ಬೆಂಗಳೂರು; ಪ್ರೌಢಶಾಲೆ ಸಹ ಶಿಕ್ಷಕರನ್ನು (ಗ್ರೇಡ್ 2) ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ವಿದ್ಯಾರ್ಹತೆ ಮತ್ತು ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ ಪಡೆದ ಶಿಕ್ಷಕರ ವೇತನ ತಾರತಮ್ಯವು ಆಡಳಿತಾತ್ಮಕ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿರುವುದು ಇದೀಗ ಬಹಿರಂಗವಾಗಿದೆ.
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಿಗೆ ಪದನ್ನೋತಿ ಹೊಂದಿದ ಶಿಕ್ಷಕರುಗಳ ನಡುವಿನ ವೇತನ ತಾರತಮ್ಯ ಸರಿಪಡಿಸಲು ರಚನೆಯಾಗಿರುವ ವಿಶೇಷ ಸದನ ಸಮಿತಿಯ ಮುಂದೆ ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಮಂಡಿಸಲಿದೆ. ಸದ್ಯ ಶಿಕ್ಷಣ ಇಲಾಖೆಗೆ ಇನ್ನೂ ಯಾರನ್ನೂ ಸಚಿವರಾನ್ನಾಗಿ ನೇಮಿಸಿಲ್ಲ. ಹೀಗಾಗಿ ಈ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಳಿಯೇ ಇದೆ.
ಈ ವಿಶೇಷ ಸದನ ಸಮಿತಿಯು 2026ರ ಆಗಸ್ಟ್ 10ರಂದು ಶಾಸಕರ ಭವನ ಕಟ್ಟಡದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಈ ಸಭೆಗೆ ಇಲಾಖೆಯು ತನ್ನ ವರದಿಯನ್ನು ಸಲ್ಲಿಸಲಿದೆ. ಈ ವರದಿಯ ಆಯ್ದ ಭಾಗವು ದಿ ಫೈಲ್ ಗೆ ಲಭ್ಯವಾಗಿದೆ.
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಿಗೆ ಪದನ್ನೋತಿ ಹೊಂದಿದ ಶಿಕ್ಷಕರುಗಳು ಹಾಗೂ 10, 15, 20,.25 ಮತ್ತು 30 ವರ್ಷಗಳ ಕಾಲಬದ್ಧ ವೇತನ ಮುಂಬಡ್ತಿ ಸೌಲಭ್ಯಗಳ ಪಡೆದಿರುವ ಶಿಕ್ಷಕರುಗಳ ವೇತನದಲ್ಲಿ ಭಾರೀ ತಾರತಮ್ಯ ಕಂಡು ಬಂದಿತ್ತು. ಈ ತಾರತಮ್ಯವನ್ನು ಬಗೆಹರಿಸುವ ಬಗ್ಗೆ ಶಿಕ್ಷಕರ ಸಂಘಟನೆಗಳು ವಿಧಾನ ಪರಿಷತ್ ಸದಸ್ಯರ ಬಳಿ ಮೊರೆಯಿಟ್ಟಿದ್ದವು.
ಕಾಲಬದ್ಧ ವೇತನ ಮುಂಬಡ್ತಿ ಸೌಲಭ್ಯಗಳನ್ನು ಪಡೆದಿರುವ ಶಿಕ್ಷಕರುಗಳ ನಡುವಿನ ವೇತನ ತಾರತಮ್ಯ ಸರಿಪಡಿಸುವುದು ಮತ್ತು ಮಾರ್ಗೋಪಾಯಗಳನ್ನು ರೂಪಿಸಲು ವಿಶೇಷ ಸದನ ಸಮಿತಿಯನ್ನು ರಚಿಸಿತ್ತು. ಈ ಸಮಿತಿಗೆ ವರದಿ ನೀಡುವ ಮುನ್ನ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಆರ್ಥಿಕ ಇಲಾಖೆಯ ಅಭಿಪ್ರಾಯ ಕೋರಿತ್ತು.
ಆರ್ಥಿಕ ಇಲಾಖೆಯ ಅಭಿಪ್ರಾಯವೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿದೆ. ಚಾಲ್ತಿಯಲ್ಲಿರುವ ಸೇವಾ ನಿಯಮಗಳು ಮತ್ತು ಪದನ್ನೋತಿ ಹೊಂದಿದ ಶಿಕ್ಷಕರುಗಳ ವೇತನ ಅಸಮಾನತೆ ಕುರಿತಂತೆ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸು ಮತ್ತು ಶಿಫಾರಸ್ಸಿನ ಮೇಲೆ ರಾಜ್ಯ ಸರ್ಕಾರವು ಕೈಗೊಂಡಿರುವ ನಿರ್ಣಯ ಹಾಗೂ ಈ ಕುರಿತು 7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಕ್ಕೆ ನೀಡಿರುವ ಶಿಫಾರಸ್ಸುಗಳನ್ನು ಆರ್ಥಿಕ ಇಲಾಖೆಯು ಆವಲೋಕಿಸಿರುವುದು ಗೊತ್ತಾಗಿದೆ.
ನೌಕರರ ಸೇವಾ ವಿಷಯಗಳಲ್ಲಿನ ನಿಬಂಧನೆಗಳು ಮತ್ತು ನೌಕರರ ವೇತನ ನಿಗದಿಯ ವಿಷಯಗಳು ಬಹಳ ಸಂಕೀರ್ಣವಾಗಿವೆ. ನಿಯಮಗಳ ಅರ್ಥೈಯಿಸುವಿಕೆ, ಅನುಷ್ಠಾನ ಮತ್ತು ರಚನೆಗಳಲ್ಲಿ ಕೈಗೊಳ್ಳುವ ನಿರ್ಧಾರ, ನಿಯಮಗಳ ರಚನೆಯಲ್ಲಿನ ಪದ ಜೋಡಣೆ ಇತ್ಯಾದಿ ಅಂಶಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ ನಿರ್ಧರಿಸುವ ಅನಿವಾರ್ಯತೆ ಇದೆ ಎಂದು ಆರ್ಥಿಕ ಇಲಾಖೆಯು ಹೇಳಿರುವುದು ತಿಳಿದು ಬಂದಿದೆ.
‘ಏಕೆಂದರೇ ಸೇವಾ ನಿಯಮಗಳ ರಚನೆಯಲ್ಲಿ ಅವಕಾಶ ಕಲ್ಪಿಸುವ ಸಂದರ್ಭದಲ್ಲಿ ಪದಗಳ ಜೋಡಣೆ ಮತ್ತು ವಾಕ್ಯಗಳ ರಚನೆಯು ಸೇವಾ ನಿಯಮಗಳ ಮೂಲಭೂತ ಪರಿಕಲ್ಪನೆ ಮತ್ತು ಉದ್ದೇಶಕ್ಕೆ ಪೂರಕವಾಗಿರಬೇಕು. ಇಲ್ಲವಾದಲ್ಲಿ ಪ್ರಸ್ತುತ ಬಡ್ತಿ ಶಿಕ್ಷಕರ ವೇತನದಲ್ಲಿನ ಅಸಮಾನತೆಯ ರೀತಿಯಲ್ಲಿ ಅನೇಕ ಕ್ಲಿಷ್ಟ ಸಂದರ್ಭಗಳು ಉಂಟಾಗಲಿವೆ. ಇವು ಆಡಳಿತಾತ್ಮಕ ಸಮಸ್ಯೆಗಳಿಗೆ ಕಾರಣವಾಗುತ್ತದೆ,’ ಎಂದು ಎಚ್ಚರಿಸಿದೆ.

ಪ್ರೌಢಶಾಲೆ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಮೊದಲ ಬಾರಿಗೆ ನೇಮಕಾತಿ ಹೊಂದಿದ ಶಿಕ್ಷಕರುಗಳಲ್ಲಿ ಅವರು ನೇಮಕಗೊಂಡ ಹುದ್ದೆಯ್ಲಿ 10, 15, 20, 25 ಮತ್ತು 30 ವರ್ಷಗಳ ಪದನ್ನೋತಿರಹಿತ ಸೇವೆಗೆ ಅನುಕ್ರಮವಾಗಿ ಕಾಲಬದ್ಧ ಮುಂಬಡ್ತಿ, ಹಿರಿಯ ವೇತನ ಶ್ರೇಣಿಗೆ ಮುಂಬಡ್ತಿ ಮತ್ತು 1ರಿಂದ 3 ಹೆಚ್ಚುವರಿ ವೇತನ ಬಡ್ತಿಗಳು ಅನ್ವಯಿಸಲಿವೆ. ಈ ನಿಯಮ ಆದೇಶಗಳ ಅವಕಾಶಗಳ ಪ್ರಕಾರ ಅರ್ಹರಿರುತ್ತಾರೆ ಎಂದು ವಿವರಿಸಿದೆ.
