ಡಿಸಿಎಂ ವಸತಿಗೃಹದ ಗಾರ್ಡ್‌ನ್‌ ಲೈಟ್ಸ್‌ ಸೇರಿ ದುರಸ್ತಿಗೆ 1.38 ಕೋಟಿ ವೆಚ್ಚ; ಬರಗಾಲದಲ್ಲೂ ದುಂದುವೆಚ್ಚ

ಬೆಂಗಳೂರು; ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿರುವ ಹೊತ್ತಿನಲ್ಲೇ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಸರ್ಕಾರಿ ನಿವಾಸವನ್ನು ದುರಸ್ತಿ ಹೆಸರಿನಲ್ಲಿ 1.38 ಕೋಟಿ ರು. ವೆಚ್ಚದಲ್ಲಿ ಅಲಂಕರಿಸಲಾಗುತ್ತಿದೆ.

 

ಉಪ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಸರ್ಕಾರಿ ನಿವಾಸವನ್ನು ನವೀಕರಿಸುತ್ತಿರುವುದು ತೆರಿಗೆ ಹಣ ದುಂದುವೆಚ್ಚ ಮತ್ತು ವಿವಾದಕ್ಕೆ ದಾರಿಮಾಡಿಕೊಟ್ಟಂತಾಗಿದೆ.

 

ಗ್ಯಾರಂಟಿ ಯೋಜನೆಗಳಿಗಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಏದುಸಿರು ಬಿಡುತ್ತಿದೆ. ಪ್ರಸಕ್ತ ಆರ್ಥಿಕ ವರ್ಷ ಆರಂಭಿಕ ತ್ರೈಮಾಸಿಕದಲ್ಲಿ ಮುಕ್ತ ಮಾರುಕಟ್ಟೆಯಿಂದ 10 ಸಾವಿರ ಕೋಟಿ ಸಾಲ ಪಡೆದು ಸಾಲದ ಸುಳಿಯಲ್ಲಿ ಸಿಲುಕಿರುವ ಬೆನ್ನಲ್ಲೇ ಡಿ ಕೆ ಶಿವಕುಮಾರ್‌ ಅವರಿಗೆ ಹಂಚಿಕೆಯಾಗಿರುವ ಸರ್ಕಾರಿ ನಿವಾಸದ ದುರಸ್ತಿ ಕಾಮಗಾರಿಗಳಿಗೆ 1.38 ಕೋಟಿ ರು. ವೆಚ್ಚ ಮಾಡುತ್ತಿರುವುದು ಮುನ್ನೆಲೆಗೆ ಬಂದಿದೆ.

 

ಇದಕ್ಕಾಗಿ ಆರ್ಥಿಕ ಇಲಾಖೆಯು ಲೋಕೋಪಯೋಗಿ ಇಲಾಖೆಗೆ 4(ಜಿ) ವಿನಾಯಿತಿ ನೀಡಿದೆ. ಈ ಸಂಬಂಧ 2024ರ ಫೆ.28ರಂದು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಧಿಸೂಚನೆಯಲ್ಲೇನಿದೆ?

 

ಉಪ ಮುಖ್ಯಮಂತ್ರಿಯವರಿಗೆ ಹಂಚಿಕೆ ಮಾಡಲಾಗಿರುವ ವಸತಿಗೃಹ ಕೆ ಕೆ ದಕ್ಷಿಣ -1ರ ದುರಸ್ತಿ ಕಾಮಗಾರಿಗಳನ್ನು ಒಟ್ಟಾರೆ 1.38 ಕೋಟಿ ರು. ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು ಕೆಟಿಪಿಪಿ ಕಾಯ್ದೆ 4 ಜಿ ವಿನಾಯಿತಿ ಪಿಡಬ್ಲ್ಯೂಡಿಗೆ ನೀಡಲಾಗಿದೆ.

 

ಏನೆಲ್ಲಾ ದುರಸ್ತಿ?

 

ಕಿಚನ್‌ ಕ್ಯಾಬಿನೆಟ್‌, ವಾಲ್‌ ಪೆನಲಿಂಗ್‌, ಪೈಟಿಂಗ್‌, ಬಾಗಿಲು, ಕಿಟಕಿ, ಗ್ರಿಲ್‌, ಕರ್ಟನ್‌ ರಾಡ್‌, ಕಾರ್ಟ್‌ ಕ್ಲಾತ್‌, ಪೀಠೋಪಕರಣಗಳಿಗೆ 98 ಲಕ್ಷ ರು., ಎಲ್‌ಇಡಿ ಫಿಟ್ಟಿಂಗ್ಸ್‌, ಸ್ಟ್ರೀಟ್‌ ಲೈಟ್ಸ್‌, ಲಾನ್‌ ಲೈಟ್ಸ್‌, ಗಾರ್ಡ್‌ನ್‌ ಲೈಟ್ಸ್‌, ವಾಟರ್‌ ಹೀಟರ್ಸ್‌, ಸೀಲಿಂಗ್‌ ಫ್ಯಾನ್‌, ಇನ್ನಿತರೆ ಎಲೆಕ್ಟ್ರಿಕ್‌  ಉಪಕರಣಗಳು ಮತ್ತು ದುರಸ್ತಿಗಳಿಗೆ 40 ಲಕ್ಷ ರು ಸೇರಿ ಒಟ್ಟಾರೆ 1.38 ಕೋಟಿ ರು. ವೆಚ್ಚವಾಗಲಿದೆ.

 

ಕುಮಾರಕೃಪ ನಿವಾಸದಿಂದ ಕಾವೇರಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ನಿವಾಸಕ್ಕೂ ಪೀಠೋಪಕರಣಗಳ ಪೂರೈಸಲು 3 ಕೋಟಿ ರು. ಖರ್ಚಾಗಿತ್ತು.

 

ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿತ ಸಚಿವರ ಕಚೇರಿ ದುರಸ್ತಿ ಮತ್ತು ಬಣ್ಣ ಬಳಿಯುವ ಹೆಸರಿನಲ್ಲಿ 3.80 ಕೋಟಿ ರು ಬಿಡುಗಡೆ ಮಾಡಲಾಗಿತ್ತು. ಸಚಿವರ ವಸತಿ ಗೃಹಗಳಿಗೆ ಗೃಹಪಯೋಗಿ ವಸ್ತು ಮತ್ತು ಪೀಠೋಪಕರಣಗಳ ಪೂರೈಕೆಗಾಗಿ 3.40 ಕೋಟಿ ರು. ಬಿಡುಗಡೆಯಾಗಿತ್ತು.

 

ಅನಗತ್ಯ ಖರ್ಚು ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts