ಮಾನವ ಅಂಗಗಳ ಕಸಿ ; 12 ವರ್ಷಗಳಾದರೂ ರಾಜ್ಯದಲ್ಲಿ ಅಳವಡಿಕೆಯಾಗದ ಕೇಂದ್ರದ ಕಾಯ್ದೆ

ಬೆಂಗಳೂರು; ಕೇಂದ್ರ ಸರ್ಕಾರವು 2011 ರಲ್ಲಿ ತಂದಿದ್ದ ‘ಮಾನವ ಅಂಗಗಳ ಕಸಿ (ತಿದ್ದುಪಡಿ) ಕಾಯಿದೆಯನ್ನು ಕರ್ನಾಟಕ ವಿಧಾನಮಂಡಲವು 12 ವರ್ಷಗಳಾದರೂ ಅಂಗೀಕರಿಸಿಲ್ಲ ಮತ್ತು ಇದನ್ನು ರಾಜ್ಯದಲ್ಲಿ ಇದುವರೆಗೂ ಅಳವಡಿಸಿಕೊಂಡಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಚಿಕಿತ್ಸಕ ಉದ್ದೇಶಗಳಿಗಾಗಿ ಮಾನವ ಅಂಗಗಳ ತೆಗೆಯುವಿಕೆ, ಶೇಖರಣೆ ಮತ್ತು ಕಸಿ ಮಾಡುವ ನಿಯಂತ್ರಣ ಮತ್ತು ಮಾನವ ಅಂಗಗಳಲ್ಲಿ ವಾಣಿಜ್ಯ ವ್ಯವಹಾರಗಳನ್ನು ತಡೆಗಟ್ಟಲು ಭಾರತ ಸರ್ಕಾರವು 1994 ರಲ್ಲಿ THO ಕಾಯಿದೆಯನ್ನು ಕಾನೂನುಬದ್ಧಗೊಳಿಸಿತು. ಮೃತರ ದೇಣಿಗೆಯನ್ನು ಪ್ರೋತ್ಸಾಹಿಸಲು 2011 ರಲ್ಲಿ ತಿದ್ದುಪಡಿ ಮಾಡಿತ್ತು.

 

ಆದರೆ ಕರ್ನಾಟಕ ವಿಧಾನಮಂಡಲವು ಇದುವರೆಗೂ ಇದನ್ನು ಭಾರತ ಸಂವಿಧಾನದ ಅನುಚ್ಛೇಧದ ಅಡಿಯಲ್ಲಿ ಅಂಗೀಕರಿಸಿಲ್ಲ ಎಂದು ಕರ್ನಾಟಕ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಿಳಿಸಿದೆ. ಇದೀಗ ಈ ಕಾಯ್ದೆಯನ್ನು ವಿಧಾನಮಂಡಲದಲ್ಲಿ ಅಂಗೀಕರಿಸುವ ಸಂಬಂಧ ಸಚಿವ ಸಂಪುಟದ ಮುಂದೆ ಇರಿಸಿದೆ. ಇದಕ್ಕೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಅನುಮೋದಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪ್ರಸ್ತಾವಿತ ತಿದ್ದುಪಡಿಯಿಂದ ಅಂಗಾಂಗ ದಾನದಲ್ಲಿ ನಡೆಯುವ ವಾಣಿಜ್ಯೀಕರಣವನ್ನು ತಡೆಯಬಹುದು. ವಿವಿಧ ಅಂಗಗಳ ಕಸಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆ ಮೂಲಕ ರಾಜ್ಯದಲ್ಲಿ ಗುಣಮಟ್ಟ ಆರೋಗ್ಯ ಸೇವೆಯನ್ನು ಸುವ್ಯವಸ್ಥಿತಗೊಳಿಸುವ ಉದ್ದೇಶ ಹೊಂದಿದೆ ಎಂದು ಸಂಸದೀಯ ವ್ಯವಹಾರಗಳ ಇಲಾಖೆಯು ವಿವರಿಸಿರುವುದು ಗೊತ್ತಾಗಿದೆ.

 

‘ಭಾರತ ಸಂವಿಧಾನದ ಅನುಚ್ಛೇದ 252 (1) ಮತ್ತು (2)ರ ಅನ್ವಯ ತಂದಿದ್ದ ‘ಮಾನವ ಅಂಗಗಳ ಕಸಿ (ತಿದ್ದುಪಡಿ) (Transplantation of Human Organs (Amendment) Act 2011 (Central Act 16 of 2011) ಕಾಯಿದೆ ಪ್ರಕರಣ 1ರ ಉಪ ಪ್ರಕರಣ (3) ಅನ್ವಯ ತಿದ್ದುಪಡಿ ಅಧಿನಿಯಮವನ್ನು ರಾಜ್ಯದಲ್ಲಿ ಅಳವಡಿಸುವ ಸಂಬಂಧ ಕರ್ನಾಟಕ ವಿಧಾನ ಮಂಡಲದ ಎರಡೂ ಸದನಗಳು ನಿರ್ಣಯ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಆಡಳಿತ ಇಲಾಖೆಗೆ ತಿಳಿಸಿದೆ.

 

ಕರ್ನಾಟಕ ಕಾನೂನು ಆಯೋಗದ 31ನೇ ವರದಿ ಪರಿಶೀಲಿಸಿದ್ದು ವರದಿ ಅನ್ವಯ ‘ಮಾನವ ಅಂಗಗಳ ಕಸಿ (ತಿದ್ದುಪಡಿ) ಕಾಯಿದೆ (Transplantation of Human Organs (Amendment) Act 2011 (Central Act 16 of 2011) ಭಾರತ ಸಂವಿಧಾನದ ಅನುಚ್ಛೇದದ ಅಡಿಯಲ್ಲಿ ವಿಧಾನ ಮಂಡಲವು ಅಂಗೀಕರಿಸಿರುವುದು ಕಂಡು ಬರುತ್ತಿಲ್ಲ,’ ಎಂದು ಸಂಸದೀಯ ವ್ಯವಹಾರಗಳ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಿಳಿಸಿರುವುದು ಗೊತ್ತಾಗಿದೆ.

 

ಅಲ್ಲದೇ ) (Transplantation of Human Organs (Amendment) Act 2011 (Central Act 16 of 2011) ಕಾಯಿದೆ 1ರ ಉಪ ಪ್ರಕರಣ (3) ಅನ್ವಯ ತಿದ್ದುಪಡಿ ಅಧಿನಿಯಮವನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಸಂಸದೀಯ ವ್ಯವಹಾರಗಳ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2019ರಲ್ಲಿಯೇ ಕಡತವನ್ನು ಮಂಡಿಸಿತ್ತು. ಆದರೆ ಹಿಂದಿನ ಸರ್ಕಾರವು ಇದನ್ನು ಸಚಿವ ಸಂಪುಟದ ಮುಂದಿರಿಸಿ ಅನುಮೋದನೆ ಪಡೆದುಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

 

ಮಾನವ ಅಂಗಾಂಗಗಳನ್ನು ತೆಗೆಯಲು ಅಧಿಕಾರ ನೀಡಿಕೆ, ಆಸ್ಪತ್ರೆ ಅಥವಾ ಬಂದಿಖಾನೆಯಲ್ಲಿ ಮೃತ ದೇಹಗಳನ್ನು ಕ್ಲೈಮ್‌ ಮಾಡದ ಸಂದರ್ಭದಲ್ಲಿ ಮಾನವ ಅಂಗಾಂಗಳನ್ನು ತೆಗೆಯಲು ಅಧಿಕಾರ ಕೊಡುವುದು, ವೈದ್ಯ, ಕಾನೂನಿನ ಅಥವಾ ರೋಗ ಲಕ್ಷಣ ಶಾಸ್ತ್ರದ ಉದ್ದೇಶಗಳಿಗಾಗಿ ಮರಣೋತ್ತರ ಪರೀಕ್ಷೆಗೆ ಕಳಿಸಿದ ದೇಹಗಳಿಂದ ಮಾನವ ಅಂಗಾಂಗಗಳನ್ನು ತೆಗೆಯವುದು, ಮಾನವ ಅಂಗಾಗಗಲ ಸಂರಕ್ಷಣೆ, ಕಸಿ ಮಾಡುವುದಕ್ಕೆ ನಿಷೇಧ, ಮಾನವ ಅಂಗಾಂಗಗಳನ್ನು ತೆಗೆಯುವುದರ ಮತ್ತು ಕಸಿ ಮಾಡುವುದರ ಬಗ್ಗೆ ನಿರ್ಬಂಧಗಳು, ಆಸ್ಪತ್ರೆಯ ನೋಂದಣಿ, ಅಧಾರವಿಲ್ಲದೇ ಮಾನವ ಅಂಗವನ್ನು ತೆಗೆಯುವುದಕ್ಕೆ ಶಿಕ್ಷೆ, ಮಾನವ ಅಂಗಾಂಗಗಳ ವಾಣಿಜ್ಯ ವ್ಯವಹಾರ ಮಾಡುವುದಕ್ಕೆ ದಂಡನೆಗೆ ಸಂಬಂಧಿಸಿದಂತೆ 1994ಲ್ಲಿ ಅಧಿನಿಯಮವನ್ನು ಭಾರತ ಸರ್ಕಾರವು ಜಾರಿಗೆ ತಂದಿತ್ತು.

 

ಆ ನಂತರ ಇದನ್ನು 2011ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಭಾರತದಲ್ಲಿ, ಅಂಗಾಂಗ ಕಸಿ ಮಾಡುವ ಅಭ್ಯಾಸವನ್ನು ಪ್ರಾಥಮಿಕವಾಗಿ 2011 ರ “ಮಾನವ ಅಂಗಗಳ ಕಸಿ (ತಿದ್ದುಪಡಿ) ಕಾಯಿದೆ” ಯಿಂದ ನಿಯಂತ್ರಿಸಲಾಗುತ್ತದೆ . ಇದನ್ನು “THO (ತಿದ್ದುಪಡಿ) ಕಾಯಿದೆ, 2011” ಎಂದೂ ಕರೆಯಲಾಗಿತ್ತು.

 

ಮೃತರ ದೇಣಿಗೆಯನ್ನು ಪ್ರೋತ್ಸಾಹಿಸಲು 2011 ರಲ್ಲಿ ತಿದ್ದುಪಡಿ ಮಾಡಿತ್ತು ಹತ್ತಿರದ ಸಂಬಂಧಿಗಳಿರುವ ಜೀವಂತ ವ್ಯಕ್ತಿಗಳಿಂದ ದೇಣಿಗೆಯನ್ನು ಅನುಮತಿಸಲು ಮತ್ತು ದೇಣಿಗೆಗಳನ್ನು ವಿನಿಮಯ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ಈ ಅಧಿನಿಯಮದಲ್ಲಿ ಹಲವಾರು ನ್ಯೂನತೆಗಳು ಉಳಿದಿವೆ.

 

ಆರಂಭದಲ್ಲಿ, 2011 ರ ಮಾನವ ಅಂಗಗಳ ಕಸಿ (ತಿದ್ದುಪಡಿ) ಕಾಯಿದೆಯು “ಇಡೀ ಗೋವಾ, ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ ಮತ್ತು ಇದು ನಿರ್ಣಯದ ಮೂಲಕ ಈ ಕಾಯಿದೆಯನ್ನು ಅಂಗೀಕರಿಸುವ ಇತರ ರಾಜ್ಯಗಳಿಗೆ ಅನ್ವಯಿಸಿತ್ತು. ಸಂವಿಧಾನದ 252 ನೇ ವಿಧಿಯ ಕಲಂ (1) ಅಡಿಯಲ್ಲಿ ಪರವಾಗಿ ತಮ್ಮದೇ ಆದ ಕಾನೂನುಗಳನ್ನು ಹೊಂದಿರುವ ಆಂಧ್ರದಂತಹ ಕೆಲವನ್ನು ಹೊರತುಪಡಿಸಿ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಅಳವಡಿಸಿಕೊಂಡಿವೆ.

 

ಅಂಗಗಳ ಕಳ್ಳಸಾಗಣೆಯು ಮುಖ್ಯವಾಗಿ ಕಸಿ ಮಾಡುವ ಉದ್ದೇಶಕ್ಕಾಗಿ ಮಾನವ ಅಂಗಗಳ ಅಕ್ರಮ ವ್ಯಾಪಾರವು ಈಗಲೂ ಮುಂದುವರೆದಿದೆ. ಮಾನವ ಅಂಗಗಳ ಕಸಿ ತಿದ್ದುಪಡಿ ಕಾಯಿದೆ, 1994 ಮೂಲಕ ಭಾರತದಲ್ಲಿ ಅಂಗಾಂಗ ತೆಗೆಯುವಿಕೆಗಾಗಿ ಮಾನವ ಕಳ್ಳಸಾಗಣೆಯನ್ನು ನಿರ್ಬಂಧಿಸುವ ಗಮನಾರ್ಹ ಪ್ರಯತ್ನಗಳು ನಡೆದಿದ್ದವು. ಅಲ್ಲದೇ ಅಂಗಾಂಗ ವ್ಯಾಪಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದರೂ ನಿರೀಕ್ಷೆಯಂತೆ ಪ್ರಗತಿ ಸಾಧಿಸಿಲ್ಲ.

the fil favicon

SUPPORT THE FILE

Latest News

Related Posts