ಬಿಜೆಪಿ ಅಧ್ಯಕ್ಷರ ಹೆಸರಿಗೆ 2 ಎಕರೆ ನೋಂದಣಿ; ಕಂದಾಯ ಇಲಾಖೆ ಅಭಿಪ್ರಾಯ ಕೋರಿದ ಜಲಸಂಪನ್ಮೂಲ ಇಲಾಖೆ

photo credit-indiatv

ಬೆಂಗಳೂರು; ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ 2 ಎಕರೆಯನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ ಮಾಡಿಕೊಡುವ ಬಗೆಗಿನ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳಿಗೆ ಈಗ ಬಿರುಸಿನ ಚಾಲನೆ ದೊರೆತಿದೆ. ಈ ಸಂಬಂಧ ಅಭಿಪ್ರಾಯ ಕೋರಿರುವ ಜಲಸಂಪನ್ಮೂಲ ಇಲಾಖೆಯು ಕಂದಾಯ ಇಲಾಖೆಗೆ ಕಡತವನ್ನು ರವಾನಿಸಿದೆ! ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ಜಮೀನು ನೋಂದಣಿ ಮಾಡಿಕೊಡುವ ಸಂಬಂಧದ ಪ್ರಕರಣವೀಗ ಗೋವಿಂದ ಕಾರಜೋಳರ ಅಂಗಳದಿಂದ ಕಂದಾಯ ಸಚಿವ ಆರ್‌ ಅಶೋಕ್‌ ಅವರ ಅಂಗಳಕ್ಕೆ ಬಂದಂತಾಗಿದೆ.

 

ಶಿವಮೊಗ್ಗದ ಆಲ್ಕೋಳ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ಹೆಸರಿನಲ್ಲಿರುವ ಒಟ್ಟು ಜಮೀನಿನ ಪೈಕಿ 2 ಎಕರೆಯನ್ನು ರಾಜಕೀಯ ಕ್ಷೇತ್ರದ ಸ್ಥಿತಿಗತಿ ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ಮಂಜೂರು ಮಾಡಿಕೊಡಬೇಕು ಎಂದು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್‌ ಅವರ ಪ್ರಸ್ತಾವನೆಗೆ ನಿಗಮವು ತಾತ್ವಿಕ ಅನುಮೋದನೆ ನೀಡಿತ್ತು.

 

ಜಮೀನು ಮಂಜೂರಾತಿಗೆ ತಾತ್ವಿಕ ಅನುಮೋದನೆ ದೊರೆಯುತ್ತಿದ್ದಂತೆ ಸಚಿವ ಗೋವಿಂದ ಕಾರಜೋಳ ಅವರು ಕಂದಾಯ ಇಲಾಖೆಯ ಅಭಿಪ್ರಾಯ ಕೋರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಂದಾಯ ಇಲಾಖೆಯ ಅಭಿಪ್ರಾಯ ಬಂದ ಬಳಿಕ ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಸೂಚಿಸಿದ್ದಾರೆ ಎಂದು ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಶಿವಮೊಗ್ಗ ನಗರದ ಸಾಗರ ರಸ್ತೆಗೆ (ಎನ್‌ ಎಚ್‌ 206) ಅಭಿಮುಖವಾಗಿರುವ ಅಲ್ಕೋಳ ಗ್ರಾಮದ ಸರ್ವೆ ನಂಬರ್‌ 36 ಮತ್ತು 37ರಲ್ಲಿ ರಾಜ್ಯ ಸರ್ಕಾರವು ಸುಮಾರು 2 ಎಕರೆ ಜಾಗವನ್ನು ಅಧ್ಯಯನ, ಸಂಶೋಧನೆ ಮತ್ತು ಪ್ರಶಿಕ್ಷಣ ಕೇಂದ್ರಕ್ಕೆ ಮಂಜೂರು ಮಾಡಿರುತ್ತದೆ. ಮಂಜೂರು ಮಾಡಿರುವ ಜಾಗವನ್ನು ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಜನತಾಪಾರ್ಟಿ ಈ ಹೆಸರಿಗೆ ಮಾಡಿಕೊಡಬೇಕು,’ ಎಂದು ಬಿಜೆಪಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್‌ ಅವರು 2022ರ ಮೇ 20ರಂದು ಪತ್ರ ಬರೆದಿದ್ದರು.

 

ನಿಗಮದ ತಾತ್ವಿಕ ಅನುಮೋದನೆ

 

ರಾಜಕೀಯ ಕ್ಷೇತ್ರದ ಸ್ಥಿತಿಗತಿ ಅಧ್ಯಯನ ಸಂಶೋಧನೆ ಮತ್ತು ತರಬೇತಿಗಾಗಿ ಕೇಂದ್ರವನ್ನು ಸ್ಥಾಪಿಸಲು ಶಿವಮೊಗ್ಗ ನಗರದ ಅಲ್ಕೋಳ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ಸರ್ವೇ ನಂಬರ್‌ 36 ಮತ್ತು 37ರಲ್ಲಿ ನಿಗಮದ ಒಟ್ಟು 2 ಎಕರೆಯನ್ನು ಮಂಜೂರು ಮಾಡಬೇಕು ಎಂದು ಜಲಸಂಪನ್ಮೂಲ ಇಲಾಖೆಯು 2022ರ ಫೆ.24ರಂದು ನಿಗಮಕ್ಕೆ ಪತ್ರ (ಜಸಂಇ 97 ಎಂಎಂಬಿ 2021, ದಿನಾಂಕ 24.02.2022) ಬರೆದಿತ್ತು. ಅದರಂತೆ ಸರ್ಕಾರದ ಪತ್ರವನ್ನು ಪರಿಶೀಲಿಸಿದ್ದ ನಿಗಮದ 98ನೇ ಸಭೆಯಲ್ಲಿ 2 ಎಕರೆ ಜಮೀನು ಮಂಜೂರು ಮಾಡಲು ತಾತ್ವಿಕ ಅನುಮೋದನೆ ನೀಡಿತ್ತು ಎಂಬುದು ನಿಗಮದ  98ನೇ ಸಭೆಯ ನಡವಳಿಯಿಂದ ತಿಳಿದು ಬಂದಿದೆ. ಈ ಕುರಿತು ‘ದಿ ಫೈಲ್‌’ ಜುಲೈ 26ರಂದು ವರದಿ ಪ್ರಕಟಿಸಿತ್ತು.

 

ನೀರಾವರಿ ನಿಗಮದ 2 ಎಕರೆ ನಿವೇಶನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ; ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರ

ಕರ್ನಾಟಕ ನೀರಾವರಿ ನಿಗಮದ ನೀರಾವರಿ ಯೋಜನೆಗಳಿಗೆ ಜಮೀನು ನೀಡಿ ನಿರಾಶ್ರಿತರಾದವರಿಗೆ ಪರ್ಯಾಯ ಜಮೀನುಗಳನ್ನು ಪರಿಹಾರದ ರೂಪದಲ್ಲಿ ನೀಡುವುದು ಮತ್ತು ಶಾಲೆ, ಆಸ್ಪತ್ರೆ, ಆರೋಗ್ಯ ಕೇಂದ್ರ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಷ್ಟೇ ಕಾಯ್ದಿರಿಸಿದ್ದ ಜಮೀನನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ಖಾತೆ ಮಾಡಿಕೊಡುವ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

 

ಸಾರ್ವಜನಿಕ ಉದ್ದೇಶಗಳಿಗಷ್ಟೇ ಜಮೀನು ಹಂಚಿಕೆ ಮಾಡುವ ಆಥವಾ ಗುತ್ತಿಗೆ ನೀಡುವ ಪ್ರಸ್ತಾವನೆಗಳನ್ನಷ್ಟೇ ಪುರಸ್ಕರಿಸಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಕರ್ನಾಟಕ ನೀರಾವರಿ ನಿಗಮದ ಆಡಳಿತ ಮಂಡಳಿಯು ರಾಜಕೀಯ ಕ್ಷೇತ್ರದ ಸ್ಥಿತಿಗತಿ ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಹೆಸರಿನಲ್ಲಿ ಬಿಜೆಪಿ ಪಕ್ಷಕ್ಕೆ ನೀಡುವ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ ನೀಡಿರುವುದರ ಹಿಂದೆ ಸಂಘ ಪರಿವಾರದ ಒತ್ತಡವಿತ್ತು ಎಂದು ತಿಳಿದು ಬಂದಿದೆ.

 

ಈ ಕುರಿತು ‘ದಿ ಫೈಲ್‌’  ದಾಖಲೆ ಸಮೇತ ವರದಿ ಪ್ರಕಟಿಸುತ್ತಿದ್ದಂತೆ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

 

‘ಸರ್ಕಾರಿ ನಿವೇಶನಗಳು ಯಾರಪ್ಪನ ಅಸ್ತಿ,” ಎಂದು ಪ್ರಶ್ನಿಸಿರುವ ಬಿ ಕೆ ಹರಿಪ್ರಸಾದ್‌ ಅವರು ಈ ಸಂಬಂಧ ಟ್ವೀಟ್‌ ಮಾಡಿದ್ದರು. ಸರಣಿ ಟ್ವೀಟ್‌ಗಳನ್ನು ಮಾಡಿರುವ ಹರಿಪ್ರಸಾದ್‌ ಅವರು ‘ದಿ ಫೈಲ್‌’ ಬಹಿರಂಗಪಡಿಸಿದ ದಾಖಲೆಗಳನ್ನಿಡಿದು ‘ಈಗ ಸರ್ಕಾರಿ ನಿವೇಶನವನ್ನು ಜೆಪಿ ನಡ್ಡಾ ಅವರಿಗೂ ನೀಡಿ ಅಕ್ರಮದ ಪಾಲನ್ನು ಬಳುವಳಿಯಾಗಿ ನೀಡಲು ಹೊರಟಿದೆ,’ ಎಂದು ಟೀಕಿಸಿದ್ದರು.

 

ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಆರ್‌ಎಸ್‌ಎಸ್‌ನ ರಾಷ್ಟ್ರೋತ್ಥಾನಗಳಿಗೆ ಎಕರೆಗಳಷ್ಟು ಭೂಮಿಯನ್ನು ಸರ್ಕಾರವೇ ಈಗಾಗಲೇ ಮಂಜೂರು ಮಾಡಿದೆ. ನೀರಾವರಿ ನಿಗಮವು 2 ಎಕರೆ ಜಮೀನು ಮಂಜೂರು ಮಾಡಲು ಸರ್ಕಾರ ಅನುಮೋದನೆ ನೀಡಿರುವುದನ್ನು ವಾಪಸ್‌ ಪಡೆಯದಿದ್ದರೇ ಹೋರಾಟ ಎದುರಿಸಬೇಕಾಗುತ್ತದೆ,’ ಎಂದೂ ಟ್ವಿಟರ್‌ನಲ್ಲಿ ಎಚ್ಚರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts