದಿಸಲು ಕೆಎಸ್‌ಎಂಎಸ್‌ಸಿಎಲ್‌ ಸಂಸ್ಥೆ ಮೂಲಕ 30 ಕೋಟಿ ರು ಬಿಡುಗಡೆ ಮಾಡಲು ಹಾಗೂ ಈ ಅನುದಾನದಡಿಯಲ್ಲಿ ಆರೋಗ್ಯ ಸಂಸ್ಥೆಗಳು ಔಷಧಗಳನ್ನು ಸ್ಥಳೀಯವಾಗಿ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಿದೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

 

ದಿ ಫೈಲ್‌ ಗೆ ಲಭ್ಯವಿರುವ ಮಾಹಿತಿ ಪ್ರಕಾರ  27 ಜಿಲ್ಲೆಗಳಲ್ಲಿ ಅರಿವಳಿಕೆ, ಶಸ್ತ್ರಚಿಕಿತ್ಸೆ, ತೀವ್ರ ನೋವು ಹಾಗೂ ತುರ್ತು ಮತ್ತು ಕ್ರಿಟಿಕಲ್ ಕೇರ್ ಸೇವೆಗಳಲ್ಲಿ ಬಳಸುವ ಪ್ರಮುಖ ಔಷಧಿಗಳು (Fentanyl Citrate Injection 50 mcg/ml) ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ತಿಳಿದು ಬಂದಿದೆ.

ಟೈಪ್-2 ಮಧುಮೇಹದ ಚಿಕಿತ್ಸೆಯಲ್ಲಿ ಬಳಸುವ ಬಾಯಿಯಿಂದ ಸೇವಿಸುವ ಔಷಧಿ (Sitagliptin 50 mg) ಫೈಲೇರಿಯಾ ಚಿಕಿತ್ಸೆಗೆ ಪ್ರಮುಖ ಔಷಧಿ (Diethylcarbamazine 100 mg 26) ಗಂಭೀರವಾಗಿ ಅಸ್ವಸ್ಥರಾಗಿರುವ ಅಥವಾ ಪೌಷ್ಟಿಕಾಂಶದ ಕೊರತೆಯಿರುವ ರೋಗಿಗಳಿಗೆ ಪೌಷ್ಟಿಕ ಬೆಂಬಲ ನೀಡಲು ಬಳಸುವ IV Amino Acid Infusion 200 ml, ರಕ್ತಸ್ರಾವ ಹಾಗೂ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಕೆಲವು ಚಿಕಿತ್ಸಾ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಿರುವ Vitamin K1 10 mg ಔ‍ಷಧವು 19 ಜಿಲ್ಲೆಗಳಲ್ಲಿ ಇಲ್ಲ ಎಂದು ಗೊತ್ತಾಗಿದೆ.

 

 

ರಕ್ತದೊತ್ತಡ ಮತ್ತು ಇತರ ನಿರ್ದಿಷ್ಟ ಚಿಕಿತ್ಸಾ ಸಂದರ್ಭಗಳಲ್ಲಿ ಬಳಸುವ Prazosin 5 mg17 ಜಿಲ್ಲೆಗಳಲ್ಲಿ ಕೊರತೆ ಕಂಡು ಬಂದಿದೆ. ಕೆಲವು ತುರ್ತು ಹಾಗೂ ಶಾಕ್ ಪರಿಸ್ಥಿತಿಗಳಲ್ಲಿ ಬಳಸುವ ಪ್ರಮುಖ ಕ್ರಿಟಿಕಲ್ ಕೇರ್ ಔಷಧಿಯಾಗಿರುವ Vasopressin Injection, ರಕ್ತಹೀನತೆ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಹಾಗೂ ತಾಯಂದಿರ ಆರೋಗ್ಯ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿರುವ Iron + Folic Acid, ಗಾಯದ ಆರೈಕೆ, ಡ್ರೆಸ್ಸಿಂಗ್ ಮತ್ತು ಸಾಮಾನ್ಯ ವೈದ್ಯಕೀಯ ಕ್ರಮಗಳಿಗೆ ಅಗತ್ಯವಾದ ಆಸ್ಪತ್ರೆ ವಸ್ತುವಾಗಿರುವ Absorbent Cotton Wool 11 ಜಿಲ್ಲೆಗಳಲ್ಲಿ ಕೊರತೆಯಾಗಿದೆ.

ಕ್ಯಾಲ್ಸಿಯಂ ಮತ್ತು ವಿಟಮಿನ್-D ಪೂರೈಕೆ ಹಾಗೂ ಕೊರತೆಯ ನಿರ್ವಹಣೆಗೆ ಬಳಸುವ calciam + Vitamin D3 Syrup 9 ಜಿಲ್ಲೆಗಳಲ್ಲಿಲ್ಲ. ಕಣ್ಣು ಒಣಗುವಿಕೆ ಮತ್ತು ಕಣ್ಣಿನ ಮೇಲ್ಮೈಯ ತೇವಾಂಶ ಕಾಪಾಡಲು ಬಳಸುವ Carboxymethylcellulose Eye Drops 8 ಜಿಲ್ಲೆಗಳಲ್ಲಿ ಕೊರತೆಯಾಗಿದೆ. ಆಯ್ದ ಆಸ್ಪತ್ರೆ ಹಾಗೂ ಕ್ರಿಟಿಕಲ್ ಕೇರ್ ಸಂದರ್ಭಗಳಲ್ಲಿ ಬಳಸುವ Human Albumin 5% 4 ಜಿಲ್ಲೆಗಳಲ್ಲಿ ಕೊರತೆ ಕಾಣಿಸಿಕೊಂಡಿದೆ. ಕೆಲವು ಗಂಭೀರ ಮತ್ತು ತುರ್ತು ಕ್ರಿಟಿಕಲ್ ಕೇರ್ ಪರಿಸ್ಥಿತಿಗಳಲ್ಲಿ ಬಳಸುವ ವಿಶೇಷ ದ್ರಾವಣವಾಗಿರುವ 3% Sodium Chloride 2 ಜಿಲ್ಲೆಗಳಲ್ಲಿ ಇಲ್ಲ ಎಂದು ಗೊತ್ತಾಗಿದೆ.

 

 

ವಿಶೇಷವೆಂದರೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು ಟಿ ಖಾದರ್ ಅವರ ತವರು ಜಿಲ್ಲೆ ದಕ್ಷಿಣ ಕನ್ನಡ / ಮಂಗಳೂರಿನಲ್ಲಿಯೂ ಸಹ ಇಂತಹ ಕೊರತೆ ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆಯಿಂದ ಲಭ್ಯವಿರುವ ಸ್ಟಾಕ್ ಮಾಹಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಔಷಧಿಗಳು ಮತ್ತು ಆರೋಗ್ಯ ವಸ್ತುಗಳು ಶೂನ್ಯ ಸ್ಟಾಕ್‌ನಲ್ಲಿರುವುದು ದಾಖಲಾಗಿದೆ. ಸಚಿವರ ತವರು ಕ್ಷೇತ್ರಕ್ಕೆ ಸಂಬಂಧಿಸಿದ ಶೂನ್ಯ ಸ್ಟಾಕ್ ಸಮಸ್ಯೆ ಒಂದೇ ವರ್ಗಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಮಧುಮೇಹ ನಿರ್ವಹಣೆ, ರಕ್ತಸ್ರಾವ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಚಿಕಿತ್ಸೆ ಹಾಗೂ ಫೈಲೇರಿಯಾ ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳು ಸೇರಿವೆ.

ಗೋದಾಮುಗಳಲ್ಲಿಯೂ ಇಲ್ಲ

ಮತ್ತೊಂದು ಆತಂಕಕಾರಿ ಸಂಗತಿಯೆಂದರೆ ಕೆಎಸ್‌ಎಂಎಸ್‌ಸಿಎಲ್‌ ಗೋದಾಮುಗಳ ಸ್ಟಾಕ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯ ಔಷಧಿಗಳು ಮತ್ತು ಅಗತ್ಯ ಆರೋಗ್ಯ ವಸ್ತುಗಳು ದಾಸ್ತನಿಲ್ಲ. ನಿಗಮದ ಹಲವು ಗೋದಾಮುಗಳಲ್ಲಿ ಶೂನ್ಯ ಸ್ಟಾಕ್‌ನಲ್ಲಿರುವುದು ದಾಖಲಾಗಿದೆ.

 

 

Noradrenaline Concentrate Injection 2 mg/ml, Metformin SR 1000 mg, Cefixime 200 mg Human Albumin 5% , Sodium Valproate 200 mg , Ondansetron Injection 2 mg/ml, Sanitary Napkins , Human Albumin 20% , Hyoscine Butyl Bromide 10 mg, Ceftriaxone + Sulbactam Injection , Iron + Folic Acid , Amlodipine 5 mg , Lorazepam 1 m Diclofenac Injection, Azithromycin 250 mg , Bisacodyl 5 mg , Ciprofloxacin 250 mg , Domperidone 10 mg , Fluconazole 200 mg , Paracetamol 500 mg ಔಷಧಗಳು ಹಲವು ಜಿಲ್ಲೆಗಳಲ್ಲಿ ಲಭ್ಯವಿಲ್ಲ.

 

 

ಮಂಗಳೂರಿನ ಗೋದಾಮಿನಲ್ಲಿಯೂ Cefixime, Azithromycin, Ciprofloxacin, Iron + Folic Acid, Metformin SR, Sodium Valproate, Ceftriaxone + Sulbactam, Diclofenac Injection, Ondansetron Injection, Noradrenaline, Human Albumin 20%, Human Albumin 5% ಮತ್ತು Sanitary Napkins ಸೇರಿದಂತೆ ಹಲವು ವಸ್ತುಗಳ ಕೊರತೆ ಕಾಣಿಸಿಕೊಂಡಿದೆ ಎಂದು ಗೊತ್ತಾಗಿದೆ.

‘ಔಷಧಿಯನ್ನು ಸಮಯಕ್ಕೆ ಏಕೆ ಖರೀದಿಸಲಾಗಲಿಲ್ಲ, ಯಾವ ಟೆಂಡರ್ ಬಾಕಿ ಇತ್ತು? ಟೆಂಡರ್ ತಿರಸ್ಕೃತವಾಗಿತ್ತೇ ಅಥವಾ ಮರುಟೆಂಡರ್ ಮಾಡಲಾಗಿತ್ತೇ?, ತಾಂತ್ರಿಕವಾಗಿ ಅರ್ಹ ಮತ್ತು ಸ್ಪಂದಿಸಿದ ಬಿಡ್‌ದಾರರಿದ್ದರೇ? ಉಲ್ಲೇಖಿಸಿದ ದರವು ಕೆಎಸ್‌ಎಂಎಸ್‌ಸಿಎಲ್‌ನ ಅಂದಾಜು ದರದೊಳಗಿತ್ತೇ,’ ಎಂದು ಸರಬರಾಜುದಾರರೊಬ್ಬರು ಪ್ರಶ್ನಿಸುತ್ತಾರೆ.

 

 

ಕೆಎಸ್‌ಎಂಎಸ್‌ಸಿಎಲ್‌ ಪ್ರಸಕ್ತ ಸಾಲಿನಲ್ಲಿ ಕರೆದಿರುವ ಟೆಂಡರ್‍‌ನಲ್ಲಿ ನಿರೀಕ್ಷೆಯಂತೆ ಬಿಡ್‌ದಾರರು ಭಾಗವಹಿಸುತ್ತಿಲ್ಲ. 11 ಆಗಸ್ಟ್ 2026ರಲ್ಲಿನ ಪೋರ್ಟ್‌ಲ್‌ನಲ್ಲಿ 86 ಟೆಂಡರ್‍‌ಗಳು ಇನ್ನೂ ಮೌಲ್ಯಮಾಪನದಲ್ಲಿದ್ದವು. 37 ಟೆಂಡರ್‍‌ಗಳಿಗೆ ಒಂದೇ ಒಂದು ಬಿಡ್‌ ಸಲ್ಲಿಕೆಯಾಗಿಲ್ಲ. 31 ಟೆಂಡರ್‍‌ಗಳಲ್ಲಿ ಮೌಲ್ಯಮಾಪನವೇ ಸ್ಥಗಿತಗೊಂಡಿದೆ. 17 ಟೆಂಡರ್‍‌ಗಳನ್ನು ರದ್ದುಗೊಳಿಸಿದೆ. ಒಂದು ಟೆಂಡರ್‌ನಲ್ಲಿ ಹಲವು ಉತ್ಪನ್ನಗಳು ಅಥವಾ ವಸ್ತುಗಳು ಇರಬಹುದು. ಆದ್ದರಿಂದ ಮೇಲಿನ ಎರಡೂ ಅಂಕಿಅಂಶಗಳನ್ನು ನೇರವಾಗಿ ಹೋಲಿಸುವುದು ಸೂಕ್ತವಲ್ಲ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಹಿಂದಿನ ಪದ್ಧತಿಯ ಪ್ರಕಾರ ಒಂದು ಟೆಂಡರ್‌ನಲ್ಲಿ ಒಬ್ಬನೇ ತಾಂತ್ರಿಕವಾಗಿ ಅರ್ಹ ಬಿಡ್‌ದಾರ ಇದ್ದರೆ; ಉತ್ಪನ್ನವು ನಿಗದಿತ ವಿಶೇಷಣಗಳನ್ನು ಪೂರೈಸಿದ್ದರೆ; ಬಿಡ್‌ದಾರ ಅರ್ಹನಾಗಿದ್ದರೆ; ಮತ್ತು ಉಲ್ಲೇಖಿಸಿದ ದರ ಸಮಂಜಸವಾಗಿದ್ದು KSMSCLನ ಅಂದಾಜು ದರದೊಳಗಿದ್ದರೆ, ಕೇವಲ ಒಬ್ಬನೇ ಬಿಡ್‌ದಾರ ಇದ್ದಾನೆ ಎಂಬ ಕಾರಣಕ್ಕೆ ಖರೀದಿ ಪ್ರಕ್ರಿಯೆಯನ್ನು ಸ್ವಯಂಚಾಲಿತವಾಗಿ ಕೈಬಿಡುವುದು ಅನಿವಾರ್ಯವಾಗಿರಲಿಲ್ಲ.

ಆದರೆ ಈಗ ಇದೇ ರೀತಿಯ ಟೆಂಡರ್‌ಗಳನ್ನು ತಿರಸ್ಕರಿಸಿ ಅಥವಾ ರದ್ದುಪಡಿಸಿ ಮರುಟೆಂಡರ್ ಮಾಡಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಈಗಾಗಲೇ ಹಲವು ವಸ್ತುಗಳಿಗೆ ಯಾವುದೇ ಬಿಡ್‌ಗಳು ಬರುತ್ತಿಲ್ಲ. Single-Bid ಟೆಂಡರ್‌ಗಳನ್ನು ರದ್ದುಪಡಿಸಿದ ನಂತರ ಮುಂದಿನ ಟೆಂಡರ್‌ನಲ್ಲಿ ಅದೇ ಬಿಡ್‌ದಾರರು ಅಥವಾ ಇತರರು ಭಾಗವಹಿಸುತ್ತಾರೆ ಎಂಬ ಖಾತರಿ ಏನು ಎಂಬ ಪ್ರಶ್ನೆಯನ್ನು ಸರಬರಾಜುದಾರರೊಬ್ಬರು ಮುಂದಿರಿಸುತ್ತಾರೆ.

ಕೊನೆಗೆ ಆ ವಸ್ತುಗಳೂ No-Bid ಆಗಬಹುದು. ನಂತರ ಸರ್ಕಾರವು ಅವುಗಳನ್ನು ಸ್ಥಳೀಯ ಖರೀದಿಯ ಮೂಲಕ ಹೆಚ್ಚಿನ ದರದಲ್ಲಿ ಖರೀದಿಸಬೇಕಾದ ಪರಿಸ್ಥಿತಿ ಉಂಟಾಗಬಹುದು. ‘ತಾಂತ್ರಿಕವಾಗಿ ಅರ್ಹ ಬಿಡ್‌ದಾರನು ಕೆಎಸ್‌ಎಂಎಸ್‌ಸಿಎಲ್‌Lನ ಅಂದಾಜು ದರದೊಳಗೆ ದರ ನೀಡಿದ್ದಾಗ, ಅಗತ್ಯವಿದ್ದ ಔಷಧಿಯನ್ನು ಏಕೆ ಖರೀದಿಸಲಿಲ್ಲ,’ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.

ಇನ್ನು ಕೆಎಸ್‌ಎಂಎಸ್‌ಸಿಎಲ್‌ನ ಟೆಂಡರ್ ತಂಡವು ಟೆಂಡರ್‌ಗಳನ್ನು ಮೌಲ್ಯಮಾಪನ ಮಾಡಿ ಖರೀದಿ ಆದೇಶ ನೀಡುವವರೆಗೆ ಕನಿಷ್ಠ ಆರು ತಿಂಗಳು ತೆಗೆದುಕೊಳ್ಳುತ್ತದೆ. ಮರುಟೆಂಡರ್ ಮಾಡಿದರೆ ಖರೀದಿ ಇನ್ನಷ್ಟು ವಿಳಂಬವಾಗಬಹುದು. ಅದರ ಪರಿಣಾಮವಾಗಿ ಕೊನೆಗೆ ಬಡ ಮತ್ತು ಸಾಮಾನ್ಯ ರೋಗಿಗಳು ಅಗತ್ಯ ಔಷಧಿಗಳ ಕೊರತೆಯನ್ನು ಎದುರಿಸುವ ಪರಿಸ್ಥಿತಿ ಉಂಟಾಗಬಹುದು. ಪ್ರತಿಯೊಂದು ಸಮಸ್ಯೆಗೂ ಮರುಟೆಂಡರ್ ಸಾಮಾನ್ಯ ಪರಿಹಾರವಾಗಬಾರದು. ಖರೀದಿ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಪರಿಸ್ಥಿತಿಗೂ ಒಂದೇ ರೀತಿಯ ಪರಿಹಾರ ಅನ್ವಯಿಸುವುದು ಸೂಕ್ತವಲ್ಲ. ಹಲವು ಬಿಡ್‌ಗಳು ಬಂದಿದ್ದು, ಅವುಗಳ ದರಗಳು ಅಥವಾ ಇತರ ಷರತ್ತುಗಳು ಸ್ವೀಕಾರಾರ್ಹವಾಗಿಲ್ಲ → ಮರುಟೆಂಡರ್ ಮಾಡುವ ಅಗತ್ಯವನ್ನು ಪರಿಶೀಲಿಸಬಹುದು.

ಯಾವುದೇ ಬಿಡ್ ಬಂದಿಲ್ಲ → ಬಿಡ್‌ದಾರರು ಭಾಗವಹಿಸದಿರುವ ಮೂಲ ಕಾರಣವನ್ನು ಗುರುತಿಸಿ, ಅಗತ್ಯವಿದ್ದರೆ ಟೆಂಡರ್ ಷರತ್ತುಗಳನ್ನು ಪರಿಶೀಲಿಸಬೇಕು. ಒಬ್ಬ ತಾಂತ್ರಿಕವಾಗಿ ಅರ್ಹ ಬಿಡ್‌ದಾರ + ನಿಯಮಾನುಸಾರ ಉತ್ಪನ್ನ + ಸಮಂಜಸ ದರ + ಕೆಎಸ್‌ಎಂಎಸ್‌ಸಿಎಲ್‌ನ ಅಂದಾಜು ದರದೊಳಗಿನ ಬೆಲೆ + ನಿಜವಾದ ಅಗತ್ಯ → ಅನ್ವಯಿಸುವ ನಿಯಮಗಳ ಅಡಿಯಲ್ಲಿ ಖರೀದಿ ಮುಂದುವರಿಸಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸುತ್ತಿಲ್ಲ.

ಹಲವು ಬಿಡ್‌ದಾರರು ಇದ್ದರೂ ತಾಂತ್ರಿಕ ಮೌಲ್ಯಮಾಪನದ ನಂತರ ಒಬ್ಬನೇ ಅರ್ಹ ಬಿಡ್‌ದಾರ ಉಳಿದಿದ್ದರೆ, ಇತರರು ತಾಂತ್ರಿಕ ಮೌಲ್ಯಮಾಪನದಲ್ಲಿ ವಿಫಲರಾದ ಕಾರಣಕ್ಕೆ ಮಾತ್ರ ಉಳಿದ ಅರ್ಹ ಬಿಡ್‌ದಾರನನ್ನು ಸ್ವಯಂಚಾಲಿತವಾಗಿ ತಿರಸ್ಕರಿಸುವುದು ಸಮಂಜಸವೇ ಎಂಬುದನ್ನು ಪರಿಶೀಲಿಸಬೇಕು.

ಬಿಡ್‌ದಾರರು ಏಕೆ ಭಾಗವಹಿಸುತ್ತಿಲ್ಲ?

ಈಗಾಗಲೇ 103 ಶೂನ್ಯ ಬಿಡ್‌ಗಳು ಎಂದು ಗುರುತಿಸಿದೆ. ವಾಸ್ತವಿಕತೆಗೆ ಹೊಂದಿಕೆಯಾಗದ ಅಂದಾಜು ದರಗಳು, ಪಾವತಿಯಲ್ಲಿ ಆಗುತ್ತಿರುವ ವಿಳಂಬ, ನಿರ್ಬಂಧಿತ ಅರ್ಹತಾ ಷರತ್ತುಗಳು, ತಾಂತ್ರಿಕ ವಿಶೇಷಣಗಳು, ಶೆಲ್ಫ್-ಲೈಫ್ ಅವಶ್ಯಕತೆಗಳು, ಹಿಂದಿನ ಕಾರ್ಯಕ್ಷಮತೆಗೆ ಸಂಬಂಧಿಸಿದ ಷರತ್ತುಗಳು, ಗುಣಮಟ್ಟದ ಅವಶ್ಯಕತೆಗಳು, ಖರೀದಿ ಆದೇಶ ನೀಡುವಲ್ಲಿನ ವಿಳಂಬ ಅಥವಾ ವಾಣಿಜ್ಯ ಷರತ್ತುಗಳಿಂದಾಗಿ ಅನೇಕ ಬಿಡ್‌ದಾರರು ಟೆಂಡರ್‍‌ಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಗೊತ್ತಾಗಿದೆ.

ದೀರ್ಘಕಾಲ ಒಂದೇ ಸ್ಥಾನದಲ್ಲಿರುವ ಅಧಿಕಾರಿಗಳು

ಕೆಎಸ್‌ಎಂಎಸ್‌ಸಿಎಲ್‌ನಲ್ಲಿನ ಟೆಂಡರ್ ಮತ್ತು ಔಷಧಿ ಖರೀದಿ ಪ್ರಕ್ರಿಯೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಕೆಲವು ಅಧಿಕಾರಿಗಳು ಅಥವಾ ಸಿಬ್ಬಂದಿ ಹಲವು ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ಮುಂದುವರಿದಿದ್ದಾರೆ. ಹೀಗಾಗಿ ಟೆಂಡರ್‍‌ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಔಷಧಿ ಖರೀದಿ, ಟೆಂಡರ್ ಮೌಲ್ಯಮಾಪನ, ಬಿಡ್‌ದಾರರೊಂದಿಗೆ ವ್ಯವಹಾರ ಮತ್ತು ಮರುಟೆಂಡರ್ ನಿರ್ಧಾರಗಳಂತಹ ಸೂಕ್ಷ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಅಧಿಕಾರಿಗಳು ದೀರ್ಘಕಾಲ ಒಂದೇ ಸ್ಥಾನದಲ್ಲಿ ಉಳಿದಿದ್ದಾರೆ. ಹೀಗೆ ಒಂದೇ ವ್ಯಕ್ತಿಗಳ ಕೈಯಲ್ಲಿ ನಿರಂತರ ನಿರ್ಧಾರಾತ್ಮಕ ಪ್ರಭಾವ ಕೇಂದ್ರೀಕೃತವಾಗುವ ಸಾಧ್ಯತೆ ಇದೆ ಎಂದು ಅರೋಪಿಸುತ್ತಾರೆ ಸರಬರಾಜುದಾರರೊಬ್ಬರು.

 

ಕೆಎಸ್‌ಎಂಎಸ್‌ಸಿಎಲ್‌ನ ಫಾರ್ಮಸಿಸ್ಟ್ ಒಬ್ಬರು ಐದು ವರ್ಷಕ್ಕೂ ಹೆಚ್ಚು ಕಾಲ ಮುಂದುವರಿದಿದ್ದಾರೆ ಎಂಬ ಆರೋಪವಿದೆ. ಅವರನ್ನು ವರ್ಗಾವಣೆ ಮಾಡದೆ ಮುಂದುವರಿಸಿರುವುದಕ್ಕೆ ರಾಜಕೀಯ ಪ್ರಭಾವ ಕಾರಣವಾಗಿದೆ ಎಂಬ ಮಾತೂ ಕೇಳೀ ಬಂದಿದೆ.
‘ಒಬ್ಬನೇ ಫಾರ್ಮಸಿಸ್ಟ್ ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಮುಂದುವರಿಯಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ, ಅವರನ್ನು ನಿಯಮಾನುಸಾರ ವರ್ಗಾವಣೆ ಮಾಡದೆ ಮುಂದುವರಿಸಿರುವುದಕ್ಕೆ ಕಾರಣವೇನು, ಅವರನ್ನು ಮುಂದುವರಿಸಲು ಯಾವುದೇ ವಿಶೇಷ ಅನುಮತಿ ಅಥವಾ ಸರ್ಕಾರದ ಆದೇಶವಿದೆಯೇ? ಇದ್ದರೆ ಅದರ ಆಧಾರವೇನು,’ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಟೆಂಡರ್ ಮತ್ತು ಔಷಧಿ ಖರೀದಿಯಂತಹ ಸೂಕ್ಷ್ಮ ಕ್ಷೇತ್ರದಲ್ಲಿ ಒಬ್ಬ ಅಧಿಕಾರಿಯು ದೀರ್ಘಕಾಲ ಒಂದೇ ಸ್ಥಾನದಲ್ಲಿ ಮುಂದುವರಿದರೆ, ಬಿಡ್‌ದಾರರನ್ನು ಆಯ್ಕೆಮಾಡುವಲ್ಲಿ ಪಕ್ಷಪಾತ, ಅಧಿಕಾರಿಗಳಿಗೆ ತಪ್ಪು ಮಾರ್ಗದರ್ಶನ ನೀಡಿದಂತಾಗುತ್ತದೆ. ಟೆಂಡರ್‌ಗಳನ್ನು ಅನಗತ್ಯವಾಗಿ ಮರು ಕರೆಸುವುದು ಅಥವಾ ಕಿಕ್‌ಬ್ಯಾಕ್‌ಗೆ ಸಂಬಂಧಿಸಿದ ಹಸ್ತಕ್ಷೇಪ ನಡೆಯಲು ದಾರಿಮಾಡಿಕೊಟ್ಟಂತಾಗುತ್ತದೆ.

ಕೆಲವು ಅಧಿಕಾರಿಗಳು ತಮಗೆ ಅನುಕೂಲವಾಗುವ ಬಿಡ್‌ದಾರರನ್ನು ಆಯ್ಕೆ ಮಾಡುವುದು, ಇತರರನ್ನು ತಿರಸ್ಕರಿಸುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಕಿಕ್‌ಬ್ಯಾಕ್ ಸಿಗದ ಸಂದರ್ಭಗಳಲ್ಲಿ ಟೆಂಡರ್‌ಗಳನ್ನು ಮರುಟೆಂಡರ್ ಮಾಡಿಸುವುದು ಎಂಬ ಆರೋಪಗಳೂ ಕೇಳಿಬಂದಿವೆ.

 

 

‘ವಾಸ್ತವವಾಗಿ, ಟೆಂಡರ್‌ಗಳಲ್ಲಿ ಮರುಮರು ವಿಳಂಬ, ಸಿಂಗಲ್ ಬಿಡ್‌ ತಿರಸ್ಕಾರ ತಿರಸ್ಕಾರ, ಬಿಡ್‌ದಾರರೇ ಭಾಗವಹಿಸದಿರುವುದು, ಮರುಟೆಂಡರ್, ಸ್ಥಳೀಯ ಮಟ್ಟದಲ್ಲಿ ಖರೀದಿ ಆದೇಶ ಮತ್ತು ನಂತರ ಕಾಣಿಸಿಕೊಳ್ಳುವ Zero Stock ನ್ನು ಗಮನಿಸಿದಾಗ ಟೆಂಡರ್ ಪ್ರಕ್ರಿಯೆಯಲ್ಲಿ ದೀರ್ಘಕಾಲದಿಂದ ಜವಾಬ್ದಾರಿ ನಿರ್ವಹಿಸುತ್ತಿರುವ ಅಧಿಕಾರಿಗಳ ಪಾತ್ರವೂ ದಟ್ಟವಾಗಿದೆ,’ ಎಂದು ಶಂಕಿಸುತ್ತಾರೆ ಸರಬರಾಜುದಾರರು.

Hot this week

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಹಿಂದುಳಿದ ಸಮುದಾಯ ಅಭಿವೃದ್ಧಿ ನಿಗಮಗಳಿಗೆ 473.41 ಕೋಟಿ ಅನುದಾನ ಹಂಚಿಕೆ; ನಾಲ್ಕೂವರೆ ತಿಂಗಳಾದರೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ

ಬೆಂಗಳೂರು; ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ...
Please Scan to make Your Contribution

Topics

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

Related Articles

Popular Categories

error: Content is protected !!