Saturday | September 12, 2026 |

ನಿರ್ಮಲ ಭಾರತ ಟ್ರಸ್ಟ್‌ಗೆ 4 ಕೋಟಿ ಮೌಲ್ಯದ ಜಮೀನು ಮಂಜೂರು ಪ್ರಸ್ತಾವನೆ; ಬಿಜೆಪಿ ಶಾಸಕರ ಒತ್ತಡ?

ಬೆಂಗಳೂರು; ಗ್ರಾಮ ಪಂಚಾಯ್ತಿಗಳು ನಡೆಸುವ ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ವಿರೋಧಿಸಿ ರಾಜ್ಯ ಸರ್ಕಾರವು ಖಾಸಗಿ ಟ್ರಸ್ಟ್‌, ಸಂಘ ಸಂಸ್ಥೆಗಳಿಗೆ ಬಹುಕೋಟಿ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಲು ಹಲವು ಪ್ರಸ್ತಾವನೆಗಳು ಸಚಿವ ಸಂಪುಟಕ್ಕೆ ಸಲ್ಲಿಕೆಯಾಗಿರುವುದು ಬಹಿರಂಗವಾಗಿವೆ.

 

ಸಂಘ ಪರಿವಾರ ಮತ್ತು ಬಿಜೆಪಿ ಶಾಸಕರ ಪ್ರಭಾವವನ್ನು ಬಳಸುತ್ತಿರುವ ಖಾಸಗಿ ಟ್ರಸ್ಟ್‌, ಸಂಘ ಸಂಸ್ಥೆಗಳು ಸರ್ಕಾರಿ ಜಮೀನು ಮಂಜೂರಾತಿಗೆ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಕಂದಾಯ ಇಲಾಖೆಯು ಅತ್ಯುತ್ಸಾಹದಿಂದ ಸಚಿವ ಸಂಪುಟದ ಮುಂದಿರಿಸಿ ಗ್ರಾಮ ಪಂಚಾಯ್ತಿಗಳ ಅಧಿಕಾರ ಮೊಟಕುಗೊಳಿಸುತ್ತಿರುವುದು ಮುನ್ನೆಲೆಗೆ ಬಂದಿದೆ.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ನಗರದ ಬಳಿ 9 ಎಕರೆ ಗೋಮಾಳವನ್ನು ಮಂಜೂರು ಮಾಡುವಲ್ಲಿ ಸಚಿವ ಅರ್‌ ಅಶೋಕ್‌ ಅವರು ಅತ್ಯಾಸಕ್ತಿ ವಹಿಸಿದ್ದರ ಬೆನ್ನಲ್ಲೇ ಕೊಣಾಜೆಯಲ್ಲಿಯೂ 2 ಎಕರೆ ಜಮೀನನ್ನು ಟ್ರಸ್ಟ್‌ವೊಂದಕ್ಕೆ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಕೆಗೆ ಅನುಮೋದನೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರ ಒತ್ತಡಕ್ಕೆ ಮಣಿದು ನಿರ್ಮಲಾ ಭಾರತ ಚಾರಿಟಬಲ್‌ ಟ್ರಸ್ಟ್‌ಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದ ಶೇ.25ರಷ್ಟು ದರದಲ್ಲಿ 2 ಎಕರೆ ಮಂಜೂರು ಮಾಡಲು ಮುಂದಾಗಿದೆ. ಈ ಸಂಬಂಧ ಸಚಿವ ಸಂಪುಟಕ್ಕೆ ಕಂದಾಯ ಇಲಾಖೆಯು ಪ್ರಸ್ತಾವನೆ ಸಲ್ಲಿಸಿರುವುದು ತಿಳಿದು ಬಂದಿದೆ. ಕಂದಾಯ ಇಲಾಖೆಯು ಸಚಿವ ಸಂಪುಟದ ಮುಂದೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರತಿಯು ‘ದಿ ಫೈಲ್‌’ ಗೆ ಲಭ್ಯವಾಗಿದೆ.

 

ಕರ್ನಾಟಕ ಭೂ ಮಂಜೂರಾತಿ ನಿಯಿಮಗಳು 1969ರ ನಿಯಮ 27ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ಸರ್ವೇ ನಂಬರ್‌ 149ರಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿನಿಲಯ ಮತ್ತು ಸಬಲೀಕರಣ ಚಟುವಟಿಕೆಗಳಿಗೆ 2.00 ಎಕರೆ ಜಮೀನನ್ನು ನಿರ್ಮಲ ಭಾರತ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷರ ಹೆಸರಿಗೆ ಭೂ ಮಂಜೂರಾತಿ ನಿಯಿಮಗಳು 1969ರ ನಿಯಮ 22ಎ (1)(i)(3) ಅನ್ವಯ ಜಮೀನಿನ ಮಾರುಕಟ್ಟೆ ಮೌಲ್ಯದ ಶೇ.25ರಷ್ಟು ಮತ್ತು ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಮಂಜೂರು ಮಾಡಬೇಕು,’ ಎಂದು ಕಂದಾಯ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ.

 

ಆದರೆ ಈ ಪ್ರಸ್ತಾವನೆಯು ಸಚಿವ ಸಂಪುಟದ ಮುಂದೆ ಬರುವ ಮುನ್ನವೇ ಮಂಗಳೂರಿನ ನಿರ್ಮಲಾ ಭಾರತ ಚಾರಿಟಬಲ್‌ ಟ್ರಸ್ಟ್‌,  ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು 2 ಎಕರೆ ಜಮೀನು ಮಂಜೂರು ಮಾಡಲು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೊಣಾಜೆ ಗ್ರಾಮ ಪಂಚಾಯ್ತಿಯ ಸಾಮಾನ್ಯ ಸಭೆ ಮತ್ತು ಗ್ರಾಮ ಸಭೆಯು ತಿರಸ್ಕರಿಸಿತ್ತು.  ಈ ಸಂಬಂಧ ಪಂಚಾಯ್ತಿಯಲ್ಲಿ ನಡೆದ ಮೊದಲ ಸಭೆಯಲ್ಲಿಯೂ  ಒಕ್ಕೊರಲಿನಿಂದ ವಿರೋಧ ವ್ಯಕ್ತವಾಗಿತ್ತು.  ಹೀಗಾಗಿ  ಜಮೀನು ಮಂಜೂರು ಮಾಡಲು ಪಂಚಾಯ್ತಿಯು ನಿರಾಕ್ಷೇಪಣ ಪತ್ರ (ಎನ್‌ಒಸಿ)ವನ್ನು ನೀಡಿಲ್ಲ ಎಂದು ಗೊತ್ತಾಗಿದೆ.

 

ಅಲ್ಲದೆ ಒಂದು ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಮುಂದಿನ 6 ತಿಂಗಳವರೆಗೆ ಬದಲು ಮಾಡಲು ಪಂಚಾಯ್ತಿ ಕಾಯ್ದೆಯಡಿಯಲ್ಲಿ ಅವಕಾಶವಿಲ್ಲ. ಆದರೂ ಇದನ್ನು ಉಲ್ಲಂಘಿಸಿ ನಿರ್ಮಲ ಭಾರತ ಚಾರಿಟಬಲ್‌ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸುವ ಮೂಲಕ ಪಂಚಾಯ್ತಿಯ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

 

4 ಕೋಟಿ ರು. ಮೌಲ್ಯದ ಜಮೀನು

 

ಕೊಣಾಜೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಕರೆಯೊಂದಕ್ಕೆ 2,22,58,500 ರು. ಮಾರ್ಗಸೂಚಿ ಬೆಲೆ ಇದೆ. ಇದರ ಪ್ರಕಾರ ನಿರ್ಮಲಾ ಭಾರತ ಚಾರಿಟಬಲ್‌ ಟ್ರಸ್ಟ್‌ ಕೋರಿರುವ 2 ಎಕರೆಗೆ ಮಾರ್ಗಸೂಚಿ ಬೆಲೆ ಪ್ರಕಾರ 4,45,17,000 ರು.ಗಳಾಗಲಿವೆ. ಟ್ರಸ್ಟ್‌ ಕೋರಿರುವ ಜಮೀನು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 5 ಕಿ.ಮೀ. ಒಳಗೆ ಮತ್ತು ಕೊಣಾಜೆ ಪಂಚಾಯ್ತಿ ವ್ಯಾಪ್ತಿಯ 7 ಕಿ ಮೀ. ಒಳಗಿದೆ. ಮಾರುಕಟ್ಟೆ ಬೆಲೆ ಇದಕ್ಕಿಂತಲೂ ಹೆಚ್ಚಿಗೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ವರದಿಯನ್ನು ಸಲ್ಲಿಸಿರುವುದು ಸಚಿವ ಸಂಪುಟದ ಟಿಪ್ಪಣಿಯಿಂದ ಗೊತ್ತಾಗಿದೆ.

 

 

ಸಚಿವ ಸಂಪುಟಕ್ಕೆ ಕಂದಾಯ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆ ಪ್ರತಿ

 

ಅಲ್ಲದೆ ‘ಜಮೀನು ಮಂಜೂರಾತಿ ಕೋರಿರುವ ಸಂಸ್ಥೆಯು ನೋಂದಾಯಿತ ಸಂಸ್ಥೆಯೇ ಎಂಬ ಬಗ್ಗೆ ಯಾವುದೇ ದಾಖಲಾತಿಗಳು ಕಂಡುಬರುತ್ತಿಲ್ಲ. ಒಂದು ವೇಳೆ ಜಮೀನು ಮಂಜೂರು ಮಾಡುವ ನಿರ್ಣಯ ಕೈಗೊಂಡಲ್ಲಿ ನಿರ್ಮಲ ಭಾರತ ಚಾರಿಟಬಲ್‌ ಟ್ರಸ್ಟ್‌ ಇದೊಂದು ನೋಂದಾಯಿತ ಸಂಸ್ಥೆ ಎಂಬುದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದು ನೊಂದಾಯಿತ ಸಂಸ್ಥೆಯೆಂದು ಖಚಿತಪಡಿಸಿಕೊಂಡು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ (1)(i)(3) ಅನ್ವಯ ಮಂಜೂರು ಮಾಡಲು ಕ್ರಮಕೈಗೊಳ್ಳಬಹುದು,’ ಎಂದು ಕಾನೂನು ಇಲಾಖೆಯು ಅಭಿಪ್ರಾಯ ನೀಡಿರುವುದು ಸಚಿವ ಸಂಪುಟದ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

