ಬೆಂಗಳೂರು; ಪಶುವೈದ್ಯಾಧಿಕಾರಿಗಳ (ಗ್ರೂಪ್ ಬಿ) ಹುದ್ದೆಗಳ ನೇಮಕಾತಿಯಲ್ಲಿ 80 ಲಕ್ಷ ರು ಲಂಚಕ್ಕೆ ಬೇಡಿಕೆ ಇರಿಸಲಾಗಿದೆ ಎಂದು ಆರೋಪಿತ ಪ್ರಕರಣದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅಭ್ಯರ್ಥಿಗಳ ಮೇಲೆ ಒತ್ತಡವಿತ್ತೇ ಎಂಬ ಹೊಸ ಅಂಶ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಅಭ್ಯರ್ಥಿಗಳ ವಾಟ್ಸಾಪ್ ಗ್ರೂಪ್‌ನಲ್ಲಿಯೂ ಸಹ ಚರ್ಚೆಯಾಗಿತ್ತು.
ಈ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿರುವ ಬೆನ್ನಲ್ಲೇ ಇದೀಗ ಇದೇ ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಈ ಚರ್ಚೆಗಳು ಇದೀಗ ಈ ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದಂತಾಗಿದೆ.
ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಈ ಸಂಗತಿಯನ್ನು ಮುಖ್ಯಮಂತ್ರಿ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವರಿಗೆ ಲಿಖಿತವಾಗಿ ಗಮನಕ್ಕೆ ತಂದಿದ್ದಾರೆ.
ಬಾಧಿತ ಅಭ್ಯರ್ಥಿಗಳು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರರ್ಜಿಗಳ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿವೆ. ಇದೇ ದೂರರ್ಜಿಯಲ್ಲಿ ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದಿರುವ ಸಂಭಾಷಣೆಯ ಸ್ಕ್ರೀನ್ ಶಾಟ್‌ಗಳನ್ನೂ ಸಹ ಲಗತ್ತಿಸಿದ್ದಾರೆ. ಇದರ ಪ್ರತಿಗಳೂ ಸಹ ‘ದಿ ಫೈಲ್’ಗೆ ಲಭ್ಯವಾಗಿವೆ.


‘ದಯವಿಟ್ಟು ಅರ್ಥ ಮಾಡಿಕೊಳ್ಳಿ, ಕಂಪ್ಲೇಟ್ ಫೈಲ್ ಮಾಡಲು ಸಾಕಷ್ಟು ತಕರಾರುಗಳನ್ನು ತೆಗೆದರು, ತುಂಬಾ ಕಷ್ಟ ಆಯಿತು. ರಾತ್ರಿ 1;55ಕ್ಕೆ ರಿಜಿಸ್ಟರ್ ಆಗಿದೆ. ಒತ್ತಡ, ಗಾಬರಿ, ಆತಂಕಗಳಿಂದ ಹೀಗಾಗಿದೆ. ಇದನ್ನು ಸರಿಪಡಿಸುತ್ತೇವೆ. ಭಾವನೆಗಳು ಧಕ್ಕೆ ಆಗಿದ್ದಕ್ಕೆ ಬೇಷರತ್ ಕ್ಷಮೆ ಯಾಚಿಸುತ್ತೇವೆ. ನಮ್ಮ ಹೋರಾಟ ನ್ಯಾಯಯುತವಾದದ್ದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇವೆ. ಪ್ರಮಾದಗಳನ್ನು ಸರಿಪಡಿಸುತ್ತೇವೆ. ಕ್ಷಮೆ ಇರಲಿ, ನಮ್ಮ ನೈಜ ದನಿಗೆ ಬೆಲೆಯಿರಲಿ, ನಿಮ್ಮೆಲ್ಲರ ಬೆಂಬಲವಿರಲಿ,’ ಎಂದು ಕೋರಿರುವುದು ಸ್ಕ್ರೀನ್ ಶಾಟ್‌ನಿಂದ ಗೊತ್ತಾಗಿದೆ.

ಅಲ್ಲದೇ ದೂರರ್ಜಿಯಲ್ಲಿ ಹೆಸರಿಸುವ ಮುನ್ನ ಕೆಲವರ ಒಪ್ಪಿಗೆಯೇ ಇರಲಿಲ್ಲ. ಅಲ್ಲದೇ ಎಫ್‌ಐಆರ್‍ನಲ್ಲಿ ನಿರ್ದಿಷ್ಟ ಹೆಸರುಗಳನ್ನು ಸೇರಿಸಲು ಕೆಲ ಅಭ್ಯರ್ಥಿಗಳು ತಕರಾರು ಎತ್ತಿದ್ದರು. ಹಾಗೆಯೇ ವೈಯಕ್ತಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಕೆಲವು ಅಭ್ಯರ್ಥಿಗಳು ಬೆಂಬಲಿಸಿರಲಿಲ್ಲ. ದೂರರ್ಜಿ ಮತ್ತು ಎಫ್‌ಐಆರ್ ಗೆ ಸಹಿ ಮಾಡಿದಾಗ ಅಭ್ಯರ್ಥಿಗಳಿಗೆ ಬೇರೆಯೇ ಪ್ರತಿ ತೋರಿಸಲಾಗಿತ್ತು. ಹಾಗೆಯೇ ಎಫ್‌ಐಆರ್‍ನಲ್ಲಿದ್ದ ವಿಷಯಗಳನ್ನೇ ಬದಲಾಯಿಸಲಾಗಿತ್ತು. ಅವರ ಒಪ್ಪಿಗೆ ಇರದೇ ಇದ್ದರೂ ದೂರರ್ಜಿಯಲ್ಲಿ ಅವರ ಹೆಸರಗಳನ್ನು ಸೇರಿಸಿರುವುದಕ್ಕೆ ವಾಟ್ಸಾಪ್ ಗ್ರೂಪ್‌ನಲ್ಲಿ ತಕರಾರು ಎತ್ತಿರುವುದು ಸ್ಕ್ರೀನ್ ಶಾಟ್‌ಗಳಿಂದ ತಿಳಿದು ಬಂದಿದೆ.
‘ವೈಯಕ್ತಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ವಿಷಯವನ್ನು ನಮಗೆ ಯಾವುದೇ ಹಂತದಲ್ಲಿಯೂ ಮುಂಚಿತವಾಗಿ ತಿಳಿಸಲಾಗಿರಲಿಲ್ಲ. ನಾವು ಸಹಿ ಮಾಡಿದಾಗ ನಮಗೆ ಬೇರೆ ಪ್ರತಿಯನ್ನು ತೋರಿಸಲಾಗಿತ್ತು. ಆದರೆ ಈಗ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅದರಲ್ಲಿದ್ದ ವಿಷಯಗಳನ್ನು ಬದಲಾಯಿಸಲಾಗಿದೆ. ಆದ್ದರಿಂದ, ವೈಯಕ್ತಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ನಾವು ಬೆಂಬಲಿಸುವುದಿಲ್ಲ. ನಮ್ಮ ಬೆಂಬಲವು ಯಾವಾಗಲೂ ಕೆಪಿಎಸ್‌ಸಿ (KPSC) ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸುವುದಕ್ಕಷ್ಟೇ ಸೀಮಿತವಾಗಿದ್ದು, ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ,’ ಎಂದು ಚರ್ಚಿಸಿರುವುದು ವಾಟ್ಸಾಪ್ ಸ್ಕ್ರೀನ್ ಶಾಟ್‌ನಿಂದ ಗೊತ್ತಾಗಿದೆ.
‘ಆದ್ದರಿಂದ ನಮ್ಮ ಹೆಸರುಗಳನ್ನು ಎಫ್‌ಐಆರ್‌ನಲ್ಲಿರುವ ಸಂತ್ರಸ್ತರ (Victims) ಪಟ್ಟಿಯಿಂದ ತೆಗೆದುಹಾಕುವಂತೆ ನಾವು ವಿನಂತಿಸುತ್ತೇವೆ. ಸಂತ್ರಸ್ತರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೆಗೆದುಹಾಕಲು ಬಯಸುವವರು ಕೆಳಗೆ ತಮ್ಮ ಹೆಸರನ್ನು ಸೇರಿಸಬಹುದು,’ ಎಂದು ಕೋರಿರುವುದು ವಾಟ್ಸಾಪ್ ಸ್ಕ್ರೀನ್ ಶಾಟ್‌ನಿಂದ ಗೊತ್ತಾಗಿದೆ. ( ಈ ಸಂಭಾಷಣೆಯು ಇಂಗ್ಲೀಷ್‌ನಲ್ಲಿದೆ. ಅದನ್ನು ಕನ್ನಡಕ್ಕೆ ಯಥಾವತ್ತಾಗಿ ತರ್ಜುಮೆ ಮಾಡಲಾಗಿದೆ.)

‘ವಕೀಲರೂ ಸಹ ನೇಮಕಾತಿ ಪ್ರಕ್ರಿಯೆಯ ವಿರುದ್ಧ ಎಫ್‌ಐಆರ್ ದಾಖಲಿಸುವುದೇ ಅತ್ಯುತ್ತಮ ಕ್ರಮ ಎಂದು ಸಲಹೆ ನೀಡಿದ್ದಾರೆ, ಸರ್,’ ಎಂದು ಅಭ್ಯರ್ಥಿಯೊಬ್ಬರು ಸಂಭಾಷಿಸಿರುವುದು ಸ್ಕ್ರೀನ್ ಶಾಟ್‌ನಿಂದ ಗೊತ್ತಾಗಿದೆ. ‘ಒಂದು ರೀತಿಯಲ್ಲಿ ಹೇಳಿ, ಮತ್ತೊಂದು ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ಇಂತಹ ಅನ್ಯಾಯದ ಕ್ರಮಗಳನ್ನು ನಾವು ಬೆಂಬಲಿಸುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ,’ ಎಂದು ಅಭ್ಯರ್ಥಿಯೊಬ್ಬರು ಆಕ್ಷೇಪ ಎತ್ತಿರುವುದು ಸ್ಕ್ರೀನ್ ಶಾಟ್‌ನಿಂದ ತಿಳಿದು ಬಂದಿದೆ.

‘ದಯವಿಟ್ಟು ಈ ಟ್ವೀಟ್ ಅನ್ನು ತಕ್ಷಣವೇ ಅಳಿಸುವಂತೆ ಅವರಿಗೆ ತಿಳಿಸಿ. ಇದು ಮಾಧ್ಯಮದವರ ಕೈಗೆ ಸಿಕ್ಕರೆ, ಆ ಅಭ್ಯರ್ಥಿಯ ಪೋಷಕರ ಮನಸ್ಥಿತಿ ಹೇಗಿರಬಹುದು ಎಂದು ಒಮ್ಮೆ ಯೋಚಿಸಿ. ಅಂತಹ ಪರಿಸ್ಥಿತಿಯನ್ನು ಆ ಅಭ್ಯರ್ಥಿ ಹೇಗೆ ಎದುರಿಸಬೇಕು? ದಯವಿಟ್ಟು ಮೊದಲು ಈ ಕೆಲಸವನ್ನು ಮಾಡಿ, ಸರ್,’ ಎಂದು ಸಂಭಾಷಿಸಿರುವುದು ಸ್ಕ್ರೀನ್ ಶಾಟ್‌ನಿಂದ ಗೊತ್ತಾಗಿದೆ.
ಇದಕ್ಕೆ ಮತ್ತೊಬ್ಬ ಅಭ್ಯರ್ಥಿ ‘ನೀವು ನಿಮ್ಮ ಇಚ್ಛೆಯಂತೆ ಮಾತ್ರ ನಿರ್ಧಾರ ತೆಗೆದುಕೊಳ್ಳುವುದಾಗಿ ಈಗಾಗಲೇ ತೀರ್ಮಾನಿಸಿದ್ದರೆ, ನಮ್ಮ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಏಕೆ ಸೇರಿಸಿದ್ದೀರಿ? ದಯವಿಟ್ಟು ನಮ್ಮ ಹೆಸರುಗಳನ್ನು ಎಫ್‌ಐಆರ್‌ನಿಂದ ತೆಗೆದುಹಾಕಿ. ಅದರ ನಂತರ ನಿಮಗೆ ಸರಿಯೆನಿಸುವ ರೀತಿಯಲ್ಲಿ ಮುಂದುವರಿಯಿರಿ, ಸರ್,’ ಎಂದಿರುವುದು ಸ್ಕ್ರೀನ್ ಶಾಟ್‌ನಿಂದ ತಿಳಿದು ಬಂದಿದೆ.

‘ನಿಮ್ಮ ಅಭಿಪ್ರಾಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲಾ 25 ಮಂದಿ ಸಂತ್ರಸ್ತರೊಂದಿಗೆ ಚರ್ಚಿಸಿ, ಈ ವಿಷಯವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುತ್ತೇವೆ. ನಿಮ್ಮ ನೋವು ಮತ್ತು ನಿರಾಶೆಯನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ನಮ್ಮ ಹೋರಾಟವು ತಪ್ಪಿತಸ್ಥರ ವಿರುದ್ಧ ಮಾತ್ರ; ಪ್ರಾಮಾಣಿಕ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ನಾವು ನೋಡಿಕೊಳ್ಳುತ್ತೇವೆ,’ ಎಂದು ಹೇಳಿರುವುದು ಸ್ಕ್ರೀನ್ ಶಾಟ್‌ನಿಂದ ಗೊತ್ತಾಗಿದೆ.

‘ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಉಂಟಾದ ನೋವು ಮತ್ತು ಆತಂಕಕ್ಕಾಗಿ ನಾವು ಹೃತ್ಪೂರ್ವಕ ಕ್ಷಮೆಯಾಚಿಸುತ್ತೇವೆ. ದಯವಿಟ್ಟು ಚಿಂತಿಸಬೇಡಿ. ಈ ವಿಷಯವನ್ನು ಶೀಘ್ರದಲ್ಲೇ ಸರಿಪಡಿಸುತ್ತೇವೆ. ದಯವಿಟ್ಟು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ಮತ್ತೊಮ್ಮೆ ಕ್ಷಮೆಯಾಚಿಸುತ್ತೇವೆ,’ ಎಂದು ಅಭ್ಯರ್ಥಿಯೊಬ್ಬರು ಹೇಳಿರುವುದು ತಿಳಿದು ಬಂದಿದೆ.

ಲಿಖಿತ ದೂರಿನಲ್ಲೇನಿದೆ?
ಈ ಪ್ರಕರಣದ ಬಗ್ಗೆ ಆರೋಪ ಮಾಡುತ್ತಿರುವವರಲ್ಲಿ ಹಾಗೂ ಪ್ರತಿಭಟನೆ ಮಾಡುತ್ತಿರುವವರಲ್ಲಿ ಹೆಚ್ಚಿನವರು 2026ರ ಜನವರಿ 9 ರ ಪರೀಕ್ಷೆಯಲ್ಲಿ ಕನಿಷ್ಟ ಅರ್ಹತಾ ಅಂಕಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. 600 ಅಂಕಗಳಲ್ಲಿ 210 ಅಂಕಗಳನ್ನಷ್ಟೇ ಪಡೆಯಲು ವಿಫಲರಾಗಿದ್ದಾರೆ. ಹೀಗಾಗಿ 1;3 ರ ಅರ್ಹತಾ ಪಟ್ಟಿಗೂ ಆಯ್ಕೆಯಾಗಿರಲಿಲ್ಲ. ಪರೀಕ್ಷೆ ಸಮಯದಲ್ಲಿ ಸಮರ್ಪಕವಾಗಿ ಸಿದ್ಧತೆ ಮಾಡಿಕೊಳ್ಳದೇ ವಿಫಲರಾದ ಕೆಲವು ಮತ್ತೊಮ್ಮೆ ಅವಕಾಶ ಪಡೆಯುವ ಉದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಕರ್ನಾಟಕ ಲೋಕಸೇವಾ ಆಯೋಗವು ಸುಮಾರು ಎರಡು ತಿಂಗಳ ಹಿಂದೆಯೇ ಅಂದರೇ 2026ರ ಮೇ 26ರಂದು ಅಭ್ಯರ್ಥಿಗಳ ಅಂಕಗಳು ಮತ್ತು ವಿವರಗಳೊಂದಿಗೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿತ್ತು. ಅಲ್ಲದೇ ಆಕ್ಷೇಪಣೆ ಸಲ್ಲಿಸಲು ಸಮರ್ಪಕ ಅವಕಾಶವನ್ನೂ ಕಲ್ಪಿಸಿತ್ತು. ಆದರೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಆ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಸಲ್ಲಿಸದೇ ಅಂತಿಮ ಆಯ್ಕೆಪಟ್ಟಿ ಪ್ರಕಟವಾದ ನಂತರ ಅಂದರೇ 2026ರ ಜುಲೈ 17ರ ನಂತರ ಮಾಧ್ಯಮಗಳ ಮುಂದೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂಬ ರೀತಿಯಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸುಮಾರು 45 ದಿನಗಳ ಹಿಂದಿನದು ಎಂದು ದೂರರ್ಜಿಯಲ್ಲಿ ಹೇಳಿರುವ ಅಭ್ಯರ್ಥಿಗಳು ಇದೇ ವಿಡಿಯೋ ಆಧರಿಸಿ ಕೆಪಿಎಸ್‌ಸಿ ಕಾರ್ಯದರ್ಶಿ ಅವರು ಈಗಾಗಲೇ ಒಂದು ತಿಂಗಳ ಹಿಂದೆಯೇ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆ ವಿಡಿಯೋದಲ್ಲಿ ಅಂತಿಮವಾಗಿ ಆಯ್ಕೆಯಾದ ಯಾವುದೇ ಅಭ್ಯರ್ಥಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ವಿವರಿಸಿರುವುದು ಗೊತ್ತಾಗಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದರೂ ಇದೇ ವಿಷಯದ ಕುರಿತು ಮತ್ತೊಮ್ಮೆ ಹೊಸ ದೂರು ಸಲ್ಲಿಸಿರುವುದು ಅನಗತ್ಯವಾಗಿ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸುವ ಉದ್ದೇಶ ಹೊಂದಿರುವಂತೆ ಕಂಡುಬರುತ್ತದೆ,’ ಎಂದು ಹೇಳಿದ್ದಾರೆ. ಅಲ್ಲದೇ ಎಫ್‌ಐಆರ್‍ನಲ್ಲಿ ಸಂತ್ರಸ್ತರಾಗಿ ಉಲ್ಲೇಖಿಸಲಾದ ಕೆಲವರು ತಾವು ಬೇರೆ ಉದ್ದೇಶಕ್ಕಾಗಿ ವಿಶೇಷವಾಗಿ ತಮ್ಮ ಗುತ್ತಿಗೆ ಸೇವೆಯ ನವೀಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ತೆರಳಿದ್ದರು. ‘ ತಮ್ಮ ಅರಿವು ಅಥವಾ ಒಪ್ಪಿಗೆಯಿಲ್ಲದೇ ತಮ್ಮ ಹೆಸರುಗಳನ್ನು ಸಂತ್ರಸ್ತರ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗೂ ದೂರು ಪ್ರತಿಯಲ್ಲಿ ತಮ್ಮ ಸಹಿ ಇಲ್ಲ ಎಂದು ಅವರು ಹೇಳಿದ್ದಾರೆ,’ ಎಂದು ದೂರರ್ಜಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಎಫ್‌ಐಆರ್‍ನಲ್ಲಿ ತಪ್ಪಾಗಿ ಹೆಸರು ಸೇರಿಸಿರುವ ಅಭ್ಯರ್ಥಿಗಳ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು. ಅವರು ತಪ್ಪಾಗಿ ಸೇರಿಸಲ್ಪಟ್ಟಿರುವುದು ದೃಢಪಟ್ಟಲ್ಲಿ ಅವರ ಹೆಸರನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಬೇಕು. ಎಫ್‌ಐಆರ್ ದಾಖಲಾದ ಸಂದರ್ಭಗಳ ಕುರಿತು, ಅದರ ಮೇಲೆ ಯಾವುದೇ ಬಾಹ್ಯ ಒತ್ತಡವಿದೆಯೇ ಎಂಬ ಅಂಶವನ್ನೂ ಪರಿಶೀಲಿಸಬೇಕು ಎಂದು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.
