Sunday | July 5, 2026 |

ಶಾಸಕ ನರೇಂದ್ರಸ್ವಾಮಿ ಪತ್ನಿ ನಿರ್ದೇಶಕತ್ವದ ಕಂಪನಿಗೆ 1.00 ಕೋಟಿ ರು ಮೊತ್ತದ ಗುತ್ತಿಗೆ; ಸ್ವಜನಪಕ್ಷಪಾತ ಬಹಿರಂಗ

ಬೆಂಗಳೂರು; ಮಳವಳ್ಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌  ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರ ಪತ್ನಿ ಶಶಿಕಲಾ ನಂಜುಂಡಸ್ವಾಮಿ ಹನವಾಡಿ ಅವರು ನಿರ್ದೇಶಕರಾಗಿರುವ  ಕಂಪನಿಗೆ ಕಾಂಗ್ರೆಸ್‌ ಸರ್ಕಾರವು   1.00 ಕೋಟಿ ರು ಮೊತ್ತದ  ಹೊರಗುತ್ತಿಗೆ ನೀಡಿರುವುದನ್ನು   ‘ದಿ ಫೈಲ್‌’ ಇದೀಗ  ದಾಖಲೆ ಸಹಿತ ಹೊರಗೆಡವುತ್ತಿದೆ.

 

ರಾಜ್ಯ ಸರ್ಕಾರದ ಸಾಧನೆ ಮತ್ತು ಯೋಜನೆಗಳ ಕುರಿತಾದ  ಮಾಹಿತಿಯನ್ನು ಬಸ್‌ ಬ್ರ್ಯಾಂಡಿಂಗ್‌ ಮತ್ತು ಬಸ್‌ ಶೆಲ್ಟರ್‍‌ಗಳಲ್ಲಿ ಪ್ರಚಾರ ಮಾಡಲು ಹಲವು ಜಾಹೀರಾತು ಕಂಪನಿಗಳಿಗೆ ಕಾರ್ಯಾದೇಶ ನೀಡಿತ್ತು. ಈ ಪೈಕಿ ಶಾಸಕ ನರೇಂದ್ರಸ್ವಾಮಿ ಅವರ ಪತ್ನಿ ಶಶಿಕಲಾ ಅವರು ನಿರ್ದೇಶಕರಾಗಿರುವ ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ ಕೂಡ ಇದೆ.

 

ಈ ಪ್ರಕರಣದಲ್ಲಿ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಸ್ವಜನಪಕ್ಷಪಾತ ಎಸಗಿದ್ದಾರೆ  ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ದಾಖಲೆಗಳು ಲಭ್ಯವಾಗಿವೆ.

 

ಸರ್ಕಾರದ ಸಾಧನೆ, ಯೋಜನೆಗಳನ್ನು ಬಸ್‌ ಬ್ರ್ಯಾಂಡಿಂಗ್‌ ಮತ್ತು ಬಸ್‌ ಶೆಲ್ಟರ್‍‌ಗಳಲ್ಲಿ ಪ್ರಚಾರ  ಮಾಡಲು ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ಗೆ   ಅಕ್ಟೋಬರ್‍‌ ಅಂತ್ಯದವರೆಗೆ 1.00 ಕೋಟಿ ರು ಮೊತ್ತದ ಕಾರ್ಯಾದೇಶ ನೀಡಲಾಗಿತ್ತು.

 

ಈ ಸಂಬಂಧದ ಮಾಹಿತಿಯನ್ನು   ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಡಿಸೆಂಬರ್‌ 2023ರಲ್ಲಿ ನಡೆದಿದ್ದ ಅಧಿವೇಶನದಲ್ಲಿ  ಉತ್ತರ ಒದಗಿಸಿದ್ದರು.

 

ವಿಶೇಷವೆಂದರೇ ಬಸ್‌ ಬ್ರ್ಯಾಂಡಿಂಗ್‌ ಮತ್ತು ಬಸ್‌ ಶೆಲ್ಟರ್‍‌ಗಳಲ್ಲಿ ಪ್ರಚಾರ ಮಾಡಿರುವ ಸಂಬಂಧ ಖುದ್ದು ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರೇ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒದಗಿಸಿದ್ದ ಉತ್ತರದಲ್ಲಿ ನರೇಂದ್ರಸ್ವಾಮಿ ಅವರ ಪತ್ನಿ ಶಶಿಕಲಾ ನಂಜುಂಡಸ್ವಾಮಿ ಹನವಾಡಿ ಅವರು ನಿರ್ದೇಶಕರಾಗಿರುವ  ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ ಹೆಸರು ಕೂಡ ಇತ್ತು.

 

 

 

ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌  ಕಂಪನಿಯಲ್ಲಿ ಅನ್ಮೋಲ್‌ ಶ್ರೀನಿವಾಸ್‌, ವಿದ್ಯಾ ಧನರಾಜು, ಅನಿತಾ ಚಂದ್ರಪ್ಪ ದಾವಣಗೆರೆ, ಶಶಾಂಕ್‌ ಗೋಪಾಲ್‌ ಮತ್ತು ಶಶಿಕಲಾ ನಂಜುಂಡಸ್ವಾಮಿ ಹನವಾಡಿ ಎಂಬುವರು ನಿರ್ದೇಶಕರಾಗಿರುವುದು ಕಂಪನಿ ವ್ಯವಹಾರಗಳ ಸಚಿವಾಲಯದ ದಾಖಲೆಯಿಂದ ತಿಳಿದು ಬಂದಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಉತ್ತರವನ್ನಾಧರಿಸಿ ‘ದಿ ಫೈಲ್‌’ 2023ರ ಡಿಸೆಂಬರ್‌ 7ರಂದೇ ವರದಿ ಪ್ರಕಟಿಸಿತ್ತು. ಆದರೆ ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯಲ್ಲಿ ಶಾಸಕ ನರೇಂದ್ರಸ್ವಾಮಿ ಅವರ ಪತ್ನಿ ನಿರ್ದೇಶಕರು ಎಂದು ಖಚಿತವಾಗಿ ಹೇಳಿರಲಿಲ್ಲ.

 

ಬಸ್‌ ಬ್ರ್ಯಾಂಡಿಂಗ್‌, ಬಸ್‌ ಶೆಲ್ಟರ್‍‌ಗಳಲ್ಲಿ ಪ್ರಚಾರ; ಕಾಂಗ್ರೆಸ್‌ ಶಾಸಕರ ಪತ್ನಿ ನಿರ್ದೇಶಕರಾಗಿರುವ ಕಂಪನಿಗೆ 1 ಕೋಟಿ

 

ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ನ ನಿರ್ದೇಶಕರ ಪೂರ್ವಾಪರಗಳ ಕುರಿತು ‘ದಿ ಫೈಲ್‌’ ಮಾಹಿತಿ ಮತ್ತು ದಾಖಲೆ ಕಲೆ ಹಾಕಿತ್ತು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ವೇಳೆಯಲ್ಲಿ ಶಶಿಕಲಾ ನಂಜುಂಡಸ್ವಾಮಿ ಅವರು ನರೇಂದ್ರಸ್ವಾಮಿ ಅವರ ಪತ್ನಿ ಎಂದು ಖಚಿತಪಟ್ಟಿತು. ಅಲ್ಲದೇ ಅದೇ ಪ್ರಮಾಣ ಪತ್ರದಲ್ಲಿ ನರೇಂದ್ರಸ್ವಾಮಿ ಅವರು ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ನ ಹೆಸರನ್ನೂ ಉಲ್ಲೇಖಿಸಿದ್ದರು.

 

ಬಸ್‌ ಬ್ರ್ಯಾಂಡಿಂಗ್‌ಗೆ 9.87 ಕೋಟಿ

 

ಬಸ್‌ ಬ್ರ್ಯಾಂಡಿಂಗ್‌ ಕಾರ್ಯಕ್ರಮಕ್ಕಾಗಿ ಒಟ್ಟಾರೆ 9.87 ಕೋಟಿ ರು. ಕಾರ್ಯಾದೇಶ ನೀಡಲಾಗಿದೆ. ಇದರಲ್ಲಿ 4.48 ಕೋಟಿ ರು. ಸಂಬಂಧಿಸಿದ ಕಂಪನಿಗಳಿಗೆ ಪಾವತಿಸಿತ್ತು.  ಸಾಯಿ ಅಡ್ವರ್‍‌ಟೈಸರ್ಸ್‌ ಗೆ 5.75 ಕೋಟಿ ರು. ಕಾರ್ಯಾದೇಶ ನೀಡಲಾಗಿದೆ. ಇದರಲ್ಲಿ 3.23 ಕೋಟಿ ರು. ಪಾವತಿಸಲಾಗಿದೆ. ಕರ್ನಾಟಕ ಸ್ಟೇಟ್‌ ಮಾರ್ಕೆಂಟಿಂಗ್‌ ಕಮ್ಯೂನಿಕೇಷನ್‌ ಅಡ್ವೋರ್ಟೈಸಿಂಗ್‌ ಲಿಮಿಟೆಡ್‌ ಗೆ 2.74 ಕೋಟಿ ರು. ಕಾರ್ಯಾದೇಶ ನೀಡಲಾಗಿದೆ. ಈ ಪೈಕಿ 74.97 ಲಕ್ಷ ರು. ಪಾವತಿಸಿರುವುದು ಗೊತ್ತಾಗಿದೆ.

 

 

 

ಶಿವ ಆಡ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 87.56 ಲಕ್ಷ ರು. ಕಾರ್ಯಾದೇಶ ನೀಡಲಾಗಿದ್ದು ಈ ಪೈಕಿ 49.98 ಲಕ್ಷ ರು. ಪಾವತಿಸಲಾಗಿದೆ. ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ಗೆ 50.00 ಲಕ್ಷ ರು. ಮೊತ್ತಕ್ಕೆ  ಕಾರ್ಯಾದೇಶ ನೀಡಲಾಗಿದೆ.

 

ಬಸ್‌ ಶೆಲ್ಟರ್‍‌ಗಳಲ್ಲಿ ಪ್ರಚಾರಕ್ಕೆ 2.52 ಕೋಟಿ

 

ಎಂಸಿ ಅಂಡ್‌ ಎ ಗೆ 50.00 ಲಕ್ಷ ರು., ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ಗೆ 51.84 ಲಕ್ಷ ರು., ಟೈಮ್ಸ್‌ ಇನ್ನೋವೇಟಿವ್‌ ಮೀಡಿಯಾ ಲಿಮಿಟೆಡ್‌ಗೆ 50.09 ಲಕ್ಷ ರು., ಸೈನ್‌ ಪೋಸ್ಟ್‌ ಇಂಡಿಯಾ ಲಿಮಿಟೆಡ್‌ಗೆ 1.00 ಕೋಟಿ ರು. ಸೇರಿ ಒಟ್ಟಾರೆ 2.52 ಕೋಟಿ ರು. ವೆಚ್ಚ ಮಾಡಲಾಗಿದೆ.

 

 

ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ನ ನಿರ್ದೇಶಕರಾಗಿರುವ ತಮ್ಮ ಪತ್ನಿ ಶಶಿಕಲಾ ಅವರಿಗೆ 2.96 ಕೋಟಿ ರು. ವೈಯಕ್ತಿಕ  ಸಾಲ ನೀಡಿದ್ದಾರೆ. ಅಲ್ಲದೇ ಬೆನಕ ಆಟೋಮೇಷನ್‌ ಪ್ರೈ ಲಿಮಿಟೆಡ್‌ಗೆ 56,25,000 ರು. ಸಾಲವನ್ನೂ ನೀಡಿದ್ದಾರೆ ಎಂದು 2023ರಲ್ಲಿ   ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ದಾಖಲಿಸಿರುವುದು ಗೊತ್ತಾಗಿದೆ.

 

ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ನ ನಿರ್ದೇಶಕರಾಗಿರುವ  ಶಶಿಕಲಾ ನಂಜುಂಡಸ್ವಾಮಿ ಹನವಾಡಿ ಅವರು ಕಾಂಗ್ರೆಸ್‌ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರ ಪತ್ನಿ ಎಂಬುದಕ್ಕೆ ದಾಖಲೆಯೊಂದು ಲಭ್ಯವಾಗಿದೆ.

 

ಈ ಕುರಿತು ಪ್ರತಿಕ್ರಿಯೆಗಾಗಿ  ‘ದಿ ಫೈಲ್‌’ ಮಾಡಿದ್ದ ಕರೆಯನ್ನು ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಸ್ವೀಕರಿಸಲಿಲ್ಲ. ಹಾಗೂ ವಾಟ್ಸಾಪ್‌ ಮೂಲಕ ಪ್ರತಿಕ್ರಿಯೆಗಾಗಿ ಕೋರಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಪ್ರತಿಕ್ರಿಯೆ ನೀಡಿದ ನಂತರ ಈ ವರದಿಯನ್ನು ನವೀಕರಿಸಲಾಗುತ್ತದೆ.

 

ಬೆನಕ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ 2008ರ ಸೆಪ್ಟಂಬರ್‍‌ 15ರಂದು ನೋಂದಾಯಿತವಾಗಿದೆ. 750,000 ಮೊತ್ತದ ಅಧಿಕೃತ ಷೇರು ಬಂಡವಾಳ, 150,000. ಮೊತ್ತದ ಪಾವತಿಸಿದ ಬಂಡವಾಳದೊಂದಿಗೆ ಈ ಕಂಪನಿಯು ಆರಂಭವಾಗಿದೆ ಎಂದು ಕಂಪನಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

 

ಮೂಲತಃ ಈ ಕಂಪನಿಯು ಮೋಟಾರ್‍‌ ವಾಹನಗಳ ಬಿಡಿ ಭಾಗಗಳು, ಇಂಜಿನ್‌, ಗೇರ್‍‌ ಬಾಕ್ಸ್‌, ಶಾಕ್‌ ಅಬ್ಸವರ್ಸ್‌, ರೇಡಿಯೇಟರ್ಸ್‌, ಸೈಲೆನ್ಸರ್‍‌, ಪೈಪ್ಸ್‌, ಸ್ಟೀರಿಂಗ್‌ ವೀಲ್ಸ್‌, ಸ್ಟೀರಿಂಗ್‌ ಕಾಲಮ್ಸ್‌, ಸೇರಿದಂತೆ ಆಟೋಮೊಬೈಲ್‌ ವಲಯದ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಕಂಪನಿ ವ್ಯವಹಾರಗಳ ಸಚಿವಾಲಯದ ದಾಖಲೆಗಳಿಂದ ಗೊತ್ತಾಗಿದೆ.

 

2023-24ನೇ ಸಾಲಿನ ಇಲಾಖಾ ಕ್ರಿಯಾ ಯೋಜನೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ ಬ್ರಾಂಡಿಂಗ್‌ ಮೂಲಕ ಯೋಜನೆಗಳ ಬಗ್ಗೆ ಪ್ರಚಾರ ಪಡಿಸಲು ಕಾರ್ಯಕ್ರಮ ರೂಪಿಸಿಕೊಂಡಿದೆ. ಇದಕ್ಕಾಗಿ ಪ್ರತ್ಯೇಕ ನಿಗದಿತ ಅನುದಾನ ಮೀಸಲಿಟ್ಟಿಲ್ಲ. ಹಾಗೂ ಅವಶ್ಯಕವಾಗಿರುವ ಅನುದಾನ ಲಭ್ಯವಿರಲಿಲ್ಲ. ಆದರೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕವೇ 11 ಕೋಟಿ ರು. ವೆಚ್ಚ ಮಾಡಿತ್ತು.

 

2023-24ನೇ ಸಾಲಿನ ಇಲಾಖೆಯ ಕ್ರಿಯಾ ಯೋಜನೆಯ ಅನ್ವಯ ಲೆಕ್ಕ ಶೀರ್ಷಿಕೆ (2220-60-106-0-05-059) ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಮತ್ತು ಮಾಹಿತಿ ಶಿಕ್ಷಣ ಹಾಗೂ ಸಂವಹನೆ ಅಡಿಯಲ್ಲಿ ಐಇಸಿ ಚಟುವಟಿಕೆಗೆ ಇಲಾಖೆಗೆ ಒದಗಿಸಲಾದ ಒಟ್ಟು ಅನುದಾನದಲ್ಲಿ ಈ ವೆಚ್ಚವನ್ನು ಭರಿಸಿತ್ತು.

 

ಪ್ರಸಕ್ತ ಆಯವ್ಯಯದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 10,930.55 ಲಕ್ಷ ರು. ಅನುದಾನ ಒದಗಿಸಿದೆ. ಎಸ್‌ಸಿಎಸ್‌ಪಿ ಯೋಜನೆಯಡಿಯಲ್ಲಿ 857.00 ಲಕ್ಷ ರು., ಟಿಎಸ್‌ಪಿ ಯೋಜನೆಯಡಿಯಲ್ಲಿ 348.00 ಲಕ್ಷ ರು. ಅನುದಾನವನ್ನು ಇಲಾಖೆಗೆ ಒದಗಿಸಿರುವುದು ತಿಳಿದು ಬಂದಿದೆ.

Hot this week

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಸಿಎಂ, ಡಿಸಿಎಂ ಸೇರಿ ಐವರು ಸಚಿವರ ವಸತಿಗೃಹ ನವೀಕರಣ, ದುರಸ್ತಿ, ಪೀಠೋಪಕರಣ, ಗೃಹಪಯೋಗಿ ವಸ್ತುಗಳ ಖರೀದಿ; 3 ವರ್ಷದಲ್ಲಿ 19.01 ಕೋಟಿ ರು ವೆಚ್ಚ

ಬೆಂಗಳೂರು; ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಇರುವ ಕೊಠಡಿಗಳ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...
Please Scan to make Your Contribution

Topics

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

ರಾಷ್ಟ್ರೀಯ ಪರೀಕ್ಷೆಗಳಿಂದಾಗಿ ಎಸ್‌ ಸಿ, ಎಸ್‌ ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ, ನಗರ ವಿಶ್ವವಿದ್ಯಾಲಯಗಳೊಂದಿಗೆ ಗ್ರಾಮೀಣ ಕಾಲೇಜುಗಳ ವಿಲೀನಕ್ಕೆ ಆಯೋಗ ಅಸಮ್ಮತಿ

ಬೆಂಗಳೂರು;  ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಪ್ರವೇಶಗಳ ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದಾಗಿ ಪರಿಶಿಷ್ಟ...

Related Articles

Popular Categories

error: Content is protected !!