Friday | July 10, 2026 |

ಸಾಮರ್ಥ್ಯವೇ ಇಲ್ಲದ ಕಂಪನಿಗೆ 173 ಕೋಟಿ ಮೌಲ್ಯದ ಹೆಚ್ಚುವರಿ ಟೆಂಡರ್‌ ನೀಡಿಕೆ ಆರೋಪ; ತುಷಾರ್ ಗಿರಿನಾಥ್‌ ವಿರುದ್ದ ದೂರರ್ಜಿ ವಿಚಾರಣೆ ಅಗತ್ಯವೇ ಇಲ್ಲವೆಂದ ನಗರಾಭಿವೃದ್ಧಿ ಇಲಾಖೆ

ಬೆಂಗಳೂರು; ಟೆಂಡರ್‌ಗಳು, ಕಾಮಗಾರಿಗಳ ವಿಚಾರದಲ್ಲಿ ಉದ್ದೇಶಪೂರ್ವಕ ನಿಷ್ಕ್ರಿಯತೆ ಹಾಗೂ ಸಂಚುಕೋರ ರಕ್ಷಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಹಿರಿಯ ಐಎಎಸ್‌ ಅಧಿಕಾರಿ ತುಷಾರ್ ಗಿರಿನಾಥ್ ಅವರ ವಿರುದ್ಧದ ದೂರರ್ಜಿಯ ವಿಚಾರಣೆ ಅಗತ್ಯವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು ತೀರ್ಮಾನಿಸಿರುವುದು ಇದೀಗ ಬಹಿರಂಗವಾಗಿದೆ.

ವಿಶೇಷವೆಂದರೇ ಈ ದೂರರ್ಜಿಯು ನೇರವಾಗಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರ ವಿರುದ್ಧವೇ ಸಲ್ಲಿಕೆಯಾಗಿತ್ತು. ಈ ದೂರರ್ಜಿಯ ವಿಚಾರಣೆ ಅಗತ್ಯವೇ ಇಲ್ಲ ಎಂದು ತುಷಾರ್ ಗಿರಿನಾಥ್‌ ಅವರು ಮುಖ್ಯಸ್ಥರಾಗಿರುವ ಇಲಾಖೆಯೇ ತೀರ್ಮಾನಿಸಿರುವುದು ಅಧಿಕಾರಿವರ್ಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮತ್ತೊಂದು ವಿಶೇಷವೆಂದರೇ ತುಷಾರ್ ಗಿರಿನಾಥ್ ಅವರ ವಿರುದ್ಧದ ದೂರರ್ಜಿಯ ವಿಚಾರಣೆ ಅಗತ್ಯವೇ ಇಲ್ಲ ಎಂದು ತೀರ್ಮಾನ ಕೈಗೊಂಡ 5 ದಿನಗಳ ಅಂತರದಲ್ಲೇ ಇದೇ ದೂರರ್ಜಿಗೆ ಸಂಬಂಧಿಸಿದಂತೆ ಸ್ವೀಕರಿಸಿದ್ದ ಲೀಗಲ್ ನೋಟೀಸ್‌ ಮತ್ತು ದೂರಿನಲ್ಲಿರುವ ಅಂಶಗಳ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸಬೇಕು ಎಂದು ಇದೇ ನಗರಾಭಿವೃದ್ಧಿ ಇಲಾಖೆಯು ಅಭಿಪ್ರಾಯಿಸಿದೆ. ಇದು  ಒಂದೇ ದೂರರ್ಜಿಯ ಕುರಿತು ನಗರಾಭಿವೃದ್ದಿಯ ಇಲಾಖೆಯು ಎರಡು ಅಭಿಪ್ರಾಯಗಳನ್ನು ಹೊಂದಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಗೆ ಎರಡು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

ಎಂಎಸ್‌ವಿ ಕನ್ಸ್‌ಟ್ರಕ್ಷನ್ಸ್‌ ಸಂಸ್ಥೆಗೆ ಸಂಬಂಧಿಸಿದಂತೆ ಟೆಂಡರ್‌ಗಳು ಮತ್ತು ಕಾಮಗಾರಿಗಳ ವಿಚಾರದಲ್ಲಿ ಉದ್ದೇಶಪೂರ್ವಕ ನಿಷ್ಕ್ರಿಯತೆ ಹಾಗೂ ಸಂಚುಕೋರ ರಕ್ಷಣೆ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಟಿ ಜೆ ಅಬ್ರಾಹಂ ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ 2026ರ ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಟ್ಟು ಮೂರು ಬಾರಿ ಕಾನೂನು ನೋಟೀಸ್‌ ನೀಡಿದ್ದರು.

ಈ ನೋಟೀಸ್‌ ಸ್ವೀಕರಿಸಿದ್ದರೂ ಸಹ ಇದಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿಂದಿನ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಯಾವುದೇ ಕ್ರಮವಹಿಸಿರಲಿಲ್ಲ. ಹೀಗಾಗಿ 2026ರ ಮೇ 25ರಂದು ಮತ್ತೊಮ್ಮೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದರು.

ಈ ದೂರರ್ಜಿಯನ್ನು ಮುಖ್ಯ ಕಾರ್ಯದರ್ಶಿಗಳು ಅಗತ್ಯ ಕ್ರಮಕ್ಕಾಗಿ ನಗರಾಭಿವೃದ್ಧಿ ಇಲಾಖೆಗೆ ರವಾನಿಸಿದ್ದರು. ಈ ದೂರರ್ಜಿಯನ್ನು ಪರಿಶೀಲಿಸಿದ್ದ ನಗರಾಭಿವೃದ್ಧಿ ಇಲಾಖೆಯು ದೂರಿನ ವಿಚಾರಣೆ ಅಗತ್ಯವಿಲ್ಲ ಎಂದು ಟಿಪ್ಪಣಿ ಹಾಳೆಯಲ್ಲಿ ಅಭಿಪ್ರಾಯಿಸಿತ್ತು.

ಟಿಪ್ಪಣಿ ಹಾಳೆಯಲ್ಲೇನಿದೆ?

2026ರ ಜನವರಿ 2ರಂದು ಪ್ಯಾಕೇಜ್‌ 2 ಟೆಂಡರ್‍‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಕೆಟಿಪಿಪಿ ಕಾಯ್ದೆ ಅನುಸಾರ ಮೇಲ್ಮನವಿ ಪ್ರಾಧಿಕಾರವಾಗಿರುವ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರು ವಿಚಾರಣೆ ಮಾಡಿದ್ದಾರೆ. ಬಾಧಿತ ಪಕ್ಷಕಾರರು ಮತ್ತು ಎದುರುದಾರರಿಗೆ ವಿಚಾರಣೆ ನೋಟೀಸ್‌ ಜಾರಿ ಮಾಡಿತ್ತು. 2026ರ ಏಪ್ರಿಲ್‌ 4ರಂದು ಹೊರಡಿಸಿದ್ದ ಆದೇಶಗಳ ಸಂಬಂಧ ದೂರರ್ಜಿ ಸಲ್ಲಿಸಿರುವುದು ಕಂಡು ಬಂದಿದೆ.

‘ಈ ಪ್ರಕರಣವು ಒಂದು ಅರೆ ನ್ಯಾಯಿಕ ವಿಚಾರಣೆ ಪ್ರಕರಣವಾಗಿದೆ. ಅರೆ ನ್ಯಾಯಿಕ ವಿಚಾರಣೆ ಆದೇಶದ ವಿರುದ್ಧ ಬಾಧಿತರು ಸಕ್ಷಮ ನ್ಯಾಯಾಲಯಕ್ಕೆ ದಾವೆ ಹೂಡಿ ಸೂಕ್ತ ಪರಿಹಾರ ಪಡೆಯಬಹುದಾಗಿದೆ. ಈ ಸಂಬಂಧ ಯಾವುದೇ ದೂರಿನ ವಿಚಾರಣೆ ಅಗತ್ಯವಿರುವುದಿಲ್ಲ,’ ಎಂದು ಇಲಾಖೆಯ ಶಾಖಾಧಿಕಾರಿ ಚನ್ನಕೇಶವ ಕೆ ಬಿ ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿ ಎನ್ ಕೆ ಲಕ್ಷ್ಮಿಸಾಗರ್‍‌ ಅವರು 2026ರ ಜೂನ್ 5ರಂದು  ಟಿಪ್ಪಣಿಯಲ್ಲಿ ದಾಖಲಿಸಿದ್ದರು.

 

 

ಆದರೇ ಇದೇ ದೂರರ್ಜಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಅಗತ್ಯವಿಲ್ಲ ಎಂದು ತೀರ್ಮಾನಿಸಿರುವ ನಗರಾಭಿವೃದ್ಧಿ ಇಲಾಖೆಯು ಇದೇ ದೂರರ್ಜಿಯನ್ನು ಗ್ರೇಟರ್‍‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತರಿಗೂ ರವಾನಿಸಿದೆ. ಈ ದೂರರ್ಜಿ ಮತ್ತು ಲೀಗಲ್‌ ನೋಟಿಸ್‌ನಲ್ಲಿರುವ ಅಂಶಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಕೈಗೊಂಡ ಕ್ರಮದ ಬಗಗೆ ನಗರಾಭಿವೃದ್ದಿ ಇಲಾಖೆಗೆ ಒದಗಿಸಬೇಕು ಎಂದು ಶಾಖಾಧಿಕಾರಿ ಚನ್ನಕೇಶವ ಅವರು 2026ರ ಜೂನ್‌ 10ರಂದು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

 

ಏನಿದು ಪ್ರಕರಣ?

ಸಾಮಾಜಿಕ ಹೋರಾಟಗಾರ ಟಿ ಜೆ ಅಬ್ರಹಾಂ ಅವರು ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್, ಬಿಬಿಎಂಪಿ / ಜಿಬಿಎ ಅಧಿಕಾರಿಗಳು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸಂಬಂಧಿಸಿದ ಗಂಭೀರ ಮತ್ತು ವ್ಯವಸ್ಥಿತ ಅಕ್ರಮಗಳ ಕುರಿತು ಮತ್ತು ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ ನಿಯಮಗಳ ಸ್ಪಷ್ಟ ಉಲ್ಲಂಘನೆಗಳನ್ನು ವಿವರಿಸಿದ್ದರು. ಈ ಸಂಬಂಧ   ಬಿಬಿಎಂಪಿ / ಜಿಬಿಎ ಆಯುಕ್ತರು ಹಾಗೂ ಬೆಂಗಳೂರು ಕೇಂದ್ರ, ಉತ್ತರ, ಪೂರ್ವ, ದಕ್ಷಿಣ ಮತ್ತು ಪಶ್ಚಿಮ ನಗರ ನಿಗಮಗಳ ಆಯುಕ್ತರಿಗೆ ಟಿ ಜೆ ಅಬ್ರಾಹಂ ಅವರು ದೂರು ಸಲ್ಲಿಸಿದ್ದರು.

 

 

 

 

ಟೆಂಡರ್ ಪ್ರಕ್ರಿಯೆಗಳಲ್ಲಿ ವಂಚನೆ

ಸಾರ್ವಜನಿಕ ಮೂಲಸೌಕರ್ಯ ಕಾಮಗಾರಿಗಳಲ್ಲಿ  ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ನಡೆಸಿದೆ ಎಂದು ದೂರಲಾಗಿರುವ ವ್ಯವಸ್ಥಿತ ಭ್ರಷ್ಟಾಚಾರ, ಟೆಂಡರ್ ಪ್ರಕ್ರಿಯೆಗಳಲ್ಲಿ ವಂಚನೆ, ದಾಖಲೆಗಳನ್ನು ತಿರುಚಿರುವುದು ಹಾಗೂ ಭಾರೀ ಪ್ರಮಾಣದ ಕಾರ್ಯನಿರ್ವಹಣಾ ವೈಫಲ್ಯಗಳ ಕುರಿತು ವಿವರಿಸಲಾಗಿದೆ. ಈ ಎಲ್ಲವೂ ಬಿಬಿಎಂಪಿ (ಈಗ ಜಿಬಿಎ) ಅಧಿಕಾರಿಗಳೊಂದಿಗೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ) ಅವರ ಕಚೇರಿಯ ಸಹಭಾಗಿತ್ವದಲ್ಲಿ ನಡೆದಿದೆ ಎಂದು ದೂರುದಾರ ಟಿ ಜೆ ಅಬ್ರಹಾಂ ಅವರು ಆರೋಪಿಸಿದ್ದರು.

ಜಿಬಿಎ ಅಧಿಕಾರಿಗಳೊಂದಿಗೆ ಸಂಸ್ಥೆಯು  ಆಪ್ತ ಸಂಬಂಧ ಹೊಂದಿದೆಯೇ?

‘ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ನಿರಂತರ ಕಾರ್ಯನಿರ್ವಹಣಾ ವೈಫಲ್ಯ ಹಾಗೂ ವಂಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆದರೂ ಸಹ, ಬಿಬಿಎಂಪಿ/ಜಿಬಿಎ ಹಾಗೂ ಇತರ ಇಲಾಖೆಗಳ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳನ್ನು ನಿರಂತರವಾಗಿ ಪಡೆಯುತ್ತ ಬಂದಿದೆ. ಇದು ಜಿಬಿಎ ಅಧಿಕಾರಿಗಳೊಂದಿಗೆ ಸಂಸ್ಥೆಯು ಹೊಂದಿರುವ ಆಪ್ತ ಸಂಬಂಧ (nexus) ಮತ್ತು ಅದರ ಮೂಲಕ ದೊರೆತ ಅನುಕೂಲದಿಂದ ಸಾಧ್ಯವಾಗಿದೆ ಎಂಬುದು ಗೋಚರಿಸುತ್ತದೆ,’ ಎಂದು ದೂರುದಾರ ಟಿ ಜೆ ಅಬ್ರಹಾಂ ಅವರು ಆಪಾದಿಸಿದ್ದರು.

 

 

 

ಸಾಮರ್ಥ್ಯಕ್ಕೂ ಮೀರಿದ ಟೆಂಡರ್

2021ರ ವೇಳೆಗೆ ಎಂಎಸ್‌ವಿ ಸಂಸ್ಥೆಯ ಟೆಂಡರ್ ಸಾಮರ್ಥ್ಯ (Bid Capacity) ಕೇವಲ ಸುಮಾರು ₹12.5 ಕೋಟಿಯಷ್ಟಿತ್ತು. ಆದರೆ ಆ ಸಾಮರ್ಥ್ಯವನ್ನು ಮೀರಿದ ಮೌಲ್ಯದ ಟೆಂಡರ್‌ಗಳಲ್ಲಿ ಈ ಕಂಪನಿಯು ಭಾಗವಹಿಸುತ್ತಲೇ ಬಂದಿದೆ. ಅಂತಹ ಟೆಂಡರ್‌ಗಳನ್ನು ಪಡೆಯುವುದನ್ನೂ ಮುಂದುವರಿಸಿತು. ಇದು ಕೆಟಿಪಿಪಿ ಚೌಕಟ್ಟಿನ ಅಡಿಯಲ್ಲಿ ನಿಗದಿಪಡಿಸಲಾದ ಕಾನೂನುಬದ್ಧ ಹಣಕಾಸು ಅರ್ಹತಾ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.

ಈ ಆರೋಪಕ್ಕೆ ಟಿ ಜೆ ಅಬ್ರಹಾಂ ಅವರು ಕೆಲವು ಜಾಬ್ ಕೋಡ್‌ ಸಂಖ್ಯೆಗಳನ್ನು ನೀಡಿದ್ದಾರೆ. (ಸಂಖ್ಯೆ 102-18-000059 ರಿಂದ 102-18-000064, 304-20-000303, 304-20-000012, 304-20-000292 ಹಾಗೂ 028-20-000016 ಅಡಿಯಲ್ಲಿ) ಒಟ್ಟು 8 ಟೆಂಡರ್‌ಗಳನ್ನು ಎಂಎಸ್‌ವಿ ಸಂಸ್ಥೆಗೆ ನೀಡಲಾಗಿದೆ. ಈ ಟೆಂಡರ್‌ಗಳ ಒಟ್ಟು ಮೌಲ್ಯ ₹ 56,72,50,947/- ಆಗಿದೆ ಎಂದು ವಿವರಿಸಿದ್ದರು.

