‘ಸಾರ್ವಜನಿಕ ಉದ್ದಿಮೆ’ ಇಲಾಖೆ ಹೆಸರು ತೆಗೆದ ಸಚಿವ; ಅಧಿಸೂಚನೆ ಹಿಂಪಡೆದುಕೊಳ್ಳದ ಸರ್ಕಾರ

ಬೆಂಗಳೂರು; ಸಾರ್ವಜನಿಕ ಉದ್ಯಮಗಳ ಇಲಾಖೆಯು ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಒಪ್ಪಿಕೊಂಡಿದ್ದರ ಬೆನ್ನಲ್ಲೇ ಸಚಿವ ಶರಣ ಬಸಪ್ಪ ದರ್ಶಾನಪುರ ಅವರು ಇದೀಗ ವಿಧಾನಸೌಧದ ತಮ್ಮ ಕೊಠಡಿಯ ನಾಮಫಲಕದಲ್ಲಿದ್ದ ಸಾರ್ವಜನಿಕ ಉದ್ದಿಮೆ ಇಲಾಖೆ ಹೆಸರನ್ನು ತೆಗೆದುಹಾಕಿ ಕೇವಲ ಸಣ್ಣ ಕೈಗಾರಿಕೆ ಸಚಿವರು ಎಂಬುದನ್ನಷ್ಟೇ ಉಳಿಸಿಕೊಂಡಿದ್ದಾರೆ. ಆದರೆ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸಚಿವ ಎಂದು ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಸರ್ಕಾರವು ಇದುವರೆಗೂ ಹಿಂಪಡೆದುಕೊಂಡಿಲ್ಲ.

 

ಸಾರ್ವಜನಿಕ ಉದ್ಯಮಗಳ ಇಲಾಖೆಯು ರದ್ದಾಗಿದ್ದರೂ ಸಹ ಅದೇ ಇಲಾಖೆಯ ಸಚಿವರು ಎಂಬುದನ್ನು   ನಾಮಫಲಕ ಮತ್ತು ತಮ್ಮ ಲೆಟರ್‍‌ ಹೆಡ್‌ನಲ್ಲಿಯೂ ಮುಂದುವರೆಸಿದ್ದರು. ಈ ಕುರಿತು ‘ದಿ ಫೈಲ್‌’ ಪ್ರಕಟಿಸಿದ ಸರಣಿ ವರದಿಗಳು ಚರ್ಚೆಗೆ ಗ್ರಾಸವಾಗಿದ್ದವು. ಈ ಇಲಾಖೆಯು  ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಿರುವುದನ್ನು ಒಪ್ಪಿಕೊಂಡು ‘ದಿ ಫೈಲ್‌’ ವರದಿಗೆ ಪ್ರತಿಕ್ರಿಯಿಸಿದ್ದ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈಗ ಇಲಾಖೆಯ ಹೆಸರನ್ನೇ ನಾಮಫಲಕದಿಂದ ತೆಗೆದು ಹಾಕಿರುವುದು ಸದ್ಯ ಎದುರಾಗಿದ್ದ ಮುಜುಗರದಿಂದ ಪಾರಾಗಲು ಯತ್ನಿಸಿದಂತಿದೆ.

 

ಆದರೆ 100 ದಿನಗಳ ಹಿಂದೆಯೇ  ರಾಜ್ಯಪಾಲರು ಹೊರಡಿಸಿದ್ದ ಅಧಿಸೂಚನೆಯಲ್ಲಿ  ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸಚಿವರು ಎಂಬುದು ಈಗಲೂ ಹಾಗೆಯೇ ಇದೆ. ನಾಮಫಲಕದಿಂದ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಎಂದು ತೆಗೆದು ಹಾಕುವುದಷ್ಟೇ ಅಲ್ಲ, ಅಧಿಸೂಚನೆಯನ್ನೂ ಹಿಂಪಡೆದುಕೊಂಡು ತಿದ್ದುಪಡಿ ಅಧಿಸೂಚನೆ ಹೊರಡಿಸಬೇಕು ಎಂಬ ಅಭಿಪ್ರಾಯಗಳೂ ಅಧಿಕಾರಶಾಹಿಯಿಂದ  ಕೇಳಿ ಬಂದಿವೆ.

 

ಕಾಂಗ್ರೆಸ್‌ ಸರ್ಕಾರವು  100 ದಿನಗಳನ್ನು ಪೂರ್ಣಗೊಳಿಸಲು ಕೆಲವೇ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿಯೇ 121  ಸಾರ್ವಜನಿಕ ಉದ್ದಿಮೆಗಳ ನಿರ್ವಹಣೆ ಹೊತ್ತಿರುವ ಸಾರ್ವಜನಿಕ ಉದ್ದಿಮೆಗಳ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈ ನೂರು ದಿನದಲ್ಲಿ ಒಂದೇ ಒಂದು ಸಭೆಯನ್ನು ನಡೆಸಿಲ್ಲ ಎಂದು ಆರ್‌ಟಿಐ ದಾಖಲೆ ಸಹಿತ   ‘ದಿ ಫೈಲ್‌’ ವರದಿ ಮಾಡಿತ್ತು. ವರದಿ  ಬೆನ್ನಲ್ಲೇ  ಸಚಿವ ಶರಣ ಬಸಪ್ಪ ದರ್ಶನಾಪುರ ಅವರು  ಮಾಡಿರುವ ಟ್ವೀಟ್‌ ಮಹತ್ವ ಪಡೆದುಕೊಂಡಿತ್ತು.

ಸಾರ್ವಜನಿಕ ಉದ್ಯಮ ಇಲಾಖೆ ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಒಪ್ಪಿಕೊಂಡ ಸಚಿವ

 

ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಿರುವ ಕಾರಣ ಈ ಇಲಾಖೆಯು ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದೆ.  ಅಲ್ಲದೇ ಇಲಾಖೆಯು ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಅವರೇ ಖುದ್ದು  ಸಮಜಾಯಿಷಿ ನೀಡಿದ್ದಾರಾದರೂ ಇದೇ ಖಾತೆಯಲ್ಲಿ ಅವರು ಈಗಲೂ ಮುಂದುವರೆದಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸಾಮಾಜಿಕ ಕಾರ್ಯಕರ್ತ ಹೆಚ್‌ ಎಂ ವೆಂಕಟೇಶ್‌ ಅವರು ರಾಜ್ಯಪಾಲರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.  ಆಮ್‌ ಆದ್ಮಿ ಪಕ್ಷವೂ ಸಹ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

 

ರಾಜ್ಯಪಾಲರನ್ನೇ ತಪ್ಪು ದಾರಿಗೆ ಎಳೆದ ಸರ್ಕಾರ; ದಿ ಫೈಲ್‌ ವರದಿ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷ ತರಾಟೆ

 

ಟ್ವೀಟ್‌ನಲ್ಲೇನಿತ್ತು?

 

ನನಗೆ ಖಾತೆ ಹಂಚಿಕೆಯ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ ಖಾತೆಯ ಜೊತೆಗೆ ಸಾರ್ವಜನಿಕ ಉದ್ಯಮಗಳ ಖಾತೆಯೂ ಕೂಡಾ ಹಂಚಿಕೆಯಾಗಿದ್ದು ಸತ್ಯ.. ಆದರೆ ಕಳೆದ ಹಲವು ದಿನಗಳ ಹಿಂದೆಯೇ ಸಾರ್ವಜನಿಕ ಉದ್ಯಮಗಳ ಖಾತೆಯನ್ನು ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಲಾಗಿದ್ದು, ಸದರಿ ಇಲಾಖೆಯು ನನ್ನ ವ್ಯಾಪ್ತಿಗೆ ಒಳಪಡುವುದಿಲ್ಲ. ಆ ಕಾರಣದಿಂದಲೇ ನಮ್ಮ ಕಛೇರಿಯಿಂದ ಸಭೆ ನಡೆಸಿಲ್ಲವೆಂಬ ಸ್ಪಷ್ಟನೆ ನೀಡಲಾಗಿತ್ತು.

 

ಸಣ್ಣ ಕೈಗಾರಿಕಾ ಇಲಾಖೆಯ ಸಚಿವನಾಗಿ ನನ್ನ ಇಲಾಖೆಯನ್ನು ಅತ್ಯಂತ ಮುತುವರ್ಜಿಯಿಂದ ಮುನ್ನಡೆಸುತ್ತಿರುವೆ. ಈಗಾಗಲೇ ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ, ಸರಕಾರಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಿರುವುದರಿಂದಲೇ, ರಾಜ್ಯದ ಏಳು ಕಡೆಗೆ ಕೈಗಾರಿಕಾ ಹಬ್ ಸ್ಥಾಪನೆಗೆ ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿ, ಬಜೆಟ್ ನಲ್ಲಿ ಸಹ ಘೋಷಣೆ ಮಾಡಿದ್ದರು.

 

ಸಣ್ಣ ಕೈಗಾರಿಕಾ ಇಲಾಖೆಯಡಿ ಬರುವ ತೆಂಗಿನ ನಾರು ಅಭಿವೃದ್ಧಿ ಮಂಡಳಿ,ಕರಕುಶಲ ಅಭಿವೃದ್ಧಿ ಮಂಡಳಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಸೇರಿದಂತೆ ಹಲವು ನಿಗಮಗಳ ಅಧಿಕಾರಿಗಳೊಂದಿಗೆ ಅನೇಕ ಸಭೆಗಳನ್ನು ನಾನು ಖುದ್ದಾಗಿ ನಡೆಸಿರುತ್ತೇನೆ.

 

ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಸಣ್ಣ ಕೈಗಾರಿಕೆ ಕ್ಷೇತ್ರದ ಬೆಳವಣಿಗೆ ಮಾಡುವ ಸಂಕಲ್ಪ ತೊಟ್ಟಿರುವೆ. ಸಭೆ ಹಾಗೂ ಚರ್ಚೆಗಳು ಆಡಳಿತದ ನಿರಂತರ ಪ್ರಕ್ರಿಯೆಯಾಗಿವೆ. ಮಾಧ್ಯಮದ ಮೂಲಕ ತಾವು ನಮ್ಮನ್ನು ಸದಾ ಹೀಗೆಯೇ ಎಚ್ಚರಿಸುತ್ತಲಿದ್ದರೆ ನಾವು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದರು.

 

 

ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೇರಿರುವ  ಕಾಂಗ್ರೆಸ್‌ ಸರ್ಕಾರವು 100 ದಿನಗಳನ್ನು ಪೂರ್ಣಗೊಳಿಲು ಕೆಲವೇ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿಯೇ 121  ಸಾರ್ವಜನಿಕ ಉದ್ದಿಮೆಗಳ ನಿರ್ವಹಣೆ ಹೊತ್ತಿರುವ ಸಾರ್ವಜನಿಕ ಉದ್ದಿಮೆಗಳ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈ ನೂರು ದಿನದಲ್ಲಿ ಒಂದೇ ಒಂದು ಸಭೆಯನ್ನು ನಡೆಸಿಲ್ಲ ಎಂಬುದು ಬಹಿರಂಗಗೊಂಡಿತ್ತು.

 

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 100 ದಿನಗಳ  ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದೆ. ಈ ನೂರು ದಿನದಲ್ಲಿ ಸಚಿವ ಸಂಪುಟದ ಬಹುತೇಕ ಎಲ್ಲಾ ಸಚಿವರೂ ತಮ್ಮ ತಮ್ಮ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ, ಸಮಾಲೋಚನೆ ನಡೆಸಿದ್ದರೇ ಸಾರ್ವಜನಿಕ ಉದ್ದಿಮೆಗಳಿಗೆ ಸಂಬಂಧಿಸಿದಂತೆ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಮಾತ್ರ ಒಂದೇ ಒಂದು ಸಭೆ ನಡೆಸಿಲ್ಲ ಎಂಬ ಸಂಗತಿಯು ಚರ್ಚೆಗೆ ಕಾರಣವಾಗಿತ್ತು.

ಸಾರ್ವಜನಿಕ ಉದ್ದಿಮೆ ಇಲಾಖೆ ಸಚಿವರಾಗಿ ನೂರು ದಿನಗಳಾದರೂ ಒಂದೇ ಒಂದು ಸಭೆ ನಡೆಸದ ಸಚಿವ

ಈ ಕುರಿತು ‘ದಿ ಫೈಲ್‌’ ಸಲ್ಲಿಸಿದ್ದ ಆರ್‍‌ಟಿಐ ಅಡಿಯಲ್ಲಿ ಕೇಳಿದ್ದ ಮಾಹಿತಿಗೆ ಉತ್ತರ ನೀಡಿರುವ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಯು 2023ರ ಆಗಸ್ಟ್‌ 16ರಂದು ಮಾಹಿತಿ ನೀಡಿದ್ದಾರೆ. ‘ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಸಂಬಂಧಿಸಿದಂತೆ ಸಚಿವರು ಯಾವುದೇ ಸಭೆಗಳನ್ನೂ ನಡೆಸಿರುವುದಿಲ್ಲ,’ ಎಂದು ಒಂದು ಸಾಲಿನ ಮಾಹಿತಿ ಒದಗಿಸಿದ್ದರು.

 

 

 

 

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಶರಣಬಸಪ್ಪ ದರ್ಶನಾಪುರ್‍‌ ಅವರನ್ನು ಸಚಿವರನ್ನಾಗಿ ನೇಮಿಸಿ ರಾಜ್ಯಪಾಲರು 2023ರ ಮೇ 28ರಂದು ಅಧಿಸೂಚನೆ (GS 33 GOB 2023-DATED 28-05-2023) ಹೊರಡಿಸಿದ್ದರು. ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನೇ ಹಿಂದಿನ ಸರ್ಕಾರವು ರದ್ದುಗೊಳಿಸಿದ್ದರೂ ಅಸ್ತಿತ್ವದಲ್ಲಿ ಇಲ್ಲದೇ ಇರುವ ಇಲಾಖೆಗೆ ಸಚಿವರನ್ನಾಗಿ ನೇಮಿಸಿರುವುದು ಖುದ್ದು ಶರಣ ಬಸಪ್ಪ ದರ್ಶನಾಪುರ್ ಅವರನ್ನೂ ಗೊಂದಲಕ್ಕೆ ಬೀಳಿಸಿತ್ತು. ಈ ಕುರಿತು ‘ದಿ ಫೈಲ್‌’ 2023 ಜೂನ್‌ 6ರಂದೇ ಎಕ್ಸ್‌ಕ್ಲೂಸಿವ್‌ ವರದಿ ಪ್ರಕಟಿಸಿತ್ತು.

ರದ್ದಾಗಿರುವ ಇಲಾಖೆಗೆ ಶರಣಬಸಪ್ಪ‌ ಸಚಿವ; ಮುಜುಗರಕ್ಕೆ ಸಿಲುಕಿದ ರಾಜ್ಯಪಾಲ, ಮುಖ್ಯಮಂತ್ರಿ

ಅಧಿಸೂಚನೆ ಪ್ರಕಾರ ಎರಡು ಇಲಾಖೆ ಹಂಚಿಕೆಯಾಗಿದೆ ಎಂದು ಸಂತಸದಿಂದ ಇದ್ದ ಶರಣಬಸಪ್ಪ ದರ್ಶನಾಪುರ್‍‌ ಅವರಿಗೀಗ ವಾಸ್ತವದಲ್ಲಿ ಇರುವುದು ಒಂದೇ ಇಲಾಖೆ ಮಾತ್ರ. ಹಿಂದಿನ ಸರ್ಕಾರದಲ್ಲಿಯೇ ರದ್ದುಗೊಂಡಿರುವ ಇಲಾಖೆಯನ್ನು ತಮಗೆ ಹಂಚಿಕೆ ಮಾಡಿರುವುದಕ್ಕೆ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದರು.

 

ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಸಚಿವ ಶರಣ ಬಸಪ್ಪ ದರ್ಶನಾಪುರ್‍‌ ಅವರು ಈ ಬಗ್ಗೆ ಸ್ಪಷ್ಟೀಕರಣ ಕೋರಿ ಸಿಬ್ಬಂದಿ ಮತ್ತು ಆಡಳಿತ ಮತ್ತು ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಟಿಪ್ಪಣಿ ಬರೆದಿದ್ದನ್ನು ಸ್ಮರಿಸಬಹುದು.

 

ರಾಜ್ಯದಲ್ಲಿ ಒಟ್ಟಾರೆ 121 ಸಾರ್ವಜನಿಕ ಉದ್ದಿಮೆಗಳಿವೆ. ಇದರಲ್ಲಿ 24 ಸಾರ್ವಜನಿಕ ಉದ್ದಿಮೆಗಳು ಲಾಭದಲ್ಲಿವೆ. ನಷ್ಟ ಉದ್ದಿಮೆಗಳು ನಷ್ಟದಲ್ಲಿದ್ದರೇ, 13 ಉದ್ದಿಮೆಗಳು ಲಾಭ ಮತ್ತು ನಷ್ಟ ಅನ್ವಯಿಸದೇ ಇರುವ ಸಾರ್ವಜನಿಕ ಉದ್ದಿಮೆಗಳಾಗಿವೆ. ಅಲ್ಲದೇ ಸಾಮಾಜಿಕ ಸೇವೆ ಹಾಗೂ ಸಮುದಾಯಗಳ ಅಭಿವೃದ್ಧಿಗಾಗಿ 18 ಸಾರ್ವಜನಿಕ ಉದ್ದಿಮೆಗಳಿವೆ. 13 ಸಾರ್ವಜನಿಕ ಉದ್ದಿಮೆಗಳು ನಿಷ್ಕ್ರೀಯಗೊಂಡಿವೆ.

the fil favicon

SUPPORT THE FILE

Latest News

Related Posts