ಪ್ರತ್ಯೇಕ ಸಿಇಟಿ; ಪಿಇಎಸ್‌ ಸೇರಿ ಖಾಸಗಿ ವಿವಿಗಳಿಂದ ಆದೇಶ ಉಲ್ಲಂಘನೆ, ಕಸದಬುಟ್ಟಿಗೆ ಸೇರಿದ ವರದಿ

ಬೆಂಗಳೂರು; ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಪಿಇಎಸ್‌ ವಿಶ್ವವಿದ್ಯಾಲಯವು ಸೇರಿದಂತೆ ರಾಜಕೀಯ ಪ್ರಭಾವಿಗಳ ಒಡೆತನದಲ್ಲಿರುವ ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ಸರ್ವೋಚ್ಛ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಪ್ರತ್ಯೇಕ ಪ್ರವೇಶ ಪರೀಕ್ಷೆ ಮತ್ತು ಕೌನ್ಸಲಿಂಗ್‌ ನಡೆಸಿದೆ ಎಂದು ಪ್ರವೇಶ ಮೇಲ್ವಿಚಾರಣೆ ಸಮಿತಿ ಹೇಳಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

 

2020ರಲ್ಲಿ ಪಿಇಎಸ್‌ ವಿಶ್ವವಿದ್ಯಾಲಯದ ವಿರುದ್ಧ ದಾಖಲಾಗಿದ್ದ ದೂರನ್ನಾಧರಿಸಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ ಮನೋಹರ್‍‌ ಅಧ್ಯಕ್ಷತೆಯಲ್ಲಿದ್ದ ಪ್ರವೇಶ ಮೇಲ್ವಿಚಾರಣೆ ಸಮಿತಿಯು ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ವರದಿ ನೀಡಿ 3 ವರ್ಷಗಳಾದರೂ ಉನ್ನತ ಶಿಕ್ಷಣ ಇಲಾಖೆಯು ಯಾವುದೇ ಕ್ರಮ ವಹಿಸದೇ ಲೋಪ ಎಸಗಿರುವುದು ಕಂಡು ಬಂದಿದೆ.

 

ವಿಶೇಷವೆಂದರೆ ಪಿ ಇ ಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಆಗಿರುವ ಡಾ ಎಂ ಆರ್‍‌ ದೊರೆಸ್ವಾಮಿ ಅವರು ಹಿಂದಿನ ಇಬ್ಬರು ಮುಖ್ಯಮಂತ್ರಿಗಳಿಗೆ ಶೈಕ್ಷಣಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

 

ಈ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ದಾಖಲಾತಿಗಳನ್ನು ಪಡೆದುಕೊಂಡಿದೆ.

 

ಉನ್ನತ ಶಿಕ್ಷಣ ಇಲಾಖೆಯು ಒದಗಿಸಿರುವ ದಾಖಲೆಗಳ ಪ್ರಕಾರ 2023ರ ಜೂನ್‌ 16ವರೆಗೆ ಕಡತ ಚಲನೆಯಲ್ಲಿದೆ. ಆದರೆ ಪಿಇಎಸ್‌ ವಿಶ್ವವಿದ್ಯಾಲಯದ ವಿರುದ್ಧ ನೋಟೀಸ್‌ ಕೂಡ ನೀಡದೇ ಇರುವುದು ಸೇರಿದಂತೆ ಯಾವುದೇ ಕ್ರಮ ವಹಿಸಿರುವ ಬಗ್ಗೆ ದಾಖಲೆಗಳು ಕಡತದಲ್ಲಿ ಕಂಡು ಬಂದಿಲ್ಲ.

 

ಪಿಇಎಸ್‌ ವಿಶ್ವವಿದ್ಯಾಲಯವು ಬಿ ಟೆಕ್‌ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿ 2020ರ ಸೆಪ್ಟಂಬರ್‍‌ 18ರಿಂದ 20ವರೆಗೆ ಕೌನ್ಸಲಿಂಗ್‌ ನಡೆಸಿತ್ತು. ಇದು ಸರ್ವೋಚ್ಛ ನ್ಯಾಯಾಲಯ ನೀಡಿದ್ದ ತೀರ್ಪು ಮತ್ತು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಗಳ ಉಲ್ಲಂಘನೆಯಾಗಿತ್ತು. ಈ ಕುರಿತು ಪ್ರವೇಶ ಮೇಲ್ವಿಚಾರಣೆ ಸಮಿತಿಯು ಪಿಇಎಸ್‌ ವಿಶ್ವವಿದ್ಯಾಲಯದ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಿತ್ತು ಎಂಬ ಅಂಶವನ್ನು ಕಡತದ ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿದೆ.

 

ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶ ಮತ್ತು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಪ್ರವೇಶ, ನಿಯಂತ್ರಣ ಮತ್ತು ಶುಲ್ಕ ನಿಗದಿ) ಅಧಿನಿಯಮ 2006ರ ಕಲಂ 04 ಅನ್ವಯ ಒಂದೇ ರೀತಿಯ ವೃತ್ತಿಪರ ಶಿಕ್ಷಣವನ್ನು ನೀಡುತ್ತಿರುವ ಎಲ್ಲಾ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಎಲ್ಲಾ ಖಾಸಗಿ ಅನುದಾನ ರಹಿತ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹಾಗೂ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್‌ ವಿಶ್ವವಿದ್ಯಾಲಯ) ಒಟ್ಟಾಗಿ ಸೇರಿಕೊಂಡು ಪಾರದರ್ಶಕತೆ ಮತ್ತು ಅರ್ಹತೆ ಪೂರೈಸಲು ವೃತ್ತಿ ಪರ ಇಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕು.

 

ಕೇಂದ್ರೀಕೃತ ಸಮಾಲೋಚನೆ ಅಥವಾ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರವೇಶಾತಿ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಇದರಲ್ಲಿ ಕಾಮೆಡ್‌ ಕೆ ಕೋಟಾ, ಕೆಆರ್‍ಎಲ್‌ಎಂಪಿಸಿಎ ಕೋಟಾ, ಮ್ಯಾನೇಜ್‌ಮೆಂಟ್‌ ಕೋಟಾ, ಖಾಸಗಿ ಡೀಮ್ಡ್‌ ವಿವಿ ಸೀಟುಗಳು, ಖಾಸಗಿ ವಿಶ್ವವಿದ್ಯಾಲಯದ ಸೀಟುಗಳು ಒಳಗೊಂಡಿದ್ದವು.
ಆದರೆ ಪಿಇಎಸ್‌ ವಿಶ್ವವಿದ್ಯಾಲಯವು ಸರ್ವೋಚ್ಛ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿತ್ತು. ಅಲ್ಲದೇ ಕೌನ್ಸಲಿಂಗ್‌ ಪ್ರಕ್ರಿಯೆಯನ್ನೂ ನಡೆಸಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

 

ಪ್ರವೇಶ ಮೇಲ್ವಿಚಾರಣೆ ಸಮಿತಿ ವರದಿಯಲ್ಲೇನಿದೆ?

 

ಪಿಇಎಸ್‌ ವಿಶ್ವವಿದ್ಯಾಲಯವು ಬಿ ಟೆಕ್‌ ಕೋರ್ಸ್‌ಗಳಿಗೆ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಿದೆ. ಈ ಮೂಲಕ ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲಂಘಿಸಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸದೇ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದಂತಾಗಿದೆ. 2020ರ ಸೆಪ್ಟಂಬರ್‍‌ 18ರಿಂದ 20ರವರೆಗೆ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಿರುವುದನ್ನು ಒಪ್ಪಿಕೊಂಡಿದೆ. ಈ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ನಿರ್ದೇಶನ ನೀಡಿತ್ತು.

 

ಕರ್ನಾಟಕ ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್‌ ಸಂಘ, ಕರ್ನಾಟಕ ಖಾಸಗಿ ಅನುದಾನ ರಹಿತ, ಕರ್ನಾಟಕ ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ, ಕರ್ನಾಟಕ ಅಲ್ಪಸಂಖ್ಯಾತ ವೃತ್ತಿ ಪರ ಕಾಲೇಜುಗಳ ಸಂಘ ಒಳಗೊಂಡಂತೆ ಇತರೆ ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ವೃತ್ತಿ ಪರ ಇಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಉನ್ನತ ಶಿಕ್ಷಣ ಇಲಾಖೆಯೇ (ತಾಂತ್ರಿಕ ಶಿಕ್ಷಣ) ಒಪ್ಪಿಕೊಂಡಿತ್ತು.

 

ಆದರೂ ಈಗಿನ ಕಾಂಗ್ರೆಸ್‌ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಅಲ್ಲದೇ ಹಾಲಿ ಸಚಿವ ಎಂ ಸಿ ಸುಧಾಕರ್‍‌ ಅವರೂ ಸಹ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಗೊತ್ತಾಗಿದೆ.

 

ಪಿಇಎಸ್‌ ವಿಶ್ವವಿದ್ಯಾಲಯ ಮಾತ್ರವಲ್ಲದೇ ಎಂ ಎಸ್‌ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯಗಳು ಪ್ರತ್ಯೇಕ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಅಧಿಸೂಚನೆ ಹೊರಡಿಸಿದ್ದವು ಎಂಬುದು ಉನ್ನತ ಶಿಕ್ಷಣ ಇಲಾಖೆಯ ದಾಖಲೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts