ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ಧ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು ವಿಚಾರಗಳನ್ನು ಬಳಸಿಕೊಂಡು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ಹಲವು ಇಲಾಖೆಗಳು ಸರ್ಕಾರಕ್ಕೆ ಇದುವರೆಗೂ ಯಾವುದೇ ಮಾಹಿತಿಯನ್ನೂ ನೀಡಿಲ್ಲ.
ಬೆಂಗಳೂರಿನ 42ನೇ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ರಾಜ್ಯ ಕಾಂಗ್ರೆಸ್ ಸರ್ಕಾರವು 2025ರ ಮೇ ತಿಂಗಳಲ್ಲಿ ತೀರ್ಮಾನಿಸಿತ್ತು. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ) ಯು ಎಲ್ಲಾ ಇಲಾಖೆಗಳಿಂದ ಮಾಹಿತಿ ಬಯಸಿತ್ತು. ಆದರೆ ಹಲವು ಇಲಾಖೆಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ) ಗೆ ಮಾಹಿತಿಯನ್ನೇ ನೀಡಿಲ್ಲ. ಹೀಗಾಗಿ ನೆನಪೋಲೆಗಳನ್ನು ಕಳಿಸುತ್ತಿವೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು 2026ರ ಮಾರ್ಚ್ 27ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಆಯುಕ್ತರು, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕರಿಗೆ ಪತ್ರವನ್ನು (ಇಪಿ 181 ವೈಎಸ್‌ಕೆ 2026) ಬರೆದಿದೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಭಾರತೀಯ ಜನತಾಪಕ್ಷವು ಸುಳ್ಳು ಪ್ರಚಾರ ಮಾಡುತ್ತಿರುವ ಬಗ್ಗೆ 42ನೇ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣದ ಕುರಿತು ದೂರು ದಾಖಲಿಸುವ ಕುರಿತು 2025ರ ಜುಲೈ 30ರಂದೇ ಪತ್ರ ಬರೆದಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಪತ್ರದ ಕೋರಲಾದ ಮಾಹಿತಿಯು ಸ್ವೀಕೃತವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2025ರ ಡಿಸೆಂಬರ 19ರಂದು ಅನಧಿಕೃತ ಟಿಪ್ಪಣಿ ( ಸಂಖ್ಯೆ; ಸಿಆಸುಇ 141 2025) ಹೊರಡಿಸಿದೆ.
ಆದ್ದರಿಂದ 2025ರ ಜುಲೈ 30ರ ಪತ್ರದಲ್ಲಿ ಕೋರಲಾದ ಮಾಹಿತಿಯನ್ನು ಮರು ಟಪಾಲಿನಲ್ಲಿ ಕೂಡಲೇ ಒದಗಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ವಿಶೇಷಾಧಿಕಾರಿ ಶುಭಮಂಗಳ ಆರ್ ವಿ ಅವರು ಇಲಾಖೆಯ ಆಯುಕ್ತರು, ಪಿಯು ಮಂಡಳಿಯ ನಿರ್ದೇಶಕರು, ಸಮಗ್ರ ಶಿಕ್ಷಣ ಘಟಕದ ರಾಜ್ಯ ಯೋಜನಾ ನಿರ್ದೇಶಕರಿಗೆ ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಏನಿದು ಪ್ರಕರಣ?
2025ರ ಮೇ 20ರಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದ ಬಿಜೆಪಿ, ‘ರಾಜ್ಯ ಸರ್ಕಾರದ 2 ವರ್ಷಗಳ ವೈಫಲ್ಯ ಬಗ್ಗೆ ಆರೋಪ ಪಟ್ಟಿ’ ಎಂಬ ಶೀರ್ಷಿಕೆಯ ಅಡಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಿತ್ತು.
ಸರ್ಕಾರದ ಅಧಿಸೂಚನೆಯಲ್ಲಿ ಏನಿದೆ?
ರಾಜ್ಯ ಸರ್ಕಾರದ 2 ವರ್ಷಗಳ ವೈಫಲ್ಯತೆ ಬಗ್ಗೆ, ಆರೋಪ ಪಟ್ಟಿ ಎಂಬ ಶೀರ್ಷಿಕೆಯಡಿಯಲ್ಲಿ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ತಿರುಚುವಿಕೆ ಹಾಗೂ ಸುಳ್ಳು ಸಂಗತಿಗಳನ್ನು ಅಳವಡಿಸಿಕೊಂಡು ಕರ್ನಾಟಕ ಭಾರತೀಯ ಜನತಾ ಪಕ್ಷವು ಸುಳ್ಳು ಪ್ರಚಾರ ಮಾಡಿರುವ ಬಗ್ಗೆ, ಬೆಂಗಳೂರಿನ ಮಾನ 42ನೇ ಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದಮೆ ದಾಖಲಿಸಬೇಕು ಎಂದು ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದಿಸಿದ್ದರು.

ಈ ಸಂಬಂಧ ಸರ್ಕಾರವು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಸರ್ಕಾರಿ ಅಭಿಯೋಜಕರಿಗೆ ಅಗತ್ಯವಿರುವ ಮಾಹಿತಿ ಒದಗಿಸಲು ಉಪ ಕಾರ್ಯದರ್ಶಿ (ಗೃಹ- ಕಾನೂನು ಮತ್ತು ಸುವ್ಯವಸ್ಥೆ) ಕುಮಟಾ ಪ್ರಕಾಶ್ ಅವರನ್ನು ನೇಮಿಸಿತ್ತು.
ಅಲ್ಲದೆ, ಈ ಪ್ರಕರಣವನ್ನು ನಿರ್ವಹಿಸಲು 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ವಕೀಲ ಬಿಎಸ್ ಪಾಟೀಲ್ ಮತ್ತು ಬೆಂಗಳೂರಿನ 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ವಕೀಲರಾದ ಶೈಲಜಾ ನಾಯಕ್ ಅವರನ್ನು ನಿಯೋಜಿಸಿತ್ತು. ಕುಮಟಾ ಪ್ರಕಾಶ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕಾರ್ಯದರ್ಶಿಗೆ ದೂರು ಸಲ್ಲಿಸಲು ಅಧಿಕಾರ ನೀಡಿತ್ತು.
ಸರ್ಕಾರದ ನಡೆಯನ್ನು ಖಂಡಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಬಿಜೆಪಿ ಇದಕ್ಕೆ ಭಯಪಡುವುದಿಲ್ಲ. ‘ನೀವು (ಸರ್ಕಾರ) ಬಿಜೆಪಿಯನ್ನು ನಿಯಂತ್ರಿಸಬಹುದು ಎಂದು ಭಾವಿಸುತ್ತಿದ್ದರೆ, ಅದು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲಿ, ತುರ್ತು ಪರಿಸ್ಥಿತಿಯ ಎರಡನೇ ಅಧ್ಯಾಯ ಪ್ರಾರಂಭವಾದಂತೆ ಕಾಣುತ್ತಿದೆ. ಪ್ರಜಾಪ್ರಭುತ್ವಕ್ಕೆ ಅದನ್ನು ಮುರಿಯುವ ಶಕ್ತಿ ಇದೆ. ಜನರಿಗೆ ಆ ಅಧಿಕಾರವಿದೆ, ಆದ್ದರಿಂದ ವಿರೋಧ ಪಕ್ಷ ಮತ್ತು ಮಾಧ್ಯಮಕ್ಕೂ ಅಧಿಕಾರವಿದೆ’ ಎಂದು ಅವರು ಹೇಳಿದ್ದರು.
“ಸರಣಿ ಭ್ರಷ್ಟಾಚಾರಗಳು, ಅಭಿವೃದ್ಧಿ ಶೂನ್ಯ ಆಡಳಿತವನ್ನು ಪ್ರಶ್ನಿಸಿ ಹೋರಾಡುತ್ತಿರುವ ವಿರೋಧ ಪಕ್ಷಗಳನ್ನು ಈವರೆವಿಗೂ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಬೆದರಿಸುತ್ತಿದ್ದ ಕಾಂಗ್ರೆಸ್, ವಿಧಾನ ಸಭೆಯ ಅಧ್ಯಕ್ಷರನ್ನು ಬಳಸಿಕೊಂಡು ವಿರೋಧ ಪಕ್ಷದ 18 ಸದಸ್ಯರನ್ನು ಸುದೀರ್ಘ ಅವಧಿಗೆ ಅಮಾನತ್ತು ಮಾಡಿ ಸಭಾಧ್ಯಕ್ಷ ಪೀಠವನ್ನು ತನ್ನ ಸರ್ವಾಧಿಕಾರತನ ಪ್ರದರ್ಶಿಸಲು ಬಳಸಿಕೊಂಡಿತ್ತು ಎಂದು ವಿಜಯೇಂದ್ರ ಅವರು ಆರೋಪಿಸಿದ್ಸದರು.
ಇದೀಗ ಸಾಧನೆಯ ಹೆಸರಿನಲ್ಲಿ ರಾಜ್ಯದ ಜನರಿಗೆ ಸುಳ್ಳು ಹೇಳಲು ಹೊರಟು ಬರಿದಾಗಿರುವ ಬೊಕ್ಕಸವನ್ನು ಮತ್ತಷ್ಟು ಬರಿದು ಮಾಡಲು ದುಂದುವೆಚ್ಚದಲ್ಲಿ ‘ಸಾಧನ ಸಮಾವೇಶ’ ಮಾಡಲು ಹೊರಟ ಜನವಿರೋಧಿ ನಡೆಯನ್ನು ಪ್ರಶ್ನಿಸಿ ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಮಾಧ್ಯಮಗಳ ಮೂಲಕ ಜಾಹಿರಾತು ಬಿಡುಗಡೆ ಮಾಡಿದರೆ ಅದರಿಂದ ವಿಚಲಿತಗೊಂಡು ಮಾನನಷ್ಟ ಮೊಕದ್ದಮೆ ಹೂಡಲು ಹೊರಟಿದೆ” ಎಂದು ಹೇಳಿದ್ದರು.
“ಸರ್ಕಾರದ ವ್ಯವಸ್ಥೆ ಹಾಗೂ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ವಿರೋಧ ಪಕ್ಷ ಹಾಗೂ ಮಾಧ್ಯಮದವರನ್ನು ಬೆದರಿಸುವ ಕರಾಳ ಅಧಿಸೂಚನೆ ಹೊರಡಿಸಿದೆ. ಕೇವಲ ಜಾಹಿರಾತಿಗೆ ಇಷ್ಟೊಂದು ಹೆದರಿರುವ ಕಾಂಗ್ರೆಸ್ ಸರ್ಕಾರದ ನಡೆ ಪಲಾಯನವಾದ ಹಾಗೂ ʼಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆʼ ಎಂಬುದನ್ನು ಪ್ರತಿಬಿಂಬಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಯಾವುದೇ ಬೆದರಿಕೆಗೂ ಬಿಜೆಪಿ ಅಂಜುವ ಪ್ರಶ್ನೆಯೇ ಇಲ್ಲ” ಎಂದು ಎಚ್ಚರಿಸಿದ್ದರು.
“ಪೊಲೀಸ್ ಹಾಗೂ ಕಾನೂನಿನ ಹೆಸರಿನಲ್ಲಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನದ ಪರಮಾವಧಿಯಲ್ಲದೇ ಬೇರೆನೂ ಅಲ್ಲ. ನಿಮ್ಮ ಸರ್ವಾಧಿಕಾರಿ ಮನಃಸ್ಥಿತಿಗೆ ಭಟ್ಟಂಗಿಗಳ ಹಾಗೂ ಅವಿವೇಕಿಗಳ ಸಲಹೆಯನ್ನು ಆಧರಿಸಿ, ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದು ಕೇವಲ ಭಾರತೀಯ ಜನತಾ ಪಾರ್ಟಿ ವಿರುದ್ಧವಷ್ಟೇ ಅಲ್ಲ, ಮಾಧ್ಯಮಗಳ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಹೊರಟಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದರು.
ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಆರಂಭವಾಗಿದೆ, ಅದನ್ನು ಹಿಮ್ಮೆಟ್ಟಿಸುವ ಶಕ್ತಿ ಪ್ರಜಾಪ್ರಭುತ್ವಕ್ಕಿದೆ, ಕರ್ನಾಟಕದ ಜನರಿಗಿದೆ, ವಿರೋಧ ಪಕ್ಷಗಳಿಗಿದೆ ಹಾಗೂ ಮಾಧ್ಯಮಗಳಿಗಿದೆ ಎಂಬುದನ್ನು ಶೀಘ್ರದಲ್ಲಿ ಕಾಂಗ್ರೆಸ್ ಸರಕಾರ ಎದುರು ನೋಡಲಿದೆ” ಎಂದಿದ್ದರು.








