ರಾಜ್ಯಪಾಲರನ್ನೇ ತಪ್ಪು ದಾರಿಗೆ ಎಳೆದ ಸರ್ಕಾರ; ದಿ ಫೈಲ್‌ ವರದಿ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷ ತರಾಟೆ

ಬೆಂಗಳೂರು;ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ರದ್ದಾಗಿದ್ದರೂ ಅದೇ ಖಾತೆಯಲ್ಲಿ ಮುಂದುವರೆಯುತ್ತಿರುವ ಕುರಿತು ‘ದಿ ಫೈಲ್‌’ ಪ್ರಕಟಿಸಿದ ವರದಿಗಳ ಬೆನ್ನಲ್ಲೇ ಇದೀಗ ಆಮ್‌ ಆದ್ಮಿ ಪಕ್ಷವೂ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೇವಲ ಹೆಸರಿಗೆ ಸಚಿವರಾಗಿರುವವರನ್ನು ಸಂಪುಟದಲ್ಲಿ ಏಕೆ ಇಟ್ಟುಕೊಂಡಿದ್ದೀರಿ ಎಂದು ಕಾಂಗ್ರೆಸ್‌ ಸರ್ಕಾರವನ್ನು ಪ್ರಶ್ನಿಸಿದೆ.

 

 

ನೂರು ದಿನ ಕಳೆದರೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಒಂದೇ ಒಂದು ಸಾರ್ವಜನಿಕ ಸಭೆ ನಡೆಸಿಲ್ಲ. ಇತ್ತ ಸಾರ್ವಜನಿಕರ ಕೈಗೂ ಸಿಗುತ್ತಿಲ್ಲ, ಅತ್ತ ಉದ್ದಿಮೆದಾರರ ಕೈಗೂ ಸಿಗುತ್ತಿಲ್ಲ. ಕೇವಲ ಹೆಸರಿಗೆ ಸಚಿವರಾಗಿರುವವರನ್ನು ಸಂಪುಟದಲ್ಲಿ ಏಕೆ ಇಟ್ಟುಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿರುವ  ಎಎಪಿ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಅವರು  ಹಿಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಖಾತೆಯನ್ನೇ ರದ್ದುಪಡಿಸಿದ್ದರೂ, ಆ ಖಾತೆಗೆ ಸಚಿವ ಶರಣಬಸಪ್ಪ ದರ್ಶನಾಪುರ ಅವರನ್ನು ನೇಮಕಗೊಳಿಸಿರುವುದು ಅನುಮಾನಕ್ಕೆ ಆಸ್ಪದ ಕೊಡುವಂತಿದೆ. ವಿಧಾನಸೌಧದಲ್ಲಿನ ಸಚಿವ ಶರಣಬಸಪ್ಪ ದರ್ಶನಪುರ ಅವರ ಅಧಿಕೃತ ಕೊಠಡಿಯ ಬಾಗಿಲಿಗೆ ಅಳವಡಿಸಿದ್ದ ಫಲಕವು ಗೊಂದಲ ಮೂಡಿಸುವಂತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

 

 

ರಾಜ್ಯ ಸರ್ಕಾರದ ಸಚಿವರುಗಳ ಖಾತೆ ಹಂಚಿಕೆಯ ಸಂದರ್ಭದಲ್ಲಿ  ರಾಜ್ಯಪಾಲರಿಗೆ ಸಲ್ಲಿಸಿದ ಖಾತೆ ಹಂಚಿಕೆಯ ವಿವರಗಳಲ್ಲಿ ಸಾರ್ವಜನಿಕ ಉದ್ದಿಮೆ ಖಾತೆಯ ಸಚಿವರಾಗಿ ಶರಣಬಸಪ್ಪ ದರ್ಶನಪುರ ಅವರನ್ನು ಸಾರ್ವಜನಿಕ ಉದ್ದಿಮೆ ಖಾತೆಯ ಸಚಿವರಾಗಿ ನೇಮಿಸಿ ಪಟ್ಟಿ ಕಳಿಸಿದ್ದು, ಈ ಬಗ್ಗೆ ರಾಜ್ಯಪಾಲರು ಸರಕಾರದ ಸಚಿವರ ಖಾತೆ ಹಂಚಿಕೆಯ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ವಾಸ್ತವವಾಗಿ ಹಿಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಖಾತೆಯನ್ನೇ ರದ್ದುಪಡಿಸಿದ್ದಾರೆ ಎಂಬ ವಿಷಯವನ್ನು ಮರೆಮಾಚಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯಪಾಲರನ್ನು ತಪ್ಪು ದಾರಿಗೆ ಎಳೆದಿದ್ದಾರೆಯೇ ಎಂದೂ ಪ್ರಶ್ನಿಸಿದ್ದಾರೆ.

 

 

ಈ ನಡುವೆ ಸಚಿವರಾದ ಶರಣ ಬಸಪ್ಪ ದರ್ಶನಾಪುರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸಾರ್ವಜನಿಕ ಉದ್ದಿಮೆ ಖಾತೆಯನ್ನು ಹಣಕಾಸು ಖಾತೆಯೊಂದಿಗೆ ವಿಲೀನ ಮಾಡಿರುವುದಾಗಿ, ಆದುದರಿಂದ ನಾನು ಈ ಖಾತೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗಳ ಸಭೆಯನ್ನು ಕರೆಯಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

 

ಇದರಿಂದ ಸಾರ್ವಜನಿಕ ಉದ್ದಿಮೆ ಖಾತೆಯು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಯವರಿಗೆ ಸೇರಿದ್ದಾಗಿರುತ್ತದೆ . ಸಾರ್ವಜನಿಕರಲ್ಲಿ ಈ ವಿಷಯದ ಬಗ್ಗೆಗೊಂದಲವಿದ್ದು ಸಾರ್ವಜನಿಕ ಉದ್ದಿಮೆಗಳ ಖಾತೆಯು ಸರ್ಕಾರದಲ್ಲಿ ಇದೆಯೋ?  ಅಥವಾ ರದ್ದಾಗಿದೆಯೋ?  ಅಥವಾ ಹಣಕಾಸು ಇಲಾಖೆಯೊಂದಿಗೆ ವಿಲೀನವಾಗಿದೆಯೋ? ಎಂಬುದು ಗೊಂದಲಮಯವಾಗಿದೆ. ತಕ್ಷಣ ಸಾರ್ವಜನಿಕ ಉದ್ದಿಮೆಗಳ ಖಾತೆಯ ಸಚಿವರಾಗಿ ಶರಣಬಸಪ್ಪ ದರ್ಶನಪುರ ಅವರ ನೇಮಕ ವಿಚಾರವಾಗಿ ಗೊಂದಲ ಪರಿಹರಿಸಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದ್ದಾರೆ.

 

 

ಸಾರ್ವಜನಿಕ ಉದ್ಯಮಗಳ ಖಾತೆಯನ್ನು ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಿರುವುದನ್ನು ಒಪ್ಪಿಕೊಂಡಿರುವ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈ ಇಲಾಖೆಯು ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಇದೀಗ ಒಪ್ಪಿಕೊಂಡಿರುವ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

 

ಸಾರ್ವಜನಿಕ ಉದ್ಯಮ ಇಲಾಖೆ ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಒಪ್ಪಿಕೊಂಡ ಸಚಿವ

 

ಕಾಂಗ್ರೆಸ್‌ ಸರ್ಕಾರವು  100 ದಿನಗಳನ್ನು ಪೂರ್ಣಗೊಳಿಸಲು ಕೆಲವೇ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿಯೇ 121  ಸಾರ್ವಜನಿಕ ಉದ್ದಿಮೆಗಳ ನಿರ್ವಹಣೆ ಹೊತ್ತಿರುವ ಸಾರ್ವಜನಿಕ ಉದ್ದಿಮೆಗಳ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈ ನೂರು ದಿನದಲ್ಲಿ ಒಂದೇ ಒಂದು ಸಭೆಯನ್ನು ನಡೆಸಿಲ್ಲ ಎಂದು ಆರ್‌ಟಿಐ ದಾಖಲೆ ಸಹಿತ   ‘ದಿ ಫೈಲ್‌’ ವರದಿ ಮಾಡಿದ್ದರ  ಬೆನ್ನಲ್ಲೇ  ಸಚಿವ ಶರಣ ಬಸಪ್ಪ ದರ್ಶನಾಪುರ ಅವರು  ಮಾಡಿರುವ ಟ್ವೀಟ್‌ ಮಹತ್ವ ಪಡೆದುಕೊಂಡಿತ್ತು.

 

 

 

ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಿರುವ ಕಾರಣ ಈ ಇಲಾಖೆಯು ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದೆ.  ಅಲ್ಲದೇ ಇಲಾಖೆಯು ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಅವರೇ ಖುದ್ದು  ಸಮಜಾಯಿಷಿ ನೀಡಿದ್ದಾರಾದರೂ ಇದೇ ಖಾತೆಯಲ್ಲಿ ಅವರು ಈಗಲೂ ಮುಂದುವರೆದಿರುವುದು  ಚರ್ಚೆಗೆ ಗ್ರಾಸವಾಗಿತ್ತು.

 

 

 

 

ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೇರಿರುವ  ಕಾಂಗ್ರೆಸ್‌ ಸರ್ಕಾರವು 100 ದಿನಗಳನ್ನು ಪೂರ್ಣಗೊಳಿಲು ಕೆಲವೇ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿಯೇ 121  ಸಾರ್ವಜನಿಕ ಉದ್ದಿಮೆಗಳ ನಿರ್ವಹಣೆ ಹೊತ್ತಿರುವ ಸಾರ್ವಜನಿಕ ಉದ್ದಿಮೆಗಳ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈ ನೂರು ದಿನದಲ್ಲಿ ಒಂದೇ ಒಂದು ಸಭೆಯನ್ನು ನಡೆಸಿಲ್ಲ ಎಂದು ‘ದಿ ಫೈಲ್‌’ ದಾಖಲೆ ಸಹಿತ ಬಹಿರಂಗಪಡಿಸಿತ್ತು.

 

 

 

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 100 ದಿನಗಳ  ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದೆ. ಈ ನೂರು ದಿನದಲ್ಲಿ ಸಚಿವ ಸಂಪುಟದ ಬಹುತೇಕ ಎಲ್ಲಾ ಸಚಿವರೂ ತಮ್ಮ ತಮ್ಮ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ, ಸಮಾಲೋಚನೆ ನಡೆಸಿದ್ದರೇ ಸಾರ್ವಜನಿಕ ಉದ್ದಿಮೆಗಳಿಗೆ ಸಂಬಂಧಿಸಿದಂತೆ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಮಾತ್ರ ಒಂದೇ ಒಂದು ಸಭೆ ನಡೆಸಿಲ್ಲ ಎಂಬ ಸಂಗತಿಯು ಚರ್ಚೆಗೆ ಕಾರಣವಾಗಿತ್ತು. ಆಮ್‌ ಆದ್ಮಿ ಪಕ್ಷವು ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ‘ದಿ ಫೈಲ್‌’ ವರದಿಯನ್ನು ಹಂಚಿಕೊಂಡಿತ್ತು.

 

 

 

ಸಾರ್ವಜನಿಕ ಉದ್ದಿಮೆ ಇಲಾಖೆ ಸಚಿವರಾಗಿ ನೂರು ದಿನಗಳಾದರೂ ಒಂದೇ ಒಂದು ಸಭೆ ನಡೆಸದ ಸಚಿವ

ಈ ಕುರಿತು ‘ದಿ ಫೈಲ್‌’ ಸಲ್ಲಿಸಿದ್ದ ಆರ್‍‌ಟಿಐ ಅಡಿಯಲ್ಲಿ ಕೇಳಿದ್ದ ಮಾಹಿತಿಗೆ ಉತ್ತರ ನೀಡಿರುವ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಯು 2023ರ ಆಗಸ್ಟ್‌ 16ರಂದು ಮಾಹಿತಿ ನೀಡಿದ್ದಾರೆ. ‘ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಸಂಬಂಧಿಸಿದಂತೆ ಸಚಿವರು ಯಾವುದೇ ಸಭೆಗಳನ್ನೂ ನಡೆಸಿರುವುದಿಲ್ಲ,’ ಎಂದು ಒಂದು ಸಾಲಿನ ಮಾಹಿತಿ ಒದಗಿಸಿದ್ದರು.

