ಕಾನೂನು, ಆರ್ಥಿಕ ಇಲಾಖೆ ವಿರೋಧದ ನಡುವೆಯೂ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು

photo credit-oneindia

ಬೆಂಗಳೂರು; ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9.32 ಎಕರೆ ಗೋಮಾಳವನ್ನು ಮಂಜೂರು ಮಾಡಲು ಆರ್ಥಿಕ ಮತ್ತು ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು ಎಂಬ ಹೊಸ ಅಂಶ ಇದೀಗ ಬಹಿರಂಗವಾಗಿದೆ.

 

ಹುರುಳಿ ಚಿಕ್ಕನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್‌ 69ರಲ್ಲಿ 9-32 ಎಕರೆ ಜಮೀನನ್ನು ಶೈಕ್ಷಣಿಕ ಚಟುವಟಿಕೆಗಳಿಗಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯನ್ನು ಆರ್ಥಿಕ ಮತ್ತು ಕಾನೂನು ಇಲಾಖೆಯು ಒಪ್ಪಿರಲಿಲ್ಲ. ಮತ್ತು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನೂ ಸರ್ಕಾರವು ಉಲ್ಲಂಘಿಸಿದೆ ಎಂಬುದನ್ನು ದಾಖಲಾತಿಗಳು ಹೊರಗೆಡವಿದೆ.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರಾತಿ ಸಂಬಂಧದ 388 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದಿದೆ.

 

ಗೋಮಾಳ ಜಮೀನನ್ನು ಮಂಜೂರು ಮಾಡಲು ಆರ್ಥಿಕ ಮತ್ತು ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿ ನೀಡಿದ್ದ ಅಭಿಪ್ರಾಯವನ್ನೂ ಬದಿಗಿರಿಸಿ ಮಂಜೂರು ಮಾಡಿರುವುದು ಈ ಎರಡೂ ಇಲಾಖೆಗಳ ಅಭಿಪ್ರಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್‌ ಅಶೋಕ್‌ ಅವರು  ಯಾವುದೇ ಕಿಮ್ಮತ್ತು ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯವೇನು?

 

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿ ಹುರುಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ 69ರಲ್ಲಿ 9-32 ಎಕರೆ ಜಮೀನನ್ನು ಶೈಕ್ಷಣಿಕ ಚಟುವಟಿಕೆಗಳಿಗಾಗಿ ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಗೆ ಮಂಜೂರು ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸುತ್ತೋಲೆ (ಸಂಖ್ಯೆ ಕಂಇ 74 ಎಲ್‌ ಜಿ ಪಿ 2005 ದಿನಾಂಕ 21.12.2005) ಅನ್ವಯ ಯಾವುದೇ ಗೋಮಾಳ, ಗಾಯರಾಣ, ಹುಲ್ಲುಬನ್ನಿ ಜಮೀನುಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶ ಇರುವುದಿಲ್ಲವೆಂದು ಹಾಗೂ ಪ್ರಸ್ತಾಪಿತ ಜಮೀನು ನಗರ ವ್ಯಾಪ್ತಿಯಲ್ಲಿರುವುದಾಗಿ ಆಡಳಿತ ಇಲಾಖೆಯು ಪ್ರಸ್ತಾವನೆಯಲ್ಲಿಯೇ ತಿಳಿಸಿರುವುದರಿಂದ ಈ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು 2021ರ ಆಗಸ್ಟ್‌ 18ರಂದೇ ಕಂದಾಯ ಇಲಾಖೆಗೆ ತಿಳಿಸಿತ್ತು.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದ ಪ್ರತಿ

 

ಕಾನೂನು ಇಲಾಖೆ ನೀಡಿದ್ದ ಅಭಿಪ್ರಾಯವೇನು?

 

ಜಿಲ್ಲಾಧಿಕಾರಿಯವರ ವರದಿಯನ್ನು ಪರಿಶೀಲಿಸಲಾಗಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿ ಹುರಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ 69ರ ಜಮೀನು ಮೂಲತಃ ಸರ್ಕಾರಿ ಗೋಮಾಳ ಜಮೀನಾಗಿರುವುದು ಕಂಡು ಬರುತ್ತದೆ. ಈ ಜಮೀನು ಗೋಮಾಳ ಜಮೀನಾಗಿರುವುದರಿಂದ ಕರ್ನಾಟಕ ಭೂ ಕಂದಾಯ ನಿಯಮ 1966ರ ನಿಯಮ 97ನ್ನು ಗಮನಿಸಬೇಕಾಗುತ್ತದೆ.

