ಬೆಂಗಳೂರು; ವಿವಾದಿತ ಭೂಮಿಯ ಮಾಲೀಕರಾಗಿರುವ ದವನಂ ಕನ್ಸ್‌ಟ್ರಕ್ಷನ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಅಂದಾಜು 150 ಕೋಟಿ ರು ಮೌಲ್ಯದ ಟಿಡಿಆರ್ ನೀಡುವುದಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಅರ್ಥಿಕ ಮತ್ತು ವಸತಿ ಇಲಾಖೆಯು ನೀಡಿದ್ದ ಸ್ಪಷ್ಟ ಅಭಿಪ್ರಾಯಕ್ಕೆ ವಿರುದ್ಧವಾಗಿ ಆದೇಶಿಸಿರುವುದು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ಗೌಸ್ ಲ್ಯಾಂಡ್ ಪ್ರಕರಣದಲ್ಲಿ ನ ಪ್ರಕರಣದಲ್ಲಿ ಟಿಡಿಆರ್ ನೀಡಿದರೆ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿತ್ತು. ಆದರೆ ಅಭಿಪ್ರಾಯವನ್ನು ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ತಳ್ಳಿ ಹಾಕಿದ್ದಾರೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಂದ ಸಾಲ ಪಡೆದಿರುವ ದವನಂ ಕನ್ಸ್‌ಟ್ರಕ್ಷನ್ಸ್ ಪ್ರೈ ಲಿ, ಗೌಸ್ ಲ್ಯಾಂಡ್‌ನಲ್ಲಿ ಸ್ವಾಧೀನದಲ್ಲಿ ಇಲ್ಲ. ಆದರೂ ಸಹ ಟಿಡಿಆರ್ ನೀಡಲು ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಆದೇಶವು, ಟಿಡಿಆರ್ ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಈ ಸಂಬಂಧ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಆದೇಶಿಸಿರುವ ಟಿಪ್ಪಣಿ ಹಾಳೆಯು ‘ದಿ ಫೈಲ್’ಗೆ ಲಭ್ಯವಾಗಿದೆ.
ದವನಂ ಕನ್ಸ್‌ಟ್ರಕ್ಷನ್ಸ್ ಪ್ರಕರಣದಲ್ಲಿ ಟಿಡಿಆರ್ ನೀಡುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಪ್ರಕ್ರಿಯೆಗಳು ಆರಂಭವಾಗಿದ್ದವು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ತೀರ್ಮಾನ ಹೊರಬಿದ್ದಿರಲಿಲ್ಲ. ಆದರೀಗ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಟಿಡಿಆರ್ ನೀಡುವ ಸಂಬಂಧ 2024ರ ಜೂನ್ ಮತ್ತು ಜುಲೈನಲ್ಲೇ ಆದೇಶ ಹೊರಡಿಸಲು ಸೂಚಿಸಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜಮೀರ್ ಅಹ್ಮದ್ ಖಾನ್ ರ ಆದೇಶದ ಟಿಪ್ಪಣಿಯಲ್ಲೇನಿದೆ?
ಈ ಕಡತವನ್ನು ಕೂಲಂಕುಷವಾಗಿ ಅವಗಾಹಿಸಲಾಗಿದೆ. ಬೆಂಗಳೂರು ನಗರದ ಗಾಂಧಿನ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೌಸ್ ಲ್ಯಾಂಡ್ ಓಕಳಿಪುರಂನಲ್ಲಿರುವ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶದ ಪೈಕಿ ಸಿಟಿಎಸ್ ನಂ 1297/4ರಲ್ಲಿನ 0-33 ಗುಂಟೆ (3388.66 ಚ. ಮೀ) ಜಾಗವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಕೊಳಚೆ ಪ್ರದೇಶವೆಂದು ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಸ್ವತ್ತಿನ ಮಾಲೀಕರು ಸಹ ಒಪ್ಪಿದ್ದಾರೆ. ಇದಕ್ಕೆ ಪರಿಹಾರವನ್ನು ಸರ್ಕಾರದಿಂದ ನೀಡಬೇಕಿರುತ್ತದೆ.
ಈಗಾಗಲೇ 2021ರ ಅಕ್ಟೋಬರ್ 7ರಂದು ಸರ್ಕಾರ ಹೊರಡಿಸಿರುವ ವಿಶೇಷ ರಾಜ್ಯಪತ್ರಿಕೆಯಲ್ಲಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧಿನಿಯಮ 21ರಲ್ಲಿರುವ ಆದೇಶದ ಅನ್ವಯ ನಿಯಮದಂತೆ ಮಂಡಳಿಯ ಸಭೆಯಲ್ಲಿ ಮಂಡಿಸಿ ಅನಮೋದನೆ ಪಡೆದುಕೊಂಡಿರುವುದನ್ನು ಸಹ ಗಮನಿಸಿರುತ್ತೇನೆ. ಹಾಗೂ ಸರ್ಕಾರದ ಹಂತದಲ್ಲಿ ಆರ್ಥಿಕ, ಕಾನೂನು ಇಲಾಖೆಯ ಅಭಿಪ್ರಾಯ ತೆಗೆದುಕೊಂಡಿರುವುದನ್ನು ಸಹ ಗಮನಿಸಿದ್ದೇನೆ.
‘ಆರ್ಥಿಕ ಇಲಾಖೆಯು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುವುದಾಗಿ ಭಾವಿಸಿರುತ್ತಾರೆ’. ಆದರೆ ಭೂ ಮಾಲೀಕರು ಬಿಟ್ಟುಕೊಟ್ಟಿರುವ ಜಾಗಕ್ಕೆ ಪರಿಹಾರ ರೂಪದಲ್ಲಿ ಟಿಡಿಆರ್ ಮುಖಾಂತರ ಪರಿಹಾರ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಗೂ 2021ರ ಅಧಿಸೂಚನೆಯಂತೆ ಸರ್ಕಾರದ ಉಪಯೋಗಕ್ಕೆ ಖಾಸಗಿ ಜಮೀನಿನ ಮಾಲೀಕರು ಜಾಗವನ್ನು ಬಿಟ್ಟುಕೊಟ್ಟಲ್ಲಿ ಸರ್ಕಾರದಿಂದ ಪರಿಹಾರ ನೀಡಬೇಕಿರುತ್ತದೆ. ಹಾಗೂ ಅವರು ಕೋರುತ್ತಿರುವುದು ಟಿಡಿಆರ್.
‘ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುತ್ತಿಲ್ಲವಾದ್ದರಿಂದ ಈ ಖಾಸಗಿ ಭೂ ಮಾಲೀಕರಿಗೆ ಪರಿಹಾರ ರೂಪದಲ್ಲಿ ಇಲಾಖೆಯಿಂದ ಟಿಡಿಆರ್ ಆದೇಶ ಹೊರಡಿಸಬೇಕು,’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಆದೇಶಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಯಾವುದೇ ಆಸ್ತಿಯನ್ನು ಸರ್ಕಾರವು ಭೂ ಸ್ವಾಧೀನಪಡಿಸಿಕೊಳ್ಳುವಾಗ ಆಸ್ತಿಯ ಮಾಲೀಕರಿಗೆ ಭೂ ಪರಿಹಾರ ನೀಡುತ್ತದೆ. ಈ ಭೂ ಪರಿಹಾರ ಧನ ರೂಪದಲ್ಲಿ ಅಥವಾ ಟಿಡಿಆರ್ ರೂಪದಲ್ಲಿ ನೀಡುವ ಅವಕಾಶವಿದೆ. ಆದರೆ ಜಮೀನಿನ ಮಾಲೀಕರು ಸರ್ಕಾರಕ್ಕೆ ಹಸ್ತಾಂತರಿಸಿದಲ್ಲಿ ಮಾತ್ರ ಭೂ ಪರಿಹಾರ ನೀಡಬಹುದು.
ಆದರೆ ದವನಂ ಕನ್ಸ್‌ಟ್ರಕ್ಷನ್ಸ್ ಹಕ್ಕು ಸಾಧಿಸುತ್ತಿರುವ ಗೌಸ್ ಲ್ಯಾಂಡ್ ಜಮೀನಿನಲ್ಲಿ ಕೊಳಗೇರಿ ನಿವಾಸಿಗಳು ವಾಸವಿದ್ದಾರೆ. ಅವರನ್ನು ಅಲ್ಲಿಂದ ಖಾಲಿ ಮಾಡಿಸಲು ದವನಂ ಸಂಸ್ಥೆಗೆ ಸಾಧ್ಯವಿಲ್ಲ. ಮೇಲಾಗಿ ಆ ಸ್ಥಳವೂ ಸದ್ಯ ದವನಂ ಕಂಪನಿಯ ಸ್ವಾಧೀನದಲ್ಲಿಯೂ ಇಲ್ಲ. ಅಲ್ಲದೇ ಆ ಸ್ಥಳವನ್ನು ದವನಂ ಕಂಪನಿಯಿಂದ ಹಸ್ತಾಂತರಿಸಿಕೊಳ್ಳಲೂ ಸಹ ಕೊಳಗೇರಿ ನಿರ್ಮೂಲನಾ ಮಂಡಳಿಗೂ ಸಾಧ್ಯವಿಲ್ಲ. ಹೀಗಾಗಿ ಈ ಜಮೀನು ವಿವಾದಿತ ಜಮೀನು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಹಾಗೆಯೇ ಆ ಸ್ಥಳವನ್ನು ಅಭಿವೃದ್ದಿಪಡಿಸಿದಾಗ ಅಲ್ಲಿ ವಾಸವಿರುವ ಕೊಳಗೇರಿ ನಿವಾಸಿಗಳಿಗೆ ಭೂ ಪರಿಹಾರವನ್ನು ಆರ್ಥಿಕ ರೂಪದಲ್ಲಾಗಲೀ ಅಥವಾ ಅಭಿವೃದ್ಧಿಗೊಂಡ ನಿರ್ಮಾಣದಲ್ಲಿ ವಾಸಕ್ಕೆ ಮನೆ ನೀಡುವ ಮೂಲಕವಾಗಲೀ ಸರ್ಕಾರ ನೀಡಲೇಬೇಕಿದೆ. ಹೀಗಿರುವಾಗ ಇದೇ ಜಮೀನಿಗೆ ಇನ್ನೊಮ್ಮೆ ದವನಂ ಸಂಸ್ಥೆಗೂ ಟಿಡಿಆರ್ ನೀಡುವುದು ಸಾಧ್ಯವಿಲ್ಲ.
ಆದರೂ ಒಂದೇ ಆಸ್ತಿಗೆ ಎರಡು ಬಾರಿ ಭೂಪರಿಹಾರ ನೀಡಲು ಸರ್ಕಾರ ಹೊರಟಿದೆ. ಇದಲ್ಲದೇ ಸ್ವಾಧೀನದಲ್ಲಿರುವ ಕೊಳಗೇರಿ ನಿವಾಸಿಗಳನ್ನು ಸ್ಥಳಾಂತರ ಕೂಡ ಮಾಡಿಲ್ಲ. ಆದರೂ ದವನಂ ಸಂಸ್ಥೆಯು ಟಿಡಿಆರ್ ಮೂಲಕ ಭೂ ಪರಿಹಾರ ಕೋರಿದೆ. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಮತ್ತು ವಸತಿ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಅಭಿಪ್ರಾಯ ನೀಡಿದ್ದಾರೆ. ಆದರೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಈ ಎರಡೂ ಇಲಾಖೆಗಳು ನೀಡಿರುವ ಸ್ಪಷ್ಟ ಅಭಿಪ್ರಾಯಕ್ಕೆ ವಿರುದ್ಧವಾಗಿ ಆದೇಶ ಹೊರಡಿಸಲು ಸೂಚಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
‘ದವನಂ ಕನ್ಸ್‌ಟ್ರಕ್ಷನ್ಸ್ ಪ್ರೈವೈಟ್ ಲಿಮಿಟೆಡ್ ಡಿ ಕೆ ಶಿವಕುಮಾರ್ ಅವರ ಕೃಪಾಪೋಷಿತ ಕಂಪನಿ. ಈ ಹಿಂದೆ ಓಕಳಿಪುರಂ ಜಂಕ್ಷನ್‌ನಲ್ಲಿ 4.36 ಎಕರೆ ಖರಾಬು ಜಮೀನು, ಸ್ಮಶಾನ ಭೂಮಿಯ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇದ್ದಾಗಲೇ ಅದೇ ಜಮೀನನ್ನು ವಾಟಾಳ್ ನಾಗರಾಜ್ ರಸ್ತೆಯ ಬಿಬಿಎಂಪಿ ಭಾಗವನ್ನು ಬಿಬಿಎಂಪಿಗೆ ಯಾವುದೇ ಹಣ ನೀಡದೇ ಇದೇ ಕಂಪನಿಯು ಟಿಡಿಆರ್ ಪಡೆದು ಹಸ್ತಾಂತರಿಸಿತ್ತು. ನಂತರ ಅದೇ ವಿಸ್ತೀರ್ಣದಷ್ಟೇ ಜಮೀನನ್ನು ಗ್ಲೋಬಲ್ ಮಾಲ್ ಸಂಪರ್ಕಿಸುವ ಅಂಡರ್ ಪಾಸ್‌ಗಳ ನಿರ್ಮಾಣಕ್ಕೂ ಬಳಸಿಕೊಂಡಿದೆ,’ ಎಂದು ಆರೋಪಿಸುತ್ತಾರೆ ಬಿಬಿಎಂಪಿಯ ನಿವೃತ್ತ ಅಧಿಕಾರಿಯೊಬ್ಬರು.
ಪ್ರಕರಣದ ಹಿನ್ನೆಲೆ
ಬೆಂಗಳೂರು ನಗರದ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಗೌಸ್‌ಲ್ಯಾಂಡ್ ಓಕಳಿಪುರಂ ಕೊಳಚೆ ಪ್ರದೇಶವನ್ನು (ಅಧಿಸೂಚನೆ ಸಂಖ್ಯೆ; ಕೆಎಸ್‌ಎ/ಸಿಆರ್/-107/02-03 ದಿನಾಂಕ 12/08/2022) ಕಾಯ್ದೆ ಕಲಂ 3 ರ ಅಡಿ 1.12 ಎಕರೆ ಕೊಳಚೆ ಪ್ರದೇಶವೆಂದು ಘೋಷಿಸಿತ್ತು. ಇದರಲ್ಲಿ ಸಿಟಿಎಸ್ ನಂ 1300ರಲ್ಲಿ 0-19 ಗುಂಟೆ ಹಾಗೂ ಸಿಟಿಎಸ್ ನಂ 12997/4 ರಲ್ಲಿ 0-33 ಗುಂಟೆ ಇತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.
ಈ ಪೈಕಿ 0-33 ಗುಂಟೆ (ಸಿಟಿಎಸ್ ನಂ 1297/4) ವಿಸ್ತೀರ್ಣದ ಜಮೀನನ್ನು ನ್ಯಾಷನಲ್ ಟೆಕ್ಸ್‌ಟೈಲ್ಸ್ ಕಾರ್ಪೋರೇಷನ್ ಲಿಮಿಟೆಡ್‌ನಿಂದ 2005ರಲ್ಲಿ ದವನಂ ಕನ್ಸ್‌ಟ್ರಕ್ಷನ್ಸ್ ಪ್ರೈ ಲಿ ಖರೀದಿಸಿತ್ತು. ಆದರೆ ಈ ಜಮೀನಿನಲ್ಲಿ ಕೊಳಚೆ ಪ್ರದೇಶದ ನಿವಾಸಿಗಳು ವಾಸವಿದ್ದರು. ಹೀಗಾಗಿ ಈವರೆವಿಗೂ ಯಾವುದೇ ಭೂ ಪರಿಹಾರ ನೀಡಿಲ್ಲ ಎಂದು ಗೊತ್ತಾಗಿದೆ.
ಡಿಕೆಶಿಯಿಂದ ಸಾಲ ಪಡೆದಿರುವ ದವನಂ ಕನ್ಸ್‌ಟ್ರಕ್ಷನ್ಸ್‌ಗೆ ಟಿಡಿಆರ್ ಪ್ರಸ್ತಾವನೆ; ನಿಯಮಬಾಹಿರ ಲಾಭ?
ದವನಂ ಕನ್ಸ್‌ಟ್ರಕ್ಷನ್ಸ್ ಪ್ರೈ ಲಿ ಟಿಡಿಆರ್ ಪರಿಹಾರ ಕೋರಿ 2022ರಲ್ಲಿಯೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಿತ್ತು. ಮಹೇಶ್ ಕುಮಠಳ್ಳಿ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ 2022ರ ನವೆಂಬರ್ 4ರಂದು ಸಭೆ ನಡೆದಿತ್ತು. ಕೊಳಚೆ ಪ್ರದೇಶದ ಒಟ್ಟಾರೆ 1.12 ಎಕರೆ ಜಮೀನಿನ ಪೈಕಿ 0-33 ಗುಂಟೆ ಜಮೀನಿಗೆ ಭೂ ಮಾಲೀಕರಾದ ದವನಂ ಕನ್ಸ್‌ಟ್ರಕ್ಷನ್ಸ್ ಪ್ರೈ ಲಿ ಗೆ ಟಿಡಿಆರ್ ಮುಖಾಂತರ ಭೂ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಸ್ಮರಿಸಬಹುದು.