ಸಾರ್ವಜನಿಕ ಉದ್ಯಮ ಇಲಾಖೆ ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಒಪ್ಪಿಕೊಂಡ ಸಚಿವ

ಬೆಂಗಳೂರು; ಸಾರ್ವಜನಿಕ ಉದ್ಯಮಗಳ ಖಾತೆಯನ್ನು ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಿರುವುದನ್ನು ಒಪ್ಪಿಕೊಂಡಿರುವ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈ ಇಲಾಖೆಯು ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಇದೀಗ ಒಪ್ಪಿಕೊಂಡಿದ್ದಾರೆ.

 

ಕಾಂಗ್ರೆಸ್‌ ಸರ್ಕಾರವು  100 ದಿನಗಳನ್ನು ಪೂರ್ಣಗೊಳಿಸಲು ಕೆಲವೇ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿಯೇ 121  ಸಾರ್ವಜನಿಕ ಉದ್ದಿಮೆಗಳ ನಿರ್ವಹಣೆ ಹೊತ್ತಿರುವ ಸಾರ್ವಜನಿಕ ಉದ್ದಿಮೆಗಳ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈ ನೂರು ದಿನದಲ್ಲಿ ಒಂದೇ ಒಂದು ಸಭೆಯನ್ನು ನಡೆಸಿಲ್ಲ ಎಂದು ಆರ್‌ಟಿಐ ದಾಖಲೆ ಸಹಿತ   ‘ದಿ ಫೈಲ್‌’ ವರದಿ ಮಾಡಿದ್ದರ  ಬೆನ್ನಲ್ಲೇ  ಸಚಿವ ಶರಣ ಬಸಪ್ಪ ದರ್ಶನಾಪುರ ಅವರು  ಮಾಡಿರುವ ಟ್ವೀಟ್‌ ಮಹತ್ವ ಪಡೆದುಕೊಂಡಿದೆ.

 

ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಿರುವ ಕಾರಣ ಈ ಇಲಾಖೆಯು ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದೆ.  ಅಲ್ಲದೇ ಇಲಾಖೆಯು ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಅವರೇ ಖುದ್ದು  ಸಮಜಾಯಿಷಿ ನೀಡಿದ್ದಾರಾದರೂ ಇದೇ ಖಾತೆಯಲ್ಲಿ ಅವರು ಈಗಲೂ ಮುಂದುವರೆದಿರುವುದು  ಚರ್ಚೆಗೆ ಗ್ರಾಸವಾಗಿದೆ.

 

ಟ್ವೀಟ್‌ನಲ್ಲೇನಿದೆ?

 

ನನಗೆ ಖಾತೆ ಹಂಚಿಕೆಯ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ ಖಾತೆಯ ಜೊತೆಗೆ ಸಾರ್ವಜನಿಕ ಉದ್ಯಮಗಳ ಖಾತೆಯೂ ಕೂಡಾ ಹಂಚಿಕೆಯಾಗಿದ್ದು ಸತ್ಯ.. ಆದರೆ ಕಳೆದ ಹಲವು ದಿನಗಳ ಹಿಂದೆಯೇ ಸಾರ್ವಜನಿಕ ಉದ್ಯಮಗಳ ಖಾತೆಯನ್ನು ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಲಾಗಿದ್ದು, ಸದರಿ ಇಲಾಖೆಯು ನನ್ನ ವ್ಯಾಪ್ತಿಗೆ ಒಳಪಡುವುದಿಲ್ಲ. ಆ ಕಾರಣದಿಂದಲೇ ನಮ್ಮ ಕಛೇರಿಯಿಂದ ಸಭೆ ನಡೆಸಿಲ್ಲವೆಂಬ ಸ್ಪಷ್ಟನೆ ನೀಡಲಾಗಿದೆ.

 

ಸಣ್ಣ ಕೈಗಾರಿಕಾ ಇಲಾಖೆಯ ಸಚಿವನಾಗಿ ನನ್ನ ಇಲಾಖೆಯನ್ನು ಅತ್ಯಂತ ಮುತುವರ್ಜಿಯಿಂದ ಮುನ್ನಡೆಸುತ್ತಿರುವೆ. ಈಗಾಗಲೇ ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ, ಸರಕಾರಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಿರುವುದರಿಂದಲೇ, ರಾಜ್ಯದ ಏಳು ಕಡೆಗೆ ಕೈಗಾರಿಕಾ ಹಬ್ ಸ್ಥಾಪನೆಗೆ ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿ, ಬಜೆಟ್ ನಲ್ಲಿ ಸಹ ಘೋಷಣೆ ಮಾಡಿದ್ದಾರೆ.

 

ಸಣ್ಣ ಕೈಗಾರಿಕಾ ಇಲಾಖೆಯಡಿ ಬರುವ ತೆಂಗಿನ ನಾರು ಅಭಿವೃದ್ಧಿ ಮಂಡಳಿ,ಕರಕುಶಲ ಅಭಿವೃದ್ಧಿ ಮಂಡಳಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಸೇರಿದಂತೆ ಹಲವು ನಿಗಮಗಳ ಅಧಿಕಾರಿಗಳೊಂದಿಗೆ ಅನೇಕ ಸಭೆಗಳನ್ನು ನಾನು ಖುದ್ದಾಗಿ ನಡೆಸಿರುತ್ತೇನೆ.

 

ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಸಣ್ಣ ಕೈಗಾರಿಕೆ ಕ್ಷೇತ್ರದ ಬೆಳವಣಿಗೆ ಮಾಡುವ ಸಂಕಲ್ಪ ತೊಟ್ಟಿರುವೆ. ಸಭೆ ಹಾಗೂ ಚರ್ಚೆಗಳು ಆಡಳಿತದ ನಿರಂತರ ಪ್ರಕ್ರಿಯೆಯಾಗಿವೆ. ಮಾಧ್ಯಮದ ಮೂಲಕ ತಾವು ನಮ್ಮನ್ನು ಸದಾ ಹೀಗೆಯೇ ಎಚ್ಚರಿಸುತ್ತಲಿದ್ದರೆ ನಾವು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

 

ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೇರಿರುವ  ಕಾಂಗ್ರೆಸ್‌ ಸರ್ಕಾರವು 100 ದಿನಗಳನ್ನು ಪೂರ್ಣಗೊಳಿಲು ಕೆಲವೇ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿಯೇ 121  ಸಾರ್ವಜನಿಕ ಉದ್ದಿಮೆಗಳ ನಿರ್ವಹಣೆ ಹೊತ್ತಿರುವ ಸಾರ್ವಜನಿಕ ಉದ್ದಿಮೆಗಳ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈ ನೂರು ದಿನದಲ್ಲಿ ಒಂದೇ ಒಂದು ಸಭೆಯನ್ನು ನಡೆಸಿಲ್ಲ ಎಂಬುದು ಬಹಿರಂಗಗೊಂಡಿದೆ.

 

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 100 ದಿನಗಳ  ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದೆ. ಈ ನೂರು ದಿನದಲ್ಲಿ ಸಚಿವ ಸಂಪುಟದ ಬಹುತೇಕ ಎಲ್ಲಾ ಸಚಿವರೂ ತಮ್ಮ ತಮ್ಮ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ, ಸಮಾಲೋಚನೆ ನಡೆಸಿದ್ದರೇ ಸಾರ್ವಜನಿಕ ಉದ್ದಿಮೆಗಳಿಗೆ ಸಂಬಂಧಿಸಿದಂತೆ  ಸಚಿವ ಶರಣಬಸಪ್ಪ ದರ್ಶನಾಪುರ ಅವರು ಮಾತ್ರ ಒಂದೇ ಒಂದು ಸಭೆ ನಡೆಸಿಲ್ಲ ಎಂಬ ಸಂಗತಿಯು ಚರ್ಚೆಗೆ ಕಾರಣವಾಗಿತ್ತು.

ಸಾರ್ವಜನಿಕ ಉದ್ದಿಮೆ ಇಲಾಖೆ ಸಚಿವರಾಗಿ ನೂರು ದಿನಗಳಾದರೂ ಒಂದೇ ಒಂದು ಸಭೆ ನಡೆಸದ ಸಚಿವ

ಈ ಕುರಿತು ‘ದಿ ಫೈಲ್‌’ ಸಲ್ಲಿಸಿದ್ದ ಆರ್‍‌ಟಿಐ ಅಡಿಯಲ್ಲಿ ಕೇಳಿದ್ದ ಮಾಹಿತಿಗೆ ಉತ್ತರ ನೀಡಿರುವ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಯು 2023ರ ಆಗಸ್ಟ್‌ 16ರಂದು ಮಾಹಿತಿ ನೀಡಿದ್ದಾರೆ. ‘ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಸಂಬಂಧಿಸಿದಂತೆ ಸಚಿವರು ಯಾವುದೇ ಸಭೆಗಳನ್ನೂ ನಡೆಸಿರುವುದಿಲ್ಲ,’ ಎಂದು ಒಂದು ಸಾಲಿನ ಮಾಹಿತಿ ಒದಗಿಸಿದ್ದರು.

 

ರಾಜ್ಯದಲ್ಲಿ ಒಟ್ಟಾರೆ 121 ಸಾರ್ವಜನಿಕ ಉದ್ದಿಮೆಗಳಿವೆ. ಇದರಲ್ಲಿ 24 ಸಾರ್ವಜನಿಕ ಉದ್ದಿಮೆಗಳು ಲಾಭದಲ್ಲಿವೆ. ನಷ್ಟ ಉದ್ದಿಮೆಗಳು ನಷ್ಟದಲ್ಲಿದ್ದರೇ, 13 ಉದ್ದಿಮೆಗಳು ಲಾಭ ಮತ್ತು ನಷ್ಟ ಅನ್ವಯಿಸದೇ ಇರುವ ಸಾರ್ವಜನಿಕ ಉದ್ದಿಮೆಗಳಾಗಿವೆ. ಅಲ್ಲದೇ ಸಾಮಾಜಿಕ ಸೇವೆ ಹಾಗೂ ಸಮುದಾಯಗಳ ಅಭಿವೃದ್ಧಿಗಾಗಿ 18 ಸಾರ್ವಜನಿಕ ಉದ್ದಿಮೆಗಳಿವೆ. 13 ಸಾರ್ವಜನಿಕ ಉದ್ದಿಮೆಗಳು ನಿಷ್ಕ್ರೀಯಗೊಂಡಿವೆ.

 

ಲಾಭದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪಟ್ಟಿ 

 

ಕರ್ನಾಟಕ ಗೇರು ಅಭಿವೃದ್ಧಿ ನಿಗಮವು 27.81 ಲಕ್ಷ ರು. ಲಾಭದಲ್ಲಿದೆ. ಅದೇ ರೀತಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ 3.36 ಲಕ್ಷ ರು., ಮಾರ್ಕೇಟಿಂಗ್‌ ಕಮ್ಯುನಿಕೇಷನ್ಸ್‌ ಅಂಡ್‌ ಅಡ್ವಟೈಸಿಂಗ್‌ ಲಿಮಿಟೆಡ್‌ 1121.26 ಲಕ್ಷ, ಮೈಸೂರ ಪೈಂಟ್ಸ್‌ ವಾರ್ನಿಷ್‌ ಲಿಮಿಟೆಡ್‌ 679.96 ಲಕ್ಷ ರು., ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ 6959.00 ಲಕ್ಷ ರು., ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತವು 306.65 ಲಕ್ಷ ರು., ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮವು 980.00 ಲಕ್ಷ ರು.,  ಹಟ್ಟಿ ಚಿನ್ನದ ಗಣಿ ಕಂಪನಿಯು 11116.00 ಲಕ್ಷ ರು, ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಗಮವು    12537.00 ಲಕ್ಷ ರು., ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮವು 78.90 ಲಕ್ಷ ರು., ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್‌ 78732.00 ಲಕ್ಷ ರು., ದಿ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 673.82 ಲಕ್ಷ ರು., ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು 3,164.49 ಲಕ್ಷ ರು., ಕರ್ನಾಟಕ ವಿದ್ಯುತ್‌ ನಿಗಮವು 31700.00 ಲಕ್ಷ ರು., ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು 48.44 ಲಕ್ಷ ರು., ಮೈಸೂರು ಸೇಲ್ಸ್‌ ಇಂಟರ್‍‌ ನ್ಯಾ‍ಷನಲ್‌ ಲಿಮಿಟೆಡ್‌ 7144.49 ಲಕ್ಷ ರು., ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿಯು 18.96 ಲಕ್ಷ ರು., ಕರ್ನಾಟಕ ರಾಜ್ಯ ಬೀಜ ನಿಗಮವು 697.91 ಲಕ್ಷ ರು., ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು 371.35 ಲಕ್ಷ ರು., ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವು 3076.52 ಲಕ್ಷ ರು., ಪವರ್‍‌ ಆಫ್‌ ಕರ್ನಾಟಕ ಲಿಮಿಟೆಡ್‌ 166.00 ಲಕ್ಷ ರು. ಲಾಭದಲ್ಲಿದೆ ಎಂದು ತಿಳಿದು ಬಂದಿದೆ.

