ಬೆಂಗಳೂರು; ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆ ಫಲಾನುಭವಿಗಳಿಗೆ ಉಚಿತವಾಗಿ ಒದಗಿಸಬೇಕು ಎಂದು 2 ತಿಂಗಳ ಹಿಂದೆಯೇ ಸರ್ಕಾರಿ ಆದೇಶ ಹೊರಬಿದ್ದಿದ್ದರೂ ಸಹ ಸ್ಮಾರ್ಟ್ ಕಾರ್ಡ್ ಗಳಿಗೆ ತಗುಲುವ ವೆಚ್ಚವನ್ನು ಹೇಗೆ ಭರಿಸಬೇಕು ಮತ್ತು ಯಾವ ಮೂಲದಿಂದ ಅನುದಾನ ಪಡೆದುಕೊಳ್ಳಬೇಕು ಎಂಬ ಬಗ್ಗೆ ಸಾರಿಗೆ ಇಲಾಖೆಯು ಜಿಜ್ಞಾಸೆಯಲ್ಲಿದೆ.
ನಾಲ್ಕು ಎಸ್‌ಟಿಯುಗಳು ಮತ್ತು ಆಯ್ದ ಸಿಸ್ಟಂ ಇಂಟಿಗ್ರೇಟರ್ ಜಂಟಿ ಒಡೆತನದ ಕಾನೂನು ಮತ್ತು ಕಾರ್ಯಾಚರಣೆ ಘಟಕವಾಗಿ ಈಗಾಗಲೇ ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎಸ್‌ಪಿವಿ ರಚಿಸಿದೆ. ಆದರೂ ಸ್ಮಾರ್ಟ್ ಕಾರ್ಡ್‌ಗಳಿಗೆ ತಗಲುವ ವೆಚ್ಚ ಹೇಗೆ ಭರಿಸಿಕೊಳ್ಳಬೇಕು ಎಂಬ ಬಗ್ಗೆ ಖಚಿತ ತೀರ್ಮಾನಕ್ಕೆ ಬಂದಿಲ್ಲ.
ಸ್ಮಾರ್ಟ್ ಕಾರ್ಡ್‌ಗಳಿಗೆ ತಗಲುವ ವೆಚ್ಚವನ್ನು ಅರ್ಹ ಪ್ರಯಾಣಿಕರಿಂದಲೇ ಸಂಗ್ರಹಿಸಲು ಮುಂದಾಗಿತ್ತು. ಈ ಮೂಲಕ ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ನೇರವಾಗಿ ಫಲಾನುಭವಿಗಳ ಪ್ರಯಾಣಿಕರ ಜೇಬಿಗೆ ಕೈ ಹಾಕಲು ಸಾರಿಗೆ ಇಲಾಖೆಯು ಪ್ರಸ್ತಾವಿಸಿತ್ತು.

ಪ್ರಯಾಣಿಕರಿಂದ ವಸೂಲು ಮಾಡಲು ಮುಂದಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುವ ಹಿನ್ನೆಲೆಯಲ್ಲಿ ಇದನ್ನು ಕೈಬಿಟ್ಟಿತ್ತು. ಉಚಿತವಾಗಿಯೇ ನೀಡಬೇಕು ಎಂದು 2026ರ ಫೆಬ್ರುವರಿ 24ರಂದು ಆದೇಶ ಹೊರಡಿಸಿತ್ತು.

ಈ ಆದೇಶ ಹೊರಡಿಸಿ ಎರಡು ತಿಂಗಳಾಗಿವೆ. ಆದರೆ ಈ ಬಗ್ಗೆ ಸಾರಿಗೆ ಇಲಾಖೆಯಲ್ಲಿ ಯಾವುದೇ ಕಾರ್ಯಚಟುವಟಿಕೆಗಳಿಗೂ ಚಾಲನೆ ಸಿಕ್ಕಿಲ್ಲ.

ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಅರ್ಜಿ ಸಲ್ಲಿಸಲು ತಂತ್ರಾಂಶ ಅಭಿವೃದ್ದಿ, ಕಾರ್ಡ್‌ಗಳ ಖರೀದಿ, ಸರಬರಾಜು, ವಿತರಣೆ ಕಾರ್ಡ್‌ಗಳನ್ನು ಬಸ್‌ಗಳಲ್ಲಿ ಪರಿಶೀಲಿಸುವುದು, ಫಲಾನುಭವಿಗಳ ಮಾಹಿತಿಯನ್ನು ಇಟಿಎಂ ತಂತ್ರಾಂಶದ ಮೂಲಕ ಸಂಗ್ರಹಿಸುವುದು, ಮಾಹಿತಿಯನ್ನು ಕೇಂದ್ರೀಯ ಸರ್ವ್‌ರ್‍ಗೆ ವರ್ಗಾಯಿಸುವುದು ಹೀಗೆ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಕ್ರಮವಹಿಸಲು ಸೂಚಿಸಿತ್ತು. ಅಲ್ಲದೇ ಈ ಸಂಬಂಧ ಆಡಳಿತಾತ್ಮಕ ನಿರ್ಣಯಕ್ಕಾಗಿ ಶಕ್ತಿ ಯೋಜನೆಯಡಿ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವ ಕಾಲಾವಕಾಶವನ್ನು ಕಾಲಾಕಾಲಕ್ಕೆ ವಿಸ್ತರಿಸಿತ್ತು. ಇದನ್ನು 2026ರ ಮಾರ್ಚ್ 31ರವರೆಗೂ ವಿಸ್ತರಿಸಿತ್ತು.
ಕಾರ್ಡ್ ವಿತರಿಸುವ ಕಾಲಾವಕಾಶವು ವಿಸ್ತರಣೆ ಅವಧಿಯೂ ಪೂರ್ಣಗೊಂಡು 25 ದಿನಗಳಾದರೂ ಸಹ ಕಾರ್ಡ್ ವಿತರಣೆ ಕುರಿತು ಸಾರಿಗೆ ಇಲಾಖೆಯು ಜಿಜ್ಞಾಸೆಯಿಂದ ಇನ್ನೂ ಹೊರಬಂದಿಲ್ಲ.
ಸಾರಿಗೆ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ಪ್ರಸ್ತಾವದ ಪ್ರಕಾರ ಆಧಾರ್ ಕಾರ್ಡ್ ಶುಲ್ಕಕ್ಕಿಂತಲೂ ಶಕ್ತಿ ಸ್ಮಾರ್ಟ್ ಕಾರ್ಡ್ ಶುಲ್ಕವು ಅಧಿಕವಿತ್ತು. ಒಂದೊಮ್ಮೆ ಶಕ್ತಿ ಸ್ಮಾರ್ಟ್ ಕಾರ್ಡ್ ಶುಲ್ಕವನ್ನು ಪ್ರಯಾಣಿಕರಿಂದಲೇ ಸಂಗ್ರಹಿಸಲು ನಿರ್ಧರಿಸಿದ್ದರೇ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು ಮತ್ತು ಪ್ರತಿಪಕ್ಷಗಳ ಕೈಗೆ ಅಸ್ತ್ರವೊಂದನ್ನು ನೀಡಿದಂತಾಗುತ್ತಿತ್ತು. ಇದರ ಸುಳಿವು ಹಿಡಿದಿದ್ದ ಸರ್ಕಾರವು, ಈ ಬಗ್ಗೆ ಪುನರ್ ಅವಲೋಕಿಸಿದ ನಂತರ 2026ರ ಫೆ.24ರಂದೇ ಆದೇಶ ಹೊರಡಿಸಿತ್ತು.
ಶಕ್ತಿ ಯೋಜನೆ ಆರಂಭಿಸಲು ಸಾರಿಗೆ ಇಲಾಖೆಯು 2023ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ‘ಮುಂಬರುವ ದಿನಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿತರಿಸಲಿರುವ ಸ್ಮಾರ್ಟ್ ಕಾರ್ಡ್‌ಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಒದಗಿಸಬೇಕು,’ ಎಂದು ಸಾರಿಗೆ ಇಲಾಖೆಯು ಪ್ರಸ್ತಾವಿಸಿತ್ತು.

ಆದರೀಗ ಆರ್ಥಿಕ ಪರಿಸ್ಥಿತಿ ಬದಲಾಗಿದ್ದ ಕಾರಣ, ಸ್ಮಾರ್ಟ್ ಕಾರ್ಡ್‌ಗಳಿಗೆ ತಗಲುವ ವೆಚ್ಚವನ್ನು ಮಹಿಳಾ ಪ್ರಯಾಣಿಕರೇ ಭರಿಸಬೇಕು ಎಂದು ಸಾರಿಗೆ ಇಲಾಖೆಯು ರಾಗ ಬದಲಾಯಿಸಿತ್ತು.

ಸಿಸ್ಟಮ್ ಇಂಟಿಗ್ರೇಟರ್ ಮೂಲಕ ಸಮಗ್ರ ಹೂಡಿಕೆಗೆ 102.20 ಕೋಟಿ ವೆಚ್ಚ
ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಬ್ಯಾಕೆಂಡ್ ಆರ್ಕಿಟೆಕ್ಚರ್ ಸಂಪೂರ್ಣ ಜಾರಿಗೆ ಅಗತ್ಯವಿರುವ ಹಾರ್ಡ್‌ವೇರ್ ಖರೀದಿ, ಸಾಫ್ಟ್‌ವೇರ್ ಲೈಸನ್ಸಿಂಗ್, ಹೋಸ್ಟಿಂಗ್ ಮೂಲ ಸೌಕರ್ಯ ಮತ್ತು ಅಗತ್ಯ ಸುರಕ್ಷಾ ಕ್ರಮಗಳಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯು ವಿವರಿಸಿದೆ.

ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಆಯ್ಕೆಯಾದ ಸಿಸ್ಟಂ ಇಂಟ್ರಿಗ್ರೇಟರ್ ರಾಜ್ಯಾದ್ಯಂತ ಸ್ಮಾರ್ಟ್ ಕಾರ್ಡ್ ಮೂಲಸೌಕರ್ಯದ ನಿಯೋಜನೆ, ಕಾರ್ಯಾಚರಣೆ ಮತ್ತು ಕಾರ್ಯಾವಧಿಯ ನಿರ್ವಹಣೆಗೆ ಸಂಬಂಧಿತ ಸಂಪೂರ್ಣ ಬಂಡವಾಳ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಸಚಿವ ಸಂಪುಟಕ್ಕೆ ಒದಗಿಸಿತ್ತು.

ಇದರ ಪ್ರಕಾರ ಕಾರ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಸಿಎಂಎಸ್)ಗೆ 15 ಕೋಟಿ, ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‍ಗೆ 3 ಕೋಟಿ,ಸ್ವಯಂಚಾಲಿತ ಶುಲ್ಕ ಸಂಗ್ರಹ ಸಾಫ್ಟ್‌ವೇರ್‍ಗೆ 10 ಕೋಟಿ, ಕಾರ್ಡ್‌ಗೆ ಸೆಕ್ಯುರಿಟಿ ಆಕ್ಸೆಸ್ ಮಾಡ್ಯುಲ್‌ಗೆ 4.50 ಕೋಟಿ, ಸೆಟಲ್‌ಮೆಂಟ್ ಅಂಡ್ ಕ್ಲಿಯರಿಂಗ್ ಹೌಸ್ ಫಾರ್ ಶಕ್ತಿ ಸ್ಮಾರ್ಟ್ ಕಾರ್ಡ್ ಸೌಲಭ್ಯಕ್ಕೆ 70 ಕೋಟಿ ಸೇರಿ ಒಟ್ಟಾರೆ 102.50 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು.
‘ಈ ಕಾರ್ಯಾಚರಣೆಯ ವೆಚ್ಚಗಳು ಸೇರಿದಂತೆ ಅಂತಹ ವೆಚ್ಚಗಳನ್ನು ಆಯಾ ಎಸ್‌ಟಿಯುಗಳೀಂದ ಪ್ರತಿ -ಇಟಿಎಂ, ಪ್ರತಿ-ಟಿಕೆಟ್ ಅಥವಾ ಪಾಲುದಾರರಲ್ಲಿ ಅನ್ವಯವಾಗುವ ಇತರ ಆಧಾರದ ಮೇಲೆ ಮತ್ತು ಯಾವುದೇ ಮೂರನೇ ವ್ಯಕ್ತಿಯ ವ್ಯಾಪಾರಿಗಳಿಂದ ಪ್ರತಿ-ವಹಿವಾಟಿನ ಆಧಾರದ ಮೇಲೆ ಟೆಂಡರ್ ಸಮಯದಲ್ಲಿ ನಿರ್ಧರಿಸಿದಂತೆ ವಸೂಲು ಮಾಡಲಾಗುತ್ತದೆ,’ ಎಂದು ಸಾರಿಗೆ ಇಲಾಖೆಯು ವಿವರಿಸಿತ್ತು.
ಸ್ಮಾರ್ಟ್ ಕಾರ್ಡ್‌ಗೆ ತಗುಲುವ ವೆಚ್ಚವೆಷ್ಟು?
ಸ್ಮಾರ್ಟ್ ಕಾರ್ಡ್‌ವೊಂದಕ್ಕೆ 88 ರುಪಾಯಿ, ಸ್ಮಾರ್ಟ್ ಕಾರ್ಡ್‌ನಲ್ಲಿ ಚಿಪ್ ಎನ್‌ಕೋಡಿಂಗ್, ಬ್ಯಾಕೆಂಡ್ ಮ್ಯಾಪಿಂಗ್‌ಗೆ 10 ರುಪಾಯಿ, ಸರ್ಫೇಸ್ ಪ್ರಿಂಟಿಂಗ್ ಅಂದರೇ ಪ್ರಯಾಣಿಕರ ಫೋಟೋ, ಐಡಿ, ಮಾನ್ಯತೆ ಇತ್ಯಾದಿ ವಿವರಗಳನ್ನು ಮುದ್ರಿಸಲು 7 ರುಪಾಯಿ ಸೇರಿ ಒಟ್ಟಾರೆ ಕಾರ್ಡ್‌ವೊಂದಕ್ಕೆ 123 ರುಪಾಯಿ 90 ಪೈಸೆಯಾಗಲಿದೆ.

2026ರ ಫೆ.24ರಂದು ಹೊರಡಿಸಿರುವ ಆದೇಶದ ಪ್ರಕಾರ ಪ್ರತಿ ಸ್ಮಾರ್ಟ್ ಕಾರ್ಡ್‌ನ ಅಂದಾಜು ವೆಚ್ಚವೇ 123.90 ರು ಆಗಲಿದೆ. ಇದರ ಪ್ರಕಾರ ಶಕ್ತಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯ ಒಟ್ಟಾರೆ ವೆಚ್ಚವು ಉಚಿತ ಪ್ರಯಾಣದ 1 ಕೋಟಿ ಮತ್ತು ಶುಲ್ಕ ಪಾವತಿಸಿ ಪ್ರಯಾಣ ಬೆಳೆಸುವ 0.50 ಕೋಟಿ ಪ್ರಯಾಣಿಕರಿಗೆ ಒಟ್ಟಾರೆ 185.50 ಕೋಟಿ ರು ಆಗಲಿದೆ.
ಆಧಾರ್ ಗೆ 50 ರುಪಾಯಿ, ಸ್ಮಾರ್ಟ್ ಕಾರ್ಡ್‌ಗೇಕೆ 123.90 ರುಪಾಯಿ?
ಸ್ಮಾರ್ಟ್ ಕಾರ್ಡ್ ಮುದ್ರಣಕ್ಕೆ ತಗಲುವ ವೆಚ್ಚಕ್ಕೆ ಆರ್ಥಿಕ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯು 2025ರ ಏಪ್ರಿಲ್ 21 ಮತ್ತು ಜುಲೈ 14ರಂದು ಎರಡು ಅಭಿಪ್ರಾಯಗಳನ್ನು ನೀಡಿತ್ತು. 2025ರ ಏಪ್ರಿಲ್ 21ರಂದು ನೀಡಿದ್ದ ಅಭಿಪ್ರಾಯದಲ್ಲಿ ಆಧಾರ್ ಕಾರ್ಡ್‌ಗೆ ತಗಲುವ ವೆಚ್ಚ ಮತ್ತು ಸ್ಮಾರ್ಟ್ ಕಾರ್ಡ್ ಗೆ ತಗಲುವ ವೆಚ್ಚವನ್ನು ಹೋಲಿಸಿತ್ತು.
ಏಪ್ರಿಲ್‌ನಲ್ಲಿ ನೀಡಿದ್ದ ಅಭಿಪ್ರಾಯದಲ್ಲೇನಿದೆ?
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ವೆಚ್ಚವು ದುಬಾರಿಯಾಗಿದೆ. ಆಡಳಿತ ಇಲಾಖೆಯು ವೆಚ್ಚವನ್ನು ಪುನರ್ ಪರಿಶೀಲಿಸಬೇಕು. ಆಧಾರ್ ಕಾರ್ಡ್‌ಗಳು 50 ರೂಪಾಯಿ ಶುಲ್ಕಕ್ಕೆ ಲಭ್ಯವಿದೆ. ಸ್ಮಾರ್ಟ್ ಕಾರ್ಡ್‌ಗೆ ವಿಧಿಸಿರುವ ಶುಲ್ಕಕ್ಕಿಂತಲೂ ಕಡಿಮೆ ಇದೆ. ಸ್ಮಾರ್ಟ್ ಕಾರ್ಡ್ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಸಹ, ಆಡಳಿತ ಇಲಾಖೆಯು ದೇಶದ ಇತರ ಮಹಾನಗರಗಳು ಮತ್ತು ರಸ್ತೆ ಸಾರಿಗೆ ಸಂಸ್ಥೆಗಳ ದರಗಳನ್ನು ನೋಡಬೇಕು. ಮತ್ತು ತುಲನಾತ್ಮಕ ವಿಶ್ಲೇಷಣೆ ಮಾಡಿ ಮೂಲ ಬೆಲೆಯನ್ನು ನಿಗದಿಪಡಿಸಬೇಕು ಎಂದು ಸಾರಿಗೆ ಇಲಾಖೆಗೆ ಸೂಚಿಸಿತ್ತು.
ಜುಲೈನಲ್ಲಿ ಆರ್ಥಿಕ ಇಲಾಖೆ ನೀಡಿದ್ದ ಅಭಿಪ್ರಾಯ ಹೀಗಿದೆ
ಸರ್ಕಾರ ಉಚಿತ ಪ್ರಯಾಣಕ್ಕಾಗಿ ಭಾರಿ ಸಬ್ಸಿಡಿ ನೀಡುತ್ತಿದೆ. ಸ್ಮಾರ್ಟ್ ಕಾರ್ಡ್‌ಗಳ ವೆಚ್ಚವನ್ನು ಫಲಾನುಭವಿಗಳೇ ಭರಿಸುತ್ತಾರೆಂದು ನಿರೀಕ್ಷಿಸುವುದು ಸಮಂಜಸವಾಗಿದೆ. ಮತ್ತು ಸರ್ಕಾರ ಒದಗಿಸುತ್ತಿರುವ ಪ್ರಯೋಜನಕ್ಕೆ ಹೋಲಿಸಿದರೆ ಇದು ತುಂಬಾ ದೊಡ್ಡ ಮೊತ್ತವಲ್ಲ. ಆದ್ದರಿಂದ ಸ್ಮಾರ್ಟ್ ಕಾರ್ಡ್‌ಗಳ ವೆಚ್ಚವನ್ನು ಫಲಾನುಭವಿಗಳಿಗೆ ಬಿಲ್ ಮಾಡಬೇಕೆಂಬ ಷರತ್ತಿನೊಂದಿಗೆ ಸಮ್ಮತಿಸುತ್ತದೆ ಎಂದು ಹೇಳಿತ್ತು.

‘ಉಚಿತ ಪ್ರಯಾಣ ಪಡೆಯುವ ಫಲಾನುಭವಿಗಳಾದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತ ಪ್ರಯಾಣಿಕರ ಸೇರಿದಂತೆ ಎಲ್ಲಾ ಅರ್ಹ ಪ್ರಯಾಣೀಕರ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳ ಉತ್ಪಾದನೆ ಮತ್ತು ವಿತರಣೆ ವೆಚ್ಚವನ್ನು ಪ್ರಯಾಣಿಕರಿಂದ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಕಾರ್ಡ್ ಉತ್ಪಾದನೆ ಮತ್ತು ವಿತರಣೆ ವೆಚ್ಚವನ್ನು ಮರುಪಡೆಯಲಾಗುತ್ತದೆ,’ ಎಂದು ಸಾರಿಗೆ ಇಲಾಖೆಯು ಲೆಕ್ಕಾಚಾರ ಹಾಕಿ ಪ್ರಸ್ತಾವ ಸಲ್ಲಿಸಿತ್ತು.

ಸಚಿವ ಸಂಪುಟಕ್ಕೆ ಕೋರಿದ್ದ ಅನುಮೋದನೆಯಲ್ಲೇನಿದೆ?
ಉಚಿತ ಮತ್ತು ಶುಲ್ಕ ಪಾವತಿಸುವ ಪ್ರಯಾಣಿಕರಿಗಾಗಿ ಏಕೀಕೃತ, ಸಂಪರ್ಕರಹಿತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಹುದಾದ ಶುಲ್ಕ ಸಂಗ್ರಹಣೆ ವ್ಯವಸ್ಥೆಯನ್ನು ಸುಗಮಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ, ವಾಯುವ್ಯ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಸಿ (ಎನ್‌ಸಿಎಂಸಿ) ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ಕೋರಿತ್ತು.

ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಅನುಷ್ಠಾನ, ಹಣಕಾಸು ನಿರ್ವಹಣೆ, ಆಡಳಿತ ಮತ್ತು ದೀರ್ಘಕಾಲೀನ ಸುಸ್ಥಿರತೆಗಾಗಿ ನಾಲ್ಕು ಎಸ್‌ಟಿಯುಗಳು ಮತ್ತು ಆಯ್ದ ಸಿಸ್ಟಂ ಇಂಟಿಗ್ರೇಟರ್ ಜಂಟಿ ಒಡೆತನದ ಕಾನೂನು ಮತ್ತು ಕಾರ್ಯಾಚರಣೆ ಘಟಕವಾಗಿ ಎಸ್‌ಪಿವಿ ರಚನೆಗೆ ಅನುಮೋದನೆ ಕೋರಿತ್ತು. ಅಲ್ಲದೇ ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯಡಿಯಲ್ಲಿ ಪ್ರಯಾಣಿಕರ ನಿಧಿ (ಫ್ಲೋಟ್) ವಹಿವಾಟು ಇತ್ಯರ್ಥ ಮತ್ತು ಬಡ್ಡಿ ಸಂಚಯಗಳನ್ನು ನಿರ್ವಹಿಸಲು, ಪ್ರಿಪೇಯ್ಡ್, ಪಾವತಿ ಸಾಧನ (ಪಿಪಿಐ) ಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾಮಾನ್ಯ ಪೂಲ್ ಎಸ್ಕ್ರೋ ಖಾತೆಯನ್ನು ತೆರೆಯಲು ಅನುಮೋದನೆ ಸಚಿವ ಸಂಪುಟವು ಅನುಮೋದನೆ ನೀಡಿತ್ತು.

ಉಚಿತ ಪ್ರಯಾಣವನ್ನು ಪಡೆಯುವರು ಸೇರಿದಂತೆ ಎಲ್ಲಾ ಅರ್ಹ ವರ್ಗದ ಪ್ರಯಾಣಿಕರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳ ಖರೀದಿಯ ಬಗ್ಗೆ ಅನುಮೋದನೆಯ ಜೊತೆಗೆ ಕಾರ್ಡ್ ಉತ್ಪಾದನೆ, ವೈಯಕ್ತೀಕರಣ ಮತ್ತು ವಿತರಣೆ ವೆಚ್ಚಗಳನ್ನು ಮರುಪಡೆಯಲು ಕಾರ್ಡ್ ವೆಚ್ಚವನ್ನು ಪ್ರಯಾಣಿಕರಿಂದ (ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳು ಸೇರಿದಂತೆ) ಸಂಗ್ರಹಿಸಲು ಅಧಿಕಾರ ನೀಡಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಎನ್ ವಿ ಪ್ರಸಾದ್ ಅವರು ಕೋರಿದ್ದರು.
ಶಕ್ತಿ ಸ್ಮಾರ್ಟ್‌ನಲ್ಲಿ ಇ-ಪರ್ಸ್ ಸೌಲಭ್ಯ ಅಳವಡಿಸಲಿದೆ. ಮುಂಗಡವಾಗಿ ಲೋಡ್ ಮಾಡಿದ ಪ್ರಯಾಣ ಮೌಲ್ಯವನ್ನು ಎಲ್ಲಾ ರಾಜ್ಯ ಸಾರಿಗೆ ಸಂಸ್ಥೆಗಳ ಸೇವೆಗಳಲ್ಲೂ ಬಳಸಬಹುದು. ಇದಲ್ಲದೇ ನಗದು ರಹಿತ ಮತ್ತು ಸಂಪರ್ಕ ರಹಿತ ವಹಿವಾಟುಗಳನ್ನು ಸಕ್ರೀಯಗೊಳಿಸಲಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್ ಜತೆ (ಯುಪಿಐ) ಜತೆ ಸಂಯೋಜಿಸುವ ವ್ಯವಸ್ಥೆಯೂ ಇರಲಿದೆ.
ಶಕ್ತಿ ಸ್ಮಾರ್ಟ್ ಕಾರ್ಡ್‌ಗಳ ವಿತರಣೆ ಮತ್ತು ಸಕ್ರೀಯಗೊಳಿಸುವಿಕೆಯನ್ನು ಸುಗಮ ಮತ್ತು ಸುಲಭಗೊಳಿಸುವ ಉದ್ದೇಶದಿಂದ ಸರ್ಕಾರವು ಅಸ್ತಿತ್ವದಲ್ಲಿರುವ ರಾಜ್ಯ ಮೂಲಸೌಕರ್ಯಗಳಣ್ನು ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಕಾರ್ಡ್‌ಗಳು ಸೇವಾ ಸಿಂಧು ಕೇಂದ್ರಗಳು, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳು, ಹಾಗೆಯೆ ರಾಜ್ಯಾದಾದ್ಯಂತ ಗೊತ್ತುಪಡಿಸಿದ ಬಸ್ ನಿಲ್ದಾಣಗಳಲ್ಲಿ ಲಭ್ಯವಾಗಲಿದೆ.
ಅಲ್ಲದೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯೊಂದಿಗೆ ಸಂಯೋಜಿತವಾಗಿರುವ ವಿಶೇಷ ಮೊಬೈಲ್ ಅಪ್ಲಿಕೇಷನ್ ನ್ನು ಅಭಿವೃದ್ಧಿಪಡಿಸಲಿದೆ. ಈ ಅಪ್ಲೀಕೇಷನ್ ಮೂಲಕ ಬಳಕೆದಾರರು ನೋಂದಣಿ ಮಾಡಿಕೊಳ್ಳುವುದು, ಬಾಕಿ ಪರಿಶೀಲಿಸುವುದು, ರೀಚಾರ್ಜ್ ಮಾಡುವುದು, ವಹಿವಾಟಿನ ಇತಿಹಾಸ ವೀಕ್ಷಿಸುವುದು ಹಾಗೂ ಸಂಪರ್ಕ ರಹಿತ ವಿಧಾನದಲ್ಲಿ ಟಿಕೆಟ್ ದೃಢೀಕರಣ ಮಾಡುವಂತಹ ಸೌಲಭ್ಯಗಳು ಒಂದೇ ವೇದಿಕೆಯಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು ಸಾರಿಗೆ ಇಲಾಖೆಯು ಸಮರ್ಥಿಸಿಕೊಂಡಿತ್ತು.
ಉಚಿತ ಪ್ರಯಾಣದ ‘ಶಕ್ತಿ’; ಆದಾಯ ಖೋತಾ, ಸಿಬ್ಬಂದಿ ವೇತನಕ್ಕೆ ಅಡಚಣೆ, ಪ್ರಯಾಣ ದರ ಪರಿಷ್ಕರಣೆ?
ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾರಿಗೆ ಇಲಾಖೆಯು ಪ್ರಸ್ತಾವದ ಹಂತದಲ್ಲೇ ಇದ್ದ ಹೊತ್ತಿನಲ್ಲೇ ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