ಹಾಗೆಯೇ ದಿ ಇಂಡಿಯನ್‌ ರಿಜಿಸ್ಟ್ರೇಷನ್‌ ಆಕ್ಟ್‌ 1908ರ ಅಡಿಯಲ್ಲಿ ನೋಂದಣಿ ಮಾಡಿದೆ. ಹೀಗಾಗಿ ನಿರ್ಮಲ ಭಾರತ ಚಾರಿಟಬಲ್‌ ಟ್ರಸ್ಟ್‌ನ್ನು ನೋಂದಣಿ ಮಾಡಲು ಪ್ರತ್ಯೇಕ ಕಾನೂನು ಇಲ್ಲ. ಅಲ್ಲದೆ ದಿ ಇಂಡಿಯನ್‌ ಟ್ರಸ್ಟ್‌ ಆಕ್ಟ್‌ 1882ರ ಅಡಿಯಲ್ಲಿ ಟ್ರಸ್ಟ್‌ಗಳನ್ನು ನೋಂದಣಿ ಮಾಡುವ ಬಗ್ಗೆ ಪ್ರತ್ಯೇಕ ಅವಕಾಶವಿಲ್ಲ. ನಿರ್ಮಲ ಭಾರತ ಚಾರಿಟಬಲ್‌ ಟ್ರಸ್ಟ್‌ನ ನೋಂದಣಿಗೆ ಸಂಬಂಧಿಸಿದ ದಾಖಲೆಗಳು ಇಲ್ಲದೇ ಇರುವುದರಿಂದ ಇಂಡಿಯನ್‌ ರಿಜಿಸ್ಟ್ರೇಷನ್‌ ಆಕ್ಟ್‌ 1908ರ ಅಡಿಯಲ್ಲಿ ನೋಂದಣಿಯಾದ ಟ್ರಸ್ಟ್‌ ಡೀಡ್‌ ಮತ್ತು ಸಂಸ್ಥೆಯ ದಿ ಇನ್‌ಕಮ್‌ ಟ್ಯಾಕ್ಸ್‌ ಆಕ್ಟ್‌ 1961ರ ಅಡಿ ನೋಂದಾಯಿಸಿರುವ ಕಾರಣ ನಿರ್ಮಲ ಭಾರತ ಚಾರಿಟಬಲ್‌ ಟ್ರಸ್ಟ್‌ನ್ನು ನೋಂದಾಯಿತ ಸಂಸ್ಥೆಯೆಂದು ಪರಿಗಣಿಸಬಹುದು ಎಂದೂ ಕಾನೂನು ಇಲಾಖೆಯು ಅಭಿಪ್ರಾಯಿಸಿದೆ.

 

ಕೊಣಾಜೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯಕ್ಕೆ 200 ಎಕರೆಗೂ ಅಧಿಕ ಭೂಮಿ, ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್‌ಗೆ ಜಮೀನು ನೀಡಲಾಗಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆಯೂ ಹೆಚ್ಚಿದೆ. ಬಡ ಕಟುಂಬಗಳಿಗೆ ಆದ್ಯತೆ ಮೇಲೆ ನಿವೇಶನ ಹಂಚಬೇಕಿದೆ. ಹೀಗಾಗಿ ಇಲ್ಲಿನ ಸರ್ಕಾರಿ ಜಮೀನುಗಳನ್ನು ಖಾಸಗಿ ಟ್ರಸ್ಟ್‌, ಸಂಘ, ಸಂಸ್ಥೆಗಳಿಗೆ ನೀಡಬಾರದು ಎಂಬ ಉದ್ದೇಶದಿಂದಲೇ ಪಂಚಾಯ್ತಿಯ ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆಯು ಎನ್‌ಒಸಿ ನೀಡಿಲ್ಲ ಎಂದು ತಿಳಿದು ಬಂದಿದೆ.

 

ಅಲ್ಲದೆ ಉಳ್ಳಾಲ ತಾಲೂಕು ಹೊಸ ತಾಲೂಕಾಗಿ ರಚನೆಯಾಗಿರುವುದರಿಂದ ತಾಲೂಕು ಕಚೇರಿಗಳಿಗೆ, ಆರೋಗ್ಯ ಕೇಂದ್ರಗಳಿಗೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಕ್ಕೆ ಜಮೀನುಗಳನ್ನು ಕಾಯ್ದಿರಿಸಿರಬೇಕಿರುವ ಹಿನ್ನೆಲೆಯಲ್ಲಿ ನಿರ್ಮಲ ಭಾರತ ಚಾರಿಟಬಲ್‌ ಟ್ರಸ್ಟ್‌ಗೆ 2 ಎಕರೆ ಜಮೀನು ಮಂಜೂರು ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಗೊತ್ತಾಗಿದೆ.

Hot this week

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...
Please Scan to make Your Contribution

Topics

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

Related Articles

Popular Categories

error: Content is protected !!