ಬೆಂಗಳೂರು; ಕಾಂಗ್ರೆಸ್ ಸರ್ಕಾರವು ಸಹ ಆರ್ಥಿಕ ಸಂಕಷ್ಟದಲ್ಲಿ ಮುಳುಗೇಳುತ್ತಿದ್ದರೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಸತಿ ಗೃಹಗಳ ನವೀಕರಣ, ದುರಸ್ತಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಲೇ ಬಂದಿದೆ. ಅಧಿಕಾರಕ್ಕೆ ಬಂದ ಹೊಸತರಲ್ಲೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಸರ್ಕಾರಿ ನಿವಾಸ, ವಸತಿ ಗೃಹವನ್ನು ನವೀಕರಿಸಲಾಗಿತ್ತು. ಆದರೂ ಪ್ರತೀ ವರ್ಷವೂ ದುರಸ್ತಿ , ನವೀಕರಣ, ಪೀಠೋಪಕರಣ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ವೆಚ್ಚವನ್ನು ಈಗಲೂ ಮಾಡುತ್ತಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಹಂಚಿಕೆಯಾಗಿರುವ ವಸತಿ ಗೃಹವನ್ನು ಹಲವು ಬಾರಿ ನವೀಕರಿಸಲಾಗಿದೆ ಮತ್ತು ದುರಸ್ತಿ ಕಾರ್ಯಗಳು ನಡೆಸಿದೆ. ಈ ವರ್ಷವೂ ಅಂದರೇ 2026ರಲ್ಲಿಯೂ ದುರಸ್ತಿ, ನವೀಕರಣ ಮತ್ತು ಪೀಠೋಪಕರಣ ಖರೀದಿ ಹೆಸರಿನಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಬಿದ್ದಿಲ್ಲ
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕುಮಾರಕೃಪಾದಲ್ಲಿ ಹಂಚಿಕೆಯಾಗಿರುವ ವಸತಿ ಗೃಹ ಸಂಖ್ಯೆ ಕೆ ಕೆ 1ರಲ್ಲಿ ಟಿ ವಿ ಯುನಿಟ್ ಸೇರಿ ಹಲವು ಪೀಠೋಪಕರಣ, ನವೀಕರಣ ಮತ್ತು ದುರಸ್ತಿಗೆಂದು 33 ಲಕ್ಷ ರು ವೆಚ್ಚ ಮಾಡಲು ಮುಂದಾಗಿದೆ. ಈ ಸಂಬಂಧ ಕೆಟಿಪಿಪಿ ಕಾಯ್ದೆ ಅಡಿಯಲ್ಲಿ 4 ಜಿ ವಿನಾಯಿತಿಯನ್ನೂ ನೀಡಿರುವ ಆರ್ಥಿಕ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿದೆ.
2026ರ ಏಪ್ರಿಲ್ 2ರಂದು 4 ಜಿ ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಿದೆ. ಈ ಪ್ರತಿಯು ‘ದಿ ಫೈಲ್’ ಗೆ ಲಭ್ಯವಾಗಿದೆ.
‘ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ವಸತಿ ಗೃಹ ಸಂಖ್ಯೆ ಕೆ ಕೆ 1 ರಲ್ಲಿ ಟಿವಿ ಯುನಿಟ್, ವುಡನ್ ವಾಲ್ ಪ್ಯಾನಲಿಂಗ್, ವುಡನ್ ಫ್ಲೋರಿಂಗ್, ಸಭಾಂಗಣದ ಎದುರಿನ ಫಾಲ್ಸ್ ಸೀಲಿಂಗ್ ರೂಫ್, ಹೆಚ್ಚುವರಿಯಾಗಿ ಇನ್ನಿತರೆ ಕೆಲಸಗಳಿಗೆ 33 ಲಕ್ಷ ರು ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು,’ ಪಿಡಬ್ಲ್ಯೂಡಿಗೆ 4 ಜಿ ವಿನಾಯಿತಿ ನೀಡಿದೆ.