ಚಾಲ್ತಿಯಲ್ಲಿರುವ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1983, 1991 ರಲ್ಲಿನ ಅವಕಾಶಗಳ ಅನ್ವಯ 10 ವರ್ಷಗಳ ಸೇವೆಗೆ ಕಾಲಬದ್ಧ ಮುಂಬಡ್ತಿ, 15 ವರ್ಷಗಳ ಸೇವೆಗೆ ಹಿರಿಯ ವೇತನ ಶ್ರೇಣಿ ಮುಂಬಡ್ತಿ ಸೌಲಭ್ಯವನ್ನು ಸೇವೆಯಲ್ಲಿ ಒಂದು ಬಾರಿ ಮಾತ್ರ ಪಡೆಯಲು ಅವಕಾಶವಿದೆ. ಈ ಸೌಲಭ್ಯಗಳ ಮಂಜೂರಾತಿಯ ಕಾರಣದಿಂದ ಉಂಟಾಗುವ ತಾರತಮ್ಯವನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ವೇತನ ಎತ್ತರಿಕೆ ಸೌಲಭ್ಯವು ಈ ನಿಯಮಗಳ ನಿಬಂಧನೆಗಳಿಗೆ ಪೂರಕವಾಗಿರಬೇಕು ಎಂದು ಹೇಳಿದೆ.
ಸೇವೆಯಲ್ಲಿ ಕನಿಷ್ಟ ಒಂದೂ ಪದೋನ್ನತಿ ಹೊಂದಿಲ್ಲದೇ ಇರುವ ನೌಕರರಿಗೆ ಕ್ರಮವಾಗಿ 1ನೇ, 2ನೇ ಮತ್ತು 3ನೇ ಹೆಚ್ಚುವರಿ ವೇತನ ಬಡ್ತಿಗಳನ್ನು ಮಂಜೂರು ಮಾಡಲು ಅವಕಾಶಗಳನ್ನು ಕಲ್ಪಿಸಿದೆ. ಆದರೆ ಈ ಸೌಲಭ್ಯವು ಸೇವೆಯಲ್ಲಿ ಕನಿಷ್ಟ ಒಂದು ಪದನ್ನೋತಿ ಪಡೆದ ನೌಕರರಿಗೆ (ಶಿಕ್ಷಕರನ್ನೂ ಒಳಗೊಂಡಂತೆ) ಅನ್ವಯಿಸುವುದಿಲ್ಲ ಎಂದು ವಿವರಿಸಿದೆ.
ನೌಕರರ ವೇತನ ಮುಂಬಡ್ತಿ ಸೌಲಭ್ಯ ಮಂಜೂರಾತಿಗೆ ಸಂಬಂಧಿಸಿದ ನಿಯಮಗಳು ಚಾಲ್ತಿಯಲ್ಲಿವೆ. ಹೀಗಾಗಿ ಪ್ರೌಢಶಾಲೆಯ ಸಹ ಶಿಕ್ಷಕರ ಹುದ್ದೆಯಿಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಪದನ್ನೋತಿ ಪಡೆದ ಕಾರಣಕ್ಕೆ ಪದನ್ನೋತಿ ಹೊಂದಿದ ಉಪನ್ಯಾಸಕರುಗಳು ಪದನ್ನೋತಿ ಹುದ್ದೆಯಲ್ಲಿ 20, 25 ಮತ್ತು 30 ವರ್ಷಗಳ ಸೇವೆಗಾಗಿ ಹೆಚ್ಚುವರಿ ವೇತನ ಬಡ್ತಿ ಪಡೆಯಲು ಅರ್ಹರಿರುವುದಿಲ್ಲ ಎಂದು ಇಲಾಖೆಯ ಗಮನಕ್ಕೆ ತಂದಿದೆ.

‘ಆದರೆ ಪದನ್ನೋತಿ ಹೊಂದದೇ ಕೆಳಗಿನ ವೃಂದದ ಹುದ್ದೆಯಾದ ಪ್ರೌಢಶಾಲೆಯ ಸಹ ಶಿಕ್ಷಕರ ವೃಂದದ ಹುದ್ದೆಯಲ್ಲಿ ಸೇವೆಯನ್ನು ಮುಂದುವರೆಸುವ ಶಿಕ್ಷಕರುಗಳು 20 ವರ್ಷಗಳ ಮೇಲ್ಪಟ್ಟ ಸೇವೆಗಾಗಿ ಹೆಚ್ಚುವರಿ ವೇತನ ಬಡ್ತಿ ಪಡೆಯುತ್ತಾರೆ. ಈ ಕಾರಣದಿಂದ ಕೆಳಗಿನ ವೃಂದದ ಕಿರಿಯ ನೌಕರರು, ಶಿಕ್ಷಕರು ಪದನ್ನೋತಿ ಹೊಂದಿದ ಹಿರಿಯ ಶಿಕ್ಷಕರಿಗಿಂತ ಹೆಚ್ಚಿನ ಮೂಲ ವೇತನ ಪಡೆಯುವುದರಿಂದ ಇದು ಪದನ್ನೋತಿ ಹೊಂದಿದ ಪದವಿಪೂರ್ವ ಉಪನ್ಯಾಸಕ ಶಿಕ್ಷಕ ವೃಂದದ ನೌಕರರ ಅಸಮಾಧಾನಕ್ಕೆ ಕಾರಣವಾಗಿರುತ್ತದೆ,’ ಎಂದು ಆರ್ಥಿಕ ಇಲಾಖೆಯು ವಿವರಿಸಿದೆ.
ವೇತನ ಮುಂಬಡ್ತಿ ನಿಯಮಗಳಲ್ಲಿನ ನಿಬಂಧನೆಗಳು ಪ್ರಮುಖವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯಲ್ಲಿ ಸೇರ್ಪಡೆ ಮಾಡಲಾದ ಪದನ್ನೋತಿ ಪದದ ಪರಿಕಲ್ಪನೆ ಮತ್ತು ಆರ್ಥ ವ್ಯಾಪ್ತಿಯ ಸಂಕುಚಿತತೆಯೇ ಇದಕ್ಕೆ ಕಾರಣ ಎಂದು ಹೇಳಿದೆ. ಬಡ್ತಿ ಹೊಂದಿದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕ ವೃಂದದ ನೌಕರರ ವೇತನ ಅಸಮಾನತೆಗೆ ಕಾರಣವಾಗಿರುವ ವೇತನ ಮುಂಬಡ್ತಿ ನಿಯಮಗಳು ಮತ್ತು ಹೆಚ್ಚುವರಿ ವೇತನ ಬಡ್ತಿ/ನಿಯಮ ಆದೇಶಗಳನ್ನು ಪುನರಾವಲೋಕಿಸಿ ಒಸ ನಿಯಮಗಳ ರಚನೆಯ ವಿಷಯವು ಇನ್ನೂ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿಯೇ ಇದೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ಹೊಸ ಕರಡು ನಿಯಮಗಳನ್ನು ಪ್ರಕಟಿಸಲು ಕ್ರಮವಹಿಸಲಾಗುತ್ತಿದೆ ಎಂದು ಇಲಾಖೆಯು ವಿಶೇಷ ಸದನ ಸಮಿತಿಗೆ ತಿಳಿಸಿರುವುದು ಗೊತ್ತಾಗಿದೆ.
‘ಪದನ್ನೋತಿ ಉಪನ್ಯಾಸಕರ ವೇತನ ಅಸಮಾನತೆಗೆ ಮೂಲ ಕಾರಣ ಅವಲೋಕಿಸಿದಾಗ ಕಂಡು ಬರುವ ಪ್ರಮುಖ ಅಂಶವೆಂದರೇ ಪದನ್ನೋತಿ ಎಂಬ ಪರಿಕಲ್ಪನೆಯು ಮೂಲತಃ ಒಂದೇ ಪದ ವೃಂದ ಶ್ರೇಣಿಕೃತ ಹುದ್ದೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಪದನ್ನೋತಿ ಎಂಬುದನ್ನು ಬೇರೆ ಘಟಕ, ಇಲಾಖೆಯ ಮೇಲಿನ ಪದ ವೃಂದದ ಹುದ್ದೆಗಳಿಗೂ ಅನ್ವಯಿಸಿ ಸ್ವಯಂ ಚಾಲಿತವಾಗಿ ನಿಯಮಗಳನ್ನು ರಚಿಸಿದಾಗ ಈ ತಿದ್ದುಪಡಿಗಳು ಸೇವಾ ನಿಯಮಗಳ ಮೂಲಭೂತ ಪರಿಕಲ್ಪನೆ ಮತ್ತು ಉದ್ದೇಶಕ್ಕೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ,’ ಎಂದು ಇಲಾಖೆಯು ವಿವರಿಸಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ನೇರ ನೇಮಕಾತಿ ಮತ್ತು ಪದನ್ನೋತಿ ಎಂಬ ನೇಮಕಾತಿ ವಿಧಾನಗಳನ್ನು ಕಲ್ಪಿಸಿದೆ. ಆದರೆ ಪದನ್ನೋತ ಅವಕಾಶದಲ್ಲಿ ಬೇರೆ ಇಲಾಖೆಯ ಅಂದರೇ ಬೇರೆ ಜೇಷ್ಠತಾ ಘಟಕದ ಪ್ರೌಢಶಿಕ್ಷಣ ಇಲಾಖೆಯ ಶಿಕ್ಷಕರುಗಳಿಗೆ ಪದನ್ನೋತಿ ಎಂದು ನಮೂದಿಸಿರುವುದು ಮೂಲ ಸಮಸ್ಯೆಗೆ ಕಾರಣವಾಗಿದೆ.

‘ಏಕೆಂದರೇ ಇದನ್ನು ಪದನ್ನೋತಿ ಎಂದು ಪರಿಗಣಿಸಿದಲ್ಲಿ ಹೆಚ್ಚುವರಿ ವೇತನ ಬಡ್ತಿ ಸೌಲಭ್ಯಗಳು ಶಿಕ್ಷಕರುಗಳಿಗೆ ಲಭ್ಯವಾಗುವುದಿಲ್ಲ. ಬದಲಿಗೆ ಇದನ್ನು ಆಯ್ಕೆ ಮುಖಾಂತರ ಪದನ್ನೋತಿ ಎಂದು ತಿದ್ದುಪಡಿ ಮಾಡಬೇಕಾದ ಅತ್ಯಗತ್ಯವಾಗಿದೆ. ಈ ರೀತಿ ಮಾಡಿದಲ್ಲಿ ಅಂದರೇ ಪ್ರೌಢಶಾಲೆ ಶಿಕ್ಷಕರ ಹುದ್ದೆಯಿಂದ ಪದವಿಪೂರ್ವ ಕಾಲೇಜನ ಉಪನ್ಯಾಸಕರ ಹುದ್ದೆಗೆ ಆಯ್ಕೆ ಮುಖಾಂತರ ಪದನ್ನೋತಿ ನೀಡಿದಲ್ಲಿ ಅದು ಕರ್ನಾಟಕ ಸಿವಿಲ್ ಸೇವಾ ನಿಯಮಗಳು 1977ರ ನಿಯಮ 17ರ ಅನ್ವಯ ಬಡ್ತಿ ಮೂಲಕ ನೇರ ನೇಮಕಾತಿ ಎಂಬ ಪರಿಕಲ್ಪನೆ ವ್ಯಾಪ್ತಿಗೆ ಬರಲಿದೆ,’ ಎಂದು ವಿವರಿಸಿದೆ.

ಈ ರೀತಿ ಮಾಡಿದಲ್ಲಿ ಶಿಕ್ಷಕರುಗಳು ಹೆಚ್ಚುವರಿ ವೇತನ ಬಡ್ತಿ ಸೌಲಭ್ಯ ಪಡೆಯಲು ಯಾವುದೇ ಬಾಧಕ ಇರುವುದಿಲ್ಲ. ಈ ರೀತಿಯ ಆಯ್ಕೆ ಮುಖಾಂತರ ಪದನ್ನೋತಿ ಪರಿಕಲ್ಪನೆಯು ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ರಾಜ್ಯ ಸೇವೆಯಿಂದ ಅಖಿಲ ಭಾರತ ಸೇವೆಗೆ ಪದನ್ನೋತಿ ನೀಡುವಲ್ಲಿ ಚಾಲ್ತಿಯಲ್ಲಿದೆ ಎಂದು ಹೇಳಿದೆ.




