ರದ್ದಾಗಿರುವ ಇಲಾಖೆಗೆ ಶರಣಬಸಪ್ಪ‌ ಸಚಿವ; ಮುಜುಗರಕ್ಕೆ ಸಿಲುಕಿದ ರಾಜ್ಯಪಾಲ, ಮುಖ್ಯಮಂತ್ರಿ

ಬೆಂಗಳೂರು; ಆಡಳಿತ ವೆಚ್ಚ ತಗ್ಗಿಸುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ರದ್ದಾಗಿರುವ ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಶರಣಬಸಪ್ಪ ದರ್ಶನಾಪುರ್‍‌ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ನೇಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮತ್ತು ರಾಜ್ಯಪಾಲ ಥಾವರ್‍‌ ಚಂದ್‌ ಗೆಹ್ಲೋಟ್‌ ಅವರು ಇದೀಗ ಮುಜುಗರಕ್ಕೆ ಸಿಲುಕಿದ್ದಾರೆ.

 

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಶರಣಬಸಪ್ಪ ದರ್ಶನಾಪುರ್‍‌ ಅವರನ್ನು ಸಚಿವರನ್ನಾಗಿ ನೇಮಿಸಿ ರಾಜ್ಯಪಾಲರು 2023ರ ಮೇ 28ರಂದು ಅಧಿಸೂಚನೆ (GS 33 GOB 2023-DATED 28-05-2023) ಹೊರಡಿಸಿದ್ದರು. ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನೇ ಹಿಂದಿನ ಸರ್ಕಾರವು ರದ್ದುಗೊಳಿಸಿದ್ದರೂ ಅಸ್ತಿತ್ವದಲ್ಲಿ ಇಲ್ಲದೇ ಇರುವ ಇಲಾಖೆಗೆ ಸಚಿವರನ್ನಾಗಿ ನೇಮಿಸಿರುವುದು ಖುದ್ದು ಶರಣ ಬಸಪ್ಪ ದರ್ಶನಾಪುರ್ ಅವರನ್ನೂ ಗೊಂದಲಕ್ಕೆ ಬೀಳಿಸಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌, ಹೆಚ್‌ ಕೆ ಪಾಟೀಲ್‌, ರಾಮಲಿಂಗಾರೆಡ್ಡಿ, ಶಿವಾನಂದ ಪಾಟೀಲ್‌, ಎಸ್‌ ಎಸ್‌ ಮಲ್ಲಿಕಾರ್ಜುನ್‌, ಡಾ ಶರಣಪ್ರಕಾಶ್‌ ರುದ್ರಪ್ಪ ಪಾಟೀಲ್‌, ಕೆ ವೆಂಕಟೇಶ್‌, ತಂಗಡಗಿ ಶಿವರಾಜ್‌ ಸಂಗಪ್ಪ, ಬಿ ನಾಗೇಂದ್ರ, ಬಿ ಎಸ್‌ ಸುರೇಶ್‌, ಎನ್‌ ಎಸ್‌ ಬೋಸರಾಜು ಅವರೊಂದಿಗೆ ಶರಣಬಸಪ್ಪ ದರ್ಶನಾಪುರ್‍‌ ಅವರಿಗೆ ಎರಡೆರಡು ಖಾತೆಗಳನ್ನು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.

 

ಶರಣಬಸಪ್ಪ ದರ್ಶನಾಪುರ್‍‌ ಅವರಿಗೆ ಖಾತೆ ಹಂಚಿಕೆ ಮಾಡಿರುವ ಅಧಿಸೂಚನೆ ಪ್ರತಿ

 

ಅಧಿಸೂಚನೆ ಪ್ರಕಾರ ಎರಡು ಇಲಾಖೆ ಹಂಚಿಕೆಯಾಗಿದೆ ಎಂದು ಸಂತಸದಿಂದ ಇದ್ದ ಶರಣಬಸಪ್ಪ ದರ್ಶನಾಪುರ್‍‌ ಅವರಿಗೀಗ ವಾಸ್ತವದಲ್ಲಿ ಇರುವುದು ಒಂದೇ ಇಲಾಖೆ ಮಾತ್ರ. ಹಿಂದಿನ ಸರ್ಕಾರದಲ್ಲಿಯೇ ರದ್ದುಗೊಂಡಿರುವ ಇಲಾಖೆಯನ್ನು ತಮಗೆ ಹಂಚಿಕೆ ಮಾಡಿರುವುದಕ್ಕೆ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

 

ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಸಚಿವ ಶರಣ ಬಸಪ್ಪ ದರ್ಶನಾಪುರ್‍‌ ಅವರು ಈ ಬಗ್ಗೆ ಸ್ಪಷ್ಟೀಕರಣ ಕೋರಿ ಸಿಬ್ಬಂದಿ ಮತ್ತು ಆಡಳಿತ ಮತ್ತು ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಟಿಪ್ಪಣಿ ಬರೆದಿದ್ದಾರೆ. ಈ ಟಿಪ್ಪಣಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಚಿವರ ಟಿಪ್ಪಣಿಯಲ್ಲೇನಿದೆ?

 

ಪ್ರಸ್ತುತ ನನಗೆ ಸಚಿವ ಸಂಪುಟದ ಸ್ಥಾನವನ್ನು ನೀಡಿ ಅಧಿಸೂಚನೆ (GS 33 GOB 2023-DATED 28-05-2023) ಅನ್ವಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಸಚಿವರ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಆದರೆ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 145 ಸುಸೇ 2022 ದಿನಾಂಕ 25-05-2022ರ ಅನ್ವಯ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಹಾಗೂ ಆ ಇಲಾಖೆಯಲ್ಲಿ ನಿರ್ವಹಿಸುತ್ತಿದ್ದ ವಿಷಯಗಳನ್ನು ಆರ್ಥಿಕ ಇಲಾಖೆಗೆ ವರ್ಗಾಯಿಸಲಾಗಿದೆ. ಪ್ರಸ್ತುತ ಆರ್ಥಿಕ ಇಲಾಖೆಯು ತಮಗೆ ಹಂಚಿಕೆಯಾಗಿರುವ ಇಲಾಖೆಯಾಗಿರುತ್ತದೆ.

 

ಪ್ರಸ್ತುತ ಸಾರ್ವಜನಿಕ ಉದ್ದಿಮೆಗಳ ವಿಷಯಕ್ಕೆ ಸಂಬಂಧಿಸಿದಂತೆ ನಿರ್ವಹಿಸುತ್ತಿರುವ ಕಡತಗಳು ಮುಖ್ಯಮಂತ್ರಿಯವರಿಗೆ ಸಲ್ಲಿಕೆಯಾಗುತ್ತಿವೆ. ಆದ್ದರಿಂದ ಸಾರ್ವಜನಿಕ ಉದ್ದಿಮೆಗಳಿಗೆ ಸಂಬಂಧಿಸಿದಂತೆ ನನಗೆ ಹಂಚಿಕೆಯಾಗಿರುವ ಕೆಲಸ ಕಾರ್ಯದ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಟಿಪ್ಪಣಿ ಕಳಿಸಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಮರ್ಪಕವಾಗಿ ಸ್ಪಷ್ಟೀಕರಣ ನೀಡದಿದ್ದರೇ ಬೇರೊಂದು ಖಾತೆಗೆ ಪಟ್ಟು ಹಿಡಿಯಲಿದ್ದಾರೆ ಎಂದು ಗೊತ್ತಾಗಿದೆ.

 

ಸರ್ಕಾರದ ವಿವಿಧ ಇಲಾಖೆ, ಕಚೇರಿಗಳ ವಿಲೀನ, ರದ್ದುಗೊಳಿಸುವಿಕೆ, ಮಂಜೂರಾಗಿರುವ ವಿವಿಧ ವೃಂದ ಬಲದ ವೈಜ್ಞಾನಿಕ ಪರಿಷ್ಕರಣೆ, ಹುದ್ದೆಗಳ ರದ್ದತಿ, ಮರು ವಿನ್ಯಾಸ ಇವುಗಳ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ರಚಿಸಿದ ಸಚಿವ ಸಂಪುಟ ಉಪ ಸಮಿತಿಯು ಕರ್ನಾಟಕ ಸರ್ಕಾರ ಸಚಿವಾಲಯದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದು ಪಡಿಸಲು ಶಿಫಾರಸು ಮಾಡಿತ್ತು. ಈ ಸಂಪುಟ ಉಪ ಸಮಿತಿಯ ಶಿಫಾರಸಿನ ಅನ್ವಯ ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದುಗೊಳಿಸಿದ್ದನ್ನು ಪ್ರತಿಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಕೂಡ ಟೀಕಿಸಿತ್ತು.

 

ಕರ್ನಾಟಕ ಸರ್ಕಾರದ ಅಧೀನದಲ್ಲಿ 60 ಉದ್ದಿಮೆಗಳಿವೆ. ಈ ಪೈಕಿ 21ಕ್ಕೂ ಹೆಚ್ಚು ಉದ್ದಿಮೆಗಳು ಸತತ ನಷ್ಟ ಅನುಭವಿಸುತ್ತಿದ್ದವು. ಇಂಥವುಗಳ ಪೈಕಿ ಸುಮಾರು 10 ಉದ್ದಿಮೆಗಳಿಗೆ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಸುಮಾರು ₹ 42 ಸಾವಿರ ಕೋಟಿಯಷ್ಟು ಹೂಡಿಕೆ ಮಾಡಿತ್ತು. ಆದರೂ ಇವುಗಳ ಕಾರ್ಯನಿರ್ವಹಣೆ ಸುಧಾರಿಸಿರಲಿಲ್ಲ. ಒಟ್ಟು ಲೆಕ್ಕಾಚಾರದಲ್ಲಿ ಸರ್ಕಾರಕ್ಕೆ ₹ 16 ಸಾವಿರ ಕೋಟಿಯಷ್ಟು ನಷ್ಟವಾಗಿತ್ತು.

 

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ಮೈಸೂರು ಶುಗರ್ಸ್, ಮೈಸೂರ್ ಪೇಪರ್ ಮಿಲ್ಸ್, ಹೆಸ್ಕಾಂ, ಜೆಸ್ಕಾಂ, ಚೆಸ್ಕಾಂ ಕಂಪನಿಗಳಿಗಾಗಿ ಸರ್ಕಾರ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಆದರೂ ಈ ಕಂಪನಿಗಳು ಹಲವು ಕಾರಣಗಳಿಂದಾಗಿ ನಷ್ಟದಲ್ಲಿವೆ.

the fil favicon

SUPPORT THE FILE

Latest News

Related Posts