Wednesday | April 22, 2026 |

ಸರ್ಕಾರದ ಪೂರ್ವಾನುಮೋದನೆ ಇಲ್ಲದಿದ್ದರೂ ದಲಿತರ ಜಮೀನು ಭೂಪರಿವರ್ತನೆಗೆ ಶಿಫಾರಸ್ಸು; ತಹಶೀಲ್ದಾರ್ ಭಾಗಿ!

ಬೆಂಗಳೂರು; ಪಿಟಿಸಿಎಲ್ ಕಾಯ್ದೆ,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ ಸ್ವರೂಪವನ್ನೇ ಮರೆಮಾಚಿ ನೂರಾರು ಕೆರೆ ವಿಸ್ತೀರ್ಣದ ಜಮೀನಿಗೆ ಪೋಡಿ ದುರಸ್ತಿ  ಮಾಡಲಾಗಿದೆ. ಅಲ್ಲದೇ ಸರ್ಕಾರದ ಪೂರ್ವಾನುಮೋದನೆ ಇಲ್ಲದೆಯೇ ಭೂ ಪರಿವರ್ತನೆ ಮಾಡಲು ಶಿಫಾರಸ್ಸು ಮಾಡಲಾಗಿದೆ. ಇದನ್ನು ಪರಿಶೀಲಿಸದೆಯೇ ಜಿಲ್ಲಾಧಿಕಾರಿಯೂ ಅಧಿಕೃತ ಜ್ಞಾಪನ ಪತ್ರವನ್ನೂ ಹೊರಡಿಸಿದ್ದಾರೆ.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ನಡೆದಿರುವ ಈ  ಭೂ  ಹಗರಣದ ಬಗ್ಗೆ ಟಿ ನರಸಿಂಹಮೂರ್ತಿ ಎಂಬುವರು ದಾಖಲೆ ಸಮೇತ ದೂರು ನೀಡಿ ವರ್ಷ ಕಳೆದಿದ್ದರು ಇದುವರೆಗೂ ಯಾವುದೇ ಕ್ರಮವಹಿಸಿಲ್ಲ. ತಹಶೀಲ್ದಾರ್‍‌ಗಳ ಕಾರ್ಯಕ್ಷಮತೆ ಮತ್ತು ಅದಕ್ಷತೆ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈಚೆಗಷ್ಟೇ ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಶಿಡ್ಲಘಟ್ಟ ತಹಶೀಲ್ದಾರ್ ಅವರು ನಿಯಮಗಳನ್ನೇ ಗಾಳಿಗೆ ತೂರಿ ಖಾಸಗಿ ಡೆವಲಪರ್ಸ್‌ಗಳಿಗೆ ಅನುಕೂಲ ಮಾಡಿಕೊಟ್ಟಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.

ಅಲ್ಲದೇ ಈ ಪ್ರಕರಣದ ಬಗ್ಗೆ ಪ್ರಾದೇಶಿಕ ಆಯುಕ್ತರು ಸಹ ವರದಿ ಕೇಳಿದ್ದರೂ ಸಹ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯು ವರದಿಯನ್ನೇ ನೀಡಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ನೇರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ ಪ್ರಭು ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ರಾಜೇಂದರ್ ಕುಮಾರ್ ಕಟಾರಿಯಾ ಅವರು 2026ರ ಏಪ್ರಿಲ್‌ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ದೂರಿನಲ್ಲೇನಿದೆ?

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಪುರ ಬೈರನಹಳ್ಳಿ ಗ್ರಾಮದ ಸರ್ವೆ ನಂಬರ್ 36/1, 36/2, 43, 44 ಮತ್ತು 45ರಲ್ಲಿ ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶವಿದೆ. ಈ ಜಮೀನುಗಳಿಗೆ ಶಿಡ್ಲಘಟ್ಟ ತಹಶೀಲ್ದಾರ್ ಅವರು ಭೂಪರಿವರ್ತನೆ ಮಾಡಿದ್ದಾರೆ ಎಂದು ನರಸಿಂಹಮೂರ್ತಿ ಎಂಬುವರು ಕಂದಾಯ ಇಲಾಖೆಗೆ 2 ಬಾರಿ ದೂರು ಸಲ್ಲಿಸಿದ್ದರು. 2025ರ ಆಗಸ್ಟ್‌ 1ರಂದು ನೀಡಿದ್ದ ಮೊದಲನೇ ಬಾರಿ ನೀಡಿದ್ದ ದೂರಿನ ಮೇಲೆ ಸರ್ಕಾರವು ಯಾವುದೇ ಕ್ರಮ ವಹಿಸದ ಕಾರಣ 2025ರ ಸೆ.17ರಂದು ದೂರು ನೀಡಿದ್ದರು.

 

 

ಸರ್ವೆ ನಂಬರ್ 36/1, 36/2, 43, 44 ಮತ್ತು 45ರಲ್ಲಿ ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶಗಳಿಗೆ ಶಿಡ್ಲಘಟ್ಟದ ತಹಶೀಲ್ದಾರ್ ಸ್ವಾಮಿ ಎಂಬುವರು ಲಂಚದ ಹಣ ಪಡೆದು ಕಾನೂನುಬಾಹಿರವಾಗಿ ಪೋಡಿ ದುರಸ್ತಿ ಮಾಡಿದ್ದಾರೆ. ಮತ್ತು ಸರ್ಕಾರದ ಪೂರ್ವಾನುಮತಿ ಪಡೆಯದೇ ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಜಮೀನಿನಲ್ಲಿ ಪಿಟಿಸಿಎಲ್‌ ಕಾಯ್ದೆಗೆ ಒಳಪಟ್ಟಿರುವ ಜಮೀನುಗಳಿವೆ ಎಂದು ನರಸಿಂಹಮೂರ್ತಿ ಎಂಬುವರು ದೂರಿನಲ್ಲಿ ದಾಖಲೆ ಸಹಿತವಾಗಿ ವಿವರಿಸಿದ್ದರು.

 

 

‘2025ರ ಆಗಸ್ಟ್‌ 1ರಂದು ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ಇದುವರೆಗೂ ಇಲಾಖೆಯಿಂದ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ. ಇದು ಬೇಸರದ ಸಂಗತಿ. ಸಾರ್ವಜನಿಕ ಹಿತಾಸಕ್ತಿಯಡಿ ಸರ್ಕಾರಕ್ಕೆ  ದೂರನ್ನು ನೀಡಿದಾಗ ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ,’ ಎಂದು ನರಸಿಂಹಮೂರ್ತಿ ಅವರು ದೂರಿನಲ್ಲಿ ಸರ್ಕಾರದ ಗಮನಸೆಳೆದಿದ್ದರು.

 

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಸಾದಲಿ ಹೋಬಳಿಯ ಪುರಬೈರನಹಳ್ಳಿ ಗ್ರಾಮದ ಹಳೇ ಸರ್ವೆ ನಂಬರ್ 2ರಲ್ಲಿ ಗೋಮಾಳ ಮತ್ತು ಗೋವುಕಾಡು (ಅರಣ್ಯ ಪ್ರದೇಶ) ಇದೆ. ಇದರ ಹೊಸ ಸರ್ವೆ ನಂಬರ್‍‌ 36/1 ಮತ್ತು 36/2ರಲ್ಲಿ 1 ಎಕರೆ 35 ಗುಂಟೆ ಹಾಗೂ 2 ಎಕರೆ ಸೇರಿ ಒಟ್ಟಾರೆ 3 ಎಕರೆ 35 ಗುಂಟೆ ಜಮೀನು ಇದೆ. ಹೊಸ ಸರ್ವೆ ನಂಬರ್‍‌ 43ರಲ್ಲಿ 2 ಎಕರೆ, ಸರ್ವೆ ನಂಬರ್‍‌ 44ರಲ್ಲಿ 2 ಎಕರೆ, ಸರ್ವೇ ನಂಬರ್‍‌ 45ರಲ್ಲಿ 1 ಎಕರೆ 30 ಗುಂಟೆ ಜಮೀನು ಸೇರಿ ಒಟ್ಟಾರೆ 5 ಎಕರೆ 30 ಗುಂಟೆ ಜಮೀನು ಸಹ ಮೂಲತಃ ಸರ್ಕಾರಿ ಗೋಮಾಳ ಮತ್ತು ಅರಣ್ಯ ಭೂಮಿಗೆ ಸೇರ್ಪಡೆಯಾಗಿದೆ ಎಂದು ವಿವರಿಸಿರುವುದು ದೂರಿನಿಂದ ಗೊತ್ತಾಗಿದೆ.

 

 

 

ಈ ಜಮೀನುಗಳು ಇತ್ತೀಚೆಗಷ್ಟೇ ಕರ್ನಾಟಕ ಭೂ ಮಂಜೂರಾತಿ ನಿಯಮಗಳಡಿಯಲ್ಲಿ ಅಕ್ರಮ ಸಾಗುವಳಿ ಸಕ್ರಮೀಕರಣ ಯೋಜನೆಯಡಿ ಅರ್ಜಿದಾರರಿಗೆ ವ್ಯವಸಾಯ ಮಾಡಿ ಜೀವನೋಪಾಯಕ್ಕೆ ಆಧಾರವಾಗಲಿ ಎಂಬ ಉದ್ದೇಶದಿಂದ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ.

 

 

 

ಈ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 108(ಎ) (1) ಅಡಿ ಜಮೀನನ್ನು ಮಂಜೂರು ಪಡೆದವರು ಅವನಿಗೆ/ಅವಳಿಗೆ ಸಾಗುವಳಿ ಚೀಟಿ ಅಥವಾ ಮಂಜೂರು ಮಾಡಿದ ಪ್ರಮಾಣಪತ್ರವನ್ನು ನೀಡಿದ ದಿನಾಂಕದಿಂದ 25 ವರ್ಷದ ಅವಧಿಯವರೆಗೆ ಭೂಮಿಯನ್ನು ಪರಭಾರೆ ಮಾಡಲು ಅವಕಾಶವಿಲ್ಲ. ಅಥವಾ ವ್ಯವಸಾಯೇತರ ಉದ್ದೇಶಗಳಿಗಾಗಿ ಬಳಸಲು ಸಹ ಅವಕಾಶವಿಲ್ಲ.

 

 

ಆದರೂ ಶಿಡ್ಲಘಟ್ಟದ ತಹಶೀಲ್ದಾರ್ ಸ್ವಾಮಿ ಎಂಬುವರು ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿನಲ್ಲಿ ನರಸಿಂಹಮೂರ್ತಿ ಅವರು ಆಪಾದಿಸಿದ್ದಾರೆ. ಪೋಡಿ ದುರಸ್ತಿ ಮಾಡಿದ್ದಲ್ಲದೇ ಈ ಜಮೀನುಗಳನ್ನು ಭೂ ಪರಿವರ್ತನೆ ಮಾಡಲು ಶಿಫಾರಸ್ಸು ಕೂಡ ಮಾಡಿದ್ದಾರೆ ಎಂದು ದೂರಿನಲ್ಲಿ ಸಾಕ್ಷ್ಯವನ್ನೂ ಒದಗಿಸಿರುವುದು ಗೊತ್ತಾಗಿದೆ.

 

 

ಹಳೇ ಸರ್ವೆ ನಂಬರ್‍‌ 2 ಮತ್ತು ಹೊಸ ಸರ್ವೆ ನಂಬರ್‍‌ 36/1ರಲ್ಲಿನ 1 ಎಕರೆ 35 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ರೆಸಿಡೆನ್ಷಿಯಲ್ ಲೇ ಔಟ್ ಮಾಡಲು ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಲಾಗಿದೆ. ತಹಶೀಲ್ದಾರ್ ಮಾಡಿದ್ದ ಈ ಶಿಫಾರಸ್ಸಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯವರು 2025ರ ಜನವರಿ 1ರಂದು ಅಧಿಕೃತ ಜ್ಞಾಪನ ಪತ್ರ ( ಸಂಖ್ಯೆ 735808) ಹೊರಡಿಸಿದ್ದಾರೆ.

 

 

ಅದೇ ರೀತಿ ಹೊಸ ಸರ್ವೇ ನಂಬರ್ 36/2ರಲ್ಲಿ 2 ಎಕರೆಯಲ್ಲಿಯೂ ರೆಸಿಡೆನ್ಷಿಯಲ್ ಲೇ ಔಟ್ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ತಹಶೀಲ್ದಾರ್ ಮಾಡಿದ್ದ ಶಿಫಾರಸ್ಸಿಗೆ ಜಿಲ್ಲಾಧಿಕಾರಿಯವರು 2025ರ ಜನವರಿ 1ರಂದೇ ಆಧಿಕೃತ ಜ್ಞಾಪನ ಪತ್ರ ಹೊರಡಿಸಿರುವುದು ದೂರಿನಿಂದ ತಿಳಿದು ಬಂದಿದೆ.

 

 

ಹಾಗೆಯೇ ಹೊಸ ಸರ್ವೆ ನಂಬರ್‍‌ 43ರಲ್ಲಿನ 2 ಎಕರೆ, 44ರಲ್ಲಿನ 2 ಎಕರೆ, 45ರಲ್ಲಿ 1 ಎಕರೆ 30 ಗುಂಟೆ ಜಮೀನಿನಲ್ಲಿ ಕೈಗಾರಿಕೆ ಉದ್ದೇಶದ ಕ್ರಷರ್ ಉದ್ದೇಶಕ್ಕೆ  ಭೂ ಪರಿವರ್ತನೆ ಮಾಡಲಾಗಿತ್ತು. ತಹಶೀಲ್ದಾರ್ ಅವರು ಮಾಡಿದ್ದ ಈ ಎಲ್ಲಾ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರು ಒಂದೇ ದಿನದಲ್ಲಿ ಅಂದರೇ 2024ರ ಆಗಸ್ಟ್‌ 6ರಂದೇ ಆಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು.

 

 

 

 

 

ಜಿಲ್ಲಾಧಿಕಾರಿಯವರು ಹೊರಡಿಸಿದ್ದ ಅಧಿಕೃತ ಜ್ಞಾಪನ ಪತ್ರದಲ್ಲಿನ ಸರ್ವೆ ನಂಬರ್‍‌ಗಳಲ್ಲಿನ ಜಮೀನುಗಳು ಮಂಜೂರು ಆಗಿ 25 ವರ್ಷಗಳ ಅವಧಿಯವರೆಗೆ ಪರಭಾರೆ ಮಾಡಲು ಅವಕಾಶವಿಲ್ಲ. ಅಲ್ಲದೇ ಪರಭಾರ ನಿಷಿದ್ಧದ ಅವಧಿಯೂ ಮುಕ್ತಾಯವಾಗಿಲ್ಲ. ‘ಆದರೂ ಸಹ ಈ ಜಮೀನು ಕ್ರಯವಾಗಿದೆ. ಕರ್ನಾಟಕ ಭೂ ಕಂದಾಯ ಕಾನೂನು ನಿಯಮಗಳನ್ನು ಪಾಲಿಸಬೇಕಿದ್ದ ತಹಶೀಲ್ದಾರ್ ಅವರು ಕಾನೂನು ನಿಯಮಗಳನ್ನೆಲ್ಲಾ ಉಲ್ಲಂಘಿಸಿ ನಿಯಮಬಾಹಿರವಾಗಿ ವರ್ತಿಸಿದ್ದಾರೆ.

ಅಲ್ಲದೇ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ  ವೈಯಕ್ತಿಕ ಹಿತಾಸಕ್ತಿಗಾಗಿ ಯಾವುದೋ ಆಮಿಷಕ್ಕೆ ಒಳಗಾಗಿ ಲಂಚದ ಹಣವನ್ನು ಸ್ವೀಕರಿಸಿ ಈ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಮಾಡಲು ಶಿಫಾರಸ್ಸು ಮಾಡಿರುವುದು ದಾಖಲೆಗಳ ಮೂಲಕ ಬೆಳಕಿಗೆ ಬಂದಿದೆ,’ ಎಂದು ದೂರುದಾರ ನರಸಿಂಹಮೂರ್ತಿ ಅವರು ಸರ್ಕಾರದ ಗಮನಸೆಳೆದಿರುವುದು ತಿಳಿದು ಬಂದಿದೆ.

ಅದಷ್ಟೇ ಅಲ್ಲ, ಈ ಜಮೀನುಗಳ ಮೂಲ ಮಂಜೂರಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಈ ಜಮೀನುಗಳು ಒಳಪಟ್ಟಿವೆ. ಇಂತಹ ಜಮೀನುಗಳನ್ನು ಭೂ ಪರಿವರ್ತನೆ ಮಾಡುವ ಮೊದಲು ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮೋದನೆ ಪಡೆಯಬೇಕು. ಪೂರ್ವಾನುಮತಿ ಪಡೆದ ನಂತರವಷ್ಟೇ ಭೂ ಪರಿವರ್ತನೆ ಮಾಡಬೇಕು. ಹಾಗೆಯೇ ಇವೇ ಜಮೀನುಗಳ ಪೈಕಿ ಕೆಲವು ಜಮೀನುಗಳು ಅರಣ್ಯಕ್ಕೆ ಸಂಬಂಧಿಸಿವೆ. ಹೀಗಾಗಿ ಅರಣ್ಯ ಮತ್ತು ಕಾನೂನು, ನಿಯಮಗಳ ಅನ್ವಯ ಅರಣ್ಯ ಭೂಮಿಗಳನ್ನು ಯಾವುದೇ ಕಾರಣಕ್ಕೂ ಯಾರಿಗೂ ಮಂಜೂರು ಮಾಡಲು ಅವಕಾಶವೇ ಇಲ್ಲ.

ಆದರೂ ‘ತಹಶೀಲ್ದಾರ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಸತ್ಯ ಸಂಗತಿಗಳನ್ನು ಮರೆಮಾಚಿ ಮೇಲಾಧಿಕಾರಿಗಳಿಗೆ ಅಸತ್ಯವಾದ ವರದಿ ಸಲ್ಲಿಸಿ ಭೂ ಪರಿವರ್ತನೆ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಈ ಎಲ್ಲಾ ಅಕ್ರಮಗಳಿಂದ ತಪ್ಪಿಸಿಕೊಳ್ಳಲು ಈಚೆಗಷ್ಟೇ ಬೆಂಗಳೂರಿನಲ್ಲಿರುವ ಕಂದಾಯ ಇಲಾಖೆ ಅಯುಕ್ತರ ಕಚೇರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ,’ ಎಂದು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

ಈ ದೂರಿಗೆ ಸಂಬಂಧಿಸಿದಂತೆ ವರದಿ ನೀಡಬೇಕು ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರಿಗೆ 2025ರ ಮಾರ್ಚ್‌ 7 ಮತ್ತು  ಸೆ.31 ರಂದು ಪತ್ರ ಬರೆದಿದ್ದರು.

 

 

ಆದರೂ ಈ ಪತ್ರದ ಆಧರಿಸಿ ಜಿಲ್ಲಾಧಿಕಾರಿಯವರು ಯಾವುದೇ ಕ್ರಮವಹಿಸಿಲ್ಲ. ಹೀಗಾಗಿ ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರೇ ನೇರವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಕಟಾರಿಯಾ ಪತ್ರದಲ್ಲೇನಿದೆ?

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಪುರಬೈರನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 36/1, 36/2, 43, 44 ಮತ್ತು 45ರಲ್ಲಿ  ಸರ್ಕಾರಿ ಜಮೀನಿದೆ. ಪಿಟಿಎಲ್ ಕಾಯ್ದೆ ಮತ್ತು ಕರ್ನಾಟಕ ಭೂ ಕಂದಾಯ ನಿಯಮಗಳು ಮತ್ತು ಅರಣ್ಯ ಕಾಯ್ದೆಗಳನ್ನು ಉಲ್ಲಂಘಿಸಿ ಪೋಡಿ ದುರಸ್ತಿ ಮಾಡಿ ಸರ್ಕಾರದ ಪೂರ್ವಾನುಮೋದನೆ ಪಡೆಯದೇ ಜಮೀನುಗಳ ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ವರದಿ ಸಲ್ಲಿಸಿಲ್ಲ ಎಂದು ಕಟಾರಿಯಾ ಅವರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

 

ದೂರಿನಲ್ಲಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯ ಸಲ್ಲಿಸಬೇಕು. ಹಾಗೂ ಒಂದು ವೇಳೆ ದೂರಿನಲ್ಲಿರುವ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕಂಡು ಬಂದಲ್ಲಿ ಕರಡು ದೋಷಾರೋಪಣೆ ಪಟ್ಟಿಯನ್ನು ತುರ್ತಾಗಿ ಸಲ್ಲಿಸಬೇಕು ಎಂದು ಕಟಾರಿಯಾ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

Hot this week

ಕೆಎಸ್‌ಆರ್‍‌ಪಿ, ಐಆರ್‍‌ಬಿ ಘಟಕಗಳಲ್ಲಿ ಆರ್ಡರ್ಲಿ ಜೀವಂತ!; ಕಮಾಂಡೆಂಟ್‌ಗಳಿಂದ ಹಣ ವಸೂಲಿ, ರಾಜಭವನ ಮೆಟ್ಟಿಲೇರಿದ ದೂರು

ಬೆಂಗಳೂರು; ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಎಲ್ಲಾ ಘಟಕಗಳು ಮತ್ತು ಇಮಡಿಯಾ...

4,102.27 ಕೋಟಿ ರು ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರ ವಿವರಗಳಿಲ್ಲ, ಕ್ರೆಡಿಟ್‌ ರೇಟಿಂಗ್‌ ಕುಸಿತವಾದರೂ ಎಚ್ಚರವಿಲ್ಲ, ಅಡವಿರಿಸಿದ್ದ ಸ್ವತ್ತುಗಳನ್ನೂ ಹಿಂಪಡೆದಿಲ್ಲ

ಬೆಂಗಳೂರು;  ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ  ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ ವಿವಿಧ...

ಮುಕ್ತ ವಿವಿ ಕುಲಪತಿಗೆ ವಿಶೇಷ ವಿನಾಯಿತಿಯ ನಿರಂಕುಶ ಅಧಿಕಾರ?; ಸರ್ಕಾರದ ಕೆಂಗಣ್ಣಿಗೆ ಮತ್ತೆ ಗುರಿಯಾದ ರಾಜ್ಯಪಾಲ!

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ ಶರಣಪ್ಪ ವಿ...

Topics

ಮುಕ್ತ ವಿವಿ ಕುಲಪತಿಗೆ ವಿಶೇಷ ವಿನಾಯಿತಿಯ ನಿರಂಕುಶ ಅಧಿಕಾರ?; ಸರ್ಕಾರದ ಕೆಂಗಣ್ಣಿಗೆ ಮತ್ತೆ ಗುರಿಯಾದ ರಾಜ್ಯಪಾಲ!

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ ಶರಣಪ್ಪ ವಿ...

300ಕ್ಕೂ ಹೆಚ್ಚು ಖಾತೆಗಳಲ್ಲಿ 3,171.95 ಕೋಟಿ ರು ಬ್ಯಾಂಕ್‌ ಬ್ಯಾಲೆನ್ಸ್‌; ಲೆಕ್ಕ ಪರಿಶೋಧಕರಿಗೇ ದಾಖಲೆ ನೀಡದ ಜಿಬಿಎ, ಇಷ್ಟೊಂದು ಅಶಿಸ್ತೇ?

ಬೆಂಗಳೂರು; ವಿವಿಧ ಬ್ಯಾಂಕ್‌ಗಳಲ್ಲಿ  300ಕ್ಕೂ ಹೆಚ್ಚು ಖಾತೆಗಳಲ್ಲಿ 3,171.95 ಕೋಟಿ ರು ಬ್ಯಾಂಕ್‌...

ಹಾರೋಹಳ್ಳಿ ಭೂ ಹಗರಣ; ದಿ ಫೈಲ್ ವರದಿ ಬೆನ್ನಲ್ಲೇ 108 ಕೋಟಿ ಮೌಲ್ಯದ ಜಮೀನು ಸರ್ಕಾರದ ಹೆಸರಿಗೆ ದಾಖಲು

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತವರು ಕ್ಷೇತ್ರದಲ್ಲಿಯೇ  ನಕಲಿ...

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತದಿಂದ ತನಿಖೆ, ಹೊರಬಿದ್ದ ಆದೇಶ

ಬೆಂಗಳೂರು; ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಿಂದಿನ ಕಾಂಗ್ರೆಸ್‌...

Related Articles

Popular Categories

error: Content is protected !!