ಎರಡು ವರ್ಷದ ಹಿಂದೆಯೇ ಅಂದರೇ 2024ರಲ್ಲಿಯೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸರ್ಕಾರಿ ನಿವಾಸವನ್ನು ದುರಸ್ತಿ ಹೆಸರಿನಲ್ಲಿ 1.38 ಕೋಟಿ ರು. ವೆಚ್ಚದಲ್ಲಿ ಅಲಂಕರಿಸಲಾಗಿತ್ತು. ಈ ಸಂಬಂಧ 2024ರ ಫೆ.28ರಂದು ಅಧಿಸೂಚನೆ ಹೊರಡಿಸಿದೆ. ಉಪ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಸರ್ಕಾರಿ ನಿವಾಸವನ್ನು ನವೀಕರಿಸುತ್ತಿರುವುದು ತೆರಿಗೆ ಹಣ ದುಂದುವೆಚ್ಚ ಮತ್ತು ವಿವಾದಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.
ಉಪ ಮುಖ್ಯಮಂತ್ರಿಯವರಿಗೆ ಹಂಚಿಕೆ ಮಾಡಲಾಗಿರುವ ವಸತಿಗೃಹ ಕೆ ಕೆ ದಕ್ಷಿಣ -1ರ ದುರಸ್ತಿ ಕಾಮಗಾರಿಗಳನ್ನು ಒಟ್ಟಾರೆ 1.38 ಕೋಟಿ ರು. ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು ಕೆಟಿಪಿಪಿ ಕಾಯ್ದೆ 4 ಜಿ ವಿನಾಯಿತಿ ಪಿಡಬ್ಲ್ಯೂಡಿಗೆ ನೀಡಿತ್ತು.

ಏನೆಲ್ಲಾ ದುರಸ್ತಿ ಆಗಿದ್ದವು?
ಕಿಚನ್ ಕ್ಯಾಬಿನೆಟ್, ವಾಲ್ ಪೆನಲಿಂಗ್, ಪೈಟಿಂಗ್, ಬಾಗಿಲು, ಕಿಟಕಿ, ಗ್ರಿಲ್, ಕರ್ಟನ್ ರಾಡ್, ಕಾರ್ಟ್ ಕ್ಲಾತ್, ಪೀಠೋಪಕರಣಗಳಿಗೆ 98 ಲಕ್ಷ ರು., ಎಲ್‌ಇಡಿ ಫಿಟ್ಟಿಂಗ್ಸ್, ಸ್ಟ್ರೀಟ್ ಲೈಟ್ಸ್, ಲಾನ್ ಲೈಟ್ಸ್, ಗಾರ್ಡ್‌ನ್ ಲೈಟ್ಸ್, ವಾಟರ್ ಹೀಟರ್ಸ್, ಸೀಲಿಂಗ್ ಫ್ಯಾನ್, ಇನ್ನಿತರೆ ಎಲೆಕ್ಟ್ರಿಕ್ ಉಪಕರಣಗಳು ಮತ್ತು ದುರಸ್ತಿಗಳಿಗೆ 40 ಲಕ್ಷ ರು ಸೇರಿ ಒಟ್ಟಾರೆ 1.38 ಕೋಟಿ ರು. ವೆಚ್ಚವಾಗಿದೆ.

ಕುಮಾರಕೃಪ ನಿವಾಸದಿಂದ ಕಾವೇರಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ನಿವಾಸಕ್ಕೂ ಪೀಠೋಪಕರಣಗಳ ಪೂರೈಸಲು 3 ಕೋಟಿ ರು. ಖರ್ಚಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿತ ಸಚಿವರ ಕಚೇರಿ ದುರಸ್ತಿ ಮತ್ತು ಬಣ್ಣ ಬಳಿಯುವ ಹೆಸರಿನಲ್ಲಿ 3.80 ಕೋಟಿ ರು ಬಿಡುಗಡೆ ಮಾಡಲಾಗಿತ್ತು. ಸಚಿವರ ವಸತಿ ಗೃಹಗಳಿಗೆ ಗೃಹಪಯೋಗಿ ವಸ್ತು ಮತ್ತು ಪೀಠೋಪಕರಣಗಳ ಪೂರೈಕೆಗಾಗಿ 3.40 ಕೋಟಿ ರು. ಬಿಡುಗಡೆಯಾಗಿತ್ತು.
ಅನಗತ್ಯ ಖರ್ಚು ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ನಂತರವೂ ವೆಚ್ಚವಾಗಿತ್ತು.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯ ರಿಪೇರಿ, ದುರಸ್ತಿ ಮತ್ತು ನವೀಕರಿಸಲು ಅಂದಾಜು 2.50 ಕೋಟಿ ರು. ಮೊತ್ತದಲ್ಲಿ ನವೀಕರಿಸಿರುವ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ವಸತಿ ಗೃಹದ ಆವರಣವನ್ನೂ 2.65 ಕೋಟಿ ರು. ವೆಚ್ಚದಲ್ಲಿ ನವೀಕರಿಸಿದೆ.
ಅದೇ ರೀತಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕುಮಾರಕೃಪ ರಸ್ತೆಯಲ್ಲಿ ಹಂಚಿಕೆ ಮಾಡಿರುವ ವಸತಿ ಗೃಹಕ್ಕೆ ಅಗತ್ಯ ಪೀಠೋಪಕರಣ, ಆಪ್ತ ಕಾರ್ಯದರ್ಶಿ ಕೊಠಡಿ ನವೀಕರಣಕ್ಕೆ 45.10 ಲಕ್ಷ ರು. ವೆಚ್ಚ ಮಾಡಿದೆ. ಈ ಎರಡೂ ಕಾಮಗಾರಿಗಳನ್ನೂ ನಿರ್ವಹಿಸಲು ಲೋಕೋಪಯೋಗಿ ಇಲಾಖೆಗೆ 4(ಜಿ) ವಿನಾಯಿತಿಯನ್ನು ನೀಡಿ 2025ರ ಫೆ.10 ಮತ್ತು ಜನವರಿ 29ರಂದು ಆರ್ಥಿಕ ಇಲಾಖೆಯು ಅಧಿಸೂಚನೆ ಹೊರಡಿಸಿತ್ತು.
ಕಾವೇರಿ ವಸತಿಗೃಹದ ಆವರಣದಲ್ಲಿ 2.65 ಕೋಟಿ ರು ವೆಚ್ಚ ಮಾಡಿದೆ. ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯ ಆವರಣದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು 265.20 ಲಕ್ಷ ರು ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು ಕೆಟಿಪಿಪಿ ಕಾಯ್ದೆಯಡಿ 4(ಜಿ) ವಿನಾಯಿತಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿತ್ತು.

ಕಾವೇರಿ ವಸತಿ ಗೃಹದ ಆವರಣದಲ್ಲಿ ಶೌಚಾಲಯ, ಸ್ಟೋರ್ ರೂಂ, ಸ್ಟೋರೇಜ್ ರ್‍ಯಾಕ್ಸ್, ಅಡುಗೆ ಉಪಕರಣಗಳು, ಎಲೆಕ್ಟ್ರಿಕಲ್ ಕಾಮಗಾರಿ, ಏರ್ ಕಂಡೀಷನ್ ಅಳವಡಿಕೆ ಕಾಮಗಾರಿಗಳಿಗೆ ಒಟ್ಟಾರೆ 2.65 ಕೋಟಿ ರು ವೆಚ್ಚವಾಗಿದೆ.

