ಕಾಂಗ್ರೆಸ್‌ ಭವನ ಟ್ರಸ್ಟ್‌ನಿಂದ ಮೊಬೈಲ್‌ ರಿಪೇರಿ ತರಬೇತಿ; ಸಿಎ ನಿವೇಶನಗಳಿಗಾಗಿ ಹೊಸ ವೇ‍ಷ ತೊಟ್ಟ ಕಾಂಗ್ರೆಸ್

ಬೆಂಗಳೂರು; ಮೊಬೈಲ್‌ ರಿಪೇರಿ  ತರಬೇತಿ ಸೇರಿದಂತೆ ಇನ್ನಿತರೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶಗಳಿಗೆ  ಸಿ ಎ ನಿವೇಶನ ಮಂಜೂರು ಮಾಡಬೇಕು ಎಂದು ಕಾಂಗ್ರೆಸ್‌ ಭವನ ಟ್ರಸ್ಟ್‌,  ಹಲವು ಮುನಿಸಿಪಾಲ್ಟಿಗಳಿಗೆ ಅರ್ಜಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯದಾದ್ಯಂತ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಮತ್ತು ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಮತ್ತು ಕಾನೂನು ಇಲಾಖೆಯ ಅಸಮ್ಮತಿ ನಡುವೆಯೂ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ  ಸಿ ಎ ನಿವೇಶನಗಳನ್ನು ಸರ್ಕಾರವು ಈಗಾಗಲೇ  ಮಂಜೂರು ಮಾಡಿದೆ. ಮಂಜೂರಾಗಿರುವ ಸಿ ಎ ನಿವೇಶನಗಳನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ಭವನ ಟ್ರಸ್ಟ್‌, ತನ್ನ ಪ್ರಸ್ತಾವದಲ್ಲಿ ಸ್ಪಷ್ಟವಾಗಿ  ವಿವರಿಸಿರಲಿಲ್ಲ.

 

ಆದರೆ ದೇವನಹಳ್ಳಿ, ಹಳಿಯಾಳ, ಹೊಳಲ್ಕೆರೆ, ಚಿಂಚೋಳಿ ಪುರಸಭೆಗಳಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ನಿವೇಶನವನ್ನು ಯಾವ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಹೇಳಿದೆ. ಮೊಬೈಲ್‌ ತರಬೇತಿ ಸೇರಿದಂತೆ ಇನ್ನಿತರೆ ಕೌಶಲ್ಯ ಅಭಿವೃದ್ಧಿ ತರಬೇತಿ ನಡೆಸಲು ಸಿ ಎ ನಿವೇಶನ ಮಂಜೂರು ಮಾಡಬೇಕು ಎಂದು ಕೋರಿದೆ.

 

ಧರ್ಮಸ್ಥಳದ ರುಡ್‌ ಸೆಟ್‌ ಸಂಸ್ಥೆಯು ಮೊಬೈಲ್ ರಿಪೇರಿ, ಕಂಪ್ಯೂಟರ್ ತರಬೇತಿಯಂತಹ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದೇ ಮಾದರಿಯಲ್ಲಿಯೇ ಕಾಂಗ್ರೆಸ್‌ ಭವನ ಟ್ರಸ್ಟ್‌ ಕೂಡ ಸಿ ಎ ನಿವೇಶನಗಳನ್ನು ಪಡೆಯಲು ತರಬೇತಿ ಕಾರ್ಯಕ್ರಮಗಳ ಪಟ್ಟಿಯನ್ನು ಒದಗಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಇದಕ್ಕೆ ಸಂಬಂಧಿಸಿದ ಪುರಸಭೆಗಳ ಸಾಮಾನ್ಯ ಸಭೆಗಳ ನಡವಳಿಗಳು ದಿ ಫೈಲ್‌ ಗೆ ಲಭ್ಯವಾಗಿವೆ.

 

ಕಾಂಗ್ರೆಸ್‌ ಭವನ ಟ್ರಸ್ಟ್‌ ಸಿ ಎ ನಿವೇಶನಕ್ಕಾಗಿ ದೇವನಹಳ್ಳಿ ಪುರಸಭೆಗೆ ಅರ್ಜಿ ಸಲ್ಲಿಸಿತ್ತು. ದೇವನಹಳ್ಳಿ ಪುರಸಭೆ ವ್ಯಾಪ್ತಿಯ ವಾರ್ಡ್‌ ನಂ 10ರಲ್ಲಿನ ಅಜ್ಮಲ್ ಬಡಾವಣೆಯಲ್ಲಿ 6841.97 ಚ ಮೀ ವಿಸ್ತೀರ್ಣದಲ್ಲಿ ಸಿ ಎ ನಿವೇಶನವನ್ನು ಮಂಜೂರು ಮಾಡಬೇಕು ಎಂದು ಕೋರಿರುವುದು ಗೊತ್ತಾಗಿದೆ.

 

ಮೊಬೈಲ್‌ ರಿಪೇರಿ  ತರಬೇತಿ ನೀಡಲಿದೆಯೇ ಟ್ರಸ್ಟ್‌?

 

6,841.97 ಚ ಮೀ ವಿಸ್ತೀರ್ಣದ ಸಿ ಎ ನಿವೇಶನದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಕಂಪ್ಯೂಟರ್ ಟ್ರೈನಿಂಗ್‌, ಟೈಲರಿಂಗ್‌ ಸೆಂಟರ್‍‌, ಮೊಬೈಲ್‌ ರಿಪೇರಿ ತರಬೇತಿ ನಡೆಸುವ ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್‌ ಭವನ ಟ್ರಸ್ಟ್‌ ಪ್ರಸ್ತಾವದಲ್ಲಿ ವಿವರಿಸಿದೆ.

 

ಈ ಕುರಿತು ದೇವನಹಳ್ಳಿ ಪುರಸಭೆಯು 2025ರ ಜುಲೈ 9ರಂದು ಸಾಮಾನ್ಯ ಸಭೆ ನಡೆಸಿತ್ತು. ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಸಿ ಎ ನಿವೇಶನ ಮಂಜೂರು ಮಾಡಲು ಗೈಡೆನ್ಸ್‌ ಆಫ್‌ ಆಫೀಸರ್‍ಸ್‌ (ಗ್ರಾಂಟ್‌ ಆಫ್‌ ಕಾಫೀಸ್ ಅಂಡ್‌ ಮಿಸಲೇನಿಯಸ್‌) ಕಾಯ್ದೆ 1966ರ ರೂಲ್‌ 39ರ ಅನ್ವಯ ಆಕ್ಷೇಪಣೆಗೆ ಆಹ್ವಾನಿಸಲು ತೀರ್ಮಾನಿಸಿತ್ತು.

 

ಆದರೆ ಈ ಸಂಬಂಧ ಸಾರ್ವಜನಿಕವಾಗಿ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ಸೆ. 10ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಸಿ ಎ ನಿವೇಶನವನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲು ಸಭೆಯು ಸರ್ವಾನುಮತದಿಂದ ತೀರ್ಮಾನ ಕೈಗೊಂಡಿತ್ತು.

 

 

 

ದೇವನಹಳ್ಳಿಯಲ್ಲಿ ಮಾರುಕಟ್ಟೆ ಮೌಲ್ಯವು 17,31, 01,841.00 ರು. ನಷ್ಟಿದೆ. ಆದರೆ ಟ್ರಸ್ಟ್‌ಗೆ ಯಾವ ದರದಲ್ಲಿ ಮಂಜೂರು ಮಾಡಬೇಕು ಎಂದು ಸರ್ಕಾರವು ಪರಿಶೀಲಿಸುತ್ತಿದೆ ಎಂದು ತಿಳಿದು ಬಂದಿದೆ.

 

ಅದೇ ರೀತಿ ಚಿಂಚೋಳಿಯಲ್ಲಿಯೂ ಸಹ ಸರ್ವೆ ನಂಬರ್‍‌ 143/2ರಲ್ಲಿ 1,086.50 ಚದರ ಅಡಿ ವಿಸ್ತೀರ್ಣದ ಸಿ ಎ ನಿವೇಶನವನ್ನು ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿದೆ.

 

 

ಇಲ್ಲಿಯೂ ಸಹ ವಿಚಾರ ಸಂಕಿರಣ, ವರ್ಕ್‌ ಶಾಪ್‌, ಕ್ಯಾಂಪೇನಿಂಗ್‌, ಇತರೆ ಕೆಲಸಕ್ಕೆ ಸಿ ಎ ನಿವೇಶನವನ್ನು ಮಂಜೂರು ಮಾಡಬೇಕು ಎಂದು ಕೋರಿತ್ತು. ಈ ಕುರಿತು ಚಿಂಚೋಳಿ ಪುರಸಭೆಯ ಸಾಮಾನ್ಯ ಸಭೆಯು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ನಿವೇಶನ ನೀಡಲು ತೀರ್ಮಾನಿಸಿರುವುದು ಸಭೆಯ ನಡವಳಿಯಿಂದ ಗೊತ್ತಾಗಿದೆ.

 

 

ಉತ್ತರ ಕನ್ನಡದ ಹಳಿಯಾಳ ಪುರಸಭೆ ವ್ಯಾಪ್ತಿಯ ಗುತ್ತಿಗೇರಿ ಗ್ರಾಮದ ಸಿ ಟಿ ಎಸ್‌ ನಂ 3471 ಫ್ಲಾಟ್‌ ನಂ 39ರಲ್ಲಿನ 420.00 ಚ ಮೀಟರ್‍‌ ವಿಸ್ತೀರ್ಣದ ಸಿ ಎ ನಿವೇಶನವನ್ನು ಮಂಜೂರು ಮಾಡಲು ಟ್ರಸ್ಟ್‌ ಅರ್ಜಿ ಸಲ್ಲಿಸಿದೆ.

 

 

ಇಲ್ಲಿಯೂ ಸಹ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಕಂಪ್ಯೂಟರ್‍‌ ತರಬೇತಿ, ಮೊಬೈಲ್‌ ರಿಪೇರಿ ತರಬೇತಿ ನೀಡಲು 29 ವರ್ಷಗಳ ಗುತ್ತಿಗೆ ನೀಡಲು ಪ್ರಸ್ತಾವಿಸಿದೆ. ಕಾಂಗ್ರೆಸ್‌ ಭವನ ಟ್ರಸ್ಟ್‌ ಪ್ರಸ್ತಾವಿಸಿರುವ ಈ ಸಿ ಎ ನಿವೇಶನಕ್ಕೆ 17,32,500 ರು ಮಾರುಕಟ್ಟೆ ಮೌಲ್ಯವಿದೆ.

 

 

29 ವರ್ಷಗಳ ಗುತ್ತಿಗೆ ನೀಡುವ ಸಂಬಂಧ ಪುರಸಭೆಯು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು 2025ರ ಸೆ.3ರಂದು ನಿರ್ಣಯಿಸಿರುವುದು ತಿಳಿದು ಬಂದಿದೆ.

 

ಹೊಳಲ್ಕೆರೆ ಪಟ್ಟಣದ ಪೊಲೀಸ್‌ ಠಾಣೆ ಹಿಂಭಾಗದಲ್ಲಿರುವ 80/90 ವಿಸ್ತೀರ್ಣದ ಸಿ ಎ ನಿವೇಶನವನ್ನು ಮಂಜೂರಾತಿಗಾಗಿ ಕಾಂಗ್ರೆಸ್‌ ಭವನ ಟ್ರಸ್ಟ್‌, ಪುರಸಭೆಗೆ ಪ್ರಸ್ತಾವ ಸಲ್ಲಿಸಿತ್ತು. ಇಲ್ಲಿಯೂ ಸಹ ಮೊಬೈಲ್‌ ರಿಪೇರಿ ತರಬೇತಿ, ಕಂಪ್ಯೂಟರ್ ತರಬೇತಿ, ಉಪನ್ಯಾಸ, ಕಾರ್ಯಾಗಾರ, ಬಡ ಕಲ್ಯಾಣ ಕಾರ್ಯಕ್ರಮಗಳು, ಸಾರ್ವಜಕನಿಕರ ಅನುಕೂಲಕ್ಕಾಗಿ ಸಮ್ಮೇಳನಗಳನ್ನು ನಡೆಸಲಾಗುವುದು ಎಂದು ವಿವರಿಸಿತ್ತು.

 

 

ಆದರೆ ಈ ಜಾಗವು ತಾಲೂಕು ಕಚೇರಿಗೆ ಸೇರಿತ್ತು. ಈ ಕುರಿತು ಹೊಳಲ್ಕೆರೆ ಪುರಸಭೆಯು 2025ರ ಏಪ್ರಿಲ್‌ 19ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. ಕಾಂಗ್ರೆಸ್‌ ಭವನ ಟ್ರಸ್ಟ್‌ ತನ್ನ ಕೋರಿಕೆಯಲ್ಲಿ ಪ್ರಸ್ತಾವಿಸಿರುವ ಅಂಶಗಳು ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಹೀಗಾಗಿ ಈ ನಿವೇಶನವನ್ನು ಪರಿಶೀಲಿಸಿ ನಿಯಮಾನುಸಾರ ಟ್ರಸ್ಟ್‌ಗೆ ಮಂಜೂರು ಮಾಡಲು ಮತ್ತು ಇನ್ನುಳಿದ ಪಕ್ಷದ ಟ್ರಸ್ಟ್‌ನವರು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ನಿಯಮಾನುಸಾರ ಮಂಜೂರು ಮಾಡಬೇಕು ಎಂದು ಪುರಸಭೆಯ ಸಾಮಾನ್ಯ ಸಭೆಯು ಸರ್ವಾನುಮತದಿಂದ ತೀರ್ಮಾನಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಉದ್ದೇಶಿಸಿರುವ ಜಮೀನು, ಡೀಮ್ಡ್‌ ಅರಣ್ಯದ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಪ್ರಸ್ತಾವನೆಯು ಸಹ ಪರಿಶೀಲನೆಯಲ್ಲಿದೆ.

 

ಅರಣ್ಯ ಜಮೀನಿನ ಮೇಲೂ ಕಣ್ಣು ಹಾಕಿದ ಕಾಂಗ್ರೆಸ್‌ ಭವನ ಟ್ರಸ್ಟ್‌; ಕುಮ್ಕಿ ಹಕ್ಕಿನಿಂದ ವಿನಾಯಿತಿ ಸಿಗಲಿದೆಯೇ?

 

 

 

ಉಡುಪಿ ಜಿಲ್ಲೆ ಮತ್ತು ತಾಲೂಕಿನ ಅಂಜಾರು ಗ್ರಾಮದ ಸರ್ವೆ ನಂಬರ್‍‌ 32ರಲ್ಲಿ ಒಟ್ಟಾರೆ 86 ಸೆಂಟ್ಸ್‌ ವಿಸ್ತೀರ್ಣದ ಗೋಮಾಳ  ಜಮೀನನ್ನೂ ಸಹ ಈಗಾಗಲೇ ಮಂಜೂರು ಮಾಡಿದೆ.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಸರ್ಕಾರಿ ಜಮೀನು; ಆರ್ಥಿಕ ಇಲಾಖೆಯಿಂದ ಪ್ರಸ್ತಾವ ತಿರಸ್ಕೃತವಾದರೂ ಮಂಜೂರು

 

ನಗರ ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿರುವ ನಾಗರಿಕ ಸೌಲಭ್ಯದ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿಲ್ಲ.  ಈ ಸಂಬಂಧ   ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ (ಸರ್ಕಾರದ ಅಧಿಸೂಚನೆ ದಿನಾಂಕ;  24/05/2017) ಅಧಿಸೂಚನೆ ಹೊರಡಿಸಿತ್ತು. ಆದರೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲೇ 2017ರ ಅಧಿಸೂಚನೆಯನ್ನೇ  ಉಲ್ಲಂಘಿಸಿತ್ತು.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ನಿವೇಶನ; ತನ್ನದೇ ಅಧಿಸೂಚನೆ ಉಲ್ಲಂಘಿಸಿದ ಕಾಂಗ್ರೆಸ್‌ ಸರ್ಕಾರ

 

ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿನ ಪುರಸಭೆಗಳ ವ್ಯಾಪ್ತಿಯಲ್ಲಿ 25 ನಿವೇಶನಗಳನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‍‌ ಅವರು ಸಚಿವ ರಹೀಂ ಖಾನ್‌ ಅವರಿಗೆ ನಿರ್ದೇಶನ ನೀಡಿದ್ದರು.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ 25 ನಿವೇಶನ; ಪೌರಾಡಳಿತ ಇಲಾಖೆ ಕುತ್ತಿಗೆ ಮೇಲೆ ಕುಳಿತ ಡಿ ಕೆ ಶಿವಕುಮಾರ್

 

ಕೊಪ್ಪಳ  ನಗರದಲ್ಲಿ ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ 1.31 ಕೋಟಿ ರು ಬೆಲೆಬಾಳುವ ಸಿ ಎ ನಿವೇಶನವನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಕೇವಲ 13.19 ಲಕ್ಷ ರುಪಾಯಿಗೆ ರಿಯಾಯಿತಿ ದರದಲ್ಲಿ ಮಂಜೂರು ಮಾಡಿತ್ತು.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಕೊಪ್ಪಳದಲ್ಲೂ ನಿವೇಶನ; 1.18 ಕೋಟಿ ನಷ್ಟ, ನಿಯಮ ಉಲ್ಲಂಘಿಸಿದ ಸರ್ಕಾರ

 

ರಾಜ್ಯ ಕಾಂಗ್ರೆಸ್‌ ಸರ್ಕಾರವು ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ವಶ ಅಥವಾ ಸ್ವಾಧೀನದಲ್ಲಿರುವ ಸರ್ಕಾರಿ ಜಾಗಗಳನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡುತ್ತಿರುವ ಪ್ರಕರಣದಲ್ಲಿ  ಹಿತಾಸಕ್ತಿ ಸಂಘರ್ಷ ಎದುರಾಗಿತ್ತು.

 

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

 

ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಬಹು ಕೋಟಿ ಬೆಲೆಬಾಳುವ ಒಟ್ಟು ಜಮೀನಿನ ಪೈಕಿ 2 ಎಕರೆ ಜಾಗವನ್ನು ಸಾರ್ವಜನಿಕ ಹರಾಜು ನಡೆಸದೇ ನೇರವಾಗಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಜಾಗವು ವ್ಯಾಜ್ಯದಿಂದ ಕೂಡಿದೆಯಲ್ಲದೇ  ನ್ಯಾಯಾಲಯದಲ್ಲಿ ಅಸಲು ದಾವೆ ಅರ್ಜಿಯ ವಿಚಾರಣೆಯು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೂ ಸಹ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ 2 ಎಕರೆ ಜಮೀನು ಮಂಜೂರು ಮಾಡಲು  ಸಚಿವ ಸಂಪುಟವು  ತೀರ್ಮಾನ ತೆಗೆದುಕೊಂಡಿತ್ತು.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಚಿಲ್ಲರೆ ದರದಲ್ಲಿ 2 ಎಕರೆ ಜಮೀನು; ಹರಾಜು ನಡೆಸದೇ ಮಂಜೂರು, ನಿಯಮ ಉಲ್ಲಂಘನೆ

 

ಹೀಗೆ ಬಹುಕೋಟಿಯಷ್ಟು  ಬೆಲೆ ಬಾಳುವ ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಕೇವಲ ಶೇ.5ರಷ್ಟು ಅಂದರೇ 90 ಲಕ್ಷ ರು ದರ ವಿಧಿಸಿ ಈಗ ಕಾಂಗ್ರೆಸ್‌ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಸಚಿವ ಸಂಪುಟವು ಕೈಗೊಂಡಿರುವ  ತೀರ್ಮಾನವು  (ಸಂಖ್ಯೆ ಸಿ; 396/2025) ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟಕ್ಕೆ ಕಾರಣವಾಗಿತ್ತು.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ನಿವೇಶನ; ಆರ್‍‌ಡಿಪಿಆರ್‍‌ನಿಂದ ಪ್ರಸ್ತಾವ ತಿರಸ್ಕೃತ, ಸರ್ಕಾರಕ್ಕೆ ಮುಖಭಂಗ?

 

ಬೆಳಗಾವಿಯಲ್ಲಿನ  ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷಗಳಾದ ಹಿನ್ನೆಲೆಯಲ್ಲಿ  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷವು (ಕೆಪಿಸಿಸಿ) ರಾಜ್ಯಾದ್ಯಂತ 100 ಕಾಂಗ್ರೆಸ್‌ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ  ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಸಂಬಂಧ ಪಕ್ಷಕ್ಕೆ ಗುರಿ ನೀಡಿದ್ದರು.  ಹೀಗಾಗಿ ಎಲ್ಲಾ ಸಚಿವರೂ   ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳ ಅಧೀನದಲ್ಲಿರುವ ಮತ್ತು ಅವುಗಳ ಹೆಸರಿನಲ್ಲಿರುವ ಜಮೀನು, ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 

ಕಾಂಗ್ರೆಸ್‌ ಕಚೇರಿ ಕಟ್ಟಡ ನಿರ್ಮಾಣ; ಪಂಚಾಯ್ತಿಗಳ ಜಾಗದ ಮೇಲೂ ಕಣ್ಣು ಹಾಕಿದ ಕಾಂಗ್ರೆಸ್‌ ಭವನ ಟ್ರಸ್ಟ್‌

 

ಕಾಂಗ್ರೆಸ್‌ ಭವನ ಟ್ರಸ್ಟ್‌ ಯಾವ ಕಾಯ್ದೆ ಅಡಿ ನೋಂದಣಿಯಾಗಿದೆ ಎಂಬುದರ ಕುರಿತು ಇಲಾಖೆಯು ಪ್ರಶ್ನಿಸಿತ್ತು.

 

ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ಭವನ ಟ್ರಸ್ಟ್, ಯಾವ ಕಾಯ್ದೆಯಡಿ ನೋಂದಣಿಯಾಗಿದೆ?

 

ಹಿಂದುಳಿದ ಮತ್ತು ನಾಯಕ  ಜನಾಂಗದವರ ಸ್ಮಶಾನಕ್ಕೆ ಮೀಸಲಿಟ್ಟಿರುವುದು ಮತ್ತು  ಒಕ್ಕಲಿಗರ ಸಮುದಾಯ ಭವನ, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ಮೆಟ್ರಿಕ್‌ ನಂತರದ  ವಿದ್ಯಾರ್ಥಿ ನಿಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಸರ್ಕಾರಿ ಜಮೀನನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದನೆ ನೀಡಿತ್ತು.

 

ಹಿಂದುಳಿದ ಜಾತಿಗಳ ಜನರ ಸ್ಮಶಾನ, ನಿವೇಶನ ಉದ್ದೇಶದ ಸರ್ಕಾರಿ ಭೂಮಿ ಮೇಲೂ ಕಾಂಗ್ರೆಸ್‌ ಭವನ ಟ್ರಸ್ಟ್‌ನ ಕಣ್ಣು

 

ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದಲ್ಲಿ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಕೋರಿದ್ದರು. ಆದರೀಗ ನಗರಾಭಿವೃದ್ದಿ ಇಲಾಖೆಯು  ಸ್ಥಳವನ್ನು ಬದಲಾಯಿಸಿತ್ತು.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ‘ಪುಕ್ಕಟೆ’ಯಾಗಿ ಸಿ ಎ ನಿವೇಶನ; ಬೊಕ್ಕಸಕ್ಕೆ ನಷ್ಟವಾದರೂ ಸಚಿವ ಸಂಪುಟಕ್ಕೆ ಕಡತ ಮಂಡನೆ

 

ಚಿಕ್ಕಬಳ್ಳಾಪುರ ಜಿಲ್ಲೆಗೆ  ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿತ್ತು. ಈ ಕುರಿತು ‘ದಿ ಫೈಲ್‌’, ಮೇ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಕಾಂಗ್ರೆಸ್‌ ಭವನಗಳಿಗೆ ಸಿ ಎ ನಿವೇಶನ!; ಬಹುಕೋಟಿ ಬೆಲೆಯಿದ್ದರೂ ಉಚಿತ ಮಂಜೂರಿಗೆ ತರಾತುರಿ

 

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್‌ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.

 

ಕಾಂಗ್ರೆಸ್‌ ಪಕ್ಷಕ್ಕೆ ನಗರ ಪಾಲಿಕೆ ಆಸ್ತಿ ಮಂಜೂರು; ಬಿಜೆಪಿ ಹಾದಿ ತುಳಿದ ಕಾಂಗ್ರೆಸ್‌, ಕಡಿಮೆ ಬೆಲೆ ನಿಗದಿಯೇಕೆ?

 

ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿತ್ತು.

 

ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ

 

ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.

 

ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?

 

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

 

ಇದೀಗ ಕಾಂಗ್ರೆಸ್‌ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

Your generous support will help us remain independent and work without fear.

Latest News

Related Posts