 

 

 

 

ರಾಜ್ಯದಲ್ಲಿ ಒಟ್ಟಾರೆ 121 ಸಾರ್ವಜನಿಕ ಉದ್ದಿಮೆಗಳಿವೆ. ಇದರಲ್ಲಿ 24 ಸಾರ್ವಜನಿಕ ಉದ್ದಿಮೆಗಳು ಲಾಭದಲ್ಲಿವೆ. ನಷ್ಟ ಉದ್ದಿಮೆಗಳು ನಷ್ಟದಲ್ಲಿದ್ದರೇ, 13 ಉದ್ದಿಮೆಗಳು ಲಾಭ ಮತ್ತು ನಷ್ಟ ಅನ್ವಯಿಸದೇ ಇರುವ ಸಾರ್ವಜನಿಕ ಉದ್ದಿಮೆಗಳಾಗಿವೆ. ಅಲ್ಲದೇ ಸಾಮಾಜಿಕ ಸೇವೆ ಹಾಗೂ ಸಮುದಾಯಗಳ ಅಭಿವೃದ್ಧಿಗಾಗಿ 18 ಸಾರ್ವಜನಿಕ ಉದ್ದಿಮೆಗಳಿವೆ. 13 ಸಾರ್ವಜನಿಕ ಉದ್ದಿಮೆಗಳು ನಿಷ್ಕ್ರೀಯಗೊಂಡಿವೆ.

 

 

 

ಲಾಭದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪಟ್ಟಿ 

 

 

 

ಕರ್ನಾಟಕ ಗೇರು ಅಭಿವೃದ್ಧಿ ನಿಗಮವು 27.81 ಲಕ್ಷ ರು. ಲಾಭದಲ್ಲಿದೆ. ಅದೇ ರೀತಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ 3.36 ಲಕ್ಷ ರು., ಮಾರ್ಕೇಟಿಂಗ್‌ ಕಮ್ಯುನಿಕೇಷನ್ಸ್‌ ಅಂಡ್‌ ಅಡ್ವಟೈಸಿಂಗ್‌ ಲಿಮಿಟೆಡ್‌ 1121.26 ಲಕ್ಷ, ಮೈಸೂರ ಪೈಂಟ್ಸ್‌ ವಾರ್ನಿಷ್‌ ಲಿಮಿಟೆಡ್‌ 679.96 ಲಕ್ಷ ರು., ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ 6959.00 ಲಕ್ಷ ರು., ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತವು 306.65 ಲಕ್ಷ ರು., ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮವು 980.00 ಲಕ್ಷ ರು.,  ಹಟ್ಟಿ ಚಿನ್ನದ ಗಣಿ ಕಂಪನಿಯು 11116.00 ಲಕ್ಷ ರು, ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಗಮವು    12537.00 ಲಕ್ಷ ರು., ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮವು 78.90 ಲಕ್ಷ ರು., ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್‌ 78732.00 ಲಕ್ಷ ರು., ದಿ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 673.82 ಲಕ್ಷ ರು., ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು 3,164.49 ಲಕ್ಷ ರು., ಕರ್ನಾಟಕ ವಿದ್ಯುತ್‌ ನಿಗಮವು 31700.00 ಲಕ್ಷ ರು., ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು 48.44 ಲಕ್ಷ ರು., ಮೈಸೂರು ಸೇಲ್ಸ್‌ ಇಂಟರ್‍‌ ನ್ಯಾ‍ಷನಲ್‌ ಲಿಮಿಟೆಡ್‌ 7144.49 ಲಕ್ಷ ರು., ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿಯು 18.96 ಲಕ್ಷ ರು., ಕರ್ನಾಟಕ ರಾಜ್ಯ ಬೀಜ ನಿಗಮವು 697.91 ಲಕ್ಷ ರು., ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು 371.35 ಲಕ್ಷ ರು., ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವು 3076.52 ಲಕ್ಷ ರು., ಪವರ್‍‌ ಆಫ್‌ ಕರ್ನಾಟಕ ಲಿಮಿಟೆಡ್‌ 166.00 ಲಕ್ಷ ರು. ಲಾಭದಲ್ಲಿದೆ ಎಂದು ತಿಳಿದು ಬಂದಿದೆ.

 

 

 

 

ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪಟ್ಟಿ 

 

 

 

ಅದೇ ರೀತಿ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮವು 1242.56 ಲಕ್ಷ ರು., ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ಅಭಿವೃದ್ದಿ ನಿಗಮವು 124.56 ಲಕ್ಷ ರು., ರಾಯಚೂರು ಪವರ್‍‌ ಕಾರ್ಪೋರೇಷನ್‌ ಲಿಮಿಟೆಡ್‌ 67822.00 ಲಕ್ಷ ರು., ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 11125.00 ಲಕ್ಷ ರು., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 7738.00 ಲಕ್ಷ ರು., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 1025.00 ಲಕ್ಷ ರು., ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 7133.00 ಲಕ್ಷ ರು., ಕಂಠೀರವ ಸ್ಟುಡಿಯೋ ನಿಯಮಿತವು 1048.88 ಲಕ್ಷ ರು., ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯು 713964.00 ಲಕ್ಷ ರು., ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿಯು 4465.00 ಲಕ್ಷ ರು., ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಯು 209.49 ಲಕ್ಷ ರು., ಡಿ ದೇವರಾಜ ಅರಸು ಟ್ರಕ್‌ ಟರ್ಮಿನಲ್ಸ್‌ ಲಿಮಿಟೆಡ್‌ 56.62 ಲಕ್ಷ ರು., ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮವು 6.86 ಲಕ್ಷ ರು., ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮವು 169.00 ಲಕ್ಷ ರು., ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು 435458.00 ಲಕ್ಷ ರು., ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವು 418.89 ಲಕ್ಷ ರು, ಆಹಾರ ಕರ್ನಾಟಕ ನಿಯಮಿತವು 24,63,280 ರು., ಎನ್‌ಜಿಇಎಫ್‌ (ಹುಬ್ಬಳ್ಳಿ) 1121.26 ಲಕ್ಷ ರು., ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯು 324.80 ಲಕ್ಷ ರು. ನಷ್ಟ ಹೊಂದಿರುವುದು ಗೊತ್ತಾಗಿದೆ.

 

 

 

 

ಲಾಭ ನಷ್ಟ ಅನ್ವಯಿಸದೇ ಇರುವ ಸಾರ್ವಜನಿಕ ಉದ್ದಿಮೆಗಳು

 

 

 

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ತುಮಕೂರು, ಮಂಗಳೂರು, ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌, ತುಮಕೂರು ಮಷೀನ್‌ ಟೂಲ್‌ ಪಾರ್ಕ್‌, ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ  ನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ, ತದಡಿ ಪೋರ್ಟ್‌ ಲಿಮಿಟೆಡ್‌ ಲಾಭ ನಷ್ಟ ಅನ್ವಯಿಸದ ಸಾರ್ವಜನಿಕ ಉದ್ದಿಮೆಗಳ ಪಟ್ಟಿಯಲ್ಲಿವೆ.

 

 

 

 

 

ಹಾಗೆಯೇ ಲಾಭ ನಷ್ಟ ಅನ್ವಯಿಸದೇ ಇರುವ ಸಾಮಾಜಿಕ ಸೇವೆ ಹಾಗೂ ಸಮುದಾಯಗಳ ಅಭಿವೃದ್ಧಿಗಾಗಿ ಒಟ್ಟು 18 ಸಾರ್ವಜನಿಕ ಉದ್ದಿಮೆಗಳಿವೆ. ಡಿ ದೇವರಾಜ ಅರಸ್‌ ಹಿಂದುಳಿದ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ, ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು ಈ ಪಟ್ಟಿಯಲ್ಲಿವೆ.

 

 

 

ನಿಷ್ಕ್ರೀಯಗೊಂಡಿರುವ ಸಾರ್ವಜನಿಕ ಉದ್ದಿಮೆಗಳಿವು

 

 

 

ಕರ್ನಾಟಕ ಆಗ್ರೋ ಇಂಡಸ್ಟ್ರೀಸ್‌ ಕಾರ್ಪೋರೇಷನ್‌, ಮೈಸೂರು ಟೊಬ್ಯಾಕೋ ಕಂಪನಿ, ಕರ್ನಾಟಕ ಪಲ್ಪ್‌ವುಡ್‌, ಕರ್ನಾಟಕ ರಾಜ್ಯ ವೀನೀರ್ಸ್‌, ದಿ ಮೈಸೂರು ಮ್ಯಾಚ್‌ ಕಂಪನಿ, ದಿ ಮೈಸೂರ್‍‌ ಲ್ಯಾಂಪ್ಸ್‌, ಮಯಸೂರ್‍‌ ಕಾಸ್ಮೆಟಿಕ್ಸ್‌ , ದಿ ಮೈಸೂರು ಕ್ರೋಮ್‌ ಟ್ಯಾನಿಂಗ್‌ ಕಂಪನಿ, ಎನ್‌ಜಿಈಎಫ್‌, ಕರ್ನಾಟಕ ಟೆಲಿಕಾಮ್‌, ದಿ ಮೈಸೂರು ಅಸಿಟೇಟ್‌ ಅಂಡ್‌ ಕೆಮಿಕಲ್ಸ್‌, ವಿಜಯನಗರ ಉಕ್ಕು ನಿಯಮಿತ, ಬೆಂಗಳೂರು ವಿಮಾನ ನಿಲ್ದಾಣ ರೇಲ್‌ ಲಿಂಕ್‌ ನಿಯಮಿತ ಕಂಪನಿಯು ನಿಷ್ಕ್ರೀಯಗೊಂಡಿರುವುದು ತಿಳಿದು ಬಂದಿದೆ.

 

 

 

ಈ ಪೈಕಿ ಬಹುತೇಕ ನಿಗಮ, ಮಂಡಳಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

 

 

 

 

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಶರಣಬಸಪ್ಪ ದರ್ಶನಾಪುರ್‍‌ ಅವರನ್ನು ಸಚಿವರನ್ನಾಗಿ ನೇಮಿಸಿ ರಾಜ್ಯಪಾಲರು 2023ರ ಮೇ 28ರಂದು ಅಧಿಸೂಚನೆ (GS 33 GOB 2023-DATED 28-05-2023) ಹೊರಡಿಸಿದ್ದರು. ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನೇ ಹಿಂದಿನ ಸರ್ಕಾರವು ರದ್ದುಗೊಳಿಸಿದ್ದರೂ ಅಸ್ತಿತ್ವದಲ್ಲಿ ಇಲ್ಲದೇ ಇರುವ ಇಲಾಖೆಗೆ ಸಚಿವರನ್ನಾಗಿ ನೇಮಿಸಿರುವುದು ಖುದ್ದು ಶರಣ ಬಸಪ್ಪ ದರ್ಶನಾಪುರ್ ಅವರನ್ನೂ ಗೊಂದಲಕ್ಕೆ ಬೀಳಿಸಿತ್ತು.

 

 

ರದ್ದಾಗಿರುವ ಇಲಾಖೆಗೆ ಶರಣಬಸಪ್ಪ‌ ಸಚಿವ; ಮುಜುಗರಕ್ಕೆ ಸಿಲುಕಿದ ರಾಜ್ಯಪಾಲ, ಮುಖ್ಯಮಂತ್ರಿ

 

ಅಧಿಸೂಚನೆ ಪ್ರಕಾರ ಎರಡು ಇಲಾಖೆ ಹಂಚಿಕೆಯಾಗಿದೆ ಎಂದು ಸಂತಸದಿಂದ ಇದ್ದ ಶರಣಬಸಪ್ಪ ದರ್ಶನಾಪುರ್‍‌ ಅವರಿಗೀಗ ವಾಸ್ತವದಲ್ಲಿ ಇರುವುದು ಒಂದೇ ಇಲಾಖೆ ಮಾತ್ರ. ಹಿಂದಿನ ಸರ್ಕಾರದಲ್ಲಿಯೇ ರದ್ದುಗೊಂಡಿರುವ ಇಲಾಖೆಯನ್ನು ತಮಗೆ ಹಂಚಿಕೆ ಮಾಡಿರುವುದಕ್ಕೆ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದರು.

the fil favicon

SUPPORT THE FILE

Latest News

Related Posts