ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ನಡುವೆಯೇ ಸಮಗ್ರ ಬರ ಮೌಲ್ಯಮಾಪನ ಆಧಾರದ ಮೇಲೆ ರಾಜ್ಯದಲ್ಲಿ 54 ತಾಲೂಕುಗಳನ್ನು ತೀವ್ರ ಬರ ಮತ್ತು 40 ತಾಲೂಕುಗಳನ್ನು ಮಧ್ಯಮ ಬರ ಎಂದು ಕಂದಾಯ ಇಲಾಖೆಯು ಪಟ್ಟಿ ಮಾಡಿದೆ.
ಬರ ಪರಿಸ್ಥಿತಿ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳು ತಂಡಗಳ ರೀತಿಯಲ್ಲಿ ಬರಪೀಡಿತ ಪ್ರದೇಶಗಳ ಭೇಟಿ, ರೈತರೊಂದಿಗೆ ಸಮಾಲೋಚನೆ ನಡೆಸುತ್ತಿವೆಯಾದರೂ ರಾಜ್ಯದಲ್ಲಿ ಇದುವರೆಗೂ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿಯು ಇನ್ನೂ ರಚನೆಯೇ ಆಗಿಲ್ಲ.
ಬರ ನಿರ್ವಹಣಾ ಕೈಪಿಡಿ, ಕಡ್ಡಾಯ ಸೂಚಕಗಳ ಮೌಲ್ಯಮಾಪನ, ಪರಿಣಾಮ ಸೂಚಕಗಳು, ಸಮಗ್ರ ಬರ ಮೌಲ್ಯಮಾಪನ ಆಧರಿಸಿ ಬರಗಾಲದ ತೀವ್ರತೆಯನ್ನು ಸಾಧಾರಣದಿಂದ ತೀವ್ರತೆಗೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಇದರ ಅನ್ವಯ ಎನ್‌ಡಿಆರ್‍ಎಫ್ ಅಡಿಯಲ್ಲಿ ಆರ್ಥಿಕ ನೆರವಿಗಾಗಿ ಮೆಮೋರಾಂಡಮ ಸಲ್ಲಿಸಲು ಎಂದು ಕಂದಾಯ ಇಲಾಖೆಯು ಸಿದ್ಧತೆ ನಡೆಸಿದೆ. ಈ ಸಂಬಂಧ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದೇ ಗುರುವಾರದಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವನೆಯ ಸಂಖ್ಯೆ (ಕಂಇ 586 ಟಿಎನ್ಆರ್ 2026) ( ಪ್ರಕರಣ ಸಂಖ್ಯೆ; ಸಿ/410/2026) ರಹಸ್ಯ ಹಾಳೆಗಳು ದಿ ಫೈಲ್ ಗೆ ಲಭ್ಯವಾಗಿವೆ.
ಬರ ನಿರ್ವಹಣಾ ಕೈಪಿಡಿ 2020ರ ಅನ್ವಯ ಮುಂಗಾರು (ಖಾರೀಫ್) 2026ಕ್ಕೆ ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆಸಿ ಅರ್ಹ ತಾಲೂಕುಗಳಲ್ಲಿ ಬರ ಘೋಷಣೆ ಮಾಡಲು ಕಂದಾಯ ಇಲಾಖೆಯು ಪ್ರಸ್ತಾವಿಸಿದೆ. ನೈರುತ್ಯ ಮುಂಗಾರು ಜೂನ್ 5, 2026ರಂದು ಕರ್ನಾಟಕ ಮತ್ತು ಅಕ್ಕ ಪಕ್ಕದ ಪ್ರದೇಶಗಳನ್ನು ಪ್ರವೇಶಿಸಿದೆ. ಜೂನ್ 22, 2026ರ ವೇಳೆಗೆ ಬಹುತೇಕ ಇಡೀ ರಾಜ್ಯಾದಾದ್ಯಂತ ವ್ಯಾಪಿಸಿದೆ. ಬೀದರ್ ಜಿಲ್ಲೆಗೆ ಮುಂಗಾರು ಪ್ರವೇಶಿಸಲು ಸುಮಾರು 11 ದಿನಗಳ ಕಾಲ ತಡವಾಗಿದೆ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮುಂಗಾರು ವಿಳಂಬವಾಗಿದೆ ಎಂದು ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಮಳೆ ಪರಿಸ್ಥಿತಿ ಹೇಗಿದೆ?
ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಮಳೆ ಪರಿಸ್ಥಿತಿ ಮತ್ತು ಮಾದರಿ ಕುರಿತು ವಿವರಿಸಿದೆ. 2026ರ ಜೂನ್ 1ರಿಂದ ಆಗಸ್ಟ್ 3ರವರೆಗೆ ರಾಜ್ಯದಲ್ಲಿ ಸಾಮಾನ್ಯವಾಗಿ ನಿರೀಕ್ಷಿತ 498 ಮಿ ಮೀ ಮಳೆ ಬದಲಿಗೆ 346 ಮಿ ಮೀ ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ.30ರಷ್ಟು ಕಡಿಮೆ ಮಳೆಯಾಗಿದೆ. ಇದು ಕೊರತೆ ವರ್ಗಕ್ಕೆ ಸೇರಿದೆ. ರಾಜ್ಯದ ಎಲ್ಲಾ ನಾಲ್ಕು ಹವಾಮಾನ ಪ್ರದೇಶಗಳಲ್ಲಿಯೂ ಮಳೆಯ ಪ್ರಮಾಣವು ವಾಡಿಕೆಗಿಂತ ಕಡಿಮೆಯಾಗಿ ದಾಖಲೆಯಾಗಿದೆ. ಮಲೆನಾಡಿನಲ್ಲಿ ಶೇ. 33, ಕರಾವಳಿ ಕರ್ನಾಟಕದಲ್ಲಿ ಶೇ. 25, ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ. 25, ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ. 40 ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ ಶೇ. 30 ರಷ್ಟು ಕಡಿಮೆ ಮಳೆಯಾಗಿದೆ ಎಂದು ಕಂದಾಯ ಇಲಾಖೆಯು ವಿವರಿಸಿರುವುದು ಗೊತ್ತಾಗಿದೆ.

ಅಲ್ಲದೇ 2026ರ ಜೂನ್ ಅವಧಿಯಲ್ಲಿ ರಾಜ್ಯದಲ್ಲಿ 199 ಮಿ ಮೀ ವಾಡಿಕೆ ಮಳೆ ಬದಲಿಗೆ ಕೇವಲ 116 ಮಿ ಮೀ ಮಳೆಯಾಗಿದೆ. ಅಂದರೇ ವಾಡಿಕೆಗಿಂತ ಶೇ. 42ರಷ್ಟು ಕೊರತೆ ಕಂಡು ಬಂದಿದೆ. ಇದು 1976ರ ನಂತರ ಅಂದರೇ ಕಳೆದ 50 ವರ್ಷಗಳಲ್ಲಿ ಜೂನ್ ಮಾಹೆಯಲ್ಲಿ ದಾಖಲಾದ ನಾಲ್ಕನೇ ಅತೀ ಕಡಿಮೆ ಮಳೆಯಾಗಿದೆ. ಸಾಮಾನ್ಯವಾಗಿ ನೈಋತ್ಯ ಮುಂಗಾರು ಮಳೆಯ ಸುಮಾರು ಶೇ. 32ರಷ್ಟು ಪಾಲನ್ನು ಹೊಂದಿದೆ. 2026ರ ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆ 271 ಮಿ ಮೀ ಮಳೆ ಬದಲಿಗೆ ಕೇವಲ 192 ಮಿ ಮೀ ಮಳೆಯಾಗಿದೆ. ಅಂದರೇ ಶೇ. 29ರಷ್ಟು ಮಳೆಯ ಕೊರತೆ ಕಂಡು ಬಂದಿದೆ. ಕಳೆದ 50 ವರ್ಷಗಳ ಅವಧಿಯಲ್ಲಿ ದಾಖಲಾದ ಜುಲೈ ತಿಂಗಳ ಮಳೆಯ ಪ್ರಮಾಣದಲ್ಲಿ ಇದು ಹತ್ತನೇ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಕಂದಾಯ ಇಲಾಖೆಯು ಪ್ರಸ್ತಾವನೆಯಲ್ಲಿ ವಿಶ್ಲೇಷಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ಇದರ ಪರಿಣಾಮವಾಗಿ 2026ರ ಜೂನ್ 1ರಿಂದ ಜುಲೈ 31ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 470 ಮಿ ಮೀ ವಾಡಿಕೆ ಮಳೆಯ ವಿರುದ್ಧವಾಗಿ ಕೇವಲ 308 ಮಿ ಮೀ ಮಳೆಯಾಗಿದೆ. ಅಂದರೆ ಒಟ್ಟು ಮಳೆಯ ಕೊರತೆ ಶೇ. 34ರಷ್ಟಾಗಿದೆ. ಕಳೆದ 50 ವರ್ಷಗಳ ಅವಧಿಯಲ್ಲಿ ಈ ಅವಧಿಗೆ ದಾಖಲಾಗಿರುವ ಒಟ್ಟು ಮಳೆಯ ಪ್ರಮಾಣಗಳಲ್ಲಿ ಇದು ಮೂರನೇ ಅತ್ಯಂತ ಕಡಿಮೆ ಪ್ರಮಾಣವಾಗಿದೆ,‘ ಎಂದು ಕಂದಾಯ ಇಲಾಖೆಯು ವಿವರಿಸಿರುವುದು ಗೊತ್ತಾಗಿದೆ.

26 ಜಿಲ್ಲೆಗಳಲ್ಲಿ ಮಳೆ ಕೊರತೆ- 647 ಹೋಬಳಿಗಳಲ್ಲಿ ಶೇ.75ರಷ್ಟು ಕೊರತೆ
ರಾಜ್ಯದಾದ್ಯಂತ ಮಳೆಯ ಹಂಚಿಕೆಯೂ ಸಹ ಹೆಚ್ಚು ಅಸಮಾನತೆಯಿಂದ ಕೂಡಿದೆ. 2026ರ ಜೂನ್ 1ರಿಂದ ಆಗಸ್ಟ್ 3ವರೆಗಿನ ಅವಧಿಯಲ್ಲಿ ಜಿಲ್ಲಾವಾರು ಮಳೆಯ ಸ್ಥಿತಿಯು 1 ಜಿಲ್ಲೆಯು ತೀವ್ರ ಕೊರತೆ ವರ್ಗದಲ್ಲಿದೆ. ಉಳಿದ 26 ಜಿಲ್ಲೆಗಳು ಕೊರತೆ ವರ್ಗದಲ್ಲಿವೆ. ಹಾಗೂ 4 ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗಿದೆ. ತಾಲೂಕು ಮಟ್ಟದಲ್ಲಿ 14 ತಾಲೂಕುಗಳು ತೀವ್ರ ಕೊರತೆ ವರ್ಗದಲ್ಲಿವೆ. 166 ತಾಲೂಕುಗಳು ಕೊರತೆ ವರ್ಗದಲ್ಲಿವೆ. 51 ತಾಲೂಕುಗಳಲ್ಲಿ ಸಾಮಾನ್ಯ ಹಾಗೂ 9 ತಾಲೂಕುಗಳಲ್ಲಿ ಹೆಚ್ಚುವರಿ ಪ್ರಮಾಣದ ಮಳೆಯಾಗಿದೆ. ಹೀಗಾಗಿ ಒಟ್ಟು 240 ತಾಲೂಕುಗಳಲ್ಲಿ 180 ತಾಲೂಕುಗಳು ಶೇ. 75ರಷ್ಟು ಕೊರತೆಯಿಂದ ತೀವ್ರ ಕೊರತೆ ಮಳೆಯ ಪರಿಸ್ಥಿತಿ ಅನುಭವಿಸುತ್ತಿವೆ. ಹಾಗೆಯೇ ಹೋಬಳಿ ಮಟ್ಟದಲ್ಲಿ ಒಟ್ಟು 850 ಹೋಬಳಿಗಳ ಪೈಕಿ 647 ಹೋಬಳಿಗಳು ಶೇ. 76ರಷ್ಟು ಕೊರತೆ ವರ್ಗದಲ್ಲಿವೆ ಎಂದು ಹೇಳಿದೆ.
ನೈರುತ್ಯ ಮುಂಗಾರು ಅವಧಿಯಲ್ಲಿ ಮಳೆಯ ಕಾಲಾನುಕ್ರಮದ ಹಂಚಿಕೆಯು ಸಹ ಅತ್ಯಂತ ಅನಿಯಮಿತವಾಗಿದೆ. ಸತತ ಒಣ ಹವೆಯ ಅವಧಿಗಳ ನಡುವೆ ಕೆಲವೇ ಪ್ರದೇಶಗಳಲ್ಲಿ ಭಾರೀ ಮಳೆ ಸಂಭವಿಸಿದೆ. ವ್ಯಾಪಕ ಮಳೆ ಕೊರತೆ ಮತ್ತು ಸತತ ಒಣಹವೆಯ ಅವಧಿಗಳ ಪರಿಣಾಮವಾಗಿ ಮುಂಗಾರು ಬಿತ್ತನೆ ಮತ್ತು ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಬೆಳೆದಿರುವ ಬೆಳೆಗಳಲ್ಲಿ ತೇವಾಂಶ ಕೊರತೆ ಕಂಡು ಬಂದಿದೆ. ಅನೇಕ ಪ್ರದೇಶಗಳಲ್ಲಿ ಬೀಜಗಳ ಮೊಳಕೆಯೊಡೆಯುವಿಕೆ ಸಮರ್ಪಕವಾಗಿ ಆಗಿಲ್ಲ. ಅಥವಾ ವಿಫಲವಾಗಿದೆ ಎಂದು ವಿಶ್ಲೇಷಿಸಿದೆ.
ಬಲಗೊಳ್ಳಲಿದೆಯೇ ಎಲ್ ನಿನೋ ಪರಿಸ್ಥಿತಿ?
2026ರ ಜುಲೈ 31ರಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದ್ದ ನೈರುತ್ಯ ಹಂಗಾಮಿನ ದ್ವಿತಿಯಾರ್ಧದ (ಆಗಸ್ಟ್ -ಸೆಪ್ಟಂಬರ್ ) ಮಳೆಯ ಮುನ್ಸೂಚನೆ ಪ್ರಕಾರ ನೈರುತ್ಯ ಮುಂಗಾರು ಅವಧಿಯಲ್ಲಿ ಎಲ್ ನಿನೋ ಪರಿಸ್ಥಿತಿಯು ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಕೆಲವು ಭಾಗಗಳನ್ನು ಹೊರತುಪಡಸಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೇ ಎನ್‌ಎಂಸಿಎಫ್‌ಎಸ್ ಹಾಗೂ ಪ್ರಮುಖ ಜಾಗತಿಕ ಹವಾಮಾನ ಮುನ್ಸೂಚನಾ ಮಾದರಿಗಳು ಸಹ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಹೆಚ್ಚಿರುವುದನ್ನು ಸೂಚಿಸುತ್ತದೆ.





ಬರ ನಿರ್ವಹಣಾ ಕೈಪಿಡಿ 2020ರ ಪ್ರಕಾರ ನಿಗದಿತ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡ ನಂತರ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸುವ ಮೂಲಕ ತಾಲೂಕನ್ನು ಆಡಳಿತಾತ್ಮಕವಾಗಿ ಘಟಕವೆಂದು ಪರಿಗಣಿಸಿ ಬರಗಾಲವನ್ನು ಘೋಷಿಸಬಹುದು. ಕೈಪಿಡಿ ಪ್ರಕಾರ ಮುಂಗಾರು ಅವಧಿಯ ಬರಗಾಲದ ಘೋಷಣೆಯನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸಬೇಕು. ಆದರೂ ಋತುಮಾನದ ಪರಿಸ್ಥಿತಿಗಳು ಬರ ಪರಿಸ್ಥಿತಿಯ ಹೊರಹೊಮ್ಮುವಿಕೆಯನನು ಸ್ಪಷ್ಟವಾಗಿ ಸೂಚಿಸುವಲ್ಲಿ ಆಗಸ್ಟ್‌ನಲ್ಲಿಯೇ ಮುಂಚಿತವಾಗಿ ಬರ ಘೋಷಣೆ ಮಾಡಲು ಇದು ಅವಕಾಶ ಒದಗಿಸುತ್ತದೆ ಎಂದು ಕಂದಾಯ ಇಲಾಖೆಯು ವಿವರಿಸಿದೆ.

‘ಇಂತಹ ಪರಿಸ್ಥಿತಿಗಳಲ್ಲಿ ಜೂನ್ ಮತ್ತು ಜುಲೈನಲ್ಲಿನ ಮಳೆಯ ಕೊರತೆ, ಜೊತೆಗೆ ದೀರ್ಘಕಾಲದ ಒಣಹವೆಗಳು ಬಿತ್ತನೆ ಪ್ರದೇಶಗಳಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುವುದನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಬರ ಪರಿಹಾರ ಮತ್ತು ತಗ್ಗಿಸುವಿಕೆ ಕ್ರಮಗಳನ್ನು ಸಕಾಲಿಕವಾಗಿ ಅನುಷ್ಠಾನಗೊಳಿಸಲು ಪೂರ್ವ ಘೋಷಣೆ ಅಗತ್ಯವಾಗಿದೆ,’ ಎಂದು ಕಂದಾಯ ಇಲಾಖೆಯು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

ಬರ ನಿರ್ವಹಣಾ ಕೈಪಿಡಿ 2020ರ (ಪುಟ ಸಂಖ್ಯೆ 47-48) ಪ್ರಕಾರ ಬರಗಾಲ ಘೋಷಣೆಯಾದ ಒಂದು ವಾರದೊಳಗೆ ವಿಪತ್ತು ತೀವ್ರ ಸ್ವರೂಪವಾಗಿದ್ದರೇ ಮಾತ್ರ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ ಅಡಿಯಲ್ಲಿ ನೆರವಿಗಾಗಿ ಮೆಮೋರಾಂಡಂನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ಎಸ್‌ಡಿಆರ್‍ಎಫ್ ಬರ ಪರಿಹಾರವನ್ನು ಪೂರೈಸಲು ಸಾಧ್ಯವಾಗದಿದ್ದರೇ ಬರಗಾಲವು ಸಾಧಾರಣವಾಗಿದ್ದರೂ ಸಹ ರಾಜ್ಯಗಳು ಎನ್‌ಡಿಆರ್‍ಎಫ್ ಅಡಿಯಲ್ಲಿ ನೆರವಿಗಾಗಿ ಮೆಮೋರಾಂಡಂ ಸಲ್ಲಿಸಬಹುದು ಎಂದು ಕಂದಾಯ ಇಲಾಖೆಯು ವಿವರಿಸಿದೆ.




