Friday | October 30, 2026 |

ಕೆಎಎಸ್ 2011ರ ನೇಮಕದಲ್ಲಿ ಭ್ರಷ್ಟಾಚಾರ; ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನೇ ಬದಿಗೊತ್ತಿದ್ದ ಸಿದ್ದರಾಮಯ್ಯ

ಬೆಂಗಳೂರು; 2011ನೇ ಸಾಲಿನ 362 ಕೆಎಎಸ್ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿದ್ದ ಬಹುದೊಡ್ಡ ಅಕ್ರಮವನ್ನು ಸಿಬಿಐನಿಂದ ತನಿಖೆ ನಡೆಸಬೇಕು ಎಂದು ರಾಜ್ಯದ ಅಡ್ವೋಕೇಟ್‌ ಜನರಲ್‌ ಆಗಿದ್ದ ಮತ್ತು ಸಿದ್ದರಾಮಯ್ಯ ಅವರ ನಿಕಟವರ್ತಿಯೂ ಆಗಿದ್ದ ಪ್ರೊ ರವಿವರ್ಮ ಕುಮಾರ್‍‌ ಅವರು ನೀಡಿದ್ದ ಅಭಿಪ್ರಾಯವನ್ನೇ ಸಿದ್ದರಾಮಯ್ಯ ಅವರು ಬದಿಗೊತ್ತಿದ್ದ ಸಂಗತಿಯು ಇದೀಗ ಬಯಲಾಗಿದೆ.

2011ನೇ ಸಾಲಿನ 362 ಕೆಎಎಸ್ (KAS) ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ತಂದಿದ್ದ ವಿಶೇಷ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಪ್ರೊ ರವಿವರ್ಮ ಕುಮಾರ್ ಅವರು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನೀಡಿದ್ದ ಕಾನೂನು ಅಭಿಪ್ರಾಯವು ಮುನ್ನೆಲೆಗೆ ಬಂದಿದೆ. 

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಆರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

2011ರಲ್ಲಿ ನಡೆದಿದ್ದ 362 ಕೆಎಎಸ್ ಅಧಿಕಾರಿಗಳ ನೇಮಕಾತಿ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ವಿವಾದವಿತ್ತು. ಈ ನೇಮಕಾತಿ ಪಟ್ಟಿಗೆ ಮತ್ತು ಆಯ್ಕೆಗೊಂಡವರಿಗೆ ಕಾನೂನು ರಕ್ಷಣೆ ನೀಡಲು ಕರ್ನಾಟಕ ಸರ್ಕಾರವು 2022ರಲ್ಲಿ ವಿಶೇಷ ಕಾಯ್ದೆಯನ್ನು ಜಾರಿಗೊಳಿಸಿತ್ತು. ಕರ್ನಾಟಕ ಹೈಕೋರ್ಟ್ ಈ ಕಾಯ್ದೆಯನ್ನು ಎತ್ತಿಹಿಡಿದಿದ್ದರೂ, ಇದರ ವಿರುದ್ಧ ಸಲ್ಲಿಕೆಯಾದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 2022ರ ಈ ವಿಶೇಷ ಕಾಯ್ದೆಯನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಈ ತೀರ್ಪಿನಿಂದಾಗಿ 2011ರ ಬ್ಯಾಚ್‌ನ 362 ಕೆಎಎಸ್ ಅಧಿಕಾರಿಗಳ ಉದ್ಯೋಗಕ್ಕೆ ದೊಡ್ಡ ಆಘಾತ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊ ರವಿವರ್ಮ ಕುಮಾರ್ ಅವರು ನೀಡಿದ್ದ ಕಾನೂನು ಅಭಿಪ್ರಾಯವು ಚರ್ಚೆಗೆ ಗ್ರಾಸವಾಗಿದೆ.

ಈ ಪ್ರಕರಣದ ಕುರಿತು ತನಿಖೆ ನಡೆಸುವ ಸಂಬಂಧ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಆಗಿದ್ದ ಪ್ರೊ ರವಿವರ್ಮ ಕುಮಾರ್ ಅವರು ಈ ಪ್ರಕರಣವನ್ನು ಸಿಬಿಐ ವಹಿಸುವ ಮೂಲಕ ತನಿಖೆ ನಡೆಸಬೇಕು ಎಂದು ಅಭಿಪ್ರಾಯ ನೀಡಿದ್ದರು. ಆದರೆ ಅಂದು ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಸಿಬಿಐಗೆ ವಹಿಸಿರಲಿಲ್ಲ. ಬದಲಿಗೆ ಸಿಐಡಿಗೆ ವಹಿಸಿ ಕೈ ತೊಳೆದುಕೊಂಡಿತ್ತು ಎಂಬುದು ಕಡತದಲ್ಲಿನ ದಾಖಲೆಯಿಂದ ತಿಳಿದು ಬಂದಿದೆ.

