ಷಡಕ್ಷರಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಲು ಕಡತ ಸಲ್ಲಿಕೆ; ತನಿಖಾ ವರದಿ ಕಸದಬುಟ್ಟಿಗೆಸೆದ ಸರ್ಕಾರ

ಬೆಂಗಳೂರು: ಕೆರೆಯಿಂದ ಅಕ್ರಮವಾಗಿ ಹೂಳನ್ನು ತೆಗೆದು ರಾಯಧನ ಪಾವತಿಸದೇ ಸಾಗಿಸಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್‌ ಷಡಾಕ್ಷರಿ ಅವರ ವಿರುದ್ಧದ ಪ್ರಕರಣವನ್ನು  ಮುಕ್ತಾಯಗೊಳಿಸಲು ಆರ್ಥಿಕ ಇಲಾಖೆಯ ಮೇಲಾಧಿಕಾರಿಗಳಿಗೆ ಕಡತವೊಂದು ಸಲ್ಲಿಕೆಯಾಗಿದೆ.

 

ಸಿ ಎಸ್‌ ಷಡಕ್ಷರಿ ಅವರನ್ನು ಶಿವಮೊಗ್ಗದಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಿರುವುದರ ಹಿಂದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಒತ್ತಡವಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಷಡಕ್ಷರಿ ಅವರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗವು ನಡೆಸಿದ್ದ ತನಿಖೆಯಲ್ಲಿ ಆರೋಪಗಳನ್ನು ಸಾಬೀತುಗೊಳಿಸಿತ್ತು. ಆದರೆ ಸಹಕಾರ ಸಂಘಗಳ ನಿಬಂಧಕರು ನೀಡಿದ್ದ ವರದಿಯಲ್ಲಿ ಎಸ್‌ ಷಡಕ್ಷರಿ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು. ಈಗ ಸಹಕಾರ ಸಂಘಗಳ ನಿಬಂಧಕರ ವರದಿಯನ್ನು ಮುಂದಿರಿಸಿ ಸರ್ಕಾರವು ಷಡಕ್ಷರಿ ಅವರ ಪ್ರಕರಣವನ್ನು ಮುಕ್ತಾಯಗೊಳಿಸಲು ಮುಂದಾಗಿರುವುದು ದಾಖಲೆಯಿಂದ ಗೊತ್ತಾಗಿದೆ.

 

ಷಡಕ್ಷರಿ ಅವರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ‘Seen, We may close’ ಎಂದು 2023ರ ಅಕ್ಟೋಬರ್‍‌ 2ರಂದು 10;42ಕ್ಕೆ ಟಿಪ್ಪಣಿ ಹಾಕಿದ್ದರು ಎಂಬುದು ತಿಳಿದು ಬಂದಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಈ ವಿಚಾರವನ್ನು ತಂದಿದ್ದಾರೆ ಎಂದೂ ತಿಳಿದು ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ  ಆರ್ಥಿಕ ಇಲಾಖೆಯ (FD 283/SAD/2023-ADM-FINANCE DEPAT SEC (COMPUTER NUMBER 1158008) ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದಲ್ಲಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ನಿರ್ಮಿಸುತ್ತಿರುವ ನಿವೇಶನ ಬಡಾವಣೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ಸುಮಾರು 500 ಲೋಡ್‌ ಮಣ್ಣನ್ನು ತೆಗೆಯಲಾಗಿತ್ತು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ ಜಗದೀಶ್‌ ಅವರು ದೂರು ಸಲ್ಲಿಸಿದ್ದರು.

 

ಈ ಪ್ರಕರಣದ ಕುರಿತಂತೆ 2023ರ ಅಗಸ್ಟ್‌ 11ರಿಂದ 2023ರ ಅಕ್ಟೋಬರ್‍‌ 3ರ ಬೆಳಗ್ಗೆ 11.08 ರವರೆಗೆ ಆರ್ಥಿಕ ಇಲಾಖೆಯಲ್ಲಿ ತೆರೆದಿರುವ ಕಡತದಲ್ಲಿ ನಿರ್ವಹಿಸಿರುವ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಈ ದೂರನ್ನಾಧರಿಸಿ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರರು ತನಿಖಾ ವರದಿ ಸಲ್ಲಿಸಿದ್ದರು. ಕೆರೆಯ ಹೂಳನ್ನು ಮೂರು ಅಡಿಗಿಂತ ಹೆಚ್ಚು ಅಂದರೆ ಹದಿನೈದು ಅಡಿಯ ಆಳದವರೆಗೆ ಕಾನೂನುಬಾಹಿರವಾಗಿ ತೆಗೆದಿರುವುದು ಸೇರಿದಂತೆ ಇನ್ನಿತರೆ ಅಂಶಗಳನ್ನು ತನಿಖೆಯಲ್ಲಿ ಸಾಬೀತುಪಡಿಸಿದ್ದರು.

 

ಈ ವರದಿ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆರ್ಥಿಕ ಇಲಾಖೆಯಲ್ಲಿ ಕಡತ (FD 283/SAD/2023-ADM-FINANCE DEPAT SEC (COMPUTER NUMBER 1158008) ತೆರೆಯಲಾಗಿತ್ತು.

 

ಟಿಪ್ಪಣಿ ಹಾಳೆಯಲ್ಲಿ ಏನಿದೆ?