 

ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪಟ್ಟಿ 

 

ಅದೇ ರೀತಿ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮವು 1242.56 ಲಕ್ಷ ರು., ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ಅಭಿವೃದ್ದಿ ನಿಗಮವು 124.56 ಲಕ್ಷ ರು., ರಾಯಚೂರು ಪವರ್‍‌ ಕಾರ್ಪೋರೇಷನ್‌ ಲಿಮಿಟೆಡ್‌ 67822.00 ಲಕ್ಷ ರು., ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 11125.00 ಲಕ್ಷ ರು., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 7738.00 ಲಕ್ಷ ರು., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 1025.00 ಲಕ್ಷ ರು., ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 7133.00 ಲಕ್ಷ ರು., ಕಂಠೀರವ ಸ್ಟುಡಿಯೋ ನಿಯಮಿತವು 1048.88 ಲಕ್ಷ ರು., ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯು 713964.00 ಲಕ್ಷ ರು., ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿಯು 4465.00 ಲಕ್ಷ ರು., ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಯು 209.49 ಲಕ್ಷ ರು., ಡಿ ದೇವರಾಜ ಅರಸು ಟ್ರಕ್‌ ಟರ್ಮಿನಲ್ಸ್‌ ಲಿಮಿಟೆಡ್‌ 56.62 ಲಕ್ಷ ರು., ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮವು 6.86 ಲಕ್ಷ ರು., ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮವು 169.00 ಲಕ್ಷ ರು., ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು 435458.00 ಲಕ್ಷ ರು., ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವು 418.89 ಲಕ್ಷ ರು, ಆಹಾರ ಕರ್ನಾಟಕ ನಿಯಮಿತವು 24,63,280 ರು., ಎನ್‌ಜಿಇಎಫ್‌ (ಹುಬ್ಬಳ್ಳಿ) 1121.26 ಲಕ್ಷ ರು., ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯು 324.80 ಲಕ್ಷ ರು. ನಷ್ಟ ಹೊಂದಿರುವುದು ಗೊತ್ತಾಗಿದೆ.

 

ಲಾಭ ನಷ್ಟ ಅನ್ವಯಿಸದೇ ಇರುವ ಸಾರ್ವಜನಿಕ ಉದ್ದಿಮೆಗಳು

 

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ತುಮಕೂರು, ಮಂಗಳೂರು, ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌, ತುಮಕೂರು ಮಷೀನ್‌ ಟೂಲ್‌ ಪಾರ್ಕ್‌, ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ  ನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ, ತದಡಿ ಪೋರ್ಟ್‌ ಲಿಮಿಟೆಡ್‌ ಲಾಭ ನಷ್ಟ ಅನ್ವಯಿಸದ ಸಾರ್ವಜನಿಕ ಉದ್ದಿಮೆಗಳ ಪಟ್ಟಿಯಲ್ಲಿವೆ.

 

 

ಹಾಗೆಯೇ ಲಾಭ ನಷ್ಟ ಅನ್ವಯಿಸದೇ ಇರುವ ಸಾಮಾಜಿಕ ಸೇವೆ ಹಾಗೂ ಸಮುದಾಯಗಳ ಅಭಿವೃದ್ಧಿಗಾಗಿ ಒಟ್ಟು 18 ಸಾರ್ವಜನಿಕ ಉದ್ದಿಮೆಗಳಿವೆ. ಡಿ ದೇವರಾಜ ಅರಸ್‌ ಹಿಂದುಳಿದ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ, ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು ಈ ಪಟ್ಟಿಯಲ್ಲಿವೆ.

 

ನಿಷ್ಕ್ರೀಯಗೊಂಡಿರುವ ಸಾರ್ವಜನಿಕ ಉದ್ದಿಮೆಗಳಿವು

 

ಕರ್ನಾಟಕ ಆಗ್ರೋ ಇಂಡಸ್ಟ್ರೀಸ್‌ ಕಾರ್ಪೋರೇಷನ್‌, ಮೈಸೂರು ಟೊಬ್ಯಾಕೋ ಕಂಪನಿ, ಕರ್ನಾಟಕ ಪಲ್ಪ್‌ವುಡ್‌, ಕರ್ನಾಟಕ ರಾಜ್ಯ ವೀನೀರ್ಸ್‌, ದಿ ಮೈಸೂರು ಮ್ಯಾಚ್‌ ಕಂಪನಿ, ದಿ ಮೈಸೂರ್‍‌ ಲ್ಯಾಂಪ್ಸ್‌, ಮಯಸೂರ್‍‌ ಕಾಸ್ಮೆಟಿಕ್ಸ್‌ , ದಿ ಮೈಸೂರು ಕ್ರೋಮ್‌ ಟ್ಯಾನಿಂಗ್‌ ಕಂಪನಿ, ಎನ್‌ಜಿಈಎಫ್‌, ಕರ್ನಾಟಕ ಟೆಲಿಕಾಮ್‌, ದಿ ಮೈಸೂರು ಅಸಿಟೇಟ್‌ ಅಂಡ್‌ ಕೆಮಿಕಲ್ಸ್‌, ವಿಜಯನಗರ ಉಕ್ಕು ನಿಯಮಿತ, ಬೆಂಗಳೂರು ವಿಮಾನ ನಿಲ್ದಾಣ ರೇಲ್‌ ಲಿಂಕ್‌ ನಿಯಮಿತ ಕಂಪನಿಯು ನಿಷ್ಕ್ರೀಯಗೊಂಡಿರುವುದು ತಿಳಿದು ಬಂದಿದೆ.

 

ಈ ಪೈಕಿ ಬಹುತೇಕ ನಿಗಮ, ಮಂಡಳಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

 

 

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಶರಣಬಸಪ್ಪ ದರ್ಶನಾಪುರ್‍‌ ಅವರನ್ನು ಸಚಿವರನ್ನಾಗಿ ನೇಮಿಸಿ ರಾಜ್ಯಪಾಲರು 2023ರ ಮೇ 28ರಂದು ಅಧಿಸೂಚನೆ (GS 33 GOB 2023-DATED 28-05-2023) ಹೊರಡಿಸಿದ್ದರು. ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನೇ ಹಿಂದಿನ ಸರ್ಕಾರವು ರದ್ದುಗೊಳಿಸಿದ್ದರೂ ಅಸ್ತಿತ್ವದಲ್ಲಿ ಇಲ್ಲದೇ ಇರುವ ಇಲಾಖೆಗೆ ಸಚಿವರನ್ನಾಗಿ ನೇಮಿಸಿರುವುದು ಖುದ್ದು ಶರಣ ಬಸಪ್ಪ ದರ್ಶನಾಪುರ್ ಅವರನ್ನೂ ಗೊಂದಲಕ್ಕೆ ಬೀಳಿಸಿತ್ತು.

ರದ್ದಾಗಿರುವ ಇಲಾಖೆಗೆ ಶರಣಬಸಪ್ಪ‌ ಸಚಿವ; ಮುಜುಗರಕ್ಕೆ ಸಿಲುಕಿದ ರಾಜ್ಯಪಾಲ, ಮುಖ್ಯಮಂತ್ರಿ

 

ಅಧಿಸೂಚನೆ ಪ್ರಕಾರ ಎರಡು ಇಲಾಖೆ ಹಂಚಿಕೆಯಾಗಿದೆ ಎಂದು ಸಂತಸದಿಂದ ಇದ್ದ ಶರಣಬಸಪ್ಪ ದರ್ಶನಾಪುರ್‍‌ ಅವರಿಗೀಗ ವಾಸ್ತವದಲ್ಲಿ ಇರುವುದು ಒಂದೇ ಇಲಾಖೆ ಮಾತ್ರ. ಹಿಂದಿನ ಸರ್ಕಾರದಲ್ಲಿಯೇ ರದ್ದುಗೊಂಡಿರುವ ಇಲಾಖೆಯನ್ನು ತಮಗೆ ಹಂಚಿಕೆ ಮಾಡಿರುವುದಕ್ಕೆ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದರು.

 

ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಸಚಿವ ಶರಣ ಬಸಪ್ಪ ದರ್ಶನಾಪುರ್‍‌ ಅವರು ಈ ಬಗ್ಗೆ ಸ್ಪಷ್ಟೀಕರಣ ಕೋರಿ ಸಿಬ್ಬಂದಿ ಮತ್ತು ಆಡಳಿತ ಮತ್ತು ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಟಿಪ್ಪಣಿ ಬರೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts