ಬೆಂಗಳೂರು; ವಲಯ ಅರಣ್ಯಾಧಿಕಾರಿಗಳ ಹುದ್ದೆಯ ಮುಂಬಡ್ತಿ ಆದೇಶ ಹೊರಡಿಸಲು ತಲಾ 4 ಲಕ್ಷ ರುಪಾಯಿ ಸಂಗ್ರಹಿಸಲಾಗುತ್ತಿದೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ.
ಕೃಷಿ ಇಲಾಖೆಯಲ್ಲಿಯೂ ಲಂಚದ ಆರೋಪ ಕೇಳ ಬಂದಿರುವ ಕುರಿತು ಪ್ರಕರಣವು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆಯಲ್ಲಿಯೂ ಮುಂಬಡ್ತಿಗೆ ಹಣ ವಸೂಲು ಮಾಡಲಾಗುತ್ತಿದೆ ಎಂದು ಖುದ್ದು ಸಚಿವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮೈಸೂರು ಮೂಲದ ಪ್ರಕಾಶ್ ಎಂಬುವರು ಸಲ್ಲಿಸಿರುವ ದೂರು ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ಅಧಿಕಾರಿ, ನೌಕರರ ವರ್ಗಾವಣೆ ಮತ್ತು ಮುಂಬಡ್ತಿಗೂ ಲಂಚಕ್ಕೆ ಬೇಡಿಕೆ ಇರಿಸುತ್ತಿರುವ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಲೇ ಇವೆ. ಈ ಪೈಕಿ ಕೃಷಿ ಇಲಾಖೆಯಲ್ಲಿ ಕೇಳಿ ಬಂದಿದ್ದ ಆರೋಪದ ಕುರಿತು ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದೆ.
ಇದರ ಮಧ್ಯೆಯೇ ಅರಣ್ಯ ಇಲಾಖೆಯಲ್ಲಿನ ವಲಯ ಅರಣ್ಯಾಧಿಕಾರಿಗಳ ಮುಂಬಡ್ತಿಗೂ ತಲಾ 4 ಲಕ್ಷ ರು. ಸಂಗ್ರಹಿಸಲಾಗುತ್ತಿದೆ ಎಂದು ಕೇಳಿ ಬಂದಿರುವ ಆರೋಪವು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವನ್ನೊಂದನ್ನು ಕೊಟ್ಟಂತಾಗಿದೆ.
ಚಿಕ್ಕಬಳ್ಳಾಪುರ, ಬೆಳಗಾಂ ವೃತ್ತ, ಕೆನರಾ ವೃತ್ತದ ವಲಯ ಅರಣ್ಯಾಧಿಕಾರಿಗಳು ಬೆಂಗಳೂರಿಗೆ ಕರೆಸಿಕೊಂಡು ಹಣವನ್ನು ಸಂಗ್ರಹಿಸಿದ್ದಾರೆ. ಹಣವನ್ನು ಫೋನ್ ಪೇ ಮೂಲಕವೂ ಸಂಗ್ರಹಿಸಿದ್ದಾರೆ. ಈ ಫೋನ್ ಪೇ ನಂಬರ್ ಕೂಡ ಎಪಿಸಿಸಿಎಫ್ ಪಿ ಆಂಡ್ ಆರ್ ಹೆಸರಿನಲ್ಲಿದೆ ಎಂಬ ವಿವರವನ್ನೂ ದೂರಿನಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಈ ದೂರನ್ನು ಪರಿಶೀಲಿಸಿರುವ ಅರಣ್ಯ ಸಂಚಾರಿ ದಳದ ತನಿಖಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ವರುಣ್ ಕುಮಾರ್ ಎಂಬುವರು ದೂರುದಾರನಿಗೆ 2023ರ ಜೂನ್ 27ರಂದು ಸಮನ್ಸ್ ಜಾರಿಗೊಳಿಸಿದ್ದಾರೆ. ದೂರು ಮತ್ತು ಸಮನ್ಸ್ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ದೂರಿನಲ್ಲೇನಿದೆ?
ವಲಯ ಅರಣ್ಯಾಧಿಕಾರಿ ಹುದ್ದೆಯ ಮುಂಬಡ್ತಿ ಆದೇಶ ಹೊರಡಿಸಲು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಿಬ್ಬಂದಿಗಳಾದ ರಾಜೇಶ, ಇರೇಗಾಡ, ಹನುಂತಪ್ಪ ಮತ್ತು ಸೌಜನ್ಯ ಎಂಬುವರು ತಲಾ 4 ಲಕ್ಷ ರು. ಹಣ ಸಂದಾಯ ಮಾಡಬೇಕು ಎಂದು ಬೇಡಿಕೆ ಇರಿಸುತ್ತಿದ್ದಾರೆ ಎಂದು ಮೈಸೂರು ಮೂಲದ ಪ್ರಕಾಶ್ ಎಂಬುವರು 2023ರ ಮಾರ್ಚ್ 29ರಂದು ಮೊದಲು ದೂರರ್ಜಿ ಸಲ್ಲಿಸಿದ್ದರು. ಇದಾದ ನಂತರವೂ 2023ರ ಜೂನ್ 7ರಂದು ದೂರು ಎರಡನೇ ದೂರರ್ಜಿ ಸಲ್ಲಿಸಿರುವುದು ಗೊತ್ತಾಗಿದೆ.
‘ಚುನಾವಣೆ ಘೋಷಣೆಗೂ ಮುನ್ನ ವಲಯ ಅರಣ್ಯ ಅಧಿಕಾರಿಗಳ ಮುಂಬಡ್ತಿ ಸಂಬಂಧ ಕಡತ ಸೃಜನೆಯಾಗಿದ್ದರೂ ಅದನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿರಲಿಲ್ಲ. ಈ ಸಂಬಂಧ ದೂರು ಸಲ್ಲಿಸಿದ 15 ದಿನಗಳ ನಂತರ ದೂರನ್ನು ಹಿಂಡೆದುಕೊಳ್ಳಬೇಕು ಎಂದು ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳು ಒತ್ತಡ ಹೇರಿದ್ದರು. ಆದರೆ ದೂರನ್ನು ಹಿಂಪಡೆದುಕೊಂಡಿಲ್ಲ. ಆ ನಂತರವೂ ಒತ್ತಡ ಹೆಚ್ಚಿತ್ತು. ಈ ಕುರಿತು ಇಲಾಖೆಯಿಂದ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿರುವುದು ನನ್ನ ಗಮನಕ್ಕೆ ಇದುವರೆಗೂ ಬಂದಿಲ್ಲ,’ ಎಂದು ದೂರುದಾರ ಪ್ರಕಾಶ್ ಎಂಬುವರು ವಿವರಿಸಿದ್ದಾರೆ.
ಚಿಕ್ಕಬಳ್ಳಾಪುರ ವಲಯ ಅರಣ್ಯಾಧಿಕಾರಿ ರಘು (ಮೊಬೈಲ್ ಸಂಖ್ಯೆ 9886786602), ಬಂಡಿಪುರ ಎಸ್‌ಟಿಪಿಎಫ್‌ನ ರಾಮಾಂಜನೇಯಲು (ಮೊಬೈಲ್ ಸಂಖ್ಯೆ 8971050605), ಬೆಳಗಾಂ ವೃತ್ತದ ಸೋಮಶೇಖರ ಪಾವಟೆ, ಕೆನರಾ ವೃತ್ತದ ಆನಂದ ಪೂಜಾರ ಅವರು ನಗದು ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅದೇ ರೀತಿ ‘ ವಾಟ್ಸಾಪ್ ಕರೆ ಮೂಲಕ ಸಿಬ್ಬಂದಿಗಳನ್ನು ಸಂಪರ್ಕಿಸಲಾಗುತ್ತಿದ್ದು ಭ್ರಷ್ಟಾಚಾರಕ್ಕೆ ಸಾಕ್ಷಿ ದೊರೆಯದಂತೆ ಜಾಗ್ರತೆ ವಹಿಸುತ್ತಿದ್ದಾರೆ. ಈ ನೌಕರರ ಮತ್ತು ಕುಟುಂಬದವರ ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆಯ ವಿವರ ತಾಳೆ ಮಾಡಿದರೆ ದಾಖಲೆ ದೊರೆಯುತ್ತದೆ. ಈ ದಾಖಲೆಗಳು ಇಲಾಖೆ ವಿಚಾರಣೆಯಲ್ಲಿ ದೊರೆತ ನಂತರವೂ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಸಿಬ್ಬಂದಿಯ ಭ್ರಷ್ಟಾಚಾರಕ್ಕೆ ಸಹಮತ ನೀಡುತ್ತಿದ್ದಾರೆ,’ ಎಂದು ದೂರದಾರ ಪ್ರಕಾಶ್ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ.
ವಿಶೇಷವೆಂದರೆ ಹಣ ವಸೂಲಿಗೆ ಬಳಸಿರುವ ಪೋನ್ ಪೇ ಯನ್ನು ಎಪಿಸಿಸಿಸಿಎಫ್ ಹೆಸರಿನಲ್ಲಿ ಕಚೇರಿ ಸಿಬ್ಬಂದಿ ಉಪಯೋಗಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಲಾಖೆಯ ಜಾಗೃತ ವಿಭಾಗದಿಂದ ವಿಚಾರಣೆ ಪೂರ್ಣಗೊಳಿಸಿದ ನಂತರ ಕ್ರಮ ಜರುಗಿಸಿಲ್ಲ ಮತ್ತು ಸಾಕ್ಷಿಗಳನ್ನು ನಾಶಪಡಿಸಲು ಮತ್ತು ದೂರನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ದೂರುದಾರನಿಗೆ ಸಮನ್ಸ್
ಈ ಕುರಿತು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿಯು ದೂರುದಾರನಿಗೆ ಸಮನ್ಸ್ ಕೂಡ ನೀಡಿದ್ದಾರೆ.
2023ರ ಜೂನ್ 7ರಂದು ನೀಡಿದ್ದ ದೂರರ್ಜಿಯಲ್ಲಿನ ಆರೋಪಗಳಿಗೆ ಪೂರಕ ಸಾಕ್ಷ್ಯಾಧಾರ, ದಾಖಲೆಗಳನ್ನು ಒದಗಿಸಿ ತನಿಖೆಗೆ ಸಹಕರಿಸಬೇಕು ಎಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.