 

 

 

 

ಕಂಪನಿಗೆ 173 ಕೋಟಿ ಮೌಲ್ಯದ ಹೆಚ್ಚುವರಿ ಟೆಂಡರ್‌ ಸಿಕ್ಕಿದ್ಹೇಗೆ?

ಆದರೆ, ಈ ಕಾಮಗಾರಿಗಳನ್ನು ಕಂಪನಿಯು ನಿರ್ವಹಿಸಲಿಲ್ಲ, ಅಥವಾ ಯಾವುದೇ ಭಾಗದ ಕಾಮಗಾರಿಯನ್ನೂ ಪೂರ್ಣಗೊಳಿಸಲಿಲ್ಲ. ಹಾಗೆಯೇ ಕೆಡಬ್ಲ್ಯೂ 4ರ ಷರತ್ತು 26ರ ಅಡಿಯಲ್ಲಿ ಅವಧಿ ವಿಸ್ತರಣೆಗೆ ಅಗತ್ಯ ಅನುಮತಿಯನ್ನು ಸಹ ಪಡೆದಿರಲಿಲ್ಲ ಎಂದು ದೂರಲಾಗಿದೆ. ₹56,72,50,947 ರು ಮೌಲ್ಯದ ಹಳೆಯ ಬಾಕಿ/ಅಪೂರ್ಣ ಕಾಮಗಾರಿಗಳು ಇದ್ದವು. ಆದರೂ 2020ರಲ್ಲಿ ಎಂಎಸ್‌ವಿ ಸಂಸ್ಥೆಯು ಹೊಸ ಟೆಂಡರ್‌ಗಳನ್ನು ಪಡೆಯುವುದನ್ನು ಮುಂದುವರಿಸಿತು. 2021 ರಿಂದ 2025ರ ಅವಧಿಯಲ್ಲಿ ಸುಮಾರು ₹173 ಕೋಟಿ ಮೌಲ್ಯದ ಹೆಚ್ಚುವರಿ ಟೆಂಡರ್‌ಗಳನ್ನು ಸಂಸ್ಥೆಗೆ ನೀಡಲಾಗಿದೆ ಎಂದು ದೂರಿನಲ್ಲಿ ಗಮನಸೆಳೆದಿದ್ದರು.

ವಿಶೇಷವಾಗಿ 2021ರ ಮಾರ್ಚ್‌ 30ರಂದು ಎಂಎಸ್‌ವಿ ಸಂಸ್ಥೆಯ ಹಿಂದಿನ ದಾಖಲೆಗಳು ಮತ್ತು ಕರ್ತವ್ಯ ಲೋಪಗಳ ಬಗ್ಗೆ ಪೂರ್ವಜ್ಞಾನವಿದ್ದರೂ ಸಹ, ಅನೇಕ ಟೆಂಡರ್‌ಗಳನ್ನು ಇದೇ ಕಂಪನಿಗೆ ಮಂಜೂರು ಮಾಡಲಾಗಿದೆ. 2020ರ ಮೊದಲು ಮತ್ತು ನಂತರ ಎಂಎಸ್‌ವಿ ಸಂಸ್ಥೆಗೆ ನೀಡಲಾದ ಅನೇಕ ಕಾಮಗಾರಿಗಳು ಅಪೂರ್ಣವಾಗಿಯೇ ಉಳಿದಿವೆ ಎಂದು ಅಬ್ರಹಾಂ ಅವರು ದೂರಿನಲ್ಲಿ ವಿವರಿಸಿದ್ದರು.

