ಎತ್ತಿನಹೊಳೆ; ಹತ್ತು ವರ್ಷದಲ್ಲಿ 10,783 ಕೋಟಿ ಖರ್ಚು, ಯೋಜನಾ ವೆಚ್ಚ 33 ಸಾವಿರ ಕೋಟಿಗೆ ಪರಿಷ್ಕೃತ?

Photo Credit;deccanhearld

ಬೆಂಗಳೂರು; ಭೂ ಸ್ವಾಧೀನ ಸಮಸ್ಯೆಗಳು, ಪರಿಸರ, ಅರಣ್ಯ ತೀರುವಳಿ, ಎನ್‌ಜಿಟಿಯಲ್ಲಿ ದಾಖಲಾದ ದಾವೆಗಳು, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಪೆಟ್ರೋನೆಟ್‌, ಗೇಲ್‌ ಕ್ರಾಸಿಂಗ್‌ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿತ ಇಲಾಖೆಗಳ ಅನುಮತಿ, ಆರ್ಥಿಕ ಸಂಪನ್ಮೂಲಗಳ ಲಭ್ಯತೆ ಕೊರತೆ ಸೇರಿದಂತೆ ಇನ್ನಿತರೆ ಅಂಶಗಳಿಂದಾಗಿ ವಿಳಂಬಗೊಂಡಿರುವ ಎತ್ತಿನಹೊಳೆ ಯೋಜನೆಯ ವೆಚ್ಚವು 33 ಸಾವಿರ ಕೋಟಿಗೆ ಪರಿಷ್ಕೃತಗೊಳ್ಳಲಿದೆ!

 

ಯೋಜನೆ ಆರಂಭವಾದ ವರ್ಷದಲ್ಲಿ 12,912.36 ಕೋಟಿ ರು. ಇದ್ದ ಯೋಜನಾ ವೆಚ್ಚವು ಆಗಸ್ಟ್‌ ಮೊದಲ ವಾರದ ಹೊತ್ತಿಗೆ 23,251 ಕೋಟಿ ರು. ಹೆಚ್ಚಳವಾಗಿತ್ತು. ಇದು ಒಂದು ಟಿಎಂಸಿಗೆ 1,000 ಕೋಟಿ ರು.ನಂತೆ ಅಂದಾಜಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೀಗ ಯೋಜನಾ ವೆಚ್ಚವನ್ನು ಮತ್ತಷ್ಟು ಪರಿಷ್ಕೃತಗೊಳಿಸಿರುವ ಜಲಸಂಪನ್ಮೂಲ ಇಲಾಖೆಯು ಅದನ್ನು 33,000 ಕೋಟಿ ರು.ಗೆ ಏರಿಸಿದೆ. ಇದರ ಪ್ರಕಾರ ಯೋಜನೆ ವೆಚ್ಚದಲ್ಲಿ 10 ವರ್ಷದಲ್ಲಿ 20,087.44 ಕೋಟಿ ರು. ಹೆಚ್ಚಳವಾಗಿದೆ.

 

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವಿವರಣೆ ನೀಡಿರುವ ಜಲಸಂಪನ್ಮೂಲ ಇಲಾಖೆಯು 2012-13ರಿಂದ 2022ರ ಜೂನ್‌ ಅಂತ್ಯಕ್ಕೆ ಒಟ್ಟಾರೆ 10,783.05 ಕೋಟಿ ರು. ವೆಚ್ಚ ಮಾಡಿದೆ ಎಂದು ಮಾಹಿತಿ ಒದಗಿಸಿದೆ. ಜಲಸಂಪನ್ಮೂಲ ಇಲಾಖೆಯು ನೀಡಿರುವ ವಿವರಣಾತ್ಮಕ ಟಿಪ್ಪಣಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2022-23ರ ಜೂನ್‌ ಅಂತ್ಯಕ್ಕೆ ಒದಗಿಸಿದ್ದ ಒಟ್ಟು 1,044 ಕೋಟಿ ರು. ಅನುದಾನದ ಪೈಕಿ 39.07 ಕೋಟಿ ರು. ಮಾತ್ರ ವೆಚ್ಚ ಮಾಡಿದೆ. 2012-13ರಿಂದ ಜೂನ್‌ 2022ರವರೆಗೆ ಒದಗಿಸಿದ್ದ ಒಟ್ಟು 11,787.98 ಕೋಟಿ ರು. ಅನುದಾನದ ಪೈಕಿ 10,793.05 ಕೋಟಿ ರು. ಖರ್ಚು ಮಾಡಿರುವುದು ವಿವರಣಾತ್ಮಕ ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಯೋಜನೆಗೆ ಎದುರಾಗಿರುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ನಿಗದಿಪಡಿಸಿದ ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆಯು ಸಮಿತಿಗೆ ತಿಳಿಸಿದೆ. ‘ ಮೊದಲನೇ ಹಂತದ ಏತ ಕಾಮಘಾರಿಗಳು, ವಿದ್ಯುತ್‌ ಪೂರೈಕೆ ಕಾಮಗಾರಿ, ಮತ್ತು ಎರಡನೇ ಹಂತದ ಗುರುತ್ವ ಕಾಲುವೆಯ ಪ್ರಾರಂಭಿಕ 55.00 ಕಿ ಮೀ ವರೆಗಿನ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸೆಪ್ಟಂಬರ್‌ 22ರ ಹೊತ್ತಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ಯೋಜಿಸಲಾಗಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಮೊದಲನೇ ಹಂತದ ಏತ ಮತ್ತು ವಿದ್ಯುತ್‌, ಎರಡನೇ ಹಂತದ ಗುರುತ್ವ ಕಾಲುವೆ, ಭೈರಗೊಂಡ್ಲು ಜಲಾಶಯಕ್ಕಿಂತ ಮುಂಚೆ ಕವಲೊಡೆಯುವ ವಿವಿಧ ಫೀಡರ್‌ ಕಾಲುವೆ ಕಾಮಗಾರಿಗಳನ್ನು 2023-24ರ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು,’ ಎಂದು ವಿವರ ಒದಗಿಸಿದೆ.

 

ಭೈರಗೊಂಡ್ಲು ಜಲಾಶಯ ನಂತರದ ಲಿಫ್ಟ್‌ ಮತ್ತು ಫೀಡರ್‌ ಕಾಲುವೆ ಕಾಮಗಾರಿಗಳ ಮುಖಾಂತರ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು ಕೆರೆ ತುಂಬಿಸಲು ಅನುಮೋದಿತ ಯೋಜನಾ ವರದಿಯಲ್ಲಿ ಅವಕಾಶ ಕಲ್ಪಿಸಿದೆ. ಎತ್ತಿನಹೊಳೆ ಯೋಜನೆಯಿಂದ ಮಾತ್ರ ಈ ಪ್ರದೇಶಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಿದೆ ಎಂದು ಸಮಿತಿಗೆ ಜಲಸಂಪನ್ಮೂಲ ಇಲಾಖೆಯು ಖಚಿತಪಡಿಸಿದೆ.

 

‘ಈ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಲು ಈ ಜಿಲ್ಲೆಗಳ ಜನಪ್ರತಿನಿಧಿಗಳು ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಸುಮಾರು 1.5 ರಿಂದ 2.00 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣದ ಪರ್ಯಾಯ ಪ್ರಸ್ತಾವನೆಯನ್ನು ತಯಾರಿಸಲಾಗಿದೆ. ಈ ಪರ್ಯಾಯ ಪ್ರಸ್ತಾವನೆಯನ್ನು ಒಳಗೊಂಡ 23,251.66 ಕೋಟಿ ಮೊತ್ತದ ಪುನರ್‌ ಪರಿಷ್ಕೃತ ಯೋಜನಾ ವರದಿಯನ್ನು ನಿಗಮದ ನಿರ್ದೇಶಕರ ಮೇರೆಗೆ ಆರ್ಥಿಕ ಇಲಾಖೆಗೆ ಕಳಿಸಿದೆ. ಈ ಸಂಬಂಧ ಕೆಲ ಸ್ಪಷ್ಟೀಕರಣವನ್ನು ಆರ್ಥಿಕ ಇಲಾಖೆ ಕೋರಿದೆ,’ ಎಂದು ಮಾಹಿತಿ ಒದಗಿಸಿದೆ.

 

ಸಮತೋಲನ ಜಲಾಶಯ ನಿರ್ಮಾಣದ ಪರ್ಯಾಯ ಪ್ರಸ್ತಾವನೆಯಂತೆ ಈಗಾಗಲೇ ಭೈರಗೊಂಡ್ಲು ಜಲಾಶಯದಿಂದ ಡಿಸಿ-5ರವರೆಗಿನ ಲಿಫ್ಟ್‌ ಕಾಮಗಾರಿ ಡಿಸಿ-5ರಿಂದ ದೊಡ್ಡಬಳ್ಳಾಪುರ ತಾಲೂಕು, ದೇವನಹಳ್ಳಿ ತಾಲೂಕು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಪೈಪ್‌ಲೈನ್‌ಗಳ ಮೂಲಕ ನೀರು ಹರಿಸುವ ಉದ್ದೇಶವಿದೆ. ಇದಕ್ಕೆಂದು ಎರಡು ಪ್ಯಾಕೇಜ್‌ ಕಾಮಘಾರಿಗಳ 2,048.20 ಕೋಟಿ ರು. ಮೊತ್ತದ ಟೆಂಡರ್ ಆಹ್ವಾನಿಸಿರುವ ಜಲಸಂಪನ್ಮೂಲ ಇಲಾಖೆಯು ಕೋಲಾರ, ಶ್ರೀನಿವಾಸಪುರ ಫೀಡರ್‌ ಕಾಲುವೆಯ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದೆ ಎಂದು ಸಮಿತಿಗೆ ತಿಳಿಸಿದೆ.

 

ಅದೇ ರೀತಿ ಎತ್ತಿನಹೊಳೆ ಗುರುತ್ವ ಕಾಲುವೆ ಕೊನೆಯಲ್ಲಿ ಬರುವ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಲಾಲ ಹೋಬಳಿಯ ಭೈರಗೊಂಡ್ಲು ಹತ್ತಿರ 5.78 ಟಿಎಂಸಿ ನೀರನ್ನು ಶೇಖರಿಸಲು ಯೋಜಿಸಿರುವ ಜಲಾಶಯ ನಿರ್ಮಾಣದಿಂದ 7 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಲಿವೆ. (ಕೊರಟಗೆರೆ -5, ದೊಡ್ಡಬಳ್ಳಾಪುರ -2) ಕೊರಟಗೆರೆ ತಾಲೂಕಿನ ಕೊಳಾಲ ಹೋಬಳಿಯ 17 ಗ್ರಾಮಗಳ 2,797 ಎಕರೆ 9 ಗುಂಟೆ ಸೇರಿ ಒಟ್ಟು 5,478 ಎಕರೆ 33 ಗುಂಟೆ ಭೂಮಿಯ ಭೂ ಸ್ವಾಧೀನದ ಅವಶ್ಯಕತೆ ಇದೆ ಎಂದು ಮಾಹಿತಿ ಒದಗಿಸಿದೆ.

 

‘ಎತ್ತಿನಹೊಳೆ ಯೋಜನೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೈರಗೊಂಡ್ಲು ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 2 ಟಿಎಂಸಿ ಅಡಿ ಆಗಿದ್ದರೂ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ 10 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ ಮಾಡಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸದನದಲ್ಲಿ ಹೇಳಿಕೆ ನೀಡಿದ್ದರು.

 

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ರಾಜೇಂದ್ರ ರಾಜಣ್ಣ ಪ್ರಸ್ತಾಪಿಸಿದ್ದ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ್ದ ಕಾರಜೋಳ ಅವರು, ‘ಉದ್ದೇಶಿತ ಯೋಜನೆಯಿಂದ ರಾಮನಗರ, ಕೋಲಾರ, ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ಏಳು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಬೈರಗೊಂಡ್ಲು ಜಲಾಶಯದಲ್ಲಿ ಸಂಗ್ರಹ ಪ್ರಮಾಣ ಕಡಿಮೆಯಿದ್ದರೂ ಬಳಕೆ ಪ್ರಮಾಣ ಹೆಚ್ಚಿಸಲು ಎಂಜಿನಿಯರ್‌ಗಳು, ತಂತ್ರಜ್ಞರು ನೀಲನಕ್ಷೆ ಸಿದ್ಧಪಡಿಸಿದ್ದಾರೆ ಎಂದು ವಿವರಿಸಿದ್ದನ್ನು ಸ್ಮರಿಸಬಹುದು.

 

 

‘ಎತ್ತಿನಹೊಳೆ ಯೋಜನೆ ಸ್ಥಗಿತವಾಗಲಿದೆ ಎಂದು ಆತಂಕಪಡುವ ಅಗತ್ಯವಿಲ್ಲ. ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಆದ್ದರಿಂದಲೇ 2022–23ನೇ ಸಾಲಿನ ಬಜೆಟ್‌ನಲ್ಲಿ ₹ 3 ಸಾವಿರ ಕೋಟಿ ಮೀಸಲಿಡಲಾಗಿದೆ’ ಎಂದಿದ್ದರು.

the fil favicon

SUPPORT THE FILE

Latest News

Related Posts