 

ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದ ಪ್ರತಿ

 

ಕರ್ನಾಟಕ ಭೂ ಕಂದಾಯ ನಿಯಮ 1966ರ ನಿಯಮ 97ರ ಅನ್ವಯ ಗ್ರಾಮದಲ್ಲಿಯ ಪ್ರತಿ ನೂರು ಜಾನುವಾರುಗಳಿಗೆ 12 ಹೆಕ್ಟೇರ್‌ ಪ್ರದೇಶಗಳಂತೆ ಗೋಮಾಳ ಪ್ರದೇಶವನ್ನು ನಿಗದಿಪಡಿಸಲಾಗಿದೆ. ಆಡಳಿತ ಇಲಾಖೆಯ ಪರಿಶೀಲನೆಯಿಂದ ಮೇಲೆ ನಿಗದಿಪಡಿಸಿದ ಪ್ರದೇಶಕ್ಕಿಂತಲೂ ಕಡಿಮೆ ಪ್ರದೇಶವಿರುವುದು ಕಂಡು ಬರುತ್ತದೆ. ಗೋಮಾಳ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ಅಥವಾ ಗುತ್ತಿಗೆ ನೀಡಲು ಉದ್ದೇಶಿಸಿದಲ್ಲಿ ಮೊದಲು ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಬೇಕಾಗುತ್ತದೆ. ಗೋಮಾಳ ಶೀರ್ಷಿಕೆಯಿಂದ ತಗ್ಗಿಸದೇ ಜಮೀನನ್ನು ಅನ್ಯ ಉದ್ಧೇಶಕ್ಕೆ ಬಳಸಲು ಅವಕಾಶವಿರುವುದಿಲ್ಲ.

 

ಸರ್ವೋಚ್ಛ ನ್ಯಾಯಾಲಯದ ಜಗಪಾಲ್‌ ಸಿಂಗ್‌ ಮತ್ತಿತರರ ಮತ್ತು ಪಂಜಾಬ್‌ ರಾಜ್ಯ ಸರ್ಕಾರದ ವಿರುದ್ಧದ ಪ್ರಕರಣದಲ್ಲಿ ನೀಡಿರುವ ಎಸ್‌ಸಿಸಿ 396 ಅನ್ವಯ ಗೋಮಾಳ ಜಮೀನನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲ.

 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರಳಿಚಿಕ್ಕನಹಳ್ಳಿ ಗ್ರಾಮದ ಪ್ರಸ್ತಾಪಿತ ಜಮೀನು ಬಿಬಿಎಂಪಿ ವ್ಯಾಪ್ತಿಯಿಂದ 18 ಕಿ ಮೀ ಒಳಗಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2)ಅನ್ವಯ ಜಮೀನು ಮಂಜೂರು ಮಾಡಲು ಅವಕಾಶವಿರುವುದಿಲ್ಲ.

 

‘ಈ ಮೇಲೆ ತಿಳಿಸಿರುವ ಎಲ್ಲಾ ಕಾರಣಗಳಿಗಾಗಿ ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಮೇಲಿನ ಉಲ್ಲೇಖಿತ ತೀರ್ಪಿನನುಸಾರ ಪ್ರಸ್ತಾಪಿತ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲವೆನ್ನುವುದು ಕಾನೂನು ಇಲಾಖೆಯ ಅಭಿಪ್ರಾಯವಾಗಿರುತ್ತದೆ,’ ಎಂಬ ಅಂಶವು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ರಾಷ್ಟ್ರೋತ್ಥಾನ ಪರಿಷತ್‌ ಈಗಾಗಲೇ 74-00 ಎಕರೆ ಹೊಂದಿದ್ದರೂ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿ 7.45 ಕೋಟಿ ರು. ಬೆಲೆ ಬಾಳುವ ಗೋಮಾಳ ಜಮೀನನ್ನು ರಾಜ್ಯ ಬಿಜೆಪಿ ಸರ್ಕಾರವು ಕೇವಲ 1.86 ಕೋಟಿ ರು.ಗೆ ಮಂಜೂರು ಮಾಡಿದೆ. ಈ ಪರಿಷತ್‌ಗೆ ಜಮೀನನ್ನು ಮಂಜೂರು ಮಾಡುವ ಉದ್ದೇಶದಿಂದಲೇ ಗೋಮಾಳ ಶೀರ್ಷಿಕೆಯಿಂದಲೇ ತಗ್ಗಿಸಿ ತನ್ನ ಸಂಘ ನಿಷ್ಠೆ ಮೆರೆದಿರುವ ಸರ್ಕಾರವು 5.59 ಕೋಟಿ ರು. ನಷ್ಟಕ್ಕೆ ದಾರಿಮಾಡಿಕೊಟ್ಟಿತ್ತು.

 

ಕರ್ನಾಟಕ ಭೂ ಕಂದಾಯ ನಿಯಮಾವಳಿಗಳ ನಿಯಮ 97(1) 100 ಜಾನುವಾರುಗಳಿಗೆ 30 ಎಕರೆ ಜಮೀನನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು. ಇದರ ಪ್ರಕಾರ ಹುರುಳಿಚಿಕ್ಕನಹಳ್ಳಿಯಲ್ಲಿ 419 ಜಾನುವಾರುಗಳಿಗೆ 120 ಎಕರೆಯನ್ನು ಕಾಯ್ದಿರಿಸಬೇಕಿತ್ತು. ಪ್ರಸ್ತುತ ಈ ಗ್ರಾಮದಲ್ಲಿ ಈ ಅನುಪಾತದ ಪ್ರಕಾರ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಜಮೀನು ಇದೆ. 90-00 ಎಕರೆ ವಿಸ್ತೀರ್ಣದ ಗೋಮಾಳ ಜಮೀನೂ ಲಭ್ಯವಿಲ್ಲ. ಹೀಗಿದ್ದರೂ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ 9-32 ಎಕರೆ ವಿಸ್ತೀರ್ಣದ ಗೋಮಾಳ ಮಂಜೂರು ಮಾಡುವ ಉದ್ದೇಶದಿಂದಲೇ ಒಟ್ಟಾರೆ ಗೋಮಾಳ ವಿಸ್ತೀರ್ಣದಲ್ಲೇ ತಗ್ಗಿಸಿರುವುದು ಬಹಿರಂಗವಾಗಿದೆ.

 

ಮಂಜೂರು ಮಾಡಿರುವ ಜಮೀನಿನ ಪ್ರಚಲಿತ ಮಾರ್ಗಸೂಚಿ ಮೌಲ್ಯ ಎಕರೆಯೊಂದಕ್ಕೆ 61,00,000 ರು., ಹಾಗೂ ಮಾರುಕಟ್ಟೆ ಮೌಲ್ಯ 80,00,000 ರು. ಇದೆ. ಗ್ರಾಮ ನಕ್ಷೆಯ ಪ್ರಕಾರ ಕುಂಬಾರಹಳ್ಳಿಗೆ ಪ್ರಸ್ತಾಪಿತ ಜಮೀನಿಗೆ ಹೊಂದಿಕೊಂಡಂತೆ ಬಂಡಿದಾರಿ ಹಾದುಹೋಗಿರುತ್ತದೆ.

 

ಇದೇ ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಹಿಂದೆ 76 ಎಕರೆ ಜಮೀನು ಮಂಜೂರು ಮಾಡಿದ್ದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು. ಈ ವರದಿಯನ್ನು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚೆಗೆ ಕೈಗೆತ್ತಿಕೊಂಡಿತ್ತು. ಈ ಸಮಿತಿಗೆ ಯಾವುದೇ ವರದಿಯನ್ನೂ ಸಲ್ಲಿಸದ ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲೆಯ ಹೆಸರಘಟ್ಟದಲ್ಲಿ 9.32 ಎಕರೆ ಜಮೀನು ಮಂಜೂರು ಮಾಡಿರುವುದು ಮತ್ತೊಮ್ಮೆ ಸಿಎಜಿ ಆಕ್ಷೇಪಣೆಗೆ ದಾರಿಮಾಡಿಕೊಡಲಿದೆ.

the fil favicon

SUPPORT THE FILE

Latest News

Related Posts