Friday | May 1, 2026 |

ಕಾನ್ಫಿಡೆಂಟ್ ಗಾಲ್ಫ್‌ ಒಳಗಿವೆ ಬಿ ಖರಾಬು ಜಮೀನು; ಸಿ ಜೆ ರಾಯ್‌ ಪರ ನಿಲ್ಲಲಿದೆಯೇ ಸರ್ಕಾರ?

ಬೆಂಗಳೂರು; ಈಚೆಗಷ್ಟೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಿ ಜೆ ರಾಯ್‌ ಸಿಇಓ ಆಗಿದ್ದ ಕಾನ್ಫಿಡೆಂಟ್‌ ಚಾಂಪಿಯನ್ ರೀಫ್‌ ಗಾಲ್ಫ್‌ ಸಂಸ್ಥೆಯು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಿರ್ಮಾಣ ಮಾಡಿರುವ ಗಾಲ್ಫ್‌ನಲ್ಲಿ ಬಿ ಖರಾಬು ಜಮೀನುಗಳು ಲ್ಯಾಂಡ್‌ ಲಾಕ್‌ ಆಗಿವೆ. ಅಲ್ಲದೇ ಗೋಮಾಳ ಸ್ವರೂಪದಲ್ಲಿರುವ 1-23 ಎಕರೆ ಪ್ರದೇಶಕ್ಕೆ ಕಾನ್ಫಿಡೆಂಟ್‌ ಸಮೂಹವು ಕಾಂಪೌಂಡ್‌ ನಿರ್ಮಾಣ ಮಾಡಿಕೊಂಡಿದೆ. ಈ  ಜಮೀನುಗಳನ್ನು  ಮಂಜೂರು ಮಾಡಬೇಕು ಎಂದು ಸರ್ಕಾರದ ಮೆಟ್ಟಿಲು ಹತ್ತಿರುವುದು ಇದೀಗ ಬಹಿರಂಗವಾಗಿದೆ.

 

ಈ ಪ್ರಸ್ತಾವಕ್ಕೆ ಕಾನೂನು ಮತ್ತು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸದೇ ಇದ್ದರೂ ಸಹ ಅತ್ಯಂತ ವಿರಳವಾದ ಸಂದರ್ಭದಲ್ಲಿ ಇಂತಹ ಜಮೀನುಗಳನ್ನು ಸಾರ್ವಜನಿಕ ಉದ್ದೇಶದಿಂದ ವಿಹಿತಗೊಳಿಸಿ ಮಂಜೂರು ಮಾಡಲು ಅವಕಾಶವಿದೆ ಎಂದು ಕೋಲಾರ ಜಿಲ್ಲಾಧಿಕಾರಿಯು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

 

ಬಿ ಖರಾಬು ಜಮೀನುಗಳನ್ನು ಕಾನ್ಫಿಡೆಂಟ್‌ ಸಮೂಹದ ಗಾಲ್ಫ್‌ ಗೆ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶಗಳಿಲ್ಲ ಎಂಬ ಕಾರಣಕ್ಕೆ ಪ್ರಸ್ತಾವಕ್ಕೆ ಸಹಮತಿ ವ್ಯಕ್ತಪಡಿಸಿಲ್ಲ. ಆದರೆ ಇದುವರೆಗೂ ಈ ಪ್ರಸ್ತಾವವನ್ನು ಕಂದಾಯ ಇಲಾಖೆ ಮಟ್ಟದಲ್ಲಿ ತಿರಸ್ಕರಿಸಿಲ್ಲ. ಬದಲಿಗೆ ಪ್ರಸ್ತಾವದ ಕಡತವನ್ನು ಚಲನವಲನದಲ್ಲಿಟ್ಟಿದೆ.

 

ಈ ಸಂಬಂಧ ದಿ ಫೈಲ್‌ ಗೆ ನೂರಕ್ಕೂ ಹೆಚ್ಚು ಪುಟಗಳನ್ನೊಳಗೊಂಡ ಸಮಗ್ರ ಕಡತವು ಲಭ್ಯವಾಗಿದೆ.

 

 

ಕಾನ್ಫಿಟೆಂಡ್‌ ಗ್ರೂಪ್ ಮುಖ್ಯಸ್ಥ ಹಾಗೂ ಸಿಇಒ ಸಿ ಜೆ ರಾಯ್ ಇತ್ತೀಚೆಗಷ್ಟೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಐ ಟಿ ಅಧಿಕಾರಿಗಳ ದಾಳಿಗಳ ಒತ್ತಡಕ್ಕೆ ಸಿಲಕಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐ ಟಿ ಅಧಿಕಾರಿಗಳು ನಗರ ಬಿಟ್ಟು ತೆರಳಬಾರದು ಎಂದು ತನಿಖಾ ತಂಡ ಸೂಚಿಸಿದೆ. ಈ ಬೆಳವಣಿಗೆ ನಡುವೆಯೇ ಇದೇ ಕಾನ್ಫಿಟೆಂಡ್‌ ಗ್ರೂಪ್ ಗೆ ಸೇರಿರುವ ಕಾನ್ಫಿಡೆಂಟ್‌ ಚಾಂಪಿಯನ್ ರೀಫ್‌ ಗಾಲ್ಫ್‌ ಸಂಸ್ಥೆಯು ನಿರ್ಮಾಣ ಮಾಡಿರುವ ಗಾಲ್ಫ್‌ನಲ್ಲಿ ಬಿ ಖರಾಬು ಜಮೀನುಗಳು ಲ್ಯಾಂಡ್‌ ಲಾಕ್‌ ಆಗಿರುವ ದಾಖಲೆಗಳು ಮುನ್ನೆಲೆಗೆ ಬಂದಿವೆ.

 

 

ಕಾನ್ಫಿಡೆಂಟ್‌ ಚಾಂಪಿಯನ್ ರೀಫ್‌ ಗಾಲ್ಫ್‌ ಸಂಸ್ಥೆಯು ನಿರ್ಮಾಣ ಮಾಡಿರುವ ಗಾಲ್ಫ್‌ನಲ್ಲಿ ಲ್ಯಾಂಡ್‌ ಲಾಕ್‌ ಆಗಿರುವ ಬಿ ಖರಾಬು ಜಮೀನುಗಳನ್ನು ಮಂಜೂರು ಮಾಡುವ ಕಡತವು 2021ರಲ್ಲಿ ಅಂದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ತೆರೆಯಲಾಗಿತ್ತು. ಕಳೆದ 5 ವರ್ಷಗಳಿಂದಲೂ ಈ ಕಡತವು ಕಂದಾಯ ಇಲಾಖೆಯ ಚಲನವಲನದಲ್ಲಿರುವುದು ಲಭ್ಯವಿರುವ ದಾಖಲೆಗಳಿಂದ ಗೊತ್ತಾಗಿದೆ. ಸದ್ಯ ಕಡತವು 2025ರ ಸೆಪ್ಟಂಬರ್‍‌ 16ರಿಂದಲೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಲಾಗಿನ್‌ನಲ್ಲಿ ಇದೆ.

 

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಜಮೀನುಗಳು ಲ್ಯಾಂಡ್‌ ಲಾಕ್‌ ಆಗಿವೆ ಎಂದು ವರದಿ ನೀಡಿದ್ದ ಅಧಿಕಾರಿಗಳು, ಕಾಂಗ್ರೆಸ್‌ ಸರ್ಕಾರದ ಅಧಿಕಾರಾವಧಿಯಲ್ಲಿ ಕಾನ್ಫೆಡೆಂಟ್‌ ಸಮೂಹದ ಗಾಲ್ಫ್‌ನಲ್ಲಿನ ಜಮೀನುಗಳು ಲ್ಯಾಂಡ್‌ ಲಾಕ್‌ ವ್ಯಾಖ್ಯಾನದಡಿಯಲ್ಲಿ ಬರುವುದಿಲ್ಲ ಎಂದು ವರದಿ ನೀಡಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಎರಡೆರಡು ಬಾರಿ ಪ್ರಸ್ತಾವ ಸಲ್ಲಿಕೆಯಾಗಿರುವುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

 

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಕಾನ್ಪಿಡೆಂಟ್ ಗಾಲ್ಪ್‌ ಚಿತ್ರ

 

ಭವಿಷ್ಯದಲ್ಲಿ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಉದ್ದೇಶಕ್ಕೆ ಈ ಜಮೀನುಗಳು ಅಗತ್ಯವಿಲ್ಲ ಎಂದು ನಿರ್ಧರಿಸಿದ್ದ ಕೋಲಾರ ಜಿಲ್ಲಾಧಿಕಾರಿಯು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ ನಿಯಮ 22-ಎನ ಕ್ರಮ ಸಂಖ್ಯೆ 7ರಂತೆ ಲ್ಯಾಂಡ್‌ ಲಾಕ್‌ ಅಡಿಯಲ್ಲಿ ಮಾರುಕಟ್ಟೆ ದರದಂತೆ ಸರ್ಕಾರಕ್ಕೆ ಹಣ ಪಾವತಿಸಿಕೊಂಡು ಮಂಜೂರು ಮಾಡಲು ವರದಿ ನೀಡಿದ್ದರು.

 

 

ಈ ಪ್ರಕರಣದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ತಹಸೀಲ್ದಾರ್ ಪ್ರತ್ಯೇಕವಾಗಿ ವರದಿ ನೀಡಿದ್ದರು. ಸರ್ವೆ ಮತ್ತು ಭೂ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸದೆಯೇ ಮತ್ತು ಯಾವುದೇ ಭೌತಿಕ ಪರಿವೀಕ್ಷಣೆ ಮಾಡಿರಲಿಲ್ಲ. ಕೋಲಾರ ಜಿಲ್ಲಾಧಿಕಾರಿಯೂ ಸಹ ಇವುಗಳನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ. ತಹಶೀಲ್ದಾರ್ ಕೊಟ್ಟಿದ್ದ ವರದಿಯನ್ನೇ ಯಥಾವತ್ತಾಗಿ ಸರ್ಕಾರಕ್ಕೆ ಸಲ್ಲಿಸಿದ್ದರು.

 

 

ಹಾಗೆಯೇ 2018ರಲ್ಲಿ ಕಂದಾಯ ಇಲಾಖೆಯು ಹೊರಡಿಸಿದ್ದ ಸುತ್ತೋಲೆ (ಕಂಇ 46 ಎಲ್‌ಜಿಪಿ 2017) ದ ಪ್ರಕಾರ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮವನ್ನು ಪಾಲಿಸಿರಲಿಲ್ಲ. ಸರ್ಕಾರಿ ಕೆರೆ, ಖರಾಬು, ಕಟ್ಟೆ ಅಥವಾ ಯಾವುದೇ ಇತರೆ ಹೆಸರಿನಿಂದ ಕರೆಯುವ ಒಳನಾಡು ಜಲಮೂಲ ಮತ್ತು ಹೊರವಲಯ ಜಲಾನಯನ ಪ್ರದೇಶಗಳನ್ನು ರಾಜಕಾಲುವೆ ಮುಖ್ಯ ಒಳಹರಿವು, ಒಡ್ಡುಗಳನ್ನು ಅಡ್ಡ ಕಟ್ಟೆಗಳನ್ನು ಕಾಲುವೆಗಳನ್ನು ಒಳಗೊಳ್ಳುತ್ತದೆ.

 

 

ಕಾನ್ಫಿಡೆಂಟ್‌ ಸಮೂಹವು ನಿರ್ಮಾಣ ಮಾಡಿಕೊಂಡಿದ್ದ ಕಾಂಪೌಂಡ್‌ ಒಳಗೆ ಈ ಎಲ್ಲವೂ ಒಳಗೊಂಡಿತ್ತು. ಆದರೆ ಈ ಸಂಗತಿಗಳನ್ನು ಕೂಲಂಕುಷವಾಗಿ ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಪರಿಶೀಲಿಸಿರಲಿಲ್ಲ. ಬದಲಿಗೆ ಈ ಜಮೀನುಗಳನ್ನು ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 

ಜಿಲ್ಲಾಧಿಕಾರಿಯು ಸಲ್ಲಿಸಿದ್ದ ಮೊದಲ ವರದಿಯನ್ನು ಆರ್ಥಿಕ ಇಲಾಖೆಯು 2024ರಲ್ಲೇ ತಿರಸ್ಕರಿಸಿತ್ತು.

 

ತಿರಸ್ಕರಿಸಲು ಕಾರಣಗಳೇನು?

 

ಪ್ರಸ್ತಾಪಿತ ಜಮೀನನ್ನು ಕಾನ್ಫಿಡೆಂಟ್ ಚಾಂಪಿಯನ್ ರೀಫ್‌ ಗಾಲ್ಫ್‌ಗೆ ಮಂಜೂರು ಮಾಡುವ ಸಂಬಂಧ ಜಿಲ್ಲಾಧಿಕಾರಿಯು ನಿಯಮಾನುಸಾರ ಪರಿಶೀಲಿಸಿ ವರದಿ ನೀಡಿಲ್ಲ. ಇಲಾಖೆ ಹಂತದಲ್ಲೇ ಜಿಲ್ಲಾಧಿಕಾರಿಗೆ ಶೋಕಾಸ್ ನೋಟೀಸ್‌ ನೀಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಯು ನೀಡಿದ್ದ ಸಮಜಾಯಿಷಿಯೂ ಸಹ ಕಂದಾಯ ಇಲಾಖೆಯ ಕಡತದಲ್ಲಿ ಲಭ್ಯವಿರಲಿಲ್ಲ. ಅಲ್ಲದೇ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ (2) ಅನ್ವಯ ನಗರ ಪೌರ ಸರಹದ್ದಿನೊಳಗೆ ಇರುವ ಸರ್ಕಾರಿ ಭೂಮಿಯನ್ನು ಯಾವುದೇ ಖಾಸಗಿ ವ್ಯಕ್ತಿಗೆ, ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿಲ್ಲ. ಹೀಗಾಗಿ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿರಲಿಲ್ಲ.

 

 

ಕಾನೂನು ಇಲಾಖೆಯ ಅಭಿಪ್ರಾಯವೇನು?

 

ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 108 (ಐ) ಅನ್ವಯ ವಿಶೇಷ ಉದ್ದೇಶಗಳಿಗಾಗಿ ಮೀಸಲಿಡಲಾದ ಬಿ ಖರಾಬು ದೇವರ ಕಾಡು, ಉರ್ಡುವೆ, ಗುಂಡುತೋಪು, ಟ್ಯಾಂಕ್‌ ಬೆಡ್‌, ಫೂಟ್ ಖರಾಬು, ಹಳ್ಳ, ಸ್ಮಶಾನ ಭೂಮಿಗಳು ಮತ್ತು ಸರ್ಕಾರದ ಅಭಿಪ್ರಾಯದಲ್ಲಿಲ ಸಾರ್ವಜನಿಕ ಉದ್ದೇಶಕ್ಕೆ ಬೇಕಾಗಿದೆ. ಹೀಗಾಗಿ ಈ ಜಮೀನುಗಳನ್ನು ಕಾನ್ಫಿಡೆಂಟ್‌ ಚಾಂಪಿಯನ್ ರೀಫ್‌ ಗಾಲ್ಫ್‌ಗೆ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.

 

 

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕಸಬಾ ಹೋಬಳಿಯ ವಗ್ಗಯ್ಯ ದಿನ್ನೆ, ಕಸಬಾ ಹೋಬಳಿ, ಸಿದ್ದನಹಳ್ಳಿ ಹುದುಕುಳ, ಕೃಷ್ಣಾಪುರ ದಿನ್ನೆ ಗ್ರಾಮಗಳಲ್ಲಿ ಒಟ್ಟಾರೆ 250 ಎಕರೆ ಪ್ರದೇಶದಲ್ಲಿ ಕಾನ್ಫಿಡೆಂಟ್‌ ಚಾಂಪಿಯನ್ ರೀಫ್‌ ಗಾಲ್ಫ್‌ ನಿರ್ಮಾಣ ಮಾಡಿದೆ. ಈ ಪೈಕಿ ನಗರ ಗ್ರಾಮಾಂತರ ಯೋಜನೆ ಇಲಾಖೆಯಿಂದ 136 ಎಕರೆ 13 ಗುಂಟೆಗೆ ವಿನ್ಯಾಸಕ್ಕೆ ಅನುಮೋದನೆ ಪಡೆದಿತ್ತು.

 

 

ಈ ಸರ್ವೆ ನಂಬರ್‍‌ಗಳ ಪೈಕಿ ಸರ್ವೆ ನಂಬರ್‍‌ 09ರಲ್ಲಿ 0-29 ಗುಂಟೆ, ಸರ್ವೆ ನಂಬರ್‍‌ 21ರಲ್ಲಿ 0-19 ಗುಂಟೆ, ಸರ್ವೆ ನಂಬರ್ 23ರಲ್ಲಿ 1-24 ಎಕರೆ, ಸರ್ವೆ ನಂಬರ್‍‌ 42ರಲ್ಲಿ 2-37 ಎಕರೆ, ಹಾಗೂ ಸಿದ್ದನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 98ರಲ್ಲಿ 1-23 ಎಕರೆ ಸೇರಿ ಒಟ್ಟಾರೆ 8 ಎಕರೆ ಜಮೀನುಗಳು, ಬಿ ಖರಾಬು ಸ್ವರೂಪದಲ್ಲಿವೆ. ಸರ್ಕಾರಿ ಖರಾಬು ಗುಟ್ಟೆ, ಸರ್ಕಾರಿ ಖರಾಬು ಕಲ್ಲು ಬಂಡೆ, ಸರ್ಕಾರಿ ಖರಾಬು ಕಲ್ಲುಮರಟಿ, ಬಿ ಖರಾಬು ಜಮೀನುಗಳು ಎಂದು ವರ್ಗೀಕರಣ ಮಾಡಲಾಗಿತ್ತು.

