Thursday | May 21, 2026 |

ಗಂಗಮ್ಮ ಶೈಕ್ಷಣಿಕ ಟ್ರಸ್ಟ್‌ಗೆ 41.50 ಕೋಟಿ ಸಾಲ; ಮೌಲ್ಯಮಾಪನ ವರದಿ ಪಡೆಯದ ಅಪೆಕ್ಸ್‌ ಬ್ಯಾಂಕ್

ಬೆಂಗಳೂರು; ನವೀಕರಣ ಸಾಲ ಒಪ್ಪಂದಕ್ಕೆ ಸಹಿ ಇರದೇ ಇರುವುದು ಮತ್ತು ಷರತ್ತುರಹಿತ ಖಾತರಿ ಪಡೆಯದೇ  ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌, ಗಂಗಮ್ಮ ಶೈಕ್ಷಣಿಕ ಟ್ರಸ್ಟ್‌ಗೆ  41.50 ಕೋಟಿ ರು ಸಾಲ ನೀಡಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.

 

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ 2024-25ನೇ ಸಾಲಿಗೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕ ಪರಿಶೋಧನೆ ವರದಿಯು, ದೊಡ್ಡ ಪ್ರಮಾಣದ ಸಾಲಗಳನ್ನು ಮಂಜೂರಾತಿಯ ಹಿಂದಿನ ಎಲ್ಲಾ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆಗಳನ್ನು ಬಯಲು ಮಾಡಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಗಂಗಮ್ಮ ಶೈಕ್ಷಣಿಕ ಟ್ರಸ್ಟ್‌, ಅಪೆಕ್ಸ್‌ ಬ್ಯಾಂಕ್‌ನಲ್ಲಿ ಹೊಂದಿದ್ದ ಅವಧಿ ಸಾಲ ಖಾತೆ (ಸಂಖ್ಯೆ 50755/43, 186/98/9) ಗೆ 2018ರ ಮಾರ್ಚ್‌ 7ರಂದು 41.50 ಕೋಟಿ ರು ಸಾಲ ಮಂಜೂರು ಮಾಡಿತ್ತು. ಆದರೆ ಈ ಟ್ರಸ್ಟ್‌ನ ಹೊರಬಾಕಿಯೇ 41.96 ಕೋಟಿಯಷ್ಟಿತ್ತು. ಆದರೂ ಹೊಸದಾಗಿ 41.50 ಕೋಟಿ ರು ಸಾಲ ಮಂಜೂರಾಗಿತ್ತು ಎಂಬುದು ಲೆಕ್ಕ ಪರಿಶೋಧನಾ ವರದಿಯಿಂದ ತಿಳಿದು ಬಂದಿದೆ.

 

 

ಈ ಯೋಜನಾ ಸಾಲವನ್ನು ನವೀಕರಿಸಿದ್ದ ಅಪೆಕ್ಸ್‌ ಬ್ಯಾಂಕ್‌, ದಾಖಲೆಗಳನ್ನು ಕ್ರಮಬದ್ಧವಾಗಿ ಪರಿಶೀಲಿಸಿರಲಿಲ್ಲ. ಶಾಖಾ ವ್ಯವಸ್ಥಾಪಕರು ನವೀಕರಣ ಸಾಲ ಒಪ್ಪಂದಕ್ಕೆ ಸಹಿ ಮಾಡಿರಲಿಲ್ಲ. ಟ್ರಸ್ಟಿಗಳಿಂದ ಹಿಂಪಡೆಯಲಾಗದ ಮತ್ತು ಷರತ್ತುರಹಿತ ಖಾತರಿಗಳನ್ನು ಪಡೆದಿರಲಿಲ್ಲ. ಸ್ವತ್ತಿನ ಅಫಿಡೆವಿಟ್‌ ಸಂಗ್ರಹಿಸಿರಲಿಲ್ಲ. ಸಾಲಕ್ಕೆ ಅಡಮಾನ ಮಾಡಿದ ಸ್ವತ್ತುಗಳಿಗೆ ಸಂಬಂಧಿಸಿದಂತೆ 2025ರ ಜನವರಿ 21ರಿಂದ 2025ರ ಮಾರ್ಚ್‌ 11ರವರೆಗೆ ಋಣಭಾರರಾಹಿತ್ಯ ಪ್ರಮಾಣಪತ್ರಗಳನ್ನು ಪಡೆದಿರಲಿಲ್ಲ.

 

 

ಕಡತದಲ್ಲಿ ಲಭ್ಯವಿದ್ದ ಪ್ರಕಾರ 2023ರ ಮಾರ್ಚ್‌ 24ರಂದು ಮೌಲ್ಯಮಾಪನ ವರದಿ ಪಡೆದಿತ್ತು. ಆದರೆ ಇತ್ತೀಚಿನ ಮೌಲ್ಯಮಾಪನ ವರದಿಯನ್ನು ಪಡೆದಿರಲಿಲ್ಲ. ಅದೇ ರೀತಿ 2024-25ನೇ ಸಾಲಿಗೆ ಸಂಬಂಧಿಸಿದಂತೆ ಭದ್ರತೆಯಾಗಿ ನೀಡಿದ್ದ ಸ್ವತ್ತುಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ತೆರಿಗೆ ಪಾವತಿ ರಸೀದಿಗಳನ್ನು ಪಡೆದಿರಲಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

 

 

ಇನ್ನು ಅವಧಿ ಸಾಲಕ್ಕೆ ಸಂಬಂಧಿಸಿದಂತೆ ಮುಕ್ತಾಯದ ಪ್ರಮಾಣಪತ್ರ ಪಡೆಯದ ಅಪೆಕ್ಸ್‌ ಬ್ಯಾಂಕ್‌, ಬ್ಯಾಂಕ್‌ ದಾಖಲೆಗಳಲ್ಲಿ ಕಂಡು ಬರುವಂತೆ ಎಸ್ಕ್ರೋ ಖಾತೆಯಲ್ಲಿ ಯಾವುದೇ ವ್ಯವಹಾರಗಳು ನಡೆದಿರಲಿಲ್ಲ. ಪ್ರಸಕ್ತ ವರ್ಷದಲ್ಲಿ ಅನುತ್ಪಾದಕ ಆಸ್ತಿಯಾಗಿ ವರ್ಗೀಕರಣಗೊಂಡಿತ್ತು. ಹೀಗಾಗಿ ಭದ್ರತೆಗಳ ಮೌಲ್ಯಮಾಪನಕ್ಕೆ ಸಂಬಂಧಪಟ್ಟಂತೆ ಬಳಕೆಯಾದ ಮೊತ್ತದ ಮೌಲ್ಯವನ್ನು ಅಂದರೆ ಶೇ. 25ರಷ್ಟನ್ನು ಮಾತ್ರ ಪರಿಗಣಿಸಬೇಕಿತ್ತು.

 

ಭದ್ರತೆಯಾಗಿ ನೀಡಿದ್ದ ಸ್ಥಿರಾಸ್ತಿಗಳ ಮೌಲ್ಯವು 89.13 ಕೋಟಿಗಳಾಗಿದ್ದು ಫೋರ್‍ಸ್‌ ಮಾರಾಟ ಮೌಲ್ಯವು 63.20 ಕೋಟಿ ರುಗಳಾಗಿತ್ತು. ಪ್ರಸ್ತುತ ಅವಧಿ ಸಾಲದ ಮೊತ್ತ 25 ಕೋಟಿಗಳು, ಹೊಸ ಮೀರೆಳೆತ ಸಾಲದ ಮೊತ್ತವು 41.50 ಕೋಟಿ ರು. ಇತ್ತು. ಹೀಗಾಗಿ ಒಟ್ಟು ಸಾಲದ ಮೊತ್ತಕ್ಕಿಂತ ಭದ್ರತೆಗಳ ಮೌಲ್ಯವು ಶೇ. 150ರಷ್ಟು ಇರುವುದಿಲ್ಲ. ಮೌಲ್ಯಮಾಪನ ವರದಿ ಪ್ರಕಾರ ಕಟ್ಟಡದ ಮೌಲ್ಯವು 67.10 ಕೋಟಿ ರು.ಗಳಾಗಿದ್ದು, ಶೇ. 10ರಷ್ಟು ಸವಕಳಿ ತೆಗೆದ ನಂತರ ಉಳಿದ ಮೌಲ್ಯವು 56.50 ಕೋಟಿ ರು.ಗಳಾಗಿರುತ್ತದೆ. ಹೀಗಾಗಿ ನವೀಕರಣ ಪ್ರಕ್ರಿಯೆಯು ಭದ್ರತೆಯ ಅನುಗುಣವಾಗಿ ಇರಲಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಎಂಎಂಜಿ ಸ್ಕೈರ್‍‌ಗೆ 50 ಕೋಟಿ

 

ನಿರ್ದೇಶಕರ ನಿವ್ವಳ ಸಂಪತ್ತು ಪ್ರಮಾಣ ಪತ್ರ ಮತ್ತು ಆದಾಯ ತೆರಿಗೆ ರಿಟರ್ನ್ಸ್‌ ಒದಗಿಸದೇ ಇದ್ದರೂ ಸಹ ಎಂ ಎಂ ಜಿ ಸ್ಕೈರ್‍‌ ಎಲ್‌ ಎಲ್ ಪಿ ಗೆ 50 ಕೋಟಿ ರು ಸಾಲವನ್ನು ಮಂಜೂರು ಮಾಡಿರುವುದನ್ನೂ ಸಹ ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

 

 

ಎಂ ಎಂ ಜಿ ಸ್ಕೈರ್‍‌, ಸಾಲವನ್ನು ಮರು ಪಾವತಿಸಲು ಸಾಮರ್ಥ್ಯ ಹೊಂದಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸಲು ಸಂಭವನೀಯ ನಗದು ಹರಿವಿನ ತಃಖ್ತೆಯನ್ನೇ ಅಪೆಕ್ಸ್‌ ಬ್ಯಾಂಕ್‌ ಪಡೆದಿರಲಿಲ್ಲ. ಮಂಜೂರಾತಿ ಪತ್ರದ ನಿಯಮ ಸಂಖ್ಯೆ 7(ಎ) ಕ್ರಮ ಸಂಖ್ಯೆ 8ರಲ್ಲಿ ನಮೂದಿಸಿದ್ದ ಪ್ರಕಾರ ಸ್ವತ್ತಿನ ಸಂಖ್ಯೆ 3421/ಎ ಅಡಮಾನ ಮಾಡಿಕೊಟ್ಟಿಲ್ಲ. ಅಥವಾ ಅಡಮಾನ ಮಾಡಿಕೊಡುವುದಾಗಿ ಹೇಳಿದ್ದ ಒಪ್ಪಂದ ಪತ್ರವನ್ನೂ ಸಲ್ಲಿಸಿಲ್ಲ. ಇ-ಸ್ವತ್ತು ದಾಖಲೆಗಳು ಲಭ್ಯವಿರಲಿಲ್ಲ. ಆದರೂ 50 ಕೋಟಿ ರು ಸಾಲವನ್ನು ಅಪೆಕ್ಸ್‌ ಬ್ಯಾಂಕ್ ಮಂಜೂರು ಮಾಡಿತ್ತು.

 

 

ಹಾಗೆಯೇ ನಿರ್ದೇಶಕರ ನಿವ್ವಳ ಸಂಪತ್ತು ಪ್ರಮಾಣ ಪತ್ರ ಮತ್ತು ಆದಾಯ ತೆರಿಗೆ ರಿರ್ಟನ್ಸ್‌ ಒದಗಸಿರಲಿಲ್ಲ. ಮಂಜೂರಾತಿ ಪತ್ರದ ನಿಯಮಗಳ ಪ್ರಕಾರ ಮಂಜೂರಾದ ಸಾಲ ಮೊತ್ತದ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಗೃಹ ಸಹಕಾರಿ ಸಂಘಗಳಿಂದ ಕಾರ್ಯಾದೇಶದ ಪ್ರತಿ ಅವಶ್ಯಕವಾಗಿತ್ತು. ಆದರೆ ಇದರ ಪ್ರತಿಯನ್ನೂ ಅಪೆಕ್ಸ್‌ ಬ್ಯಾಂಕ್‌, ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

 

 

 

