Wednesday | June 3, 2026 |

ಶೈಕ್ಷಣಿಕ ಅಸಮಾನತೆ ಹೆಚ್ಚಳ; ರಾಜ್ಯದ ಆರ್ಥಿಕ ಪ್ರಗತಿಗೆ ಬೆದರಿಕೆ ಹಾಕುವ ಸಾಧ್ಯತೆ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಆಯೋಗ

ಬೆಂಗಳೂರು; ಪ್ರಾಥಮಿಕ ಶಾಲೆ ಮತ್ತು ವಿಶ್ವವಿದ್ಯಾಲಯ ಮಟ್ಟಗಳೆರಡರಲ್ಲೂ ಸಾಂಸ್ಥಿಕ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ರಾಜ್ಯವು ಸಾಕಷ್ಟು ಪ್ರಗತಿ ಸಾಧಿಸಿದೆಯಾದರೂ ಶೈಕ್ಷಣಿಕ ಪ್ರಗತಿಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ತನ್ನನ್ನು ತಾನು ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ದಾರಿ ಕ್ರಮಿಸಬೇಕಿದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವವು ಅಭಿಪ್ರಾಯಪಟ್ಟಿದೆ.

ಶೈಕ್ಷಣಿಕ ಅಸಮಾನತೆಯಲ್ಲಿನ ಹೆಚ್ಚಳವು ಕರ್ನಾಟಕಕ್ಕೆ ವಿಶೇಷವಲ್ಲ. ಆದರೆ ಅದನ್ನು ಇನ್ನಾದರೂ ಪರಿಹರಿಸದಿದ್ದರೇ ಸಾಮರಸ್ಯದ ಸಮಾಜದಲ್ಲಿ ಸಾಮಾಜಿಕ ಬಿರುಕುಗಳನ್ನು ಸೃಷ್ಟಿಸುವ ಮತ್ತು ರಾಜ್ಯದ ಆರ್ಥಿಕ ಪ್ರಗತಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದೂ ಆಯೋಗವು ಸರ್ಕಾರವನ್ನು ಎಚ್ಚರಿಸಿದೆ.

ರಾಜ್ಯಕ್ಕೊಂದು ಶಿಕ್ಷಣ ನೀತಿ ರೂಪಿಸಲು ಪ್ರೊ ಸುಖದೇವ್ ಥೋರಟ್ ನೇತೃತ್ವದಲ್ಲಿ ರಚಿಸಿರುವ ರಾಜ್ಯ ಶಿಕ್ಷಣ ನೀತಿ ಆಯೋಗವು ಹಲವು ಸಂಪುಟಗಳಲ್ಲಿ ನೀಡಿರುವ ವರದಿಯು ರಾಜ್ಯದ ಪ್ರಾಥಮಿಕ, ಮಾಧ್ಯಮಿಕ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ವಲಯದಲ್ಲಿನ ಸಮಸ್ಯೆಗಳು, ಬಿಕ್ಕಟ್ಟುಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ಚರ್ಚಿಸಿದೆ.

ಈ ಆಯೋಗವು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಸಂಪುಟಗಳನ್ನು ಸಚಿವರುಗಳಿಗೆ ನೀಡಿದೆ. ಈ ವರದಿಗಳಲ್ಲಿನ ಶಿಫಾರಸ್ಸುಗಳು ಮತ್ತು ಇವುಗಳನ್ನು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನೂ ಕೇಳಿದೆ. ಆದರೆ ಮುಖ್ಯಮಂತ್ರಿ ಕುರ್ಚಿ ಕಾದಾಟದ ನಡುವೆಯೇ ಯಾವೊಬ್ಬ ಸಚಿವರೂ ಈ ವರದಿಗಳ ಬಗ್ಗೆ ಕಣ್ಣನ್ನೂ ಹಾಯಿಸಿಲ್ಲ.

ರಾಜ್ಯ ಶಿಕ್ಷಣ ನೀತಿ ಆಯೋಗವು ಸಲ್ಲಿಸಿರುವ ವರದಿಯ ಎಲ್ಲಾ ಸಂಪುಟಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

 

ಹಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳ ಶೈಕ್ಷಣಿಕ ಸೌಲಭ್ಯಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ. ವಿಶೇಷವಾಗಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ದೇಶದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉನ್ನತ ಸಂಶೋಧನೆ ಕೇಂದ್ರಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ.

 

 

‘ಕರ್ನಾಟಕದ ಶೈಕ್ಷಣಿಕ ಅಂಕಿ ಅಂಶಗಳ ಪ್ರಕಾರ ರಾಜ್ಯದ ಬಹುಪಾಲು ಮಕ್ಕಳಿಗೆ ಸಂವಿಧಾನದತ್ತ 8 ವರ್ಷಗಳ ಪ್ರಾಥಮಿಕ ಶಿಕ್ಷಣ ಕೂಡ ದಕ್ಕುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಭೌತಿಕ ಸ್ವರೂಪದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರೂ ಕನಿಷ್ಟ ಮಟ್ಟದ ಗಣಿತ ಮತ್ತ ಸಾಕ್ಷರತೆ ಮೂಲ ಕೌಶಲ್ಯಗಳನ್ನು ಗಳಿಸಿಕೊಳ್ಳಲಾಗುತ್ತಿಲ್ಲ. ಶಾಲಾ ಶಿಕ್ಷಣದ ಏಣಿಯಲ್ಲಿ ಮೇಲಕ್ಕೇರಿದಷ್ಟು ಸಾಮಾಜಿಕ ಗುಂಪುಗಳ ಅಸಮತೆ ಮತ್ತು ಪ್ರದೇಶಗಳ ನಡುವಿನ ತಾರತಮ್ಯಗಳು ಹೆಚ್ಚುತ್ತಾ ಮತ್ತಷ್ಟು ಅಸಮಾನಗೊಳ್ಳುತ್ತ ಹೋಗುತ್ತಿದೆ,’ ಎಂದು ಆಯೋಗವು ವಿಶ್ಲೇಷಿಸಿರುವುದು ವರದಿಯಿಂದ ತಿಳಿದು ಬಂದಿದೆ.

ರಾಜ್ಯವು ಕಳೆದ ಕೆಲವು ವರ್ಷಗಳಿಂದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಪ್ರತಿಯೊಂದು ಕ್ರಮಗಳನ್ನು ಮತ್ತು ನವೀನ ಯೋಜನೆಗಳನ್ನು ಪರಿಚಯಿಸುತ್ತ ಬಂದಿದೆ. ಆದರೆ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿ ಮಾತ್ರ ಇನ್ನು ಅಪೂರ್ಣವಾಗಿಯೇ ಉಳಿದಿದೆ. ಶೈಕ್ಷಣಿಕ ಅಸಮಾನತೆಯಲ್ಲಿನ ಹೆಚ್ಚಳವು ಕರ್ನಾಟಕಕ್ಕೆ ವಿಶೇಷವಲ್ಲ. ಆದರೆ ಅದನ್ನು ಇನ್ನಾದರೂ ಪರಿಹರಿಸದಿದ್ದರೇ ಸಾಮರಸ್ಯದ ಸಮಾಜದಲ್ಲಿ ಸಾಮಾಜಿಕ ಬಿರುಕುಗಳನ್ನು ಸೃಷ್ಟಿಸುವ ಮತ್ತು ರಾಜ್ಯದ ಆರ್ಥಿಕ ಪ್ರಗತಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಆಯೋಗವು ಎಚ್ಚರಿಸಿದೆ.

 

 

ಶಿಕ್ಷಣ ವ್ಯವಸ್ಥೆಯಲ್ಲಿನ ತಾರತಮ್ಯ, ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅನುಸರಿಸುವ ಮೃದು ಧೋರಣೆ ಮತ್ತು ಪರೋಕ್ಷ ನೀತಿಗಳು ಅಸರ್ಮಪಕವಾಗಿವೆ. ಪರಿಣಾಮಕಾರಿಯಾಗಿಲ್ಲ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಲಭಿಸುವಂತೆ ಮಾಡುವ ಸಲುವಾಗಿ ಶಾಲಾ ಶಿಕ್ಷಣದ ಒಟ್ಟು ಸ್ವರೂಪವನ್ನೇ ಪರಿವರ್ತಿಸಲು ಮೂಲಭೂತ ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕಾದ ಹಲವು ಸವಾಲುಗಳನ್ನು ಆಯೋಗವು ಮುಂದೊಡ್ಡಿದೆ.

ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸವು ಕಡಿಮೆಯಾಯಿತೇಕೆ?

ಸಾರ್ವಜನಿಕರಲ್ಲಿ ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸವು ಕಡಿಮೆಯಾಗಿದೆಯೇ ಎಂಬ ಕುರಿತು ಆಯೋಗವು ಚರ್ಚಿಸಿದೆ. ಅಲ್ಲದೇ ಇದಕ್ಕೆ ಹಲವು ಸಮರ್ಥನೆಗಳನ್ನೂ ಒದಗಿಸಿದೆ.

 

 

ಇಂಗ್ಲೀಷ್‌ ಭಾಷೆ ಮತ್ತು ಇಂಗ್ಲೀಷ್‌ ಬೋಧನಾ ಮಾಧ್ಯಮದ ಆಕರ್ಷಣೆ. ಇದು ಕಡಿಮೆ ಶುಲ್ಕ ವಿಧಿಸುವ, ಬಜೆಟ್‌ ಶಾಲೆಗಳು ಎಂದೇ ಕರೆಯಲ್ಪಡುವ ಖಾಸಗಿ ಶಾಲೆಗಲು ಅಣಬೆಗಳಂತೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಇಂತಹ ಶಾಲೆಗಳಲ್ಲಿ ಹಲವು ರಾಜ್ಯ ಇಲಾಖೆಯಿಂದ ಮಾನ್ಯತೆಯನ್ನೇ ಪಡೆದಿಲ್ಲ. ನಿಸ್ಸಂಶಯವಾಗಿ ಇಂತಹ ಶಾಲೆಗಳು ಸಾಕಷ್ಟು ಭೌತಿಕ ಸೌಲಭ್ಯಗಳು ಮತ್ತು ಶೈಕ್ಷಣಿಕ ಸಂಪನ್ಮೂಲಗಳೂ ಇರುವುದಿಲ್ಲ. ಒಂದು ರೀತಿಯಲ್ಲಿ ಇವು ಕಿರು ಉದ್ಯಮದಂತೆ ಕಾರ್ಯನಿರ್ವಹಿಸುತ್ತಿವೆ. ಇವುಗಳ ಏಕೈಕ ಆಕರ್ಷಣೆ ಎಂದರೇ ಇಂಗ್ಲೀಷ್‌ ಬೋಧನಾ ಮಾಧ್ಯಮ. ಹೀಗಾಗಿಯೇ ಸಾರ್ವಜನಿಕರಲ್ಲಿ ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಶವು ಕಡಿಮೆಯಾಗಿದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ.

 

 

ಬೇರೂರಿದ ಗುತ್ತಿಗೆ ಶಿಕ್ಷಕ ನೇಮಕ ಪದ್ಧತಿ-ವೃತ್ತಿಪರತೆಯ ಕೊರತೆ

ವೆಚ್ಚವನ್ನು ಸರಿದೂಗಿಸುವ ಅಥವಾ ಕಡಿಮೆ ಮಾಡುವ ಹೆಸರಿನಲ್ಲಿ ಹಲವಾರು ಅನಪೇಕ್ಷಿತ ಕ್ರಮಗಳನ್ನು ಪರಿಚಯಿಸಲಾಗಿದೆ. ಉದಾಹರಣೆಗೆ ಅಲ್ಪಾವಧಿ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕ. ಈಗಾಗಲೇ ಅಸ್ತಿತ್ವದಲ್ಲಿರುವ ಶಿಕ್ಷಕ ವೃಂದಕ್ಕೆ ಇನ್ನಷ್ಟು ಸೇರ್ಪಡೆಗೊಳಿಸಲು ಮತ್ತು ತಕ್ಷಣದ ಅವಶ್ಯಕತೆ ಪೂರೈಸುವುದಕ್ಕೆ ಮಾಡಿಕೊಂಡ ವ್ಯವಸ್ಥೆಯು ನಂತರದ ದಿನಗಳಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳಿಗೂ ಪರ್ಯಾಯವಾಗಲಾರಂಭಿಸಿತು. ಇದರಿಂದಾಗಿ ಶಿಕ್ಷಕ ಸಮೂಹದಲ್ಲಿ ವೃತ್ತಿಪರತೆಯ ಕೊರತೆ ತಲೆದೋರತೊಡಗಿತು. ಮತ್ತು ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿರಿಸಿದ ಅನುದಾನವನ್ನು ದುರ್ಬಲಗೊಳಿಸುವ ಪ್ರಕ್ರಿಯೆ ಆರಂಭವಾಯಿತು. ಈ ಪದ್ಧತಿ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಬೇರೂರಿದೆ ಎಂದರೇ ರಾಜ್ಯವು ಇದರಿಂದ ಹೊರಬರುವುದಕ್ಕೂ ಇಂದಿಗೂ ಸಾಧ್ಯವಾಗುತ್ತಿಲ್ಲ ಎಂದು ಆಯೋಗವು ವಿಶ್ಲೇಷಿಸಿದೆ.

ಕೇಂದ್ರದ ಅಡ್ಡಗಾಲು

ಕಳೆದ ಹಲವಾರು ದಶಕಗಳಿಂದ ಇರುವ ಈ ಪ್ರಮುಖ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ನಾನಾ ಮಾರ್ಗದಲ್ಲಿ ತಡೆಯೊಡ್ಡುತ್ತಿದೆ. ಇಡೀ ರಾಜ್ಯದ ಸಮಗ್ರ ಯೋಜನೆ ಮತ್ತು ವಿನೂತನ ಕ್ರಮಗಳನ್ನು ರೂಪಿಸಲು ಅಗತ್ಯವಿರುವ ಆರ್ಥಿಕ ಸಹಾಯವನ್ನು ನೀಡದೇ ಸಂವಿಧಾನ ಆಶಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರವು ಅಡ್ಡಗಾಲು ಹಾಕುತ್ತಿದೆ.

 

 

ವಾಸ್ತವದಲ್ಲಿ ರಾಷ್ಟ್ರೀಯ ನೀತಿಗಳನ್ನು ಅಳವಡಿಸಿಕೊಳ್ಳಲು ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಕೇಂದ್ರ ಪ್ರಾಯೋಜಿತ ಯೋಜನೆಗಳ ಜೊತೆಗೆ ಸೇರಿಸುವ ಇತ್ತೀಚನ ಪ್ರಯತ್ನವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಅನಪೇಕ್ಷಿತ ವಿವಾದ ಹುಟ್ಟಿಕೊಳ್ಳಲು ಕಾರಣವಾಗಿದೆ. ಅಲ್ಲದೇ ಅಲ್ಪ ಮೊತ್ತದ ಅನುದಾನದ ಶಾಲಾ ಶಿಕ್ಷಣದ ಅಭಿವೃದ್ದಿ ಕ್ರಮಗಳನ್ನು ಕೇಂದ್ರೀಕೃತಗೊಳಿಸುವ ಈ ಪ್ರಕ್ರಿಯೆಯು ಇಲ್ಲಿಯವರೆಗೆ ಕರ್ನಾಟಕ ಸರ್ಕಾರ ಉಳಿಸಿಕೊಂಡು ಬಂದಿರುವ ಅನ್ಯೋನ್ಯ ಸಂಬಂಧದ ಮೇಲೆ ಪರಿಣಾಮ ಬೀರುವಂತಾಗಿದೆ.

ಹಣಕಾಸಿನ ಕೊರತೆ

ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಾ ಅಭಿಯಾನಕ್ಕೆ ಹೆಚ್ಚಿನ ಮನ್ನಣೆ ಮತ್ತು ಸಹಾಯ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಉಪ ಕ್ರಮಗಳು ಬಹುತೇಕ ಹಣಕಾಸಿನ ಕೊರತೆಯಿಂದ ಬಳಲುತ್ತಿವೆ ಮತ್ತು ಸಾಕಷ್ಟು ಬೆಂಬಲವಿಲ್ಲದೇ ಸೊರಗುತ್ತಿವೆ. ಪ್ರಸ್ತುತ ನೀತಿ ಚೌಕಟ್ಟನ್ನು ಮರು ಪರಿಶೀಲಿಸುವುದು ಹಾಗೂ ಕೇಂದ್ರ ಮತ್ತು ರಾಜ್ಯದ ನಡುವಿನ ಸಂಬಂಧವನ್ನು ನಿಜವಾದ ಪಾಲುದಾರಿಕೆಯಾಗಿ ಮರು ವ್ಯಾಖ್ಯಾನಿಸುವುದು ಕರ್ನಾಟಕದ ಮುಂದಿರುವ ಸದ್ಯದ ಸವಾಲು ಎಂದು ಆಯೋಗವು ಎಚ್ಚರಿಸಿದೆ.

 

 

ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನ- ಅತೃಪ್ತಿ ವ್ಯಕ್ತಪಡಿಸಿದ ಆಯೋಗ

2009ರಿಂದ ಅಂದರೇ ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ಭಾರತದ ಇತರ ಭಾಗಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನವು ಅಷ್ಟು ತೃಪ್ತಿಕರವಾಗಿಲ್ಲ ಎಂದು ಸರ್ಕಾರದ ವರದಿಗಳು ಹೇಳುತ್ತವೆ. ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಅಂತರವಿದೆ. ಈ ಅಂತರವು ಕಣ್ಣಿಗೆ ರಾಚುವಂತಿವೆ. ಆರ್ಥಿಕ ಸಂಪನ್ಮೂಲ ಕೊರತೆ ಅತೀ ದೊಡ್ಡ ಸವಾಲಾಗಿದೆ ಎಂದು ಆಯೋಗವು ಹೇಳಿದೆ.

ಆದರೆ ಕಟ್ಟುನಿಟ್ಟಿನ ಸಾಮಾಜಿಕ ಶ್ರೇಣಿ ವ್ಯವಸ್ಥೆ ಮತ್ತು ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳಿಂದ ಕೂಡಿದ, ಅಸಮಾನತೆ ತಾಂಡವವಾಡುತ್ತಿರುವ ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಮಾನ ಹಕ್ಕಿನ ತತ್ವವನ್ನು ಜಾರಿಗೊಳಿಸಲು ಪ್ರಯತ್ನಿಸುವುದು ಅದಕ್ಕಿಂತ ದೊಡ್ಡ ಮತ್ತು ಸಂಕೀರ್ಣವಾದ ಸವಾಲು ಎಂದು ಬಣ್ಣಿಸಿದೆ.

 

 

ಆಡಳಿತ ವ್ಯವಸ್ಥೆ ಗಾತ್ರ ಬೆಳವಣಿಗೆ-ಉತ್ತರದಾಯಿತ್ವ ದುರ್ಬಲ

ಕಳೆದ ಕೆಲವು ದಶಕಗಳಲ್ಲಿ ಆಡಳಿತ ವ್ಯವಸ್ಥೆಯ ಗಾತ್ರ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. ಸಾಕಷ್ಟು ಸಂಖ್ಯೆಯ ನಿರ್ದೇಶನಾಲಯಗಲು ಮತ್ತು ಶಾಲಾ ಶಿಕ್ಷಣ ಕಾರ್ಯಕ್ರಮಗಳ ಸಂಪೂರ್ಣ ಜಾರಿಗೆ ಆಯುಕ್ತರ ಕಚೇರಿಗಳೂ ಸ್ಥಾಪನೆಗೊಂಡಿವೆ. ಬೆಂಗಳೂರಿನಲ್ಲಿ ಆಡಳಿತಾತ್ಮಕ ಕಚೇರಿ ಮತ್ತು ವಿಭಾಗೀಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಗಳು ಸ್ಥಾಪನೆಯಾಗಿವೆ. ಜಿಲ್ಲಾ ಮತ್ತು ಬ್ಲಾಕ್‌ ಮಟ್ಟಗಳೂ ಗಾತ್ರದಲ್ಲಿ ಹಿರಿದಾಗಿವೆ. ಆದರೆ ಶಾಲೆಗಳ ಮೇಲ್ವಿಚಾರಣೆ ಮತ್ತು ಅವುಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯ ಉತ್ತರದಾಯಿತ್ವ ಇನ್ನೂ ದುರ್ಬಲವಾಗಿ ಉಳಿದಿವೆ ಎಂದು ವಿವರಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಅನುಷ್ಠಾನದಲ್ಲಿ ಅಸಮರ್ಥತೆ- ತಳಮಟ್ಟದ ಆಡಳಿತ ಹೊಣೆಯೇ?

ಶೈಕ್ಷಣಿಕ ಬೆಂಬಲಕ್ಕಾಗಿ ಪ್ರತ್ಯೇಕವಾಗಿ ಬ್ಲಾಕ್ ಮತ್ತು ಕ್ಲಸ್ಟರ್ ಮಟ್ಟದ ವ್ಯವಸ್ಥೆಗಳನ್ನು ಪರಿಚಯಿಸಲಾಗಿದೆ. ತಳಮಟ್ಟಮಟ್ಟದಲ್ಲಿಯೂ ಮಾನವ ಸಂಪನ್ಮೂಲಗಳು ಅಧಿಕಗೊಂಡಿವೆ. ಆದರೆ ಇದು ಫಲಿತಾಂಶಗಳ ವಿಷಯದಲ್ಲಿ ಹೆಚ್ಚಿನ ದಕ್ಷತೆ ಮತ್ತು ಪರಿಣಾಮಗಳನ್ನು ಉಂಟು ಮಾಡಿಲ್ಲ. ಅನುಷ್ಠಾನದ ಅಸಮರ್ಥತೆಗೆ ತಳಮಟ್ಟದ ಆಡಳಿತವನ್ನು ಮಾತ್ರ ಹೊಣೆಯಾಗಿಸುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಆಯುಕ್ತರ ಕಚೇರಿಯಿಂದ ಹಿಡಿದು ಶಾಲಾ ಮುಖ್ಯಸ್ಥರು ಸೇರಿದಂತೆ ಬ್ಲಾಕ್‌ ಮತ್ತು ಸಬ್‌ ಬ್ಲಾಕ್‌ ಮಟ್ಟದ ಕಾರ್ಯನಿರ್ವಾಹಕರವರೆಗೆ ಪ್ರತಿಯೊಂದು ಹುದ್ದೆಗೂ ಕಾರ್ಯಕ್ಷಮತೆಯ ಮೌಲ್ಯಮಾಪನ ಮತ್ತು ವೈಯಕ್ತಿಕ ಹೊಣೆಗಾರಿಕೆ ವ್ಯವಸ್ಥೆಯನ್ನು ಪರಿಚಯಿಸುವುದು ಸವಾಲಿನ ಕೆಲಸವಾಗಿದೆ ಎಂದು ಆಯೋಗವು ಹೇಳಿದೆ.

ಕಳಪೆ ಕಲಿಕಾ ಫಲಿತಾಂಶವು ಕೇವಲ ಒಂದು ಲಕ್ಷಣವಷ್ಟೇ. ನಿಜವಾದ ಸಮಸ್ಯೆಯು ಅಸಮರ್ಥ ಮತ್ತು ನಿಷ್ಪರಿಣಾಮಕಾರಿ ಶಾಲಾ ಶಿಕ್ಷಣದಲ್ಲಿದೆ. ಕಲಿಕೆಯ ಸಮಸ್ಯೆಗೆ ಉತ್ತರವು ತರಗತಿಯಲ್ಲಿದೆ ಮತ್ತು ಪರಿಸ್ಥಿತಿಯನ್ನು ಸರಿಪಡಿಸುವಲ್ಲಿ ಶಿಕ್ಷಕರ ಪಾತ್ರವು ಮಹತ್ವದ್ದು ಎಂಬುದನ್ನು ಸುಲಭವಾಗಿ ಗುರುತಿಸಬಹುದು. ಇದು ಶಿಕ್ಷಕರ ನೇಮಕಾತಿ ನೀತಿಗಳನ್ನು ಮಾತ್ರವಲ್ಲದೇ ಸೇವಾ ಪೂರ್ವ ಶಿಕ್ಷಕರ ಶಿಕ್ಷಣ ಮತ್ತು ಸೇವಾ ನಿರತ ಶಿಕ್ಷಕರ ವೃತ್ತಿಪರ ಪ್ರಗತಿಯ ನಿಭಾವಣೆಯನ್ನೂ ಒಳಗೊಂಡಿದೆ.

ಖಾಸಗಿ ವಲಯದ ಕೈಯಲ್ಲಿದೆ ಶಿಕ್ಷಣ ಸಂಸ್ಥೆಗಳು

ಹೆಚ್ಚಿನ ಶಿಕ್ಷಕ ಶಿಕ್ಷಣ ಸಂಸ್ಥೆಗಳು ಖಾಸಗಿ ವಲಯದ ಕೈಯಲ್ಲಿದೆ. ಸೇವಾಪೂರ್ವ ಶಿಕ್ಷಕರ ಶಿಕ್ಷಣದಲ್ಲಿ ಯಾವುದೇ ಪರಿಣಾಮಕಾರಿ ನೀತಿ ಬದಲಾವಣೆಗಳನ್ನು ತರುವುದು ದೊಡ್ಡ ಸವಾಲಾಗಿದೆ. ಅದೇ ವೇಳೆಗೆ ಅಲ್ಪ ಬಜೆಟ್‌ ಹಂಚಿಕೆಯೊಂದಿಗೆ ಸಮಗ್ರ ಶಿಕ್ಷಾ ಅಭಿಯಾನದ ಮೇಲಿನ ಅತಿಯಾ ಅವಲಂಬನೆಯೂ ಶಿಕ್ಷಕರ ನಿರಂತರ ವೃತಿಪರ ಅಭಿವೃರ್ದದಿಗಾಗಿ ವ್ಯವಸ್ಥಿತ ನೀತಿಯನ್ನು ರೂಪಿಸುವುದನ್ನು ತಡೆಯುತ್ತದೆ. ಬಹುಶಃ ಈ ಕಾರಣದಿಂದಾಗಿಯೇ ಕರ್ನಾಟಕವು ಶಿಕ್ಷಕರ ನಿರಂತರ ಸಾಮರ್ಥ್ಯ ವೃದ್ಧಿಗಾಗಿ ಅವರ ವೃತ್ತಿಜೀವನದ ಪ್ರಗತಿಯನ್ನು ತರಗತಿಯ ಕಾರ್ಯಕ್ಷಮತೆ ಮತ್ತು ವಿದ್ಯಾರ್ಥಿಗಳ ಕಲಿಕೆಯೊಂದಿಗೆ ಬೆಸೆಯುವ ಒಂದು ಸ್ಪಷ್ಟ ನೀತಿಯನ್ನು ಅಭಿವೃದ್ಧಿಪಡಿಸಿಲ್ಲ ಎಂದು ವಿವರಿಸಿದೆ.

 

 

ಅತಿಥಿ ಶಿಕ್ಷಕರ ನೇಮಕ- ಜಟಿಲಗೊಳಿಸಿದ ತಾತ್ಕಾಲಿಕ ನೀತಿ

ಖಾಲಿ ಇರುವ ಶಿಕ್ಷಕರ ಹುದ್ದೆಗಳ ಸಂಖ್ಯೆ ಮತ್ತು ಅತಿಥಿ ಶಿಕ್ಷಕರನ್ನು ನೇಮಿಸುವ ತಾತ್ಕಾಲಿಕ ನೀತಿಯು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿವೆ. ಆದ್ದರಿಂದ ಮುಂಬರುವ ಕಲಿಕಾ ಬಿಕ್ಕಟ್ಟಿಗೆ ಸ್ಪಂದಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯಗಳಲ್ಲಿ ಸಾಕಷ್ಟು ಅಂತರವಿದೆ. ರಾಜ್ಯದ ಬೇರೆ ಬೇರೆ ಪ್ರದೇಶಳಲ್ಲೂ ಈ ಅಸಮಾನತೆ ಇದೆ. ಕರ್ನಾಟಕದಲ್ಲಿನ ಶಿಕ್ಷಕರು ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಗ್ರಾಮೀಣ ಶಿಕ್ಷಕರು ಬೇರೆ ಬೇರೆ ತರಗತಿಗಳಲ್ಲಿ ಬೋಧನೆ, ಇತರ ಭಾಷಿಕ ವಲಸಿಗ ಜನಸಂಖ್ಯೆ, ಬಹುಭಾಷಿಕ ಪ್ರದೇಶದಲ್ಲಿ ಸ್ಥಳೀಯ ಭಾಷಣೆಯ ನೈಪುಣ್ಯತೆಗೆ ಆದ್ಯತೆ ನೀಡಿಲ್ಲ ಎಂದು ಆಯೋಗವು ಗಮನಸೆಳೆದಿದೆ.

Hot this week

5 ವರ್ಷಕ್ಕಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ 17,842 ಅಧಿಕಾರಿ, ನೌಕರರು ಠಿಕಾಣಿ; ವರ್ಗಾವಣೆ ಮಾಡಿಲ್ಲವೇಕೆ?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ...

39,437 ಕೋಟಿ ರು ಸಾರ್ವಜನಿಕ ವೆಚ್ಚ; ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಯೋಜನೆಯಲ್ಲಿ ಅಕ್ರಮ ಆರೋಪ, ಸಿಬಿಐ ತನಿಖೆಗೆ ಕೇಂದ್ರ ಸಚಿವೆ ಪತ್ರ

ಬೆಂಗಳೂರು; 39,437 ಕೋಟಿ ಸಾರ್ವಜನಿಕ ವೆಚ್ಚವನ್ನು ಒಳಗೊಂಡಿರುವ ಸಮಗ್ರ ಘನ ತ್ಯಾಜ್ಯ...
Please Scan to make Your Contribution

Topics

5 ವರ್ಷಕ್ಕಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ 17,842 ಅಧಿಕಾರಿ, ನೌಕರರು ಠಿಕಾಣಿ; ವರ್ಗಾವಣೆ ಮಾಡಿಲ್ಲವೇಕೆ?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ...

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...

Related Articles

Popular Categories

error: Content is protected !!