401 ಕೋಟಿ ರು ಆದಾಯವಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ರಿಯಾಯಿತಿ ದರದಲ್ಲಿ ಗೋಮಾಳ ಮಂಜೂರು

ಬೆಂಗಳೂರು; ಶಾಲಾ ಶುಲ್ಕದಿಂದ ಸಂಗ್ರಹವಾದ ಆದಾಯವೂ ಸೇರಿದಂತೆ ಇನ್ನಿತರೆ ಮೂಲಗಳಿಂದ ಕಳೆದ 5 ವರ್ಷಗಳಲ್ಲಿ 401.86 ಕೋಟಿ ರು. ಆದಾಯ ಮತ್ತು ಇದೇ ಅವಧಿಯಲ್ಲಿ 63.64 ಕೋಟಿ ರು. ಲಾಭಾಂಶ ಹೊಂದುವ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಜಮೀನು ಖರೀದಿಸುವ ಆರ್ಥಿಕ ಸಾಮರ್ಥ್ಯವಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಮಾರುಕಟ್ಟೆ ಶುಲ್ಕದಲ್ಲೇ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಗೋಮಾಳ ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಇದಲ್ಲದೆ ಸ್ಥಿರಾಸ್ತಿಗಳಿಂದ ಕೋಟ್ಯಂತರ ರುಪಾಯಿ ಬಾಡಿಗೆ ಆದಾಯ, ಬಡ್ಡಿ ಆದಾಯ, ಇನ್ಫೋಸಿಸ್‌ ಸಂಸ್ಥೆ ಸೇರಿದಂತೆ ಹಲವು ಕಂಪನಿಗಳಿಂದ ರಾಷ್ಟ್ರೋತ್ಥಾನ ಪರಿಷತ್‌ಗೆ ಪ್ರತಿ ವರ್ಷ ಲಕ್ಷಾಂತರ ರುಪಾಯಿಗಳಷ್ಟು ದೇಣಿಗೆ ಹರಿದು ಬರುತ್ತಿದೆ. ಆರ್ಥಿಕವಾಗಿ ಶ್ರೀಮಂತಿಕೆ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್‌ ತನ್ನ ಶೈಕ್ಷಣಿಕ ಚಟುವಟಿಕೆಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಜಮೀನು ಖರೀದಿಸುವ ಎಲ್ಲಾ ರೀತಿಯ ಸಾಮರ್ಥ್ಯ ಹೊಂದಿದೆ. ಆದರೂ ಬಿಜೆಪಿ ಸರ್ಕಾರವು ಶೇ. 25ರಷ್ಟು ರಿಯಾಯಿತಿ ದರದಲ್ಲಿ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಗೋಮಾಳ ಮಂಜೂರು ಮಾಡುವ ಮೂಲಕ  ಸಂಘ ನಿಷ್ಠೆ ಮೆರೆದಿದೆ.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರಾತಿ ಸಂಬಂಧದ 388 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದಿದೆ. ಇದರಲ್ಲಿ ಕಳೆದ 5 ವರ್ಷದ ಆಡಿಟ್‌ ವರದಿಯೂ ಇದೆ.

 

ರಾಷ್ಟ್ರೋತ್ಥಾನ ಪರಿಷತ್‌ನ ಆಡಿಟ್‌ ವರದಿ

 

ರಾಷ್ಟ್ರೋತ್ಥಾನ ಪರಿಷತ್‌ನ ಕಳೆದ 5 ವರ್ಷದಲ್ಲಿ (2016ರಿಂದ 2020) 401.86 ಕೋಟಿ ರು. ಆದಾಯವಿದೆ. ಇದೇ ಅವಧಿಯಲ್ಲಿ 63.64 ಕೋಟಿ ರು. ಲಾಭಾಂಶವಿದೆ. 2019ರ ಮಾರ್ಚ್‌ 31ರ ಅಂತ್ಯಕ್ಕೆ ಸ್ಥಿರ ಮತ್ತ ಚರಾಸ್ತಿ ಮೌಲ್ಯ 208 ಕೋಟಿ ರು. ಇದ್ದರೆ, 2020ರ ಮಾರ್ಚ್‌ 31ರ ಅಂತ್ಯಕ್ಕೆ 218.27 ಕೋಟಿ ರು. ಇದೆ. 10.27 ಕೋಟಿ ರು. ಹೆಚ್ಚಳವಾಗಿರುವುದು ಆಡಿಟ್‌ ವರದಿಯಿಂದ ತಿಳಿದು ಬಂದಿದೆ.

 

2019ರಲ್ಲಿ 83.26 ಕೋಟಿ ಆದಾಯ, 2020ರಲ್ಲಿ 96.78 ಕೋಟಿ ಆದಾಯವಿದೆ. 2019ರಲ್ಲಿ 7.68 ಕೋಟಿ ಲಾಭಾಂಶ ಮತ್ತು 2020ರಲ್ಲಿ 16.53 ಕೋಟಿ ಲಾಭಾಂಶವಿದೆ. ಎರಡೂ ವರ್ಷದಲ್ಲಿ 24.21 ಕೋಟಿ ಲಾಭಾಂಶವಿದೆ. 2018ರಲ್ಲಿ 78.32 ಕೋಟಿ ರು. ಆದಾಯವಿದೆ. 7.00 ಕೋಟಿ ಲಾಭಾಂಶ ಇದೆ. 2017ರಲ್ಲಿ 74.65 ಕೋಟಿ ಆದಾಯವಿದೆ. 15.94 ಕೋಟಿ ರು. ಲಾಭಾಂಶ ಇದೆ. 2016ರಲ್ಲಿ 68.85 ಕೋಟಿ ಆದಾಯವಿದೆ. 16.49 ಕೋಟಿ ಲಾಭಾಂಶ ಹೊಂದಿರುವುದು ಆಡಿಟ್‌ ವರದಿಯಿಂದ ಗೊತ್ತಾಗಿದೆ.

 

 

ಶಾಲೆಯ ವಿವಿಧ ಬಾಬ್ತಿನಲ್ಲಿ ಸಂಗ್ರಹಿಸಿರುವ ಶುಲ್ಕಗಳ ಮೊತ್ತ ಕಳೆದ 5 ವರ್ಷದಲ್ಲಿ ಒಟ್ಟಾರೆ 362.14 ಕೋಟಿ ರು. ಇದೆ. ಕೇವಲ ಶಾಲಾ ಶುಲ್ಕದ ಹೆಸರಿನಲ್ಲಿ 2020ರಲ್ಲಿ 75.90 ಕೋಟಿ ರು.ಇದೆ. 2019ರಲ್ಲಿ 64.41 ಕೋಟಿ ರು ಇದೆ. 2018ರಲ್ಲಿ 58.24 ಕೋಟಿ ರು., 2017ರಲ್ಲಿ 54.00 ಕೋಟಿ ರು. ಇದೆ. 2017ಕ್ಕೆ ಹೋಲಿಸಿದರೆ 2018ರಲ್ಲಿ ಶಾಲಾ ಶುಲ್ಕದಲ್ಲಿ 8 ಕೋಟಿ ಹೆಚ್ಚಳವಾಗಿದೆ. 2016ರಲ್ಲಿ 47.67 ಕೋಟಿ ರು ಇದೆ. ಒಟ್ಟಾರೆ ಕಳೆದ 5 ವರ್ಷದಲ್ಲಿ ಶಾಲಾ ಶುಲ್ಕಗಳ ಹೆಸರಿನಲ್ಲಿ 300.22 ಕೋಟಿ ರು. ಸಂಗ್ರಹವಾಗಿದೆ.

 

ಯೋಗ, ರಕ್ತನಿಧಿ, ವಿದ್ಯಾರ್ಥಿ ನಿಲಯ ಇತ್ಯಾದಿ ಸೇರಿದಂತೆ ಇನ್ನಿತರೆ ಶುಲ್ಕಗಳು – 2020ರಲ್ಲಿ 11.18 ಕೋಟಿ ರು. 2019ರಲ್ಲಿ 13.04 ಕೋಟಿ ರು. 2018ರಲ್ಲಿ 14.02 ಕೋಟಿ, 2017ರಲ್ಲಿ 12.80 ಕೋಟಿ ರು, 2016ರಲ್ಲಿ 10.88 ಕೋಟಿ ರು. ಇದೆ. ಕಳೆದ 5 ವರ್ಷದಲ್ಲಿ 61.92 ಕೋಟಿ ರು. ಸಂಗ್ರಹವಾಗಿದೆ.

 

2016ರಲ್ಲಿ ಬಾಡಿಗೆ ಆದಾಯ 4.24 ಕೋಟಿ ರು., 2017ರಲ್ಲಿ ಬಾಡಿಗೆ ಆದಾಯ- 3.47 ಕೋಟಿ, 2018ರಲ್ಲಿ ಬಾಡಿಗೆ ಆದಾಯ- 67.40 ಲಕ್ಷ, 2019ರಲ್ಲಿ ಬಾಡಿಗೆ ಆಧಾಯ- 53.99 ಲಕ್ಷ,2020ರಲ್ಲಿ ಬಾಡಿಗೆ ಆದಾಯ- 6.71 ಕೋಟಿ ಸೇರಿ 5 ವರ್ಷದಲ್ಲಿ ಒಟ್ಟಾರೆ 15.63 ಕೋಟಿ ರು.ಬಾಡಿಗೆ ಆದಾಯವಿದೆ. ಬಡ್ಡಿ ಆದಾಯ ಕಳೆದ 5 ವರ್ಷದಲ್ಲಿ 3.72 ಕೋಟಿ ರು. ಬಂದಿರುವುದು ಆಡಿಟ್‌ ವರದಿಯಿಂದ ತಿಳಿದು ಬಂದಿದೆ.

 

ಈ ಸಂಸ್ಥೆಯು 2018ರ ಮಾರ್ಚ್‌ ಅಂತ್ಯಕ್ಕೆ ಶಾಲಾ ಶುಲ್ಕದ ರೂಪದಲ್ಲಿ 58,24,30,225 ರು. 2019ರಲ್ಲಿ 64, 41, 85,093 ರು. ಸಂಗ್ರಹಿಸಿದೆ. ಇದಲ್ಲದೆ ವಿದ್ಯಾರ್ಥಿ ನಿಲಯ, ಯೋಗ, ರಕ್ತ ನಿಧಿ ಹೆಸರಿನಲ್ಲಿ 2018ರ ಮಾರ್ಚ್‌ ಅಂತ್ಯಕ್ಕೆ 14,20,31,023 ರು., 2019ರಲ್ಲಿ 13,40,41,177 ರು. ಸಂಗ್ರಹಿಸಿದೆ. ಇತರೆ ಆಸ್ತಿಗಳಿಂದ ಬಾಡಿಗೆ ರೂಪದಲ್ಲಿ 2018ರ ಮಾರ್ಚ್‌ ಅಂತ್ಯಕ್ಕೆ 67,40,763 ರು., 2019ರಲ್ಲಿ 53,89, 629 ರು. ಆದಾಯ ಗಳಿಸಿದೆ. 2020ರ ಮಾರ್ಚ್‌ ಅಂತ್ಯಕ್ಕೆ 6,71, 02, 546 ಆದಾಯ ಗಳಿಸಿತ್ತು.

 

ದೇಣಿಗೆ ಮತ್ತು ಅನುದಾನದ ರೂಪದಲ್ಲಿ 2018ರ ಮಾರ್ಚ್‌ ಅಂತ್ಯಕ್ಕೆ 3,37, 41,438 ರು., 2019ರ ಮಾರ್ಚ್ ಅಂತ್ಯಕ್ಕೆ 2,95, 81, 269 ರು. ಸ್ವೀಕರಿಸಿದೆ. 2020ರ ಅಂತ್ಯಕ್ಕೆ 2,05, 78, 699 ರು. ಸ್ವಿಕರಿಸಿತ್ತು. ಆದಾಯದ ಮೇಲಿನ ಬಡ್ಡಿ ರೂಪದಲ್ಲಿ 2018ರ ಮಾರ್ಚ್‌ ಅಂತ್ಯಕ್ಕೆ 96, 95, 570 ರು., 2019ರಲ್ಲಿ 60, 30,723 ರು. ವಸೂಲಿಯಾಗಿದೆ. 2020ರ ಮಾರ್ಚ್‌ ಅಂತ್ಯಕ್ಕೆ 98, 97, 182 ರು. ಬಡ್ಡಿ ಆದಾಯಗಳಿಸಿತ್ತು. 2020ರ ಅಂತ್ಯಕ್ಕೆ ಇನ್ನಿತರೆ ಆದಾಯ ಮೂಲಗಳಿಂದ ಒಟ್ಟು 96, 78, 50, 640 ರು. ಆದಾಯ ಗಳಿಸಿತ್ತು.

 

ಒಟ್ಟಾರೆ 2018ರ ಮಾರ್ಚ್ ಅಂತ್ಯಕ್ಕೆ 78, 32, 40, 750 ರು., 2019ರ ಅಂತ್ಯಕ್ಕೆ 83, 26,35,910 ರು. ಹೊಂದಿತ್ತು. 2018ರ ಮಾರ್ಚ್‌ ಅಂತ್ಯಕ್ಕೆ ಮೂಲ ಬಂಡವಾಳ ನಿಧಿಯಡಿ 137,60,67,495 ರು.ಗಳಿದ್ದರೆ, 2019ರಲ್ಲಿ 157, 23,26, 396ರು.ಗಳಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ 182, 39, 10, 069 ರು. ಇತ್ತು. 2018ರ ಮಾರ್ಚ್‌ ಅಂತ್ಯಕ್ಕೆ 24,20, 98, 935 ರು.ಮೌಲ್ಯದ ಭೂಮಿ ಇತ್ತು. 2019ರ ಹೊತ್ತಿಗೆ ಈ ಭೂಮಿಗೆ 25,62, 78, 952 ರು. ಮೌಲ್ಯವಿದೆ.

 

ಅದೇ ರೀತಿ 2018ರ ಮಾರ್ಚ್‌ ಅಂತ್ಯಕ್ಕೆ 101, 00, 63, 484 ರು. ಮೌಲ್ಯದ ಕಟ್ಟಡಗಳಿದ್ದವು. 2019ರ ಅಂತ್ಯಕ್ಕೆ ಇದರ ಮೌಲ್ಯವು 127, 55, 69, 755 ರು.ಗಳಾಗಿತ್ತು. ಇನ್ನಿತರೆ ಆಸ್ತಿಗಳೂ ಸೇರಿದಂತೆ ಒಟ್ಟಾರೆ 2018ರ ಅಂತ್ಯಕ್ಕೆ 185,57,45,941 ಮೌಲ್ಯದ್ದಾಗಿದ್ದರೆ 2019ರ ಅಂತ್ಯಕ್ಕೆ 208, 04, 12, 650 ರು.ಮೌಲ್ಯಕ್ಕೆ ತಲುಪಿತ್ತು. 2020ರ ಅಂತ್ಯಕ್ಕೆ ಇದರ ಮೌಲ್ಯವು 133, 26, 72, 220 ರು.ಗಳಾಗಿತ್ತು.

 

ಕಾರ್ಪಸ್‌ ಫಂಡ್‌ ಅಡಿಯಲ್ಲಿ ( ಹಗರಿಬೊಮ್ಮನಹಳ್ಳಿ, ಆರ್‌ ಎಂ ನಗರ್‌, ಬಿಎಸ್‌ಕೆ, ಥಣಿಸಂಸದ್ರ, ಧಾರವಾಡ, ದಾವಣಗೆರೆ) ಶಾಲಾ ಅಭಿ ವೃದ್ದಿ ನಿಧಿಯು 2018ರ ಮಾರ್ಚ್‌ ಅಂತ್ಯಕ್ಕೆ 3,26, 225,489 ರು., 2019ರ ಅಂತ್ಯಕ್ಕೆ 6, 62, 26, 002 ರು.ಗಳಾಗಿವೆ. ಒಎನ್‌ಜಿಸಿ, ನಿರ್ಮಿತಿ ಕೇಂದ್ರ, ಇನ್ಫೋಸಿಸ್‌ ಫೌಂಡೇಷನ್‌, ವಿಜಯ ಬ್ಯಾಂಕ್‌, ಪಿಎಆರ್‌ವಿ ಟ್ರಸ್ಟ್‌, ಎಸ್‌ಬಿಐ, ಜೆಎನ್‌ಎಸ್‌ ಫೌಂಡೇಷನ್‌, ಸ್ಟಾರ್‌ ಇಂಡಿಯಾ ಸಂಸ್ಥೆಗಳಿಂದ 2018ರ ಅಂತ್ಯಕ್ಕೆ 6, 99, 71, 667 ರು., 2019ರ ಅಂತ್ಯಕ್ಕೆ 5,28, 16, 135 ರು.ಗಳು ಸಂಗ್ರಹವಾಗಿವೆ. ಈ ಪೈಕಿ ಇನ್ಫೋಸಿಸ್‌ ಫೌಂಡೇಷನ್‌ 2018ರ ಮಾರ್ಚ್‌ ಅಂತ್ಯಕ್ಕೆ ಒಟ್ಟು 31, 57, 000 ರು. ದೇಣಿಗೆ ನೀಡಿರುವುದು ಆಡಿಟ್‌ ವರದಿಯಿಂದ ಗೊತ್ತಾಗಿದೆ.

 

ರಾಷ್ಟ್ರೋತ್ಥಾನ ಪರಿಷತ್ ಒಂದು ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು ಕರ್ನಾಟಕ ಪ್ರಾಂತ್ಯದಲ್ಲಿ ಜನಶಿಕ್ಷಣ, ಜನಜಾಗೃತಿ ಮತ್ತು ಜನಸೇವಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಪರಿಷತ್‌ ರಾಜ್ಯಾದ್ಯಂತ ಹತ್ತು ಹಲವು ಸೇವಾ ಚಟುವಟಿಕೆಗಳನ್ನು ಕಳೆದ 54 ವರ್ಷಗಳಿಂದಲೂ ನಡೆಸಿಕೊಂಡು ಬಂದಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದೆ.

 

ಬಹು ಕೋಟಿ ರುಪಾಯಿ ಆದಾಯ ಮತ್ತು ಆಸ್ತಿಗಳನ್ನು ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ರಿಯಾಯಿತಿ ದರದಲ್ಲಿ ಜಮೀನು ಅದರಲ್ಲೂ ತುಂಬಾ ಮುಖ್ಯವಾಗಿ ಗೋಮಾಳ ಜಮೀನನ್ನು ಮಂಜೂರು ಮಾಡಿರುವ ಬಿಜೆಪಿ ಸರ್ಕಾರದ ಕ್ರಮವು ಸಾಮಾಜಿಕ ನೀತಿಗೆ ವಿರುದ್ಧವಾಗಿದೆ. ಹಲವಾರು ಶೈಕ್ಷಣಿಕ ಸಂಘ, ಸಂಸ್ಥೆಗಳು ಕೊರೊನಾ ಕಾಲದಲ್ಲಿ ಆರ್ಥಿಕವಾಗಿ ನೊಂದು ನಶಿಸಿ ಹೋಗಿವೆ.  ಆಡಿಟ್‌ ವರದಿ ಪ್ರಕಾರ ಪರಿಷತ್‌ ಶ್ರೀಮಂತವಾಗಿದೆ.  400 ಕೋಟಿ ಗೂ ಹೆಚ್ಚಿನ ಆದಾಯ ಹೊಂದಿರುವ ಪರಿಷತ್‌, ಮುಕ್ತ ಮಾರುಕಟ್ಟೆಯಲ್ಲಿ ಜಮೀನು ಖರೀದಿಸಬೇಕಿತ್ತು ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಅಭಿಪ್ರಾಯಿಸಿದೆ.

 

‘ಸರ್ಕಾರಕ್ಕೆ ಅದರಲ್ಲೂ ರಿಯಾಯಿತಿ ದರದಲ್ಲಿ ಜಮೀನು ಮಂಜೂರಿಗೆ ನೀಡಿದ್ದ ಪ್ರಸ್ತಾವನೆಯನ್ನು ಆರಂಭಿಕ ಹಂತದಲ್ಲೇ ತಿರಸ್ಕರಿಸಬೇಕಿತ್ತು. ಆದರೆ ಬಿಜೆಪಿ ಸರ್ಕಾರವು ತನ್ನ ಸಂಘ ನಿಷ್ಠೆಯನ್ನು ಮತ್ತು ಸಂಘ ಪರಿವಾರದ ಮುಖಂಡರನ್ನು ಮೆಚ್ಚಿಸಲು, ಓಲೈಸಲು ಮತ್ತು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಬೊಕ್ಕಸಕ್ಕೆ 5.30 ಕೋಟಿಯಷ್ಟು ನಷ್ಟ ಮಾಡಿಕೊಂಡು ಗೋಮಾಳ ಜಮೀನು ಮಂಜೂರು ಮಾಡಿರುವುದು ಅನ್ಯಾಯ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು,’ ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು ಮಾಡುವ ಪ್ರಸ್ತಾವನೆಯು ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಲ್ಲಿಕೆಯಾಗಿತ್ತು. ಆ ನಂತರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಈ ಪ್ರಸ್ತಾವನೆಗೆ ಮುನ್ನೆಲೆಗೆ ಬಂದಿತು. ಕಂದಾಯ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts