ಬೆಂಗಳೂರು: ಸ್ಮಾರ್ಟ್ ಕಾರ್ಡ್ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವ ಸಂಬಂಧ ಸರ್ಕಾರಕ್ಕೆ ಆಗಿರುವ ಆರ್ಥಿಕ ನಷ್ಟ, ಹಣ ದುರುಪಯೋಗ ಮತ್ತು ಕರ್ತವ್ಯಲೋಪ ಆರೋಪಗಳ ಸಂಬಂಧ ಸಾರಿಗೆ ಇಲಾಖೆಯ ಹಿಂದಿನ ಆಯುಕ್ತ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಶಿವಕುಮಾರ್ ಸೇರಿದಂತೆ ಇನ್ನಿತರರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಇಲಾಖೆಯ ಅಯುಕ್ತರಿಗೆ ಸರ್ಕಾರವು ನಿರ್ದೇಶನ ನೀಡಿರುವುದು ಇದೀಗ ಬಹಿರಂಗವಾಗಿದೆ.
ಸಾರಿಗೆ ಇಲಾಖೆಯ ಹಿಂದಿನ ಆಯುಕ್ತ ಐಪಿಎಸ್ ಅಧಿಕಾರಿ ಶಿವಕುಮಾರ್ (ನಿವೃತ್ತ) ಅವರ ವಿರುದ್ಧದ ಪ್ರಕರಣವನ್ನು ಹೆಚ್ಚಿನ ತನಿಖೆ ನಡೆಸಲು ಸಿಐಡಿ ತನಿಖೆಗೆ ವಹಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿತ್ತು. ಆದರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಲ್ಲ ಎಂಬ ಕಾರಣಕ್ಕೆ ಗೃಹ ಇಲಾಖೆಯು ಕಡತವನ್ನು ಸಾರಿಗೆ ಇಲಾಖೆಗೆ ಮರಳಿಸಿತ್ತು. ಹೀಗಾಗಿ ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಿದ್ದಾರೆ.
ಈ ಸಂಬಂಧ 2024ರ ಜನವರಿ 8ರಂದು ಸಾರಿಗೆ ಇಲಾಖೆಯ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ. ಇದನ್ನು ಸಾರಿಗೆ ಇಲಾಖೆಯ (ಸಂಖ್ಯೆ ಟಿಡಿ 33 ಟಿಡಿಎಸ್ 2022) ಆಯುಕ್ತರ ಕಚೇರಿಯು ‘ದಿ ಫೈಲ್’ ಖಚಿತಪಡಿಸಿದೆ. ಇದರ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
‘ರೋಸ್‌ಮೆರ್ಟಾ ಸಂಸ್ಥೆ ಹಾಗೂ ಇದರ ಸಹ ಸಂಸ್ಥೆಗಳಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟ, ಹಣ ದುರುಪಯೋಗ ಮತ್ತು ಕರ್ತವ್ಯಲೋಪಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕೂಡಲೇ ದೂರು ನೀಡಿ ಪ್ರಥಮ ವರ್ತಮಾನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಸಾರಿಗೆ ಇಲಾಖೆಯು ಆಯುಕ್ತರಿಗೆ ನಿರ್ದೇಶನ ನೀಡಿರುವುದು ಗೊತ್ತಾಗಿದೆ.
ಎಫ್‌ಐಆರ್ ದಾಖಲಿಸುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಹ ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವ ರೋಸ್‌ಮೆರ್ಟಾ ಟೆಕ್ನಾಲಜೀಸ್ ಪ್ರೈವೈಟ್ ಲಿಮಿಟೆಡ್‌ಗೆ ಐಪಿಎಸ್ ಅಧಿಕಾರಿ ಶಿವಕುಮಾರ್ ಅವರು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಇಲಾಖೆ ವಿಚಾರಣೆ ನಡೆದಿತ್ತು. ಈ ಪ್ರಕರಣವು ಹಿಂದಿನ ಬಿಜೆಪಿ ಸರ್ಕಾರದ ಗಮನದಲ್ಲಿತ್ತಾದರೂ ಯಾವುದೇ ಕ್ರಮ ವಹಿಸಿರಲಿಲ್ಲ. ಈ ಕುರಿತು ‘ದಿ ಫೈಲ್’ 2022ರ ಏಪ್ರಿಲ್ 7ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಇದೀಗ ವರ್ಷದ ಬಳಿಕ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ಸಿಐಡಿಯ ಆರ್ಥಿಕ ಅಪರಾಧ ವಿಭಾಗಕ್ಕೆ ವಹಿಸಲು ಗೃಹ ಇಲಾಖೆಗೆ ಕಡತವನ್ನು (TD 33/TDS/2021/PART-1) ಕಳಿಸಲಾಗಿತ್ತು. ಐಪಿಎಸ್ ಶಿವಕುಮಾರ್ ಅವರ ವಿರುದ್ಧದ ಪ್ರಕರಣದ ಕುರಿತು ತನಿಖೆ ನಡೆಸಬೇಕೇ ಬೇಡವೇ ಎಂಬ ಕುರಿತಾದ ಕಡತವನ್ನು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲಿಸಿದ್ದರು.
ಆ ನಂತರ ಇದೇ ಕಡತ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ರವಾನೆಯಾಗಿತ್ತು. ಸರಿಸುಮಾರು 2 ತಿಂಗಳ ಕಾಲ ಈ ಕಡತವು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿಯೇ ಇತ್ತು. ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವನ್ನು ಕೈಗೊಂಡಿರಲಿಲ್ಲ. 2 ತಿಂಗಳ ನಂತರ ಕಡತವು ಸಾರಿಗೆ ಇಲಾಖೆಗೆ ಹಿಂದಿರುಗಿತ್ತು ಎಂದು ತಿಳಿದು ಬಂದಿದೆ.
ಈ ಬೆಳವಣಿಗೆ ನಡುವೆಯೇ ಇದೇ ರೋಸ್‌ಮೆರ್ಟಾ ಟೆಕ್ನಾಲಾಜೀಸ್ ಸಂಸ್ಥೆಯ ಅಕ್ರಮ ಅವ್ಯವಹಾರದಲ್ಲಿ ಭಾಗಿ ಆಗಿರುವ ಅಧಿಕಾರಿ, ನೌಕರರನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಸಾರಿಗೆ ಆಯುಕ್ತರಿಗೆ (ಸಾರಿಗೆ-ರಸ್ತೆ ಸುರಕ್ಷತೆ) 2023ರ ಅಕ್ಟೋಬರ್ 17ರಂದು ಪತ್ರ (ಟಿಡಿ 33 ಟಿಡಿಎಸ್ 2022 (ಭಾಗ-1) ಬರೆದಿದ್ದರು.
ಪತ್ರದಲ್ಲೇನಿತ್ತು?
ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಹಿಂದಿನ ಆಯುಕ್ತ ಐಪಿಎಸ್ ಅಧಿಕಾರಿ ಶಿವಕುಮಾರ್ ಹಾಗೂ ರೋಸ್ ಮೆರ್ಟಾ ಟೆಕ್ನಾಲಾಜೀಸ್ ಪ್ರೈವೈಟ್ ಲಿಮಿಟೆಡ್ ವಿರುದ್ಧ ರಾಯಭಾಗ್‌ನ ಅಂಜುಮನ್ ಇ ಇಸ್ಲಾಂನ ಎಫ್ ಎಂ ಮಿರ್ಜಿ ಎಂಬುವರು ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಶೀಲಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದರು.
ಅದೇ ರೀತಿ ಸಂಸ್ಥೆಯ ಅಕ್ರಮದ ಬಗ್ಗೆ ಈ ಹಿಂದೆಯೇ ಇಲಾಖೆಯ ಗಮನಕ್ಕೆ ಬಂದಿದ್ದರೂ ಅಗತ್ಯ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗದೇ ಸಂಸ್ಥೆಯ ಸೇವೆಯನ್ನು ಮುಂದುವರೆಸಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ, ನೌಕರರನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
ಒಪ್ಪಂದದ ಉಪ ಬಂಧಗಳ ಅವಕಾಶಗಳನ್ವಯ ಸದರಿ ಸಂಸ್ಥೆಯ ಸೆಕ್ಯುರಿಟಿ ಡಿಪಾಸಿಟ್ 1.50 ಕೋಟಿ ರ.ಗಳನ್ನು ಅಂತಿಮ ನಿರ್ಧಾರವಾಗುವವರೆಗೂ ತಡೆಹಿಡಿಯಬೇಕು. ಹಾಗೂ ಸಂಸ್ಥೆಯಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ಬಡ್ಡಿ ಸಮೇತ ವಸೂಲು ಮಾಡಬೇಕು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ನಿರ್ದೇಶಿಸಿದ್ದರು.
ರೋಸ್‌ಮೆರ್ಟಾ ಪ್ರಕರಣ; ಲಿಂಗಾಯತ ಸಮುದಾಯದ ನಿವೃತ್ತ ಐಪಿಎಸ್ ಅಧಿಕಾರಿ ವಿರುದ್ಧ ಸಿಐಡಿ ತನಿಖೆ?
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಾರಿಗೆ ಇಲಾಖೆಗೆ ಅನಧಿಕೃತ ಟಿಪ್ಪಣಿಯನ್ನು 2022ರ ಮಾರ್ಚ್ 31ರಂದು ರವಾನಿಸಿತ್ತು.
ರಾಜ್ಯದ ಕೆಲವೊಂದು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕೆಲವೊಂದು ಐಷಾರಾಮಿ ಕಾರುಗಳಿಗೆ ಜೀವಾವಧಿ ತೆರಿಗೆ ಪಾವತಿಸಿಕೊಳ್ಳದೇ ನೋಂದಣಿ ಮಾಡಿ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ತೆರಿಗೆ ನಷ್ಟ ಉಂಟು ಮಾಡಿರುವ ಪ್ರಕರಣದ ಬಗ್ಗೆ 2022ರ ಮಾರ್ಚ್ 25ರಂದು ಅಧಿವೇಶನದಲ್ಲಿ ಪ್ರಸ್ತಾಪವಾದ ಐದೇ ದಿನದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬರೆದಿರುವ ಪತ್ರದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾಗಿದ್ದು ಮುನ್ನೆಲೆಗೆ ಬಂದಿತ್ತು.
‘ಐಪಿಎಸ್ ಅಧಿಕಾರಿ ಶಿವಕುಮಾರ್ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ರೋಸ್‌ಮೆರ್ಟಾ ಟೆಕ್ನಾಲಜಿ ಪ್ರೈವೈಟ್ ಲಿಮಿಟೆಡ್‌ಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು,’ ಎಂಬ ದೂರು ಅರ್ಜಿಯ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಸಂಖ್ಯೆ; ಸಿಆಸುಇ 43 ಎಸ್‌ಪಿಎಸ್ 2022- 31-03-2022) ಜೇಮ್ಸ್ ತಾರಕನ್ ಅವರು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅನಧಿಕೃತ ಟಿಪ್ಪಣಿ ಹಾಕಿದ್ದರು.
ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್ ಮತ್ತು ಇತರೆ ಕಾರ್ಡ್‌ಗಳನ್ನು ಪೂರೈಸುವ ರೋಸ್‌ಮೆರ್ಟಾ ಟೆಕ್ನಾಲಜೀಸ್ ಪ್ರೈವೈಟ್ ಲಿಮಿಟೆಡ್ ನ ಉದ್ಯೋಗಿ ಗಿರೀಶ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಕಂಪನಿಯಿಂದ ತನಗೆ ನೀಡಿದ್ದ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿಕೊಂಡು ತೆರಿಗೆ ಕಟ್ಟಿಸಿಕೊಳ್ಳದೇ ವಾಹನಗಳನ್ನು ನೋಂದಾಯಿಸುತ್ತಿದ್ದ ಎಂಬ ಆರೋಪದ ಕುರಿತು ಬಂಧಿಸಲಾಗಿತ್ತು.
ಕಂಪನಿಯ ತಾಂತ್ರಿಕ ತಜ್ಞನಾಗಿದ್ದ ಗಿರೀಶ್, ಹೆಚ್ಚಾಗಿ ಐಷಾರಾಮಿ ಕಾರುಗಳ ನೋಂದಣಿ ಸಂದರ್ಭದಲ್ಲಿ ಅಕ್ರಮ ಎಸಗಿದ್ದ ಎಂಬುದು ಪೊಲೀಸರ ತನಿಖೆ ವೇಳೆಯಲ್ಲಿ ಪತ್ತೆ ಹಚ್ಚಿದ್ದರು. ಹೊರ ರಾಜ್ಯಗಳ ಹೆಸರಿನಲ್ಲಿ ಕಾರುಗಳಿಗೆ ನಕಲಿ ನೋಂದಣಿ ಸಂಖ್ಯೆ ಲಗತ್ತಿಸಿ ಅದೇ ನೋಂದಣಿ ಸಂಖ್ಯೆ ಅಧರಿಸಿ ಪ್ರಕ್ರಿಯೆಯನ್ನೂ ಆರಂಭಿಸುತ್ತಿದ್ದ. ವಾಹನಗಳ ಮಾಲೀಕರಿಂದ ಯಾವುದೇ ತೆರಿಗೆ ಕಟ್ಟಿಸಿಕೊಳ್ಳದೇ ‘ಕೆಎ’ ನೋಂದಣಿ ಮಾಡಿಸಿಕೊಡುತ್ತಿದ್ದ. ಸರ್ಕಾರ ನಿಗದಿಪಡಿಸಿದ್ದ ತೆರಿಗೆಗಿಂತಲೂ ಕಡಿಮೆ ಹಣವನ್ನು ತಾನೇ ಪಡೆದುಕೊಳ್ಳುತ್ತಿದ್ದ’ ಎಂಬ ಅಂಶವನ್ನು ತನಿಖಾಧಿಕಾರಿಗಳು ಬಹಿರಂಗಗೊಳಿಸಿದ್ದರು.
ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪ; ಐಪಿಎಸ್ ಶಿವಕುಮಾರ್ ವಿರುದ್ಧ ಕ್ರಮಕ್ಕೆ ಪತ್ರ
ತನಗೆ ನೀಡಿದ್ದ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ವಾಹನಗಳ ವಿವರವನ್ನು ಅಕ್ರಮವಾಗಿ ‘ವಾಹನ್’ ತಂತ್ರಾಂಶದಲ್ಲಿ ದಾಖಲಿಸಿ ಕೃತ್ಯ ಎಸಗುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿಸಲಾಗಿತ್ತು. ‘ಔಡಿ, ಬೆನ್ಜ್, ಬಿಎಂಡಬ್ಲ್ಯು, ಜಾಗ್ವಾರ್, ಲ್ಯಾಂಬೋರ್ಗಿನಿ ಹಾಗೂ ಇತರೆ ಐಷಾರಾಮಿ ಕಾರುಗಳ ನೋಂದಣಿ ಸಂದರ್ಭದಲ್ಲಿ ಅಕ್ರಮ ಎಸಗಿರುವುದು ತನಿಖೆಯಿಂದ ಹೊರಬಂದಿತ್ತು.
ಪ್ರಾದೇಶಿಕ ಸಾರಿಗೆ ಕಚೇರಿಯ ಬೆಂಗಳೂರು ಕೇಂದ್ರದಲ್ಲಿ ಐಷಾರಾಮಿ ಕಾರುಗಳು ತೆರಿಗೆ ಪಾವತಿಸದೇ ನೋಂದಣಿ ಆಗಿರುವ ಕುರಿತು ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ನೇಮಿಸಲಾಗಿತ್ತು. 2021ರ ನವೆಂಬರ್ 30ರ ಅಂತ್ಯಕ್ಕೆ ನೋಂದಾಯಿಸಿದ್ದ 20 ಲಕ್ಷ ರು.ಗಳಿಗೂ ಮೇಲ್ಪಟ್ಟ ಬೆಲೆಯ ವಾಹನಗಳ ಪರಿಶೀಲನೆ ಮಾಡಿ ಕೆಲವೊಂದ ವಾಹನಗಳು ತೆರಿಗೆ ಪಾವತಿಸದೇ ನೋಂದಣಿ ಆಗಿವೆ ಎಂದು ತನಿಖಾ ತಂಡವು ವರದಿ ನೀಡಿತ್ತು.
ಅಲ್ಲದೆ ತೆರಿಗೆ ಪಾವತಿಸದೇ ನೋಂದಣಿಯಾದ ವಾಹನಗಳ ಕಡತಗಳೂ ನಾಪತ್ತೆಯಾಗಿರುವ ಕಾರಣ ತೆರಿಗೆ ನಷ್ಟದ ಕುರಿತು ನಿಖರವಾದ ಮಾಹಿತಿ ಲಭ್ಯವಾಗಿರುವುದಿಲ್ಲ ಎಂದು ಹಿಂದಿನ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಸದನಕ್ಕೆ ಉತ್ತರಿಸಿದ್ದರು.