ಅನಿಲ ನೀತಿ ಶುಲ್ಕ; ಪಿಡಬ್ಲ್ಯೂಡಿಗೆ ಕಿಮ್ಮತ್ತಿಲ್ಲ, ನಗರಾಭಿವೃದ್ಧಿ ಅಭಿಪ್ರಾಯವೇ ಇಲ್ಲ, ತಿಪ್ಪೆ ಸಾರಿಸಿತು ಸಾರಿಗೆ

ಬೆಂಗಳೂರು; ನಗರ ಅನಿಲ ವಿತರಣೆ ಜಾಲದ ಅಭಿವೃದ್ಧಿ ರಾಜ್ಯ ನೀತಿಯ  ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ನೀಡಿದ್ದ ಅಭಿಪ್ರಾಯವನ್ನು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು ಒಪ್ಪಿಲ್ಲ. ಹೀಗಾಗಿ  ಪಿಡಬ್ಲ್ಯೂಡಿ ನೀಡಿದ್ದ ಅಭಿಪ್ರಾಯವು  ಅನಿಲ ನೀತಿಯಲ್ಲಿ ಅಳವಡಿಕೆಯಾಗಿಲ್ಲ. ವಿಶೇಷವೆಂದರೇ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ   ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯ ಅಭಿಪ್ರಾಯವೇ ಸ್ವೀಕೃತವಾಗಿರಲಿಲ್ಲ ಎಂಬುದು  ಆರ್‍‌ಟಿಐ ದಾಖಲೆಗಳಿಂದ ಇದೀಗ ಬಹಿರಂಗಗೊಂಡಿದೆ.

 

ಸಿಜಿಡಿ ನೀತಿಗೆ ಸಂಬಂಧಿಸಿದ ವಿಷಯವು ಹಲವು ಇಲಾಖೆಗಳ ಕಾರ್ಯವ್ಯಾಪ್ತಿಗೆ ಸಂಬಂಧಿಸಿವೆ. ಈ ಪ್ರಸ್ತಾವನೆಗೆ ವಿವಿಧ ಇಲಾಖೆಗಳ ಅಭಿಪ್ರಾಯಗಳು ಅತೀ ಮುಖ್ಯವಾಗಿವೆ. ಆದರೂ ಮೂಲಸೌಲಭ್ಯ ಅಭಿವೃದ್ದಿ ಇಲಾಖೆಯು ಪಿಡಬ್ಲ್ಯೂಡಿ ಅಭಿಪ್ರಾಯವನ್ನೇ ಒಪ್ಪದಿರುವುದು ಮತ್ತು ನಗರಾಭಿವೃದ್ಧಿ, ವಸತಿ ಇಲಾಖೆಯ ಅಭಿಪ್ರಾಯಗಳೇ ಸ್ವೀಕೃತವಾಗಿರಲಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳ ಪ್ರಕಾರ ಯಾವ ವಿಷಯದ ಬಗ್ಗೆ ಸಚಿವ ಸಂಪುಟದ ಅನುಮೋದನೆ ಕೋರಲಾಗುತ್ತದೆಯೋ ಆ ವಿಷಯದಲ್ಲಿ ಒಂದಕ್ಕಿಂತ ಹೆಚ್ಚಿನ ಇಲಾಖೆಗಳು ಒಳಗೊಂಡಿದ್ದರೇ ಅಂತಹ ವಿಷಯಗಳ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಭಿಪ್ರಾಯ ಅತ್ಯಗತ್ಯ.

 

ಹಾಗೆಯೇ ಅನಿಲ ವಿತರಣೆ ಜಾಲದ ಅಭಿವೃದ್ಧಿ ನೀತಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯ ಅಧೀನ ರಸ್ತೆಗಳು, ಪಟ್ಟಣ ಹಾಗೂ ನಗರ ಪ್ರದೇಶಗಳ ಮೇಲುಸ್ತುವಾರಿ ಹೊಂದಿರುವ ನಗರಾಭಿವೃದ್ಧಿ ಇಲಾಖೆಗಳು ಅತೀ ಮುಖ್ಯವಾಗಿ ಒಳಪಡುತ್ತವೆ. ಈ ಹಿನ್ನೆಲೆಯಲ್ಲಿ  ಸಾರ್ವಜನಿಕ ಹಿತಾಸಕ್ತಿಯ ಜೊತೆಯಲ್ಲಿ ನಿಯಮಗಳ ಅನುಸಾರ ಈ ಎರಡು ಇಲಾಖೆಗಳ ಅಭಿಪ್ರಾಯ ಅತೀ ಮುಖ್ಯ. ಈ ಕಾರಣಕ್ಕಾಗಿಯೇ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು ಈ ಎರಡೂ ಇಲಾಖೆಗಳ ಅಭಿಪ್ರಾಯ ಕೋರಿತ್ತು.

 

ಪಿಡಬ್ಲ್ಯೂಡಿ ನೀಡಿದ್ದ ಅಭಿಪ್ರಾಯವೇನು?

 

ಅನಿಲ ವಿತರಣೆ ಜಾಲದ ಅಭಿವೃದ್ಧಿ ನೀತಿಯ ಕುರಿತು ಲೋಕೋಪಯೋಗಿ ಇಲಾಖೆಯು 2022ರ ನವೆಂಬರ್‌ 22ರಂದು  ಅಭಿಪ್ರಾಯ ನೀಡಿತ್ತು.

 

‘ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ರಾಜ್ಯದ ಎಲ್ಲಾ ರಾಜ್ಯ ಹೆದ್ದಾರಿಗಳಲ್ಲಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಗೇಲ್‌ ಗ್ಯಾಸ್‌ ಲಿಮಿಟೆಡ್‌ ಮತ್ತು ಗೇಲ್‌ ಇಂಡಿಯ ಲಿಮಿಟೆಡ್‌ ಸಂಸ್ಥೆಗಳು ಗ್ರಾಹಕರಿಗೆ ನೈಸರ್ಗಿಕ ಅನಿಲ ಸರಬರಾಜು ಮಾಡಲು ಗ್ಯಾಸ್‌ ಪೈಪ್‌ ಲೈನ್‌ ಅಳವಡಿಕೆಗಾಗಿ ಸಾರ್ವಜನಿಕ ರಸ್ತೆಗಳನ್ನು ಅಗೆಯಬೇಕಾದಲ್ಲಿ ಅನುಮತಿ ಶುಲ್ಕ ಹಾಗೂ ಮೇಲ್ವಿಚಾರಣೆ ಶುಲ್ಕವನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿದೆ.

 

‘ಓಪನ್‌ ಟ್ರೆಂಚ್‌ ವಿಧಾನದ ಮೂಲಕ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಲು ಪ್ರತಿ ಮೀಟರ್‌ಗೆ ಅನುಮತಿ ಶುಲ್ಕ 1,857 ರು., ಹೆಚ್‌ಡಿಡಿ ವಿಧಾನದಲ್ಲಿ ಗ್ಯಾಸ್‌ ಪೈಪ್‌ ಲೈನ್‌ ಅಳವಡಿಸಲು ಪ್ರತಿ ಮೀಟರ್‌ಗೆ ಅನುಮತಿ ಶುಲ್ಕ 700 ರು., ಮೇಲಿನ ಎರಡು ಪ್ರಕರಣಗಳಲ್ಲಿ ಪ್ರತಿ ಮೀಟರ್‌ಗೆ 100 ರು.ನಂತೆ ಮೇಲ್ವಿಚಾರಣೆ ಶುಲ್ಕ,’ ಎಂದು ಸ್ಪಷ್ಟ  ಅಭಿಪ್ರಾಯ ನೀಡಿತ್ತು.

 

 

 

ಈ ಅಭಿಪ್ರಾಯವನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಸಚಿವ ಸಂಪುಟ ಟಿಪ್ಪಣಿಯಲ್ಲಿ ದಾಖಲಿಸಿದೆ.

 

ಪಿಡಬ್ಲ್ಯೂಡಿ ಅಭಿಪ್ರಾಯವನ್ನು ಮೀರಿದ್ದೇಕೆ?

 

ಲೋಕೋಪಯೋಗಿ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಒಪ್ಪಿರಲಿಲ್ಲ.

