ಬೆಂಗಳೂರು; ವಿಧಾನಸೌಧದ ಆವರಣದಲ್ಲಿ ನಿರ್ಮಿಸಿರುವ ನಾಡದೇವಿ ಭುವನೇಶ್ವರಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ದಿನದಂದು ವಿಧಾನಸೌಧ, ವಿಕಾಸಸೌಧ ಮತ್ತ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸದೆಯೇ ವಿದ್ಯುತ್ ದೀಪಾಲಂಕಾರ ಕಾಮಗಾರಿ ನಡೆಸಿದೆ ಎಂದು ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ಮಹಾಲೆಕ್ಕಪರಿಶೋಧಕರ ಕಚೇರಿ (ಲೆಕ್ಕಪರಿಶೋಧನೆ–I) ಯು ಆಕ್ಷೇಪ ವ್ಯಕ್ತಪಡಿಸಿದೆ.
₹5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಸರಕು ಮತ್ತು ಸೇವೆಗಳ ಖರೀದಿಯನ್ನು ಸಾಮಾನ್ಯವಾಗಿ ಟೆಂಡರ್ ಪ್ರಕ್ರಿಯೆಯ ಮೂಲಕವೇ ಮಾಡಬೇಕು. ಈ ವಿದ್ಯುತ್ ಅಲಂಕಾರ ಕಾಮಗಾರಿ ಮೊತ್ತವು 78,62,211 ರು ಗಳಷ್ಟಿತ್ತು. ಆದರೂ ಸಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿರಲಿಲ್ಲ. ಅಲ್ಲದೇ ಕೆಲಸವನ್ನು ವಹಿಸುವ ಮೊದಲು ಇಲಾಖೆಯು ಯಾವುದೇ ವಿವರವಾದ ಅಂದಾಜು ಅಥವಾ ಟೆಂಡರ್ ಆಧಾರಿತ ವೆಚ್ಚ ಮೌಲ್ಯಮಾಪನವನ್ನು ಸಿದ್ಧಪಡಿಸಿರಲಿಲ್ಲ. ಇದರಿಂದ ಗುತ್ತಿಗೆದಾರನಿಗೆ ಅನಗತ್ಯ ಹಾಗೂ ಅನರ್ಹವಾದ ಲಾಭ ದೊರೆತಿರುವ ಸಾಧ್ಯತೆಯೂ ಕಂಡುಬರುತ್ತದೆ ಎಂದು ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ಮಹಾಲೆಕ್ಕಪರಿಶೋಧಕರ ಕಚೇರಿ (ಲೆಕ್ಕಪರಿಶೋಧನೆ–I) ಯು ಹೇಳಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಜುಲೈ 16ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ದಿ ಫೈಲ್ಗೆ ಲಭ್ಯವಾಗಿದೆ.
ವಿಧಾನಸೌಧ ಮತ್ತು ವಿಕಾಸ ಸೌಧ ಆವರಣದಲ್ಲಿ 25 ಅಡಿ ಎತ್ತರದ ಕಂಚಿನ ನಾಡದೇವಿ ಭುವನೇಶ್ವರಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ 2025ರ ಜನವರಿ 26 ಮತ್ತು 27ರಂದು ಬೆಂಗಳೂರಿನ ಸರ್ಕಾರಿ ಕಚೇರಿಗಳು, ವಿಧಾನಸೌಧದ ಭವ್ಯ ಮೆಟ್ಟಿಲು ಮತ್ತು ವಿಕಾಸ ಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು 2025ರ ಜನವರಿ 24ರಂದು ಸೂಚಿಸಿದ್ದರು.

ಅದರೆ ಇಲಾಖೆಯು ಈ ಸಂಬಂಧ ಟೆಂಡರ್ ಪ್ರಕ್ರಿಯೆಯನ್ನೇ ನಡೆಸಿರಲಿಲ್ಲ. ಬದಲಿಗೆ ಇಲಾಖೆಯು ವಿಧಾನಸೌಧ ಹಾಗೂ ವಿಕಾಸಸೌಧದ ವಿದ್ಯುತ್ ಅಲಂಕಾರ ಮತ್ತು ಅಲಂಕಾರಿಕ ಬೆಳಕಿನ ಕಾಮಗಾರಿಗಳನ್ನು ಮಂಡ್ಯದ ಶಿವ ಎಲೆಕ್ಟ್ರಿಕಲ್ ಮತ್ತು ಎಂಟರ್ ಪ್ರೈಸೆಸ್ ಸಂಸ್ಥೆಗೆ ನೇರವಾಗಿ ವಹಿಸಿಕೊಟ್ಟಿತು.
ವಿಕಾಸಸೌಧ, ಗಾಂಧಿ ಪ್ರತಿಮೆ, ಗ್ರ್ಯಾಂಡ್ ಮೆಟ್ಟಿಲುಗಳು, ವಿಧಾನಸಭೆ ಕಟ್ಟಡ ಸೇರಿದಂತೆ ಇತರೆ ಸ್ಥಳಗಳಿಗೆ ಬೆಳಕಿನ ಅಲಂಕಾರ ಮಾಡಲಾಗಿತ್ತು. ಈ ಸಂಬಂಧ ಲೋಕೋಪಯೋಗಿ ಇಲಾಖೆಯ ವಿಧಾನಸೌಧದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಬೆಳಕಿನ ಅಳವಡಿಕೆಗಳನ್ನು ಪ್ರಮಾಣೀಕರಿಸಿದ್ದರು. ಈ ಕಾಮಗಾರಿಗಳಿಗೆ ಒಟ್ಟು ₹78.62 ಲಕ್ಷ ವೆಚ್ಚವನ್ನು ಪಾವತಿಸಲಾಗಿದೆ ಎಂದು ದಾಖಲಾಗಿತ್ತು.
ಗಾಂಧಿ ಪ್ರತಿಮೆ ಸಮೀಪದ ವಿಕಾಸಸೌಧದಲ್ಲಿ ದೀಪಗಳ ಅಳವಡಿಕೆಗೆ ಕ್ರಮವಾಗಿ ಜನವರಿ 26ರಂದು 6,81,723.90 ರು., ಜನವರಿ 27ರಂದು 5,11,292.93 ರು ಸೇರಿ ಒಟ್ಟಾರೆ 11,93,016.83 ರು ವೆಚ್ಚವಾಗಿತ್ತು. ಕಬ್ಬನ್ ಪಾರ್ಕ್ ಸಮೀಪದ ವಿಕಾಸಸೌಧದಲ್ಲಿ ಬೆಳಕಿನ ಅಲಂಕಾರಕ್ಕಾಗಿ ಜನವರಿ 26ರಂದು 6,70,953.60 ರು, ಜನವರಿ 27ರಂದು 5,03,215.20 ರು ಸೇರಿ ಒಟ್ಟಾರೆ ಎರಡು ದಿನಕ್ಕೆ 11,74,168.80 ರು ವೆಚ್ಚವಾಗಿತ್ತು. ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲು ಜನವರಿ 26ರಂದು 7,79,887.80 ರು, ಜನವರಿ 27ರಂದು 5,84,915.85 ರು ಸೇರಿ ಒಟ್ಟಾರೆ ಎರಡು ದಿನಗಳಿಗೆ 13,64,803.65 ರು ವೆಚ್ಚವಾಗಿತ್ತು.

ಅದೇ ರೀತಿ ವಿಧಾನಸೌಧದ ಭವ್ಯ ಮೆಟ್ಟಿಲುಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಜನವರಿ 26ರಂದು 7,97,257.80 ರು., ಜನವರಿ 27ರಂದು 5,97,943.35 ರು ಸೇರಿ ಒಟ್ಟು 13,95,201.15 ರು ವೆಚ್ಚವಾಗಿತ್ತು. ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯ ಸಮೀಪದಲ್ಲಿರುವ ವಿಧಾನಸಭೆ ಕಟ್ಟಡವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಜನವರಿ 26ರಂದು 8,70,576.30 ರು., ಜನವರಿ 27ರಂದು 6,52,932.22 ರು ಸೇರಿ ಒಟ್ಟು 15,23,508.52 ರು ವೆಚ್ಚವಾಗಿತ್ತು.

ಹಾಗೆಯೇ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಡಾ. ಬಿ.ಆರ್. ಅಂಬೇಡ್ಕರ್, ದೇವರಾಜ ಅರಸು, ನಿಜಲಿಂಗಪ್ಪ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗಳ ಸುತ್ತಮುತ್ತ ದೀಪಾವಳಿ ಅಲಂಕಾರ ಮಾಡಲು ಜನವರಿ 26ರಂದು 6,92,292.60 ರು , ಜನವರಿ 27ರಂದು 5,19,219.45 ರು ಸೇರಿ ಒಟ್ಟು 12,11,512.05 ರು ವೆಚ್ಚವಾಗಿತ್ತು. ಒಟ್ಟಾರೆ ಜನವರಿ 26ರಂದು 44,92,692 ರು, ಜನವರಿ 27ರಂದು 33,69,519 ರು ಸೇರಿ ಒಟ್ಟಾರೆ ಎರಡು ದಿನಕ್ಕೆ 78,62,211 ರು ವೆಚ್ಚವಾಗಿದೆ ಎಂದು ಲೋಕೋಪಯೋಗಿ ಇಲಾಖೆಯು ಬಿಲ್ ಸಿದ್ಧಪಡಿಸಿತ್ತು.

ಆಡಿಟ್ ವೇಳೆ ಕಂಡು ಬಂದ ವ್ಯತ್ಯಾಸಗಳೇನು?
ಈ ಕಾಮಗಾರಿ ಸಂಬಂಧ ಲೋಕೋಪಯೋಗಿ ಇಲಾಖೆಯು ನೀಡಿದ್ದ ದಾಖಲೆಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಅಲ್ಲದೇ ಹಲವು ವ್ಯತ್ಯಾಸ ಮತ್ತು ಲೋಪಗಳನ್ನು ಪತ್ತೆ ಹಚ್ಚಿದ್ದಾರೆ.

ಸ್ಪರ್ಧಾತ್ಮಕ ಟೆಂಡರ್ ಆಹ್ವಾನಿಸದೆ ಕಾಮಗಾರಿ ನೀಡಿರುವುದನ್ನು ಲೆಕ್ಕ ಪರಿಶೋಧಕರು ಪರಿಶೀಲನೆ ವೇಳೆ ಬಯಲು ಮಾಡಿದ್ದಾರೆ. ಕರ್ನಾಟಕ ಸಾರ್ವಜನಿಕ ಖರೀದಿಗಳಲ್ಲಿನ ಪಾರದರ್ಶಕತೆ (KTPP) ಕಾಯ್ದೆ ಹಾಗೂ ನಿಯಮಗಳ ಪ್ರಕಾರ, ₹5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಸರಕು ಮತ್ತು ಸೇವೆಗಳ ಖರೀದಿಯನ್ನು ಸಾಮಾನ್ಯವಾಗಿ ಟೆಂಡರ್ ಪ್ರಕ್ರಿಯೆಯ ಮೂಲಕವೇ ಮಾಡಬೇಕು.

ಆದರೆ, ₹78,62,211 ಮೊತ್ತದ ಕಾಮಗಾರಿಯನ್ನು ಯಾವುದೇ ಟೆಂಡರ್ ಆಹ್ವಾನಿಸದೆ ಶಿವ ಎಲೆಕ್ಟ್ರಿಕಲ್ & ಎಂಟರ್ಪ್ರೈಸಸ್ ಸಂಸ್ಥೆಗೆ ವಹಿಸಲಾಗಿತ್ತು. ಕೆಟಿಪಿಪಿ ಕಾಯ್ದೆಯ ಪ್ರಕಾರ, ಸರ್ಕಾರದ ಇಲಾಖೆಗಳು ₹5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಾಗ ಕಾಯ್ದೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಆದಾಗ್ಯೂ, ಈ ಕಾಮಗಾರಿಯನ್ನು ನೇರವಾಗಿ ಸಂಸ್ಥೆಗೆ ನೀಡಲು ಕಾರಣವೇನು ಎಂಬುದನ್ನು ಲೆಕ್ಕಪರಿಶೋಧನೆ ದೃಢಪಡಿಸಲು ಸಾಧ್ಯವಾಗಲಿಲ್ಲ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ. ಅದೇ ರೀತಿ ಟೆಂಡರ್ ಕರೆಯದಿರುವ ಕುರಿತು ಯಾವುದೇ ದಾಖಲಾತಿಯಲ್ಲೂ ಕಾರಣಗಳನ್ನು ದಾಖಲಿಸಿರಲಿಲ್ಲ. ಕೆಟಿಪಿಪಿ ನಿಯಮಗಳ ನಿಯಮ 4(ಜಿ) ಅಡಿಯಲ್ಲಿ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ಪಡೆಯಲು ಸಮರ್ಥ ಪ್ರಾಧಿಕಾರವು ಕಾರಣಗಳನ್ನು ದಾಖಲಿಸಿ, ಅಗತ್ಯ ಅನುಮೋದನೆ ಪಡೆಯಬೇಕಾಗಿತ್ತು ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಅವಲೋಕಿಸಿರುವುದು ಗೊತ್ತಾಗಿದೆ.

ಮರುಬಳಕೆ ಮಾಡಬಹುದಾದ ವಿದ್ಯುತ್ ಅಳವಡಿಕೆಗಳಿಗೆ ಗಣನೀಯ ಮೊತ್ತ ಪಾವತಿಸಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ. ಗುತ್ತಿಗೆದಾರರು ಎರಡನೇ ದಿನ ಅಂದರೇ 2025ರ ಜನವರಿ 27ರಂದು ಈ ಕಾಮಗಾರಿಗಾಗಿ ಮೊದಲ ದಿನದ ವೆಚ್ಚದ 75 ಶೇಕಡಾ ಮೊತ್ತವನ್ನು ಬಿಲ್ ರೂಪದಲ್ಲಿ ಸಲ್ಲಿಸಿದ್ದರು. ಮೊದಲ ದಿನ ಅಳವಡಿಸಲಾಗಿದ್ದ ಬಹುತೇಕ ಬೆಳಕು ಹಾಗೂ ಅಲಂಕಾರ ಸಾಮಗ್ರಿಗಳನ್ನು ಎರಡನೇ ದಿನವೂ ಮರುಬಳಕೆ ಮಾಡಲಾಗಿತ್ತು. ಹೀಗಾಗಿ ಎರಡನೇ ದಿನಕ್ಕೆ ಕಾರ್ಮಿಕ ವೆಚ್ಚ, ಡೀಸೆಲ್ ವೆಚ್ಚ ಹಾಗೂ ಇತರೆ ಸಾಂದರ್ಭಿಕ ವೆಚ್ಚಗಳಂತಹ ಹೆಚ್ಚುವರಿ (Incremental) ಖರ್ಚುಗಳನ್ನು ಮಾತ್ರ ಗುತ್ತಿಗೆದಾರರು ಕ್ಲೈಮ್ ಮಾಡಬೇಕಾಗಿತ್ತು.
ಆದರೆ, ಸಮರ್ಪಕವಾದ ಸಮರ್ಥನೆ ಅಥವಾ ನ್ಯಾಯೋಚಿತ ಕಾರಣವಿಲ್ಲದೆ, ಗುತ್ತಿಗೆದಾರರು ಮೊದಲ ದಿನದ ವೆಚ್ಚದ 75 ಶೇಕಡಾ ಮೊತ್ತಕ್ಕೆ ಸಮನಾದ ಹಣವನ್ನು ಮತ್ತೊಮ್ಮೆ ಕ್ಲೈಮ್ ಮಾಡಿರುವುದನ್ನು ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಕೆಲಸವನ್ನು ವಹಿಸುವ ಮೊದಲು ಇಲಾಖೆಯು ಯಾವುದೇ ವಿವರವಾದ ಅಂದಾಜು ಅಥವಾ ಟೆಂಡರ್ ಆಧಾರಿತ ವೆಚ್ಚ ಮೌಲ್ಯಮಾಪನವನ್ನು ಸಿದ್ಧಪಡಿಸಿರಲಿಲ್ಲ. ಆದ್ದರಿಂದ ಗುತ್ತಿಗೆದಾರರ ಬೇಡಿಕೆಯನ್ನು ಅಂಗೀಕರಿಸಲು ಕಾರಣವೇನು ಎಂಬುದನ್ನು ಲೆಕ್ಕಪರಿಶೋಧನೆ (Audit) ದೃಢಪಡಿಸಲು ಸಾಧ್ಯವಾಗಲಿಲ್ಲ.
ಇಲಾಖೆಯು ಅಗತ್ಯಗಳನ್ನು ಮುಂಚಿತವಾಗಿಯೇ ಮೌಲ್ಯಮಾಪನ ಮಾಡಿರಲಿಲ್ಲ ಹಾಗೂ ಮಾರಾಟಗಾರ ಸಲ್ಲಿಸಿದ್ದ ಬಿಲ್ಲಿನಲ್ಲಿರುವ ಅಂಶಗಳನ್ನು ಪರಿಶೀಲಿಸಿರಲಿಲ್ಲ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನೀಡಿದ್ದ ಪ್ರಮಾಣಪತ್ರದ ಆಧಾರದ ಮೇಲೆಯೇ ಪಾವತಿ ಬೇಡಿಕೆಗಳನ್ನು ಅನುಮೋದಿಸಲಾಗಿದೆ. ಇದರಿಂದ, ಬೇಡಿಕೆಗಳ ಅಂಗೀಕಾರಾರ್ಹತೆಯನ್ನು ಪರಿಶೀಲಿಸದೇ ಇರುವುದು ಪಾರದರ್ಶಕತೆಯ ಕೊರತೆಯನ್ನು ಸೂಚಿಸುತ್ತದೆ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

‘ಇದು ಹಣಕಾಸು ಪರಿಶೀಲನೆಯ ಅಪರ್ಯಾಪ್ತತೆಯನ್ನು ಬಯಲಿಗೆಳೆಯುವುದರ ಜೊತೆಗೆ, ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ ಕಾಯ್ದೆ (KTPP Act) ಯ ನಿಯಮಗಳ ಪಾಲನೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಅಲ್ಲದೆ, ಇದರಿಂದ ಮಾರಾಟಗಾರನಿಗೆ ಅನಗತ್ಯ ಹಾಗೂ ಅನರ್ಹವಾದ ಲಾಭ ದೊರೆತಿರುವ ಸಾಧ್ಯತೆಯೂ ಕಂಡುಬರುತ್ತದೆ,’ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.