 

ಬಿ ಖರಾಬು ಎಂದು ವರ್ಗೀಕರಣವಾಗಿರುವ ಜಮೀನುಗಳನ್ನು ಕಾನ್ಫಿಡೆಂಟ್‌ ಚಾಂಪಿಯನ್ ರೀಫ್‌ ಗಾಲ್ಫ್‌ ಗೆ ಮಂಜೂರು ಮಾಡಲು ಕೋಲಾರದ ಅಂದಿನ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕಳೆದ 5 ವರ್ಷಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದರು. ಗಾಲ್ಫ್‌ ಪ್ರದೇಶದ ಮಧ್ಯ ಭಾಗದಲ್ಲಿ ಲ್ಯಾಂಡ್ ಲಾಕ್‌ ಆಗಿರುವ ವಿವಿಧ ಪ್ರವರ್ಗಗಳ ಜಮೀನುಗಳ ಮಂಜೂರಾತಿಗೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಈಗಲೂ ಚರ್ಚೆಗಳು ನಡೆಯುತ್ತಲೇ ಇವೆ. ಇದುವರೆಗೂ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ.

 

 

‘ಈ ಜಮೀನುಗಳು ಕಾನ್ಫಿಡೆಂಟ್‌ ಚಾಂಪಿಯನ್ ರೀಫ್‌ ಸಂಸ್ಥೆ ಹೊರತುಪಡಿಸಿ ಬೇರಾವುದೇ ರೈತರಿಗೆ ಅಥವಾ ಸರ್ಕಾರದ ಯೋಜನೆಗಳಿಗೆ ಉಪಯುಕ್ತವಾಗಿರುವುದಿಲ್ಲ. ಈ ಜಮೀನುಗಳನ್ನು ಸಂಸ್ಥೆಗೆ ಮಂಜೂರು ಮಾಡಲು ಗ್ರಾಮಸ್ಥರ ತಂಟೆ ತಕರಾರು ಇರುವುದಿಲ್ಲ,’ ಎಂದು ಕಂದಾಯ ಇಲಾಖೆಯ ಶಾಖಾಧಿಕಾರಿ ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದ್ದರು.

 

ವಗ್ಗಯ್ಯದಿನ್ನೆ ಗ್ರಾಮದಲ್ಲಿ ಖುಷ್ಕಿ ಜಮೀನುಗಳ ಮಾರ್ಗಸೂಚಿ ಬೆಲೆ ಪ್ರಕಾರ ಎಕರೆಯೊಂದಕ್ಕೆ 2021ರಲ್ಲಿ 4,30,000 ರು, ಮಾರುಕಟ್ಟೆ ಬೆಲೆ ಪ್ರಕಾರ 8,09,000 ರು ಇತ್ತು. ಅದೇ ರೀತಿ ಸಿದ್ದನಹಳ್ಳಿಯಲ್ಲಿ ಖುಷ್ಕಿ ಜಮೀನುಗಳ ಮಾರ್ಗಸೂಚಿ ಬೆಲೆ ಎಕರೆಯೊಂದಕ್ಕೆ 3,57,000 ರು., ಮಾರುಕಟ್ಟೆ ಬೆಲೆ ಪ್ರಕಾರ 6,08,000 ರು.ಗಳಿತ್ತು.

 

 

 

ವಗ್ಗಯ್ಯದಿನ್ನೆ ಗ್ರಾಮದಲ್ಲಿ ಮಾರುಕಟ್ಟೆ ಬೆಲೆ ಪ್ರಕಾರ ಖುಷ್ಕಿ 1 ಎಕರೆಗೆ 12.00 ಲಕ್ಷ ದಿಂದ 13.00 ಲಕ್ಷದವರೆಗಿತ್ತು. ಸಿದ್ದನಹಳ್ಳಿ ಗ್ರಾಮದಲ್ಲಿ ಖುಷ್ಕಿ 1 ಎಕರೆಗೆ ಮಾರುಕಟ್ಟೆಯಲ್ಲಿ 9.00 ಲಕ್ಷ ರು.ನಿಂದ 10.00 ಲಕ್ಷ ರುವರೆಗಿತ್ತು.

 

 

2020ರ ಡಿಸೆಂಬರ್‍‌ 15ರಂದು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಲ್ಯಾಂಡ್‌ ಲಾಕ್‌ ಜಮೀನುಗಳ ಮಂಜೂರಾತಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 A (i) (I) (7)ರಲ್ಲಿ ಕಲ್ಪಿಸಿರುವ ಅವಕಾಶದಂತೆ ಕಾನ್ಫಿಡೆಂಟ್‌ ಚಾಂಪಿಯನ್ ರೀಫ್‌ ಸಂಸ್ಥೆಗೆ 8.09 ಎಕರೆ ವಿಸ್ತೀರ್ಣದ ಬಿ ಖರಾಬು ಜಮೀನುಗಳನ್ನು ಮಂಜೂರು ಮಾಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದರು.

 

 

ಈ ಅಭಿಪ್ರಾಯವನ್ನಾಧರಿಸಿ ಜಮೀನುಗಳನ್ನು ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸಲು ಆದೇಶ ಕೋರಿ ಕಡತ ಮಂಡಿಸಲಾಗಿತ್ತು. ಆದರೆ ಇದನ್ನು ಇಲಾಖೆಯ ಮತ್ತೊಬ್ಬ ಅಧಿಕಾರಿಯು ಈ ಪ್ರಸ್ತಾವವಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ಪ್ರಸ್ತಾಪಿತ ಜಮೀನುಗಳು ಭೂ ಬಂಧಿತ ಬಿ ಖರಾಬು ಜಮೀನುಗಳಾಗಿವೆ. ಅಲ್ಲದೇ ಈ ಜಮೀನು ಗ್ರಾಮೀಣ ವ್ಯಾಪ್ತಿಯಡಿ ಬರಲಿದೆ. ಹೀಗಾಗಿ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ನೀಡಿದ್ದರು.

 

ಈ ಕಡತವನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್ ಅಶೋಕ್ ಅವರ ಅನುಮೋದನೆಗೆ ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಹಿಂದಿನ ಕಂದಾಯ ಸಚಿವ ಆರ್ ಅಶೋಕ್ ಅವರು ಯಾವುದೇ ಆದೇಶ ಮಾಡಿರಲಿಲ್ಲ. ಹೀಗಾಗಿ ಕಡತವು ಹಿಂದಿರುಗಿತ್ತು

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ಈ ಕಡತಕ್ಕೆ ಮತ್ತೊಮ್ಮೆ ಚಾಲನೆ ದೊರೆತಿತ್ತು. ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಎನ್ ಜಯರಾಮ್‌ ಅವರ ಅಧ್ಯಕ್ಷತೆಯಲ್ಲಿ ಪುನಃ ಚರ್ಚೆಗೆ ಬಂದಿತ್ತು. ಇದೇ ಪ್ರಸ್ತಾವನೆಗೆ ಅನುಮೋದನೆ ಕೋರಿ 2023ರ ಮೇ 30ರಂದು ಕಡತವು ಹಾಲಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಸಲ್ಲಿಕೆಯಾಗಿತ್ತು. ಇದನ್ನು ಪರಿಶೀಲಿಸಬೇಕು ಎಂದು ಕೃಷ್ಣಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

 

ಗಾಲ್ಫ್‌ ಒಳಗೊಂಡಿರುವ ಸಿದ್ದನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್‍‌ 98ರಲ್ಲಿ 1.23 ಎಕರೆಯು ಬಿ ಖರಾಬು ಸ್ವರೂಪದಲ್ಲಿದೆ. 2018ರ ಮಾರ್ಚ್‌ 24ರಂದು ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಅನುಮೋದನೆ ಪ್ರಕಾರ 40-11 ಎಕರೆಯಲ್ಲಿ ಗಾಲ್ಫ್‌ ಪ್ರದೇಶಕ್ಕೆ ವಿನ್ಯಾಸ ಅನುಮೋದನೆ ಪಡೆದು ನಿರ್ಮಾಣ ಮಾಡಿತ್ತು.

 

ಈ ಗಾಲ್ಫ್‌ ಮಧ್ಯ ಭಾಗ ಅಥವಾ ವಿನ್ಯಾಸಕ್ಕೆ ಸಂಬಂಧಪಟ್ಟಂತೆ ನಗರ ಗ್ರಾಮಾಂತರ ಯೋಜನೆ ಇಲಾಖೆಯು 2020ರ ಫೆ.12ರಂದು 38 ಎಕರೆ 07 ಗುಂಟೆ ಪ್ರದೇಶಕ್ಕೆ ವಿನ್ಯಾಸ ಅನುಮೋದಿಸಿತ್ತು. ನಿರ್ದಿಷ್ಟವಾಗಿ ವಗ್ಗಯ್ಯದಿನ್ನೆ ಸರ್ವೆ ನಂಬರ್‍‌ 9ರಲ್ಲಿ 0-29 ಎಕರೆ ಖರಾಬು ಜಮೀನಿದೆ. ಕಾನ್ಫಿಟೆಂಡ್ ಸಮೂಹವು 214 ಎಕರೆ 31 ಗುಂಟೆ ಪ್ರದೇಶದಲ್ಲಿ ಗಾಲ್ಫ್‌ ನಿರ್ಮಾಣ ಮಾಡಿತ್ತು ಎಂದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

 

 

ಈ ಜಮೀನುಗಳನ್ನು ಮಂಜೂರು ಮಾಡುವ ಸಂಬಂಧ ಜಿಲ್ಲಾಧಿಕಾರಿಗಳಿಂದ ಹೊಸದಾಗಿ ಸ್ಕೆಚ್‌ ದಾಖಲೆಗಳೊಂದಿಗೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಬೇಕು 2023ರ ನವೆಂಬರ್‍‌ 23ರಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸೂಚಿಸಿದ್ದರು.

 

ವಗ್ಗಯ್ಯದಿನ್ನೆ ಗ್ರಾಮದ ಸರ್ವೆ ನಂಬರ್‍‌ 9ರಲ್ಲಿ 0-29 ಗುಂಟೆ ಮತ್ತು ಸರ್ವೆ ನಂಬರ್‍‌ 47ರಲ್ಲಿ 1-00 ಎಕರೆ ಪ್ರದೇಶವು ಭೂ ಬಂಧಿತ ಪ್ರದೇಶವಾಗಿದೆ. ಈ ಜಮೀನು ಕಾನ್ಫಿಟೆಂಡ್‌ ಗ್ರೂಪ್‌ನಿಂದ ನಿರ್ಮಾಣವಾಗಿರುವ ಕಾಂಪೌಂಡ್‌ ಒಳಗೆ ಬಂಧಿತವಾಗಿವೆ. ಈ ಜಮೀನಿಗೆ ಬದಲಾಗಿ ಪರ್ಯಾಯ ಜಮೀನನ್ನು ಸರ್ಕಾರಕ್ಕೆ ಪಡೆಯುವ ಷರತ್ತಿಗೊಳಪಡಿಸಿ ಜಮೀನುಗಳನ್ನು ಮಂಜೂರು ಮಾಡಬಹುದು ಎಂದು ಬಂಗಾರಪೇಟೆ ತಹಶೀಲ್ದಾರ್ ವಸ್ತು ಸ್ಥಿತಿ ವರದಿ ಸಲ್ಲಿಸಿದ್ದರು.ಈ ವರದಿಯನ್ನಾಧರಿಸಿ ಕೋಲಾರ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ಹೊಸದಾಗಿ ಪ್ರಸ್ತಾವ ಸಲ್ಲಿಸಿದ್ದರು.

 

ವಿಶೇಷವೆಂದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಜಮೀನುಗಳು ಲ್ಯಾಂಡ್‌ ಲಾಕ್‌ ಆಗಿವೆ ಎಂದು ವರದಿ ನೀಡಿದ್ದ ಅಧಿಕಾರಿಗಳು, ಕಾಂಗ್ರೆಸ್‌ ಸರ್ಕಾರದ ಅಧಿಕಾರಾವಧಿಯಲ್ಲಿ ಕಾನ್ಫೆಡೆಂಟ್‌ ಸಮೂಹದ ಗಾಲ್ಫ್‌ನಲ್ಲಿನ ಜಮೀನುಗಳು ಲ್ಯಾಂಡ್‌ ಲಾಕ್‌ ವ್ಯಾಖ್ಯಾನದಡಿಯಲ್ಲಿ ಬರುವುದಿಲ್ಲ ಎಂದು ವರದಿ ನೀಡಿದ್ದಾರೆ.

 

‘ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ವಗ್ಗಯ್ಯದಿನ್ನೆ ಗ್ರಾಮದ ಸರ್ವೆ ನಂಬರ್‍‌ 21ರಲ್ಲಿ 0-19 ಗುಂಟೆ, ಸರ್ವೇ ನಂಬರ್‍‌ 23ರಲ್ಲಿ 1-24 ಎಕರೆ ಜಮೀನು ಗಾಲ್ಫ್‌ ಕಾಂಪೌಂಡ್‌ನ ಹೊರಗಿದೆ. ಈ ಎರಡೂ ಸರ್ವೆ ನಂಬರ್‍‌ಗಳ ಜಮೀನನ್ನು ಕೈ ಬಿಟ್ಟು ಉಳಿದಿರುವ ಸರ್ವೇ ನಂಬರ್‍‌ಗಳಾದ ವಗ್ಗಯ್ಯದಿನ್ನೆ ಗ್ರಾಮದ ಸರ್ವೆ ನಂಬರ್‍‌ 9ರಲ್ಲಿ 0-29 ಗುಂಟೆ, ಸರ್ವೆ ನಂಬರ್‍‌ 42ರಲ್ಲಿ 2-37 ಎಕರೆ, ಸರ್ವೆ ನಂಬರ್ 47ರಲ್ಲಿ 1 ಎಕರೆ, ಸಿದ್ದನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 98ರಲ್ಲಿ 1-23 ಎಕರೆ ಸೇರಿ ಒಟ್ಟು 6-09 ಎಕರೆ ಬಿ ಖರಾಬು ಜಮೀನುಗಳು ಭೂ ಬಂಧಿತ ವ್ಯಾಖ್ಯಾನದಡಿಯಲ್ಲಿ ಬರುವುದಿಲ್ಲ,’ ಎಂದು ಕಂದಾಯ ಇಲಾಖೆಯು ತೀರ್ಮಾನಕ್ಕೆ ಬಂದಿತ್ತು.

 

 

ಅಲ್ಲದೇ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ (2) (14 (ಎ) ಅನ್ವಯ ಭೂ ಬಂಧಿತ ಸರ್ಕಾರಿ ಭೂಮಿ ಎಂದರೇ ಖಾಸಗಿ ವ್ಯಕ್ತಿ ಅಥವಾ ಸ್ವಾಯತ್ತ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳ ಮಾಲೀಕತ್ವದ ಭೂಮಿಯ ಗಡಿಯೊಳಗಿರುವ ರಸ್ತೆಯ ಮೂಲಕ ಅಥವಾ ಕಾಲುಹಾದಿಯ ಮೂಲಕ ಅಥವಾ ಬಂಡಿಹಾದಿಯ ಮೂಲಕ ಸಾರ್ವಜನಿಕ ಪ್ರದೇಶವಿಲ್ಲದ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಉಪಯೋಗವಿಲ್ಲದ ಸರ್ಕಾರಿ ಖರಾಬು ಭೂಮಿ ಎಂದು ಉಲ್ಲೇಖಿಸಲಾಗಿದೆ. ಇದನ್ನು ಮುಂದಿಟ್ಟುಕೊಂಡಿರುವ ಕಂದಾಯ ಇಲಾಖೆ ಅಧಿಕಾರಿಗಳು, ಮಂಜೂರು ಮಾಡಲು ಕಡತವನ್ನು ಸಿದ್ಧಪಡಿಸಿರುವುದು ತಿಳಿದು ಬಂದಿದೆ.

 

ಈ ಹಂತದಲ್ಲಿ ಕಂದಾಯ ಇಲಾಖೆಯು ಪುನಃ 5 ವಿಷಯಗಳ ಕುರಿತು ಮತ್ತೊಮ್ಮೆ ಸ್ಥಳ ತನಿಖೆ ಮಾಡಿ ವಾಸ್ತವಾಂಶಗಳ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿತ್ತು. ಸರ್ಕಾರದ ಸೂಚನೆಯಂತೆ ಕೋಲಾರ ಜಿಲ್ಲಾಧಿಕಾರಿಯು ವಾಸ್ತವಾಂಶಗಳನ್ನಾಧರಿಸಿ ಪರಿಷ್ಕೃತ ಪ್ರಸ್ತಾವ ಸಲ್ಲಿಸಿದ್ದರು.

 

 

ಜಿಲ್ಲಾಧಿಕಾರಿಯ ಎರಡನೇ ವರದಿಯಲ್ಲೇನಿದೆ?

 

ವಗ್ಗಯ್ಯದಿನ್ನೆ ವಿವಿಧ ಸರ್ವೆ ನಂಬರ್‍‌ಗಳಲ್ಲಿನ ಜಮೀನಿನ ವಸ್ತುಸ್ಥಿತಿ ಕುರಿತು ಜಿಲ್ಲಾಧಿಕಾರಿಯವರು ವಿಸ್ತೃತವಾಗಿ ವರದಿ ಸಲ್ಲಿಸಿದ್ದರು. ಸರ್ವೆ ನಂಬರ್‍‌ 4ರಲ್ಲಿ ಸರ್ಕಾರಿ ಕೆರೆ, ಸರ್ಕಾರಿ ಖರಾಬ್, ಸರ್ವೆ ನಂಬರ್‍‌ 9 ಸರ್ಕಾರಿ ಖರಾಬು ಗುಟ್ಟೆ, ಸರ್ವೆ ನಂಬರ್‍‌ 42ರಲ್ಲಿ ಸರ್ಕಾರಿ ಖರಾಬು ಗುಟ್ಟೆ, ಸರ್ವೆ ನಂಬರ್ 47ರಲ್ಲಿ ಸರ್ಕಾರಿ ಖರಾಬು ಕಲ್ಲು ಮರಟಿ, ಸಿದ್ದನಹಳ್ಳಿ ಸರ್ವೆ ನಂಬರ್ 98ರಲ್ಲಿ ಸರ್ಕಾರಿ ಗೋಮಾಳ ಇದೆ ಎಂದು ವಿವರಿಸಿದ್ದರು.

 

 

ಜಿಲ್ಲಾಧಿಕಾರಿ ನೀಡಿದ್ದ ವರದಿಯ ಪ್ರಕಾರ ಸರ್ವೆ ನಂಬರ್ 4ರಲ್ಲಿ ಸರ್ಕಾರಿ ಕೆರೆ ಈಗಲೂ ಅಸ್ತಿತ್ವದಲ್ಲಿದೆ. ಸರ್ವೆ ನಂಬರ್‍‌ 9ರಲ್ಲಿನ 0-29 ಗುಂಟೆ, ಸರ್ವೆ ನಂಬರ್‍‌ 42ಲ್ಲಿನ 2-37 ಎಕರೆ, ಸರ್ವೆ ನಂಬರ್ 47ರಲ್ಲಿ 1 ಎಕರೆ ವಿಸ್ತೀರ್ಣದ ಜಮೀನು ಕಾಂಪೌಂಡ್‌ ಒಳಗೆ ಭೂ ಬಂಧಿತವಾಗಿದೆ. ಸಿದ್ದನಹಳ್ಳಿ ಸರ್ವೆ ನಂಬರ್ 98ರಲ್ಲಿ 1-23 ಎಕರೆ ಜಮೀನು, ಕಾಂಪೌಂಡ್‌ ಒಳಗಿದೆ, ಆದರೆ ಭೂ ಬಂಧಿತವಾಗಿರುವುದಿಲ್ಲ ಎಂದು ದಾಖಲೆ ಒದಗಿಸಿದ್ದರು.

 

 

ಮಂಜೂರು ಮಾಡಲು ಅವಕಾಶವಿದೆ ಎಂದಿರುವ ಡಿ ಸಿ

 

ಕಾನ್ಫಿಡೆಂಡ್‌ ಸಮೂಹಕ್ಕೆ ಸೇರಿದ ಜಮೀನಿನಲ್ಲಿ ಸರ್ಕಾರಿ ಕೆರೆ, ಗೋಮಾಳವೂ ಇದೆ ಎಂದು ವರದಿ ನೀಡಿದ್ದ ಜಿಲ್ಲಾಧಿಕಾರಿಯು ನಂತರ ಇಂತಹ ಬಿ ಖರಾಬು ಜಮೀನುಗಳನ್ನು ಅತ್ಯಂತ ವಿರಳವಾದ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕ ಉದ್ದೇಶದಿಂದ ವಿಹಿತಗೊಳಿಸಿ ಮಂಜೂರು ಮಾಡಲು ಅವಕಾಶವಿದೆ ಎಂದು ಮತ್ತೊಂದು ದಾರಿ ತೋರಿಸಿದ್ದರು.

 

 

ಕಾಲುದಾರಿ ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲ, ಈ ಕಾಲುದಾರಿಗೆ ಈಗಾಗಲೇ ಗಾಲ್ಫ್‌ನವರು ಕಾಂಪೌಂಡ್‌ ನಿರ್ಮಾಣ ಮಾಡಿದೆ.

 

 

ಹೀಗಾಗಿ ಸಾರ್ವಜನಿಕರಾಗಲೀ ಅಥವಾ ರೈತರಾಗಲೀ ಇದನ್ನು ಬಳಸುತ್ತಿಲ್ಲ ಎಂದು ಸಮರ್ಥನೆ ನೀಡಿರುವುದು ವರದಿಯಿಂದ ಗೊತ್ತಾಗಿದೆ.

Hot this week

ಕಲ್ಬುರ್ಗಿ ಡಿಸಿಸಿ ಬ್ಯಾಂಕ್‌ನಲ್ಲಿ ಬಹು ಕೋಟಿ ಅಕ್ರಮ; ತನಿಖೆಗೆ ಮುಂದಾಗದ ಸರ್ಕಾರ, ತೆವಳುತ್ತಿದೆ ಕಡತ

ಬೆಂಗಳೂರು;  ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ...

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕಕ್ಕೆ ಒತ್ತಡ; ವಿವಾದಕ್ಕೆ ದಾರಿಯಾದ ಡಿಸಿಎಂ ಟಿಪ್ಪಣಿ, ನಿಯಮ ಉಲ್ಲಂಘನೆ?

ಬೆಂಗಳೂರು; ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್  ಪ್ರವೀಣ್ ಲಿಂಗಯ್ಯ ಅವರನ್ನು...

ಆಧಾರ್ ಕಾರ್ಡ್‌ಗಿಂತಲೂ ಶಕ್ತಿ ಸ್ಮಾರ್ಟ್‌ ದುಬಾರಿ, ಎಸ್‌ಪಿವಿ ರಚನೆಯಾದರೂ ಸಿಗದ ಕಾರ್ಡ್‌; 185 ಕೋಟಿ ವೆಚ್ಚ ಭರಿಸುವವರಾರು?

ಬೆಂಗಳೂರು; ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ  ಸೌಲಭ್ಯ ಕಲ್ಪಿಸುವ 'ಶಕ್ತಿ'...

ಟೆಲಿಕಾಂ ಕಂಪನಿಯಿಂದ ವಿಧಾನಸೌಧ ಟರೇಸ್‌ ಅನಧಿಕೃತ ಬಳಕೆ; ವಸೂಲಾಗದ ನೆಲಬಾಡಿಗೆ, ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಬೆಂಗಳೂರು; ಟೆಲಿಕಾಂ ಮೂಲಸೌಕರ್ಯ ಕಂಪನಿಗಳಲ್ಲಿ ಖ್ಯಾತಿ ಹೊಂದಿರುವ ಆಂಧ್ರ ಪ್ರದೇಶ ಮೂಲದ...

ನೀಟ್‌, ಕೆ-ಸಿಇಟಿ ತರಬೇತಿ; ಅಲ್ಪಸಂಖ್ಯಾತರ ಇಲಾಖೆಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆ, ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಸತಿ ಕಾಲೇಜು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮಾದರಿಯಲ್ಲಿ...

Topics

ಕಲ್ಬುರ್ಗಿ ಡಿಸಿಸಿ ಬ್ಯಾಂಕ್‌ನಲ್ಲಿ ಬಹು ಕೋಟಿ ಅಕ್ರಮ; ತನಿಖೆಗೆ ಮುಂದಾಗದ ಸರ್ಕಾರ, ತೆವಳುತ್ತಿದೆ ಕಡತ

ಬೆಂಗಳೂರು;  ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ...

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕಕ್ಕೆ ಒತ್ತಡ; ವಿವಾದಕ್ಕೆ ದಾರಿಯಾದ ಡಿಸಿಎಂ ಟಿಪ್ಪಣಿ, ನಿಯಮ ಉಲ್ಲಂಘನೆ?

ಬೆಂಗಳೂರು; ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್  ಪ್ರವೀಣ್ ಲಿಂಗಯ್ಯ ಅವರನ್ನು...

ಆಧಾರ್ ಕಾರ್ಡ್‌ಗಿಂತಲೂ ಶಕ್ತಿ ಸ್ಮಾರ್ಟ್‌ ದುಬಾರಿ, ಎಸ್‌ಪಿವಿ ರಚನೆಯಾದರೂ ಸಿಗದ ಕಾರ್ಡ್‌; 185 ಕೋಟಿ ವೆಚ್ಚ ಭರಿಸುವವರಾರು?

ಬೆಂಗಳೂರು; ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ  ಸೌಲಭ್ಯ ಕಲ್ಪಿಸುವ 'ಶಕ್ತಿ'...

ಟೆಲಿಕಾಂ ಕಂಪನಿಯಿಂದ ವಿಧಾನಸೌಧ ಟರೇಸ್‌ ಅನಧಿಕೃತ ಬಳಕೆ; ವಸೂಲಾಗದ ನೆಲಬಾಡಿಗೆ, ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಬೆಂಗಳೂರು; ಟೆಲಿಕಾಂ ಮೂಲಸೌಕರ್ಯ ಕಂಪನಿಗಳಲ್ಲಿ ಖ್ಯಾತಿ ಹೊಂದಿರುವ ಆಂಧ್ರ ಪ್ರದೇಶ ಮೂಲದ...

ನೀಟ್‌, ಕೆ-ಸಿಇಟಿ ತರಬೇತಿ; ಅಲ್ಪಸಂಖ್ಯಾತರ ಇಲಾಖೆಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆ, ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಸತಿ ಕಾಲೇಜು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮಾದರಿಯಲ್ಲಿ...

ವರ್ಗಾವಣೆ ರದ್ದುಗೊಳಿಸಲು ತಲಾ 20 ಲಕ್ಷಕ್ಕೆ ಬೇಡಿಕೆ ಆರೋಪ; ಟೆಂಡರ್ ಕಮಿಷನ್ ಆಪಾದನೆ ಬೆನ್ನಲ್ಲೇ ಕರೀಗೌಡರ ವಿರುದ್ಧ ದೂರು

ಬೆಂಗಳೂರು; ಒಂದೆಡೆ ಮಂಜೂರಾಗಿರುವ ಹುದ್ದೆಗಳನ್ನು  ಭರ್ತಿ ಮಾಡುತ್ತಿಲ್ಲ, ಶೇ. 40ರಷ್ಟು ಹುದ್ದೆಗಳು...

ಈಜಿಪುರ ಮೇಲ್ಸೇತುವೆ ಕಾಮಗಾರಿ; ಪರಿಷ್ಕೃತ ಅಂದಾಜಿನಲ್ಲಿಯೇ ಲೋಪ ಪತ್ತೆ, 8.80 ಕೋಟಿ ಮೊತ್ತಕ್ಕೆ ಲೆಕ್ಕ ಪರಿಶೋಧಕರ ಆಕ್ಷೇಪಣೆ

ಬೆಂಗಳೂರು;  ಈಜಿಪುರ ಎಲಿವೇಟೆಡ್ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮಾಡಿದ್ದ...

Related Articles

Popular Categories

error: Content is protected !!