Saturday | July 11, 2026 |

ಕಸದ ವಾಹನಗಳ ಇಂಧನಕ್ಕೆ ಸಾವಿರಾರು ಲೀಟರ್‌ ಪೆಟ್ರೋಲ್, ಡೀಸೆಲ್ ಬಳಕೆ; ನಗರಾಭಿವೃದ್ಧಿ ಸಚಿವರ ತವರಲ್ಲೇ ಇ ವಿ ವಾಹನಗಳ ಬಳಕೆಗೆ ಉದಾಸೀನತೆ

ಮೈಸೂರು; ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಒಟ್ಟು ವಾಹನಗಳ ಪೈಕಿ ಕೇವಲ 8 ವಾಹನಗಳು ಮಾತ್ರ ಎಲೆಕ್ಟ್ರಿಕ್‌ ವಾಹನಗಳಿವೆ. ‘ಸ್ಮಾರ್ಟ್ ಸಿಟಿ’ ತಂತ್ರಜ್ಞಾನಗಳ ಮೂಲಕ ಆಡಳಿತವನ್ನು ಆಧುನೀಕರಿಸಬೇಕಿದ್ದ ಮೈಸೂರು ಮಹಾನಗರಪಾಲಿಕೆ ಆಡಳಿತವು ಇ ವಿ ವಾಹನಗಳ ಬಳಕೆಯತ್ತ ಅತ್ಯಂತ ಉದಾಸೀನತೆ ತೋರಿರುವುದು ಇದೀಗ ಬಹಿರಂಗವಾಗಿದೆ.

ಈ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಕೋರಿದ್ದ ಅರ್ಜಿಗೆ ಮೈಸೂರು ಮಹಾನಗರಪಾಲಿಕೆಯು ನೀಡಿರುವ   ಮಾಹಿತಿ ಪ್ರಕಾರ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಮಹಾನಗರಪಾಲಿಕೆಯು ಉದಾಸೀನತೆ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಪಾಲಿಕೆಯ ವಾಹನ ವಿಭಾಗವು ನೀಡಿರುವ ಮಾಹಿತಿ ದಾಖಲೆಗಳ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯ ಕಸ ಹೊರುವ ವಿಲೇವಾರಿ ಮಾಡಲು ಒಟ್ಟು 427 ವಾಹನಗಳಿವೆ. ಈ ಪೈಕಿ ಕೇವಲ 8 ವಾಹನಗಳು ಮಾತ್ರ ಎಲೆಕ್ಟ್ರಿಕ್‌ ವಾಹನಗಳಾಗಿವೆ. ಉಳಿದಂತೆ 239 ಪೆಟ್ರೋಲ್‌ ವಾಹನಗಳು ಹಾಗೂ 180 ಡೀಸೆಲ್‌ ವಾಹನಗಳಿವೆ ಎಂದು ಮಾಹಿತಿ ಒದಗಿಸಿದೆ.

ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಕೇವಲ ಇಂಧನ ಮತ್ತು ಖಾಸಗಿ ಗ್ಯಾರೇಜ್‌ಗಳ ದುರಸ್ತಿ ಬಿಲ್‌ಗಳಿಗಾಗಿಯೇ ಬಳಕೆಯಾಗುತ್ತಿದೆ. ಪರಿಸರಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ (EVs) ಬದಲಾಗಲು ಪಾಲಿಕೆ ಆಸಕ್ತಿ ವಹಿಸಿಲ್ಲ. ಜಾಗತಿಕ ಮಟ್ಟದ ಸುಧಾರಿತ ರಾಷ್ಟ್ರಗಳಿಗೆ ಹೋಲಿಸಿದರೆ, ಮೈಸೂರು ಮಹಾನಗರ ಪಾಲಿಕೆಯು ಕಸ ವಿಲೇವಾರಿಯ ತಾಂತ್ರಿಕ ಮತ್ತು ಆರ್ಥಿಕ ನಿರ್ವಹಣೆಯಲ್ಲಿ ಇಂದಿಗೂ ಹಳೆಯ ಕಾಲದ ಮಾದರಿಗಳಿಗೇ ಅಂಟಿಕೊಂಡಿರುವುದು ಕಂಡುಬಂದಿದೆ.

ಎಲೆಕ್ಟ್ರಿಕಲ್ ವಾಹನಗಳ ಕಡೆಗಣಿಸಿರುವುದೇಕೆ?

ಮೈಸೂರು ಮಹಾನಗರ ಪಾಲಿಕೆಯ ವಾಹನ ವಿಭಾಗ ನೀಡಿರುವ ಅಧಿಕೃತ ಪಟ್ಟಿಯ ಪ್ರಕಾರ ತ್ಯಾಜ್ಯ ನಿರ್ವಹಣೆಯಲ್ಲಿ ಇಂದಿಗೂ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳದ್ದೇ ಪಾರುಪತ್ಯವಾಗಿದೆ. ಇಡೀ ನಗರದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ 427 ವಾಹನಗಳಲ್ಲಿ ಟಾಟಾ ಏಸ್ ವಾಹನಗಳದ್ದು ಸಿಂಹಪಾಲಿದೆ 68 ಟ್ರ್ಯಾಕ್ಟರ್‌ ಸೇರಿದಂತೆ 22 ಕಾಂಪ್ಯಾಕ್ಟರ್‌ಗಳಿವೆ. ಕೇವಲ 8 ಎಲೆಕ್ಟ್ರಿಕ್ ವಾಹನಗಳಿಗೆ ಬೆಂಬಲವಾಗಿ 12 ಎಲೆಕ್ಟ್ರಿಕ್ ವಾಹನಗಳು ಸ್ಪೇರ್‌ ವಾಹನಗಳಾಗಿ ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆಯಾಗಿ, ಪಾಲಿಕೆಯ ಶೇ. 98.13 ರಷ್ಟು ವಾಹನಗಳು ನಿರಂತರವಾಗಿ ಹೊಗೆ ಉಗುಳುತ್ತಾ, ನಗರದ ವಾಯುಗುಣಮಟ್ಟವನ್ನು ಹದಗೆಡಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

 

ಅತಿಯಾದ ಐಡ್ಲಿಂಗ್- ಮಾಲಿನ್ಯದ ಮುಂಜಾವು

ಮನೆ ಮನೆಗೆ ಕಸ ಎತ್ತುವ ಸಮಯದಲ್ಲಿ ಈ ವಾಹನಗಳು ನಿರಂತರವಾಗಿ ಅತಿಯಾದ ಐಡ್ಲಿಂಗ್‌ ಸ್ಥಿತಿಯಲ್ಲಿರುತ್ತವೆ (ಇಂಜಿನ್ ಆನ್ ಮಾಡಿ ನಿಲ್ಲಿಸುವುದು). ಇದರಿಂದ ಅನಗತ್ಯವಾಗಿ ಇಂಧನ ಪೋಲಾಗುವುದಲ್ಲದೆ ವಾಯುಮಾಲಿನ್ಯವೂ ತೀವ್ರಗೊಳ್ಳುತ್ತಿದೆ. ಪಾಲಿಕೆ ಒದಗಿಸಿರುವ ದಾಖಲೆಗಳ ಪ್ರಕಾರ, ಜುಲೈ 2025 ರ ಕೇವಲ ಒಂದೇ ಒಂದು ತಿಂಗಳಿನಲ್ಲಿ ಒಟ್ಟು 239 ಪೆಟ್ರೋಲ್‌ ವಾಹನಗಳಿಗೆ 21,445 ಲೀಟರ್‌ ಪೆಟ್ರೋಲ್‌ ವಿತರಿಸಲಾಗಿದೆ. 180 ಡೀಸೆಲ್‌ ವಾಹನಗಳಿಗೆ ಒಟ್ಟು 34,010 ಲೀಟರ್‌ ಡೀಸೆಲ್‌ ವಿತರಿಸಿರುವುದು ಆರ್‍‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ.

ಕಸ ಸಂಗ್ರಹಿಸಿ ವಿಲೇವಾರಿ ವಾಹನಗಳ ಕೇವಲ ಒಂದು ತಿಂಗಳ ಇಂಧನ ಬಳಕೆಯೇ ಬರೋಬ್ಬರಿ 55,455 ಲೀಟರ್‌ಗಳಾಗಿವೆ. ಇಂದಿನ ಇಂಧನ ದರವನ್ನು ಲೆಕ್ಕ ಹಾಕಿದರೆ, ಪ್ರತಿ ತಿಂಗಳು ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚಾಗುತ್ತಿದೆ.

ಖಾಸಗಿ ಗ್ಯಾರೇಜ್‌ಗಳಿಗೆ ದುರಸ್ತಿ ಬಿಲ್‌ಗಳ ಭರಾಟೆ

ಇಂಧನ ಚಾಲಿತ ಹಳೆಯ ವಾಹನಗಳ ನಿರ್ವಹಣೆ ಅತ್ಯಂತ ವೆಚ್ಚದಾಯಕ ಎಂಬುದಕ್ಕೆ ಆರ್‌ಟಿಐ ಮೂಲಕ ಲಭ್ಯವಾಗಿರುವ ಖಾಸಗಿ ಮೋಟಾರ್ಸ್ ಸಂಸ್ಥೆಗಳ ಬಿಲ್‌ಗಳೇ ಸಾಕ್ಷಿಯಾಗಿವೆ. ಪ್ರೇರಣ ಮೋಟಾರ್ಸ್ ಸಂಸ್ಥೆಗೆ ಜುಲೈ 2025 ರ ಬಿಲ್ ಅಡಿಯಲ್ಲಿ ಟಾಟಾ ಏಸ್ ವಾಹನಗಳ ಆಯಿಲ್ ಸರ್ವೀಸ್ ಮತ್ತು ಜನರಲ್ ಚೆಕಪ್‌ಗಾಗಿ ಒಟ್ಟು ₹4,43,482/- ಮತ್ತು ₹2,36,342/- ಬಿಲ್ ಸಲ್ಲಿಸಲಾಗಿದೆ.

 

 

 

ಹಾಗೆಯೇ, ಆಗಸ್ಟ್ 2025 ರ ಬಿಲ್‌ಗಳಂತೆ ಬಿಲ್ ಸಂಖ್ಯೆ 4304 ಮತ್ತು 4305 ರ ಅಡಿಯಲ್ಲಿ ಕ್ರಮವಾಗಿ ₹5,21,243/- ಮತ್ತು ₹1,01,790/- ಕ್ಲೈಮ್ ಮಾಡಲಾಗಿದೆ. ಸೆಪ್ಟೆಂಬರ್ 2025 ರ ಬಿಲ್ ಸಂಖ್ಯೆ 4952 ಮತ್ತು 4953 ರ ಅಡಿಯಲ್ಲಿ ₹1,11,064/- ಮತ್ತು ₹2,51,382/- ಬಿಲ್ ಸಲ್ಲಿಕೆಯಾಗಿದ್ದು, ಇದರಲ್ಲಿ ಕಾಂಪ್ಯಾಕ್ಟರ್ (KA09D9588) ಒಂದರ ದುರಸ್ತಿಗೇ ಬರೋಬ್ಬರಿ ₹1,64,684 ಖರ್ಚಾಗಿರುವುದು ಗೊತ್ತಾಗಿದೆ.

 

 

ಧನಲಕ್ಷ್ಮಿ ಮೋಟಾರ್ಸ್ ಸಂಸ್ಥೆಗೆ ಆಗಸ್ಟ್-ಅಕ್ಟೋಬರ್ 2025 ರ ಅವಧಿಯಲ್ಲಿ ಎರಡು ಪ್ರತ್ಯೇಕ ಇನ್‌ವಾಯ್ಸ್‌ಗಳಲ್ಲಿ ಕ್ರಮವಾಗಿ ₹2,33,645/- ಮತ್ತು ₹2,34,195/- ಹಣವನ್ನು ವಾಹನ ದುರಸ್ತಿಗಾಗಿ ನೀಡಲಾಗಿದೆ. ಸಿಂಧೂಜಾ ಟ್ರ್ಯಾಕ್ಟರ್ಸ್ ಸಂಸ್ಥೆಗೆ ಪಾಲಿಕೆಯ ಮಹೀಂದ್ರಾ ಟ್ರ್ಯಾಕ್ಟರ್‌ಗಳ ಸರ್ವೀಸ್‌ಗಾಗಿ ಸೆಪ್ಟೆಂಬರ್ 2025 ರಲ್ಲಿ ಬರೋಬ್ಬರಿ ₹4,31,500/- ಸಾರ್ವಜನಿಕ ಹಣ ಸಂದಾಯವಾಗಿದೆ.

 

 

ಕೇವಲ ಮೂರ್ನಾಲ್ಕು ತಿಂಗಳಲ್ಲಿ ವಾಹನಗಳ ಸರ್ವೀಸ್ ಮತ್ತು ಬಿಡಿಭಾಗಗಳಿಗಾಗಿಯೇ ಲಕ್ಷಾಂತರ ರೂಪಾಯಿಗಳನ್ನು ಖಾಸಗಿ ಗ್ಯಾರೇಜ್‌ಗಳಿಗೆ ನೀಡಲಾಗಿದೆ. ಇದರ ಜೊತೆಗೆ, ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಜಿಪಿಎಸ್ (GPS) ಟ್ರ್ಯಾಕಿಂಗ್ ಉಸ್ತುವಾರಿಗಾಗಿ ಖಾಸಗಿ ಸಂಸ್ಥೆಗೆ ನೀಡಲಾಗುತ್ತಿರುವ ಗುತ್ತಿಗೆಯ ಖರ್ಚೂ ಸಾರ್ವಜನಿಕರ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ.

 

 

‘ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಾದ ಜಪಾನ್, ಜರ್ಮನಿ ಮತ್ತು ದಕ್ಷಿಣ ಕೊರಿಯಾಗಳು ಕಸ ವಿಲೇವಾರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಮಾರ್ಟ್ ಮತ್ತು ಪರಿಸರಸ್ನೇಹಿಯಾಗಿ ಪರಿವರ್ತಿಸಿವೆ. ಜಪಾನ್‌ನಲ್ಲಿ ನಿಶ್ಯಬ್ದವಾಗಿ ಚಲಿಸುವ ಎಲೆಕ್ಟ್ರಿಕ್ ತ್ಯಾಜ್ಯ ವಾಹನಗಳನ್ನು ಬಳಸಲಾಗುತ್ತಿದೆ. ಜರ್ಮನಿಯು ಕಸದಿಂದಲೇ ಉತ್ಪಾದಿಸಿದ ಬಯೋ-ಗ್ಯಾಸ್ ಮೂಲಕ ದೊಡ್ಡ ಕಾಂಪ್ಯಾಕ್ಟರ್‌ಗಳನ್ನು ಚಲಾಯಿಸುತ್ತದೆ.

ಆದರೆ, ಮೈಸೂರಿನಲ್ಲಿ ಇಂದಿಗೂ 427 ವಾಹನಗಳ ಪೈಕಿ ಕೇವಲ 8 ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಳಸಿ, ಉಳಿದಂತೆ ಶೇ. 98.13% ರಷ್ಟು ವಾಹನಗಳನ್ನು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳ ಮೂಲಕವೇ ಮುನ್ನಡೆಸುತ್ತಿರುವುದು ಸರಿಯಾದ ಮಾರ್ಗವಲ್ಲ,’ ಎನ್ನುತ್ತಾರೆ ಮೈಸೂರಿನ ಪರಿಸರವಾದಿಗಳು.

ಕಸವಿಲೇವಾರಿ ನೆಪದಲ್ಲಿ ಪರಿಸರಕ್ಕೆ ವಿಷಗಾಳಿ ತುಂಬುತ್ತಿರುವ ಮೈಸೂರು ಮಹಾನಗರ ಪಾಲಿಕೆ, ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಹಸಿರು ಮತ್ತು ನೈಜ ಸ್ವಚ್ಛತೆಯತ್ತ ಹೆಜ್ಜೆ ಇಡಬೇಕು ಎನ್ನುತ್ತಾರೆ ನಾಗರಿಕರೊಬ್ಬರು.

ಮೈಸೂರಿನಲ್ಲಿ  ನಿತ್ಯವೂ 450 ರಿಂದ 500 ಟನ್‌ ಕಸ ಉತ್ಪತ್ತಿಯಾಗುತ್ತದೆ. ಆದರೆ, ವಿದ್ಯಾರಣ್ಯಪುರಂನ ಸೂಯೆಜ್‌ ಫಾರಂನಲ್ಲಿರುವ ಘನ ತ್ಯಾಜ್ಯವಿಲೇವಾರಿ ಘಟಕದಲ್ಲಿಕೇವಲ 200 ಟನ್‌ ಕಸವನ್ನು ವಿಲೇವಾರಿ ಮಾಡುವ ವ್ಯವಸ್ಥೆ ಇದೆ. ಹೀಗಾಗಿ ಪ್ರತಿದಿನ 300 ಟನ್‌ ಕಸ ಉಳಿಯುತ್ತಿದೆ. 2001ರಿಂದ ಸುಮಾರು 6 ಲಕ್ಷ ಟನ್‌ ಕಸ ವಿಲೇವಾರಿಯಾಗದೇ ಉಳಿದಿತ್ತು.

‘ಸ್ವಚ್ಛ ಭಾರತ ಅಭಿಯಾನ’ದ ಕನಸಿಗೆ ಮೈಸೂರು ನಗರವು ಸತತವಾಗಿ ಅಗ್ರ ಶ್ರೇಯಾಂಕಗಳನ್ನು ಪಡೆಯುವ ಮೂಲಕ ದೇಶದಲ್ಲೇ ಅತ್ಯುತ್ತಮ ಮಾದರಿಯಾಗಿ ನಿಂತಿದೆ. ಸ್ವಚ್ಛ ಭಾರತ ಅಭಿಯಾನದಡಿ (Swachh Bharat Mission) ಘನತ್ಯಾಜ್ಯ ನಿರ್ವಹಣೆಯಲ್ಲಿ (SWM) ಮೈಸೂರು ಮಹಾನಗರ ಪಾಲಿಕೆಯು (MCC) ಸದಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವುದನ್ನು ಸ್ಮರಿಸಬಹುದು.

Hot this week

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...
Please Scan to make Your Contribution

Topics

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

Related Articles

Popular Categories

error: Content is protected !!