Saturday | September 5, 2026 |

ಪರಿಹಾರ ಧನ ನಿಗದಿಯಲ್ಲಿ ತಪ್ಪು ಲೆಕ್ಕಾಚಾರ; 30.09 ಕೋಟಿ ಹೊರೆ, ಅಧಿಕಾರಿಗಳ ವಿರುದ್ಧ ಕ್ರಮವಿಲ್ಲ!

ಬೆಂಗಳೂರು; ಹಣ್ಣು ಮತ್ತು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ 42 ಎಕರೆ 31 ಗುಂಟೆ ಜಮೀನಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಶೇ.12ರಷ್ಟು ಹೆಚ್ಚುವರಿಯಾಗಿ ನಿಗದಿಪಡಿಸಿ ಕೋಟ್ಯಂತರ ರುಪಾಯಿ ಆರ್ಥಿಕ ಹೊರೆ ಹೊರಿಸಿದ್ದ ಪ್ರಕರಣದಲ್ಲಿ ಕಂದಾಯ ಅಧಿಕಾರಿಗಳ ವಿರುದ್ಧ 5 ವರ್ಷವಾದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.

 

ಆನೇಕಲ್‌ ತಾಲೂಕಿನ ಗುಳಿಮಂಗಲದಲ್ಲಿ ಹಣ್ಣು ಮತ್ತು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ 42 ಎಕರೆ 31 ಗುಂಟೆ ವಿಸ್ತೀರ್ಣದ ಜಮೀನಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಶೇ.12ರಷ್ಟು ಹೆಚ್ಚುವರಿಯಾಗಿ ಪರಿಹಾರ ನಿಗದಿಪಡಿಸಿತ್ತು. ಇದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ಆರ್ಥಿಕ ಹೊರೆ ಹೊರಿಸಲಿದೆ ಎಂಬ ವರದಿ ಇದ್ದರೂ ಹಿಂದಿನ ಬಿಜೆಪಿ ಸರ್ಕಾರ ಅದನ್ನು ಬದಿಗೆ ಸರಿಸಿತ್ತು.

 

ಈಗಿನ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಎರಡೂವರೆ ವರ್ಷ ಕಳೆದ ನಂತರ ಕ್ರಮಕ್ಕೆ ಮುಂದಾಗಿದೆ. 42.31 ಎಕರೆ ಜಮೀನಿನ ಭೂ ಸ್ವಾಧೀನ ಪ್ರಕರಣದಲ್ಲಿ ಭೂ ಪರಿಹಾರ ಅವಾರ್ಡ್‌ ಪಾಸ್‌ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕಠಿಣ ಕ್ರಮಕೈಗೊಂಡಿಲ್ಲ. ಬದಲಿಗೆ 2023ರಿಂದ 2026ರವರೆಗೆ ಅಂದರೆ ಮೂರು ವರ್ಷಗಳಲ್ಲಿ ಕೇವಲ ಪತ್ರ, ನೆನಪೋಲೆಗಳನ್ನು ಬರೆದು ಕೈತೊಳೆದುಕೊಳ್ಳುತ್ತಿದೆಯೇ ವಿನಃ ಯಾವೊಬ್ಬ ಕಂದಾಯ ಅಧಿಕಾರಿಯ ವಿರುದ್ಧವೂ ಇದುವರೆಗೂ ಒಂದೇ ಒಂದು ಕ್ರಮವಾಗಿಲ್ಲ.

 

ಈ ಸಂಬಂಧ 2026ರ ಫೆಬ್ರುವರಿ 23ರಂದು ಕಂದಾಯ ಇಲಾಖೆಯ ಭೂ ಸ್ವಾಧೀನ ಶಾಖೆಯು ಉಪ ಕಾರ್ಯದರ್ಶಿಗೆ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ (ಆರ್‍‌ಡಿ 14 ಎಕ್ಯೂಬಿ 2024) ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಸಿಂಗೇನ ಅಗ್ರಹಾರ ಉಪ ಮಾರುಕಟ್ಟೆ ಪ್ರಾಂಗಣಕ್ಕೆ ಹೊಂದಿಕೊಂಡಂತಿರುವ ಗೂಳಿಮಂಗಲ ಗ್ರಾಮದ 42.31 ಎಕರೆ ಜಮೀನಿನ ಭೂ ಸ್ವಾಧೀನ ಪ್ರಕರಣ ಸಂಬಂಧ ಭೂ-ಪರಿಹಾರ ಅವಾರ್ಡ್‌ ಪಾಸ್‌ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಲಾಗಿದೆ. ಇದಕ್ಕೆ ಕಾರಣರಾದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು 2023ರ ನವೆಂಬರ್‍‌ 21 ಮತ್ತು 2024ರ ಮೇ 14ರಂದು ಸಹಕಾರ ಇಲಾಖೆಯು ಕಂದಾಯ ಇಲಾಖೆಯನ್ನು ಕೋರಿತ್ತು. ಆದರೆ ಇದುವರೆಗೂ ಇಲಾಖೆಯಿಂದ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿಯು ಸ್ವೀಕೃತವಾಗಿಲ್ಲ. ಅಲ್ಲದೇ ಈ ಪ್ರಕರಣವು ವಿಶೇಷ ಭೂಸ್ವಾಧೀನಾಧಿಕಾರಿಗಳ ವಿರುದ್ಧದ ಶಿಸ್ತುಕ್ರಮಕ್ಕೆ ಸಂಬಂಧಿಸಿದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿಯ ಗೂಳಿಮಂಗಲದಲ್ಲಿ ಉದ್ದೇಶಿತ ಹಣ್ಣು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಮೊತ್ತದ ಪೈಕಿ 123.23 ಕೋಟಿ ರು.ಗಳನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ಠೇವಣಿ ಮಾಡಲು ವಿಶೇಷ ಭೂ ಸ್ವಾಧೀನಾಧಿಕಾರಿಗಳು 2020ರ ಏಪ್ರಿಲ್‌ 26ರಂದು ಪತ್ರ ಬರೆದಿದ್ದರು.

 

 

ಈ ಪ್ರಕರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಕಂದಾಯ ಇಲಾಖೆಯ ‘ವ್ಯವಹಾರಸ್ಥ’ ಉನ್ನತ ಅಧಿಕಾರಿಗಳ ಒಂದು ಗುಂಪು ಕಾಯ್ದೆನುಸಾರ ಜಮೀನಿನ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸದೇ ಹಿಂದಿನ ಬಿಜೆಪಿ ಸರ್ಕಾರವನ್ನೇ ದಾರಿ ತಪ್ಪಿಸಿತ್ತು.

 

ಗೂಳಿಮಂಗಲ ಗ್ರಾಮದ ಸರ್ವೆ ನಂಬರ್‌ 69ರಿಂದ 146 ರವರೆಗಿನ ಒಟ್ಟು 42 ಎಕರೆ 31 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಕೋವಿಡ್‌ ಸಂದರ್ಭವನ್ನೇ ಬಳಸಿಕೊಂಡಿತ್ತು. ಅಲ್ಲದೇ ಪರಿಹಾರ ನಿಗದಿಯ ಪ್ರಸ್ತಾವನೆಗೆ ಅನುಮೋದನೆ ಪಡೆದುಕೊಳ್ಳಲು ಅಧಿಕಾರಿಗಳ ತರಾತುರಿ ವಹಿಸಿದ್ದರು.

 

ಬೆಂಗಳೂರು ವಿಶೇಷ ಭೂ ಸ್ವಾಧೀನಾಧಿಕಾರಿ ರಚಿಸಿರುವ ಐ ತೀರ್ಪಿನಲ್ಲಿ ಜಮೀನಿನ ಮಾರುಕಟ್ಟೆ ಮೌಲ್ಯವನ್ನು ಕಾಯ್ದೆ ಅನುಸಾರ ಲೆಕ್ಕಹಾಕಿ ನಿಗದಿಪಡಿಸದೇ ತಪ್ಪಾಗಿ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಿತ್ತು. ಇದರಿಂದಾಗಿ ಒಟ್ಟು ಐ ತೀರ್ಪಿನ ಮೊತ್ತ 125,35,35,551 ರು.ಗಳಿಗೆ ಹೆಚ್ಚಿರುವುದು ಕಂಡು ಬಂದಿದೆ.

 

ಈ ಪ್ರಕರಣದಲ್ಲಿ ನ್ಯಾಯಾಲಯಗಳಿಂದ ಯಾವುದೇ ತಡೆಯಾಜ್ಞೆ ಇರಲಿಲ್ಲ. ಆದರೂ ಸಹ ಪರಿಹಾರ ಧನದ ಐ ತೀರ್ಪನ್ನು ರಚಿಸುವಲ್ಲಿ ಅಧಿಕಾರಿಗಳು ವಿಳಂಬ ಎಸಗಿದ್ದೇ ಇದಕ್ಕೆ ಮೂಲ ಕಾರಣವಾಗಿತ್ತು.

 

ಪ್ರಕರಣದ ವಿವರ

 

ಸಿಂಗೇನ ಅಗ್ರಹಾರ ಉಪ ಮಾರುಕಟ್ಟೆ ವಿಸ್ತರಣೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪರವಾಗಿ 15 ವರ್ಷಗಳ ಹಿಂದೆಯೇ ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿಯ ಗೂಳಿಮಂಗಲ ಗ್ರಾಮದ 42-31 ಎಕರೆ ಜಮೀನನ್ನು ಗುರುತಿಸಲಾಗಿತ್ತು. 2007ರ ನವೆಂಬರ್‌ 22ರಿಂದ 2010ರ ನವೆಂಬರ್‌ 23ರವರೆಗೆ ಪ್ರತಿ ಗುಂಟೆಗೆ 1,46,508 ರು. ಮಾರಾಟದ ಬೆಲೆ ಎಂದೂ 4,53,80,750 ರು. ಮಾರಾಟದ ಮೌಲ್ಯವೆಂದು ಘೋಷವಾರೆ ಹೊರಡಿಸಿತ್ತು. 2010ರಲ್ಲಿ ಖುಷ್ಕಿ ಜಮೀನು ಪ್ರತಿ ಗುಂಟೆಗೆ 75,000 ರು.ಲೆಕ್ಕದಲ್ಲಿ ಪ್ರತಿ ಎಕರೆಗೆ 30.00 ಲಕ್ಷ ರು.ಮಾರ್ಗಸೂಚಿ ಬೆಲೆಯಾಗಿತ್ತು.

 

1894ರ ಭೂ ಸ್ವಾಧೀನ ಕಾಯ್ದೆಯನ್ವಯ ಒಟ್ಟು 21 ಕ್ರಯಗಳ ಪೈಕಿ ಅತೀ ಹೆಚ್ಚಿನ ಮೊತ್ತದ ಅರ್ಧದಷ್ಟು ವಹಿವಾಟುಗಳ ಸರಾಸರಿ ಮೌಲ್ಯವನ್ನು ಲೆಕ್ಕ ಹಾಕಿ ನಂತರ ಜಮೀನಿಗೆ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಬೇಕಿತ್ತು. ಆದರೆ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಒಟ್ಟು ಕ್ರಯ ವಹಿವಾಟುಗಳ ಪೈಕಿ 5 ವಹಿವಾಟುಗಳ ಅಂಕಿ ಅಂಶಗಳನ್ನು ಪರಿಗಣಿಸಿ ಖುಷ್ಕಿ ಜಮೀನಿನ ಪ್ರತಿ ಗುಂಟೆಗೆ 2,74,275 ರು.ಮಾರುಕಟ್ಟೆ ಮೌಲ್ಯವೆಂದು ನಿಗದಿಪಡಿಸಿರುವುದು ದಾಖಲೆಯಿಂದ ಗೊತ್ತಾಗಿದೆ.

 

 

ಆ ನಂತರ ಪ್ರಾದೇಶಿಕ ಆಯುಕ್ತರು ಈ ಮಾರುಕಟ್ಟೆ ಮೌಲ್ಯವನ್ನು ಪ್ರತಿ ಗುಂಟೆಗೆ 1,26,911 ರು.ಗಳಂತೆ ನಿಗದಿಪಡಿಸಿ ಒಟ್ಟು 42-31 ಎಕರೆ ಜಮೀನಿಗೆ ಆಡಳಿತ ವೆಚ್ಚ ಮತ್ತು ಆಡಿಟ್‌ ವೆಚ್ಚವನ್ನು ಹೊರತುಪಡಿಸಿ 52,75,84,333 ರು.ಗಳ ಐ ತೀರ್ಪು ರಚಿಸಿ ಸರ್ಕಾರಕ್ಕೆ ಕಳಿಸಿದ್ದರು. ಈ ಪೈಕಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 2,06,57,507 ರು.ಗಳನ್ನು ಮಾತ್ರ ಠೇವಣಿ ಮಾಡಿ ಉಳಿದ ಮೊತ್ತವನ್ನು ಠೇವಣಿ ಮಾಡಿರಲಿಲ್ಲ ಎಂಬುದು ತಿಳಿದು ಬಂದಿದೆ.

 

ಜಮೀನಿನ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕುವಾಗ 1894ರ ಭೂ ಸ್ವಾಧೀನ ಕಾಯ್ದೆಯನ್ವಯ ಲೆಕ್ಕ ಹಾಕಿರಲಿಲ್ಲ. ಕಾಯ್ದೆ ಅನುಸಾರ ಮಾರ್ಗಸೂಚಿ ಬೆಲೆ ಅಥವಾ ಮಾರಾಟದ ಸರಾಸರಿ ಮಾರುಕಟ್ಟೆ ಬೆಲೆ ಇವುಗಳಲ್ಲಿ ಯಾವುದು ಹೆಚ್ಚಾಗುತ್ತದೆಯೋ ಆ ಬೆಲೆಯನ್ನು ಮಾರುಕಟ್ಟೆ ಬೆಲೆ ಎಂದು ಪರಿಗಣಿಸಿ ಪ್ರತಿ ಗುಂಟೆಗೆ 1,54,547 ರು.( ಪ್ರತಿ ಎಕರೆಗೆ 61,88,047) ಎಂದು ನಿಗದಿಪಡಿಸಿತ್ತು.

 

ಇದರಂತೆ ಗೂಳಿಮಂಗಲ ಗ್ರಾಮದ ಸರ್ವೆ ನಂಬರ್‌ 69ರಿಂದ 106/2ರಲ್ಲಿನ ಒಟ್ಟು 42.31 ಎಕರೆಗೆ(ಪ್ರತಿ ಗುಂಟೆಗೆ 1,54,547 ರು.ರಂತೆ) ಒಟ್ಟು 26,44,29,917 ರು.ಗಳಾಗಿತ್ತು. ಇದಕ್ಕೆ ಶೇ.30ರಷ್ಟು ಸಾಂತ್ವನ ಪರಿಹಾರ ಧನವೆಂದು 7,93,28,975 ರು. ಸೇರಿಸಲಾಗಿತ್ತು. ಈ ಐ ತೀರ್ಪನ್ನು ರದ್ದುಪಡಿಸುವಂತೆ ಕೋರಿದ್ದ ಭೂ ಮಾಲೀಕರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.(11298,10876/2005) ಈ ಬಗ್ಗೆ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿ ಹೊಸದಾಗಿ ಐ ತೀರ್ಪು ರಚಿಸಿಬೇಕು ಎಂದು 2010ರ ನವೆಂಬರ್‌ 22ರಂದು ಆದೇಶಿಸಿದ್ದ ಹೈಕೋರ್ಟ್‌ 2005ರ ಮಾರ್ಚ್‌ 3ರಂದು ಘೋಷಿಸಿದ್ದ ಐ ತೀರ್ಪನ್ನು ರದ್ದುಗೊಳಿಸಿತ್ತು.

 

‘2010ರ ನವೆಂಬರ್‌ 22ರಂದು ಹೈಕೋರ್ಟ್‌ ನೀಡಿದ್ದ ತೀರ್ಪಿನ ಪ್ರಕಾರ ವಿಶೇಷ ಭೂ ಸ್ವಾಧೀನಾಧಿಕಾರಿ ಪರಿಹಾರ ಧನದ ಐ ತೀರ್ಪನ್ನು ರಚಿಸಿದ್ದರೆ 2020ರ ಮೇ 16ರವರೆಗಿನ(ಪ್ರತಿ ದಿನಕ್ಕೆ 86,936 ರಂತೆ) ಒಟ್ಟು 3462 ದಿನಗಳಿಗೆ ತಗಲುವ ಶೇ.12ರ ಹೆಚ್ಚುವರಿ ಮಾರುಕಟ್ಟೆ ಮೌಲ್ಯ 30,09,72,432 ರು.ಗಳ ಆರ್ಥಿಕ ಹೊರೆಯನ್ನು ತಪ್ಪಿಸಬಹುದಾಗಿತ್ತು,’ ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಇದಷ್ಟೇ ಅಲ್ಲ ಇದೇ ರಿಟ್‌ ಪ್ರಕರಣದಲ್ಲಿ 2010ರ ನವೆಂಬರ್‌ 22ರಂದು ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಭೂ ಮಾಲೀಕರು ದಾಖಲಿಸಿದ್ದ ಮೇಲ್ಮನವಿ (33-34/2011) ಮತ್ತು ಇತರೆ ಪ್ರಕರಣಗಳಲ್ಲಿ 2011ರ ಸೆಪ್ಟಂಬರ್‌ 5ರಂದು ನೀಡಿದ್ದ ಆದೇಶದಲ್ಲಿ ಪ್ರಕರಣವನ್ನು ವಜಾಗೊಳಿಸಲಾಗಿತ್ತು. ಹಾಗೆಯೇ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿತ್ತು.

 

ಆರ್ಥಿಕ ಹೊರೆ ತಪ್ಪಿಸಬಹುದಿತ್ತು!

 

ಈ ಹಂತದಲ್ಲಿಯೂ ವಿಶೇಷ ಭೂ ಸ್ವಾಧೀನಾಧಿಕಾರಿ ವಿಳಂಬ ಧೋರಣೆಯನ್ನು ಅನುಸರಿಸದೇ 2011ರ ಸೆ.5ರ ತೀರ್ಪಿನ ಪ್ರಕಾರವೇ ಪರಿಹಾರ ಧನದ ಐ ತೀರ್ಪುನ್ನು ರಚಿಸಿದ್ದರೆ 2020ರ ಮಾರ್ಚ್‌ 16ರವರೆಗೆ ಸುಮಾರು 2800 ದಿನಗಳಿಗೆ ತಗಲುವ ಶೇ.12ರ ಹೆಚ್ಚುವರಿ ಮಾರುಕಟ್ಟೆ ಮೌಲ್ಯ( ಪ್ರತಿ ದಿನಕ್ಕೆ 86,936ರಂತೆ) 24,34,20,800 ರು.ಗಳ ಆರ್ಥಿಕ ಹೊರೆ ತಪ್ಪಿಸಬಹುದಾಗಿತ್ತು.

 

 

 

2011ರ ಸೆ. 5ರಂದು ನೀಡಿದ್ದ ಆದೇಶದ ವಿರುದ್ಧ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ 2010ರ ನವೆಂಬರ್‌ 22ರಂದು ನೀಡಿದ್ದ ತೀರ್ಪನ್ನು ಮಾನ್ಯ ಮಾಡಿತ್ತಲ್ಲದೆ 2017ರ ಏಪ್ರಿಲ್‌ 17ರಂದು ಎಪಿಎಂಸಿಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತ್ತು.

 

ಈ ಆದೇಶದ ನಂತರ ವಿಳಂಬ ಮಾಡದೇ ಪರಿಹಾರ ಧನದ ಐ ತೀರ್ಪು ರಚಿಸಿದ್ದರೆ 2020ರ ಮೇ 16ರವರೆಗಿನ ಸುಮಾರು 1125 ದಿನಗಳಿಗೆ (ಪ್ರತಿ ದಿನಕ್ಕೆ 86936) ತಗಲುವ ಶೇ.12ರ ಹೆಚ್ಚುವರಿ ಮಾರುಕಟ್ಟೆ ಮೌಲ್ಯ ಒಟ್ಟು 9,78,03,000 ರು.ಗಳ ಆರ್ಥಿಕ ಹೊರೆ ತಪ್ಪಿಸಬಹುದಾಗಿತ್ತು ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಸದ್ಯ ಸಹಕಾರ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಭಾಯಿಸುತ್ತಿದ್ದಾರೆ. ಕೆ ಎನ್ ರಾಜಣ್ಣ ಅವರು ಸಹಕಾರ ಇಲಾಖೆಯಿಂದ ನಿರ್ಗಮಿಸಿದ ನಂತರವೂ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನಹರಿಸಿಲ್ಲ.  ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸಚಿವ ಕೃಷ್ಣಬೈರೇಗೌಡ ಅವರೂ ಸಹ ಬಿಗಿಯಾದ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದೆ.

ಎಪಿಎಂಸಿ ಮಳಿಗೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ; ಪೂರ್ವ ನಿರ್ಧರಿತ ವ್ಯವಹಾರ, ಲಂಚಗುಳಿತನಕ್ಕಿಲ್ಲ ಕಡಿವಾಣ

ಸಿಂಗೇನ ಅಗ್ರಹಾರ ಉಪ ಮಾರುಕಟ್ಟೆಯಲ್ಲಿ ಮಳಿಗೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಸರ್ಕಾರಕ್ಕೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಈ ಕುರಿತು ‘ದಿ ಫೈಲ್‌’ 2025ರ ಜುಲೈ 5ರಂದೇ ವರದಿ ಪ್ರಕಟಿಸಿತ್ತು.

Hot this week

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...
Please Scan to make Your Contribution

Topics

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

Related Articles

Popular Categories

error: Content is protected !!