 

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಬೆ ಮತ್ತು ಲೆಕ್ಕಪತ್ರ ಇಲಾಖೆಯು 2023ರ ಸೆ.20ರಂದು ಪತ್ರ ಮತ್ತು ಅಡಕಗಳನ್ನು ಸಲ್ಲಿಸಿದೆ. ಎಸ್ ಷಡಕ್ಷರಿ ಅವರು ಅಧ್ಯಕ್ಷರಾಗಿರುವ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಅಬ್ಬಲಗೆರೆ ಗ್ರಾಮದ ಕೆರೆಯ ಮಣ್ಣನ್ನು ಅನಧಿಕೃತವಾಗಿ ತೆಗೆದಿದ್ದಾರೆ ಎಂಬ ಕುರಿತು ತನಿಖೆ ನಡೆಸಿ ತನಿಖಾ ವರದಿ ಸಲ್ಲಿಸಬೇಕು ಎಂದು 2023ರ ಆಗಸ್ಟ್‌ 3ರಂದು ಕೋರಲಾಗಿತ್ತು.

 

ಅದರಂತೆ ಸಹಕಾರ ಸಂಘಗಳ ಉಪ ನಿಬಂಧಕರು ನೀಡಿದ್ದ ವರದಿ ಆಧರಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳು 2023ರ ಸೆ.5ರಂದು ಸರ್ಕಾರಕ್ಕೆ ವರದಿ ಮಾಡಿದ್ದರು. ‘ಕೆರೆಯ ಮಣ್ಣನ್ನು ಅನಧಿಕೃತವಾಗಿ ತೆಗೆದಿರುವ ವಿಷಯದಲ್ಲಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು ಅಥವಾ ಪದಾಧಿಕಾರಿಗಳ ಪಾತ್ರ ಇರುವುದಿಲ್ಲವೆಂದು ವರದಿ ಮಾಡಿರುತ್ತಾರೆ.

 

ಹಾಗೂ ಪಂಚಾಯತ್‌ರಾಜ್‌ ಇಂಜನಿಯರಿಂಗ್‌ ವಿಭಾಗದ ಕಾರ್ಯಪಾಲಕ ಇಂಜಿನಿಯರ್‍‌ ಅವರ ತನಿಖಾ ವರದಿಯನ್ನೂ ಲಗತ್ತಿಸಿ ಕಳಿಸಿದ್ದಾರೆ. ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಪ್ರಧಾನ ನಿರ್ದೇಶಕರ ಪ್ರಸ್ತಾವನೆಯಲ್ಲಿ ಸಿ ಎಸ್ ಷಡಕ್ಷರಿ ಅವರ ಪ್ರಕರಣದಲ್ಲಿ ಕೆರೆಯ ಮಣ್ಣನ್ನು ಅನಧಿಕೃತವಾಗಿ ತೆಗೆದಿರುವ ವಿಷಯದಲ್ಲಿ ಇವರ ಪಾತ್ರ ಇರುವುದಿಲ್ಲ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಅವಗಾಹನೆ ನಂತರ ಮುಕ್ತಾಯಗೊಳಿಸಬಹುದಾಗಿದೆ,’ ಎಂದು ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ನೇತ್ರಪ್ರಭಾ ಎಂ ದಯಾಪುಲೆ ಅವರು 2023ರ ಸೆ.30ರಂದೇ ಟಿಪ್ಪಣಿ ಹಾಕಿದ್ದರು ಎಂದು ಗೊತ್ತಾಗಿದೆ.

 

ತನಿಖಾ ವರದಿಯಲ್ಲೇನಿತ್ತು?

 

1. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಅಕ್ರಮವಾಗಿ ಹೂಳು ತೆಗೆಯಲು ತಮ್ಮ ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ನಿರಾಕ್ಷೇಪಣ ಪತ್ರವನ್ನು ನೀಡಿರುತ್ತಾರೆ.

 

2. ಈ ಕೆರೆಗೂ ಮತ್ತು ಹಿರಿಯ ಭೂ ವಿಜ್ಞಾನಿಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಸಂಬಂಧವಿರುವುದು ಕಾರ್ಯಪಾಲಕ ಅಭಿಯಂತರರು ಮತ್ತು ಪಂಚಾಯತ್‌ರಾಜ್‌ ಇಂಜನಿಯರ್‍‌ ಶಿವಮೊಗ್ಗ ಇವರಿಗೆ.

 

3. ಕೆರೆಯ ಹೂಳನ್ನು ಮೂರು ಅಡಿಗಿಂತ ಹೆಚ್ಚು ಅಂದರೆ ಹದಿನೈದು ಅಡಿ ಆಳದವರೆಗೆ ತೆಗೆದಿರುವುದು ಕಾನೂನುಬಾಹಿರ.

 

4. ಕೆರೆಯ ಮಣ್ಣನ್ನು (ಹೂಳನ್ನು) ಖಾಸಗಿ ಲೇಔಟ್‌ಗೆ ತೆಗೆದುಕೊಂಡು ಹೋಗುವ ಅನುಮತಿ ಕೋರಿರುವವರು ಮತ್ತು ತೆಗೆದುಕೊಂಡು ಹೋದವರು ಸಹ ಅಕ್ರಮದಲ್ಲಿ ಭಾಗಿಯಾಗಿರುತ್ತಾರೆ.

 

5. ಕೆರೆಯ ಮಣ್ಣಿಗೆ (ಹೂಳಿಗೆ) ರಾಯಲ್ಟಿಯ ಶುಲ್ಕ 71,45,920 ರು.ಗಳನ್ನು ಕಟ್ಟದೇ ಅಕ್ರಮವಾಗಿ ಸಾಗಿಸಿರುವುದು ಸಾಬೀತಾಗಿರುತ್ತದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts