ರಾಷ್ಟ್ರೋತ್ಥಾನ ಪರಿಷತ್‌ ಪರ ಪಶು ಸಂಗೋಪನೆ ಇಲಾಖೆ; ಗೋಮಾಳ ಅವಶ್ಯಕತೆಯಿಲ್ಲವೆಂಬ ದೃಢೀಕೃತ ಪತ್ರ

ಬೆಂಗಳೂರು; ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿ ಹುರುಳಿಚಿಕ್ಕನಹಳ್ಳಿ ಗ್ರಾಮದ ರೈತರು ತಮ್ಮ ಸ್ವಂತ ಹೊಲದಲ್ಲಿ ಬೆಳೆದಿರುವ ಹುಲ್ಲು, ಬೂಸಾ ಹಿಂಡಿ ಕೊಟ್ಟು ರಾಸುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಎಂಬ ಕಾರಣವನ್ನು ಮುಂದಿರಿಸಿ ಗೋಮಾಳವನ್ನು ಕಾಯ್ದಿರಿಸುವ ಅವಶ್ಯಕತೆಯೇ ಇಲ್ಲವೆಂದು ಪಶು ವೈದ್ಯಾಧಿಕಾರಿಗಳು ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರು ಮಾಡಲು ದಾರಿಮಾಡಿಕೊಟ್ಟಿರುವುದು ಬಹಿರಂಗವಾಗಿದೆ.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರಾತಿ ಸಂಬಂಧದ 388 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದಿದೆ. ಇದರಲ್ಲಿ ಪಶುವೈದ್ಯಾಧಿಕಾರಿಗಳ ದೃಢೀಕರಣ ಪತ್ರವು ಇದೆ. ಇದನ್ನಾಧರಿಸಿಯೇ ಬೆಂಗಳೂರು ನಗರ ಜಿಲ್ಲಾಧಿಕಾರಿಯು ಸಹ ಗೋಮಾಳ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂಬ ಅಂಶ ದಾಖಲೆಗಳಿಂದ ಗೊತ್ತಾಗಿದೆ.

 

ದೇಶದಲ್ಲಿಯೇ ಮೊದಲ ಬಾರಿಗೆ ಪಶು ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಸಚಿವ ಪ್ರಭು ಚವ್ಹಾಣ್‌ ಅವರು ಹೆಮ್ಮೆಯಿಂದ ಬೀಗಿದ್ದರು. ಆದರೀಗ ಗೋಮಾಳವನ್ನು ಉಳಿಸಿಕೊಳ್ಳಬೇಕಿದ್ದ ಪಶುವೈದ್ಯಾಧಿಕಾರಿಗಳೇ ಗೋಮಾಳವನ್ನು ಅನ್ಯ ಉದ್ಧೇಶಕ್ಕೆ ಮಂಜೂರು ಮಾಡಲು ಅನುಮತಿ ನೀಡಿರುವುದು ಸಾರ್ವಜನಿಕರ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ.

 

ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿನ ಪ್ರಸ್ತಾಪಿತ ಜಮೀನು ಮೂಲತಃ ಗೋಮಾಳ ಜಮೀನಾಗಿರುತ್ತದೆ. ಈ ಗ್ರಾಮದಲ್ಲಿ 314 ಚಿಕ್ಕವು ಮತ್ತು 105 ದೊಡ್ಡ ಜಾನುವಾರು ಒಟ್ಟಾರೆ 419 ಜಾನುವಾರುಗಳಿವೆ. 100 ರಾಸುಗಳಿಗೆ ತಲಾ 30 ಎಕರೆಯಂತೆ 90-00 ಎಕರೆ ಗೋಮಾಳದ ಅಗತ್ಯವಿರುತ್ತದೆ.

 

ಆದರೆ ಸದರಿ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ಅಷ್ಟು ವಿಸ್ತೀರ್ಣದ ಜಮೀನು ಲಭ್ಯವಿರುವುದಿಲ್ಲ. ಹಾಲಿ ಗ್ರಾಮದಲ್ಲಿ ರೈತರು ಸಾಕುತ್ತಿರುವ ಜಾನುವಾರುಗಳು ಹೈಬ್ರಿಡ್‌ ತಳಿ ಜಾನುವಾರುಗಳಾಗಿದ್ದು, ಈ ಜಾನುವಾರುಗಳಿಗೆ ರೈತರು ಬೆಳೆಯುವ ಮೇವು ಮತ್ತುಮಾರುಕಟ್ಟೆಯಲ್ಲಿ ದೊರೆಯುವ ಮೇವನ್ನು ಅವಲಂಬಿಸಿರುತ್ತಾರೆ ಎಂದು ಚೆಕ್‌ ಲೀಸ್ಟ್‌ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

‘ಹುರುಳಿ ಚಿಕ್ಕನಹಳ್ಳಿ ಗ್ರಾಮದಲ್ಲಿ 419 ರಾಸುಗಳಿದ್ದು 20ನೇ ಜಾನುವಾರು ಗಣತಿ ಮಾಹಿತಿ ಪ್ರಕಾರ 224 ಕುರಿಗಳು, 109 ಆಡುಗಳು ಕೂಡ ಇವೆ. ಸದರಿ ರಾಸುಗಳನ್ನು ರೈತರು ಮತ್ತು ಸಾರ್ವಜನಿಕರು ತಮ್ಮ ಸ್ವಂತ ಹೊಲದಲ್ಲಿ ಬೆಳೆದಿರುವ ಹುಲ್ಲು ಬೂಸಾ ಹಿಂಡಿ ಕೊಟ್ಟು ಸಾಕಾಣಿಕೆ ಮಾಡುತ್ತಿರುತ್ತಾರೆ. ಆದ್ದರಿಂದ ಹುರುಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ 69ರಲ್ಲಿನ 9-30 ಎಕರೆ ಜಮೀನನ್ನು ಕಾಯ್ದಿರಿಸುವ ಅವಶ್ಯಕತೆ ಕಂಡು ಬಂದಿರುವುದಿಲ್ಲ,’ ಎಂದು ಯಲಹಂಕ ತಾಲೂಕಿನ ಪಶುವೈದ್ಯಾಧಿಕಾರಿ 2021 ಏಪ್ರಿಲ್‌ನಲ್ಲಿ ಸರ್ಕಾರಕ್ಕೆ ದೃಢೀಕರಣ ಪತ್ರವನ್ನು ನೀಡಿದ್ದಾರೆ.

 

ಪಶು ವೈದ್ಯಾಧಿಕಾರಿ ಸಲ್ಲಿಸಿರುವ ದೃಢೀಕೃತ ಪತ್ರ

 

ಇದನ್ನಾಧರಿಸಿ ಗೋಮಾಳವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಬಹುದು ಎಂದು ಯಲಹಂಕ ತಹಶೀಲ್ದಾರ್‌, ಪ್ರಾದೇಶಿಕ ಆಯುಕ್ತರು ಮತ್ತು ಬೆಂಗಳೂರು ಜಿಲ್ಲಾಧಿಕಾರಿಯೂ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರು ಮಾಡುವ ಸಂಬಂಧ 2021ರ ನವೆಂಬರ್‌ 25ರಂದು ಸಚಿವ ಸಂಪುಟಕ್ಕೆ ಕಡತ ಮಂಡನೆಯಾಗಿತ್ತು. ಅಂದು ನಡೆದಿದ್ದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ತೀರ್ಮಾನ ಕೈಗೊಂಡಿರಲಿಲ್ಲ.

 

ಗೋಮಾಳ ಮಂಜೂರು ಮಾಡಬೇಕೇ ಬೇಡವೇ ಎಂಬ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಚಿವ ಆರ್‌ ಅಶೋಕ್‌ ಅವರ ವಿವೇಚನೆಗೆ ಬಿಡಲಾಗಿತ್ತು. ಆ ಹಂತದಲ್ಲೇ ‘ದಿ ಫೈಲ್‌’ ಮತ್ತು ವಾರ್ತಾಭಾರತಿ ಹೊರಗೆಳೆದಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳವನ್ನು ಮಂಜೂರು ಮಾಡಿರುವ ರಾಜ್ಯ ಸರ್ಕಾರವು 4 ತಿಂಗಳ ನಂತರ ಅಂದರೆ 2022ರ ಫೆ.22ರಂದು ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts