Wednesday | July 29, 2026 |

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಅಡಿಯಲ್ಲಿ ನೀಡಿದ್ದ ಜಾಬ್‌ ಕಾರ್ಡ್‌ಗಳ ಪೈಕಿ ಕಳೆದ 5 ವರ್ಷದಲ್ಲಿ 16.80 ಲಕ್ಷ ಜಾಬ್‌ ಕಾರ್ಡ್‌, 66.38 ಲಕ್ಷ ನರೇಗಾ ಕಾರ್ಮಿಕರನ್ನು ತೆಗೆದು ಹಾಕಿದೆ. ದೇಶದಲ್ಲಿ ಒಟ್ಟಾರೆ 5.20 ಕೋಟಿಯಷ್ಟು ಜಾಬ್‌ ಕಾರ್ಡ್‌ ಮತ್ತು  ಪಟ್ಟಿಯಿಂದ 13.21 ಕೋಟಿ ಸಂಖ್ಯೆಯ ನರೇಗಾ ಕಾರ್ಮಿಕರನ್ನು ತೆಗೆದು ಹಾಕಿದೆ.

ನರೇಗಾ ಅಡಿಯಲ್ಲಿ 2021ರಿಂದ 2026ರವರೆಗೆ ಜಾಬ್‌ ಕಾರ್ಡ್‌ ಮತ್ತು ನರೇಗಾ ಕಾರ್ಮಿಕರನ್ನು ರದ್ದುಗೊಳಿಸಿರುವ ಸಂಬಂಧ ಲೋಕಸಭೆಯಲ್ಲಿ ಸದಸ್ಯ ಕೆ ಸಿ ವೇಣುಗೋಪಾಲ್ ಮತ್ತು ಆಂತೋಣಿ ಅವರು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಗ್ರಾಮೀಣಾಭಿವೃದ್ದಿ ಖಾತೆಯ ಕೇಂದ್ರ ಸಚಿವ ಶಿವರಾಜ್ ಸಿಂಗ್‌ ಚೌಹ್ಹಾಣ್ ಅರು 2026ರ ಜುಲೈ 28ರಂದು ಅಂಕಿ ಸಂಖ್ಯೆಗಳನ್ನು ಒದಗಿಸಿದ್ದಾರೆ.

2025ರ ಜೂನ್‌ನಿಂದ 2026ರ ಜೂನ್‌ವರೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ ಕುಟುಂಬಗಳ ವಿವರಗಳು ಹಾಗೂ ಒಟ್ಟು ಸಂಖ್ಯೆ ಕೋರಿದ್ದರು. ಅದೇ ರೀತಿ ನಿರ್ದಿಷ್ಟವಾಗಿ ಛತ್ತೀಸ್‌ಗಢ ಸೇರಿದಂತೆ ರಾಜ್ಯವಾರು ಮತ್ತು ಕೇಂದ್ರಾಡಳಿತ ಪ್ರದೇಶವಾರು ವಿವರಗಳನ್ನು ಬಯಸಿದ್ದರು.

2021ರಿಂದ ಎಂಜಿ ನರೇಗಾ ಅಡಿಯಲ್ಲಿ ರದ್ದುಗೊಂಡ ಜಾಬ್‌ ಕಾರ್ಡ್‌, ಹಾಗೂ ಕಾರ್ಮಿಕರ ಸಂಖ್ಯೆ, ರದ್ದುಗೊಳಿಸಲು ನಿರ್ದಿಷ್ಟ ಕಾರಣಗಳು, ನಿರ್ದಿಷ್ಟ ತಾಂತ್ರಿಕ ಅಥವಾ ಆಡಳಿತಾತ್ಮಕ ಪ್ರಮುಖ ಕಾರಣಗಳೇನು ಎಂದು ಪ್ರಶ್ನೆಯಲ್ಲಿ ಕೇಳಿದ್ದರು.

ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ ಗ್ರಾಮೀಣ (VB-GRAMG) ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಗರಿಷ್ಠ 60 ದಿನಗಳವರೆಗೆ ವೇತನಾಧಾರಿತ ಉದ್ಯೋಗ ಕಾಮಗಾರಿಗಳನ್ನು ಸ್ಥಗಿತಗೊಳಿಸಿರುವುದರಿಂದ ಗ್ರಾಮೀಣ ಕುಟುಂಬಗಳ ವಾರ್ಷಿಕ ವೇತನ ಆದಾಯದಲ್ಲಿ ಉಂಟಾಗಿರುವ ಇಳಿಕೆಯ ಕುರಿತು ವಿವರ ಬಯಸಿದ್ದರು. ಅಲ್ಲದೇ ಈ ಬಗ್ಗೆ ಸರ್ಕಾರವು ಯಾವುದೇ ಮೌಲ್ಯಮಾಪನ ನಡೆಸಿದೆಯೇ? ನಡೆಸಿದ್ದರೆ, ಅದರ ವಿವರಗಳು, ವಿಶೇಷವಾಗಿ ಛತ್ತೀಸ್‌ಗಢದ ಆದಿವಾಸಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅಗತ್ಯ ಆದಾಯದ ವಿವರಗಳನ್ನೂ ಕೋರಿದ್ದರು.

 

 

ಡಿಜಿಟಲ್ ಅನುಸರಣೆ ಅಥವಾ ದೃಢೀಕರಣ ಸಮಸ್ಯೆಗಳ ಕಾರಣದಿಂದ ನೈಜ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಲು ಸರ್ಕಾರ ಕೈಗೊಂಡಿರುವ ಸರಿಪಡಿಸುವ ಕ್ರಮಗಳ ವಿವರಗಳು, ಕಳೆದ ಐದು ವರ್ಷಗಳಲ್ಲಿ ಎಂಜಿ ನರೇಗಾ ಬೆಂಬಲಿತ ಕೃಷಿ ಹಾಗೂ ಸಂಬಂಧಿತ ಕಾಮಗಾರಿಗಳಲ್ಲಿ ಅನುಮತಿಸಲಾದ ಕಾಮಗಾರಿಗಳ ಪಟ್ಟಿಯಿಂದ ಸ್ಥಗಿತಗೊಳಿಸಲಾದ ಅಥವಾ ತೆಗೆದುಹಾಕಲಾದ ಕಾಮಗಾರಿಗಳ ವಿವರಗಳು ಹಾಗೂ ಅವುಗಳಿಗೆ ಕಾರಣಗಳೇನು ಎಂಬ ವಿವರ ಕೋರಿದ್ದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಂಬಂಧಿತ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಜಾರಿಗೊಳಿಸುತ್ತಿವೆ. ಉದ್ಯೋಗ ಕಾರ್ಡ್‌ಗಳನ್ನು ನೀಡುವುದು, ಅವುಗಳ ಪರಿಶೀಲನೆ, ನವೀಕರಣ ಮತ್ತು ಅಳಿಸುವ ಜವಾಬ್ದಾರಿಯೂ ಸಹ ರಾಜ್ಯಗಳದ್ದೇ ಆಗಿದೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಉತ್ತರಿಸಿದ್ದಾರೆ.

ದೇಶಾದ್ಯಂತ ನ್ಯಾಯಸಮ್ಮತ, ಪಾರದರ್ಶಕ ಮತ್ತು ಏಕರೂಪದ ಪ್ರಕ್ರಿಯೆಯನ್ನು ಖಚಿತಪಡಿಸುವ ಉದ್ದೇಶದಿಂದ ಕೇಂದ್ರ ಸಚಿವಾಲಯವು 2025ರ ಜನವರಿ 25ರಂದು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ವನ್ನು ಹೊರಡಿಸಿದೆ. ಯಾವುದೇ ಉದ್ಯೋಗ ಕಾರ್ಡ್ ಅಥವಾ ಕಾರ್ಮಿಕರ ದಾಖಲೆಯನ್ನು ಅಳಿಸುವ ಮೊದಲು ಅನುಸರಿಸಬೇಕಾದ ನಿಯಮಾನುಸಾರ ಪ್ರಕ್ರಿಯೆ ಹಾಗೂ ಸುರಕ್ಷತಾ ಕ್ರಮಗಳನ್ನು ಅದರಲ್ಲಿ ನಿಗದಿಪಡಿಸಿದೆ. ನಿಗದಿತ ವಿಧಾನಾನುಸಾರ ಸಂಬಂಧಿತ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶದ ಆಡಳಿತದಿಂದ ಸಮರ್ಪಕ ಪರಿಶೀಲನೆ ನಡೆಸಿದ ನಂತರವೇ ಯಾವುದೇ ಉದ್ಯೋಗ ಕಾರ್ಡ್‌ನ್ನು ರದ್ದುಗೊಳಿಸಬಹುದು ಎಂದು ವಿವರಿಸಿದ್ದಾರೆ.

 

 

2021–22ರಿಂದ 2026–27ನೇ ಹಣಕಾಸು ವರ್ಷದ 2026ರ ಜುಲೈ 22ರ ಅಂತ್ಯಕ್ಕೆ ಒಟ್ಟು 5.00 ಕೋಟಿ ಕುಟುಂಬಗಳು ಹಾಗೂ 8.30 ಕೋಟಿ ಕಾರ್ಮಿಕರನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊಸದಾಗಿ ಸೇರಿಸಲಾಗಿದೆ. ವಿಬಿ ಜಿ ರಾಮ್‌ ಕಾಯ್ದೆ 2025ರ ಸೆಕ್ಷನ್ 6ರ ಪ್ರಕಾರ, ಅಧಿಸೂಚಿತ ಗರಿಷ್ಠ ಬಿತ್ತನೆ ಹಾಗೂ ಕೊಯ್ಲು ಅವಧಿಗಳಲ್ಲಿ ಒಟ್ಟು 60 ದಿನಗಳವರೆಗೆ ಯೋಜನೆಯ ಅನುಷ್ಠಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅವಕಾಶ ಕಲ್ಪಿಸಿದೆ.

ಗ್ರಾಮೀಣ ಆರ್ಥಿಕತೆಯಲ್ಲಿ ಸಮತೋಲನ ಕಾಪಾಡುವುದು ಹಾಗೂ ಹೆಚ್ಚಿನ ಗ್ರಾಮೀಣ ಕುಟುಂಬಗಳ, ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮುಖ ಜೀವನೋಪಾಯವಾಗಿರುವ ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ನಿಯಮವನ್ನು ಪರಿಚಯಿಸಿದೆ. ಅದರಂತೆ ಸ್ಥಳೀಯ ಕೃಷಿ-ಹವಾಮಾನ ಪರಿಸ್ಥಿತಿಗಳು ಹಾಗೂ ಕೃಷಿ ಕ್ಯಾಲೆಂಡರ್‌ಗಳನ್ನು ಆಧರಿಸಿ, ಕೃಷಿ ಕಾರ್ಯಗಳಿಗೆ ಅಗತ್ಯವಾದ ಕಾರ್ಮಿಕರ ಲಭ್ಯತೆಯನ್ನು ಖಚಿತಪಡಿಸುವ ಸಲುವಾಗಿ, ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಇಂತಹ ಅವಧಿಯನ್ನು ಅಧಿಸೂಚಿಸುವ ಅಧಿಕಾರ ನೀಡಿದೆ.

ಆದಾಗ್ಯೂ, ಈ ಕಾಯ್ದೆಯಡಿ 125 ದಿನಗಳ ವೇತನಾಧಾರಿತ ಉದ್ಯೋಗದ ಶಾಸನಬದ್ಧ ಖಾತರಿ ಯಾವುದೇ ಬದಲಾವಣೆಯಾಗಿಲ್ಲ. ಗ್ರಾಮೀಣ ಕುಟುಂಬಗಳು ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಈ ಖಾತರಿಯ ಉದ್ಯೋಗವನ್ನು ಪಡೆಯಬಹುದು ಎಂದು ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಹಣಕಾಸು ವರ್ಷದ ಉಳಿದ ಅವಧಿಯಲ್ಲಿ, ಕಾಯ್ದೆಯ ಬೇಡಿಕೆ ಆಧಾರಿತ (Demand-driven) ನಿಯಮಾವಳಿಗಳ ಪ್ರಕಾರ ಗ್ರಾಮೀಣ ಕುಟುಂಬಗಳು ಖಾತರಿಯ ಉದ್ಯೋಗವನ್ನು ಪಡೆಯಬಹುದು. ಈ ನಿಯಮವು ಕೇವಲ ಕಾಮಗಾರಿಗಳ ಸಮಯ ನಿಗದಿ ಮತ್ತು ಕ್ರಮಬದ್ಧ ಅನುಷ್ಠಾನಕ್ಕೆ ಸಂಬಂಧಿಸಿದ್ದು, ಕಾಯ್ದೆಯಡಿ ಇರುವ ಉದ್ಯೋಗದ ಹಕ್ಕುಗಳನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ವಿಬಿ ಜಿ ರಾಮ್‌ ಕಾಯ್ದೆ 2025 ಅಡಿಯಲ್ಲಿ ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಪರಿಣಾಮಕಾರಿ ಸೇವಾ ವಿತರಣೆಯನ್ನು ಬಲಪಡಿಸುವ ಉದ್ದೇಶದಿಂದ ರೂಪಿಸಲಾಗಿದೆ. ಜೊತೆಗೆ, ಕಾರ್ಮಿಕರ ಮಾಹಿತಿಯ ರಕ್ಷಣೆಗೆ ಸೂಕ್ತ ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. ಡಿಜಿಟಲ್ ಅನುಸರಣೆ (Digital Compliance) ಅಥವಾ ದೃಢೀಕರಣ (Authentication) ಸಂಬಂಧಿತ ಸಮಸ್ಯೆಗಳ ಕಾರಣದಿಂದ ನೈಜ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು, ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಬಲಿಷ್ಠ ವಿನಾಯಿತಿ ನಿರ್ವಹಣಾ (Exception Handling) ವ್ಯವಸ್ಥೆಗಳನ್ನು ಕಲ್ಪಿಸಿದೆ.

ಕಳಪೆ ಜಾಲ ಸಂಪರ್ಕ, ತಾಂತ್ರಿಕ ದೋಷಗಳು, ಸಾಧನ ಸಂಬಂಧಿತ ಸಮಸ್ಯೆಗಳು ಅಥವಾ ಇತರ ವಿಶೇಷ ಸಂದರ್ಭಗಳಿಂದ ಉಂಟಾಗುವ ನೈಜ ಪ್ರಕರಣಗಳಲ್ಲಿ ಪರ್ಯಾಯ ವಿಧಾನಗಳನ್ನು ಅನುಸರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಉದ್ಯೋಗ ಪಡೆಯಲು ಸಿದ್ಧರಿರುವ ಕಾರ್ಮಿಕರು ಕಾಯ್ದೆಯ ನಿಯಮಗಳ ಪ್ರಕಾರ ಉದ್ಯೋಗ ಹಾಗೂ ಸಂಬಂಧಿತ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಎಂಜಿ ನರೇಗಾ ಅಡಿಯಲ್ಲಿ ಅನುಮತಿಸಿದ್ದ ಕೃಷಿ ಅಥವಾ ಕೃಷಿಗೆ ಸಂಬಂಧಿತ ಯಾವುದೇ ಕಾಮಗಾರಿಯನ್ನು ಅನುಮತಿಸಲಾದ ಕಾಮಗಾರಿಗಳ ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ ಅಥವಾ ಸ್ಥಗಿತಗೊಳಿಸಿಲ್ಲ. ಆದರೂ ವಿಬಿ ಜಿ ರಾಮ್‌ ಅಡಿಯಲ್ಲಿ 2026ರ ಜುಲೈ 1ರಿಂದ ಜಾರಿಗೆ ತಂದ ನಂತರ, ಹೊಸ ಕಾಯ್ದೆಯ ಉದ್ದೇಶಗಳಿಗೆ ಅನುಗುಣವಾಗಿ ಅನುಮತಿಸಲಾದ ಕಾಮಗಾರಿಗಳ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸಿ ವಿಸ್ತರಿಸಲಾಗಿದೆ.

 

 

ಜಲ ಭದ್ರತೆ, ಮೂಲಭೂತ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸಂಬಂಧಿತ ಮೂಲಸೌಕರ್ಯ, ತೀವ್ರ ಹವಾಮಾನ ಘಟನೆಗಳ ಪರಿಣಾಮ ಶಮನವೂ ಒಳಗೊಂಡಿದೆ. ಇದೇ ವೇಳೆ, ಕೃಷಿ ಹಾಗೂ ಕೃಷಿಗೆ ಸಂಬಂಧಿತ ಚಟುವಟಿಕೆಗಳಿಗೆ ಬೆಂಬಲವನ್ನು ಮುಂದುವರಿಸುತ್ತಾ, ಅನುಮತಿಸಲಾದ ಕಾಮಗಾರಿಗಳ ಪಟ್ಟಿಯನ್ನು ಇನ್ನಷ್ಟು ವಿಸ್ತೃತ ಹಾಗೂ ಸಮಗ್ರ ರೂಪದಲ್ಲಿ ಒಳಗೊಂಡಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಡಿಲೀಟ್‌ ಆಗಿದ್ದೆಷ್ಟು?

ಕಳೆದ 5 ವರ್ಷದಲ್ಲಿ 16.80 ಲಕ್ಷ ಜಾಬ್‌ ಕಾರ್ಡ್‌, 1,32,76,318 ನರೇಗಾ ಕಾರ್ಮಿಕರನ್ನೂ ಡಿಲೀಟ್‌ ಮಾಡಿದೆ. 2021ರಲ್ಲಿ 33,770, 2022ರಲ್ಲಿ 1,25,942, 2023ರಲ್ಲಿ 1,96,372, 2024ರಲ್ಲಿ 26,538, 2025ರಲ್ಲಿ 1,20,962, 2026ರಲ್ಲಿ  11,77,174 ಸೇರಿದಂತೆ ಒಟ್ಟಾರೆ 16,80,758 ಜಾಬ್‌ ಕಾರ್ಡ್‌ ಡಿಲೀಟ್‌ ಆಗಿರುವುದು ಉತ್ತರದಿಂದ ತಿಳಿದು ಬಂದಿದೆ. ಈ ಅಂಕಿ ಸಂಖ್ಯೆ ಪ್ರಕಾರ 2026ರ ಜುಲೈ 22ರ ಅಂತ್ಯಕ್ಕೆ  ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜಾಬ್‌ ಕಾರ್ಡ್‌ ಡಿಲೀಟ್‌ ಆಗಿರುವುದು ಕಂಡು ಬಂದಿದೆ.

 

 

ಅದೇ ರೀತಿ 2021ರಿಂದ 2026ರವರೆಗೆ 66.38 ಲಕ್ಷ ಸಂಖ್ಯೆಯ ಕಾರ್ಮಿಕರನ್ನೂ ಸಹ ಜಾಬ್‌ ಕಾರ್ಡ್‌ಗಳಿಂದ ಡಿಲೀಟ್‌ ಮಾಡಲಾಗಿದೆ. 2021ರಲ್ಲಿ 1,99,713, 2022ರಲ್ಲಿ 4,96,583, 2023ರಲ್ಲಿ 9,10,710, 2024ರಲ್ಲಿ 2,26,677, 2025ರಲ್ಲಿ 8,13,882, 2026ರಲ್ಲಿ 39.99 ಲಕ್ಷ ಸೇರಿದಂತೆ ಒಟ್ಟಾರೆ 66.38 ಲಕ್ಷ ಸಂಖ್ಯೆಯ ನರೇಗಾ ಕಾರ್ಮಿಕರನ್ನು ಡಿಲೀಟ್‌ ಮಾಡಿರುವುದು ಗೊತ್ತಾಗಿದೆ.

ಕೇಂದ್ರ ಸಚಿವ ಶಿವರಾಜ್ ಸಿಂಗ್‌ ಚೌಹಾಣ್ ಅವರ ತವರು ಜಿಲ್ಲೆ ಮಧ್ಯ ಪ್ರದೇಶದಲ್ಲಿ 27.10 ಲಕ್ಷ ಜಾಬ್‌ ಕಾರ್ಡ್‌ ಡಿಲೀಟ್‌ ಆಗಿದೆ. 1.06 ಕೋಟಿಯಷ್ಟು  ನರೇಗಾ ಕಾರ್ಮಿಕರನ್ನು ಪಟ್ಟಿಯಿಂದ ಅಳಿಸಿ ಹಾಕಿದೆ.

ಗುಜರಾತ್‌ನಲ್ಲಿ 8.10 ಲಕ್ಷ ಜಾಬ್‌ ಕಾರ್ಡ್‌ ಮತ್ತು 25.65 ಲಕ್ಷ ಕಾರ್ಮಿಕರು,  ಮಹಾರಾಷ್ಟ್ರದಲ್ಲಿ 3.81 ಲಕ್ಷ ಜಾಬ್‌ ಕಾರ್ಡ್‌ , 20.57 ಲಕ್ಷ ನರೇಗಾ ಕಾರ್ಮಿಕರು,  ಆಂಧ್ರ ಪ್ರದೇಶದಲ್ಲಿ 44.74 ಲಕ್ಷ ಜಾಬ್ ಕಾರ್ಡ್‌ 1,16,71,178 ನರೇಗಾ ಕಾರ್ಮಿಕರು,  ಅಸ್ಸಾಂನಲ್ಲಿ 12.95 ಲಕ್ಷ ಜಾಬ್‌ ಕಾರ್ಡ್‌, 41.06 ಲಕ್ಷ ನರೇಗಾ ಕಾರ್ಮಿಕರನ್ನು ಪಟ್ಟಿಯಿಂದ ಅಳಿಸಿ ಹಾಕಿದೆ.

 

ಹಾಗೆಯೇ  ಛತ್ತೀಸ್‌ ಗಢ್‌ನಲ್ಲಿ 14.84 ಲಕ್ಷ ಜಾಬ್‌ ಕಾರ್ಡ್‌ ಮತ್ತು 60.66 ಲಕ್ಷ,  ಮಣಿಪುರ್‍‌ನಲ್ಲಿ 36,915 ಜಾಬ್‌ ಕಾರ್ಡ್‌, 4.81 ಲಕ್ಷ ನರೇಗಾ ಕಾರ್ಮಿಕರು,  ಒಡಿಶಾದಲ್ಲಿ 47.93 ಲಕ್ಷ ಜಾಬ್‌ ಕಾರ್ಡ್‌, 1.47 ಕೋಟಿ ನರೇಗಾ ಕಾರ್ಮಿಕರು,  ರಾಜಸ್ಥಾನದಲ್ಲಿ 1.64 ಕೋಟಿ ಜಾಬ್ ಕಾರ್ಡ್‌ , 78.30 ಲಕ್ಷ ನರೇಗಾ ಕಾರ್ಮಿಕರು,  ತಮಿಳುನಾಡಿನಲ್ಲಿ 22.86 ಲಕ್ಷ ಕಾರ್ಡ್‌, 57.04 ಲಕ್ಷ ನರೇಗಾ ಕಾರ್ಮಿಕರು,  ಉತ್ತರ ಪ್ರದೇಶದಲ್ಲಿ 10.86 ಲಕ್ಷ ಜಾಬ್‌ ಕಾರ್ಡ್‌, 1.80 ಕೋಟಿ ನರೇಗಾ ಕಾರ್ಮಿಕರು,  ಪಶ್ಚಿಮ ಬಂಗಾಳದಲ್ಲಿ 26.18 ಲಕ್ಷ ಜಾಬ್ ಕಾರ್ಡ್‌, 1.00 ಕೋಟಿ ನರೇಗಾ ಕಾರ್ಮಿಕರು,  ಬಿಹಾರದಲ್ಲಿ 1,14,20,890 ಸಂಖ್ಯೆಯ ಜಾಬ್‌ ಕಾರ್ಡ್‌, 1.73 ಕೋಟಿ ನರೇಗಾ ಕಾರ್ಮಿಕರನ್ನು ಡಿಲೀಟ್‌ ಮಾಡಿರುವುದು ತಿಳಿದು ಬಂದಿದೆ.

Hot this week

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

ಪ್ರವಾಸೋದ್ಯಮ ಆದಾಯ; ಲಕ್ಷಾಂತರ ರುಪಾಯಿ ಜಿಎಸ್‌ಟಿ ಕಟಾಯಿಸದ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ, ಸಾರ್ವಜನಿಕವಾಗಿ ನಿಧಿ ಬಹಿರಂಗವಾಗಿಲ್ಲವೇಕೆ?

ಬೆಂಗಳೂರು; ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಗೆ 2018-19ನೇ ಸಾಲಿನಲ್ಲಿ ಪ್ರವಾಸೋದ್ಯಮದಿಂದ...

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...
Please Scan to make Your Contribution

Topics

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

Related Articles

Popular Categories

error: Content is protected !!