ರಾಜ್ಯದ ಹಿಂದಿನ ಅಡ್ವೋಕೇಟ್ ಜನರಲ್ ಅಭಿಪ್ರಾಯವೇನಿತ್ತು?

ಈ ಪ್ರಕರಣದ ಬಗ್ಗೆ ಡಾ ಮೈತ್ರಿ ಮತ್ತು ಗಂಗಾಧರಯ್ಯ ಎಂಬುವರು ನೇರವಾಗಿ ಅಂದು ಅಡ್ವೊಕೇಟ್ ಜನರಲ್ ಆಗಿದ್ದ ಪ್ರೊ ರವಿವರ್ಮ ಕುಮಾರ್ ಅವರಿಗೆ 2013ರ ಮೇ 24 ಮತ್ತು ಮೇ 27ರಂದು ಮನವಿ ಸಲ್ಲಿಸಿದ್ದರು.

 

 

 

ಈ ಮನವಿ ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದ ರವಿವರ್ಮ ಕುಮಾರ್ ಅವರು ಸರ್ಕಾರಕ್ಕೆ ಕಾನೂನು ಅಭಿಪ್ರಾಯವನ್ನು ನೀಡಿದ್ದರು.

 

 

ಸಂದರ್ಶನಕ್ಕೆ ಕರೆ ನೀಡುವುದು ಅಥವಾ ಲೋಕ ಸೇವಾ ಆಯೋಗದ ಆಯ್ಕೆ ಪ್ರಕ್ರಿಯೆ ಯಾವುದೂ ಅಭ್ಯರ್ಥಿಗೆ ನೇಮಕಾತಿಯ ಹಕ್ಕನ್ನು ನೀಡುವುದಿಲ್ಲ. ಸರ್ಕಾರವು, ಆಯೋಗ ಸಲ್ಲಿಸಿದ ಪಟ್ಟಿಯನ್ನು ತಿರಸ್ಕರಿಸಲು ಅಥವಾ ಅಂಗೀಕರಿಸದಿರಲು ಅಧಿಕಾರ ಹೊಂದಿದೆ. ಆದರೆ ಈ ರೀತಿಯ ತಿರಸ್ಕಾರವು, ಪಟ್ಟಿಯನ್ನು ಪಡೆದ ಬಳಿಕ ಸಮಂಜಸವಾದ ಅವಧಿಯೊಳಗೆ ಮತ್ತು ಕಾರಣಗಳನ್ನು ದಾಖಲಿಸಿ ಮಾಡಬೇಕು. ಸರ್ಕಾರವು ಪಟ್ಟಿಯ ಒಂದು ಭಾಗವನ್ನು ಮಾತ್ರ ಅಂಗೀಕರಿಸಿ ಉಳಿದುದನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯದಲ್ಲಿ ವಿವರಿಸಿದ್ದರು.

 

 

ಆಯ್ಕೆ ಪ್ರಕ್ರಿಯೆಯಲ್ಲಿ ಮೂಲಭೂತ ವಿಧಾನಾತ್ಮಕ ನಿಯಮಗಳ ಉಲ್ಲಂಘನೆ, ಅಥವಾ ಭ್ರಷ್ಟಾಚಾರ, ಪಕ್ಷಪಾತ ಅಥವಾ ಕುಟುಂಬಪ್ರೀತಿ ಇರುವುದರಿಂದ ಆಯ್ಕೆ ಪ್ರಕ್ರಿಯೆ ಹಾನಿಗೊಳಗಾಗಿದೆ ಎಂದು ತೃಪ್ತಿಯಾದರೆ ಸರ್ಕಾರವು ಸಂಪೂರ್ಣ ಆಯ್ಕೆ ಪಟ್ಟಿಯನ್ನು ತಿರಸ್ಕರಿಸಬಹುದು ಎಂದು ಸಲಹೆ ನೀಡಿದ್ದರು.

 

 

ವ್ಯಾಪಕ ಭ್ರಷ್ಟಾಚಾರದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸರ್ಕಾರವು ಈ ಆರೋಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ. ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ತನಿಖೆ ನಡೆಸಬೇಕು. ಇವು ಕೇವಲ ಆರೋಪಗಳಷ್ಟೇ ಹೊರತು ಯಾವುದೇ ಲೋಪ ಅಥವಾ ಆಯೋಗದ ದೃಢಸಾಕ್ಷ್ಯವಲ್ಲ ಎಂಬುದನ್ನು ನೆನಪಿನಲ್ಲಿ ಇಡಬೇಕು. ಮತ್ತು ಈ ಆರೋಪಗಳನ್ನೇ ಏಕೈಕ ಆಧಾರವಾಗಿ ತೆಗೆದುಕೊಂಡು ಸರ್ಕಾರವು ಅಭಿಪ್ರಾಯ ರೂಪಿಸುವುದು ಅನುಮತಿಸಲ್ಪಡುವುದಿಲ್ಲ.

ಆದರೆ, ಈಗ ಸರ್ಕಾರದ ಮುಂದೆ ಲಭ್ಯವಿರುವ ವಸ್ತುನಿಷ್ಠ ಮಾಹಿತಿಯಿಂದ ನೋಡಿದರೆ, ಪಟ್ಟಿಯನ್ನು ತಡೆಹಿಡಿದು ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ/ಪರಿಶೀಲನೆ ನಡೆಸಲು ಹಾಗೂ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ರದ್ದುಪಡಿಸಬೇಕಾದಷ್ಟರ ಮಟ್ಟಿಗೆ ಕಳಂಕಿತವಾಗಿದೆಯೇ ಎಂದು ಪರಿಶೀಲಿಸಲು ಮೇಲ್ನೋಟಕ್ಕೆ ಈ ಪ್ರಕರಣವು ಅರ್ಹವಾಗಿದೆ. ಕೆಲ ಅಭ್ಯರ್ಥಿಗಳ ದುರುಳ ಕೃತ್ಯಗಳಿಂದ ಸತ್ಯನಿಷ್ಠ ಮತ್ತು ಅರ್ಹ ಅಭ್ಯರ್ಥಿಗಳು ಹಾನಿಗೊಳಗಾಗಬಾರದು ಎಂಬುದನ್ನು ಖಚಿತಪಡಿಸಬೇಕು ಎಂದು ಅಭಿಪ್ರಾಯಿಸಿದ್ದರು.

ಕಳಂಕಿತ ಪ್ರಕರಣಗಳನ್ನು ಕಳಂಕಿತವಲ್ಲದ ಪ್ರಕರಣಗಳಿಂದ ಬೇರ್ಪಡಿಸುವುದು ಅಸಾಧ್ಯ ಅಥವಾ ಅತೀ ಕಷ್ಟಕರವೆಂದು ಸರ್ಕಾರಕ್ಕೆ ಕಂಡುಬಂದರೆ, ಸಂಪೂರ್ಣ ಆಯ್ಕೆ ಪಟ್ಟಿಯನ್ನು ರದ್ದುಪಡಿಸಬಹುದು. ಆಯ್ಕೆ ಪಟ್ಟಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಕಳಂಕಿತ ಅಭ್ಯರ್ಥಿಗಳನ್ನು ಕಳಂಕಿತವಲ್ಲದ ಅಭ್ಯರ್ಥಿಗಳಿಂದ ಬೇರ್ಪಡಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕು ಎಂದು ಸಲಹೆ ನೀಡಿದ್ದರು.

ಸಿಬಿಐಗೇಕೆ ಪ್ರಕರಣ ನೀಡಲಿಲ್ಲ?

ಈ ಹಿನ್ನೆಲೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿಯಬೇಕು. ಲಿಖಿತ ಪರೀಕ್ಷೆಗಳು ಮತ್ತು ಮೌಖೀಕ ಸಂದರ್ಶನ ನಡೆಸುವ ವಿಧಾನವನ್ನು ಒಳಗೊಂಡಂತೆ, ಸಂಪೂರ್ಣ ಆಯ್ಕೆ ಪ್ರಕ್ರಿಯೆಯ ವಿರುದ್ಧ ಮಾಡಲಾದ ಆರೋಪಗಳ ಕುರಿತು ಸಮಗ್ರ ತನಿಖೆ/ಪರಿಶೀಲನೆ ನಡೆಸುವಂತೆ ನಿರ್ದೇಶಿಸಬೇಕು. ಅದು ವಿಶ್ವಾಸಾರ್ಹ ತನಿಖಾ ಸಂಸ್ಥೆಯಾದ ಕೇಂದ್ರ ತನಿಖಾ ದಳ ಮೂಲಕ ತನಿಖೆ ನಡೆಸಬೇಕು ಎಂದು ಅಭಿಪ್ರಾಯ ನೀಡಿದ್ದರು.

 

 

ಈ ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ತನಿಖೆಯ ಫಲಿತಾಂಶದ ಆಧಾರದ ಮೇಲೆ ಪಟ್ಟಿಯನ್ನು ಅಂಗೀಕರಿಸುವುದು ಅಥವಾ ಅಂಗೀಕರಿಸದಿರುವುದನ್ನು ನಿರ್ಧರಿಸಬೇಕು. ಡಾ. ಮೈತ್ರಿ ಅವರು ವಿವರಗಳನ್ನು ಇಷ್ಟವಿಲ್ಲದೇ ವಿವರಗಳನ್ನು ನೀಡಿದ್ದಾರೆ. ಸರ್ಕಾರವು ಅವರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ ಎಂದು ನಾನು ಭರವಸೆ ನೀಡಿದ ನಂತರ ಅವರು ಎಲ್ಲಾ ವಿವರಗಳನ್ನು ಹೊರಹಾಕಿ, ತಮ್ಮ ಲಿಖಿತ ಪ್ರತಿನಿಧಿಯನ್ನು ಸಲ್ಲಿಸಲು ಸಮ್ಮತಿಸಿದರು ಎಂದು ಅಭಿಪ್ರಾಯದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಡಾ. ಮೈತ್ರಿ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ವ್ಯಕ್ತಿಗಳಿಂದ ತಮ್ಮ ಜೀವ ಮತ್ತು ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂದು ಭಯಪಡುತ್ತಿದ್ದಾರೆ. ಆದ್ದರಿಂದ, ಸರ್ಕಾರವು ತಕ್ಷಣವೇ ಡಾ. ಮೈತ್ರಿ ಅವರಿಗೆ ಸಂಪೂರ್ಣ ಪೊಲೀಸ್ ರಕ್ಷಣೆಯನ್ನು ನೀಡಬೇಕು ಎಂದು ರಾಜ್ಯ ಅಡ್ವೋಕೇಟ್ ಜನರಲ್ ಆಗಿದ್ದ ಪ್ರೊ ರವಿವರ್ಮ ಕುಮಾರ್ ಅವರು ಸರ್ಕಾರಕ್ಕೆ 2013ರ ಜೂನ್‌ 4ರಂದು ಶಿಫಾರಸ್ಸು ಮಾಡಿದ್ದರು.

ಆದರೆ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಪ್ರೊ ರವಿವರ್ಮ ಕುಮಾರ್ ಅವರು ಮಾಡಿದ್ದ ಶಿಫಾರಸ್ಸಿನಂತೆ ಪ್ರಕರಣವನ್ನು ಸಿಬಿಐಗೆ ನೀಡಿರಲಿಲ್ಲ. ಬದಲಿಗೆ ಸಿಐಡಿಗೆ ವಹಿಸಿದ್ದನ್ನು ಸ್ಮರಿಸಬಹುದು.

Hot this week

ಕೇಂದ್ರ ಪುರಸ್ಕೃತ ಯೋಜನೆ; ಲಭ್ಯ ಅನುದಾನಕ್ಕೆ ಶೇ. 56.2ರಷ್ಟು ವೆಚ್ಚ, ಕೇಂದ್ರದಿಂದ 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 18 ಇಲಾಖೆಗಳಿಗೆ...

ಜೆರಾಕ್ಸ್‌ ಮಷಿನ್‌ಗಾಗಿ ದುಂಬಾಲು; ದಿ ಫೈಲ್ ವರದಿ ಮುಂದಿರಿಸಿ ರಾಜ್ಯದ ಅಭಿವೃದ್ಧಿ ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಜೆಡಿಎಸ್‌

ಬೆಂಗಳೂರು; ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌)...
Please Scan to make Your Contribution

Topics

ಕೇಂದ್ರ ಪುರಸ್ಕೃತ ಯೋಜನೆ; ಲಭ್ಯ ಅನುದಾನಕ್ಕೆ ಶೇ. 56.2ರಷ್ಟು ವೆಚ್ಚ, ಕೇಂದ್ರದಿಂದ 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 18 ಇಲಾಖೆಗಳಿಗೆ...

ಜೆರಾಕ್ಸ್‌ ಮಷಿನ್‌ಗಾಗಿ ದುಂಬಾಲು; ದಿ ಫೈಲ್ ವರದಿ ಮುಂದಿರಿಸಿ ರಾಜ್ಯದ ಅಭಿವೃದ್ಧಿ ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಜೆಡಿಎಸ್‌

ಬೆಂಗಳೂರು; ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌)...

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಬೆಂಗಳೂರು; ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306...

Related Articles

Popular Categories

error: Content is protected !!