 

 

 

ಇದರ ಪರಿಣಾಮವಾಗಿ, ಜುಲೈ 2022ರಲ್ಲಿ ಜಿಬಿಎ (GBA) ಸಂಸ್ಥೆಯು ₹1,91,36,228/- ಮೊತ್ತದ ಭದ್ರತಾ ಠೇವಣಿಗಳು (Security Deposits) ಮತ್ತು ಬ್ಯಾಂಕ್ ಗ್ಯಾರಂಟಿಗಳನ್ನು ಮುಟ್ಟುಗೋಲು (Forfeit) ಹಾಕಿಕೊಂಡಿದೆ. ಹಾಗೆಯೇ 2021ರ ಸೆ.9ರಂದು ಹೊರಡಿಸಿದ್ದ ಆದೇಶ (ಸಂಖ್ಯೆ 882/2021-22 ) ದ ಮೂಲಕ ಈ ಟೆಂಡರ್‌ಗಳನ್ನು ರದ್ದುಪಡಿಸಲಾಗಿತ್ತು. ಅಲ್ಲದೇ 2022ರ ಜುಲೈ 8ರಂದು (ಆದೇಶ ಸಂಖ್ಯೆ 187/2022-23 ಮೂಲಕ ) ಮುಟ್ಟುಗೋಲು ಆದೇಶ ಹೊರಡಿಸಿದ್ದರು.

6. 22 ಕೋಟಿ ನಷ್ಟ?

ಕಾಮಗಾರಿಗಳನ್ನು ನಿರ್ವಹಿಸದಿರುವುದು ಹಾಗೂ ಅವುಗಳನ್ನು ರದ್ದುಪಡಿಸಿರುವುದರಿಂದ, ಜಿಬಿಎಗೆ ಒಟ್ಟಾರೆ ₹6,22,92,658.48 ನಷ್ಟ ಉಂಟಾಗಿದೆ ಎಂದು ಲೆಕ್ಕ ಹಾಕಿದ್ದಾರೆ. ಇದರಲ್ಲಿ ಕೇವಲ ₹1,91,36,228/- ಮಾತ್ರ ಬ್ಯಾಂಕ್ ಗ್ಯಾರಂಟಿಗಳನ್ನು ನಗದೀಕರಿಸುವ (encash) ಮೂಲಕ ವಸೂಲಾಗಿದೆ. ಇನ್ನೂ ₹4,31,56,430.48/- ಮೊತ್ತವನ್ನು ಎಂಎಸ್‌ವಿ ಸಂಸ್ಥೆಯಿಂದ ವಸೂಲು ಮಾಡಬೇಕಾಗಿದೆ ಎಂದು ಸರ್ಕಾರದ ಗಮನಸೆಳೆದಿದ್ದರು.

 

 

 

ದೂರುದಾರರು ತಮ್ಮ ದೂರಿನಲ್ಲಿ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ (“MSV”) ಮತ್ತು/ಅಥವಾ  ಎಂಎಸ್‌ವಿ ವೆಂಕಟೇಶ್ ಕನ್ಸ್ಟ್ರಕ್ಷನ್ಸ್ ಹಾಗೂ/ಅಥವಾ  ಎಂ. ಎಸ್. ವೆಂಕಟೇಶ್ ಅವರು ಕಾಮಗಾರಿಗಳನ್ನು ಉದ್ದೇಶಪೂರ್ವಕವಾಗಿ ಆರಂಭಿಸಿಲ್ಲ. ಅಥವಾ ಅಪೂರ್ಣವಾಗಿ ಬಾಕಿ ಉಳಿಸುತ್ತಿದ್ದ ರೀತಿಯ ಕುರಿತು ವಿವರಿಸಿದ್ದರು.

ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಲೋಪ, ಸಂಚುಕೋರರ ರಕ್ಷಣೆ, ಅಪರಾಧಿಕ ದುರ್ವರ್ತನೆ, ಗುತ್ತಿಗೆದಾರನಿಗೆ ಅಕ್ರಮ ಲಾಭ; ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿರುದ್ಧ ಗಂಭೀರ ಆರೋಪ

 

ಈ ಕುರಿತು ದಿ ಫೈಲ್‌ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...
Please Scan to make Your Contribution

Topics

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

Related Articles

Popular Categories

error: Content is protected !!