ಎಫ್‌ಐಆರ್‍ನಲ್ಲೇನಿದೆ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ ಮಂಜುನಾಥ್ ಎಂಬುವರು ದೂರು ನೀಡಿದ್ದರು. ಈ ದೂರನ್ನಾಧರಿಸಿ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಸಾಹುಕಾರ್ ಎಸ್ ಶಿವಶಂಕರಪ್ಪ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ. ಅದೇ ರೀತಿ ಕೆಪಿಎಸ್‌ಸಿ ಸದಸ್ಯರನ್ನು ಎರಡನೇ ಆರೋಪಿ, ಕೆಪಿಎಸ್‌ಸಿ ಅಧಿಕಾರಿ ವರ್ಗವನ್ನು ಮೂರನೇ ಆರೋಪಿಯನ್ನಾಗಿಸಲಾಗಿದೆ. ಒಟ್ಟು 29 ಮಂದಿ ಅಭ್ಯರ್ಥಿಗಳನ್ನು ನಾಲ್ಕನೇ ಆರೋಪಿಗಳನ್ನಾಗಿಸಿರುವುದು ಎಫ್‌ಐಆರ್‍ನಿಂದ ಕಂಡು ಬಂದಿದೆ.

ಕೆಪಿಎಸ್‌ಸಿಯು 2026ರ ಜುಲೈ 17ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳ ಸಂಬಂಧಿ ಅಭ್ಯರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕೆಪಿಎಸ್‌ಸಿಯು ಪಶುವೈದ್ಯಾಧಿಕಾರಿಗಳ ಹುದ್ದೆಗೆ ನಡೆಸಿದ ಪರೀಕ್ಷೆಯು ಕಠಿಣವಾಗಿದ್ದು ಚಿನ್ನದ ಪದಕ ಪಡೆದ ಅಭ್ಯರ್ಥಿಗಳು, ಯುಪಿಎಸ್‌ಸಿ ನಡೆಸುವ ಐಎಫ್‌ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಕೇವಲ 350 ಅಂಕಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಪಶುವೈದ್ಯ ಪದವಿಯಲ್ಲಿ ಸಾಧಾರಣೆ ಸಾಧನೆ ಮಾಡಿರುವ ಅಭ್ಯರ್ಥಿಗಳೇ 400ಕ್ಕಿಂತ ಹೆಚಚು ಅಂಕ ಪಡೆದಿರುವುದು ಅನುಮಾನ ಮೂಡಿಸುವಂತಿದೆ ಎಂದು ದೂರುದಾರ ವಿವರಿಸಿರುವುದು ಎಫ್‌ಐಆರ್‍ನಿಂದ ಗೊತ್ತಾಗಿದೆ.

ಈ ಅನುಮಾನವನ್ನು ಪುಷ್ಟೀಕರಿಸುವಂತೆ ಕೆಪಿಎಸ್‌ಸಿ ಅಧ್ಯಕ್ಷರು (ಅಮಾನತು) ಸಾಹುಕಾರ್ ಎಸ್ ಶಿವಶಂಕರಪ್ಪ ಅವರ ಸಂಬಂಧಿ ಅಭ್ಯರ್ಥಿಯಾದ ಸೂಗರೇಶ್ ಜಕಾ ಎಂಬುವರು ಪದವಿಯಲ್ಲಿ 02 ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ಕಂಪಾರ್ಟ್‌ಮೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಕನಿಷ್ಟ ಸಿಜಿಪಿಎಯೊಂದಿಗೆ ಪದವಿ ಮುಗಿಸಿದ್ದರೂ ಸಹ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭರ್ಜರಿ 450 ಅಂಕಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇದು ಭಾರೀ ಅನುಮಾನಕ್ಕೆ ಕಾರಣವಾಗಿದೆ ಎಂದು ಎಫ್‌ಐಆರ್‍ನಲ್ಲಿ ವಿವರಿಸಿದೆ.
ಅಲ್ಲದೇ ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನೂ ಸಹ ಎಫ್‌ಐಆರ್‍ನಲ್ಲಿ ದಾಖಲಿಸಿದ್ದಾರೆ.

ಹಾಗೆಯೇ ಬಾಧಿತ ಅಭ್ಯರ್ಥಿಗಳ ಹೆಸರುಗಳನ್ನು ಸಹ ಎಫ್‌ಐಆರ್‍ನಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.