 

‘ತೆರೆದ ಕಂದಕಕ್ಕೆ ಅನುಮತಿ ಶುಲ್ಕ ಪ್ರತಿ ಮೀಟರ್‍‌ಗೆ 1,857, ಎಚ್‌ಡಿಡಿಗೆ ರು. 700 ಮತ್ತು ಮೇಲ್ವಿಚಾರಣೆ ಶುಲ್ಕಗಳಿಗಾಗಿ ಪ್ರತಿ ಮೀಟರ್‍‌ಗೆ 100 ರು.ಗಳ ಪ್ರಸ್ತಾವಿತ ಶುಲ್ಕಗಳನ್ನು ಆಡಳಿತ ಇಲಾಖೆಯು ಒಪ್ಪುವುದಿಲ್ಲ. ಹಾಗೂ ಇದನ್ನು ನೀತಿಯಲ್ಲಿ ಅಳವಡಿಸಿಲ್ಲ. ಕೊಳವೆ ಅನಿಲ ವಿತರಣೆ ಎಲ್ಲಾ ಜಿಲ್ಲೆಗಳ ಪ್ರತಿ ಮನೆ ಮನೆಗೂ ತಲುಪಬೇಕು ಎಂಬ ಉದ್ದೇಶದಿಂದ ಆಡಳಿತ ಇಲಾಖೆಯು ಪ್ರತಿ ಕಿ ಮೀ ಗೆ ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕವಾಗಿ 1,000 ರು.ಗಳನ್ನು ಪ್ರಸ್ತಾಪಿಸಿತ್ತು. ನಗರ ಅನಿಲ ವಿತರಣೆ ಸಂಸ್ಥೆಗಳು ತಮ್ಮ ಸ್ವಂತ ವೆಚ್ಚದಲ್ಲಿ ಪ್ರತಿಯೊಂದು ಮನೆಗೆ ಅನಿಲ ಕೊಳವೆಗಳನ್ನು ಅಳವಡಿಸಬೇಕು. ಇದು ದೊಡ್ಡ ಹೂಡಿಕೆಯಾಗಿದೆ.

 

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಲೋಕೋಪಯೋಗಿ ಇಲಾಖೆಯು ಈ ಅಭಿಪ್ರಾಯ ನೀಡಿತ್ತು. ಹಿಂದಿನ ಸಚಿವ ಸಿ ಸಿ ಪಾಟೀಲ್‌ ಅವರ ಅವಧಿಯಲ್ಲಿ ನೀಡಿದ್ದ ಅಭಿಪ್ರಾಯವು ಹಾಲಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಅವಧಿಯಲ್ಲಿಯೂ ಮುಂದುವರೆದಿದೆಯೇ ಎಂಬ ಮಾಹಿತಿಯೂ ಕಡತದಲ್ಲಿ ಕಂಡುಬಂದಿಲ್ಲ.

 

ಲೋಕೋಪಯೋಗಿ ಇಲಾಖೆ ಅಭಿಪ್ರಾಯವನ್ನು ತಿರಸ್ಕರಿಸುತ್ತಾ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು  ಮುಂದುವರೆದು  ‘ಎಲ್ಲಾ ಪೌರಾಡಳಿತ ಪ್ರದೇಶಗಳಲ್ಲಿ ಒಎಫ್‌ಸಿ ಕಂಪನಿಗಳಿಗೆ ಒಂದೇ ರೀತಿಯ ಶುಲ್ಕವನ್ನು ನೀಡುವ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆಯು ಈಗಾಗಲೇ ಹೊರಡಿಸಿದೆ. ಕೊಳವೆ ಅನಿಲ ವಿತರಣೆ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಅನಿಲ ವಿತರಣೆ ಸಂಸ್ಥೆಗಳಿಗೂ ಇದನ್ನು (ಮೆ; ಗೇಲ್‌ ಇಂಡಿಯಾ ಲಿ ಮತ್ತು ಗೇಲ್‌ ಗ್ಯಾಸ್‌ ಲಿ ಒಳಗೊಂಡು) ವಿಸ್ತರಿಸಬೇಕಾಗುತ್ತದೆ,’ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ದಾಖಲಿಸಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಅಂದರೆ ನೂತನ ಅನಿಲ  ನೀತಿ ಜಾರಿಗೊಳಿಸುವ ಉದ್ದೇಶಕ್ಕಿಂತ  ಈಗಾಗಲೇ ಜಾರಿಯಲ್ಲಿದ್ದ  ಯೋಜನೆಗಳಿಗೂ ಸಹ ಪೂರ್ವಾನ್ವಯವಾಗಿ ಲಾಭ ತಲುಪಿಸುವ ಉದ್ದೇಶ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ ಮುಖ್ಯವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಆದರೆ BBMP AND Karnataka Municipal Corporations Telecommunications Infrastructure and Underground Optical Fibre Cable Rules/Bye-laws, 2021 ಪ್ರಕಾರ ಎಲ್ಲಾ ಪೌರಾಡಳಿತ ಪ್ರದೇಶಗಳಲ್ಲಿ ಓಎಫ್‌ಸಿ ಕಂಪನಿಗಳಿಗೆ ಪರವಾನಿಗೆ ಮತ್ತು ಮೇಲುಸ್ತುವಾರಿ ಶುಲ್ಕವನ್ನು ಪ್ರತಿ ಕಿ ಮೀ ಗೆ 1,000 ರು. ನಿಗದಿ ಮಾಡಿವೆ ಎನ್ನುವುದು ಸಂಪೂರ್ಣ ಸತ್ಯವಲ್ಲ ಎನ್ನುತ್ತಾರೆ ಬಿಬಿಎಂಪಿಯ ಹಿರಿಯ ಅಭಿಯಂತರರೊಬ್ಬರು.

 

ಈ ನಿಯಮಾವಳಿಗಳ ಪ್ರಕಾರ ಯಾವುದಾದರೂ ಒಎಫ್‌ಸಿ ಸಂಸ್ಥೆ ಸದರಿ ನಿಯಮಾವಳಿಗಳು ಜಾರಿಗೆ ಬರುವ ಪೂರ್ವದಲ್ಲೇ ಯಾವುದೇ ಸಕ್ಷಮ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಯ ಜೊತೆ ಒಡಂಬಡಿಕೆ ಅಥವಾ ಇನ್ಯಾವುದೇ   ಆದೇಶದ ಮೂಲಕ ಬೇರೆ ಶುಲ್ಕ   ಪಾವತಿಸಿದ್ದರೇ ಈಗಾಗಲೇ ಚಾಲ್ತಿಯಲ್ಲಿರುವ ಶುಲ್ಕ ಮುಂದುವರೆಯುತ್ತದೆ ಎಂದು ಸ್ಪಷ್ಟವಾಗಿ ವಿವರಿಸಿದೆ.

 

ಸತ್ಯವನ್ನು ಮರೆಮಾಚಿದೆಯೇ?

 

ಈಗಾಗಲೇ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಗೆ ಚಾಲ್ತಿಯಲ್ಲಿರುವ ಶುಲ್ಕಗಳನ್ನು ಮಾರ್ಪಡಿಸಿ ಕಡಿಮೆ ಮಾಡಲು ಓಎಫ್‌ಸಿ ನಿಯಮಾವಳಿಗಳು ಅನ್ವಯಿಸದಿದ್ದರೂ ಟಿಪ್ಪಣಿಯಲ್ಲಿ ಅನ್ವಯವಾಗುತ್ತದೆ ಎಂದು ತಿಳಿಸಿರುವುದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಸತ್ಯವನ್ನು ಮರೆಮಾಚಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಇದಕ್ಕೆ ಹೊರತಾಗಿ ಪ್ರಸ್ತಾವನೆಗೆ ವಸತಿ ಮತ್ತು  ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಸ್ವೀಕೃತಗೊಂಡೇ ಇಲ್ಲ ಎಂದು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು  ಸಚಿವ ಸಂಪುಟ ಟಿಪ್ಪಣಿಯಲ್ಲಿ ದಾಖಲಿಸಿದೆ.

 

ಬಿಬಿಎಂಪಿಗೆ ನೂರಾರು ಕೋಟಿ ರು ನಷ್ಟಕ್ಕೆ ಕಾರಣವಾಗುವ ನೂತನ ಅನಿಲ ನೀತಿಯ ಕುರಿತು ನಗರಾಭಿವೃದ್ಧಿ ಖಾತೆಯ ಹಾಲಿ ಸಚಿವ ಡಿ ಕೆ ಶಿವಕುಮಾರ್‌ ಅವರ ಅಭಿಪ್ರಾಯವೇನು ಎಂಬ ಬಗ್ಗೆಯೂ ಕಡತದ ಯಾವುದೇ ಹಾಳೆಯಲ್ಲಿಯೂ ದಾಖಲಾಗಿಲ್ಲ.

 

 

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ಭಾಗ -IIರ ಪ್ರಕಾರ ‘ಸಚಿವ ಸಂಪುಟ ಕಾರ್ಯ ವಿಧಾನದ ನಿಯಮ 23 (2)ರ ಪ್ರಕರಣದ ವಿಷಯವು ಒಂದಕ್ಕಿಂತ ಹೆಚ್ಚು ಇಲಾಖೆಗಳಿಗೆ ಸಂಬಂಧಿಸಿರುವಾಗ, ಆ ಪ್ರಕರಣವು ತುಂಬಾ ತುರ್ತಿನದಾಗಿದ್ದ ಹೊರತು, ಸಂಬಂಧಪಟ್ಟ ಇಲಾಖೆಗಳು ಅದನ್ನು ಅದನ್ನು ಪರಿಗಣಿಸುವವರೆಗೆ ಸಚಿವ ಸಂಪುಟದ ಮುಂದೆ ಮಂಡಿಸುವುದಕ್ಕಾಗಿ ಆ ಪ್ರಕರಣವನ್ನು ಸಲ್ಲಿಸತಕ್ಕದ್ದಲ್ಲ ಎಂದಿದೆ.

 

ಹೀಗೆ ಸ್ಪಷ್ಟ ನಿಯಮ ಇರುವಾಗ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನೇ ಪಡೆಯದೇ ಸಚಿವ ಸಂಪುಟದ ಮುಂದೆ ಟಿಪ್ಪಣಿ ಮಂಡಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ತಿಪ್ಪೆ ಸಾರಿಸಿದ ಸಾರಿಗೆ ಇಲಾಖೆ

 

ನಗರ ಅನಿಲ ವಿತರಣೆ ಜಾಲದ ಅಭಿವೃದ್ಧಿ ರಾಜ್ಯ ನೀತಿಯಂತೆ  ಹೊಸ ಬಸ್‌ ಖರೀದಿ ಸಂದರ್ಭದಲ್ಲಿ  ಶೇ.40ರಷ್ಟು ಬಸ್‌ಗಳನ್ನು ಸಿಎನ್‌ಜಿ ಮತ್ತು ಎಲ್‌ಎನ್‌ಜಿ ಬಸ್‌ಗಳ ಖರೀದಿಗೆ ರಾಜ್ಯ ಸಾರಿಗೆ ಸಂಸ್ಥೆಗಳು  ಮೀಸಲಿರಿಸಬೇಕು.

 

ಸಾರಿಗೆ ಇಲಾಖೆಯ ಅಭಿಪ್ರಾಯ ಪಡೆಯಲು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಪ್ರಸ್ತಾವನೆ ಕಳಿಸಿತ್ತು. ಪ್ರಸ್ತಾವನೆಯಲ್ಲಿದ್ದ ಮೇಲಿನ  ಅಂಶಕ್ಕೆ ನಿಖರವಾಗಿ ಅಭಿಪ್ರಾಯ ನೀಡುವ ಬದಲಾಗಿ ಸಾರಿಗೆ ಇಲಾಖೆಯು  ಸಿಎನ್‌ಜಿ/ಎಲ್‌ಎನ್‌ಜಿ ಬಗ್ಗೆ ಯಾವ ರೀತಿ ನಗಾರಿ ಬಾರಿಸಿದ್ದೇವೆ ಎಂದು ತಿಪ್ಪೆ ಸಾರಿಸಿದಂತಿದೆ.  ಹಾಗೆಯೇ ಈ ಅಭಿಪ್ರಾಯಕ್ಕೆ ಹಾಲಿ ಸಚಿವ ರಾಮಲಿಂಗಾರೆಡ್ಡಿ ಅವರ ಅನುಮೋದನೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಕಡತದಲ್ಲಿ ಯಾವುದೇ ದಾಖಲೆಗಳನ್ನಿರಿಸಿಲ್ಲ.

 

‘ಕರ್ನಾಟಕದ ಯಾವುದೇ ಸಾರಿಗೆ ಸಂಸ್ಥೆ ಸಿಎನ್‌ಜಿ/ಎಲ್‌ಎನ್‌ಜಿ ಬಸ್‌ ಖರೀದಿ ಮಾಡುವ ಉದ್ದೇಶ ಇಲ್ಲವಾದಲ್ಲಿ ಮುಂದೆ ಇಲೆಕ್ಟ್ರಿಕ್‌/ಡೀಸೆಲ್‌  ಬಸ್‌ ಖರೀದಿ ಮಾಡಲು ರಾಜ್ಯ ಸಾರಿಗೆ ಸಂಸ್ಥೆಗಳು ಟೆಂಡರ್‍‌ ಆಹ್ವಾನಿಸುವ ಸಂದರ್ಭದಲ್ಲಿ ಯಾರಾದರೂ ಟೆಂಡರ್ ಪ್ರಕ್ರಿಯೆಗೆ ತಡೆ ಒಡ್ಡರೇ, ತಮ್ಮ ಇಲಾಖೆ ಮತ್ತು ಅಧೀನ ಸಂಸ್ಥೆಗಳ ಹಿತಾಸಕ್ತಿಯ ಬಗ್ಗೆ ಈ ಮಟ್ಟದ ಕಡೆಗಣನೆ ಇರುವ ಅಧಿಕಾರಿ ಸಾರ್ವಜನಿಕ ಸೇವೆಯಲ್ಲಿ ಇರಬೇಕೆ,’ ಎನ್ನುತ್ತಾರೆ ಸಾರಿಗೆ ಇಲಾಖೆಯ ನಿವೃತ್ತ  ಹಿರಿಯ ಅಧಿಕಾರಿಯೊಬ್ಬರು.

 

ಈ ಹಿನ್ನೆಲೆಯಲ್ಲಿಯೂ ಹಲವು ಪ್ರಶ್ನೆಗಳು ಕೇಳಿ ಬಂದಿವೆ.

 

1. ನಗರಗಳಲ್ಲೇ ಸ್ಥಾಪಿಸಬೇಕಿರುವ ನೂತನ ನಗರ ಅನಿಲ ಸರಬರಾಜು ನೀತಿಯ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನೇ ಪಡೆಯದೇ ಇದ್ದರೂ ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳಿಗೆ ವಿರುದ್ಧವಾಗಿ ಪ್ರಸ್ತಾವನೆಯನ್ನು  ಏಕೆ  ಸಚಿವ ಸಂಪುಟದ ಮುಂದೆ ಮಂಡಿಸಲಾಯಿತು?

 

2. ಸ್ಥಳೀಯ ನಗರ ಸಂಸ್ಥೆಗಳು ಮತ್ತು  ಲೋಕೋಪಯೋಗಿ ಇಲಾಖೆ ಕಾರ್ಯವ್ಯಾಪ್ತಿಯ ಅಡಿಯಲ್ಲಿ ಇರುವ  ರಸ್ತೆಗಳ ಅಗೆತದ ಶುಲ್ಕವನ್ನು ಏಕಪಕ್ಷೀಯವಾಗಿ ನಿರ್ಧರಿಸುವ ಅಧಿಕಾರವನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಯಾರು ನೀಡಿದ್ದಾರೆ?

 

3. ಬೇಕಾದಾಗ ಕಿತ್ತೆಸೆಯಬಹುದಾದ ಒಎಫ್‌ಸಿಗಳಿಗೂ ಒಮ್ಮೆ ಅಳವಡಿಸಿದ ನಂತರ ಮುಟ್ಟಲಾಗದ ಗ್ಯಾಸ್‌ ಪೈಪ್‌ಲೈನ್‌ಗಳನ್ನು ಏಕೆ ಸಮೀಕರಿಸಲಾಗುತ್ತಿದೆ?

 

4. ಲೋಕೋಪಯೋಗಿ ಇಲಾಖೆಯ ಅಭಿಪ್ರಾಯವನ್ನು ತಿರಸ್ಕರಿಸಿದ ನಂತರ ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳ ಪ್ರಕಾರ ಲೋಕೋಪಯೋಗಿ ಇಲಾಖೆ ಸಚಿವರ ಅಭಿಪ್ರಾಯ ಪಡೆದಿದೆಯೇ ಅಥವಾ ಇಲ್ಲವೇ?

 

5. ಪ್ರತಿ ಬಾರಿ ಬಸ್‌ ಖರೀದಿ ಮಾಡುವಾಗ ನೂತನ ನಗರ ಅನಿಲ ಸರಬರಾಜು ನೀತಿಯಲ್ಲಿ ನಿಗದಿತ ಶೇಕಡಾ/ಸಂಖ್ಯೆಯ ಸಿಎನ್‌ಜಿ/ಎಲ್‌ಎನ್‌ಜಿ ಬಸ್‌ ಖರೀದಿ ಮಾಡಲು ರಾಜ್ಯ ಸಾರಿಗೆ ಸಿದ್ಧವಿದೆಯೇ? ಇಲ್ಲವಾದಲ್ಲಿ ಈ ಅಂಶದ ಬಗ್ಗೆ ಯಾಕೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟವಾಗಿ ಅಭಿಪ್ರಾಯ ನೀಡಿಲ್ಲ.

the fil favicon

SUPPORT THE FILE

Latest News

Related Posts