ಅದೇ ರೀತಿ ಕುಮಾರಕೃಪ ರಸ್ತೆಯಲ್ಲಿ ಉಪ ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಿರುವ ವಸತಿಗೃಹಕ್ಕೆ ಅಗತ್ಯ ಪೀಠೋಪಕರಣ ಮತ್ತು ಆಪ್ತ ಕಾರ್ಯದರ್ಶಿ ಕೊಠಡಿ ನವೀಕರಣಕ್ಕೆ 45.10 ಲಕ್ಷ ರು. ವೆಚ್ಚ ಮಾಡಲು ಲೋಕೋಪಯೋಗಿ ಇಲಾಖೆಗೆ 4(ಜಿ) ವಿನಾಯಿತಿ ನೀಡಿತ್ತು

ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊಠಡಿ ನವೀಕರಿಸಲಾಗಿತ್ತು. ಆ ನಂತರ ಬಂದ ಮುಖ್ಯಮಂತ್ರಿಗಳ ಅವಧಿಯಲ್ಲಿ ವಿಧಾನಸೌಧದಲ್ಲಿನ 323ನೇ ಸಂಖ್ಯೆಯ ಕೊಠಡಿಯನ್ನು ನವೀಕರಿಸಿರಲಿಲ್ಲ. ಬದಲಿಗೆ ಕೊಠಡಿಗೆ ಸುಣ್ಣ, ಬಣ್ಣ ಮತ್ತು ಪೀಠೋಪಕರಣಗಳಿಗೆ ಪಾಲಿಷ್ ಮಾಡಲಾಗುತ್ತಿತ್ತೇ ವಿನಃ ಇಡೀ ಕೊಠಡಿಯನ್ನು ಸಂಪೂರ್ಣವಾಗಿ ನವೀಕರಿಸಿರಲಿಲ್ಲ. ಅಲ್ಲದೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೂ ಈ ಕೊಠಡಿಯು ನವೀಕೃತಗೊಂಡಿರಲಿಲ್ಲ. ಆದರೀಗ ಈ ಕೊಠಡಿ ನವೀಕರಿಸಲು ಖುದ್ದು ಸಿದ್ದರಾಮಯ್ಯ ಅವರೇ ಅಧಿಕಾರಿಗಳನ್ನು ಕರೆದು ಇಡೀ ಕೊಠಡಿಯನ್ನು ನವೀಕರಿಸಲು ಮೌಖಿಕವಾಗಿ ಸೂಚಿಸಿದ್ದರು.
ವಿಧಾನಸೌಧದಲ್ಲಿನ ಸಿಎಂ ಕೊಠಡಿ ನವೀಕರಣಕ್ಕೆ ಮೌಖಿಕ ಸೂಚನೆ; ಅಂದಾಜು 2.50 ಕೋಟಿ ವೆಚ್ಚ?
ಮುಖ್ಯಮಂತ್ರಿಗಳ ಕೊಠಡಿಯಲ್ಲಿನ ಒಳಾಂಗಣವನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸಲಾಗಿದೆ. ಕೆಫೆಟೇರಿಯಾ, ಶೌಚಾಲಯ, ಕೊಠಡಿಯ ನೆಲ, ಗೋಡೆಗಳ ವಿನ್ಯಾಸ, ವಾಲ್ ಪೇಟಿಂಗ್, ವಿರಾಮ ಕೊಠಡಿ, ಅವರ ಕೊಠಡಿ, ಸಂದರ್ಶಕರ ಕೊಠಡಿಯನ್ನೂ ನವೀಕರಿಸಲಾಗಿದೆ. ವಿಶೇಷವೆಂದರೇ ಮುಖ್ಯಮಂತ್ರಿ ಕೊಠಡಿ ನವೀಕರಣ ಸಂಬಂಧ ಮುಖ್ಯಮಂತ್ರಿ ಸಚಿವಾಲಯದಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಯಾವುದೇ ಪತ್ರ ವ್ಯವಹಾರ ನಡೆದಿರಲಿಲ್ಲ. ಇದಕ್ಕೂ ಮುನ್ನವೇ ಕಾಮಗಾರಿಗಳು ಆರಂಭವಾಗಿದ್ದವು.
ಡಿಸಿಎಂ ವಸತಿಗೃಹದ ಗಾರ್ಡ್‌ನ್ ಲೈಟ್ಸ್ ಸೇರಿ ದುರಸ್ತಿಗೆ 1.38 ಕೋಟಿ ವೆಚ್ಚ; ಬರಗಾಲದಲ್ಲೂ ದುಂದುವೆಚ್ಚ
ಈ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕಾವೇರಿ ವಸತಿಗೃಹ ಆವರಣದಲ್ಲಿ ಕಾಮಗಾರಿ, ಡಿಸಿಎಂ ವಸತಿಗೃಹಕ್ಕೆ ಪೀಠೋಪಕರಣ; 3.10 ಕೋಟಿ ವೆಚ್ಚ
ಅದೇ ರೀತಿ ಕಾವೇರಿ ವಸತಿ ಗೃಹ ಆವರಣದಲ್ಲಿಯೂ ದುರಸ್ತಿ ಮತ್ತು ನವೀಕರಣ ಹೆಸರಿನಲ್ಲಿ ಮಾಡಿದ್ದ ವೆಚ್ಚದ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