ದುಡಿಯುವ ಬಂಡವಾಳ ಸಾಲದ ಒಡಂಬಡಿಕೆಯಲ್ಲಿ ಶಾಖಾ ವ್ಯವಸ್ಥಾಪಕರು ಮತ್ತು ಸಾಲಗಾರ ಕಂಪನಿಯ ಪರವಾಗಿ ಅಧಿಕೃತವಾಗಿ ಸಹಿ ಮಾಡಲು ಅಧಿಕಾರ ಇದ್ದರೂ ಸಹ ಜಯರಾಮ್‌ ಅವರು ಸಹಿಯನ್ನೇ ಮಾಡಿಲ್ಲ. ಜತೆಗೆ ನಿರ್ದೇಶಕರ ಒಪ್ಪಂದ ಪತ್ರದಲ್ಲಿ ಶಾಖಾ ವ್ಯವಸ್ಥಾಪಕರ ಸಹಿ ಮತ್ತು ಸೀಲು ಸಹ ಇರಲಿಲ್ಲ. ಅಡಮಾನ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಇರುವ ಒಪ್ಪಂದ ಪತ್ರಕ್ಕೂ ಶಾಖಾ ವ್ಯವಸ್ಥಾಪಕರ ಸಹಿ ಮತ್ತು ಸೀಲು ಇರಲಿಲ್ಲ. ಮಂಜೂರಾತಿ ಪತ್ರದ ನಿಯಮ ಸಂಖ್ಯೆ 11ರ ಪ್ರಕಾರ ಸಂಸ್ಥೆಯ ನಿರ್ದೇಶಕರಿಂದ ಅವಶ್ಯವಿರುವ ಅಫಿಡೆವಿಟ್‌ನ್ನೂ ಪಡೆದಿರಲಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ರಾಹುಲ್‌ ಗೌಡ ಎಂಬುವರಿಗೂ 2021ರಲ್ಲಿ 5 ಕೋಟಿ ರು ಸಾಲ ಮಂಜೂರು ಮಾಡಿದ್ದ ಅಪೆಕ್ಸ್‌ ಬ್ಯಾಂಕ್‌, ಇತ್ತೀಚಿನ ಆದಾಯ ತೆರಿಗೆ ರಿಟರ್ನ್ಸ್‌, ನಗದು ಹರಿವಿನ ತಃಖ್ತೆಗಳು ಅಥವಾ ನಿರ್ವಹಣಾ ದಾಖಲಾತಿಗಳನ್ನು ಲಭ್ಯವಾದ ನಿಧಿಗೆ ಪಡೆದುಕೊಂಡಿರಲಿಲ್ಲ. ಅಲ್ಲದೇ ಈ ಸಾಲದ ಖಾತೆಯು 2024ರ ಮಾರ್ಚ್‌ 31ರವರೆಗೆ ಉತ್ತಮ ಖಾತೆಯಾಗಿತ್ತು. ನಂತರದ ತಕ್ಷಣವೇ ಅಂದರೇ 2024 ಏಪ್ರಿಲ್‌ 4ರಂದು ಅನುತ್ಪಾದಕ ಆಸ್ತಿಯಾಗಿ ಪರಿವರ್ತಿತವಾಗಿತ್ತು ಎಂಬುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.

 

 

ಕರ್ನಾಟಕ ರಾಜ್ಯ ಸಹಕಾರ ನಗರ ಬ್ಯಾಂಕ್‌ಗಳ ಮಹಾಮಂಡಳಕ್ಕೆ 2021ರಲ್ಲಿ ಅಪೆಕ್ಸ್‌ ಬ್ಯಾಂಕ್‌, 5 ಕೋಟಿ ರು ಸಾಲ ನೀಡಿತ್ತು. ಈ ಪ್ರಕರಣದಲ್ಲಿಯೂ ಇತ್ತೀಚಿನ ಆದಾಯ ತೆರಿಗೆ ರಿಟರ್ನ್ಸ್‌, ನಗದು ಹರಿವಿನ ತಃಖ್ತೆಗಳ ಮಾಹಿತಿಗಳು ಕಡತದಲ್ಲಿ ಲಭ್ಯವಿರಲಿಲ್ಲ.

 

 

ಈ ವಿವರಗಳು ಲಭ್ಯವಾಗದ ಕಾರಣ, ಸಾಲಗಾರರ ಮರು ಪಾವತಿ ಸಾಮರ್ಥ್ಯವನ್ನು ಮತ್ತು ಸಮರ್ಥನೀಯತೆಯನ್ನು ವಿಮರ್ಶಿಸಲು ಲೆಕ್ಕ ಪರಿಶೋಧಕರಿಗೆ ಸಾಧ್ಯವಾಗಿಲ್ಲ. ಅನಿಯಮಿತ ವಹಿವಾಟಿನಿಂದಾಗಿ ವರದಿ ದಿನಾಂಕವೂ ಸೇರಿದಂತೆ ಈ ಸಾಲದ ಖಾತೆಯು ನಿರಂತರವಾಗಿ ಸುಸ್ತಿ ಬಾಕಿಯಾಗಿದೆ.

Hot this week

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...
Please Scan to make Your Contribution

Topics

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

Related Articles

Popular Categories

error: Content is protected !!