ಜೈಲು ಕಟ್ಟಡ ಕಾಮಗಾರಿ; ಅಂದಾಜಿನಲ್ಲೇ ದೋಷ, ಗುತ್ತಿಗೆದಾರರಿಗೆ 7.69 ಕೋಟಿ ಲಾಭ

ಬೆಂಗಳೂರು; ಬೀದರ್‌ ಮತ್ತು ವಿಜಯಪುರ ಕಾರಾಗೃಹ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ದೋಷಪೂರಿತ ಅಂದಾಜು ತಯಾರಿಸುವ ಮೂಲಕ ಗುತ್ತಿಗೆದಾರರಿಗೆ 7.69 ಕೋಟಿ ರು. ಲಾಭ ಮಾಡಿಕೊಡಲು ಯತ್ನಿಸಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಬಹಿರಂಗಗೊಳಿಸುತ್ತಿದೆ.

 

ಮೂಲ ಅಂದಾಜಿಗಿಂತಲೂ 94.77 ಕೋಟಿ ರು. ಹೆಚ್ಚುವರಿಯಾಗಿ ತಯಾರಿಸಲಾಗಿದೆ. ವಿದ್ಯುತ್‌ ಮತ್ತು ನೀರು ಸರಬರಾಜು ಕಾಮಗಾರಿಗಳನ್ನು ಕೈ ಬಿಟ್ಟು ಮೂಲ ಅಂದಾಜು ತಯಾರಿಸಿ ಪರಿಷ್ಕೃತ ಅಂದಾಜನ್ನು ತಯಾರಿಸಿರುವುದು ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಪ್ರಸ್ತಾವವನ್ನು ಒಳಾಡಳಿತ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದೆ.

 

ಇದಕ್ಕೆ ಸಂಬಂಧಿಸಿದಂತಹ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಅನೇಕ ಆಕ್ಷೇಪಗಳನ್ನು ಎತ್ತಿದೆಯಲ್ಲದೇ ಪ್ರಸ್ತಾಪಿಸಿದ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ (FD 385/EX 11/2020) 2023 ಜೂನ್‌ 8ರಂದೇ ತಿಳಿಸಿರುವುದು ಗೊತ್ತಾಗಿದೆ.

 

ಈ ಪ್ರಕರಣವು  ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್‌ ಅವರ ಗಮನಕ್ಕೆ ಬಂದಿದೆ ಎಂದು ಗೊತ್ತಾಗಿದೆ. ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರು ಅಧಿಕಾರಿಗಳ ಜತೆ ಈ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಬೀದರ್‌ನಲ್ಲಿ ಕಾರಾಗೃಹ ಕಟ್ಟಡ ನಿರ್ಮಾಣಕ್ಕೆ ಮೂಲ ಅಂದಾಜಿನಂತೆ ನಿರ್ಮಾಣ ಮಾಡಿದ್ದರೇ 115.17 ಕೋಟಿ ರು., ವಿಜಯಪುರ ಕಾರಾಗೃಹ ಕಟ್ಟಡ ನಿರ್ಮಾಣಕ್ಕೆ 115.36 ಕೋಟಿ ಕೋಟಿ ರು. ಸೇರಿ ಒಟ್ಟಾರೆ 230.53 ಕೋಟಿ ರು. ವೆಚ್ಚವಾಗುತ್ತಿತ್ತು.

 

ಆದರೆ ಇಲಾಖೆಯು ಹೆಚ್ಚುವರಿ ಕಾಮಗಾರಿಗಳನ್ನು ಪ್ರಸ್ತಾಪಿಸಿ ಕಾಮಗಾರಿ ಅಂದಾಜನ್ನು ಪರಿಷ್ಕರಿಸಿದೆ. ಇದರ ಪ್ಕರಾರ 49.52 ಕೋಟಿ ಹಾಗೂ 42.25 ಕೋಟಿ ರು. ಹೆಚ್ಚುವರಿಯಾಗಿದೆ. ಇದು ಮೂಲ ಅಂದಾಜಿಗೆ ಹೋಲಿಸಿದಲ್ಲಿ ಕ್ರಮವಾಗಿ ಶೇ.64.69 ಮತ್ತು ಶೇ.60.61ರಷ್ಟು ಹೆಚ್ಚುವರಿಯಾಗಿದೆ ಎಂದು ತಿಳಿದು ಬಂದಿದೆ.

 

ಅಂದಾಜು ತಯಾರಿಸುವಲ್ಲಿ ದೋಷಗಳಿವು

 

ವಿಜಯಪುರ ಮತ್ತು ಬೀದರ್‌ ಕಾರಾಗೃಹ ಕಟ್ಟಡ ಕಾಮಗಾರಿಗಳು 5 ಮಹಡಿಗಳನ್ನು ಒಳಗೊಳ್ಳಲಿದೆ. ಮೂಲ ಅಂದಾಜು ತಯಾರಿಸುವ ಸಂದರ್ಭದಲ್ಲಿ ಸ್ಟೀಲ್‌ ಲಿಫ್ಟ್‌ ಶುಲ್ಕವನ್ನು ಕೈ ಬಿಡಲಾಗಿದೆ. ಅಲ್ಲದೇ ರೆಡ್‌ ಆಕ್ಸೈಡ್‌ ಫ್ಲೋರಿಂಗ್‌, ವಾಲ್‌ ಪೈಂಟಿಂಗ್‌ ರಿಮೂವಿಂಗ್‌ ಸೆಂಟರಿಂಗ್‌ ಸೇರಿ ಹಲವು ಕಾಮಗಾರಿಗಳನ್ನು ಕೈಬಿಡಲಾಗಿದೆ ಎಂಬ ಸಂಗತಿಯು ಗೊತ್ತಾಗಿದೆ.

 

ಕಟ್ಟಡ ಕಾಮಗಾರಿಗಳನ್ನು ನಿರ್ವಹಿಸುವ ಅಂದಾಜಿನಲ್ಲಿ ಅವಶ್ಯಕವಾಗಿ ಇರಬೇಕಿದ್ದ ಎಲೆಕ್ಟ್ರಿಕಲ್‌ ಮತ್ತು ನೀರು ಸರಬರಾಜು ಕಾಮಗಾರಿಗಳನ್ನು ಕೈಬಿಟ್ಟು ಅಂದಾಜು ತಯಾರಿಸಲಾಗಿದೆ. ನಂತರ ಪ್ರಸಕ್ತ ಪರಿಷ್ಕೃತ ಅಂದಾಜಿನಲ್ಲಿ ಸೇರಿಸಿರುವುದಕ್ಕೆ ಆರ್ಥಿಕ ಇಲಾಖೆಯು ತಕರಾರು ಎತ್ತಿದೆ.

 

ಅಂದಾಜು ತಯಾರಿಸುವ ಮೊದಲು ನಿಯಮಗಳ ಪ್ರಕಾರ ಸಂಬಂಧ ಪಟ್ಟ ನಿವೇಶನದ ಮಣ್ಣು ಪರೀಕ್ಷೆ ಮತ್ತು ಸಮೀಕ್ಷೆ ಮಾಡಬೇಕಿತ್ತು. ಆದರೆ ಇವುಗಳನ್ನು ಕೈಗೊಳ್ಳದೇ ಅಂದಾಜು ತಯಾರಿಸಲಾಗಿದೆ ಎಂದು ಆರ್ಥಿಕ ಇಲಾಖೆಯು ಪತ್ತೆ ಹಚ್ಚಿದೆ.

 

‘ಈ ರೀತಿ ಕಟ್ಟಡ ನಿರ್ಮಾಣಕ್ಕೆ ಅತೀ ಅವಶ್ಯವಿರುವ ಮತ್ತು ಅಂತರ್ಗತ ಕಾಮಗಾರಿಗಳನ್ನು ಕೈ ಬಿಟ್ಟು ದೋಷಪೂರಿತ ಅಂದಾಜು ತಯಾರಿಸಿರುವುದು, ಸಂಬಂಧಪಟ್ಟ ಅಭಿಯಂತರರ ಕರ್ತವ್ಯ ನಿರ್ವಹಣೆಗೆ ತಕ್ಕುದಾದಲ್ಲ,’ ಎಂದು ಆರ್ಥಿಕ ಇಲಾಖೆಯು ಹೇಳಿರುವುದು ತಿಳಿದು ಬಂದಿದೆ.

 

ಹಾಗೆಯೇ ಮೂಲ ಅಂದಾಜಿನಲ್ಲಿ Earthwork Excavation ಕಾಮಗಾರಿಯನ್ನು ಅನುಸೂಚಿ ದರಗಳ ಅನುಸಾರ ಅಳವಡಿಸಿದೆ. ನಂತರ ಈ ರೀತಿ ಸೇರ್ಪಡೆ ಮಾಡಿದ ಎಸ್‌ ಆರ್‌ ಐಟಂನಲ್ಲಿ ರಾಕ್‌ ಬ್ರೇಕರ್‌ ಎಂಬುದನ್ನು ಸೇರ್ಪಡೆ ಮಾಡಿದೆ. ಮೂಲ ಅಂದಾಜಿನಲ್ಲಿ ಅಳವಡಿಸಿದ Earthwork Excavation ಐಟಂ ನ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ನಿರ್ವಹಿಸಲಾಗಿದೆ. ಅದರೊಂದಿಗೆ ಇಐಆರ್‌ಎಲ್‌ ಅಡಿಯೂ ಸಹ ಹೆಚ್ಚುವರಿ ಐಟಂ ಆಗಿ ಡೇಟಾ ರೇಟ್‌ ಪಾವತಿ ಮಾಡುವುದರ ಮೂಲಕ ಮತ್ತಷ್ಟು ಹೆಚ್ಚುವರಿ ಕಾಮಗಾರಿ ನಿರ್ವಹಿಸಲಾಗಿದೆ ಎಂದು ಗೊತ್ತಾಗಿದೆ.

 

ಒಟ್ಟಾರೆ ಮೂಲ ಅಂದಾಜಿಗಿಂತ ಶೇ.200ಕ್ಕಿಂತ ಅಧಿಕ ಪ್ರಮಾಣದ ಕಾಮಗಾರಿಯನ್ನು Earthwork Excavation ಅಡಿ ನಿರ್ವಹಿಸಿರುವುದು ಮತ್ತು ನಿರ್ವಹಿಸಲು ಪ್ರಸ್ತಾಪಿಸಿರುವುದು ಕಂಡು ಬಂದಿದೆ. ಅಲ್ಲದೇ ಮೂಲ ಅಂದಾಜಿನ ಪ್ರಮಾಣದಲ್ಲಿಯೂ ಹೆಚ್ಚುವರಿ ನಿರ್ವಹಿಸಿದೆ. ಅದರೊಂದಿಗೆ ಇಐಆರ್‌ಎಲ್‌ನಲ್ಲಿಯೂ ಹೆಚ್ಚುವರಿಯಾಗಿ ನಿರ್ವಹಿಸಿರುವುದಕ್ಕೆ ಯಾವುದೇ ಕಾರಣಗಳು, ಸಮರ್ಥನೆಗಳೂ ಪ್ರಸ್ತಾವನೆಯಲ್ಲಿ ಕಂಡು ಬಂದಿಲ್ಲ ಎಂಬುದು ತಿಳಿದು ಬಂದಿದೆ.

 

ಬೀದರ್‌ ಕಾಮಗಾರಿಯಲ್ಲಿ ಮೂಲ ಅಂದಾಜಿನಂತೆ Earthwork Excavation -Soft rock/ordinary rock without blasting ದರವು ಪ್ರತಿ ಘನ ಮೀಟರ್‌ಗೆ 68 ರು. ಇದೆ. ಇದರೊಂದಿಗೆ ರಾಕ್‌ ಬ್ರೇಕರ್‌ ಸೇರಿಸಿ ಪ್ರತಿ ಘನ ಮೀಟರ್‌ಗೆ ಡೇಟಾ ರೇಟ್‌ ತಯಾರಿಸಿ 1,521 ರು. ನೀಡಲಾಗಿದೆ. ಇದರಿಂದಾಗಿ ಮೂಲಾ ಂದಾಜಿನ 10.85 ಲಕ್ಷ ರು. ಮೊತ್ತವು ಪರಿಷ್ಕೃತ ಅಂದಾಜಿನಲ್ಲಿ 383.18. ಲಕ್ಷ ರು.ಗಳಿಗೆ ಏರಿಕೆಯಾಗಿದೆ. ಇದು 372.33 ಲಕ್ಷ ರು. ಹೆಚ್ಚುವರಿಯಾಗಿದೆ ಎಂದು ಗೊತ್ತಾಗಿದೆ.

 

ಅದೇ ರೀತಿ ವಿಜಯಪುರ ಪ್ರಕರಣದಲ್ಲಿಯಿಊ ಡೇಟಾ ರೇಟ್‌ನಲ್ಲಿ ಘನ ಮೀಟರ್‌ಗೆ 1,601 ರು. ಗೆ ನೀಡಿದೆ. ಇದರಿಂದ ಮೂಲ ಅಂದಾಜು 16.03 ಲಕ್ಷ ರು.ಗಳಿಂದ ಪರಿಷ್ಕೃತ ಅಂದಾಜಿನಲ್ಲಿ 712.48 ಲಕ್ಷ ರು.ಗಳಿಗೆ ಏರಿಕೆಯಾಗಿದೆ. ಇದು 696.45 ಲಕ್ಷ ಹೆಚ್ಚುವರಿಯಾಗಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.

 

ಮೂಲ ಅಂದಾಜಿನಲ್ಲಿ ಕಿಟಕಿ ಮತ್ತಿತರೆ ಕಾಮಗಾರಿಗಳಿಗೆ ಸಂಬಂಧಪಟ್ಟ ಐಟಂ ಅಳವಡಿಸಲಾಗಿದೆ. ಇಐಆರ್‌ಎಲ್‌ನಲ್ಲಿ ಇದನ್ನು ಬದಲಾಯಿಸಲಾಗಿದೆ. ಭಾಗಶಃ ಎಸ್‌ಆರ್‌ ದರದಲ್ಲಿ ಇಲ್ಲದ ಐಟಂಗಳನ್ನು ಸೇರ್ಪಡೆ ಮಾಡಿ ಪೂರ್ಣ ಐಟಂಗೆ ಡೇಟಾ ರೇಟ್‌ಗೆ ನೀಡಲಾಗಿದೆ.

 

ಬೀದರ್‌ಗೆ ಸಂಬಂಧಿಸಿದಂತೆ ಮೂಲ ಅಂದಾಜಿನಲ್ಲಿ ಕೆ ಜಿ ಗೆ 95 ರು. ಇದ್ದದ್ದನ್ನು ಡೇಟಾ ರೇಟ್‌ನಲ್ಲಿ ಕೆ ಜಿ ಗೆ 175.38 ರು. ನೀಡಲಾಗಿದೆ. ಅದೇ ರೀತಿ ವಿಜಯಪುರದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಮೂಲ ಅಂದಾಜಿನಲ್ಲಿ ಕೆ ಜಿ ಗೆ 95 ರು.ಗೆ ಬದಲಾಗಿ 163.80 ರು. ಡೇಟಾ ರೇಟ್‌ ನೀಡಲಾಗಿದೆ. ಇದರಿಂದಾಗಿ ಬೀದರ್‌ ಮತ್ತು ವಿಜಯಪುರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್‌ ದರಗಳಿಗೆ ಹೋಲಿಕೆ ಮಾಡಿದಲ್ಲಿ ಕ್ರಮವಾಗಿ 990.57 ಲಕ್ಷ ರು., ಮತ್ತು 692.57 ಲಕ್ಷ ರು. ಹೆಚ್ಚುವರಿಯಾಗಿದೆ ಎಂದು ಗೊತ್ತಾಗಿದೆ.

 

ಕಿಟಕಿ ಮತ್ತು ವೆಂಟಿಲೇಟರ್‌ ಪ್ರಕರಣದಲ್ಲಿಯೂ ಮಲ ಅಂದಾಜಿನಲ್ಲಿ ಇದ್ದ ಐಟಂಗಳನ್ನು ಇಐಆರ್‌ಎಲ್‌ನಲ್ಲಿ ಸೇರಿಸಲಾಗಿದೆ. ಅದಕ್ಕೂಕ ಸಹ ಡೇಟಾ ರೇಟ್‌ ನೀಡಲಾಗಿದೆ.

 

ಬೀದರ್‌ ಕಾಮಗಾರಿಯಲ್ಲಿ ಕಿಟಕಿ, ವೆಂಟಿಲೇಟರ್‌ ಗೆ ಸಂಬಂಧಿಸಿದಂತೆ ಮೂಲ ಅಂದಾಜಿನಂತೆ 6,18,144 ಕೆ ಜಿ ಪ್ರಮಾಣಕ್ಕೆ ಅಂದಾಜಿಸಿದೆ. ಅದನ್ನು ಪೂರ್ಣವಾಗಿ ನಿರ್ವಹಿಸಲಾಗಿದೆ ಎಂದು ಪರಿಗಣಿಸಿದರೆ ಮೂಲ ಟೆಂಡರ್‌ ದರ ಕೆ ಜಿ ಗೆ 112 ರು. ನಂತೆ 692.32 ಲಕ್ಷ ರು. ವೆಚ್ಚವಾಗುತ್ಇತತ್ತು. ಆದರೆ ಟೆಂಡರ್‌ ದರ ಕೆ ಜಿಗೆ 112 ಕೆ ಜಿ ಬದಲಿಗೆ ಡೇಟಾ ರೇಟ್‌ ದರ ಕೆ ಜಿ ಗೆ 175.38 ರು ನೀಡಿರುವುದರಿಂದ 391.82 ಲಕ್ಷ ರು. ಹೆಚ್ಚುವರಿಯಾಗಿ ಅಂದಾಜಿಸಿದೆ.

 

ಅದೇ ರೀತಿ ವಿಜಯಪುರ ಕಾಮಗಾರಿಯಲ್ಲಿಯೂ ಮೂಲ ಅಂದಾಜಿನಲ್ಲಿ 601946 ಕೆ ಜಿ ಪ್ರಮಾಣ ಅಂದಾಜಿಸಲಾಗಿತ್ತು. ಇದಕ್ಕೆ ಟೆಂಡರ್‌ ದರ ಕೆ ಜಿಗೆ 101 ರು ಬದಲಾಗಿ ಡೇಟಾ ರೇಟ್‌ ನ ಂತೆ 163.80 ರು. ನೀಡಲಾಗಿದೆ. ಇದು 378.02 ಲಕ್ಷ ರು. ಹೆಚ್ಚುವರಿಯಾಗಿ ನೀಡಲಾಗಿದೆ.

 

‘ಬೀದರ್‌ ಮತ್ತು ವಿಜಯಪುರ ಪ್ರಕರಣದಲ್ಲಿ ಕ್ಮರವಾಗಿ 391.82 ಲಕ್ಷ ಮತ್ತು 378.02 ಲಕ್ಷ ರು. ಉದ್ದೇಶಿತ ಲಾಭವನ್ನು ಗುತ್ತಿಗೆದಾರರಿಗೆ ನೀಡಲು ಪ್ರಸ್ತಾಪಿಸಿದಂತೆ ಕಂಡು ಬರುತ್ತದೆ,’ ಎಂದು ಆರ್ಥಿಕ ಇಲಾಖೆಯು ಸಂಶಯಪಟ್ಟಿದೆ ಎಂದು ತಿಳಿದು ಬಂದಿದೆ.

 

ಈ ಎರಡೂ ಪ್ರಕರಣಗಳಲ್ಲಿ ಪರಿಷ್ಕೃತ ಅಂದಾಜು ಶೇ.60ಕ್ಕಿಂತ ಹೆಚ್ಚಿಗೆ ಇದೆ. ಈ ಕಾರ್ಯಕ್ಷೇತ್ರದಲ್ಲಿ ಪರಿಣಿತಿ ಹೊಂದಿದ ತಜ್ಞರಿಂದ ತನಿಖೆಗೆ ಒಳಪಡಿಸಬೇಕು. ಪರಿಷ್ಕೃತ ಅಂದಾಜು ಮತ್ತು ಪ್ರಸ್ತಾಪಿಸಿದ ದರಗಳ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ಈ ಪ್ರಕರಣಗಳನ್ನು ಲೋಕೋಪಯೋಗಿ ಇಲಾಖೆಯಲ್ಲಿನ ಟಿಎ ಮತ್ತು ಇಆರ್‌ಸಿಯ ಪರಿಶೀಲನೆಗೆ ಒಳಡಿಸಬೇಕು. ಇದರ ವರದಿ ಮತ್ತು ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಮರು ಸಲ್ಲಿಸಬೇಕು. ಅಲ್ಲಿಯವರೆಗೂ ಪ್ರಸ್ತಾಪಿಸಿರುವ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಆರ್ಥಿಕ ಇಲಾಖೆಯು ಒಳಾಡಳಿತ ಇಲಾಖೆಗೆ ನಿರ್ದೇಶನ ನೀಡಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts