ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮಠಾಣ ಜಮೀನನ್ನು ವಿಧಾನಪರಿಷತ್ ಸದಸ್ಯ ಎಂ ಆರ್ ಸೀತಾರಾಂ ಅವರ ಕುಟುಂಬ ಸದಸ್ಯರ ಹೆಸರಿಗೆ ಅದಲು ಬದಲು ಮಾಡಿರುವ ಪ್ರಕರಣದ ಹಿಂದೆ ಸರ್ಕಾರವೇ ಭೂ ಕಬಳಿಕೆಗೆ ಮಾಡಲು ನೆರವು ನೀಡಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.
ಅಲ್ಲದೇ ಎಂ ಆರ್ ಸೀತಾರಾಮ್, ಎಂ ಆರ್ ಜಯರಾಮ್ ಮತ್ತು ಇವರ ಕುಟುಂಬದವರ ಹೆಸರಿನಲ್ಲಿ ಸರ್ಕಾರಿ ಭೂ ಕಬಳಿಕೆ ಆಗಿದೆ. ಇದನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒಂದು ವರ್ಷದ ಹಿಂದೆಯೇ ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಜೋಡಿ ಗ್ರಾಮದ ಬೋವಿ ಜನಾಂಗಕ್ಕೆ ಸೇರಿದ ಎ ಕೃಷ್ಣಪ್ಪ ಎಂಬುವರು ರಾಷ್ಟ್ರಪತಿ,

ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರು, ಕಂದಾಯ ಮತ್ತು ಕಾನೂನು ಸಚಿವರು, ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತ,

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದೇವನಹಳ್ಳಿ ತಹಶೀಲ್ದಾರ್, ದೇವನಹಳ್ಳಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರನ್ನು ಸಲ್ಲಿಸಿದ್ದರು.
ಗ್ರಾಮ ಠಾಣ ಜಮೀನು ಅದಲು ಬದಲು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದಿಸಿದೆ. ಮತ್ತು ಸಂಪುಟವು ಅನುಮೋದನೆ ನೀಡಿದ ನಂತರ ಅಷ್ಟೇ ಕ್ಷಿಪ್ರಗತಿಯಲ್ಲಿ ಕಂದಾಯ ಇಲಾಖೆಯೂ ಸಹ ಆದೇಶ ಹೊರಡಿಸಿತ್ತು. ಈ ಆದೇಶದ ಬೆನ್ನಲ್ಲೇ ಎ ಕೃಷ್ಣಪ್ಪ ಎಂಬುವರು ಸಲ್ಲಿಸಿದ್ದ ದೂರು ಮತ್ತು ದೂರಿನಲ್ಲಿರುವ ಅಂಶಗಳು ಮುನ್ನೆಲೆಗೆ ಬಂದಿವೆ.
ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ
ಆದರೆ ಕಂದಾಯ ಇಲಾಖೆಯು ಅದಲು ಬದಲು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸುವ ಸಂದರ್ಭದಲ್ಲಿ ಈ ದೂರುಗಳು ಸಲ್ಲಿಕೆಯಾಗಿರುವುದನ್ನು ಮರೆಮಾಚಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೇ ಇಂತಹ ಭೂಮಿ ಅವಶ್ಯಕತೆ ಇರುವ ಬಗ್ಗೆ ಗ್ರಾಮ ಪಂಚಾಯ್ತಿ ಆಗಲೀ ಅಥವಾ ಸಾರ್ವಜನಿಕರೇ ಆಗಲಿ ಅವಶ್ಯಕತೆಯನ್ನು ವ್ಯಕ್ತಪಡಿಸಿಲ್ಲ ಎಂದ ಕಂದಾಯ ಇಲಾಖೆಯು ಸಚಿವ ಸಂಪುಟವನ್ನೇ ದಿಕ್ಕು ತಪ್ಪಿಸಿರುವುದು ಕಂಡು ಬಂದಿದೆ.
ಕೃಷ್ಣಪ್ಪ ಎಂಬುವರು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೃಷ್ಣಪ್ಪ ಎಂಬುವರ ದೂರಿನಲ್ಲೇನಿದೆ?
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 37ರ ಒಟ್ಟು 835 ಎಕರೆ 26 ಗುಂಟೆ ಸರ್ಕಾರಿ ಗೋಮಾಳವಿದೆ. ಈ ಪೈಕಿ 750 ಎಕರೆ 04 ಗುಂಟೆ ಜಮೀನು ಇದಕ್ಕೆ ಒಳಗೊಂಡಿರುವ ಪೂಟ್ ಖರಾಬು (ಅ) 85 ಎಕರೆ 22 ಗುಂಟೆ ಒಳಗೊಂಡಂತೆ ಸರ್ಕಾರಿ ಭೂಮಿ ಕಬಳಿಕೆಯಾಗುತ್ತಿದೆ. ಇದಕ್ಕೆ ಅಕ್ರಮವಾಗಿ ಭೂ ದಾಖಲೆ, ಸರ್ವೆ ದಾಖಲೆ ಸೃಷ್ಟಿಸಲಾಗಿದೆ ಎಂದು ಕೃಷ್ಣಪ್ಪ ಎಂಬುವರು ದೂರಿನಲ್ಲಿ ವಿವರಿಸಿದ್ದಾರೆ.

ಈ ಭೂಮಿಯಲ್ಲಿ ಬಂಡವಾಳಶಾಹಿ ಖಾಸಗಿ ಕಂಪನಿಗಳಿಗೆ ಹೊಸದಾಗಿ ಲೇಔಟ್ ಮಾಡಲಿದ್ದಾರೆ. ಈ ಸರ್ಕಾರಿ ಭೂಮಿ ಮಾರಾಟದಲ್ಲಿ ಎಂ ಅರ್ ಸೀತಾರಾಮ್, ಎಂ ಆರ್ ಜಯರಾಮ್ ಮತ್ತು ಇವರ ಕುಟುಂಬ ಸದಸ್ಯರ ಹೆಸರಿನಲ್ಲಿ ಸರ್ಕಾರಿ ಭೂಮಿ ಹಾಗೂ ಸರ್ಕಾರಿ ಫೂಟ್ ಖರಾಬು 85 ಎಕರೆ 22 ಗುಂಟೆ ಒಟ್ಟಾರೆ ಸರ್ವೆ ನಂಬರ್ 37ರ 835 ಎಕರೆ 26 ಗುಂಟೆ ವಿಸ್ತೀರ್ಣದ ಸರ್ಕಾರಿ ಗೋಮಾಳ ಭೂ ಕಬಳಿಕೆ ಕುರಿತು ಇವರ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು ಎಂದು ಕೋರಿರುವುದು ದೂರಿನಿಂದ ಗೊತ್ತಾಗಿದೆ.
ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮದ ಗ್ರಾಮಠಾಣ 6 ಎಕರೆ 08 ಗುಂಟೆ ಹಾಗೂ ಸರ್ಕಾರದ ಬಂಡೆ ಸರ್ವೆ ನಂಬರ್ 18ರ 10 ಎಕರೆ 14 ಗುಂಟೆ, ಸ್ಮಶಾನ ಸರ್ವೆ ನಂಬರ್ 26ರ 0-12 ಗುಂಟೆ, ಸರ್ಕಾರಿ ಕೆರೆ ಸರ್ವೆ ನಂಬರ್ 31ರಲ್ಲಿನ 20 ಎಕರೆ 08 ಗುಂಟೆ, 2 ದೇವಸ್ಥಾನಗಳು, ಮುಖ್ಯ ರಸ್ತೆ, ಖರಾಬು, ರಾಜು ಕಾಲುವೆ ಸರ್ವೇ ನಂಬರ್ 4ರ 0-13 ಗುಂಟೆ ಗುಂಡುತೋಪು ಒಳಗೊಂಡಂತೆ ಒಟ್ಟಾರೆ 1,000 ಎಕರೆ ಸರ್ಕಾರಿ ಭೂಮಿ ಕಬಳಿಕೆಯಾಗುತ್ತಿದೆ. ಇದನ್ನು ಸರ್ಕಾರವು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.
ಅಲ್ಲದೇ ಈ ಗ್ರಾಮಕ್ಕೆ ವಲಸೆ ನಂತರದ ಹಾಲಿ ವಸತಿಯಲ್ಲಿರುವ 50 ಕುಟುಂಬದ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಇಂತಹ ದೌರ್ಜನ್ಯ ಮಾಡದಂತೆ ಕಾನೂನು ರಕ್ಷಣೆ ಮತ್ತು ಪರಿಶಿಷ್ಟ ಜಾತಿ ಮತ್ತ ಪಂಗಡ ದೌರ್ಜನ್ಯ ವಿರೋಧಿ ಕಾನೂನಿನ ರಕ್ಷಣೆ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಲೇಔಟ್ ಮಾಡಿ ಭೂಮಿ ಮಾರಾಟವಾಗದಂತೆ ತಕ್ಷಣ ತಡೆಗಟ್ಟಬೇಕು ಎಂದು ದೂರಿನಲ್ಲಿ ಕೋರಿರುವುವುದು ಗೊತ್ತಾಗಿದೆ.
ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಗ್ರಾಮಠಾಣ 6 ಎಕರೆ 18 ಗುಂಟೆ ಒಳಗೊಂಡಂತೆ ಒಟ್ಟಾರೆ 42 ಸರ್ಕಾರಿ ಭೂಮಿಯನ್ನು 2011ರ ಫೆ.16ರಂದೇ ಸರ್ಕಾರದ ವಶಕ್ಕೆ ಪಡೆಯಲು ಕರ್ನಾಟಕ ಹೈಕೋರ್ಟ್ (ರಿಟ್ ಅರ್ಜಿ ಸಂಖ್ಯೆ 23332/2005) ಆದೇಶ ಮಾಡಿತ್ತು. ಆದರೂ ಅಕ್ರಮವಾಗಿ ಭೂ ಕಬಳಿಕೆ ಮಾಡಲಾಗಿದೆ ಎಂದು ಕೃಷ್ಣಪ್ಪ ಅವರು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

ಈ ದೂರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯಲ್ಲಿ ಕಡತ (RD-LGB/27/2026 COMPUTER NUMBER 2055347) ತೆರೆದಿದೆ. ಸದ್ಯ ಈ ಕಡತವು ಅಧಿಕಾರಿಗಳ ಮಟ್ಟದಲ್ಲಿ ಚಲನವಲನದಲ್ಲಿರುವುದು ಗೊತ್ತಾಗಿದೆ.

ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ ಇರುವ ಕಾರಣ ಅಮೂಲವ್ಯವಾದ ಸರ್ಕಾರಿ ಭೂಮಿ ಹಾಗೂ ಖಾಸಗಿ ಭೂಮಿ ನಡುವೆ ಭೂ ವಿನಿಮಯ ಮಾಡಲು ಆರ್ಥಿಕ ಇಲಾಖೆಯು ವ್ಯಕ್ತಪಡಿಸಿದ್ದ ಆಕ್ಷೇಪಣೆಯನ್ನು ಬದಿಗೊತ್ತಿರುವ ರಾಜ್ಯ ಸರ್ಕಾರವು, ವಿಧಾನಪರಿಷತ್ ಸದಸ್ಯ ಎಂ ಆರ್ ಸೀತಾರಾಂ ಅವರ ಕುಟುಂಬ ಸದಸ್ಯರ ಮನವಿ ಪುರಸ್ಕರಿಸಿ ಕೆಟ್ಟ ಪೂರ್ವ ನಿದರ್ಶನಕ್ಕೆ ಈಗಾಗಲೇ ನಾಂದಿ ಹಾಡಿದೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮಠಾಣ ಜಮೀನನ್ನು ಅದಲು ಬದಲು ಮಾಡಲು ಸಚಿವ ಸಂಪುಟವು ಅನುಮೋದಿಸಿದೆ. ಸಂಪುಟವು ಅನುಮೋದಿಸಿದ ಒಂದೆರಡು ದಿನಗಳಲ್ಲಿಯೇ ಕಂದಾಯ ಇಲಾಖೆಯು ಅಷ್ಟೇ ತ್ವರಿತಗತಿಯಲ್ಲಿ ಆದೇಶವನ್ನೂ ಹೊರಡಿಸಿದೆ.
ಅಲ್ಲದೇ ಬಾಗಮನೆ ಡೆವಲಪರ್ಸ್ ಪ್ರಕರಣದಲ್ಲಿ ಪ್ರಸ್ತಾವನೆಯನ್ನೇ ತಿರಸ್ಕರಿಸಿದ್ದ ಕಂದಾಯ ಇಲಾಖೆಯು, ವಿಧಾನ ಪರಿಷತ್ ಸದಸ್ಯ ಎಂ ಆರ್ ಸೀತಾರಾಂ ಅವರ ಪ್ರಕರಣದಲ್ಲಿ ಪುರಸ್ಕರಿಸಿದೆ. ಕಂದಾಯ ಇಲಾಖೆಯ ಈ ನಡೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ಎಂ ಆರ್ ಸೀತಾರಾಂ ಮತ್ತಿತರರ ಮನವಿಯಲ್ಲೇನಿತ್ತು?
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮಕ್ಕೆ ಸೇರಿದ 6 ಎಕರೆ 18 ಗುಂಟೆ ಗ್ರಾಮ ಠಾಣೆ ಜಮೀನನ್ನು ಇದೇ ಗ್ರಾಮದ ಸರ್ವೆ ನಂಬರ್ 37, 07, 8/2ರಲ್ಲಿನ ಒಟ್ಟು 8 ಎಕರೆ 36 ಗುಂಟೆ ಖಾಸಗಿ ಜಮೀನಿಗೆ ಅದಲು ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ ಆರ್ ಸೀತಾರಾಂ, ಎಂ ಆರ್ ಪಟ್ಟಾಭಿರಾಮ್ ಮತ್ತು ಎಂ ಆರ್ ಕೋದಂಡರಾಮ್ ಅವರು ಮನವಿ ಸಲ್ಲಿಸಿದ್ದರು. ಇದೇ ಮನವಿಯನ್ನು ಪುರಸ್ಕರಿಸಿದ್ದ ಕಂದಾಯ ಇಲಾಖೆಯು ಸಚಿವ ಸಂಪುಟದ ಪ್ರಸ್ತಾವನೆಯಲ್ಲಿಯೂ ಸೇರಿಸಿತ್ತು.

ಜನವಸತಿ ರಹಿತ
ಎಂ ಆರ್ ಸೀತಾರಾಂ ಮತ್ತು ಅವರ ಕುಟುಂಬ ಸದಸ್ಯರ ಮನವಿಯಲ್ಲಿ ಪ್ರಸ್ತಾಪಿತವಾಗಿದ್ದ ಜಮೀನುಗಳು ಪ್ರಸ್ತುತ ಜನವಸತಿ ರಹಿತವಾಗಿದ್ದವು. ಅಲ್ಲದೇ ಅರ್ಜಿದಾರರಿಗೆ ಸೇರಿದ ಮಧ್ಯದಲ್ಲಿ ಇದೆ. ಈ ಗ್ರಾಮದ ಜನರು ಖಾತೆದಾರರಿಗೆ ಸೇರಿದ ಪಟ್ಟಾ ಜಮೀನಿನ ಸರ್ವೇ ನಂಬರ್ 37ರಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಹಾಗೆಯೇ ಅರ್ಜಿದಾರರನ್ನು ಹೊರತುಪಡಿಸಿ ಬೇರೆ ಯಾರಿಗೂ ಈ ಗ್ರಾಮ ಠಾಣೆ ಜಮೀನಿಗೆ ಸಂಪರ್ಕ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ಗ್ರಾಮ ಠಾಣೆ ಜಮೀನನ್ನು ಮಂಜೂರು ಮಾಡಬೇಕು ಎಂದು ಅರ್ಜಿದಾರರಾದ ಎಂ ಆರ್ ಸೀತಾರಾಂ ಮತ್ತು ಅವರ ಕುಟುಂಬ ಸದಸ್ಯರು ಕೋರಿದ್ದರು.
ಜಿಲ್ಲಾಧಿಕಾರಿ ವರದಿಯಲ್ಲೇನಿದೆ?
ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮವು ಇನಾಂ ಗ್ರಾಮವಾಗಿತ್ತು. ಮೈಸೂರು ಇನಾಂ ಅಬಾಲಿಷನ್ ಆಕ್ಟರ್ 1954ರ ಅಧಿನಿಯಮದ ಪ್ರಕಾರ ಈ ಗ್ರಾಮದ ಎಲ್ಲಾ ಜಮೀನುಗಳು ಸರ್ಕಾರಕ್ಕೆ ವಿಹಿತವಾಗಿದ್ದವು. ಗ್ರಾಮ ಠಾಣಾ ಸಹ ಸರ್ಕಾರದಲ್ಲಿ ವಿಹಿತವಾಗಿದ್ದವು. ಇದು ಯಾರಿಗೂ ಮಂಜೂರಾಗಿಲ್ಲ. ಹೀಗಾಗಿ 6 ಎಕರೆ 18 ಗುಂಟೆ ವಿಸ್ತೀರ್ಣದ ಗ್ರಾಮಠಾಣಾ ಜಮೀನು ಪ್ರಸ್ತುತ ಸರ್ಕಾರಿ ಜಮೀನಾಗಿದೆ ಎಂದು ವರದಿ ಸಲ್ಲಿಸಿದ್ದರು.

ಈ ಗ್ರಾಮ ಠಾಣಾ ಜಮೀನಿನಲ್ಲಿ ಹಲವು ದಶಕಗಳಿಂದ ಜನವಸತಿ ಇಲ್ಲ. ಈ ಗ್ರಾಮದ ಜನರು ಅನೇಕ ವರ್ಷಗಳ ಹಿಂದೆ ಖಾತೆದಾರರಿಗೆ ಸೇರಿದ ಪಟ್ಟಾ ಜಮೀನಿನ ಸರ್ವೆ ನಂಬರ್ 37ರಲ್ಲಿನ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ರೀತಿಯ ಹಕ್ಕುಪೊತ್ರ ಅಥವಾ ಮಂಜೂರಾತಿ ನೀಡಿಲ್ಲ. ಗ್ರಾಮ ಪಂಚಾಯ್ತಿಯಿಂದ ಮೂಲಸೌಕರ್ಯಗಳನ್ನೂ ಒದಗಿಸಲಾಗಿದೆ. ಗ್ರಾಮಸ್ಥರು ಅರ್ಜಿದಾರರಿಗೆ ಸೇರಿದ ಪ್ರದೇಶದಲ್ಲಿಯೇ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮನೆಗಳಿರುವ 2 ಎಕರೆ 6 ಗುಂಟೆ ಪ್ರದೇಶವನ್ನು ಖರಾಬು ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ವರದಿಯಲ್ಲಿ ವಿವರಿಸಿದ್ದರು.
ಇನಾಂ ರದ್ಧತಿ ಅಧಿನಿಯಮದ ಪ್ರಕಾರ ಎಂ ಎಸ್ ರಾಮಯ್ಯ ಅವರಿಗೆ ಇನಾಂ ರದ್ದಿಯಾತಿ ವಿಶೇಷ ಜಿಲ್ಲಾಧಿಕಾರಿಗಳಿಂದ ಮಂಜೂರಾಗಿತ್ತು. ಮಂಜೂರಾತಿಯಂತೆ ಅವರ ಹೆಸರಿಗೆ ಖಾತೆಯೂ ಆಗಿತ್ತು. ನಂತರ ಈ ಜಮೀನುಗಳು ವ್ಯವಸಾಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಆಗಿತ್ತು. ಸರ್ವೆ ನಂಬರ್ 7ರಲ್ಲಿ ಎ ಖರಾಭು, 0-17 ಗುಂಟೆ ಸೇರಿ ಒಟ್ಟು 5 ಎಕರೆ 28 ಗುಂಟೆ ಇತ್ತು.
2005ರ ನವೆಂಬರ್ 18ರಂದು ಈ ಕುಟುಂಬದ ವ್ಯವಸ್ಥಾಪತ್ರದ ಪ್ರಕಾರ ಎಂ ಆರ್ ಪಟ್ಟಾಭಿರಾಮ್ ಅವರಿಗೆ 2 ಎಕರೆ 33 ಗುಂಟೆ, ಎಂ ಆರ್ ಕೋದಂಡರಾಮ್ ಅವರಿಗೆ 2 ಎಕರೆ 18 ಗುಂಟೆ ಬಂದಿತ್ತು. ಇದು ಎಂ ಆರ್ ಕೋದಂಡರಾಮ್ ಅವರ ಹೆಸರಿನಲ್ಲಿಯೇ ಇದೆ. ಸರ್ವೆ ನಂಬರ್ 8/2ರಲ್ಲಿ 1 ಎಕರೆ 38 ಗುಂಟೆ ಜಮೀನಿದೆ. ಇದರಲ್ಲಿ ಎಂ ಆರ್ ಕೋದಂಡರಾಮ್ ಅವರ ಹೆಸರಿನಲ್ಲಿ 1 ಎಕರೆ 6 ಗುಂಟೆ ಮತ್ತು ಎಂ ಆರ್ ಪಟ್ಟಾಭಿರಾಮ್ ಅವರ ಹೆಸರಿನಲ್ಲಿ 1 ಎಕರೆ 06 ಗುಂಟೆ ಇದೆ. ಅಲ್ಲದೇ ಎಂ ಆರ್ ಪಟ್ಟಾಭಿರಾಮ್ ಹೆಸರಿನಲ್ಲಿ 0-32 ಗುಂಟೆ ಇದೆ.

ಸರ್ವೆ ನಂಬರ್ 37ರಲ್ಲಿ ಒಟ್ಟು 12 ಎಕರೆ ಇದೆ. ಈ ಪೈಕಿ ಎಂ ಆರ್ ಸೀತಾರಾಮ್ ಅವರ ಹೆಸರಿನಲ್ಲಿ 8 ಎಕರೆ ಮತ್ತು ಎಂ ಆರ್ ಪಟ್ಟಾಭಿರಾಮ್ ಅವರ ಹೆಸರಿನಲ್ಲಿ 4 ಎಕರೆ ಇದೆ. ಸರ್ವೆ ನಂಬರ್ 37ರಲ್ಲಿ ಒಟ್ಟಾರೆ 460 ಎಕರೆ 26 ಗುಂಟೆ ಇದೆ. ಆದರೆ ಪೋಡಿ ದುರಸ್ತಿ ಆಗಿಲ್ಲ. ಹಾಗೂ ಆಕಾರ್ ಬಂದ್ ಕೂಡ ನಿಗದಿಯಾಗಿಲ್ಲ. ಈ ಜಮೀನಿನಲ್ಲಿ ಪ್ರಸ್ತುತ ಮನೆ ನಿರ್ಮಿಸಿರುವ 2 ಎಕರೆ 6 ಗುಂಟೆ ಜಮೀನು ಸೇರಿದಂತೆ ಒಟ್ಟಾರೆ 6 ಎಕರೆ 38 ಗುಂಟೆ ಹಾಗೂ ಸರ್ವೇ ನಂಬರ್ 7ರಲ್ಲಿ 1 ಎಕರೆ 7 ಗುಂಟೆ ಜಮೀನಿನ ಪೈಕಿ 0-05 ಗುಂಟೆ ಖರಾಬು, ಜಾತಾ ಉಳಿಕೆ ಹೆಸರಿನಲ್ಲಿ 1 ಎಕರೆ 02 ಗುಂಟೆ ಮತ್ತು ಸರ್ವೆ ನಂಬರ್ 8/2ರಲ್ಲಿನ 0-31 ಗುಂಟೆ ಜಮೀನಿನ ಪೈಕಿ 0-03 ಎಕರೆ ಖರಾಬು, ಜಾತಾ ಉಳಿಕೆ ಹೆಸರಿನಲ್ಲಿ 0-28 ಗುಂಟೆ ಸೇರಿ ಒಟ್ಟಾರೆ 8 ಎಕರೆ 36 ಗುಂಟೆ ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಪ್ರಮಾಣ ಪತ್ರವನ್ನು ಹಾಜರುಪಡಿಸಿದ್ದರು.
ಸರ್ವೆ ನಂಬರ್ 37ರಲ್ಲಿವೆ ಅನಧಿಕೃತ ಕಟ್ಟಡಗಳು
ದಿಶಾಂಕ್ ತಂತ್ರಾಂಶದ ಪ್ರಕಾರ ಸರ್ವೇ ನಂಬರ್ 37ರಲ್ಲಿ ರಚನೆಗಳೂ, ವಾಣಿಜ್ಯ ಸ್ವರೂಪವೇ ಅಥವಾ ವಸತಿ ಸ್ವರೂಪವೇ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಸ್ಥಳೀಯವಾಗಿ ಖುದ್ದು ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಸರ್ವೇ ನಂಬರ್ 37ರಲ್ಲಿ ಅನಧಿಕೃತ ಕಟ್ಟಡಗಳು ಇರುವುದು ಕಂಡುಬಂದಿತ್ತು.


ವಿವಾದಿತ ಜಮೀನಾಗಿದೆಯೇ?
ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರಾಶ್ರಿತರ ಕ್ಷೇಮಾಭಿವೃದ್ಧಿ ಸಂಘವು ಮನವಿ ಸಲ್ಲಿಸಿತ್ತು. ಸುಮಾರು 1,000 ಎಕರೆ ಸರ್ಕಾರಿ ಜಮೀನಿನ ಬಗ್ಗೆ ಮನವಿಯಲ್ಲಿ ವಿವರಿಸಿತ್ತು.

ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಹಳೆಯ ಗ್ರಾಮದಿಂದ ಒಕ್ಕಲೆಬ್ಬಿಸಲ್ಪಟ್ಟ ಗ್ರಾಮಠಾಣ ಭೂಮಿಯ ಭೂ ಸ್ವಾಧೀನವನ್ನು ಕೊಡಿಸಬೇಕು. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆಯಡಿ ಭೂ ಕಬಳಿಕೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗ್ರಾಮ ಠಾಣ ಭೂಮಿಯ ಸ್ವಾಧಿನಾನುಭವವನ್ನು ಇಲ್ಲಿನ ನಿರಾಶ್ರಿತರಿಗೆ ಕೊಡಬೇಕು. ಅಲ್ಲದೇ ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮದ 41 ಎಕರೆ 05 ಗುಂಟೆ , ಸರ್ವೆ ನಂಬರ್ 37 ಹಾಗೂ ಸರ್ಕಾರಿ ಗ್ರಾಮ ಠಾಣ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಗ್ರಾಮಸ್ಥರಿಗೆ ಯಥಾಸ್ಥಿತಿ ಸ್ವಾಧೀನಾನುಭವಕ್ಕೆ ಬಿಟ್ಟುಕೊಟ್ಟಿರುವ ಜಮೀನಿನ ತಂಟೆಗೆ ಯಾರೂ ಬರದಂತೆ ತಡೆಯಬೇಕು ಎಂದು ಮನವಿಯಲ್ಲಿ ಕೋರಿತ್ತು.
ಕಂದಾಯ ಇಲಾಖೆಯ ಸಮರ್ಥನೆಯಲ್ಲೇನಿದೆ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಮರ್ಥನೆ ನೀಡಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮಗಳ ನಿಯಮ 28 ಎ (vii)ರಲ್ಲಿ ಗ್ರಾಮ ನಿವೇಶನಗಳ ವಿಸ್ತರಣೆಗಾಗಿ ಖಾಸಗಿ ಭೂಮಿಯು ಅಗತ್ಯವಾಗಿದ್ದಲ್ಲಿ ಬಿಟ್ಟುಕೊಟ್ಟ ಭೂಮಿಗೆ ಬದಲಾಗಿ ಭೂಮಿಯ ಮಂಜೂರಾತಿ ಮಾಡಬಹುದು. ಅಧರೆ ಈ ಪ್ರಕರಣದಲ್ಲಿ ಈಗಾಗಲೇ ಗ್ರಾಮಠಾಣವು ಲಭ್ಯವಿದೆ. ಮತ್ತು ವಸತಿ ರಚನೆಗಳು ಈಗಾಗಲೇ ನಿರ್ಮಾಣವಾಗಿದೆ. ಹೀಗಾಗಿ ಈ ನಿಯಮವನ್ನು ಅನ್ವಯಿಸಲು ಸಾಧ್ಯವಿಲ್ಲ. ಅಲ್ಲದೇ ಇಂತಹ ಭೂಮಿ ಅವಶ್ಯಕತೆ ಇರುವ ಬಗ್ಗೆ ಗ್ರಾಮ ಪಂಚಾಯ್ತಿ ಆಗಲೀ ಅಥವಾ ಸಾರ್ವಜನಿಕರೇ ಆಗಲಿ ಅವಶ್ಯಕತೆಯನ್ನು ವ್ಯಕ್ತಪಡಿಸಿಲ್ಲ ಎಂದು ಕಂದಾಯ ಇಲಾಖೆಯು ಸಮರ್ಥಿಸಿಕೊಂಡಿತ್ತು.
ಸುಪ್ರೀಂ ಕೋರ್ಟ್ ತೀರ್ಪುಗಳೇನು?
ಪರೊಂಬೋಕ್, ಗೋಮಾಳ, ಖರಾಬ್ ಮತ್ತು ಜಲಮೂಲಗಳಂತಹ ಸಾರ್ವಜನಿಕ ಭೂಮಿಯನ್ನು ರಕ್ಷಿಸುವ ಸಂಬಂಧ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಒತ್ತಿ ಹೇಳಿದೆ. ಹಿಂಚ್‌ಲಾಲ್ ತಿವಾರಿ/ ಕಮಲಾದೇವಿ ಮತ್ತು ಇತರರು (2011), ಜಗಪಾಲ್ ಸಿಂಗ್ ಮತ್ತು ಇತರರು/ಪಂಜಾಬ್ ರಾಜ್ಯ (2011), ಜೋಗಿಂದರ್ ಮತ್ತು ಇತರರು/ ಹರಿಯಾಣ ರಾಜ್ಯ (ಎಸ್‌ಎಲ್‌ಪಿ ಸಿವಿಲ್ 1829/2021) ಪ್ರಕರಣದಲ್ಲಿ ತೀರ್ಪು ನೀಡಿದೆ. ಈ ತೀರ್ಪನ್ನು ಕಂದಾಯ ಇಲಾಖೆಯು ತನ್ನ ಸಮರ್ಥನೆಯಲ್ಲಿ ವಿವರಿಸಿತ್ತು.

ಕಾನೂನು ಇಲಾಖೆಯ ಅಭಿಪ್ರಾಯವೇನು?
ಎಂ ಆರ್ ಸೀತಾರಾಂ ಅವರ ಪ್ರಕರಣದ ಕುರಿತು ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯು ಅರ್ಜಿದಾರರ ಅರ್ಜಿಯನ್ನು ಪರಿಗಣಿಸಿ ಬದಲಿಯಾಗಿ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಅಕ್ಲೇನಹಳ್ಳಿ,-ಮಲ್ಲೇನಹಳ್ಳಿ ಗ್ರಾಮದ 6 ಎಕರೆ 18 ಗುಂಟೆ ಸರ್ಕಾರಕ್ಕೆ ಸೇರಿದ್ದ ಗ್ರಾಮ ಠಾಣೆ ಜಮೀನನ್ನು ಮಂಜೂರು ಮಾಡಲು ಪರಿಗಣಿಸಬಹುದು ಎಂದು ಅಭಿಪ್ರಾಯಿಸಿತ್ತು.

ಆದರೆ ಕರ್ನಾಟಕ ಮಂಜೂರಾತಿ ನಿಯಮಗಳ ನಿಯಮ 28 ಎ (vii) ಗ್ರಾಮ ನಿವೇಶನಗಳ ವಿಸ್ತರಣೆಗಾಗಿ ಖಾಸಗಿ ಭೂಮಿಯು ಅವಶ್ಯಕತೆವಾಗಿದ್ದಲ್ಲಿ ಬಿಟ್ಟುಕೊಟ್ಟ ಭೂಮಿಗೆ ಬದಲಾಗಿ ಭೂಮಿಯ ಮಂಜೂರಾತಿ ಮಾಡಬಹುದು. ಆದರೆ ಈ ಪ್ರಕರಣದಲ್ಲಿ ಗ್ರಾಮ ಠಾಣವು ಲಭ್ಯವಿದೆ. ಮತ್ತು ವಸತಿ ರಚನೆಗಳು ಈಗಾಗಲೇ ನಿರ್ಮಾಣಗೊಂಡಿವೆ. ಹೀಗಾಗಿ ಉಪ ಬಂಧವನ್ನು ಅನ್ವಯಿಸಲು ಸಾಧ್ಯವಿಲ್ಲ. ಅಲ್ಲದೇ ಇಂತಹ ಭೂಮಿ ಅವಶ್ಯಕತೆ ಇರುವ ಬಗ್ಗೆ ಗ್ರಾಮ ಪಂಚಾಯ್ತಿ ಆಗಲೀ ಅಥವಾ ಸಾರ್ವಜನಿಕರೇ ಆಗಲಿ ಅವಶ್ಯಕತೆಯನ್ನು ವ್ಯಕ್ತಪಡಿಸಿಲ್ಲ. ಹೀಗಾಗಿ ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ಕಂದಾಯ ಇಲಾಖೆಯು ಸಹಮತಿ ವ್ಯಕ್ತಪಡಿಸಿರಲಿಲ್ಲ.
ಸಹಮತಿ ವ್ಯಕ್ತಪಡಿಸದ ಆರ್ಥಿಕ ಇಲಾಖೆ
ವಿಶೇಷವೆಂದರೇ ಕಾನೂನು ಮತ್ತು ಕಂದಾಯ ಇಲಾಖೆಯು ನೀಡಿದ್ದ ಅಭಿಪ್ರಾಯ ಮತ್ತು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಒಪ್ಪಿರಲಿಲ್ಲ ಮತ್ತು ಪರಿಗಣಿಸಿರಲಿಲ್ಲ.

ಕೆಟ್ಟ ಪೂರ್ವ ನಿದರ್ಶನವಾಗಲಿದೆ ಎಂದಿದ್ದ ಆರ್ಥಿಕ ಇಲಾಖೆ
ಕಂದಾಯ ಇಲಾಖೆಯು ಪ್ರಸ್ತಾಪಿಸಿರುವ ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿದಲ್ಲದಿರುವ, ಕಲ್ಪಿಸದೇ ಇರುವ ಕಾರಣ ಅಮೂಲ್ಯವಾದ ಸರ್ಕಾರಿ ಭೂಮಿ ಹಾಗೂ ಖಾಸಗಿ ಭೂಮಿ ನಡುವಿನ ಭೂ ವಿನಿಮಯ ಮಾಡಿದಲ್ಲಿ ಈ ತರಹದ ಸಮಾನಾಂತರ ಪ್ರಕರಣಗಳಿಗೆ ಕೆಟ್ಟ ಪೂರ್ವ ನಿದರ್ಶನವಾಗಲಿದೆ. ಅಧ್ದರಿಂದ ಆಡಳಿತ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ಇಲ್ಲ ಎಂದು 2026ರ ಜನವರಿ 21ರಂದೇ ತನ್ನ ಅಭಿಪ್ರಾಯ ತಿಳಿಸಿತ್ತು.

ಆದರೂ ಕಂದಾಯ ಇಲಾಖೆಯು ಪಟ್ಟು ಬಿಡದೇ ಎರಡನೇ ಬಾರಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಅರ್ಜಿದಾರರ ಅರ್ಜಿಯನ್ನು ಪರಿಗಣಿಸಿ ಬದಲಿಯಾಗಿ ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮದ 6 ಎಕರೆ 18 ಗುಂಟೆ ಸರ್ಕಾರಕ್ಕೆ ಸೇರಿದ್ದ ಜಮೀನನ್ನು ಮಂಜೂರು ಮಾಡುವ ಪ್ರಸ್ತಾವನೆಗೆ ಸಹಮತಿ ಇಲ್ಲ ಎಂದು 2026ರ ಜನವರಿ 21ರಂದೇ ನೀಡಿದ್ದ ಹಿಂಬರಹವನ್ನೇ ಪುನರುಚ್ಛರಿಸಿತ್ತು.
ಸಿಎಂ ನಿರ್ದೇಶನ ಪಾಲಿಸಿದ ಕಂದಾಯ ಇಲಾಖೆ
ಈ ಪ್ರಕರಣದಲ್ಲಿ ಕಾನೂನು ತೊಡಕುಗಳಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಮುಂದೆ ಮಂಡಿಸಲು ಕಂದಾಯ ಇಲಾಖೆಗೆ ನಿರ್ದೇಶನ ನೀಡಿದ್ದರು. ಅದರಂತೆ ಕಂದಾಯ ಇಲಾಖೆಯು ಕಡತ ಮಂಡಿಸಿತ್ತು.

ಸಂಪುಟಕ್ಕೆ ಮೂರು ಆಯ್ಕೆ ತೋರಿಸಿದ್ದ ಇಲಾಖೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮೂರು ಆಯ್ಕೆಗಳನ್ನು ನೀಡಿತ್ತು.

ಹಿಂಚ್‌ಲಾಲ್ ತಿವಾರಿ, ಜಗಪಾಲ್ ಸಿಂಗ್, ಜೋಗಿಂದರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಪೊರಂಬೋಕು, ಗೋಮಾಳ, ಖರಾಬು, ಜಲಮೂಲ ಜಮೀನುಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಸಂರಕ್ಷಿಸಬೇಕು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನವಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಬಹುದು ಎಂದು ಮೊದಲ ಆಯ್ಕೆಯನ್ನು ಕಂದಾಯ ಇಲಾಖೆಯು ತೋರಿಸಿತ್ತು.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಅಡಿ ಇರುವ ಅಧಿಕಾರವನ್ನು ಚಲಾಯಿಸುವುದು ಮತ್ತು 1969ರ ನಿಯಮ 22 (ಎ) (2)ನ್ನು ಸಡಿಲಿಸಬಹುದು ಎಂದು ಮತ್ತೊಂದು ಆಯ್ಕೆಯನ್ನು ನೀಡಿತ್ತು. ಎಂ ಆರ್ ಸೀತಾರಾಂ, ಎಂ ಆರ್ ಪಟ್ಟಾಭಿರಾಮ್, ಎಂ ಆರ್ ಕೋದಂಡರಾಮ್ ಅವರು ಸರ್ಕಾರಕ್ಕೆ 8 ಎಕರೆ 36 ಗುಂಟೆ ಜಮೀನನ್ನು ಬಿಟ್ಟುಕೊಡಲು ಒಪ್ಪಿದ್ದಾರೆ.
ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ
ಈ 8 ಎಕರೆ 36 ಗುಂಟೆ ಪೈಕಿ ಖರಾಬ್ ಜಮೀನನ್ನು ಹೊರತುಪಡಿಸಿ ನೋಂದಾಯಿತ ಪರಿತ್ಯಾಜನಾ ಪ್ರಮಾಣ ಪತ್ರ ನೀಡುವುದು ಮತ್ತು ಸರ್ವೇ ಪೋಡಿ ಕಾರ್ಯಗತಗೊಳಿಸಬೇಕು. ಮತ್ತು ಶಾಸನಬದ್ಧ ನಿಬಂಧನೆಗಳ ಪಾಲನೆಯ ಷರತ್ತುಗಳಿಗೆ ಒಳಪಟ್ಟು ಅದಲು ಬದಲು ಮಾಡಬಹುದು ಎಂದು 2ನೇ ಆಯ್ಕೆಯ ಕುರಿತು ವಿವರಿಸಿತ್ತು.

ಮೂರನೇ ಆಯ್ಕೆಯ ಪ್ರಕಾರ ಅರ್ಜಿದಾರರು ಬಿಟ್ಟುಕೊಡುವ ಜಮೀನಿನಲ್ಲಿರುವ ಉಳಿದ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿ ಸಂರಕ್ಷಿಸಲು ಸರ್ವೇ ಮತ್ತು ಮ್ಯುಟೇಷನ್ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು. ನಂತರ ಅಸ್ತಿತ್ವದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿಯ ಅಕ್ಲೇನಹಳ್ಳಿ, ಮಲ್ಲೇನಹಳ್ಳಿ ಗ್ರಾಮದ 6 ಎಕರೆ 18 ಗುಂಟೆ ವಿಸ್ತೀರ್ಣದ ಸರ್ಕಾರಿ ಗ್ರಾಮ ಠಾಣೆ ಭೂಮಿಗೆ ಹೊಸ ಸರ್ವೇ ಸಂಖ್ಯೆ ನಿಗದಿಪಡಿಸಬಹುದು ಎಂದು ವಿವರಿಸಿತ್ತು.

ಈ ಆಯ್ಕೆಗಳ ಪೈಕಿ ಮೊದಲನೇ ಆಯ್ಕೆಯನ್ನು ಕೈಬಿಟ್ಟಿರುವ ಸಚಿವ ಸಂಪುಟವು ಎರಡು ಮತ್ತು ಮೂರನೇ ಅವಕಾಶವನ್ನು ಆಯ್ಕೆ ಮಾಡಿಕೊಂಡಿದೆ.


ಈ ಸಂಬಂಧ 2026ರ ಮಾರ್ಚ್ 9ರಂದು ಅದಲುಬದಲು ಮಾಡಲು ಆದೇಶವನ್ನು ಹೊರಡಿಸಿದೆ.







